ಅಥವಾ

ಒಟ್ಟು 13 ಕಡೆಗಳಲ್ಲಿ , 9 ವಚನಕಾರರು , 12 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಯ್ಚಿಟ್ಟ ಬಯ್ಕೆಯ ಒಡೆಯ ಬೇಡಿದಡೆ ಕೊಡದಿರ್ದಡೆ ಸ್ವಾಮಿದ್ರೋಹಿಕೆಯಲ್ಲವೆ? ಅಟ್ಟ ಅಡಿಗೆಯ ಪತಿಗಿಕ್ಕದ ಸತಿ ಉಂಡಡೆ ನೆಟ್ಟನೆ ಕಳ್ಳೆಯಲ್ಲವೆ? ಕೊಟ್ಟಾತ ಒಡವೆಯ ಬೇಡಿದಡೆ ಕಟ್ಟಿ ಹೋರುವ ಕಷ್ಟಜೀವಿಗೇಕೆ ತ್ರಿವಿಧಭಕ್ತಿ, ಸಜ್ಜನಯುಕ್ತಿ? ಇಂತೀ ಸಜ್ಜನಗಳ್ಳರ ಬಲ್ಲನಾಗಿ ಸದಾಶಿವಮೂರ್ತಿಲಿಂಗವು ಒಲ್ಲನು.
--------------
ಅರಿವಿನ ಮಾರಿತಂದೆ
ಪ್ರಭುದೇವರು ಬಂದ [ಬರವಿನ ವೃದ್ಧಿ] ಅವಧಿಯಿಲ್ಲ. ಕಲ್ಲನೆತ್ತಿದವರ ಕೂಡೆ ಗೆಲ್ಲಸೋಲಕ್ಕೆ ಹೋರಿಯಾಡಿ, ಬಲ್ಲೆವೆಂದು ಗೆಲ್ಲಗೂಳಿಗಳ ಕೂಡೆ ಬಲ್ಲತನಕ್ಕೆ ನೆಲೆ[ಗೊ]ಟ್ಟು, ಒಳ್ಳೆಹವರ ಗುಣವನರಸೆಹೆನೆಂದು, ಎಲ್ಲಾ ಠಾವಿನಲ್ಲಿ ತಿರುಗಿಬಂದು ಅಟ್ಟ ಊಟದಲ್ಲಿ ನಿಷೆ*ಯ ತೋರಿಹೆನೆಂದು, ಕಷ್ಟಗುಣವಾದ [ಬೇಟ]ವ ಹೊಕ್ಕೆನೆಂಬ ಕಷ್ಟಗುಣ ಬಿಡದು. ಭಾವದ ಕದಳಿಯಂ ಮರೆದು, ವಾಯದ ಕದಳಿಯಂ ಹೊಕ್ಕು, ಭಾವದ ಭ್ರಮೆಯಿಂದ ತಿರುಗಿ ಬಂದು, ಸಂಗನಬಸವಣ್ಣಂಗೆ ಸಂಗವಿಶೇಷವ ತೋರದೆ [ಹ]ಂಗಿಸಿ ಕೊಟ್ಟೆಯಲ್ಲಾ, ಸಂಗಮೇಶ್ವರದೇವರೆಂಬ ಕಲ್ಲಿನ ಮನೆಯ ಕಲ್ಲಿನೊಳಗೆ ಹೊಕ್ಕು ವಲ್ಲಭನನರಿಯದೆ, ಪ್ರಭು ಮೊದಲಾಗಿ ಇವರೆಲ್ಲರು ಕೆಟ್ಟರಲ್ಲಾ. ನಮಗೆ ಬಲ್ಲತನವ ತೋರಿದ ಎನ್ನ ವಲ್ಲಭ ನೀನೆ ಚೆನ್ನಬಸವಣ್ಣ, ಸಂಗನಬಸವಣ್ಣಂಗೆ, ಪ್ರಮಥಗಣಂಗಳು ಮೊದಲಾದವರಿಗೆ, ಎನಗೆ, ನಿಃಕಳಂಕ ಮಲ್ಲಿಕಾರ್ಜುನಂಗೆ, ನಿನ್ನಿಂದೆ ಭವವಿರಹಿತನಾದೆ.
--------------
ಮೋಳಿಗೆ ಮಾರಯ್ಯ
ಸಟ್ಟುಗ ಸವಿಯ ಬಲ್ಲುದೆ ? ಅಟ್ಟ ಮಡಕೆ ಉಣ್ಣಬಲ್ಲುದೆ ? ಕನಿಷ* ಹೀನ ಲಿಂಗದ ಕಟ್ಟಳೆಗೆ ಬರಬಲ್ಲನೆ ? ಕರಕಷ್ಟ ಹೀನರಿರಾ ಸುಮ್ಮನಿರಿರೊ. ಸೂಳೆಯ ಮಕ್ಕಳಿರ ಕಟ್ಟಳೆಗೆ ಬರದೆ, ಘನದಲ್ಲಿ ಮನಮುಟ್ಟಿ ಹಿಮ್ಮೆಟ್ಟದೆ ಆವನಿದ್ದಾತನೆ ಅಚ್ಚ ಭಕ್ತನೆಂಬೆ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಸಮಯವ ಬಿಡಬಹುದೆ ಅಯ್ಯಾ ? ಅಟ್ಟ ಅಶನವಾದಡೂ ಕಲಸುವದಕ್ಕೆ ಕೈ, ಉಂಬುದಕ್ಕೆ ಬಾಯಿ ಬೇಕು. ಉಂಬುದಿಲ್ಲಾ ಎಂದು ಸಂದೇಹವ ಹರಿದಲ್ಲಿ ಸಮಯ ಒಂದೂ ಇಲ್ಲ ಎನಬೇಕು. ಗುಹೇಶ್ವರನೆಂಬನ್ನಕ್ಕ, ಬಂಧ_ಮೋಕ್ಷವನರಿಯಬೇಕು ಘಟ್ಟಿವಾಳಯ್ಯಾ.
--------------
ಅಲ್ಲಮಪ್ರಭುದೇವರು
ಹುಟ್ಟಿದ ಮಕ್ಕಳೆಲ್ಲ ಅರ್ಥ ಪ್ರಾಣ ಅಭಿಮಾನಕ್ಕೆ ಒಡೆಯರಾದ ಪರಿಯ ನೋಡಾ. ಅಟ್ಟ ಅಡಿಗೆಯ ವಿಷವನು ನಿಮಗೆ ಕೊಟ್ಟಲ್ಲದೆ ಉಣ್ಣೆನೆಂಬ ಭಾಷೆ ! ಕೂಡಲಸಂಗಮದೇವಯ್ಯಾ, ನಿಮಗೆಂದಟ್ಟಡಿಗೆಯ ನೀಡ ಕಲಿಸಿದಾತ ಕೆಂಭಾವಿಯ ಭೋಗಯ್ಯ.
--------------
ಬಸವಣ್ಣ
ಅಟ್ಟ ಉಪ್ಪಿನ ಕಷ್ಟವಾವುದು ? ಅಡದ ಉಪ್ಪಿನ ಲೇಸಾವುದು ? ಬಿಟ್ಟ ಸಪ್ಪೆಯ ಭಕ್ತಿ ಯಾವುದು ? ಮೂತ್ರನಾಳದ ಘಾತಿ ಬಿಡದು. ಇವರು ಮಾಡುವ ನೇಮ, ತಾ ಕೊಂಡಂತೆ ಕಲಿದೇವರದೇವಾ
--------------
ಮಡಿವಾಳ ಮಾಚಿದೇವ
ಸಟ್ಟುಗ ಸವಿಯಬಲ್ಲುದೇ? ಅಟ್ಟ ಮಡಕೆ, ಉಣಬಲ್ಲುದೇ ಅಯ್ಯ? ಬಟ್ಟಬಯಲು, ಕಟ್ಟುಕುಟ್ಟಿಗೊಳಗಾಗಬಲ್ಲುದೇ? ನಿಷೆ* ಹೀನರಿಗೆ ಲಿಂಗ, ಕಟ್ಟಳೆಗೆ ಬರಬಲ್ಲುದೇ? ಕರ ಕಷ್ಟರಿರಾ ಸುಮ್ಮನಿರಿ ಭೋ. ಕಟ್ಟಳೆಗೆಯ್ದದ ಮಹಾಘನದಲ್ಲಿ ಮನಮುಚ್ಚಿ ಹಿಮ್ಮೆಟ್ಟದೆ ಅಡಗಿದಾತನೇ, ಅಚಲಿತ ಮಾಹೇಶ್ವರನು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮಡುವಿನಲ್ಲಿ ಮೊಗೆತಹೆನೆ? ಅಗ್ಗವಣಿ ಶುದ್ಧವಲ್ಲ. ಗಿಡುವಿನ ಪುಷ್ಪವ ತಹೆನೆ? ಹೂ ನಿರ್ಮಾಲ್ಯ. ಅಟ್ಟ ಆಡಿಗೆಯನಾದಡೆ ಮನ ಮುನ್ನವೆ ಉಂಡಿತ್ತು. ನುಡಿವ ಶಬ್ದ ಎಂಜಲಾಯಿತ್ತು. ಹಿಡಿಯೊಳಯಿಂಕೆ ಒಂದ ಕೊಂಡುಬಂದು ಲಿಂಗವೆಂದು ಸಂಕಲ್ಪವ ಮಾಡಿದಡೆ ಅದಕ್ಕೆ ಬೋನವ ಕೊಡಲೊಲ್ಲೆನೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಅಟ್ಟಕ್ಕೆ ನಿಚ್ಚಣಿಕೆಯನಿಕ್ಕಲಾಗಿ ನುಂಗಿತ್ತು ಅಟ್ಟವ ನಿಚ್ಚಣಿಕೆ. ನಿಚ್ಚಣಿಕೆಯ ಮೆಟ್ಟಿದವಳ ಅಟ್ಟ ನುಂಗಿತ್ತು. ಅಟ್ಟವ ನಿಚ್ಚಣಿಕೆಯ ಮೆಟ್ಟಿದವಳ ಬಟ್ಟಬಯಲು ನುಂಗಿತ್ತು. ಆ ಬಟ್ಟಬಯಲ ಮೆಟ್ಟಿ ನೋಡಿ ಕಂಡ ನಾರಾಯಣಪ್ರಿಯ ರಾಮನಾಥ.
--------------
ಗುಪ್ತ ಮಂಚಣ್ಣ
ಆದಿಶೂನ್ಯಲಿಂಗಕ್ಕೆ ಮಜ್ಜನವಾವುದು? ಕುಸುಮಭರಿತಲಿಂಗಕ್ಕೆ ಪೂಜೆ ಯಾವುದು? ಪರಿಪೂರ್ಣ ಲಿಂಗಕ್ಕೆ ನೈವೇದ್ಯವಾವುದು? ಅರ್ಪಿಸುವುದಕ್ಕೆ ಮುನ್ನವೆ ತೃಪ್ತಿಯಾದ ಮತ್ತೆ ಮುಟ್ಟಿ ಕೂಡುವ ಠಾವಿನ್ನಾವುದೊ? ಅಟ್ಟ ಮಡಕೆಯ ನೆತ್ತಿಯ ಮೇಲೆ ಹೊತ್ತು ತಿರುಗುವನಂತೆ, ಹೊಟ್ಟೆಗೆ ಕಾಣದೆ ಇವರು ಕೆಟ್ಟ ಕೇಡ ನೋಡಿರೆ. ಈ ಬಟ್ಟೆಯ ಮೆಟ್ಟದಂತೆ ಮಾಡಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಸತ್ತ ಹೆಣಕ್ಕೆ ಎಳವಿಗೆ ಬಂದವರ ಕಂಡೆ. ದೃಷ್ಟಿ ತೆಗೆಯಿತ್ತು ಹೆಣ. ದೃಷ್ಟಿ ತೆಗೆಯಲಾಗಿ, ಬಾಯಿಗಿಕ್ಕಿದ ಅಕ್ಕಿ ಒಕ್ಕವು, ಮಂದಲಿಗೆಯಲ್ಲಿ ಮಂದಲಿಗೆಯಾನಲಾರದೆ ಹಿಂಗಿ ಒಕ್ಕವು ನೆಲಕ್ಕೆ. ನೆಲದೂಳಗೆ ಅಟ್ಟ ಹೆಣದ ಬಾಯಕ್ಕಿ, ಓಗರವಿಲ್ಲದೆ ಉಂಡು, ಸಲೆ ಜೀರ್ಣಿಸಿದ ಮತ್ತೆ, ಕಾಯದ ಜೀವದ ಹೊಲಿಗೆಯನರಿದವಂಗಲ್ಲದೆ ಲಿಂಗೈಕ್ಯವಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಹುಟ್ಟಿಸುವ ಹೊಂದಿಸುವ ಶಿವನ ನಿµ*ಯಿಲ್ಲದ ಸಾಹಿತ್ಯವ ಕೊಂಡು, ಕ್ರೀಯಿಲ್ಲದಿರ್ದಡೆ ಭಕ್ತರೆಂತೆಂಬೆನಯ್ಯ ? ಅಟ್ಟ ಕೂಳೆಲ್ಲವಂ ಅನ್ಯದೈವದ ಹೆಸರ ಹೇಳಿ ಭುಂಜಿಸುವ ಚೆಟ್ಟಿ ಮಾಳ ಅಕ್ಕತದಿಗಿಯೆಂದು ತಮ್ಮ ಗೋತ್ರಕ್ಕೆ ಬೊಟ್ಟನಿಡುವರು. ಮುಖ್ಯರಾಗಬೇಕೆಂದು ಅಟ್ಟ ಅಡಿಗೆ ಮೀಸಲವೆಂದು ಅಶುದ್ಧವ ತಿಂಬ ಕಾಗೆಗೆ ಕೂಳ ಚೆಲ್ಲಿ, ತಮ್ಮ ಪಿತರುಂಡರೆಂದು ಮಿಕ್ಕ ಕೂಳ ತಮ್ಮ ಲಿಂಗಕ್ಕೆ ತೋರಿ ಭುಂಜಿಸುವ ಭಕ್ತರೆನಿಸಿಕೊಂಬ ಭ್ರಷ್ಟಜಾತಿಗಳು ಕೆಟ್ಟಕೇಡಿಂಗೆ ಕಡೆಯಿಲ್ಲವೆಂದ, ನಮ್ಮ ಕಲಿದೇವರದೇವ.
--------------
ಮಡಿವಾಳ ಮಾಚಿದೇವ
-->