ಅಥವಾ

ಒಟ್ಟು 34 ಕಡೆಗಳಲ್ಲಿ , 14 ವಚನಕಾರರು , 27 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಜ್ಯಲೋಕದಲ್ಲಿ ಅಬಲೆ ಅಮೃತಕೊಡನನೆ ಹೊತ್ತು ಸದಮದಜ್ಞಾನಿಯಾಗಿ ತಂ ರೂಪಿನಾ ದಾಯೆ ದಾಯವ ನುಂಗಿ ಬಣ್ಣ ಬಣ್ಣವ ನುಂಗಿ ಸರ ಸರಯ ಮೇಲೆ ಉತ್ಕøಷ್ಟದಾ, ಐಲೋಕಂ ಮೇಲೆ ಆ ಕೊಡನನಿಳುಹಲ್ಕೆ ಕೊಡನೊಡದು ಅತ್ಯಂತ ಪ್ರವಾಹದಾ ನುಡಿಯ ಗಡಣವ ಮೀರಿ ಅಕ್ಷರದ್ವಯದ ಮೃಡನೊಡನೆ ಓಲಾಡಿದೆ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಮತ್ತಮಾ ಸಾಧಾರದೀಕ್ಷೆಯು ಸಬೀಜದೀಕ್ಷೆ ನಿರ್ಬೀಜದೀಕ್ಷೆ ಚಿನ್ಮಯ ದೀಕ್ಷೆ ಯೆಂದು ಮೂರು [ಪ್ರಕಾರದವು]. ಅವು ಯಥಾಕ್ರಮದಿಂದ ಕರ್ಮಕಾಂಡ ಭಕ್ತಿ ಕಾಂಡ ಜ್ಞಾನಕಾಂಡಗಳಲ್ಲಿಯ ದೀಕ್ಷೆ ಎನಿಸಿಕೊಂಬವು. ಇಂತೆಂದು ಕಾರಣಾಗಮ ಪೇಳೂದಯ್ಯಾ. ಅವರೊಳು ನಿರ್ಬೀಜದೀಕ್ಷೆ[ಯು ಸದ್ಯೋ ನಿರ್ವಾಣದೀಕ್ಷೆ ಎಂದು] ಚಿರಂ ನಿರ್ವಾಣದೀಕ್ಷೆ ಎಂದು ಎರಡು ಭೇದವು ಪೇಳಲ್ಪಡುತ್ತಿಹುದು. ಅವರೊಳು ಅತ್ಯಂತ ವಿರಕ್ತನಾದ ಶಿಷ್ಯ[ನು] ಅನೇಕ ಭವಂಗಳಲ್ಲಿ ಮಾಡಲ್ಪಟ್ಟ ಸಂಚಿತಕರ್ಮಂಗಳನು, ಮತ್ತಮಾ ಸಂಚಿತಕರ್ಮರಾಶಿಯೊಳಂ ಆಗ ತಾಳ್ದಿರ್ದ ಶರೀರವಿಡಿದು ಅನುಭವಿಸುತ್ತಿರ್ದ ಪ್ರಾರಬು ಕರ್ಮಂಗಳನು, ಮುಂದೆ ಭವಾಂ ತರಂಗಳಲ್ಲಿ ಅನುಭವಿಸಲುಳ್ಳ ಆಗಾಮಿ ಕರ್ಮಂಗಳನು ಶೋದ್ಥಿಸಿ ಸದ್ಯೋನ್ಮುಕ್ತಿ ಯನೆಯಿಸುವ ದೀಕ್ಷೆ ಸದ್ಯೋನಿರ್ವಾಣದೀಕ್ಷೆ ಎನಿಸುವದಯ್ಯಾ, ಶಾಂತವೀರ ಪ್ರಭುವೇ.
--------------
ಶಾಂತವೀರೇಶ್ವರ
ಗುರುಕಾರುಣ್ಯದ ಮಹಾಸಂಪಾದನೆಯಲ್ಲಿ ಅತ್ಯಂತ ವಿಶೇಷ ಸ್ಥಲವೆ ಗಳವು. ಮಹಾಲಿಂಗ ಸಂಪಾದನೆಯಲ್ಲಿ, ತ್ರಿವಿಧ ಸಂಪಾದನೆಯಲ್ಲಿ, ಶರೀರಾರ್ಥ ಮಹಾರ್ಥದಲ್ಲಿ, ನಾದಬಿಂದು ಸಂಪಾದನೆಯಲ್ಲಿ, ಮಾರ್ಗಕ್ರಿಯಾ ಸಂಪಾದನೆಯಲ್ಲಿ, ಭಕ್ತಿ ಸಂಪಾದನೆಯಲ್ಲಿ, ಭಾವ ನಿಷ್ಠೆಯಲ್ಲಿ, ಅರ್ಪಿತ ನಿಷ್ಠೆಯಲ್ಲಿ ಆ ಗಳವೆ ಘನಸ್ಥಳ. ಅತ್ಯಂತ ವಿಶೇಷಸ್ಥಳವಾಗಿ ಗಳದಲ್ಲಿ ಧರಿಸಿದರೆ ಕೂಡಲಚೆನ್ನಸಂಗಯ್ಯನ[ಲ್ಲಿ ಇದೇ ಕ್ರಮ].
--------------
ಚನ್ನಬಸವಣ್ಣ
ಸಾಗರದ ಮಧ್ಯದ ಸಾದ್ಥಿಸುವ ಬಹಿರಂಗ ಆಗಮಂಗಳಿಗದು ಹೊರಗು ತಾನು. ಯೋಗಕ್ಕೆ ಮೂಲವದು, ಯೋಗಕ್ಕೆ ಸಿದ್ಧವದು, ಯೋಗಕ್ಕೆ ಅತ್ಯಂತ ಪರಮಸೀಮೆ. ಸಾದಾಖ್ಯ ತತ್ವದ ಸಂದು ಸವದರಿಗಿಲ್ಲ, ಅದ್ಯಕ್ಷರದ್ವಯದ ಪರಿಯಿಂತುಟು. ಮೂದೇವರೊಡೆಯ ಕಪಿಲಸಿದ್ಧಮಲ್ಲಿಕಾರ್ಜುನನ ಭೇದಿಸುವ ಯೋಗಿಯನು ಕಂಡು ನಗುವೆ.
--------------
ಸಿದ್ಧರಾಮೇಶ್ವರ
ಅಯ್ಯಾ, ಮಾತೆ ಪಿತರಾಗಲಿ, ಸಹೋದರ ಬಂಧುಗಳಾಗಲಿ, ಅತ್ಯಂತ ಸ್ನೇಹದಲ್ಲಿ ಕೂಡಿದವರಾಗಲಿ, ಗುರುಕಾರುಣ್ಯವ ಪಡೆದು ಶಿವಸೋದರರಾಗಲಿ, ಶಿವಾಚಾರ ಶಿವಕಾರ್ಯಕ್ಕೆ ಸಹಕಾರಿಗಳಲ್ಲದೆ ವಕ್ರವಾದವನು ಮಾತಿನಲ್ಲಿ ನಿರಾಕರಿಸಿ ನುಡಿಯದೆ, ಮನದಲ್ಲಿ ಪತಿಕರಿಸಿ ಕೂಡಿಸಿಕೊಂಡು ನಡೆದೆನಾದಡೆ, ಅಫೋರನರಕದಲ್ಲಿಕ್ಕು ಕಲಿದೇವಯ್ಯಾ.
--------------
ಮಡಿವಾಳ ಮಾಚಿದೇವ
ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ, ಆತ್ಮನು ಈ ಪ್ರಕಾರವು ಅತ್ಯಂತ ಗೋಪ್ಯ, ಅತ್ಯಂತ ಸೂಕ್ಷ್ಮ, ಅತ್ಯಂತ ರಹಸ್ಯವಾಗಿಹುದು. ಈ ಆರನು ಗುರುಮುಖದಲಿ ಕೇಳಿಕೊಂಬುದು ನೋಡಾ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಯ್ಯಾ ವಿಪ್ರರೆಂಬವರು ಮಾತಂಗಿಯ ಮಕ್ಕಳೆಂಬುದಕ್ಕೆ ಇದೇ ದೃಷ್ಟ. ಮತ್ತೆ ವಿಚಾರಿಸಿ ಕೇಳಿದಡೆ ಹೇಳುವೆನು : ಬಡಗಿ ಮಾಚಲದೇವಿಯ ಕುಲಜೆಯ ಮಾಡಿಹೆವೆಂದು, ಕಡಿದು ಹಂಚಿ ತಿಂದರಂದು ಗೋಮಾಂಸವ. ಬಿಡದೆ ಅತ್ಯಂತ ಉಜ್ಞಕ್ರಮವೆಂದು ಹೋತನ ಕೊಂದು, ಚಿಕ್ಕ ಚಿಕ್ಕವಾಗಿ ಕಡಿಮೆ ಭಕ್ಷಿಸಿದುದ ಕಂಡು, ಮಿಕ್ಕ ಹದಿನೇಳುಜಾತಿ ವಿಪ್ರರ ಕೈಯಲನುಗ್ರಹವ ಪಡೆದು, ತಿನಕಲಿತರಯ್ಯಾ. ಶ್ವಪಚೋಪಿ ವಿಪ್ರ ಸಮೋ ಜಾತಿಭೇದಂ ನ ಕಾರಯೇತ್| ಅಜಹತ್ಯೋಪದೇಶೀನಾಂ ವರ್ಣನಾಂ ಬ್ರಾಹ್ಮಣೋ ಗುರುಃ|| ಎಂಬುದಾಗಿ, ಕಿರಿಕಿರಿದ ತಿಂದ ದ್ವಿಜರು ನೆರೆದು ವೈಕುಂಠಕ್ಕೆ ಹೋಹರೆ? ನೆರೆಯಲೊಂದ ತಿಂದ ವ್ಯಾಧ ದ್ವಿಜರಿಂದಧಿಕ. `ಭರ್ಗೋ ದೇವಸ್ಯ ಧೀಮಹಿ' ಎಂಬ ದಿವ್ಯಮಂತ್ರವನೋದಿ, ನಿರ್ಬುದ್ಧಿಯಾದಿರಿ. ಶಿವಪಥವನರಿಯದೆ ಬರುದೊರೆವೋದಿರಿ. ಆದಡೀ ನರಕಕ್ಕೆ ಭಾಜನವಾದಿರಿ. ಇದು ಕಾರಣ, ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಶರಣಂಗೆ ಸರಿಯೆ ಜಗದನ್ಯಾಯಿಗಳು.
--------------
ಹಾವಿನಹಾಳ ಕಲ್ಲಯ್ಯ
ಗುರುಲಿಂಗಜಂಗಮದಲ್ಲಿ ಅತ್ಯಂತ ಪ್ರೇಮಿಗಳೆಂದು ಪರರ ಮುಂದೆ ತಮ್ಮ ಬಿಂಕವ ತೋರುವರು. ತೋರಿದಂತೆ ಆಚರಣೆಯ ತೋರರು. ಅದೆಂತೆಂದಡೆ : ತನ್ನ ದೀಕ್ಷೋಪದೇಶವ ಮಾಡಿದಂಥ ಗುರು ಮನೆಗೆ ಬಂದರೆ ಮನ್ನಿಸರು. ನಯನುಡಿಯ ಮಾತನಾಡರು. ಒಂದು ಹೊನ್ನು ವಸ್ತ್ರವ ಬೇಡಿದರೆ ಇಲ್ಲೆಂಬರಲ್ಲದೆ ಕೊಟ್ಟು ಸಂತೋಷಪಡಿಸುವವರಿಲ್ಲ. ಗ್ರಾಮದ ಮಧ್ಯದಲ್ಲಿ ಆವನೊಬ್ಬ ಜಾತಿಹಾಸ್ಯಕಾರನು ಬಂದು, ಡೋಲು ಡಮಾಮಿಯ ಹೊಡೆದು, ಬೊಬ್ಬಿಯ ರವಸದಿಂದ ಮಣ್ಣವರಸಿ, ರಟ್ಟಿ ಮಂಡಿಯ ತಿಕ್ಕಿ, ತೊಡೆಯ ಚಪ್ಪರಿಸಿ, ಕೋ ಎಂದು ಕೂಗಿ, ಭೂಮಿಗೆ ಕೈ ಹಚ್ಚಿ, ಲಾಗದ ಮೇಲೆ ಲಾಗ ಹೊಡೆದು, ಅಂತರಪುಟಕಿಯಲ್ಲಿ ಮೂರು ಹೊರಳಿಕೆಯ ಹೊರಳಿ, ಮುಂದೆ ಬಂದು ನಿಂತು, ಮಜುರೆಯ ಮೇಲೆ ಮಜುರೆಯ ಹೊಡೆದು, ಅವರ ಹೆಸರೆತ್ತಿ ಕೊಂಡಾಡಲು, ಅವರ ಲಾಗಕ್ಕೆ ಮೆಚ್ಚಿ ಶಾಲು ಶಕಲಾತಿ ಮೊದಲಾದ ವಸ್ತ್ರವ ಕೊಟ್ಟು, ಕಾಲತೊಡರು ಮುಂಗೈಸರಪಳಿ ಛತ್ರ ಚಾಮರ ಜಲ್ಲಿ ಮೊದಲಾದ ಚಾಜವ ಕೊಟ್ಟು, ಸಂತೋಷಪಡಿಸುವರಲ್ಲದೆ ಇಲ್ಲೆಂಬರೇ? ಇಲ್ಲೆನ್ನರಯ್ಯ. ಮತ್ತಂ, ಲಿಂಗಪೂಜೆಯ ಮಾಡೆಂದಡೆ ಎನ್ನಿಂದಾಗದೆಂಬರು. ಲಿಂಗಕ್ಕೆ ಸಕಲಪದಾರ್ಥವನರ್ಪಿಸಿ ಸಲಿಸೆಂದಡೆ ಎನ್ನಿಂದಾಗದೆಂದು, ಬಂದ ಪದಾರ್ಥವ ಲಿಂಗಕ್ಕೆ ತೋರದೆ ಬಾಯಿಗೆಬಂದಂತೆ ತಿಂಬುವರು. ಜಟ್ಟಿಂಗ ಹಿರಿವಡ್ಯಾ ಲಕ್ಕಿ ದುರ್ಗಿ ಚಂಡಿ ಮಾರಿಯ ಪೂಜಿಸೆಂದಡೆ ತನುಮನವು ಹೊಳೆಯುಬ್ಬಿದಂತೆ ಉಬ್ಬಿ, ಹೊತ್ತಾರೆ ಎದ್ದು ಪತ್ರಿ ಪುಷ್ಪವ ತಂದು, ಒಂದೊತ್ತು ಉಪವಾಸ ಮಾಡಿ, ಮೈಲಿಗೆಯ ಕಳೆದು ಮಡಿಯನುಟ್ಟು, ಮನಪೂರ್ವಕದಿಂ ಪೂಜೋಪಚಾರವ ಮಾಡಿ, ಭೂಮಿಯಲ್ಲಿ ಕಾಯಕಷ್ಟವ ಮಾಡಿ ಬೆಳೆದಂಥ ಹದಿನೆಂಟು ಜೀನಸಿನ ಧಾನ್ಯವ ತಂದು ಪಾಕ ಮಾಡಿ, ಆ ದೇವತೆಗಳಿಗೆ ನೈವೇದ್ಯವ ಕೊಟ್ಟು, ಮರಳಿ ತಾವು ಉಂಬುವರಲ್ಲದೆ, ಅಂತಪ್ಪ ದೇವತೆಗಳಿಗೆ ಕೊಡದ ಮುನ್ನವೆ ಸಾಯಂಕಾಲಪರಿಯಂತರವಾದಡೂ ಒಂದು ಬಿಂದು ಉದಕ ಒಂದಗಳನ್ನವ ಕೊಳ್ಳದೆ, ತನು-ಮನ ಬಳಲಿಸುವರಯ್ಯಾ. ಮತ್ತಂ, ಜಂಗಮಲಿಂಗವು ಹಸಿವು ತೃಷೆ ಆಪ್ಯಾಯನವಾಗಿ ಮಧ್ಯಾಹ್ನ ಸಾಯಂಕಾಲದೊಳಗೆ ಭಿಕ್ಷಕ್ಕೆ ಬಂದಡೆ, ಅನುಕೂಲವಿಲ್ಲ, ಮನೆಯೊಳಗೆ ಹಡದಾರ ಗದ್ದಲುಂಟು ಮನೆಯೊಳಗೆ ಗೃಹಸ್ಥರು ಬಂದಾರೆ, ಘನಮಾಡಿಕೊಳ್ಳಿರಯ್ಯಾ ಮುಂದಕ್ಕೆ ಎಂಬರಲ್ಲದೆ, ಅಂತಪ್ಪ ಆಪ್ಯಾಯನವಾದ ಜಂಗಮವ ಕರೆದು ಅನ್ನೋದಕವ ನೀಡಿ, ತೃಪ್ತಿಯ ಬಡಿಸುವರೆ ? ಬಡಿಸುವದಿಲ್ಲ. ಊರೊಳಗೆ ಒಬ್ಬ ಜಾರಸ್ತ್ರೀಯಳು ಉಂಡು ವೀಳ್ಯವಕೊಂಡು ಸಹಜದಲ್ಲಿ ತಮ್ಮ ಗೃಹಕ್ಕೆ ಬಂದಲ್ಲಿ ಆ ಜಾರಸ್ತ್ರೀಗೆ ಮನೆಯವರೆಲ್ಲರು ಉಣ್ಣು ಏಳು ಉಂಬೇಳೆಂದು ಆಕೆಯ ಕರವ ಪಿಡಿದು ಕರೆವರಯ್ಯಾ. ಅವಳು ಎನಗೆ ಹಸುವಿಲ್ಲೆಂದು ತಮ್ಮ ಗೃಹಕ್ಕೆ ಹೋಗಲು, ಅವಳು ಹೋದಮೇಲೆ ದೇವರಿಗೆ ಎಡಿಯ ಕಳಿಸಿದಂತೆ ಕಳುಹುವರಯ್ಯ. ಇಂತಪ್ಪ ತ್ರಿವಿಧಭ್ರಷ್ಟ ಹೊಲೆ ಮಾದಿಗರಿಗೆ ಗುರು-ಲಿಂಗ-ಜಂಗಮದ ಪ್ರೇಮಿಗಳಾದ ಸದ್ಭಕ್ತರೆಂದಡೆ, ಶಿವಜ್ಞಾನಿಗಳಾದ ಶಿವಶರಣರು ಕಂಡು ತಮ್ಮೊಳಗೆ ತಾವೇ ನಕ್ಕು ಅರಿಯದವರಂತೆ ಶಬ್ದಮುಗ್ಧರಾಗಿ ಸುಮ್ಮನೆ ಇರ್ದರು ಕಾಣಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಚಿತ್ಕಲಾಪ್ರಣವ ಉಪಮಿಸಬಾರದ ಉಪಮಾತೀತವು ಮನಾತೀತವು ವರ್ಣಾತೀತವು ತತ್ವಾತೀತವು ಜ್ಞಾನಾತೀತವು. ನಿರಂಜನಕಲಾಪ್ರಣವವು ಅತ್ಯಂತ ಸೂಕ್ಷ್ಮವಾಗಿಹುದು. ಇದಕ್ಕೆ ಈಶ್ವರೋýವಾಚ : ``ವಾಚಾತೀತಂ ಮನೋýತೀತಂ ವರ್ಣಾತೀತಂ ಚ ತತ್ಪದಂ | ಜ್ಞಾನಾತೀತನಿರಂಜನ್ಯಂ ಕಲಾಯಾಂ ಸೂಕ್ಷ್ಮ ಭಾವಯೇತ್''|| ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ನಿರಾಳ ಷಡುಚಕ್ರಂಗಳ ಮೇಲೆ ನಾಲ್ಕು ಚಕ್ರಂಗಳುಂಟು. ಆ ಚಕ್ರಂಗಳು ಗೋಪ್ಯಕ್ಕೂ ಅತ್ಯಂತ ಗೋಪ್ಯ, ಸೂಕ್ಷ್ಮಕ್ಕೂ ಅತ್ಯಂತ ಸೂಕ್ಷ್ಮ, ಶೂನ್ಯಕ್ಕೂ ಅತ್ಯಂತ ಶೂನ್ಯ, ಅಮಲಕ್ಕೂ ಅಮಲಾತೀತವಾಗಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಬಡಿದೆಬ್ಬಿಸಿ ಹಾಲನೆರೆದರೆ ಸವಿದು ಪರಿಣಾಮಿಸುವುದೇ ಕರಲೇಸಯ್ಯಾ. ಕ್ರೋಧ ಹೊಂದಿ ಜರಿದರೆ ದುಃಖದಾಗರವಯ್ಯಾ. ಪರಮ ವೈರಾಗ್ಯ ಜಂಗಮವೆನ್ನ ಜರಿದು ಅವಿರಳಬೋಧಾಮೃತವ ಎನ್ನ ಮಸ್ತಕದ ಮೇಲೆ ಸೂಸಿದರೆ ಅತ್ಯಂತ ಸುಯಿಧಾನಿಯಾಗಿರ್ದೆನಯ್ಯಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆದಿಲಿಂಗ ಅಸಂಭವ. ವೇದನಾಲ್ಕು ಪೊಗಳಲ್ಕೆ ಹೊಗಳಿದವು, ಅತ್ಯಂತ ಭಕ್ತರಲ್ಲಿ. ವೇದ ಪಶುವೇದ ಪಾಠಕರು ಭೇದ ಬೋಧೆಯ ಮಾಡಿಕೊಂಡು ಯಮಬಾಧೆಗೆ ಹೋದವರ ದೈವವೆಂದರಸಬೇಡ. ಈ ವೇದ ಬ್ರಹ್ಮ ನುಡಿಯ ಕೇಳಲಾಗದೆಂದ, ಕಲಿದೇವರದೇವಯ್ಯ.
--------------
ಮಡಿವಾಳ ಮಾಚಿದೇವ
ಕೆದರಿದ ತಲೆಯ, ತೊನೆವ ನಡೆಯ, ಹಣೆಯ ಬುಗುಟಿನ, ಕರಸ್ಥಲದ ಅನಿಮಿಷದಿಂದ ಬಹಿರಂಗದ[ವಧಾ]ನ ತಪ್ಪಿ, ಇದಿರುಗೊಯಿಲು ತಾಗಿ ಪುರ್ಬೊಡೆದು, ಕಣ್ಣು ತರಿದು, ಕಿವಿ ಹರಿದು, ಜೋಲುವ ರಕ್ತಧಾರೆಯ, ಗಾಳಿಯ ಧೂಳಿಯ ಮಳೆಯ ಜೋರಿನ, ಬೆನ್ನ ಬಾಸುಳದ, ಎಡಬಲದ ಬರಿಯ ತದ್ದಿನ, ಮುಳ್ಳುದರಹಿನ, ಕಂಕುಳ ಸೀಳ ಕಂಡು ನೋಡುವ ಜನರು ಬೆರಗಾಗೆ_ ಪೊರವಾರಿನ ಮರೆಯ ದಿಗಂಬರದ ಬಣಗು ಸುರಿವುತ್ತ, ಆಪ್ಯಾಯನವರತು, ಬಿದ್ದು ಮೊಳಕಾಲೊಡೆದು, ಹೊಸ ಹುಣ್ಣಿನ ರಕ್ತದ ಜೋರು ಹರಿದು, ಮುಂಗಾಲ ಕಣೆ [ಒ]ಳೆದು, ಕಣಕಾಲ ಸಂದು ತಪ್ಪಿ, ಕಿರುಬೆರಳು ಎಡಹಿ, ಹೆಬ್ಬೊಟ್ಟೆಡೆದ ಗಾಯದ, ಉರುಗು ಟೊಂಕದ, ಪೆರಚು ಗುಂಟನ ನೋಡಾ ಚೆನ್ನಬಸವಣ್ಣಾ. ಅತ್ಯಂತ ಮಲಿನ ಕೂಡಲಸಂಗಮದೇವರ ಕುರುಹು ವಿಪರೀತ, ನೋಡುವಡೆ ಭಯಂಕರವಾಗಿದೆ ನೋಡಯ್ಯಾ.
--------------
ಬಸವಣ್ಣ
ವೀರಶೈವ, ಶುದ್ಧಶೈವವೆಂಬುಭಯ ಪಕ್ಷದ ನಿರ್ಣಯ ನಿಷ್ಪತ್ತಿಯೆಂತೆಂದಡೆ: ಮಲ ಮಾಯಾ ಮಲಿನವನು ಶ್ರೀಗುರು ತನ್ನ ಕೃಪಾವಲೋಕನದಿಂದದನಳಿದು, ನಿರ್ಮಲನಾದ ಶಿಷ್ಯನ ಉತ್ತಮಾಂಗದಲ್ಲಿಹ ಪರಮಚಿತ್ಕಳೆಯನು ಹಸ್ತಮಸ್ತಕಸಂಯೋಗದ ಬೆಡಗಿನಿಂದ ತೆಗೆದು, ಆ ಮಹಾಪರಮ ಕಳೆಯನು ಸ್ಥಲದಲ್ಲಿ ಕೂಡಿ, ಮಹಾಲಿಂಗವೆಂದು ನಾಮಕರಣಮಂ ಮಾಡಿ, ಶಿಷ್ಯನಂಗದ ಮೇಲೆ ಬಿಜಯಂಗೆಯಿಸಿ, ಕರ್ಣದ್ವಾರದಲ್ಲಿ ಪ್ರಾಣಂಗೆ ಆ ಮಹಾಲಿಂಗವ ಜಪಿಸುವ ಪ್ರಣವಪಂಚಾಕ್ಷರಿಯನು ಪ್ರವೇಶವಂ ಮಾಡಿ, ಅಂಗಪೀಠದಲ್ಲಿರಿಸಿ, ಅಭಿನ್ನಪ್ರಕಾಶವಾದ ಪೂಜೆಯ ಮಾಡಹೇಳಿದನು, ಇದೀಗ ವೀರಶೈವದ ಲಕ್ಷಣವೆಂದರಿವುದು. ಇನ್ನು ಶುದ್ಧಶೈವಂಗೆ ಗುರು ತನ್ನ ನಿರೀಕ್ಷಣ ಮಾತ್ರದಲ್ಲಿ ಅವನ ಶುದ್ಧಾಂಗನ ಮಾಡಿ, ಆತನ ಕರ್ಣದ್ವಾರದಲ್ಲಿ ಪಂಚಾಕ್ಷರಿಯನುಪದೇಶವಂ ಮಾಡಿ, ಸ್ಥಾವರಲಿಂಗಪೂಜಕನಾಗಿರೆಂದು ಲಿಂಗವನು ಕೊಟ್ಟು, ಭೂಪೀಠದಲ್ಲಿರಿಸಿ ಅರ್ಚನೆ ಪೂಜನೆಯ ಮಾಡೆಂದು ಹೇಳಿದನು. ಹೇಳಲಿಕ್ಕಾಗಿ ಶುದ್ಧಶೈವನೆ ಪೀಠದಲ್ಲಿರಿಸಿ ಭಿನ್ನಭಾವಿಯಾಗಿ ಅರ್ಚನೆ ಪೂಜೆನೆಯಂ ಮಾಡುವನು. ವೀರಶೈವನು ಅಂಗದ ಮೇಲೆ ಧರಿಸಿ ಅಭಿನ್ನಭಾವದಿಂದ ಅರ್ಚನೆ ಪೂಜನೆಯಂ ಮಾಡುವನು. ಶುದ್ಧಶೈವಂಗೆ ನೆನಹು, ವೀರಶೈವಂಗೆ ಸಂಗವೆಂತೆಂದಡೆ: ಅತ್ಯಂತ ಮನೋರಮಣನಪ್ಪಂತಹ ಪುರುಷನ ಒಲುಮೆಯಲ್ಲಿಯ ಸ್ತ್ರೀಗೆ ನೆನಹಿನ ಸುಖದಿಂದ ಸಂಗಸುಖವು ಅತ್ಯಧಿಕವಪ್ಪಂತೆ ಶುದ್ಧಶೈವದ ನೆನಹಿಂಗೂ ವೀರಶೈವದಲ್ಲಿಯ ಸಂಗಕ್ಕೂ ಇಷ್ಟಂತರ. ಆ ಲಿಂಗದಲ್ಲಿ ಶುದ್ಧಶೈವನ ನೆನಹು ನಿಷ್ಪತ್ತಿಯಾದಡೆ ಸಾರೂಪ್ಯನಹನು. ಆ ಲಿಂಗದಲ್ಲಿ ವೀರಶೈವನ ನೆನಹು ನಿಷ್ಪತ್ತಿಯಾದಡೆ ಸಾಯುಜ್ಯನಹನು ಅದು ಕಾರಣ, ಸ್ಥಾವರಲಿಂಗದ ಧ್ಯಾನಕ್ಕೂ ಪ್ರಾಣಲಿಂಗದ ಸಂಗಕ್ಕೂ ಇಷ್ಟಂತರ. ಸ್ಥಾವರಲಿಂಗದ ಧ್ಯಾನದಿಂದ ಸಾರೂಪ್ಯಪದವನೈದಿದ ತೆರನೆಂತೆಂದಡೆ: ಕೀಟನು ಭ್ರಮರಧ್ಯಾನದಿಂದ ಆ ಭ್ರಮರರೂಪಾದಂತೆ ಶೈವನು ಶಿವಧ್ಯಾನದಿಂದ ಶಿವನ ಸಾರೂಪ್ಯಪದವನೈದಿ ಇದಿರಿಟ್ಟು ಭಿನ್ನಪದದಲ್ಲಿರುತ್ತಿಹನು. ಮತ್ತಂ, ವೀರಶೈವನು ಜಂಗಮಾರ್ಚನೆಯಂ ಮಾಡಿ ಪ್ರಾಲಿಂಗಸಂಬಂಧದಿಂ ಸಾಯುಜ್ಯಪದವನೆಯ್ದಿದ ತೆರನೆಂತೆಂದಡೆ: ಅಗ್ನಿಯ ಸಂಗವ ಮಾಡಿದ ಕರ್ಪುರ ನಾಸ್ತಿಯಾದ ಹಾಂಗೆ, ಈತನು ಶಿವನಲ್ಲಿ ಸಾಯುಜ್ಯಪದವನೈಯ್ದಿ ರೂಪುನಾಸ್ತಿಯಾಗಿ ಶಿವನೆಯಹನು. ಇದು ಕಾರಣ ಶುದ್ಧಶೈವ ವೀರಶೈವದಂತರ ಮಹಾಂತರ, ಈ ಪ್ರಕಾರ ಕಾಣಾ, ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ನಿತ್ಯಲಿಂಗಾರ್ಚನೆಯ ಅತ್ಯಂತಂ ಮಾಡಿ ಮತ್ತೆ ಸಮತೆಯ ಕೈಯಲನುಜ್ಞೆ ತೊಡೆದು ನಿತ್ಯಗುರು ಶ್ರೀ ಕಪಿಲಸಿದ್ಧಮಲ್ಲೇಶ್ವರನ ಅರ್ಚಿಸುವ ಭಕ್ತರಿಗೆ ಭವ ದೂರವೆ
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->