ಅಥವಾ

ಒಟ್ಟು 16 ಕಡೆಗಳಲ್ಲಿ , 8 ವಚನಕಾರರು , 10 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭವಬಂಧನಂಗಳ ಹಿಂಗಿಸಬೇಕೆಂಬಣ್ಣಗಳು ನೀವು ಬಲ್ಲರೆ ಹೇಳಿರಿ, ಅರಿಯದಿದ್ದರೆ ಕೇಳಿರಿ. ಶ್ರೀಗುರುಪುತ್ರನಾಗಿ ಅವರು ತಮ್ಮ ಅಂತಃಕರಣ ಕೃಪೆಯಿಂದ ಪೇಳಿದ ಪ್ರಸಾದವಾಕ್ಯವನು ಅವರ ದಯದಿಂದ ಪೇಳುತಿರ್ದೆನು ಕೇಳಿರಯ್ಯ. ಅದೆಂತೆಂದಡೆ : ಆಶೆ ಆಮಿಷ ತಾಮಸದೊಡನೆ ಕೂಡಿ ಕ್ಲೇಶಪಡುತಿರ್ದಂತೆ ಗುರುಗಳಲ್ಲಿ ಅಥವಾ ಜಂಗಮಲಿಂಗಿಗಳಲ್ಲಿ ಇಂತೀ ಉಭಯ ಪಾಶಬದ್ಧರ ಕೈಯಿಂದ ಅಹಂಕಾರ ಮಮಕಾರದಲ್ಲಿ ಆಣವಮಲ, ಮಾಯಾಮಲ, ಕಾರ್ಮಿಕಮಲವೆಂಬ ಮಲತ್ರಯಂಗಳ ಕಚ್ಚಿ, ಸಂಸಾರವಿಷಯದಲ್ಲಿ ಲಂಪಟರಾದ ಭಕ್ತಜನಂಗಳು ಅಥವಾ ಶಿಷ್ಯೋತ್ತಮನಾದಂಥವರು ಇಂತಪ್ಪವರು ಲಿಂಗವ ಪಡೆದು, ಉಪದೇಶವ ಹಡದು, ಆಚರಿಸುವರ ಆಚರಣೆಯೆಂತಾಯಿತ್ತೆಂದಡೆ, ತಲೆಯಿಲ್ಲದ ಪುರುಷನ ಸಂಗ, ಕಣ್ಣಿಲ್ಲದ ಸ್ತ್ರೀ ಸಂಯೋಗವ ಮಾಡಿ, ಜೀವವಿಲ್ಲದೊಂದು ಮಗನ ಹಡದಂತಾಯಿತ್ತಯ್ಯ. ಅಂತಪ್ಪ ದೇವ ಭಕ್ತ ಗುರು ಶಿಷ್ಯರೆಂಬ ಈ ಚತುರ್ವಿಧ ಪುರುಷರಿಗೆ ಭವಹಿಂಗದು, ಮುಕ್ತಿ ಎಂದಿಗೂ ತೋರದು. ಅದೇನು ಕಾರಣವೆಂದಡೆ : ತಾವ್ಯಾರು, ತಮ್ಮ ಸ್ವರೂಪವಾವುದು ಎಂಬ ನಿಲುಕಡೆಯ ತಿಳಿಯದ ಕಾರಣ. ಮತ್ತಂ ಪೇಳ್ವೆ : ತಮ್ಮ ನಿಜವ ತಾವರಿದು, ಸರ್ವಾಚಾರಸಂಪತ್ತು ಅಳವಟ್ಟು, ಸರ್ವಾಂಗಲಿಂಗಮಯವಾಗಿರುವಂಥ ನಿಃಕಲ ಸದ್ರೂಪಸ್ವರೂಪರಾದ ಆಚಾರ್ಯಂಗಳಲ್ಲಾಗಲಿ, ಅಥವಾ ಸತ್ತುಚಿತ್ತಾನಂದ ನಿತ್ಯಪರಿಪೂರ್ಣಭರಿತನಾದ ನಿಃಕಲಪರಮಾನಂದಸ್ವರೂಪರಾದ ನಿರಂಜನಜಂಗಮದಲ್ಲಾಗಲಿ ಇಂತೀ ಉಭಯ ಪರಮೂರ್ತಿಗಳ ಕರುಣಕೃಪೆಯಿಂದ ಶಿವಜ್ಞಾನೋದಯವಾಗಿ ಸಕಲಪ್ರಪಂಚವನೆಲ್ಲವ ನಿವೃತ್ತಿಯ ಮಾಡಿ ಲಿಂಗಾಂಗಸಮರಸದನುಭವವಳವಟ್ಟು ತ್ರಿವಿಧ ವಂಚನೆಯಿಲ್ಲದೆ ಕ್ಷಮೆ, ದಮೆ, ಶಾಂತಿ, ಸೈರಣೆ ಗುಣವುಳ್ಳಂಥ ಸದ್ಭಕ್ತ ಶರಣಜನಂಗಳಲ್ಲಾಗಲಿ ಅಥವಾ ಶಿಷ್ಯೋತ್ತಮನಾದಂಥವರುಗಳಲ್ಲಾಗಲಿ ಇಂತೀ ಉಭಯ ಭಕ್ತಗಣಂಗಳು ಚಿದ್ಘನಮಹಾಲಿಂಗವೆಂಬ ಇಷ್ಟಲಿಂಗವ ಕರಸ್ಥಲಕ್ಕೆ ಪಡಕೊಂಡು, ತಾರಕಮಂತ್ರವೆಂಬ ಮಂತ್ರೋಪದೇಶವ ಹಡಕೊಂಡು, ಆಚರಿಸುವ ಸದ್ಭಕ್ತ ಶರಣಜನಂಗಳ ಆಚರಣೆಯೆಂತಾಯಿತ್ತಯ್ಯಯೆಂದಡೆ: ಸೂರ್ಯಪ್ರಕಾಶವನುಳ್ಳಂಥ ಕನ್ಯಕುಮಾರ ರಾಜನಸಂಗ ಚಂದ್ರಕಾಂತಿಪ್ರಕಾಶವನುಳ್ಳಂಥ ಕನ್ಯಸ್ತ್ರೀಯಳು ಸಂಯೋಗವ ಮಾಡಿ ಅಗ್ನಿಕಾಂತಿಪ್ರಕಾಶವನುಳ್ಳಂಥ ಪುತ್ರನ ಹಡೆದಂತಾಯಿತ್ತಯ್ಯ. ಇಂತಪ್ಪ ಆಚಾರವನುಳ್ಳ ಗುರು ಶಿಷ್ಯರು ದೇವ ಭಕ್ತರೆಂಬ ಈ ನಾಲ್ಕು ಪರಪುರುಷರಿಗೆ ಭವಹಿಂಗುವುದು. ಮುಕ್ತಿಯೆಂಬುದು ಕರತಳಾಮಳಕವಾಗಿ ತೋರುವುದು. ಮತ್ತಂ, ಲಿಂಗಾಂಗಸಂಬಂದ್ಥಿಯಾಗಿ ಸರ್ವಾಚಾರ ನೆಲೆಗೊಂಡು ಸರ್ವಾಗಲಿಂಗಿಯಾದಂಥ ವೀರಮಾಹೇಶ್ವರರಾಗಲಿ, ಅಥವಾ ಗುರುಗಳಾಗಲಿ, ಸದ್ಭಕ್ತ ಶರಣಜನಂಗಳಾಗಲಿ, ಇಂತಪ್ಪ ತ್ರಿವಿಧಶಿವಜ್ಞಾನಿಗಳ ಚರಣಕಮಲಕ್ಕೆ ದೀರ್ಘದಂಡನಮಸ್ಕಾರಮಂ ಮಾಡಿ ಸುಜ್ಞಾನೋದಯವಾಗಿ ಮೋಕ್ಷವ ಹಡೆಯಬೇಕೆಂಬ ಜ್ಞಾನಕಲಾತ್ಮರಾದಂಥವರು ಲಿಂಗಾಂಗಸಮರಸದನುಭಾವವ ವಿಚಾರಿಸಿಕೊಳ್ಳಬೇಕು. ಅಂತಪ್ಪ ಪರಶಿವಮೂರ್ತಿಗಳಾದ ಗುರುಗಳಲ್ಲಾಗಲಿ, ಅಥವಾ ಜಂಗಮಲಿಂಗಿಗಳಲ್ಲಾಗಲಿ, ಅಥವಾ ಇಂತಹ ಶಿವಜ್ಞಾನಿಗಳಾದ ಭಕ್ತರಲ್ಲಾಗಲಿ, ಶಿಷ್ಯೋತ್ತಮರಲ್ಲಾಗಲಿ, ಇಂತಪ್ಪವರಿಗೆ ಲಿಂಗಾಂಗಸಮರಸವ ತೋರಬೇಕು, ತೋರದಿದ್ದರೆ ಪ್ರಮಥರು ಮೆಚ್ಚರು. ಇಂತಪ್ಪ ತ್ರಿಮೂರ್ತಿಗಳು ಹೇಳಿದ ಹಾಂಗೆ ಕೇಳಿ ವಿಶ್ವಾಸದಿಂದ ಆಚರಿಸದಿದ್ದರೆ ಭವಹಿಂಗದು ಮುಕ್ತಿಯೆಂಬುದು ಎಂದೆಂದಿಗೂ ತೋರದು ಎಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆ ಪರಶಿವನ ಮಾಯಾಸ್ವರೂಪವಾದ ಈ ಲೋಕದ ಜನರಿಗೆ ಪೂರ್ವಪುಣ್ಯವೊದಗಿ, ಸಂಸಾರ ಹೇಯವಾಗಿ, ಗುರುಕಾರುಣ್ಯವ ಪಡೆದು, ಆತ್ಮಜ್ಞಾನ ತಿಳಿಯಲಿಕ್ಕೆ, ಮನಗೊಟ್ಟು, ತತ್ವವ ಶೋಧಿಸಿ, ಪುರಾತನ ವಚನ ಹಾಡಿಕೊಂಡು ಅನುಭವಿಯಾಗಿ, ನಾನೇ ಅನುಭಾವಿ ನಾನೇ ಪ್ರಭು, ನಾನೇ ಪರಬ್ರಹ್ಮವ ಬಲ್ಲ ಪರಮಜ್ಞಾನಿಯೆಂದು, ಬಸವಾದಿ ಪೂರ್ವಪ್ರಮಥರ ಪುರಾತರ ಮಹಾಗಣಂಗಳ ಜರಿದು, ಈ ಭುವನದಲ್ಲಿ ಇನ್ನಾ ್ಯರು ನಿಜವನರಿತವರಿಲ್ಲೆಂದು ಅಹಂಕರಿಸಿ, ನಾವು ಮಹಾಜ್ಞಾನಿಗಳು, ನಾವು ಕೇವಲ ಶಿವಾಂಶಿಕರು, ನಮ್ಮನ್ನಾರು ಅರಿಯರು, ನಮ್ಮ ಬಲ್ಲವರು ಪುಣ್ಯವಂತರು, ನಮ್ಮನ್ನರಿಯದವರು ಪಾಪಿಷ*ರು. ನಾವು ಮಹತ್ವ ಉಳ್ಳವರು, ನಾವು ಮಕ್ಕಳ ಕೊಡುವೆವು, ರೋಗ ಕಳೆಯುವೆವು, ಬ್ರಹ್ಮಹತ್ಯಾದಿ ಪಿಶಾಚಿಯ ಸೋಂಕು ಬಿಡಿಸುವೆವು ಎಂದು ವಿಭೂತಿ ಮಂತ್ರಿಸಿಕೊಟ್ಟು, ಅವರ ಮನೆಯಲ್ಲಿ ಶಿವಪೂಜೆಯ ಪಸಾರವನಿಳಿಯಿಟ್ಟು, ಆ ರೋಗದವರನ್ನು ಮುಂದೆ ಕೂಡ್ರಿಸಿಕೊಂಡು, ತಾ ಕೂತು ಕಣ್ಣು ಮುಚ್ಚಿ, ಒಳಗೆ ಬೆಳಗವ ಕಂಡು, ಕಣ್ದೆರೆದು, ಬಿರಿಗಣ್ಣಿನಿಂದ ನೋಡ್ತ ಹಡ್ತ ಹುಡ್ತ ಮಾಡಿ ಪರಿಣಾಮವಾಗಲೆಂದು ಹೇಳಲು, ಅದು ರಿಣಾ ತೀರಿಹೋದರೆ, ನಮ್ಮ ಮಹತ್ವ ಎಂಥಾದ್ದು, ಹಿಂದೆ ಇಂಥಾ ಮಹತ್ವ ಬಳಹ ಮಾಡೀವಿಯೆಂದು ಅಲ್ಲಲ್ಲಿ ಹೆಸರು ಹೇಳಿಕೊಳ್ಳಬೇಕು. ಅದು ಹೋಗದಿದ್ದರೆ- ಇವರ ವಿಶ್ವಾಸ ಘಟ್ಟಿಲ್ಲೆಂದು, ಏನರೆ ನೆವ ಕೊಳ್ಳಬೇಕು. ಕೊಟ್ಟರೆ ಹೊಗಳಬೇಕು, ಕೊಡದಿದ್ದರೆ ಬೊಗಳಬೇಕು. ಅವರಿಂದ ಆ ಹಣವು ತನಗೆ ಬಾರದಿದ್ದರೆ ಅವರ ಅರ್ಥವ ಕಳೆಯಬೇಕೆಂಬ ಯೋಚನೆಬೇಕು. ಅಥವಾ ಫಣ್ಯಾಚಾರದಲ್ಲಿ ಅವರಿಂದ ಅರ್ಥವ ಸೆಳೆತಂದು ಹಿಂದೆ ತಾ ಬಿಟ್ಟು ಪೂರ್ವಪ್ರಪಂಚದವರಿಗೆ ಕೊಟ್ಟು ಈ ವಿಷಯಾತುರಕ್ಕೆ ವಾಯು ತಪ್ಪಿ ನಡೆದು ಇದು ಪ್ರಭುವಿನಪ್ಪಣೆಯೆಂದು ಹಾಡಿದ್ದೇ ಹಾಡುವ ಕಿಸಬಾಯಿದಾಸನ್ಹಾಂಗೆ ಹಾದಿಡ್ದೇ ಹಾಡಿಕೊಳ್ಳುತ್ತ, ಕ್ರೀಯ ನಿಃಕ್ರಿಯವಾಗಿ ಸತ್ತ ಕತ್ತಿಯ ಎಲವು ತಂದು ತಿಪ್ಪಿಯಲ್ಲಿ ಬಚ್ಚಿಟ್ಟು ಸುತ್ತುವ ತಲೆಹುಳುಕ ಹುಚ್ಚುನಾಯಿಯಂತೆ, ಉಚ್ಚಿಯಾ ಪುಚ್ಚಿಗೆ ಮೆಚ್ಚನಿಟ್ಟ ನಿಚ್ಚ ಕಚ್ಚಿಗಡಕರಿಗೆ ತಮ್ಮ ನಿಜದೆಚ್ಚರ ಇನ್ನೆಲ್ಲಿಹದೋ ? ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ನಿಮ್ಮ ಅಂಗದಲ್ಲಿರ್ದ ಅವಗುಣಂಗಳ ವಿಚಾರಿಸದೆ ಜಂಗಮದಲ್ಲಿ ಅವಗುಣವ ವಿಚಾರಿಸುವ ದುರಾಚಾರಿಗಳು ನೀವು ಕೇಳಿರೆ ಅದೆಂತು ಅಂಗದಲ್ಲಿ ಅನಾಚಾರವುಂಟೆಂಬುದ, ನಾನು ವಿಚಾರಿಸಿ ಪೇಳುವೆನು ಕೇಳಿರೆ: ನೀವು ಪರಸ್ತ್ರೀಯರ ನೋಡುವ ಕಣ್ಣುಗಳನೊಳಗಿಟ್ಟುಕೊಂಡಿರ್ಪುದು ನಿಮ್ಮದಾಚಾರವೆ ಹೇಳಿರಣ್ಣಾ ಅನಾಚಾರವಲ್ಲದೆ ? ತನ್ನ ಸ್ತ್ರೀಯಲ್ಲದೆ ಅನ್ಯಸ್ತ್ರೀಯಲ್ಲಿ ಆಚರಿಸುವುದು ನಿಮ್ಮದಾಚಾರವೆ ಹೇಳಿರಣ್ಣಾ ಅನಾಚಾರವಲ್ಲದೆ ? ಅಂಗದ ಮೇಲಣ ಲಿಂಗವ ಪೂಜಿಸಿ ಜಂಗಮವ ನಿಂದಿಸುವುದು ನಿಮ್ಮದಾಚಾರವೆ ಹೇಳಿರಣ್ಣಾ ಅನಾಚಾರವಲ್ಲದೆ ? ಇನ್ನು ಹೇಳುವಡೆ ಅವಕೇನು ಕಡೆಯಿಲ್ಲ. ಇದನರಿದು, ನಮ್ಮ ಜಂಗಮಲಿಂಗವ ಮಾಯೆಯೆನ್ನದಿರಿ ಅಥವಾ ಮಾಯೆಯೆಂದಿರಾದಡೆ, ಆ ದ್ರೋಹ ಲಿಂಗವ ಮುಟ್ಟುವುದು. ಅದೆಂತೆಂದಡೆ: ಬೀಜಕ್ಕೆ ಚೈತನ್ಯವ ಮಾಡಿದಡೆ, ವೃಕ್ಷಕ್ಕೆ ಚೈತನ್ಯವಪ್ಪುದು. ಆ ಅಂತಹ ಬೀಜಕ್ಕೆ ಚೈತನ್ಯವ ಮಾಡದಿರ್ದಡೆ ವೃಕ್ಷ ಫಲವಾಗದಾಗಿ, ಬೀಜಕ್ಕೆ ಕೇಡಿಲ್ಲ. ಅದು ನಿಮಿತ್ತವಾಗಿ, ಬೀಜವೆ ಜಂಗಮಲಿಂಗವು. ಆ ಜಂಗಮಲಿಂಗವೆಂಬ ಬೀಜವನು ಸುರಕ್ಷಿತವ ಮಾಡಿದಡೆ ಲಿಂಗವೆಂಬ ವೃಕ್ಷ ಫಲಿಸುವುದಯ್ಯಾ. ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಆ ಪರಶಿವನೇ ತಾನೇ ಆದ ಆತ್ಮನೋರ್ವಗೆ ಕರ್ಮ ಎರಡು, ಮೂರು ಗುಣ, ಕರಣ ನಾಲ್ಕು, ಇಂದ್ರಿಯ ಐದು, ವರ್ಗ ಆರು, ವ್ಯಸನ ಏಳು, ಮದ ಎಂಟು, ನಾಳ ಒಂಬತ್ತು, ವಾಯು ಹತ್ತು, ಎಪ್ಪತ್ತೆರಡು ಸಾವಿರ ನಾಡಿ, ಅರವತ್ತಾರುಕೋಟಿ ಗುಣ, ಆರುವರೆಕೋಟಿ ರೋಮ- ಇವು ಮೊದಲಾದ ಅನಂತ ತತ್ವಯುಕ್ತವೆನಿಸಿದ ತೊಂಬತ್ತಾರು ಅಂಗುಲ ದೇಹದೊಳಗೆ ನಿರ್ದೇಹಿಯಾಗಿ, ಕರ್ಮ ಎರಡರೊಳಗೆ ದುಷ್ಕರ್ಮಮಾಡುವದೆಂತೆನೆ : ಜಾರ ಚೋರ ಹುಸಿ ಹಾಸ್ಯ ಡಂಭಕ ಜೀವಹಿಂಸಾ ಪರಪೀಡಾ ಕ್ಷುದ್ರ ಧೂರ್ತ ಕ್ರೋಧಿ ವಿಕಾರಿ ಪರದ್ರವ್ಯಾಪಹಾರಕ ಅಹಂಕಾರ ಅಜ್ಞಾನ ಅನಾಚಾರ ಪಂಚಪಾತಕ ವಿಶ್ವಾಸಘಾತಕ ಇವು ಮೊದಲಾದ ಅನಂತ ದುರ್ಗುಣದಿಂದ ತನ್ನ ತಾ ಮರೆತು ತಾ ಮಾಡಿದ ದುಷ್ಕರ್ಮದಿಂದೆ ಪಾಪಹತ್ತಿ, ದುಃಖಗೊಂಡು ಯಮನೊಳಗಾಗಿ ನರಕ ಉಂಡು ಎಂಬತ್ತುನಾಲ್ಕುಲಕ್ಷ ಜೀವರಾಶಿಯೋನಿಯಲ್ಲಿ ಅನಂತಕಾಲ ತಿರುತಿರುಗಿ ಬಳಲುವದು. ಆ ಬಳಲುವ ದುಷ್ಕರ್ಮವೇ ಕಾಲೋಚಿತಕ್ಕೆ ಸತ್ಕರ್ಮವಾಯಿತು. ಅದು ಎಂತಾಯಿತೆಂದರೆ : ಚೋರರಿಗೆ ಪರದ್ರವ್ಯಾಪಹಾರ ವಿಯೋಗದಲ್ಲಿ, ದೇಗುಲ ದೀಪದಕುಡಿ ಕಡಿದಂತೆ : ಆ ಸತ್ಕರ್ಮ ಮಾಡುವದೆಂತೆನೆ : ದಯ, ಧರ್ಮ, ನಯ, ನೀತಿ ಶಾಂತಿ, ದಾಂತಿ, ಕ್ಷಮೆ, ದಮೆ, ಭಕ್ತಿ , ಜ್ಞಾನ, ವೈರಾಗ್ಯ, ನಿರಹಂಕಾರ, ನಿರಾಶ, ಅಷ್ಟಾಂಗಯೋಗ, ಅಷ್ಟವಿಧಾರ್ಚನೆ, ಅಷ್ಟಾವರಣನಿಷೆ* - ಇವು ಮೊದಲಾದ ಅನಂತ ಸುಗುಣದಿಂದೆ ಪುಣ್ಯವೊದಗಿ ಸುಖಗೊಂಡು ಇಂದ್ರನೊಳಗಾಗಿ ಸ್ವರ್ಗ ಅನುಭವಿಸಿ ಅಥವಾ ಬಹು ಸತ್ಕರ್ಮವಾದಡೆ ಸದಾಶಿವನ ಚೌಪದ ಬಹುಪದದೊಳಗಾಗಿ ಕೈಲಾಸಕ್ಕೆ ಹೋಗಿ ಸತ್ಕರ್ಮದಿಂದ ಒದಗಿದ ಪುಣ್ಯದ ಫಲವನ್ನು ಅನುಭವಿಸಿ ಮರಳಿ ಎಂಬತ್ನಾಲ್ಕುಲಕ್ಷ ಜೀವರಾಶಿ ಯೋನಿಯ ದ್ವಾರದಲ್ಲಿ ಅನಂತಕಾಲ ತಿರುತಿರುಗಿ ಅಷ್ಟಭೋಗಸುಖದೊಳಗೆ ತೊಳಲುವದು, ಆ ತೊಳಲುವ ಸತ್ಕರ್ಮವೇ ಕಾಲೋಚಿತಕ್ಕೆ ದುಷ್ಕರ್ಮವಾಗುವದು. ಅದೆಂತೆನೆ : ಶಿವಗಡ ಬಿದ್ದು ಗಂಧರ್ವ ಕರಿನಾಯಿ ಆದಂತೆ `ಅತಿದಾನಾದ್ ಬಲೇರ್ಬಂಧಃ' ಎಂಬ ನೀತಿ ಉಂಟಾಗಿ, ಇದಕ್ಕೆ ದುಷ್ಟಮಾರಿ ಚೌಡಾಪೂರ ವಿರೂಪಾಕ್ಷಿಗೆ ಜಂಗಮದಾಸೋಹದಲ್ಲಿ ಜಂಗಮದೋಷ ಘಟಿಸಿದಂತೆ. ಅದುಕಾರಣ ಸತ್ಕರ್ಮಕ್ಕೆ ಬೀಜ ದುಷ್ಕರ್ಮ, ದುಷ್ಕರ್ಮಕ್ಕೆ ಬೀಜ ಸತ್ಕರ್ಮ. ಹೀಗಾದ ಮೇಲೆ ಸತ್ಕರ್ಮವೇ ದುಷ್ಕರ್ಮ, ದುಷ್ಕರ್ಮವೇ ಸತ್ಕರ್ಮ, ಪಾಪವೇ ಪುಣ್ಯ ಪುಣ್ಯವೇ ಪಾಪ, ಸುಖವೇ ದುಃಖ ದುಃಖವೇ ಸುಖ, ಇವು ಎರಡರೊಳಗೆ ಹೆಚ್ಚು ಕಡಿಮೆ ಎಂಬುದೇನೋ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಅಯ್ಯಾ, `ಬ್ರಹ್ಮಲಿಖಿತವೇ ದೊಡ್ಡಿತ್ತು' ಎಂದು ಪೇಳುವಿರಿ, 'ಬ್ರಹ್ಮಲಿಖಿತಕ್ಕೆ [ಇದಿರು] ಯಾರಾರು ಇಲ್ಲ' ವೆಂದು ಹೇಳುವಿರಿ, ನೀವು ಕೇಳಿರಯ್ಯಾ: ಇಂಥ ಬ್ರಹ್ಮಲಿಖಿತವ ಗೆದ್ದವರು ನಮ್ಮ ಶಿವಗಣಾಧೀಶ್ವರರಲ್ಲದೆ ಮಿಕ್ಕಿನವರು ಗೆದ್ದದ್ದು ಇಲ್ಲಾ ಕಾಣಿರಯ್ಯಾ! ಅದು ಎಂತೆಂದಡೆ: ಎಲೆ, ಬ್ರಹ್ಮನು ಶಿವನಂ ಕಾಣಲರಿಯದೆ ತತ್ತ್ವಸಾರವ ತಿಳಿಯಲರಿಯದೆ ಶಿರವ ಭೇದಿಸಿಕೊಂಡ. ಇಂಥ ಬ್ರಹ್ಮಮುಖವಾದ ವೇದಗಳು ರಥಕ್ಕೆ ವಾಜಿಯಾಗಿ ಹೋದವು. ಇಂಥಾತ್ಮನು ತತ್ತ್ವಸಾರವ ತಿಳಿಯದೆ, ಅರಿಯದೆ, ನಿಜವಸ್ತುವಾದ ಲಿಂಗಮಂ ಮರೆದು, ಶಿರವ ಭೇದಿಸಿಕೊಂಡ. ಅವ ನಮ್ಮ ಪ್ರಮಥ ಗಣಾಧೀಶ್ವರರಿಗೆ ಅದೃಷ್ಟವ ಬರೆವುದಕ್ಕೆ ಕಾರಣಕರ್ತನೆ ? ಅಥವಾ ಆ ಕ್ಷಣ ಮಾತ್ರದಲ್ಲಿ ಪುತ್ರಜನನವಾದ ಕಾಲದಲ್ಲಿಯು ಬ್ರಹ್ಮನ ಬರ [ಹ ಹೋ]ಹಾಗಾಗಲಿಯೆಂದು, ಮಹಾಗುರುವು ಬಂದು ತ್ರಿಪುಂಡ್ರವಾದ ಮೂರು ಬೆರಳಿಂದ ಬ್ರಹ್ಮಲಿಖಿತವಂ ದಟ್ಟಿಸಿ ಪಣೆಗಿಟ್ಟು, ಮಾಂಸಪಿಂಡವಂ ಪೋಗಿ[ಸಿ] ಮಂತ್ರಪಿಂಡವ ಮಾಡುವರಲ್ಲದೆ ಮಿಕ್ಕವರಿಂದಾಗದು ಕಾಣಿರಯ್ಯಾ. ಆ ಪ್ರಮಥ ಗಣಾಧೀಶ್ವರರು ನಡೆದರೆಂದು ಈಗ ಮನುಜರು 'ನಾನೂ ನಡೆದೇನು' 'ನೀನೂ ನಡೆದೇನು' ಎಂದು ತಿರುಗುವ ಮೂಳ ಹೊಲೆಯರ ಮುಖವ ನೋಡಲಾಗದು ಕಾಣಾ ಕೂಡಲಾದಿ ಚನ್ನಸಂಗಮದೇವಾ.
--------------
ಕೂಡಲಸಂಗಮೇಶ್ವರ
ಜಂಗಮದ ಪಾದತೀರ್ಥ ಪ್ರಸಾದವ ಕೊಳ್ಳದಂತಹ ಗುರುವಿನ ಕೈಯಲ್ಲಿ ಲಿಂಗಧಾರಣವ ಮಾಡಿಸಿಕೊಳಲಾಗದು. ಆತನ ಪಾದತೀರ್ಥ ಪ್ರಸಾದವ ಕೊಳಲಾಗದು. ಅಥವಾ ಪ್ರಮಾದವಶದಿಂದ ಲಿಂಗಧಾರಣವ ಮಾಡಿಸಿಕೊಂಡಡೆಯೂ ಮಾಡಿಸಿಕೊಳ್ಳಲಿ. ಆ ಗುರುವನೆ, ಜಂಗಮದ ಪಾದತೀರ್ಥ ಪ್ರಸಾದವ ಕೊಂಬ ಹಾಂಗೆ ಸದಾಚಾರಿಯ ಮಾಡುವದು. ಶಿಷ್ಯನು, ಆ ಗುರು ಜಂಗಮದ ಪಾದತೀರ್ಥ ಪ್ರಸಾದವ ಕೊಳ್ಳದಿರ್ದಡೆ ಮತ್ತೆ ಲಿಂಗವನು ಮರಳಿ ಜಂಗಮದ ಪಾದತೀರ್ಥ ಪ್ರಸಾದವ ಕೊಂಬಂತಹ ಜಂಗಮದ ಕೈಯಲ್ಲಿ ಕೊಟ್ಟು ಕೊಳಬೇಕು. ಜಂಗಮಲಿಂಗಪ್ರಸಾದವ ಕೊಳದಂತಹ ಜಂಗಮದ ಕೈಯಲ್ಲಿ ಪ್ರಸಾದವ ಕೊಳಲಾಗದು. ಆ ಜಂಗಮ ಭಕ್ತನ ಮಠಕ್ಕೆ ಬಂದು ಪಾದತೀರ್ಥ ಪ್ರಸಾದವ ಕೊಳದಂತಹ ಜಂಗಮವಾದಡೂ ಅವರಲ್ಲಿ ಪಾದತೀರ್ಥ ಪ್ರಸಾದವ ಕೊಳಲಾಗದು. ಅದೇನು ಕಾರಣವೆಂದಡೆ : ಜಂಗಮದ ಪಾದತೀರ್ಥ ಪ್ರಸಾದವ ಕೊಳದಂತಹ ಗುರುವಿಂಗೆಯೂ ಲಿಂಗಕ್ಕೆಯೂ ಜಂಗಮಕ್ಕೆಯೂ ಮುಕ್ತಿಯಿಲ್ಲ ಕಾಣಾ, ರೇಕಣ್ಣಪ್ರಿಯ ನಾಗಿನಾಥಾ.
--------------
ಬಹುರೂಪಿ ಚೌಡಯ್ಯ
ಇಂತಪ್ಪ ವಿರಕ್ತನ ನಿಲುಕಡೆಯ ದೇವ ದಾನವ ಮಾನವರು ಮೊದಲಾದ ಸಕಲಜೀವಾತ್ಮರು ತಿಳಿಯದೆ ವೇಷವ ಧರಿಸಿ, ಗ್ರಾಸಕ್ಕೆ ತಿರುಗುವ ಹೇಸಿಗಳ್ಳರ ನಾನೇನೆಂಬೆನಯ್ಯಾ ? ಇಂತಪ್ಪ ವಿರಕ್ತನ ನಿಲುಕಡೆಯ ಬಲ್ಲವರು ಆರೆಂದಡೆ ಸುಜ್ಞಾನೋದಯವಾಗಿ, ಶ್ರೀಗುರುಕಾರುಣ್ಯ ಪಡೆದು ಲಿಂಗಾಂಗಸಂಬಂಧಿಗಳಾದ ವೀರಮಾಹೇಶ್ವರರಾಗಲಿ ಅಥವಾ ಭಕ್ತಗಣಂಗಳಾಗಲಿ ಅಲ್ಲದೆ ವಿಪ್ರಮೊದಲು ಶ್ವಪಚಕಡೆಯಾಗಿ ಆವ ಜಾತಿಯಲ್ಲಿ ಆವನಾದಡೇನು ಸುಜ್ಞಾನೋದಯವಾದ ಜ್ಞಾನಕಲಾತ್ಮರು ಬಲ್ಲರಲ್ಲದೆ ಮಿಕ್ಕಿನ ಭಿನ್ನಭಾವಿಗಳಾದ ವೇದಾಂತಿ, ಸಿದ್ಧಾಂತಿ ಯೋಗಮಾರ್ಗಿಗಳು ಮೊದಲಾದ ಕರ್ಮಕಾಂಡಿಗಳಾದ ವೇಷಧಾರಿಗಳೆತ್ತ ಬಲ್ಲರಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ ?
--------------
ಕಾಡಸಿದ್ಧೇಶ್ವರ
ಪಾದಪೂಜೆಯೆಂಬುವುದು ಅಗಮ್ಯ-ಅಗೋಚರ- ಅಪ್ರಮಾಣ ! ಶ್ರೀಗುರುಬಸವೇಶ್ವರದೇವರು ತಮ್ಮ ಅಂತರಂಗದಲ್ಲಿರ್ದ ತೀರ್ಥಪ್ರಸಾದಮಂ ಗಣಸಮೂಹಕ್ಕೆ ಸಲ್ಲಲೆಂದು ನಿರ್ಮಿಸಿ ಭಕ್ತಿ ತೊಟ್ಟು ಮೆರದರು. ಇಂತಪ್ಪ ತೀರ್ಥಪ್ರಸಾದವ ಸೇವಿಸುವ ಕ್ರಮವೆಂತೆಂದಡೆ- ಗ್ರಾಮದ ಮಠದಯ್ಯ, ಮಠಪತಿ, ಓದಿಸುವ ಜಂಗಮ, ಹಾಡುವ ಜಂಗಮ, ಆಡುವ ಜಂಗಮ, ಬಾರಿಸುವ ಜಂಗಮ, ಅಗಹೀನ, ಅನಾಚಾರಿ, ಕಂಬಿಕಾರ, ಓಲೆಕಾರನಾಗಿಹ, ವಾದಿಸುವನು, ಗರ್ವಿಸುವವನು, ಅಹಂಕಾರಿ, ದಲ್ಲಾಲ, ವೈದಿಕ, ಧನಪಾಲ, ಉದ್ಯೋಗಿ, ನಾನಾ ವಿಚಾರವ ಹೊತ್ತು, ಕಾಣಿಕಿಗೆ ಒಡೆಯರಾಗಿ ಚೆಂಗಿತನದವರು, ಪರಿಹಾಸಕದವರು, ಮರುಳು ಮಂಕುತನ ಮಾಡುವ[ವರು], ಪಟ್ಟಾಧಿಪತಿಯೆಂದೆನಿಸಿ, ಚರಮೂರ್ತಿಯೆಂದೆನಿಸಿ, ವಿರಕ್ತರೆಂದೆನಿಸಿ, ನಾಸಿ, ತೊಂಬಾಕ, ಭಂಗಿ, ಮಾಜೂಮ, ಗಂಜಿ ಅರವಿ, ಅಪು ಹೊದಿಕೆ[ಯವರು], ಹಲ್ಲುಮುರುಕ, ಉದ್ದೇಶಹೀನ, ಬೆಚ್ಚಿದವ, ಚುಚ್ಚಿದವ, ಕಚ್ಚಿದವ, ಬೆಳ್ಳಿಬಂಗಾರ ಹಲ್ಲಣಿಸಿಕೊಂಡ ಭವಿಸಂಗ, ಕರ್ಣಹೀನ, ಮೂಕ, ನಪುಂಸಕ, ವೀರಣ್ಣ, ಬಸವಣ್ಣ, ಸ್ಥಾವರದೈವಂಗಳಿಗೆ ತೀರ್ಥಕುಡುವ, ಉಡಕಿ, ಸೋಹಿ ಬಯಲಾದ ಜಂಗಮಕ್ಕೆ ಕಟಕಟೆಯಿಟ್ಟು ಹಾವಿಗೆಯಿಟ್ಟು ಧೂಳತಿಟ್ಟು ಗೊರವನಂತೆ ಪೂಜೆ ಮಾಡಿಸುವ- ಇಂತಿಷ್ಟು ಅಜ್ಞಾನಿಜಂಗಮರಲ್ಲಿ ಪಾದೋದಕ ಪ್ರಸಾದವ ಕೊಳಲಾಗದು ! ಅಥವಾ ಕೊಂಡಡೆ ಕೊಟ್ಟಾತಂಗೆ ದೋಷ, ಕೊಂಡಾತಂಗೆ ಪಾಪ ! ತ್ರಿನೇತ್ರವಿರ್ದಡು ಕೊಳಲಾಗದು ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಅಯ್ಯ ! ಮುಂದೆ ಮರ್ತ್ಯಲೋಕದ ಮಹಾಗಣಂಗಳು ಸದ್ಭಕ್ತಿ, ಸದಾಚಾರ, ಸತ್ಕ್ರಿಯಾ, ಸಮ್ಯಜ್ಞಾನ, ಆಜ್ಞಾದೀಕ್ಷೆ ಮೊದಲಾದ ಇಪ್ಪತ್ತೊಂದು ದೀಕ್ಷೆಯ ವಿಚಾರ, ತ್ರಿವಿಧ ಸ್ಥಲ_ಷಟ್ಸ್ಥಲ ದಶವಿಧಪಾದೋದಕ, ಏಕಾದಶಪ್ರಸಾದ, ಷೋಡಶಾವರಣ, ನೂರೆಂಟುಸಕೀಲು ಮೊದಲಾದ ಸಮಸ್ತಸಕೀಲದ ಅರ್ಪಿತ_ಅವಧಾನಂಗಳು, ಮೂಲಪ್ರಣಮ ಮೊದಲಾಗಿ ಮಹಾಮಂತ್ರಗಳು, ಸರ್ವಾಚಾರ ಸಂಪತ್ತಿನ ಲಿಂಗಾನುಭಾವದ ನಡೆ_ನುಡಿಯ ವಿಚಾರವು ಷಡ್ವಿಧಶೀಲ, ಷಡ್ವಿಧವ್ರತ, ಷಡ್ವಿಧನೇಮದ ಕಲೆನೆಲೆಯ ಸನ್ಮಾರ್ಗವು, ಇಂತೀ ಸ್ವಸ್ವರೂಪುನಿಲುಕಡೆಯ ನಿಷ್ಕಲಂಕ ಪರಶಿವಮೂರ್ತಿ ಸದ್ಗುರು ಲಿಂಗಜಂಗಮದಿಂ ಪಡೆದು ಪರುಷಮುಟ್ಟಿದ ಲೋಹ ಬಂಗಾರವಾಗಿ ಮರಳಿ ಲೋಹವಾಗದಂತೆ, ಪಾವನಾರ್ಥವಾಗಿ ಸ್ವಯ_ಚರ_ಪರ, ಆದಿ_ಅಂತ್ಯ_ಸೇವ್ಯಸ್ಥಲ ಮೊದಲಾದ ಷಟ್ಸ್ಥಲಮಾರ್ಗವಿಡಿದಾಚರಿಸುವಲ್ಲಿ ಭಕ್ತಮಾಹೇಶ್ವರ ಶರಣಗಣಂಗಳು ಸಮಪಙô್ತಯಲ್ಲಿ ಸುಗಂಧ, ಸುರಸ, ಸುರೂಪು, ಸುಸ್ಪರ್ಶನ ಸುಶಬ್ದ, [ಸುಪರಿಣಾಮ], ಮಧುರ, ಒಗರು, ಕಾರ, ಹುಳಿ, ಕಹಿ, ಲವಣ, ಪಂಚಾಮೃತ ಮೊದಲಾದ ಪದಾರ್ಥದ ಪೂರ್ವಾಶ್ರಯವ ಕಳೆದು, ಮಹಾಘನಲಿಂಗಮುಖದಲ್ಲಿ ಶುದ್ಧ_ಸಿದ್ಧ_ಪ್ರಸಿದ್ಧ, ರೂಪು_ರುಚಿ_ತೃಪ್ತಿಗಳು ಮಹಾಮಂತ್ರ ಧ್ಯಾನದಿಂದ ಸಮರ್ಪಿಸಿ ಆ ಲಿಂಗದ ಗರ್ಭದಿ ನೆಲಸಿರ್ಪ ನಿರಂಜನಜಂಗಮದಿಂ ಮಹಾಪ್ರಸಾದವ ಪಡೆದು ತಾನೆ ಪ್ರಾಣಲಿಂಗವೆಂದು ಎರಡಳಿದು, ಪರಿಶಿವಲಿಂಗಲೀಲೆಯಿಂ ಭೋಗಿಸುವ ಸಮಪಙô್ತಯ ಮಧ್ಯದಲ್ಲಿ ಆವ ಗಣಂಗಳಾದರು ಸರಿಯೆ, ಪ್ರಸಾದ ನಮಗೆ ಹೆಚ್ಚಾಯಿತ್ತೆಂದು ತ್ರಿವಿಧದೀಕ್ಷಾಹೀನವಾದ ಉಪಾಧಿಲಿಂಗಭಕ್ತಂಗೆ ಒಲ್ಮೆಯಿಂದ ಶರಣಾಗೆಂದು ಕೊಡುವವನೊಬ್ಬ ಅಯೋಗ್ಯನು ! ಅಥವಾ ಗುರುಮಾರ್ಗದಾಚರಣೆಯ ತಿಳಿಯದೆ ಕೊಟ್ಟಲ್ಲಿ, ಇಂತು ಕೊಂಡ ಭಕ್ತನು ಬಹುನಿಜದಿಂದ ಆ ಪ್ರಸಾದವೆ_ -ಪ್ರಾಣವಾಗಿದ್ದುದ ನೋಡಿ ಮುಂದೆ ಷಟ್ಸ್ಥಲಲಿಂಗಾನುಭಾವ ಸದ್ಭಕ್ತ ಶರಣಗಣಂಗಳು ಕೊಟ್ಟಾತಂಗೆ ಇಂತು ಕೊಡದಂತೆ ಆಜ್ಞೆಯ ಮಾಡಿ, ಕೊಂಡಂಥವರ ದುರ್ಗುಣಗಳ ಬಿಡಿಸಿ ವೇಧಾಮಂತ್ರಕ್ರಿಯೆ ಹಸ್ತಮಸ್ತಕಸಂಯೋಗ ಮೊದಲಾದ ಇಪ್ಪತ್ತೊಂದು ದೀಕ್ಷೆಯ ಸದ್ಗುರುವಿನಿಂ ಮಾಡಿಸಿ ಸದಾಚಾರವ ಬೋಧಿಸಿ, ಅಷ್ಟಾವರಣದ ಗೊತ್ತ ಸರ್ವಾಂಗಲಿಂಗದಿ ತೋರಿ, ಅನಾದಿಜಂಗಮಪ್ರಸಿದ್ಧ ಪ್ರಸಾದ ಪಾದೋದಕವ ಕೊಟ್ಟುಕೊಂಬುದೆ ಸದಾಚಾರ_ಸನ್ಮಾರ್ಗ ನೋಡ ! ಗುಹೇಶ್ವರಲಿಂಗಕ್ಕೆ ಚೆನ್ನಬಸವಣ್ಣ.
--------------
ಅಲ್ಲಮಪ್ರಭುದೇವರು
ಪರಮಾರಾಧ್ಯಜಂಗಮಾರಾಧನೆಯಂ ಮಾಡಿ, ನಮಸ್ಕಾರವಾದ ಮೇಲೆ, ಆ ಪ್ರಸಾದ ಗಂಧಾಕ್ಷತೆ ಪುಷ್ಪ ಪತ್ರಿಗಳ ಲಿಂಗಜಂಗಮ ಜಂಗಮಲಿಂಗಶರಣರು ಪರಿಣಾಮತೃಪ್ತರಾಗಿ ನಿರ್ಮಾಲ್ಯವ ಮಾಡಿ, ನಿಕ್ಷೇಪದಿಂದ ಸಮಾಪ್ತವ ಮಾಡಬೇಕಲ್ಲದೆ, ಉಳಿವಿ ಕಡೆಗಿಟ್ಟು, ತೀರ್ಥವ ಸಲಿಸಿ, ಪ್ರಸಾದ ಮುಗಿವ ಮಧ್ಯದಲ್ಲಿ ಲಿಂಗಾರ್ಚನೆಗಳ ಮಾಡಲಾಗದು, ಅಥವಾ ತನಗೆ ಅಷ್ಟವಿಧಾರ್ಚನೆ ಷೋಡಶೋಪಚಾರದ ಭ್ರಾಂತುವಿದ್ದರೆ, ತೀರ್ಥವ ಪಡೆದುಕೊಂಡ ಸ್ಥಳವ ಬಿಟ್ಟು, ಏಕಾಂತಸ್ಥಳದಲ್ಲಿ ತಮ್ಮ ಸ್ಥಳವಿದ್ದಂತೆ ಆಚರಿಸುವುದು. ಆ ಭ್ರಾಂತಿಗಳೆಲ್ಲ ಲಿಂಗಜಂಗಮ ಜಂಗಮಲಿಂಗಶರಣರು ಪ್ರಸಾದ ಪಾದೋದಕದಲ್ಲಿ ಉಪಚಾರಗಳನಳಿದುಳಿದು, ನಿಭ್ರಾಂತಗಳಾದೀಶ್ವರರು ಚಮತ್ಕಾರವಾಗಿ, ಜಂಗಮಪಾದಸ್ಪರಿಶನದಿಂದುದಯವಾದ ದೀಕ್ಷಾಪಾದೋದಕದಿಂದ ಲಿಂಗಾಂಗಸ್ನಾನಂಗೈದು, ಚುಳುಕುಮಾತ್ರವಾಗಿ, ಪಾದೋದಕ ಭಸ್ಮೋದಕ ಶುದ್ಧೋದಕದಿಂದ ಲಿಂಗಮಜ್ಜನವ ಮಾಡಿ, ಆ ಪ್ರಸಾದಪುಷ್ಪವ ಸ್ವಲ್ಪಮಾತ್ರವ ಧರಿಸಿ, ಒಂದು ವೇಳೆ ಹಸ್ತಜಪಮಂ ಮಣಿಗಳ ದ್ವಾದಶವನ್ನು ಪ್ರದಕ್ಷಿಸಿ, ನವಲಿಂಗಮೂರ್ತಿಗಳ ಧ್ಯಾನದಿಂದ ಘನಪಾದತೀರ್ಥಪ್ರಸಾದವ ಮುಗಿದು, ಪ್ರಸನ್ನಪ್ರಸಾದದಲ್ಲಿ ನಿಜಲೋಲುಪ್ತರಾದವರೆ ನಿರವಯಪ್ರಭು ಮಹಾಂತಗಣವೆಂಬೆ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
-->