ಅಥವಾ

ಒಟ್ಟು 19 ಕಡೆಗಳಲ್ಲಿ , 12 ವಚನಕಾರರು , 17 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪೃಥ್ವಿಯಿಂದ ಅಪ್ಪು, ಅಪ್ಪುವಿನಿಂದ ಪೃಥ್ವಿ. ಅಗ್ನಿಯಿಂದ ವಾಯು, ವಾಯುವಿನಿಂದ ಅಗ್ನಿ. ಆಕಾಶದಿಂದ ಮಹದಾಕಾಶ, ಮಹದಾಕಾಶದಿಂದ ಆಕಾಶ. ನಿನ್ನಿಂದ ನಾ, ನನ್ನಿಂದ ನೀ, ನಾ ನೀನೆಂಬ ಭಾವ ಲೀಲೆವುಳ್ಳನ್ನಕ್ಕ. ಮತ್ತೆ ತಿಳಿದು ನೋಡಲಿಕ್ಕೆ ಮತ್ತೆಯೂ ಪರಿಪೂರ್ಣ ನೀನೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ವೇದಪುರಾಣಾಗಮಶಾಸ್ತ್ರ ನಾದದ ಸೊಮ್ಮೆಂಬಿರಿ. ಆ ನಾದದಿಂದ ಆಕಾಶ ಪುಟ್ಟಿತ್ತು . ಆಕಾಶದಿಂದ ವಾಯು ಪುಟ್ಟಿತ್ತು , ವಾಯುವಿನಿಂದ ಅಗ್ನಿ ಪುಟ್ಟಿತ್ತು . ಅಗ್ನಿಯಿಂದ ಅಪ್ಪು ಪುಟ್ಟಿತ್ತು , ಅಪ್ಪುವಿನಿಂದ ಪೃಥ್ವಿ ಪುಟ್ಟಿತ್ತು. ಪೃಥ್ವಿಯಿಂದ ಇರುವೆ ಕಡೆಯಾಗಿ ಎಂಬತ್ತುನಾಲ್ಕುಲಕ್ಷ ಜೀವಂಗಳು ಪುಟ್ಟಿದವು. ಅದೇನು ಕಾರಣವೆಂದಡೆ, ರಸಗಂಧದಿಂದ ರೂಪಾದವು, ಅಗ್ನಿಕಳೆಯಾಯಿತ್ತು . ವಾಯು ಚೈತನ್ಯವಾಯಿತ್ತು . ಆಕಾಶ ನಾದವಾಯಿತ್ತು. ಇಂತಿದರೊಳಗೆ ನಮ್ಮ ದೇವ ಇವರೊಂದರಂತೆಯೂ ಅಲ್ಲ . ಪಂಚತತ್ವವನಿಳುಹಿ, ಆತ್ಮತತ್ವ ಅನಾತ್ಮನೊಳು ಕೂಡಿ, ಅನಾಮಯಲಿಂಗ ಕಾಣಬಹುದು. ಅನಾಮಯಲಿಂಗವ ಕಂಡ ಬಳಿಕ, ಅದೇ ಲಿಂಗೈಕ್ಯವು. ಇದು ತಪ್ಪದು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ವಸ್ತುವೆಂದಡೆ ಪರಬ್ರಹ್ಮದ ನಾಮ. ಆ ವಸ್ತುವಿನಿಂದ ಆತ್ಮನ ಜನನ. ಆತ್ಮನಿಂದ ಆಕಾಶಪುಟ್ಟಿತ್ತು. ಆಕಾಶದಿಂದ ವಾಯು ಜನಿಸಿತ್ತು. ವಾಯುವಿನಿಂದ ಅಗ್ನಿ ಪುಟ್ಟಿತ್ತು; ಅಗ್ನಿಯಿಂದ ಅಪ್ಪು ಪುಟ್ಟಿತ್ತು. ಅಪ್ಪುವಿನಿಂದ ಪೃಥ್ವಿ ಪುಟ್ಟಿತ್ತು; ಇಂತಿದೆಲ್ಲವೂ ಶಿವನ ಮುಖದಿಂದ ಹುಟ್ಟಿತ್ತೆಂದರಿವುದು. ಇಂತು ಹುಟ್ಟಿದ ಪಂಚಭೂತಂಗಳೆ, ಪಂಚವಿಂಶತಿತತ್ವಯುಕ್ತವಾಗಿ ದೇಹವಾಯಿತ್ತು. ಅದು ಹೇಗೆಂದಡೆ: ಆಕಾಶದಿಂದ ಅಂತಃಕರಣಚತುಷ್ಟಯಂಗಳು ಹುಟ್ಟಿದವು. ವಾಯುವಿನಿಂದ ಪಂಚಪ್ರಾಣವಾಯುಗಳಾದುವಯ್ಯ. ಅಗ್ನಿಯಿಂದ ಬುದ್ಧೀಂದ್ರಿಯಂಗಳು ಪುಟ್ಟಿದವಯ್ಯ. ಅಪ್ಪುವಿನಿಂದ ಶಬ್ದಾದಿ ಪಂಚವಿಷಯಂಗಳು ಪುಟ್ಟಿದವಯ್ಯ. ಪೃಥ್ವಿಯಿಂದ ವಾಗಾದಿ ಕರ್ಮೇಂದ್ರಿಯಂಗಳು ಪುಟ್ಟಿದವಯ್ಯ. ಇಂತೀ ಚತುರ್ವಿಂಶತಿ ತತ್ವಯುಕ್ತವಾಗಿ, ಶರೀರ ವ್ಯಕ್ತೀಕರಿಸಿತ್ತಯ್ಯ. ಅದೆಂತೆಂದಡೆ: ಆಕಾಶ ಆಕಾಶವ ಬೆರಸಲು ಜ್ಞಾನ ಪುಟ್ಟಿತ್ತು. ಆಕಾಶ ವಾಯುವ ಬೆರಸಲು ಮನಸ್ಸು ಪುಟ್ಟಿತ್ತು. ಆಕಾಶ ಅಗ್ನಿಯ ಬೆರಸಲು ಅಹಂಕಾರ ಪುಟ್ಟಿತ್ತು. ಆಕಾಶ ಅಪ್ಪುವ ಬೆರಸಲು ಬುದ್ಧಿ ಪುಟ್ಟಿತ್ತು. ಆಕಾಶ ಪೃಥ್ವಿಯ ಬೆರಸಲು ಚಿತ್ತ ಪುಟ್ಟಿತ್ತು. ಇಂತಿವು, ಕರಣಚತುಷ್ಟಯದ ಉತ್ಪತ್ತಿಯಯ್ಯ. ವಾಯು ಆಕಾಶವ ಬೆರಸಿದಲ್ಲಿ ಸಮಾನವಾಯುವಿನ ಜನನ. ವಾಯು ವಾಯುವ ಬೆರಸಿದಲ್ಲಿ ಉದಾನವಾಯುವಿನ ಜನನ. ವಾಯು ಅಗ್ನಿಯ ಬೆರಸಿದಲ್ಲಿ ವ್ಯಾನವಾಯುವಿನ ಜನನ. ವಾಯು ಅಪ್ಪುವ ಬೆರಸಿದಲ್ಲಿ ಅಪಾನವಾಯುವಿನ ಜನನ. ವಾಯು ಪೃಥ್ವಿಯ ಬೆರಸಿದಲ್ಲಿ ಪ್ರಾಣವಾಯುವಿನ ಜನನ. ಇಂತಿವು, ವಾಯುಪಂಚಕದ ಉತ್ಪತ್ತಿಯಯ್ಯ. ಅಗ್ನಿ ಆಕಾಶವ ಬೆರಸಲು ಶ್ರೋತ್ರೇಂದ್ರಿಯದ ಜನನ. ಅಗ್ನಿ ವಾಯುವ ಬೆರಸಲು ತ್ವಗಿಂದ್ರಿಯದ ಜನನ. ಅಗ್ನಿ ಅಗ್ನಿಯ ಬೆರಸಲು ನೇತ್ರೇಂದ್ರಿಯದ ಜನನ. ಅಗ್ನಿ ಅಪ್ಪುವ ಬೆರಸಲು ಜಿಹ್ವೇಂದ್ರಿಯದ ಜನನ. ಅಗ್ನಿ ಪೃಥ್ವಿಯ ಬೆರಸಲು ಘಾಣೇಂದ್ರಿಯದ ಜನನ. ಇಂತಿವು, ಬುದ್ಧೀಂದ್ರಿಯಂಗಳುತ್ಪತ್ಯವಯ್ಯ. ಅಪ್ಪು ಆಕಾಶವ ಬೆರಸಲು ಶಬ್ದ ಪುಟ್ಟಿತ್ತು. ಅಪ್ಪು ವಾಯುವ ಬೆರಸಲು ಸ್ಪರ್ಶನ ಪುಟ್ಟಿತ್ತು. ಅಪ್ಪು ಅಗ್ನಿಯ ಬೆರಸಲು ರೂಪು ಪುಟ್ಟಿತ್ತು. ಅಪ್ಪು ಅಪ್ಪುವ ಬೆರಸಲು ರಸ ಪುಟ್ಟಿತ್ತು. ಅಪ್ಪು ಪೃಥ್ವಿಯ ಬೆರಸಲು ಗಂಧ ಪುಟ್ಟಿತ್ತು. ಇಂತಿವು, ಪಂಚವಿಷಯಂಗಳುತ್ಪತ್ಯವಯ್ಯ. ಪೃಥ್ವಿ ಆಕಾಶವ ಬೆರಸಲು ವಾಗಿಂದ್ರಿಯದ ಜನನ. ಪೃಥ್ವಿ ವಾಯುವ ಬೆರಸಲು ಪಾಣೀಂದ್ರಿಯದ ಜನನ. ಪೃಥ್ವಿ ಆಗ್ನಿಯ ಬೆರಸಲು ಗುಹ್ಯೇಂದ್ರಿಯದ ಜನನ. ಪೃಥ್ವಿ ಪೃಥ್ವಿಯ ಬೆರಸಲು ಪಾಯ್ವಿಂದ್ರಿಯದ ಜನನ. ಇಂತಿವು, ಚತುರ್ವಿಂಶತಿ ತತ್ವಂಗಳುತ್ಪತ್ತಿ. ಈ ತತ್ವಂಗಳಿಗೆ ಎಲ್ಲಕ್ಕೆಯೂ ಆಶ್ರಯವಾಗಿ, ಚೈತನ್ಯವಾಗಿ ಆತ್ಮನೊಬ್ಬನು. ಇಂತು ಇಪ್ಪತ್ತೆ ೈದುತತ್ವಂಗಳ ಭೇದವೆಂದು ಅರಿಯಲು ಯೋಗ್ಯವಯ್ಯ. ಆಕಾಶದೊಳಗಣ ಆಕಾಶ ಜ್ಞಾನ. ಆಕಾಶದೊಳಗಣ ವಾಯು ಮನಸ್ಸು. ಆಕಾಶದೊಳಗಣ ಅಗ್ನಿ ಅಹಂಕಾರ. ಆಕಾಶದೊಳಗಣ ಅಪ್ಪು ಬುದ್ಧಿ. ಆಕಾಶದೊಳಗಣ ಪೃಥ್ವಿ ಚಿತ್ತ. ಇಂತಿವು, ಆಕಾಶದ ಪಂಚೀಕೃತಿಯಯ್ಯ. ವಾಯುವಿನೊಳಗಣ ವಾಯು ಉದಾನವಾಯು. ವಾಯುವಿನೊಳಗಣ ಆಕಾಶ ಸಮಾನವಾಯು. ವಾಯುವಿನೊಳಗಣ ಅಗ್ನಿ ವ್ಯಾನವಾಯು. ವಾಯುವಿನೊಳಗಣ ಅಪ್ಪು ಅಪಾನವಾಯು. ವಾಯುವಿನೊಳಗಣ ಪೃಥ್ವಿ ಪ್ರಾಣವಾಯು. ಇಂತಿವು, ವಾಯುವಿನ ಪಂಚೀಕೃತಿಯಯ್ಯ. ಅಗ್ನಿಯೊಳಗಣ ಅಗ್ನಿ ನೇತ್ರೇಂದ್ರಿಯ. ಅಗ್ನಿಯೊಳಗಣ ಆಕಾಶ ಶ್ರೋತ್ರೇಂದ್ರಿಯ. ಅಗ್ನಿಯೊಳಗಣ ವಾಯು ತ್ವಗಿಂದ್ರಿಯ. ಅಗ್ನಿಯೊಳಗಣ ಅಪ್ಪು ಜಿಹ್ವೇಂದ್ರಿಯ. ಅಗ್ನಿಯೊಳಗಣ ಪೃಥ್ವಿ ಘ್ರಾಣೇಂದ್ರಿಯ. ಇಂತಿವು, ಅಗ್ನಿಯ ಪಂಚೀಕೃತಿಯಯ್ಯ. ಅಪ್ಪುವಿನೊಳಗಣ ಅಪ್ಪು ರಸ. ಅಪ್ಪುವಿನೊಳಗಣ ಆಕಾಶ ಶಬ್ದ. ಅಪ್ಪುವಿನೊಳಗಣ ವಾಯು ಸ್ಪರ್ಶನ. ಅಪ್ಪುವಿನೊಳಗಣ ಅಗ್ನಿ ರೂಪು. ಅಪ್ಪುವಿನೊಳಗಣ ಪೃಥ್ವಿ ಗಂಧ. ಇಂತಿವು, ಅಪ್ಪುವಿನ ಪಂಚೀಕೃತಿಯಯ್ಯ. ಪೃಥ್ವಿಯೊಳಗಣ ಪೃಥ್ವಿ ಪಾಯ್ವಿಂದ್ರಿಯ. ಪೃಥ್ವಿಯೊಳಗಣ ಆಕಾಶ ವಾಗಿಂದ್ರಿಯ. ಪೃಥ್ವಿಯೊಳಗಣ ಅಗ್ನಿ ಪಾದೇಂದ್ರಿಯ. ಪೃಥ್ವಿಯೊಳಗಣ ಅಪ್ಪು ಗುಹ್ಯೇಂದ್ರಿಯ. ಇಂತಿವು, ಪೃಥ್ವಿಯ ಪಂಚೀಕೃತಿಯಯ್ಯ. ಪಂಚಮಹಾಭೂತಂಗಳು ಪಂಚಪಂಚೀಕೃತಿಯನೆಯ್ದಿ ಪಂಚವಿಂಶತಿ ಅಂಗರೂಪಾದ ಕಾಯದ ಕೀಲನು ಸ್ವಾನುಭಾವದ ನಿಷ್ಠೆಯಿಂದರಿದು ಈ ದೇಹ ಸ್ವರೂಪವು ತಾನಲ್ಲವೆಂದು ತನ್ನ ಸ್ವರೂಪು ಪರಂಜ್ಯೋತಿಸ್ವರೂಪೆಂದು ತಿಳಿದು, ಆ ಜ್ಯೋತಿರ್ಮಯ ಲಿಂಗಕಳೆಯೊಳಗೆ ಅಂಗಕಳೆಯ ಸಂಬಂದ್ಥಿಸಿ, ಅಂಗಲಿಂಗಸಂಬಂಧ, ಪ್ರಾಣಲಿಂಗಸಂಬಂಧ ಮಾಡುವ ಕ್ರಮವಿದಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಪ್ರಥಮದಲ್ಲಿ ವಸ್ತು ಅನಿರ್ವಾಚ್ಯವಾಗಿದ್ದಿತ್ತು. ಆ ಅನಿರ್ವಾಚ್ಯವಾಗಿದ್ದ ಪರವಸ್ತು ತನ್ನ ಲೀಲೆಯಿಂದ ತಾನೇ ಪರಬ್ರಹ್ಮವೆಂಬ ನಾಮವಾಯಿತ್ತು ! ಆ ನಾಮವನೆಯ್ದಿ ಕುಳವಾಯಿತ್ತು, ಆ ಕುಳದಿಂದ ಆತ್ಮನೆಂಬ ಲಿಂಗಸ್ಥಲವಾಯಿತ್ತು. ಆ ಸ್ಥಳ ಕುಳದೊಳಗೆಯ್ದಿ ಸ್ಥಳಕುಳವೆಂಬ ಎರಡಿಲ್ಲದೆ ನಿಂದಿತ್ತು. ಅದೆಂತೆಂದಡೆ: ವಾಙ್ಮನಕ್ಕಗೋಚರವಾದ ಪ್ರರಬ್ರಹ್ಮದಿಂದಾಯಿತ್ತು ಭಾವ, ಭಾವದಿಂದಾಯಿತ್ತು ಜ್ಞಾನ, ಜ್ಞಾನದಿಂದಾಯಿತ್ತು ಮನ, ಮನದಿಂದಾಯಿತ್ತು ಬುದ್ಧಿ, ಬುದ್ಧಿಯಿಂದಾಯಿತ್ತು ಚಿತ್ತ, ಚಿತ್ತದಿಂದಾಯಿತ್ತು ಅಹಂಕಾರ. ಇಂತು_ಅಹಂಕಾರ ಚಿತ್ತ ಬುದ್ಧಿ ಮನ ಜ್ಞಾನ ಭಾವ ಎಂದು ಆರಾದವು. ಈ ಆರೂ ಕೆಟ್ಟಲ್ಲದೆ ವಾಙ್ಮನಕ್ಕಗೋಚರವಾದ ಪರಬ್ರಹ್ಮವಾಗಬಾರದು. ಇದ ಕೆಡಿಸುವುದಕ್ಕೆ ಆರು ಸ್ಥಲವಾದವು. ಅವಾವೆಂದಡೆ: ಅಹಂಕಾರ ಅಡಗಿದಾಗ ಭಕ್ತಸ್ಥಲ, ಚಿತ್ತದ ಗುಣ ಕೆಟ್ಟಾಗ ಮಾಹೇಶ್ವರಸ್ಥಲ ಬುದ್ಧಿಯ ಗುಣ ಕೆಟ್ಟಾಗ ಪ್ರಸಾದಿಸ್ಥಲ, ಮನೋಗುಣ ಅಳಿದಾಗ ಪ್ರಾಣಲಿಂಗಸ್ಥಲ, ಜೀವನ ಗುಣ ಸಂದಾಗ ಶರಣ ಸ್ಥಲ ಭಾವ ನಿರ್ಭಾವವಾದಾಗ ಐಕ್ಯಸ್ಥಲ. ಇಂತು ಷಟ್ಸ್ಥಲವಾಗಿ ವಾಙ್ಮನಕ್ಕೆ ಅಗೋಚರವಾದ ಬ್ರಹ್ಮವೆ ಆತ್ಮನು. ಆ ಆತ್ಮನಿಂದ ಆಕಾಶ ಹುಟ್ಟಿತ್ತು, ಆ ಆಕಾಶದಿಂದ ವಾಯು ಹುಟ್ಟಿತ್ತು. ಆ ವಾಯುವಿನಿಂದ ಅಗ್ನಿ ಹುಟ್ಟಿತ್ತು, ಆ ಅಗ್ನಿಯಿಂದ ಅಪ್ಪು ಹುಟ್ಟಿತ್ತು. ಆ ಅಪ್ಪುವಿನಿಂದ ಪೃಥ್ವಿ ಹುಟ್ಟಿತ್ತು. ಇಂತು_ಕುಳಸ್ಥಳವಾಗಿ ಸ್ಥಳಕುಳವಾದ ವಿವರವೆಂತೆಂದಡೆ: ಪೃಥ್ವಿ ಅಪ್ಪುವಿನೊಳಡಗಿ, ಅಪ್ಪು ಅಗ್ನಿಯೊಳಡಗಿ, ಅಗ್ನಿ ವಾಯುವಿನೊಳಡಗಿ, ವಾಯು ಆಕಾಶದೊಳಡಗಿ, ಆಕಾಶ ಆತ್ಮನೊಳಡಗಿತ್ತು, ಆತ್ಮ ಪರಶಿವನಲ್ಲಿ ಅಡಗಿತ್ತು ! ಇಂತು_ಷಡಂಗವಡಗಿದ ಪರಿ ಎಂತೆಂದಡೆ: ``ಪೃಥ್ವೀ ಭವೇತ್ ಜಲೇ, ಜಲೇ ಮಗ್ನಾಜಲಂ ಗ್ರಸ್ತಂ ಮಹಾಗ್ನಿನಾ ವಾಯೋರಸ್ತಮಿತಂ ತೇಜೋ ವ್ಯೋಮ್ನಿ ವಾತೋ ವಿಲೀಯತೇ ವ್ಯೋಮ್ಯೋತ್ಮನಿ ವಿಲೀನಂ ಸ್ಯಾತ್ ಆತ್ಮಾ ಪರಶಿವೇ ಪದೇ'' _ ಎಂದುದಾಗಿ ಆತ್ಮನು ಪರಬ್ರಹ್ಮದೊಳಡಗಿ ನಿಂದಿತ್ತು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ದೇವರು ದೇವರು ಎಂಬಿರಿ ದೇವರಿಗೆ ಪ್ರಳಯವುಂಟೆ ? ದೇವರು ಪ್ರಳಯವಾದಡೆ ಜಗವು ಉಳಿಯಬಲ್ಲುದೆ ? ಎಲಾ ಮರುಳಗಳಿರಾ, ಕಲ್ಲು ದೇವರೆಂಬಿರಿ, ಕಲ್ಲು ದೇವರಾದಡೆ ವಜ್ರಾಯುಧದಿಂದ ಪ್ರಳಯವಾಗದೆ ? ಕಟ್ಟಿಗೆ ದೇವರೆಂಬಿರಿ, ಕಟ್ಟಿಗೆ ದೇವರೆಂದರೆ ಅಗ್ನಿಯಿಂದ ಪ್ರಳಯವಾಗದೆ ? ಮಣ್ಣು ದೇವರೆಂಬಿರಿ, ಮಣ್ಣು ದೇವರಾದಡೆ ಜಲದಿಂದ ಪ್ರಳಯವಾಗದೆ ? ನೀರು ದೇವರೆಂಬಿರಿ, ನೀರು ದೇವರಾದಡೆ ಅಗ್ನಿಯಿಂದ ಅರತುಹೋಗದೆ ? ಅಗ್ನಿ ದೇವರೆಂಬಿರಿ, ಅಗ್ನಿ ದೇವರಾದಡೆ ಜಲದಿಂದ ಪ್ರಳಯವಾಗದೆ ? ಇಂತೀ ದೇವರೆಂದು ನಂಬಿ ಪೂಜಿಸಿದ ಜೀವಾತ್ಮರು ಇರುವೆ ಮೊದಲು ಆನೆ ಕಡೆ ಎಂಬತ್ನಾಲ್ಕುಲಕ್ಷ ಯೋನಿದ್ವಾರದಲ್ಲಿ ರಾಟಾಳ ತಿರುಗಿದಂತೆ ಜನನಮರಣಗಳಿಂದ ಎಡೆಯಾಡುತಿಪ್ಪರು ನೋಡಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕರಿಭೂಮಿಯ ಬಿದಿರ ಬೊಂಬವ ಕಡಿದು ಬಿಳಿಭೂಮಿಯ ಬಿದಿರ ಅಗ್ನಿಯಿಂದ ದಹಿಸಿ ಭಸ್ಮ ಮಾಡಿ ಧರಿಸಿ ಕಾಯಕದಲ್ಲಿರ್ದು ಕಾಯಕಕ್ಕೆ ಸಿಕ್ಕದೆ ಮೇದಾರ ಕೇತಯ್ಯನೊಳಗಾದರು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ನಿಶ್ಚಲವೆಂಬ ಭಾಜನದಲ್ಲಿ ನಿಜಜ್ಞಾನವೆಂಬ ಅಕ್ಕಿಯ ತುಂಬಿ, ಪರಮಾನಂದವೆಂಬ ಜಲವನೆರೆದು, ಸ್ವಯಂ ಪ್ರಕಾಶವೆಂಬ ಅಗ್ನಿಯಿಂದ ಪಾಕವಾದ ಲಿಂಗದೋಗರವು ಮಹಾಘನದಲ್ಲಿ ನಿಂದು ಘನತೃಪ್ತಿಯನೀವುತ್ತಿದ್ದಿತ್ತು ಕಾಣಿರೆ ! ಅದ ಕಣ್ಣಿಲ್ಲದೆ ಕಂಡು ಕೈಯಿಲ್ಲದ ಕೊಂಡು ಬಾಯಿಲ್ಲದೆ ಉಂಡ ತೃಪ್ತಿಯ, ಅರಿವಿಲ್ಲದ ಅರಿವಿನಿಂದ ಅರಿದು, ಸುಖಿಯಾದೆ ನಾನು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಆಕಾಶದಲ್ಲಿ ತೋರಿದ ಇಂದ್ರಧನು ಅಡಗುವುದಕ್ಕೆ ಆಕಾಶವೆ ಆಶ್ರಯವಲ್ಲದೆ ಬೇರೆ ಆಶ್ರಯವುಂಟೆ ಅಯ್ಯಾ ? ಗಾಳಿಯಲ್ಲಿ ತೋರಿದ ಸುಳಿಗಾಳಿ ಅಡಗುವುದಕ್ಕೆ ಆ ಗಾಳಿಯೆ ಆಶ್ರಯವಲ್ಲದೆ ಬೇರೆ ಆಶ್ರಯವುಂಟೆ ಅಯ್ಯಾ ? ಅಗ್ನಿಯಿಂದ ತೋರಿದ ಕಿಡಿಗಳು ಅಡಗುವುದಕ್ಕೆ ಆ ಅಗ್ನಿಯೆ ಆಶ್ರಯವಲ್ಲದೆ ಬೇರೆ ಆಶ್ರಯವುಂಟೆ ಅಯ್ಯಾ ? ಸಮುದ್ರದಲ್ಲಿ ತೋರಿದ ನೊರೆತೆರೆ ತುಂತುರ್ವನಿ ಅಡಗುವುದಕ್ಕೆ ಆ ಸಮುದ್ರವೆ ಆಶ್ರಯವಲ್ಲದೆ ಬೇರೆ ಆಶ್ರಯವುಂಟೆ ಅಯ್ಯಾ ? ಆದಿ ಅನಾದಿಯಿಂದತ್ತತ್ತಲಾದ ಮಹಾಘನವಸ್ತುವಿನಲ್ಲಿ ರೂಪಿಸಿ ತೋರಿದ ನಿಜೈಕ್ಯನಡಗುವುದಕ್ಕೆ ಆ ಪರವಸ್ತುವೆ ಆಶ್ರಯವಲ್ಲದೆ, ಬೇರೆ ಆಶ್ರಯವುಂಟೆ ಅಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಸೂರ್ಯನಿಂದ ತೋರಿದ ಕಿರಣಂಗಳಿಗೂ ಆ ಸೂರ್ಯನಿಗೂ ಭಿನ್ನವುಂಟೇ?. ಚಂದ್ರನಿಂದ ತೋರಿದ ಕಲೆಗೆ ಆ ಚಂದ್ರನಿಗೂ ಭಿನ್ನವುಂಟೇ?. ಅಗ್ನಿಯಿಂದ ತೋರಿದ ಕಾಂತಿಗೂ ಆ ಅಗ್ನಿಗೂ ಭಿನ್ನವುಂಟೇ?. ಜ್ಯೋತಿಯಿಂದ ತೋರಿದ ಬೆಳಗಿಗೂ ಆ ಜ್ಯೋತಿಗೂ ಭಿನ್ನವುಂಟೇ?. ಅಗಮ್ಯ, ಅಗೋಚರ, ಅಪ್ರಮಾಣ, ಅಪ್ರತಿಮ ಮಹಾಲಿಂಗದಲ್ಲಿ ಜ್ಯೋತಿಯಿಂದ ಜ್ಯೋತಿ ಉದಯಿಸಿದಂತೆ ಉದಯಿಸಿದ ಶರಣಂಗೂ ಆ ಮಹಾಲಿಂಗಕ್ಕೂ ಭಿನ್ನವುಂಟೇ? ಇದ ಬೇರೆಂಬ ಅರೆಮರುಳುಗಳನೇನೆಂಬೆನಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಭಕ್ತಿಯೆಂಬ ಪೃಥ್ವಿಯಲ್ಲಿ ಗುರೂಪದೇಶವೆಂಬ ನೇಗಿಲಂ ಪಿಡಿದು, ಅಂತಃಕರಣ ಚತುಷ್ಟಯವೆಂಬ ಪಶುವಂ ಕಟ್ಟಿ ಓಂಕಾರನಾದವೆಂಬ ಸೆಳೆಕೋಲಂ ಪಿಡಿದು ಉತ್ತರ ಕ್ರೀಯೆಂಬ ಸಾಲನೆತ್ತಿ ದುಃಕರ್ಮವೆಂಬ ಕಂಟಕದ ಗುಲ್ಮವಂ ಕಡಿದು ಅರುಹೆಂಬ ರವಿಯ ಕಿರಣದಿಂದ ಒಣಗಿಸಿ ಅವಂ ಕೂಡಲೊಟ್ಟಿ, ಜ್ಞಾನಾಗ್ನಿಯೆಂಬ ಅಗ್ನಿಯಿಂದ ಸುಟ್ಟುರುಹಿ ಆ ಹೊಲನಂ ಹಸಮಾಡಿ, ಬಿತ್ತುವ ಪರಿ ಇನ್ನಾವುದಯ್ಯಾ ಎಂದಡೆ: ನಾದ. ಬಿಂದು, ಕಳೆ, ಮಳೆಗಾಲದ ಹದಬೆದೆಯನರಿದು ಸ್ಥೂಲವೆಂಬ ದಿಂಡಿಗೆ ತ್ರಿದೇವರೆಂಬ ತಾಳ ನಟ್ಟು ಇಡಾಪಿಂಗಳ ಸುಷುಮ್ನಾನಾಳವೆಂಬ ಕೋವಿಗಳ ಜೋಡಿಸಿ, ಮೇಲೆ ತ್ರಿಕೂಟಸ್ಥಾನವೆಂಬ ಬಟ್ಟಲಂ ಬಲಿದು, ಕುಂಡಲೀಸರ್ಪನೆಂಬ ಹಗ್ಗವ ಸೇದಿ ಕಟ್ಟಿ, ಹಂಸನೆಂಬ ಎತ್ತಂ ಹೂಡಿ, ಪ್ರಣವನೆಂಬ ಬೀಜವ ಪಶ್ಚಿಮ ಮುಖಕ್ಕೆ ಬಿತ್ತಿ, ಸರ್ವಶಾಂತಿ ನಿರ್ಮಲವೆಂಬ ಮೇಘ ಸುರಿಯಲ್ಕೆ ನೀಲಬ್ರಹ್ಮವೆಂಬ ಸಸಿ ಹುಟ್ಟಿತ್ತ. ಆ ಸಸಿಯ ಮುಟ್ಟುವ ಸಪ್ತವರ್ಣದ ಸದೆಯ ಕಳೆದು ಅಷ್ಟವರ್ಣದ ಅಲಬಂ ಕಿತ್ತು, ದಶವಾಯುವೆಂಬ ಕಸಮಂ ತೆಗೆದು, ಆ ಸಸಿ ಪಸರಿಸಿ ಪ್ರಜ್ವಲಿಸಿ ಫಲಕ್ಕೆ ಬರಲಾಗಿ ಚತುರ್ವಿಧವೆಂಬ ಮಂಚಿಗೆಯಂ ಮೆಟ್ಟಿ ಬಾಲಚಂದ್ರನೆಂಬ ಕವಣೆಯಂ ಪಿಡಿದು ಪ್ರಪಂಚುವೆಂಬ ಹಕ್ಕಿಯಂ ಸೋವಿ ಆ ಬತ್ತ ಬಲಿದು ನಿಂದಿರಲು, ಕೊಯ್ದುಂಬ ಪರಿ ಇನ್ನಾವುದಯ್ಯಾ ಎಂದಡೆ: ಇಷ್ಟವೆಂಬ ಕುಡುಗೋಲಿಗೆ ಪ್ರಣವವೆಂಬ ಹಿಡಿಯಂ ತೊಡಿಸಿ, ಭಾವವೆಂಬ ಹಸ್ತದಿಂ ಪಿಡಿದು, ಜನನದ ನಿಲವಂ ಕೊಯ್ದು, ಮರಣದ ಸಿವುಡ ಕಟ್ಟಿ, ಆಕಾಶವೆಂಬ ಬಣವೆಯನೊಟ್ಟಿ ಉನ್ಮನಿಯೆಂಬ ತೆನೆಯನ್ನರಿದು, ಮನೋರಥವೆಂಬ ಬಂಡಿಯಲ್ಲಿ ಹೇರಿ, ಮುಕ್ತಿಯೆಂಬ ಕೋಟಾರಕ್ಕೆ ತಂದು, ಅಷ್ಟಾಂಗಯೋಗವೆಂಬ ಜೀವಧನದಿಂದೊಕ್ಕಿ, ತಾಪತ್ರಯದ ಮೆಟ್ಟನೇರಿ, ಪಾಪದ ಹೊಟ್ಟ ತೂರಿ, ಪುಣ್ಯದ ಬೀಜಮಂ [ತ]ಳೆದು ಷಡುವರ್ಗ ಷಡೂರ್ಮೆಯೆಂಬ ಬೇಗಾರಮಂ ಕಳೆದು ಅಂಗಜಾಲನ ಕಣ್ಣ[ಮು]ಚ್ಚಿ, ಚಿತ್ರಗುಪ್ತರೆಂಬ ಕರಣಿಕರ ಸಂಪುಟಕೆ ಬರಿಸದೆ ಯಮರಾಜನೆಂಬರಸಿಗೆ ಕೋರನಿಕ್ಕದೆ ಸುಖ ಶಂಕರೋತಿ ಶಂಕರೋತಿ ಎಂಬ ಸಯಿದಾನವನುಂಡು ಸುಖಿಯಾಗಿಪ್ಪ ಒಕ್ಕಲಮಗನ ತೋರಿ ಬದುಕಿಸಯ್ಯಾ, ಕಾಮಭೀಮ ಜೀವಧನದೊಡೆಯ ಪ್ರಭುವೆ ನಿಮ್ಮ ಧರ್ಮ, ನಿಮ್ಮ ಧರ್ಮ..
--------------
ಒಕ್ಕಲಿಗ ಮುದ್ದಣ್ಣ
ಪಂಚಭೂತಂಗಳೆ ಪಂಚವಿಂಶತಿತತ್ವಯುಕ್ತವಾಗಿ ಶರೀರವಾಯಿತ್ತು. ಅದು ಹೇಗೆಂದಡೆ : ಆಕಾಶದಿಂದ ಅಂತಃಕರಣಚತುಷ್ಟಯಂಗಳು ಹುಟ್ಟಿದವಯ್ಯ. ವಾಯುವಿನಿಂದ ಪಂಚಪ್ರಾಣವಾಯುಗಳು ಹುಟ್ಟಿದವಯ್ಯ. ಅಗ್ನಿಯಿಂದ ಬುದ್ಧೀಂದ್ರಿಯಂಗಳು ಹುಟ್ಟಿದವಯ್ಯ. ಅಪ್ಪುವಿನಿಂದ ಶಬ್ದಾದಿ ಪಂಚವಿಷಯಂಗಳು ಹುಟ್ಟಿದವಯ್ಯ. ಪೃಥ್ವಿಯಿಂದ ವಾಗಾದಿ ಕರ್ಮೇಂದ್ರಿಯಂಗಳು ಹುಟ್ಟಿದವಯ್ಯ. ಇಂತೀ ಚತುರ್ವಿಂಶತಿತತ್ವಯುಕ್ತವಾಗಿ ಶರೀರವೆತ್ತಿ ಕರೆಸಿತಯ್ಯ ಪರುಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ನುಡಿವಲ್ಲಿ ದೋಷವನಾರಿಸದೆ ಬಾಯಿಚ್ಛೆಗೆ ಬಂದಂತಾಡಿದಡೆ ಅದು ಹೆಮ್ಮೆಯಲ್ಲದೆ ಸಹಜಜ್ಞಾನವಲ್ಲ. ಅದೇನು ಕಾರಣವೆಂದಡೆ, ಪಾಷಾಣದ ಮೂರ್ತಿ ಘನವೆಂದಡೆ ಅಗ್ನಿಯಿಂದ ಭಂಗ. ಅಗ್ನಿ ಘನವೆಂದಡೆ ತೋಯದಿಂದ ಭಂಗ. ತೋಯ ಘನವೆಂದಡೆ ಮಾರುತನಿಂದ ಭಂಗ. ಮಾರುತ ಘನವೆಂದಡೆ ಬಯಲಿನಿಂದ ಭಂಗ. ಬಯಲು ಘನವೆಂದಡೆ ಅಂತಃಕರಣದಿಂದ ಭಂಗ. ಅಂತಪ್ಪಂತಃಕರಣ ಘನವೆಂದಡೆ ಮಾಯೆಯಿಂದ ಭಂಗ. ಮಾಯೆ ಘನವೆಂದಡೆ ಮಹಾದೇವ ಕಪಿಲಸಿದ್ಧಮಲ್ಲಿಕಾರ್ಜುನ ಪರಬ್ರಹ್ಮದಿಂದ ಭಂಗ ಕೇಳಾ, ಮಡಿವಾಳ ತಂದೆ.
--------------
ಸಿದ್ಧರಾಮೇಶ್ವರ
ಶ್ರೀಗುರು ಕರುಣಿಸಿ, ಅಂಗದ ಮೇಲೆ ಲಿಂಗವ ಧರಿಸಿದ ಕಾರಣ, ಸರ್ವಾಂಗವು ಲಿಂಗವಾಯಿತ್ತು. ಅದೆಂತೆಂದಡೆ: ಅಗ್ನಿಯಿಂದ ತಪ್ತವಾದ ಲೋಹದ ಪುತ್ಥಳಿಯಂತೆ, ಒಳಗೂ ಹೊರಗೂ ಏಕವಾಗಿ ಲಿಂಗವೆ ಬೆಳಗುತಿರ್ದ ಕಾರಣ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮಶರಣ ಸರ್ವಾಂಗಲಿಂಗಿಯಾದನು.
--------------
ಸ್ವತಂತ್ರ ಸಿದ್ಧಲಿಂಗ
ಏಳು ತೊಲೆಗೆ ನಾಲ್ಕು ಬೋದು, ಎಂಟು ಕಂಬ, ಆರು ಬಿಗಿಜಂತಿ. ಮೂರು ಕೋಣೆಗೆ ಒಂಬತ್ತು ಬಾಗಿಲ, ಒಂದು ಕವಾಡ, ಎರಡು ಕುಲ್ಪಿ. ಇಂತೀ ಅಲುಕುಮಲಕಿನ ಅರಮನೆಯಲ್ಲಿ ಪಸುರುಕುಪ್ಪುಸ ಹಳದಿ ಶಾಲಿಯನುಟ್ಟು ಕಾಲು ಮೇಲಾಗಿ, ತಲೆ ಕೆಳಗಾಗಿ ಚಿತ್ರಾಂಗನೆಯೆಂಬ ವೇಶ್ಯಾಂಗನೆ ನಡದಾಡುತಿರ್ಪಳು. ಶ್ರೀಗುರುಚೆನ್ನಮಲ್ಲಯ್ಯನ ಕೂಡಬೇಕೆಂಬಣ್ಣಗಳ ಎರಡು ಬಟ್ಟೆಯಲ್ಲಿ ನಿಂದು ಕಣ್ಣುಸೊನ್ನೆಯ ಮಾಡಿ ಕರವುತಿರ್ಪಳು ನೋಡಾ. ಅಷ್ಟರಲ್ಲಿಯೇ ಕುಪ್ಪುಸ ಕಳೆದು ಶಾಲಿಯ ಹರಿದು ತಲೆಯ ಮೇಲಕ್ಕೆ ಕಾಲು ಕೆಳಯಕ್ಕೆ ಮಾಡಿ ಸೂತಕಾಗ್ನಿಯಂ ಬಿಟ್ಟು ಸೂತಕ ಇಲ್ಲದ ಅಗ್ನಿಯಿಂದ ಚಿತ್ರಾಂಗನೆಯೆಂಬ ವೇಶ್ಯಾಂಗನೆಯ ಮನೆಯಲ್ಲಿ ಸುಟ್ಟು ಎರಡು ಬಟ್ಟೆಯ ಮೆಟ್ಟಿ, ನಟ್ಟನಡುವಿನ ಬಟ್ಟೆಯ ಪಿಡಿದು, ಶ್ರೀಗಿರಿಚೆನ್ನಮಲ್ಲಯ್ಯನಲ್ಲಿಗೆ ಹೊಗಬಲ್ಲರೆ ಆತನೇ ಅಸುಲಿಂಗಸಂಬಂಧಿ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಶಿವನ ಮಹಿಮೆಯ ಘನವನೇನೆಂಬೆನಯ್ಯ! ಉನ್ನತವಾದ ಮಹಾಗಂಗೆಯ ಜಟಾಗ್ರದಲ್ಲಿ ಧರಿಸಿದನು. ಚರಣಕಮಲದ ಹೆಬ್ಬೆರಳಿಂದೌಂಕಲು, ರಾವಣಾಸುರನು ಮೂರ್ಛಿತನಾಗಿ ಬಿದ್ದನು. ಒಂದು ಬಾಣದಿಂದ ತ್ರಿಪುರವನು ಉರುಹಿದನು. ನೊಸಲಕಣ್ಣ ಅಗ್ನಿಯಿಂದ ಮನ್ಮಥನ ದಹಿಸಿದನು. ತ್ರಿಶೂಲದಿಂದ ಅಂಧಕಾಸುರನ ಇರಿದು ಕೊಂದನು. ಅದೆಂತೆಂದಡೆ : ಜಲೌಘಕಲ್ಲೋಲತರಂಗತುಂಗಗಂಗಾವೃತಾ ಯೇನ ಜಟಾಗ್ರಭಾಗೇ ಪಾದಾಂಬುಜಾಂಗುಷ*ನಿಪೀಡನೇನ ಪಾತ ಲಂಕಾಧಿಪತಿರ್ವಿಸಂಜ್ಞಾಃ | ಏಕೇನ ದಗ್ಧಂ ತ್ರಿಪುರಂ ರೇಣಕಾಯೋ ಲಲಾಟಾಗ್ನಿಹುತಾಶನೇನ | ಭಿನ್ನೋದಕಃ ಶೂಲವರೇಣ ಏನಕಸ್ತೋ ನ ಸಾರ್ಥಂ ಕುರುತೇ ವಿರೋಧಂ | ಇಂತೆಂದುದಾಗಿ, ಶಿವನೊಡನೆ ವೈರವ ಮಾಡುವವರಾರುಂಟು ? ಭಾಪು, ಭಾಪು ನಿನಗೆ ಸರಿಯುಂಟೆ, ದೇವರಾಯ ಸೊಡ್ಡಳಾ ?
--------------
ಸೊಡ್ಡಳ ಬಾಚರಸ
ಇನ್ನಷ್ಟು ... -->