ಅಥವಾ

ಒಟ್ಟು 15 ಕಡೆಗಳಲ್ಲಿ , 10 ವಚನಕಾರರು , 15 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶುದ್ಧಪ್ರಸಾದಿಯಾದಡೆ ತನು ಸತ್ಕ್ರಿಯಾ ಸನ್ನಿಹಿತನಾಗಿ, ಅಣುಮಾತ್ರ ದ್ವೈತಿಯಾಗದೆ ಚರಿಸಬೇಕು. ಸಿದ್ಧಪ್ರಸಾದಿಯಾದಡೆ ಮನ ಜ್ಞಾನಸನ್ನಿಹಿತನಾಗಿ, ಕಿಂಚಿತ್ತು ಮಲವಿಷಯಕ್ಕೆ ಜಿನುಗದೆ ಚರಿಸಬೇಕು. ಪ್ರಸಿದ್ಧಪ್ರಸಾದಿಯಾದಡೆ ಭಾವ ಮಹಾನುಭಾವಸನ್ನಿಹಿತನಾಗಿ, ಒಂದಿನಿತು ಭ್ರಾಂತನಾಗದೆ ಚರಿಸಬೇಕು. ಈ ಭೇದವನರಿಯದೆ ಅವರವರಂತೆ, ಇವರಿವರಂತೆ, ತಾನು ತನ್ನಂತೆ ನಡೆನುಡಿ ಕೊಡುಕೊಳ್ಳಿಯುಳ್ಳರೆ ಕಡೆ ಮೊದಲಿಲ್ಲದೆ ನರಕವನೈಯ್ದುವ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪರಶಿವನೇ ಶ್ರೀಗುರು, ಶ್ರೀಗುರುವೇ ಪರಶಿವನು, ಶ್ರೀಗುರುವೇ ಶಿವಲಿಂಗ, ಆ ಶಿವಲಿಂಗವೇ ಜಂಗಮಲಿಂಗ, ಆ ಜಂಗಮಲಿಂಗವೆಂದಲ್ಲಿಯೇ ಪ್ರಸಾದಲಿಂಗ, ಪ್ರಸಾದಲಿಂಗವೆಂದಲ್ಲಿಯೇ ಮುಕ್ತಿ. ಇದು ಸ್ವಭಾವ, ಇದು ಮಹಾಸದ್ಭಾವ. ಈ ಭಾವವು ಅಣುಮಾತ್ರ ಕಿಂಚಿತ ದುರ್ಭಾವವಾಗಿ ತಪ್ಪಿದಡೆ ಆ ಕ್ಷಣ ಜಾರಿ ಮೀರಿತ್ತು ಆ ಸಾಧ್ಯ. ಭಾವ ತಪ್ಪಿದ ಬಳಿಕ ಶಿವನೊಲವು ತಪ್ಪುವುದಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ನಾದ-ಬಿಂದು-ಕಲಾಸಂಚ ನಿರಂಜನಲಿಂಗವನು ಪರಮಗುರುಮುಖದಿಂದೆ ಸಾದ್ಥಿಸಿ, ಕರಕಂಜದೊಳಗಿರಿಸಿ, ಉರವಣಿ ಬಟ್ಟೆಗಳ ಸವರಿ, ಕಳೆವ ಕರಡವಿಯೊಳೆಸೆವುತ, ಪರಿಪರಿಯಿಂದೆ ಅಣುಮಾತ್ರ ಮೂರು ವಿದ್ಯೆಕೆ ಮರವೆಯ ತಾರದೆ, ಎಡಬಲದ ನಡೆನುಡಿ ಜಾಣರನೊಳಕೊಳ್ಳದೆ ಹಿಡಿತ ಬಿಡಿತಗಳರಿದು, ಜರೆದು ನೂಂಕುತ ಹಿಡಿದುಕೊಂಬುತ ಶರಣು ಶರಣೆಂದು ಬೆರೆದು ಬೆರಗಾಗಿರ್ಪ ಗುರುನಿರಂಜನ ಚನ್ನಬಸವಲಿಂಗದಲ್ಲಿ ಪರಮಮಾಹೇಶ್ವರ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸಕಲಕ್ರಿಯೆಗಳಿಗಿದು ಕವಚ, ಸಕಲವಶ್ಯಕ್ಕಿದು ಶುಭತಿಲಕ, ಸಕಲಸಂಪದಕ್ಕೆ ತಾಣವಿದು, ಅಘಟಿತ ಘಟಿತವೆನಿಸುವ ಅನುಪಮ ತ್ರಿಪುಂಡ್ರ. ಅಣುಮಾತ್ರ ವಿಭೂತಿಯ ಪಣಿಯೊಳಿಡೆ ಎಣಿಕೆಯಿಲ್ಲದ ಭವಪಾಶ ಪರಿವುದು. ತ್ರಿಣಯ ನೀನೊಲಿದು ಧರಿಸಿದೆಯೆಂದೆನೆ, ಆನು ಧರಿಸಿ ಬದುಕಿದೆ ಕೂಡಲಸಂಗಯ್ಯಾ.
--------------
ಬಸವಣ್ಣ
ತನುಶೀಲ ಗುರುಭಕ್ತಿ, ಮನಶೀಲ ಲಿಂಗಭಕ್ತಿ, ಧನಶೀಲ ಜಂಗಮಭಕ್ತಿ, ತ್ರಿವಿಧಶೀಲ ಮಹಾಭಕ್ತಿ. ಅಂಗ ಮನ ಭಾವ ಕರಣಂಗಳಲ್ಲಿ ವ್ರತದಂಗವೆ ಪ್ರಾಣವೆಂದು ಇಪ್ಪುದು ಛಲಭಕ್ತಿ. ಇಂತೀ ಭೇದಭಾವಂಗಳಲ್ಲಿ ಅಣುಮಾತ್ರ ತಪ್ಪ ಕ್ಷಣಮಾತ್ರ ಸೈರಿಸೆವೆಂಬುದು ನಿಶ್ಚಯಭಕ್ತಿ. ಇಂತೀ ವರ್ತಕಶುದ್ಧ ಸದ್ಭಕ್ತಂಗೆ ಮತ್ರ್ಯ-ಕೈಲಾಸವೆಂಬ ತತ್ತು ಗೊತ್ತಿಲ್ಲ. ಆತ ವ್ರತಲಕ್ಷಣಮೂರ್ತಿ, ಏಲೇಶ್ವರಲಿಂಗವು ತಾನೆ.
--------------
ಏಲೇಶ್ವರ ಕೇತಯ್ಯ
ಸೋಂಕಿನ ಸುಖವನರ್ಪಿತವ ಮಾಡಿ, ಅಸೋಂಕಿನ ಸುಖವನರ್ಪಿತವ ಮಾಡದಿದ್ದಡೆ ಪ್ರಸಾದಿಯಲ್ಲ, ಶರಣನಲ್ಲ, ಲಿಂಗೈಕ್ಯನಲ್ಲ. ಸಂಯೋಗೇ ಚ ವಿಯೋಗೇ ಚ ಅಣುಮಾತ್ರಂ ಸುಖಾರ್ಪಣಂ ಯಃ ಕುರ್ಯಾದಿಷ್ಟಲಿಂಗೇ ತು ಸೋ[s]ವಧಾನೀ ನಿರಂತರಂ ಇದು ಕಾರಣ ಕೂಡಲಚೆನ್ನಸಂಗಯ್ಯಾ, ಭೇದವನರಿದು ಅರ್ಪಿತವ ಮಾಡುವ ನಿಮ್ಮ ಪ್ರಸಾದಿಗೆ ನಮೋ ನಮೋಯೆಂಬೆನು.
--------------
ಚನ್ನಬಸವಣ್ಣ
ಅಯ್ಯ, ಸ್ಥೂಲದೇಹದ ಸುಖದಲ್ಲಿ ಹೊದ್ದಿದವರು ಸೂಕರನ ಹಾಂಗೆ. ಸೂಕ್ಷ್ಮದೇಹದ [ಸುಖ]ದಲ್ಲಿ ಹೊದ್ದಿದವರು ಮದಗಜದಂತೆ. ಕಾರಣ ದೇಹದ ಸುಖದಲ್ಲಿ ಹೊದ್ದಿದವರು ರಾಜಹಂಸನ ಹಾಂಗೆ. ಅದೆಂತೆಂದಡೆ: ಸ್ಥೂಲದೇಹವೆಂದಡೆ ಸಪ್ತಧಾತುಯುಕ್ತವಾದ ಪಂಚವಿಂಶತಿತತ್ತ್ವ ಸ್ವರೂಪು, ಆ ದೇಹಕ್ಕೆ ಬಿಂದು ಮಾತ್ರ ಸುಖ ಪರ್ವತದಷ್ಟು ದುಃಖ ನೋಡಾ. ಸೂಕ್ಷ್ಮದೇಹವೆಂದಡೆ:ಪಂಚರಸಾಮೃತಸ್ವರೂಪವಾದ ಕರಣಂಗಳು. ಆ ದೇಹಕ್ಕೆ ಬಿಂದು ಮಾತ್ರ ದುಃಖವು, ಪರ್ವತದಷ್ಟು ಸುಖ ನೋಡಾ. ದಶವಿಧತತ್ತ್ವಸ್ವರೂಪವಾದ ಕಾರಣದೇಹವೆಂದಡೆ: ಅನಂತನಾದಸ್ವರೂಪವಾದ ಏಕತತ್ತ್ವವನ್ನುಳ್ಳ ಆತ್ಮನೆ ಕಾರಣದೇಹ, [Àಅದು] ದಿವ್ಯ ಸುಧಾರಸಾಮೃತಸ್ವರೂಪವಾದ ಮಹಾಸದ್ಗಂಧದ ಪರಿಮಳದಂತಿಪ್ಪುದು ನೋಡಾ. ಆ ದೇಹಕ್ಕೆ ಅಣುಮಾತ್ರ ದುಃಖವಿಲ್ಲದ ಸುಖವುಂಟು ನೋಡಾ, ಲಿಂಗಸಂಗಿಯಾದ ಕಾರಣ. ಇಂತಪ್ಪ ಲಿಂಗಸಂಗದಿಂದ ಅಖಂಡಸುಖಿ ತಾನಾಗಬೇಕಾದಡೆ ಪಿಂಡಾದಿ ಜ್ಞಾನಶೂನ್ಯಾಂತಮಾದ ನೂರೊಂದು ಸ್ಥಳ_ಕುಳವ ಕರತಳಾಮಳಕವಾಗಿ ತಿಳಿದು, ಮೇಲಾದ ಜ್ಞಾನಶೂನ್ಯಸ್ಥಲದಲ್ಲಿ ನಿಂದು, ಪಿಂಡಾದಿ ಜ್ಞಾನ ಗುರುಕರುಣ ಸ್ಥಲಂಗಳೆಂಬ ಮಾರ್ಗವು ತಪ್ಪದೆ ನಡೆ_ನುಡಿ ಸಂಪನ್ನರಾಗಿ ನಿಜಾಚರಣೆಯಲ್ಲಿ ನಿಂದು ಅರು ವೈರಿ ಅಷ್ಟಮದ [ಸಪ್ತ]ವ್ಯಸನವೆಂಬ ಮಾಯಾಪಾಶಪರ್ವತಕ್ಕೆ ವಜ್ರಾಯುಧವಾಗಿ ನಿಂದರು ನೋಡಾ ನಮ್ಮ ಶರಣಗಣಂಗಳು. ಇಂತು_ಕಾರಣಸ್ವರೂಪವಾದ ಚಿದ್ಘನಲಿಂಗ ನಡೆ_ನುಡಿ_ಸ್ಥಳ_ಕುಳದನುಭಾವ ಸುಖವ ಪಡೆಯದ ಶೈವ ಜಡಕರ್ಮಿಗಳೆಲ್ಲ, ಅರುವೈರಿ ಅಷ್ಟಮದ ಸಪ್ತವ್ಯಸನವೆಂಬ ಮಾಯಾಪಾಶ ಕಾಲ ಕಾಮರ ಬಾಧೆಗೊಳಗಾಗಿ ಗುಹೇಶ್ವರಲಿಂಗದ ಶರಣರ ಮಾರ್ಗವನರಿಯದೆ [ಕೆಟ್ಟರು]. ಕೆಟ್ಟಿತೀ ಲೋಕ ನೋಡಾ ಸಿದ್ಧರಾಮಯ್ಯಾ.
--------------
ಅಲ್ಲಮಪ್ರಭುದೇವರು
ಹರಿ ಬ್ರಹ್ಮ ದೇವರ್ಕಳು ಮುಂತಾಗಿ ಇದ್ದವರೆಲ್ಲರು ತಮ್ಮ ತಮ್ಮ ಮಾರ್ಗದ ಕಲೆಯಲ್ಲಿಯೆ ಎಯ್ದಿ, ಜಪ ತಪ ನೇಮ ನಿತ್ಯಂಗಳು ತಪ್ಪದೆ ಮಹಾದೇವನ ಓಲೈಸಿದರಾಗಿ, ಇದು ಕಾರಣದಲ್ಲಿ ಕೊಂಡ ವ್ರತಕ್ಕೆ ಹಾನಿಯಿಲ್ಲದೆ, ನೇಮಕ್ಕೆ ಅನುಸರಣೆಯಿಲ್ಲದೆ, ತಾ ನಡೆವಲ್ಲಿ, ಇದಿರ ತಾ ಕಾಬಲ್ಲಿ, ಅಣುಮಾತ್ರ ತಪ್ಪದೆ, ಕ್ಷಣಮಾತ್ರ ಸೈರಿಸದೆ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಹಾದಿಯನರಿಯಬೇಕು.
--------------
ಅಕ್ಕಮ್ಮ
ಶರಣನ ಒಡಲುಗೊಂಡ ಅಖಂಡಿತಲಿಂಗಕ್ಕೆ ಅರ್ಚನೆಯಿಲ್ಲ, ಶರಣನ ಒಡಲುಗೊಂಡ ಅಚಲಿತಲಿಂಗಕ್ಕೆ ಅರ್ಪಿತವಿಲ್ಲ, ಶರಣನ ಒಡಲುಗೊಂಡ ಅನುಪಮಲಿಂಗಕ್ಕೆ ಅವಧಾನವಿಲ್ಲ. ಅದೇನು ಕಾರಣವೆಂದಡೆ: ಶರಣನಿಂದಾದ ಆರ್ಚನೆ, ಶರಣನಿಂದಾದ ಅರ್ಪಿತ, ಶರಣನಿಂದಾದ ಅವಧಾನ. ಇದು ಕಾರಣ ಸಂದಳಿದು ಲಿಂಗವಾದ ಮತ್ತೆ ಆನಂದವಲ್ಲದೆ ಅಣುಮಾತ್ರ ಕ್ರೀಯಿಲ್ಲ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಆರರಲ್ಲಿ ಅನುಮಿಷವು, ಮೂರರಲ್ಲಿ ಮುನಿಮುಕ್ತಿ ತೋರುವ ಪ್ರಾಪಂಚು ಸೀಮೆಯ ಗಾರಪ್ಪ ವರ್ಗವನು ಮೀರಿಪ್ಪ ಸೀಮೆಯ ತೋರಿಪ್ಪ ಅತಿಶಯದ ತತ್ವಂಗಳನು ಸೊಮ್ಮಿನ ಹಮ್ಮಿನ ಕರ್ಮದ ಕ್ರೀಯುವನು ನಿಃಕರ್ಮವೊಳಗಾದ ಸಾದಾಖ್ಯವಾ ಅವ್ವೆಯ ಮನದ ಆನಂದ ಸಾತ್ವಿಸಲು ತಾನೊಂದು ರೂಪಾಗಿ ತೋರ್ಕುರಲು ಅಯ್ಯನಜಲೋಕದಲಿ ಒಯ್ಯನಕ್ಷರದ್ವಯದ ಸ್ವೇಯ ಹೇಯಯೆಂಬ ಬೀಜಂಗಳ ದ ಮರುಗದ ಸಿಂಹಾಸನದೊಳಗಿಪ್ಪ ಕೇಶರದ ಹಲವು ಬಣ್ಣದಲಿಪ್ಪ ಅಣುಮಾತ್ರ ಮಥನದಲ್ಲಿ ಮಥನಿಸುವ ಕಥನದಿಚ್ಛೆಯ ನೋಡ, ಸುಚಿತ್ತಂದರ್ಚಿಸೈ ಕಪಿಲಸಿದ್ಧ ಮಲ್ಲೇಶ್ವರನ.
--------------
ಸಿದ್ಧರಾಮೇಶ್ವರ
ಲಿಂಗವಂತನು ಲಿಂಗವಂತಂಗೆ ಅಣುಮಾತ್ರ ಅವಮಾನವ ಮಾಡಿದಡೆ ಮನ ನೋವುದಯ್ಯಾ. ಲಿಂಗವಂತನು ಶುಚಿ ಸತ್ಯನು ಶಾಂತನು ಲಿಂಗಸುಖಿ, ಲಿಂಗದಲ್ಲಿ ತನುಮನಧನ ಬೆರಸಿಪ್ಪುದಾಗಿ, ಲಿಂಗವೂ ಒಲಿವುದಯ್ಯಾ. ಬಳಿಕ ಮಹಾಪರ್ವತಪ್ರಮಾಣ ಸತ್ಕಾರವ ಮಾಡಿದರೂ ನೋವು ಮಾಣದು, ಶಿವನೊಲವು ತಪ್ಪದು. ಹಿಂದೆ ವಿಷ್ಣು, ಬ್ರಹ್ಮ, ಇಂದ್ರ, ದಕ್ಷನು ಇದನರಿದು ತನು ಮನ ಧನದಲ್ಲಿ ವಂಚನೆಯಿಲ್ಲದೆ ಭಯಭಕ್ತಿಯಿಂದರಿದು ನಡೆದು ಸುಖಸಂಗತಾತ್ಪರ್ಯ ಸಹಜವಿಡಿದಿಪ್ಪುದಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ತನುಸ್ವಾಯತವಾಗಿ ತನುವಿನ ಹಂಗಿನ ಗುರುವೆನ್ನದೆ, ಗುರುಸ್ವಾಯತವಾಗಿ ಗುರುವಿನ ಹಂಗಿನ ತನುವೆನ್ನದೆ, ತನ್ನೊಳಗೆ ಗುರು ಐಕ್ಯವೆನ್ನದೆ, ಗುರುವಿನೊಳಗೆ ತಾನೈಕ್ಯವೆನ್ನದೆ, ಅವಿರಳ ಸಂಭಾವನೆಯಿಂದ ಸುಬುದ್ಧಿ ನಿಷೆ* ಅಣುಮಾತ್ರ ಓಸರಿಸದೆ, ರಸಮುಖಾರ್ಪಿತ ತೃಪ್ತನಾಗಿ, ಕಾಯಾಧಾರಲಿಂಗೋಪಜೀವಿಯಾಗಿ, ಸ್ಥಾವರದಂತೆ ನಿಬ್ಬೆರಗಾಗಿ, ತನು ಸೋಂಕಿ ತನು ನಷ್ಟವಾಗಿ ಒಂದು ಮುಖಮಾರ್ಗವಲ್ಲದೆ ಮತ್ತೊಂದ ಮೆಟ್ಟದಿರಬಲ್ಲಡಾತ ಮಹೇಶ್ವರನಯ್ಯಾ ಕೂಡಲಚೆನ್ನಸಂಗಯ್ಯಾ.
--------------
ಚನ್ನಬಸವಣ್ಣ
ಗುರುಮುಖದಿಂದ ಕೊಂಬುದು ಶುದ್ಧಪ್ರಸಾದ. ಲಿಂಗಮುಖದಿಂದ ಕೊಂಬುದು ಸಿದ್ಧಪ್ರಸಾದ. ಜಂಗಮಮುಖದಿಂದ ಕೊಂಬುದು ಪ್ರಸಿದ್ಧಪ್ರಸಾದ. ಜ್ಞಾನಮುಖದಿಂದ ಕೊಂಬುದು ಮಹಾಪ್ರಸಾದ. ಈ ನಾಲ್ಕು ತೆರದಲ್ಲಿ ಕೊಂಬುವುದು ಪ್ರಸಾದವಲ್ಲದೆ ರಣದ ಬೀರರ ಹಾಂಗೆ ಬಾಚಿಸಿಕೊಂಡು ಕೊಂಬಷ್ಟ ಕೊಂಡು, ಬಿಡುವಷ್ಟ ಬಿಟ್ಟು ಸೂರೆಗೂಳಾಗಿ ಚೆಲ್ಲಿಯಾಡುವುದು ಇದಾವ ಪ್ರಸಾದ ಹೇಳ? ಅದೆಂತೆಂದೊಡೆ: ಅಣುಮಾತ್ರ ಪ್ರಸಾದಾನ್ನಂ ತ್ಯಕ್ತ್ವಾ ಭುಕ್ತಾನ್ನ ಕಿಲ್ಬಿಷಂ| ಸ ಪಾಪೀ ನರಕಂ ಯಾತಿ ತದ್ಗ ೃಹಂ ನರಕಾಲಯಂ|| ಎಂದುದಾಗಿ ಬಹು ಜನಂಗಳು ಕಾರಿದ ಕೂಳ ಶ್ವಾನ ಭುಂಜಿಸಿ ತನ್ನೊಡಲ ಹೊರೆದಂತಾಯಿತ್ತು ಕಾಣಾ ವಿಶ್ವಾಸವಿಲ್ಲದ ಪ್ರಸಾದ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಯ್ಯ, ಸತ್ತುಚಿತ್ತಾನಂದ ನಿತ್ಯಪರಿಪೂರ್ಣವೆಂಬ ಪಂಚಾಂಗವನಂಗೀಕರಿಸಿಕೊಂಡಿರುತ್ತಿಹ ಪರಬ್ರಹ್ಮಲಿಂಗದಲ್ಲಿ ಸಮರಸಸಂಗದಿಂದ ಕೂಟವ ಕೂಡಿದ ಅವಿರಳ ಪರಂಜ್ಯೋತಿಸ್ವರೂಪ ಶರಣನ ನಿಲುಕಡೆ ಎಂತೆಂದಡೆ: ಅಣುಮಾತ್ರ ಸತ್ಯನಡೆನುಡಿಗಳ ತೊಲಗನಯ್ಯ. ದೃಢಚಿತ್ತದಿಂದ ಕೊಟ್ಟ ಭಾಷೆಗಳ ಬಡಮನದ ಸಂಗವಮಾಡಿ ಹುಸಿ ನುಡಿಯ ನುಡಿಯನಯ್ಯ. ನಿಜನೈಷಾ*ಪರತತ್ವದಿಂದ ಸತ್ಕಾಯಕ, ಸತ್ಪಾತ್ರಭಕ್ತಿ, ಸತ್ಕ್ರಿಯಾಜ್ಞಾನಾಚಾರಂಗಳ ಅವಾಂತರದಲ್ಲಿ ನಿಂದ್ಯ ಕುಂದು ದರಿದ್ರ ರೋಗ ರುಜಿ ವಿಪತ್ತು ಹಾಸ್ಯ ರೋಷಂಗಳು ಬಂದು ತಟ್ಟಿದಲ್ಲಿ ಶ್ರೀಗುರುಲಿಂಗಜಂಗಮದ ಕರುಣಕಟಾಕ್ಷೆಯಿಂದ ಬಂದುದ ಮಹಾಪ್ರಸಾದವೆಂದು ಲಿಂಗಭೋಗಿಯಾಗಿರುವನಲ್ಲದೆ ಶೈವ ಜಡಕರ್ಮಭೂತಪ್ರಾಣಿಗಳಂತೆ ಸತ್ಕಾಯಕ, ಸತ್ಪಾತ್ರಭಕ್ತಿ, ಸತ್ಕ್ರಿಯಾ, ಜ್ಞಾನ ಆಚಾರಂಗಳ ನಿಮಿಷಾರ್ಧವಗಲುವನಲ್ಲ ನೋಡ. ಕುಲಛಲಕ್ಕಾಡದೆ, ಶಿವಶರಣರಲ್ಲಿ ಜಾತಿ ಸೂತಕವ ಬಳಸದೆ, ದುಷ್ಕಾಯಕ, ಅಕ್ರಿಯಾ, ಅಜ್ಞಾನ, ಅನಾಚಾರಂಗಳನನುಕರಿಸಿ, ಉದರಪೋಷಣಕ್ಕೆ, ಲಾಂಛನದಿಚ್ಛೆಗೆ ನುಡಿದು, ಸಮಪಙÂ್ತಯ ಮಾಡದೆ, ಪರಮಾನಂದ ಸುಖಾಬ್ಧಿಯಲ್ಲಿ ಮುಳುಗಿ, ಅಷ್ಟಾವಧಾನ ಎಚ್ಚರಗುಂದದೆ, ಮನಪ್ರಾಣಲಿಂಗವಾದುದೀಗ ಸತ್ಯಶುದ್ಧದೀಕ್ಷೆ. ಇಂತುಟೆಂದು ಶ್ರೀಗುರು ನಿಷ್ಕಳಂಕ ನಿಜಾನಂದಮೂರ್ತಿ ಚನ್ನಬಸವರಾಜೇಂದ್ರನು ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಲಿಂಗವಂತನು ಲಿಂಗಾಚಾರಿ ಸದಾಚಾರಿ ಭೃತ್ಯಾಚಾರಿಯೆನಿಸಿದಡೆ ಲಿಂಗವನೊಲಿಸಬಹುದು. ಲಿಂಗದ ನಚ್ಚು, ಲಿಂಗವಂತರ ಮೆಚ್ಚು. ಇದು ಸತ್ಯ ಮುಕ್ತಿ ಕೇಳಿರಣ್ಣಾ. ಲಿಂಗವಂತನು ಪರಧನ, ಪರಸ್ತ್ರೀ, ಪರದೈವಕ್ಕಳುಪಿ ಅಲ್ಲಿಯೇ [ವರ್ತಿಸಿ] ಮಾಹೇಶ್ವರಶೋಭೆಯಂ ಮಾಡಿಹೆನೆಂಬ, ಮತ್ತೆ ಲಿಂಗಾರ್ಚನೆಯಂ ಮಾಡಿಹೆನೆಂಬ, ಲಿಂಗವನೊಲಿಸಿಹೆನೆಂಬ, ಲಿಂಗವಂತರಲ್ಲಿ ಸಲುವೆನೆಂಬ, ಲಿಂಗವೇನು ತೊತ್ತಿನ ಮುನಿಸೆ ? ವೇಶ್ಯೆಯ ಸರಸವೇ ? ವೈತಾಳಿಕನ ಕಲಹವೆ ? ತಪ್ಪಿ ನಡೆದು, ತಪ್ಪಿ ನುಡಿದು, ತಪ್ಪಿ ಕೂಡಿ ಮರಳಿ ಮರಳಿ ಪ್ರಯೋಗಿಸುವಂತಾಗಿ, ಅಂತಲ್ಲ ಕೇಳಿರಣ್ಣಾ. ಪತಿವ್ರತೆಯು ಸತ್ಪುರುಷನ ಕೂಡಿದಂತೆ, ಸಜ್ಜನಮಿತ್ರರ ಸಂಗದಂತೆ, ಮಹಾಜ್ಞಾನಿಗಳ ಅರಿವಿನಂತೆ, ಶುದ್ಧವಾದುದನೇ ಕೂಡಿಕೊಂಡಿಪ್ಪ, ಶುದ್ಧವಿಲ್ಲದುದನೇ ಬಿಡುವ. ನಮ್ಮ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನು ಅಣುಮಾತ್ರ ತಪ್ಪ, ಕ್ಷಣಮಾತ್ರ ಸೈರಿಸ.
--------------
ಉರಿಲಿಂಗಪೆದ್ದಿ
-->