ಅಥವಾ

ಒಟ್ಟು 16 ಕಡೆಗಳಲ್ಲಿ , 10 ವಚನಕಾರರು , 16 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಾಣಲಿಂಗಕ್ಕೆ ಕಾಯವೆ ಸೆಜ್ಜೆ, ಆಕಾಶಗಂಗೆಯಲ್ಲಿ ಮಜ್ಜನ. ಹೂವಿಲ್ಲದ ಪರಿಮಳದ ಪೂಜೆ! ಹೃದಯಕಮಳದಲ್ಲಿ `ಶಿವಶಿವಾ' ಎಂಬ ಶಬ್ದ_ ಇದು, ಅದ್ವೈತ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅನುಭಾವ ಸಾಹಿತ್ಯವಾದ ಬಳಿಕ ಅನುಭವಿಸಲೆಲ್ಲಿಯದೊ? ಸಂಚಿತ ಪ್ರಾರಬ್ಧ ಆಗಾಮಿಯ ಅದ್ವೈತ ಸಾಹಿತ್ಯವಾದ ಬಳಿಕ ಸಂದೇಹ ಭ್ರಾಂತಿಯೆಲ್ಲಿಯದೊ? ಉಂಟು ಇಲ್ಲವೆಂಬ ಪ್ರಸಾದ ಸಾಹಿತ್ಯವಾದ ಬಳಿಕ ಭೋಗ ಉಪಭೋಗಂಗಳೆಲ್ಲಿಯವೋ? ಅಷ್ಟಭೋಗಂಗಳು ಸೌರಾಷ್ಟ್ರ ಸೋಮೇಶ್ವರ ಸಾಹಿತ್ಯವಾದ ಬಳಿಕ ಮಲ-ಮಾಯಾ-ಕರ್ಮ-ತಿರೋಧಾನವೆಂಬ ಚತುರ್ವಿಧಪಾಶಂಗಳೆಲ್ಲಿಯವೊ?
--------------
ಆದಯ್ಯ
ಶೀತವುಳ್ಳನ್ನಕ್ಕ ಉಷ್ಣವ ಪ್ರತಿಪಾದಿಸಬೇಕು. ಉಷ್ಣವುಳ್ಳನ್ನಕ್ಕ ಶೀತವ ಪ್ರತಿಪಾದಿಸಬೇಕು. ದಿವದಲ್ಲಿ ಎದ್ದು, ರಾತ್ರಿಯಲ್ಲಿ ಒರಗುವನ್ನಕ್ಕರ ಅದ್ವೈತ ಅಸತ್ಯ ನೋಡಾ. ಇದು ಕಾರಣ, ಕ್ರಿಯೆ ಮರೆಯಲಿಲ್ಲ, ಅರಿವು ಶೂನ್ಯವೆಂದು ಬಿಡಲಿಲ್ಲ. ಅದು ಶಿಲೆಯ ಮರೆಯ ಪಾವಕ, ತಿಲದೊಳಗಣ ತೈಲ. ಅವರ ಒಲವರದಲ್ಲಿ ಕುಲವ ಕಾಣಬೇಕು, ಬಸವಣ್ಣಪ್ರಿಯ ನಾಗರೇಶ್ವರಲಿಂಗವನರಿವುದಕ್ಕೆ.
--------------
ಆನಂದಯ್ಯ
ಒಂದೆಂದಡೆ ಬೆಸ, ಎರಡೆಂದಡೆ ಸರಿ ಎಂಬ ಭೇದದಂತೆ ದ್ವೈತ ಅದ್ವೈತಗಳ ವಿವರ : ಎಷ್ಟು ಲೆಖ್ಖದಲ್ಲಿ ಸಮಗಂಡು ಬಪ್ಪಲ್ಲಿ ದ್ವೈತ. ಹೆಚ್ಚುಗೆಯಲ್ಲಿ ಬಪ್ಪಲ್ಲಿ ಅದ್ವೈತ. ಇಂತೀ ಉಭಯದ ಸಂದನಳಿದಲ್ಲಿ ಸ್ವಯ ಸ್ವಯಂಭು ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಶರಣಸತಿ ಲಿಂಗಪತಿಯೆಂಬ ಕುಶಲಗತಿಯುನ್ನತವನರಿಯದೆ ಅರ್ಚನೆಯಾರ್ಪಣಕ್ಕೆ ಬ್ಥಿನ್ನರೆಂದು ನುಡಿವ ಅದ್ವೈತ ಗೊಡ್ಡು ವೇದಾಂತಿಗಳ ಕಸಮನವ ನೋಡಾ! ನಿಜಭಕ್ತಿ ಸುಜ್ಞಾನ ಪರಮವೈರಾಗ್ಯವೇ ಅಂಗ ಮನ ಭಾವವಾಗಿರ್ದಡೆ ಅದ್ವೈತಿಗಳಿರವೆಂದು ನುಡಿವ ಅಪಶೈವ ಸಿದ್ಧಾಂತಿಗಳ ದುರ್ಭಾವದಂಗವ ನೋಡಾ! ಈ ಜೀವಕಾಯರಂತಂತಿರಲಿ, ಸಕಲನಿಃಕಲಸನುಮತ ಗುರುನಿರಂಜನ ಚನ್ನಬಸವಲಿಂಗಾ, ನಿಮ್ಮ ಪ್ರಸಾದಿ ಶರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅದ್ವೈತವನೋದಿ ಎರಡಳಿದೆವೆಂಬ ಅಣ್ಣಗಳು ನೀವು ಕೇಳಿರೆ. ಅದ್ವೈತಿಯಾದಡೆ ತನುವಿಕಾರ, ಮನದ ಸಂಚಲ, ಭಾವದ ಭ್ರಾಂತು, ಅರಿವಿನ ಮರಹು, ಇಂತೀ ಚತುರ್ವಿಧಂಗಳಲ್ಲಿ ವಿಧಿನಿಷೇಧಂಗಳಳಿದು, ಚಿದ್ಬ್ರಹ್ಮದೊಳವಿರಳಾತ್ಮಕವಾದುದು ಅದ್ವೈತ. ಅಂತಪ್ಪ ವಿಧಿನಿಷೇಧಂಗಳು ಹಿಂಗದೆ, ಲಿಂಗವನರಿಯದೆ, ವಾಗದ್ವೈತದಿಂದ ನುಡಿದು ಅದ್ವೈತಿ ಎನಿಸಿಕೊಂಬುದೆ ದ್ವೈತ. ಇಂತಪ್ಪ ದ್ವೈತಾದ್ವೈತಂಗಳಿಗೆ ಸಿಲುಕದ, ಹರಿಹರಬ್ರರ್ಹದಿಗಳನರಿಯದ ವೇದಶಾಸ್ತ್ರ ಆಗದು ಪುರಾಣ ಇತಿಹಾಸ ರಹಸ್ಯಛಂದಸ್ಸು ಅಲಂಕಾರ ನಿಘಂಟು ಶಬ್ದತರ್ಕಂಗಳೆಂಬ ಕುತರ್ಕಂಗಳಿಗೆ ನಿಲುಕದ ನಿತ್ಯನಿಜೈಕ್ಯ ನಿರುಪಮಸುಖಿಯಾಗಿ, ತಾನಿದಿರೆಂಬ ಭಿನ್ನಭಾವವಿಲ್ಲದ ಸ್ವಯಾದ್ವೈತಿ ತಾನೆ ಸೌರಾಷ್ಟ್ರ ಸೋಮೇಶ್ವರ.
--------------
ಆದಯ್ಯ
ಬಾಯೆ ಭಗವಾಗಿ ಕೈಯೆ ಇಂದ್ರಿಯವಾಗಿ ಹಾಕುವ ತುತ್ತುಗಳೆಲ್ಲಾ ಬಿಂದು ಕಾಣಿರೊ ! ಪ್ರಥಮವಿಷಯವಿಂತಿರಲಿಕೆ, ಗುಹೇಶ್ವರ ಏಕೋ ಅದ್ವೈತ !
--------------
ಅಲ್ಲಮಪ್ರಭುದೇವರು
ಎಂಬತ್ತುನಾಲ್ಕುಲಕ್ಷ ಮಂಡಲದೊಳಗೆ ಒಂದೊಂದು ಜನ್ಮದಲ್ಲಿ ಸಹಸ್ರವೇಳೆ ಸತ್ತು ಹುಟ್ಟಿ ಸುತ್ತಿಸುಳಿದು ಸುಖದುಃಖಗಳಿಂದೆ ನೊಂದು ಬೆಂದು ತೊಳಲಿ ಬಳಲುವ ಜೀವಂಗೆ, ಬಡವಂಗೆ ಕಡವರ ದೊರೆಕೊಂಡಂತೆ, ಮನುಷ್ಯದೇಹವು ದೊರೆಕೊಂಡಲ್ಲಿ, ಶಿವಕೃಪೆಯಿಂದ ಗುರುಕಾರುಣ್ಯವಾಗಿ ಅಂಗದ ಮೇಲೆ ಲಿಂಗಧಾರಣವಾದ ಬಳಿಕ ಆ ಲಿಂಗದ ಮೇಲೆ ಪ್ರಾಣಪ್ರತಿಷೆ*ಯಂ ಮಾಡಿ ನಿಮಿಷ ನಿಮಿಷಾರ್ಧವಗಲದಿರಬೇಕು. ಮತ್ತಂ, ಆ ಲಿಂಗದಲ್ಲಿ ಐಕ್ಯವಾಗುವನ್ನಬರ ಸತ್ಕ್ರಿಯಾ ಸಮ್ಯಕ್‍ಜ್ಞಾನವ ಬಿಡದಿರಬೇಕು. ಇಷ್ಟುಳ್ಳಾತಂಗೆ ಶಿವನಲ್ಲಿ ಸಮರಸವಲ್ಲದೆ, ಅಂತರಂಗದಲ್ಲಿ ಅಂತಃಪ್ರಾಣಲಿಂಗದ ಪರಿಪೂರ್ಣ ಬೆಳಗಕಂಡೆವು. ಇನ್ನು ಇಷ್ಟಲಿಂಗದ ಹಂಗು ಏತಕೆಂದು ಆ ಇಷ್ಟಲಿಂಗವ ಕಡೆಗೆ ತೆಗೆದು ಹಾಕಿ ಲಿಂಗಬಾಹ್ಯನಾಗಿ ವ್ರತಗೇಡಿಯಾದಾತನು ಒಂದುಕೋಟಿ ಕಲ್ಪಾಂತರವು ನರಕದೊಳಗಿರ್ದು ಅಲ್ಲಿಂದತ್ತ ಎಂಬತ್ತುನಾಲ್ಕುಲಕ್ಷ ಜನ್ಮದಲ್ಲಿ ಬಂಧನಬಡುತಿರ್ಪನಲ್ಲದೆ ಶಿವನಲ್ಲಿ ಅವಿರಳ ಸಮರಸವಿಲ್ಲ ನೋಡಾ ! ಅದೆಂತೆಂದೊಡೆ : ``ಅಂಗೇ ಚ ಲಿಂಗಸಂಬಂಧಃ ಲಿಂಗಂಚ ಪ್ರಾಣಸಂಯುತಂ | ನಿಮಿಷಾರ್ಧಂ ಪ್ರಾಣವಿಯೋಗೇನ ನರಕೇ ಕಾಲಮಕ್ಷಯಂ||'' ಎಂದುದಾಗಿ, ಇಂತಪ್ಪ ಅದ್ವೈತ ಹೀನಮಾನವರ ಎನಗೊಮ್ಮೆ ತೋರದಿರಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ವೇದವಾಕ್ಯ ವಿಚಾರಕ್ಕೆ ಬೀಜ, ಶಾಸ್ತ್ರವಾಕ್ಯ ಸಂದೇಹಕ್ಕೆ ಬೀಜ, ಪುರಾಣವಾಕ್ಯ ಪುಣ್ಯಕ್ಕೆ ಬೀಜ, ಭಕ್ತಿಯ ಫಲ ಭವಕ್ಕೆ ಭೀಜ, ಏಕೋಭಾವನಿಷೆ* ಸಮ್ಯಜ್ಞಾನಕ್ಕೆ ಬೀಜ, ಸಮ್ಯಕ್‍ಜ್ಞಾನ ಅದ್ವೈತಕ್ಕೆ ಬೀಜ, ಅದ್ವೈತ ಅರಿವಿಂಗೆ ಬೀಜ. ಅರಿವನಾರಡಿಗೊಂಡು ಕುರುಹಿಲ್ಲದ ಲಿಂಗದಲ್ಲಿ ತೆರಹಿಲ್ಲದಿಪ್ಪಂದವನರಿಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಜಲದ ಸತ್ವ ಜಲಚರಾದಿಗಳಿಗಲ್ಲದೆ ಬಲುಹಿಲ್ಲ ವಾಗದ್ವೈತಿಗಳ ಅದ್ವೈತ, ಸ್ವಯವ ಮುಟ್ಟಬಲ್ಲುದೆ ? ಗುಹೇಶ್ವರಲಿಂಗಕ್ಕೆ [ಅವರು] ದೂರ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
`ಯದ್ಭಾವಂ ತದ್ಭವತಿ' ಎಂಬರಲ್ಲದೆ ತದ್ಭಾವದ ಸದ್ಗತಿಯನೆತ್ತಬಲ್ಲರಯ್ಯ? ಬುದ್ಭುದಾಕಾರ ಭೂಮಿಯೊಳು ಹುಟ್ಟುಹೊಂದುಯಿಲ್ಲವೆ ? ಅದ್ವೈತ ಪರಬ್ರಹ್ಮವನಾಡುವರಿಗೆ ಆತ್ಮನ ತಿಳುಹುಂಟೆ ? ಯದ್ಭಾವ ಏಕೋದೇವ ಏಕಮನ ಏಕಚಿತ್ತವಾದರೆ ಸಿದ್ಧಿಯಪ್ಪುದು ತಪ್ಪದು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ
ಕಂಡೆನೆಂಬುದು ಸಟೆ, ಕಾಣದಿರವು ದಿಟ. ಕಾಣಬಲ್ಲವರು ಮುಂದೆ ಕಾಂಬುದೆ ಸತ್ಯ. ಕಾಣಬಾರದವರು ಮುಂದೆ ಕಾಣದಿರುವುದೇ ಸತ್ಯ. ಗುರುನಿರಂಜನ ಚನ್ನಬಸವಲಿಂಗದಲ್ಲಿ ದ್ವೈತವೆನಲಿಲ್ಲ ಅದ್ವೈತ ಶರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹವಣಲ್ಲದ ಶಾಖೆಯ ಕಪಿ ಹಿಡಿಯಲೊಲ್ಲದು. ಗಮನವಿಲ್ಲದ ಪಿಕಶಿಶು ನುಡಿಯಲರಿಯದು. ಪ್ರಭಾವಿಸಿದಲ್ಲದೆ ಉಲಿಯದು ಕುಕ್ಕಟ. ಇಂತೀ ತ್ರಿವಿಧದ ಭೇದವ ನೋಡಿರೆ ಭಕ್ತರಪ್ಪಡೆ ! ಹೂ ಮಿಡಿಯ ಹರಿದಡೆ ಹಣ್ಣಪ್ಪುದೆ ? ಹಸಿವು ತೃಷೆ ವಿಷಯ ಉಳ್ಳನ್ನಕ್ಕ ಅದ್ವೈತ ಉಂಟೆ ಜಗದೊಳಗೆ ? ತನ್ನ ಮರೆದು ಲಿಂಗವ ಮರೆವುದು, ತನ್ನ ಮರೆಯದೆ ಲಿಂಗವ ಮರೆವ ಯೋಗವಿನ್ನೆಂತಾದುದೊ ? ಸುಡು, ಸುಡು, ಅವಂದಿರು ಗುರುದ್ರೋಹಿಗಳು ಆಚಾರಭ್ರಷ್ಟರು. ಈ ಉಭಯ ತನುಗುಣ ನಾಸ್ತಿಯಾಗದನ್ನಕ್ಕ;_ ಸತ್ಕ್ರಿಯೆಯಿಂದ ಮಾಡುವುದು ಲಿಂಗದಾಸೋಹವ. ಭಯಭಕ್ತಿಯಿಂದ ಮಾಡುವುದು ಜಂಗಮದಾಸೋಹವ. ತನು ಕರಗದೆ ಮನ ಬೆರಸದೆ ನಿಮಗೆ ಮಾಡುವ ವ್ರತಗೇಡಿಗಳ ಎನಗೆ ತೋರದಿರಾ ಗುಹೇಶ್ವರ.
--------------
ಅಲ್ಲಮಪ್ರಭುದೇವರು
ಚಂದ್ರ ತಾರಾ ಮಂಡಲಕ್ಕೆ ಒಂದೆರಡು ಯೋಜನಪ್ರಮಾಣು ಹರಿವ ಕಂಗಳು, ಒಂದು ಸಾಸಿವೆರಜ ತನ್ನ ತಾಗದು. ಛಂದಸ್ಸು ನಿಘಂಟು ವ್ಯಾಕರಣ ಅದ್ವೈತ ವೇದ ಶಾಸ್ತ್ರ ಪುರಾಣವನೋದಿಕೊಂಡು ಮುಂದಣವರಿಗೆ ಹೇಳುವರಲ್ಲದೆ, ತನ್ನೊಳಗಣ ಶುದ್ಧಿಯ ತಾನರಿಯದೆ ಅನ್ಯರಿಗೆ ಉಪದೇಶವ ಹೇಳುವ ಬಿನುಗುಜಾತಿಗಳ ನುಡಿಯ, ಕೇಳಲಾಗದೆಂದ, ಕಲಿದೇವರದೇವಯ್ಯ
--------------
ಮಡಿವಾಳ ಮಾಚಿದೇವ
ದ್ವೈತಾದ್ವೈತಂಗಳೆಂದು ಸಂಬಂಧಿಸಿ ನುಡಿವಲ್ಲಿ, ದ್ವೈತವೆರಡು ಅದ್ವೈತ ಒಂದೆ, ದ್ವೈತ ಉಂಟು ಅದ್ವೈತವಿಲ್ಲ. ಅದು ಒಂದರಲ್ಲಿ ಹುಟ್ಟಿ ಕುರುಹಿಡುವನ್ನಕ್ಕರ, ಸಿದ್ಧಾಂತವಲ್ಲ, ಪ್ರಸಿದ್ಧಾಂತವಲ್ಲ. ಅದ ನಿನ್ನ ನೀ ತಿಳಿ, ಅದು ನಿನಗನ್ಯಭಿನ್ನವಲ್ಲ. ಗೋಳಕಾಕಾರ ವಿಶ್ವವಿರಹಿತಲಿಂಗವು ತಾನು ತಾನೆ.
--------------
ಸಿದ್ಧಾಂತಿ ವೀರಸಂಗಯ್ಯ
ಇನ್ನಷ್ಟು ... -->