ಅಥವಾ

ಒಟ್ಟು 12 ಕಡೆಗಳಲ್ಲಿ , 7 ವಚನಕಾರರು , 8 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮದವಳಿಗ ಮದವಳಿಗಿತ್ತಿಯ ಮುಟ್ಟದೆ, ಅತ್ತೆಯ ಭಗವ ಮುಟ್ಟಿ ನೋಡಿ, ಎನ್ನ ಮದವಳಿಗೆಯ ಹೆತ್ತ ಠಾವೆಂದು ಮತ್ತರಿದು ಮುಟ್ಟದೆ, ಭಗವ ನೋಡುತ್ತ ಬಟ್ಟಬಯಲಾಯಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮಧ್ಯದ ಮಧ್ಯದಲಿ ವೇದಾಮೂನಿ ಆದಿಯ ಸಂತಕ್ಕೆ ಆದಿಯಾಗಿಪ್ಪಳು. ಐದೇಳನಡರಿದಡೆ ಮೈದೋರದಿಪ್ಪಳು. ಪತಿಗೆ ಪತಿಯಾಗಿಪ್ಪಳು ಸತಿಗೆ ಬುದ್ಧಿಯಾಗಿಪ್ಪಳು. ತನ್ನ ನೋಡಲೆಂದು ಹೋದಡೆ ಚಂದ್ರ ಸೂರ್ಯರ ನುಂಗಿ ಕಣ್ಗಾಣದೆ ಹೋಗಿ ಅತ್ತೆಯ ಕೈವಿಡಿಯಲು, ಈ ಮುವ್ವರಿಗೆರಹುಟ್ಟಿಗೆ ತಾನೆಯಾದಳು. ತಾಯ ಕೈವಿಡಿದನೆಂದು ನಾನಂಜಿ ಸತಿಯಾದೆನೆನಗೆ ಪತಿಯಾದೆ. ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ನಿನ್ನ ಕೂಡಿದ ಕೂಟ ನೀನರಿದಡರಿವೆ, ಮರದಡೆ ಮರವೆ.
--------------
ಸಿದ್ಧರಾಮೇಶ್ವರ
ಹೊಲಕ್ಕೆ ಹೋಗುತಿರ್ಪವನ ಕಂಡು, ಊರೆಲ್ಲರು ನೆರೆದು, ಬೇಡ ಬದುಕೆಂದಡೆ ಆರೆನೆಂದ. ಅದೇತಕ್ಕೆ ಆಕೆಯ ದೂರೆಂದಡೆ ಅವ ಬಾತಿಗೇಡಿ. ಅವಳ ತಾಯ ಕೊಟ್ಟಡೆ ಇರ್ಪೆನೆಂದು ಕೂಡಿಕೊಂಡ. ಅಜಾತರೊಂದಿಗೆ ಹೇಳೆ, ನೀತಿ ಲೇಸಾಯಿತ್ತು ಅತ್ತೆ ಅಳಿಯಂಗೆ. ಅತ್ತೆ ಅಳಿಯನ ಒಲ್ಲೆನೆಂದು ಹೊತ್ತುಹೋರುತ್ತಿರಲಾಗಿ, ಅಳಿಯ ಅತ್ತೆಯ ಹಿಡಿದು ಅಳಿದನುಟ್ಟ ಸೀರೆಯ. ಮೊತ್ತದ ಭಗವ ಕಂಡು ಒತ್ತಿಹಿಡಿಯಲಾಗಿ, ಸತ್ತಳು ಅತ್ತೆ ಅಳಿಯನ ಕೈಯಲ್ಲಿ. ಅತ್ತೆಯ ಕಾಲುದೆಸೆಯಲ್ಲಿ ಕುಳಿತು, ಎತ್ತಿ ನೋಡಲಾಗಿ, ನಿಶ್ಚಯವಾಯಿತ್ತು ಅತ್ತೆಯ ಭಗ. ಹುಟ್ಟಿದರು ಮೂವರಲ್ಲಿ, ಕೆಲದಲ್ಲಿ ಇಬ್ಬರು, ನಡುವೆ ಒಬ್ಬನಾಗಿ. ಇಬ್ಬರ ಬಿಟ್ಟು, ಒಬ್ಬನ ಹಿಡಿದು ಅಬ್ಬರಿಸಲಾಗಿ, ಅವನೆದ್ದು ಬೊಬ್ಬೆಯ ಹೊಯ್ದ. ಹೊಯ್ದ ಹೊಯ್ಗಳಿನಲ್ಲಿ ಅತ್ತೆಯ ತಂದ ಅಳಿಯ, ನಾಮನಷ್ಟವಾದ. ಇಂತಿದನೆತ್ತಲೆಂದರಿಯೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಳಿಯಗೂಳಿಗೆ ಹೋದಾತ ಅತ್ತೆಯ ನೆರೆದರೆ ನಾದಿನಿಯರು ನೋಡಿ ಸೋಜಿಗವ ಮಾಡುತ್ತಿದಾರೆ ನೋಡಾ. ನಾದಿನಿಯರ ತಾಯಿ ಅತ್ತೆಯ ಕೊಂದು ಅಳಿಯನ ನುಂಗಿ ಪರಪುರುಷನ ನೆರೆದು ಮುತ್ತೆ ೈದೆಯಾದುದು ಸೋಜಿಗ, ಸೋಜಿಗ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅತ್ತಿಗೆ ಸತ್ತಳು, ನಾದಿನಿ ಮೊರೆಯಲಿಲ್ಲ. ಅತ್ತೆಯ ಕಣ್ಣು ಅರಯಿತ್ತು, ಮಾವನ ಕಾಲು ಮುರಿಯಿತ್ತು. ಭಾವನ ಸಂದುಸಂದುವೆಲ್ಲ ಮುರಿದವು, ಮೈದುನನ ಮೈಯೆಲ್ಲ ಉರಿಯಿತ್ತು. ಹಿತ್ತಿಲಗೋಡೆ, ಪಶ್ಚಿಮದ ಬಾಗಿಲು ಬಯಲಾಯಿತ್ತು. ಇದ ನೋಡಿ ಕೂಡಿ, ನಾ ನಿಶ್ಚಿಂತ ಲಿಂಗೈಕ್ಯನಾದೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಮಗನ ಕೊಂದು ತಿಂದ ತಾಯ ಕಂಡೆ. ಬಂಧುಗಳ ಕೊಂದು ನಂಟರಲ್ಲಿ ಕೂಪನ ಕಂಡೆ. ಅತ್ತೆ ಅಳಿಯನ ಒತ್ತಿನಲ್ಲಿ ಮಲಗಿ ಕೂಸು ಹುಟ್ಟಿತ್ತು. ಅಳಿಯ ಅತ್ತೆಯ ನೋಡಿ, ಅತ್ತೆ ಅಳಿಯನ ನೋಡಿ, ಹೋಯಿತ್ತು ಹೋಗದಿದೆಯೆಂದು ನಗುವರ ಕಂಡೆ. ಅವರಿಬ್ಬರ ನೋಡಿ ಹೆತ್ತ ಕೂಸು, ನಾನಿವರ ಅಳಿಯನೆಂದು ಹೋಯಿತ್ತು. ಇದ ಕೇಳಿಹರೆಂದು ಹೇಳಲಂಜಿ, ಅಲೇಖನಾದ ಶೂನ್ಯ ಕಲ್ಲಿನ ಒಳಹೊಕ್ಕ.
--------------
ವಚನಭಂಡಾರಿ ಶಾಂತರಸ
ಅತ್ತೆಯ ಬಸುರಲಿ ಮಗಳು ಹುಟ್ಟಿ, ಅಳಿಯಂಗೆ ಮದುವೆಯ ಮಾಡಲೊಡನೆ, ಅಳಿಯ ಅತ್ತೆಯನಪ್ಪಿ, ಸೊಸೆ ಮಾವನನಪ್ಪಿ, ಈ ನಾಲ್ವರು ನಿರ್ವಯಲಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬೆಟ್ಟದ ನೆಲ್ಲಿಯಕಾಯ ಪಟ್ಟಣಕ್ಕೆ ಹೊತ್ತುಕೊಂಡು ಹೋಗಿ ಹೊಟ್ಟೆಯ ಹೊರೆವವನಂತೆ, ಉತ್ತಮ ತೇಜಿಯ ಹೆಸರ ಕೇಳಿ ಕಡಲೆಯ ತಿಂಬ ಗಾವಲಿಗನಂತೆ, ಅತ್ತೆಯ ಹೆಸರ ಹೇಳಿ ಹೊಟ್ಟೆಯ ಹೊರೆವ ತೊತ್ತಿನಂತೆ, ಆದ್ಯರ ವಚನಂಗಳ ಅಲ್ಲಿಗಲ್ಲಿಗೆ ಉಸುರಿ ಅನ್ನ ಕೂಳಿಂಗೆ ಹರಿದಾಡುವ ಅಜ್ಞಾನಿಗಳ ಅನುಭಾವಿಗಳೆಂಬೆನೆ ? ಅಯ್ಯಾ, ವಿರಕ್ತರೆಂಬೆನೆ ? ವೇಷವ ಹೊತ್ತು ತಿರುಗುವ ಡೊಂಬನಂತೆ ಬಲ್ಲೆ ಬಲ್ಲೆನೆಂಬ ಅಹಂಕಾರವ ನುಡಿವ ಭವಿಗಳ ಅನುಭಾವಿಗಳೆಂಬೆನಲ್ಲದೆ ವಿರಕ್ತರೆಂಬೆನೆ ? ವಿಷಯವ ಮುಂದುಗೊಂಡು ತಿರುಗುವ ಅನುಭಾವಿಗಳನೆಂತು ವಿರಕ್ತರೆಂಬೆನಯ್ಯಾ ಅಮುಗೇಶ್ವರಲಿಂಗವೆ ?
--------------
ಅಮುಗೆ ರಾಯಮ್ಮ
-->