ಅಥವಾ

ಒಟ್ಟು 39 ಕಡೆಗಳಲ್ಲಿ , 24 ವಚನಕಾರರು , 38 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಲ ನೆಲ ಅನಲ ಅನಿಲ ಮಿಕ್ಕಾದ ದೃಷ್ಟಂಗಳೆಲ್ಲವನೂ ನಿರೀಕ್ಷಿಸಿ ಸಾದ್ಥಿಸಿಕೊಂಡು ಶ್ರುತ ದೃಷ್ಟ ಅನುಮಾನಂಗಳಲ್ಲಿ ತಿಳಿದು, ಹಿಂದಣ ಮುಂದಣ ಸಂದೇಹವ ಹರಿದು ಮುಟ್ಟೂದು ಘಟಕ್ರಿಯಾಭೇದ ಮನಕ್ಕೆ ಮನೋಹರ ಸಂಕೇಶ್ವರ ಲಿಂಗವನರಿವುದಕ್ಕೆ.
--------------
ಕರುಳ ಕೇತಯ್ಯ
ಕಂಗಳ ಮುಂದಣ ಬಯಲಿನೊಳಗೊಂದು ಪ್ರಕಾಶಾನ್ವಿತವಾದ ಮಹಾಚೋದ್ಯತರವಾದ ಗಗನಕೋಶವುಂಟು. ಅಲ್ಲೊಂದು ದಿವ್ಯತರವಾದ ಕಮಲವುಂಟು. ಆ ಕಮಲದ ಮಧ್ಯದಲ್ಲಿ ಆಣವತ್ರಯಾನ್ವಿತವಾದ ಮಹತ್ಕರ್ಣಿಕೆಯುಂಟು. ಮತ್ತದರಗ್ರದಂತರ್ವರ್ಣತ್ರಯಂಗಳೊಳಗೆ ನೀಲವಿದ್ರುಮರತ್ನ ಚಂದ್ರಪ್ರಕಾಶ ದಿವ್ಯಸಿಂಹಾಸನದ ಮೇಲೆ ಬೆಳಗುತ್ತಿರ್ಪ ಶಿವಲಿಂಗವನನುಸಂಧಾನಿಸಿ ಪೂಜಿಸುವ ಕ್ರಮವೆಂತೆಂದೊಡೆ : ಶ್ರೀಗುರುಕರುಣಕಟಾಕ್ಷವೀಕ್ಷಣಬಲದಿಂದ ಕಲ್ಮಷ ಕಂಟಕಾದಿಗಳಂ ತೊಲಗಿಸಿ, ಶಿವಲೋಕದ ಮಾರ್ಗವಿಡಿದು ಹೋಗಿ, ಆ ಶಿವಲೋಕದ ಸಮೀಪಕ್ಕೆ ಸೇರಿ, ಪರೀಕ್ಷೆಯ ಮಾಡಿ ನೋಡಲು, ಆ ಶಿವಲೋಕದ ಬಹಿರಾವರಣದಲ್ಲಿ ಮೂವತ್ತೆರಡು ಬಹಿರ್ಮುಖರು ಸಂಸ್ಥಿತರಾದ ವಿವರ : ಈಶಾನ್ಯ ಪರ್ಜನ್ಯ ಜಯಂತ ಮಹೇಂದ್ರ ಆದಿತ್ಯ ಸತ್ಯ ಭೃಂಷ ಅಂತರಿಕ್ಷ ಅಗ್ನಿ ವಿಮಾಷ ಥತ ಗ್ರಹಕ್ಷತ ಯಮ ಗಂಧರ್ವ ಭೃಂಗುರಾಜ ಮೃಗ ನಿರುತಿ ದೌವಾರಿಕ ಸುಗ್ರೀವ ಪುಷ್ಪದತ್ತ ವರುಣ ಅಸುರ ಶೇಷ ಋಭು ವಾಯು ನಾಗ ಮುಖ ಪಲಾಟಕ ಸೋಮ ಭೂತ ಅದಿತ ದಿತರೆಂಬುವರೇ ಮೂತ್ತೆರಡು ವಸ್ತುದೇವತೆಯರ ಒಡಂಬಡಿಸಿಕೊಂಡು ಅವರಿಂದೊಳಗಿರ್ಪ ಸೂರ್ಯವೀಥಿಯೆನಿಸುವ ತೃತೀಯವರ್ಣದ ಮೂವತ್ತೆರಡುದಳದಲ್ಲಿ ಎಂಟು ಶೂನ್ಯದಳಗಳನುಳಿದು, ಮಿಕ್ಕ ಇಪ್ಪತ್ತುನಾಲ್ಕುದಳಗಳಲ್ಲಿರುವ ಇಪ್ಪತ್ತುನಾಲ್ಕು ವಿಕಲಾಕ್ಷರಂಗಳೇ ಅಷ್ಟವಿಧೇಶ್ವರರು, ಅಷ್ಟದಿಕ್ಪಾಲಕರು, ಅಷ್ಟವಸುಗಳಾದ ವಿವರ : ಕ ಕಾರವೆ ಅನಂತ, ಖ ಕಾರವೆ ಇಂದ್ರ, ಗಕಾರವೆ ಧರ, ಘಕಾರವೆ ಸೂಕ್ಷ್ಮ , ಓಂಕಾರವೆ ಅಗ್ನಿ, ಚಕಾರವೆ ಧ್ರುವ, ಛಕಾರವೆ ಶಿವೋತ್ತಮ, ಜಕಾರವೆ ಯಮ, ಝಕಾರವೆ ಸೋಮ, ಞಕಾರವೆ ಏಕನೇತ್ರ, ಟಕಾರವೆ ನಿರುತಿ, ಠಕಾರವೆ ಆಪು, ಡಕಾರವೆ ರುದ್ರ, ಢಕಾರವೆ ವರುಣ, ಣಕಾರವೆ ಅನಿಲ, ತಕಾರವೆ ತ್ರಿಮೂರ್ತಿ, ಥಕಾರವೆ ವಾಯು, ದಕಾರವೆ ಅನಲ, ಧಕಾರವೆ ಶ್ರೀಕಂಠ, ನಕಾರವೆ ಕುಬೇರ, ಪಕಾರವೆ ಪ್ರತ್ಯೂಷ, ಫಕಾರವೆ ಶಿಖಂಡಿ, ಬಕಾರವೆ ಈಶಾನ, ಬಕಾರವೆ ಪ್ರಭಾಸ. ಇಂತೀ [ಅಷ್ಟ] ವಿಧೇಶ್ವರಾದಿಗಳಿಗಬ್ಥಿವಂದಿಸಿ, ಅದರಿಂದೊಳಗಿರ್ಪ ಚಂದ್ರವೀಥಿಯೆನಿಪ ದ್ವಿತೀಯಾವರಣದ ಷೋಡಶದಳದಲ್ಲಿರುವ ಷೋಡಶ ಸ್ವರಾಕ್ಷರಂಗಳೆ ಷೋಡಷರುದ್ರರಾದ ವಿವರ : ಅಕಾರವೆ ಉಮೇಶ್ವರ, ಆಕಾರವೆ ಭವ, ಇಕಾರವೆ ಚಂಡೇಶ್ವರ, ಈಕಾರವೆ ಶರ್ವ, ಉಕಾರವೆ ನಂದಿಕೇಶ್ವರ, ಊಕಾರವೆ ರುದ್ರ, ಋಕಾರವೆ ಮಹಾಕಾಳ, Iೂಕಾರವೆ ಉಗ್ರ, ಲೃಕಾರವೆ ಭೃಂಗಿರೀಟಿ, ಲೂೃಕಾರವೆ ಬ್ಥೀಮ, ಏಕಾರವೆ ಗಣೇಶ್ವರ, ಐಕಾರವೆ ಈಶಾನ, ಓಕಾರವೆ ವೃಷಭೇಶ್ವರ, ಔಕಾರವೆ ಪಶುಪತಿ, ಅಂ ಎಂಬುದೆ ಷಣ್ಮುಖಿ, ಅಃ ಎಂಬುದೆ ಮಹಾದೇವನು. ಇಂತಪ್ಪ ಷೋಡಶರುದ್ರರಿಗೆ ಸಾಷ್ಟಾಂಗವೆರಗಿ ಬಿನ್ನವಿಸಿಕೊಂಡು, ಅದರಿಂದೊಳಗಿರ್ಪ ಅಗ್ನಿವೀಥಿಯೆನಿಸುವ ಪ್ರಥಮಾವರಣ ಅಷ್ಟದಳಗಳಲ್ಲಿರ್ಪ ಅಷ್ಟವ್ಯಾಪಕಾಕ್ಷರಂಗಳೆ ಅಷ್ಟಶಕ್ತಿಯರಾದ ವಿವರ : ಸಕಾರವೆ ಉಮೆ, ಷಕಾರವೆ ಜ್ಯೇಷ್ಠೆ, ಶಕಾರವೆ ರೌದ್ರೆ, ವಕಾರವೆ ಕಾಳೆ, ಲಕಾರವೆ ಬಾಲೆ, ರಕಾರವೆ ಬಲಪ್ರಮಥಿನಿ, ಯಕಾರವೆ ಸರ್ವಭೂತದಮನೆ, ಮಕಾರವೆ ಮನೋನ್ಮನಿ. ಇಂತಪ್ಪ ಶಿವಶಕ್ತಿಯರ ಪಾದಪದ್ಮಂಗಳಿಗೆ ಸಾಷ್ಟಾಂಗವೆರಗಿ, ಪೊಡಮಟ್ಟು ಅದರಿಂದೊಳಗಿರ್ಪ ಅತಿರಹಸ್ಯವಾದ ಮೂವತ್ತೆರಡು ಕ್ಲೇಶಂಗಳಿಗಾಶ್ರಯವಾದ ಶಾಂತಿಬಿಂದುಮಯವಾದ ಅಂತರ್ಮಂಡಲದ ಚತುರ್ದಳದಲ್ಲಿರುವ ಚತುರಕ್ಷರಂಗಳೇ ಚತುಃಶಕ್ತಿಯರಾದ ವಿವರ : ಸಂ ಎಂಬುದೆ ಅಂಬಿಕೆ, ಅಂ ಎಂಬುದೆ ಗಣಾನಿ, ಡಿಂ ಎಂಬುದೆ ಈಶ್ವರಿ, ಕ್ಷುಂ ಎಂಬುದೇ ಉಮೆ. ಇಂತಪ್ಪ ಪರಶಕ್ತಿಯರ ಪಾದಾರವಿಂದವನು ಅನೇಕ ಪ್ರಕಾರದಿಂ ಸ್ತುತಿಮಾಡಿ ಬೇಡಿಕೊಂಡು ಅವರಪ್ಪಣೆವಿಡಿದು ಒಳಪೊಕ್ಕು, ಅಲ್ಲಿ ಕದಂಬಗೋಳಕಾಕಾರ ಸ್ಫುರಶಕ್ತಿದೀದ್ಥಿಕಾಯೆಂದುಂಟಾಗಿ ರಹಸ್ಯಕ್ಕೆ ರಹಸ್ಯವಾದ ಷಡಧ್ವಜನ್ಮಭೂಮಿಯಾದ ಶಕ್ತಿಶಿರೋಗ್ರದಲ್ಲಿ ಪಂಚಾಕಾಶ ಷಟ್ತಾರಕ ತ್ರಿವಿಧಲಿಂಗಾಂಗಗಳೆ ಕಕಾರವಾದ ಪರಬ್ರಹ್ಮದ ನೆಲೆಯನರಿಯುವುದೇ ಮುದ್ವೀರಪ್ರಿಯ ಸಂಗಮೇಶ್ವರನಲ್ಲಿ ಬೆರೆವಂಥ ನಿಜಯೋಗ ಕಾಣಿರೊ.
--------------
ಮುದ್ವೀರ ಸ್ವಾಮಿ
ಧರೆ ಸಲಿಲ ಅನಲ ಅನಿಲ ಆಕಾಶ ಮುಂತಾದ ಭೇದಂಗಳ ಕಲ್ಪಿಸುವಲ್ಲಿ, ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವಮೂರ್ತಿಗಳು ಕುರುಹುಗೊಂಬಲ್ಲಿ, ನಾದಬಿಂದುಕಳೆ ಲಕ್ಷಿಸುವಲ್ಲಿ, ಆ ಪರಶಿವತತ್ವದ ಅಂಗ ಗುರುರೂಪಾಗಿ, ಆ ಪರತತ್ವದ ಅಂಗ ಲಿಂಗವಾಗಿ, ಆ ಪರತತ್ವದ ಅಂಗ ಜಂಗಮವಾಗಿ, ಆ ಜಂಗಮ ಲಿಂಗದಲ್ಲಿ ಲೀಯವಾಗಿ, ಆ ಲಿಂಗ ಗುರುವಿನಲ್ಲಿಲೀಯವಾಗಿ, ಆ ಗುರು ಉಭಯಸ್ಥಲವ ಗಬ್ರ್ಥೀಕರಿಸಿ, ಗುರುವೆಂಬ ಭಾವ ತನಗಿಲ್ಲದೆ ತರು ಫಲವ ಹೊತ್ತಂತೆ, ಫಲ ರಸವ ಇಂಬಿಟ್ಟುಕೊಂಡಂತೆ, ಅಂಗಕ್ಕೆ ಆತ್ಮತೇಜವರತು, ಭಾವಕ್ಕೆ ಬ್ಥೀಷ್ಮ ನಿಂದು, ಮನ ಮಹವನೊಡಗೂಡಿದಲ್ಲಿ, ಆತ ಸದ್ಗುರುಮೂರ್ತಿಯ ಕರದಲ್ಲಿ ಬಂದ ಲಿಂಗ, ಕರ್ಣದಲ್ಲಿ ಹೇಳಿದ ಮಂತ್ರ, ಕಪಾಲವ ಮುಟ್ಟಿದ ತಂತ್ರ. ಆದು ಸದ್ಗುರು ಕಾರುಣ್ಯ, ಆ ಶಿಷ್ಯಂಗೆ ಜೀವನ್ನುಕ್ತಿ. ಇದು ಆಚಾರ್ಯಮತ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕಾಯ ಜೀವದ ನಡುವೆ ಒಂದ ಭಾವಿಸಿ, ಇಷ್ಟಲಿಂಗವೆಂದು ಕೊಡುವಾಗ, ಆ ಲಿಂಗ ಕಾಯಕ್ಕೋ, ಜೀವಕ್ಕೋ ? ಕಾಯಕ್ಕೆಂದಡೆ ಕಾಯದೊಳಗಾಗಿ ಪೂಜಿಸಿಕೊಂಬುದು. ಜೀವಕ್ಕೆಂದಡೆ ನಾನಾ ಭವಂಗಳಲ್ಲಿ ಬಪ್ಪುದು. ಆ ಲಿಂಗ ಉಭಯಕ್ಕೆಂದಡೆ ಇನ್ನಾವುದು ಹೇಳಾ ? ಅಂಗಕ್ಕೆ ಲಿಂಗವಾದಡೆ ಬಣ್ಣ ಬಂಗಾರದಂತೆ ಇರಬೇಕು. ಜೀವಕ್ಕೆ ಲಿಂಗವಾದಡೆ ಅನಲ ಅನಿಲನಂತೆ ಇರಬೇಕು. ಉತ್ಪತ್ಯಕ್ಕೂ ನಷ್ಟಕ್ಕೂ ಉಭಯದ ಒಡಲನರಿತಲ್ಲಿ, ಅದು ಅಂಗಲಿಂಗಸಂಬಂಧ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಪೃಥ್ವಿ ಅಪ್ಪುವಿನ ಸಂಗದಲ್ಲಿ, ಅನಲ ಅನಿಲವೆಂಬ ಪುತ್ಥಳಿ ಹುಟ್ಟಿತ್ತು. ಆ ಪುತ್ಥಳಿಯ ಗರ್ಭದಲ್ಲಿ, ಆಕಾಶ ಮಹದಾಕಾಶವೆಂಬ ಕುರುಹುದೋರಿತ್ತು. ಅದು ನಾದಪೀಠ ಬಿಂದುಲಿಂಗ ಕಳೆ ವಸ್ತುವಾಗಿ, ಹೊಳಹುದೋರುತ್ತದೆ. ಆ ಹೊಳಹು ಆರುಮೂರಾದ ಭೇದವ ತಿಳಿದು, ಮೂರು ಏಕವಾದಲ್ಲಿ, ಐಕ್ಯವನರಿತಲ್ಲಿ, ನಾದಬಿಂದುಕಳೆಭೇದವಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತುಷರಸವಿದ್ದುದಕ್ಕಲ್ಲದೆ ಫಲ ಫಲಿಸಲಿಲ್ಲ. ಕ್ರಿಯಾಸದ್ಭಾವವಿದ್ದಲ್ಲದೆ ಸತ್ಪಥಭಾವಿಯಲ್ಲ. ತ್ರಿಸಂಧ್ಯಾಕಾಲಂಗಳಲ್ಲಿ ಉಚಿತ ವೇಳೆಯನರಿತು ರಾಜಸ ತಾಮಸಂಗಳಿಲ್ಲದೆ ಪರಸೇವೆ ನಿಶ್ಚಯವಂತನಾಗಿ, ಅನಲ ಅಹಿ ವ್ಯಾಘ್ರ ಚೋರ ರಾಜಭಯ ಮುಂತಾದುವೆಲ್ಲವ ಲಿಂಗ ಕರಸ್ಥಲಕ್ಕೆ ಬಂದಿರಲಿಕ್ಕಾಗಿ, ಆ ಲಿಂಗದ ಮೂರ್ತಿ ಮನಸ್ಥಲದಲ್ಲಿ ನಿರತಿಶಯದಿಂದ ನಿಂದಿರಲಿಕ್ಕಾಗಿ, ಇಂತೀ ಭಾವಂಗಳೆಲ್ಲವು ಮೂರ್ಛೆಯಲ್ಲಿ ಮೂರ್ತಿಗೊಂಡು ಅಮೂರ್ತಿಯಪ್ಪ ವಸ್ತು ಭಿನ್ನಭೇದವಿಲ್ಲದೆ ಸ್ವಯ ಕ್ರಿಯಾಪೂಜೆ ಸರ್ವಜ್ಞಾನ ಸಂತೋಷ. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ ಕ್ರಿಯಾಸಂಭವಕೂಟ.
--------------
ಮೋಳಿಗೆ ಮಹಾದೇವಿ
ಒಂದು ಪಕ್ಷಿಗೆ ಐದು ತಲೆ, ಶಿರವೊಂದರಲ್ಲಿಯೆ ಮೂಡಿತ್ತು ನೋಡಾ. ಒಡಲು ಒಂದಾಯಿತ್ತು, ಬಣ್ಣ ಹದಿನಾರಾಯಿತ್ತು. ಅದರ ಚಂದ ಇಪ್ಪತ್ತೈದಾಯಿತ್ತು, ಹುಟ್ಟಿದ ಗರಿ ನೂರೊಂದಾಯಿತ್ತು. ಆ ಹಕ್ಕಿಯ ಜೀವವಿದ್ದಂತೆ ಕೊಂದು, ಸುಡದ ಬೆಂಕಿಯಲ್ಲಿ ಸುಟ್ಟು, ತಲೆಯಿಲ್ಲದ ಕಣ್ಣಿನಲ್ಲಿ ನೋಡಿ, ಬಾಯಿಲ್ಲದ ನಾಲಗೆಯಲ್ಲಿ ಸವಿದು, ಸವಿವುದಕ್ಕೆ ಮೊದಲೆ ರುಚಿಯನರ್ಪಿತವ ಮಾಡಿದ ಜ್ಞಾನಜಂಗಮವ ನೋಡಾ. ಆತನ ಇರವು ತುರುಬೊ? ಜಡೆಯೊ? ಅರಿಯಬಾರದಣ್ಣಾ. ಎಣ್ಣೆ ಕೊಂಡ ಮಣ್ಣಿನಂತೆ, ಅನಲ ಕೊಂಡ ದ್ರವ್ಯದಂತೆ, ಕುಸುಮ ಕೊಂಡ ಮಣ್ಣಿನಂತೆ, ಅನಲ ಕೊಂಡ ದ್ರವ್ಯದಂತೆ, ಕುಸುಮಕೊಂಡ ಗಂಧದಂತೆ, ರಸ ಕೊಂಡ ಪಾಷಾಣದಂತೆ, ಹೆಸರಿಡಬಾರದಯ್ಯಾ, ಆ ಜಂಗಮದಿರವ. ಆ ಜಂಗಮ ಬಂದು ಎನ್ನ ಹುಳ್ಳಿಯಂ ಬಿಡಿಸಿ, ತಳ್ಳಿಯಂ ಹರಿದು, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ತಲ್ಲೀಯವಾದ.
--------------
ಮೋಳಿಗೆ ಮಾರಯ್ಯ
ಚಂದ್ರಕಾಂತದ ಶಿಲೆಯಲ್ಲಿ ಬಿಂದು ಅಡಗಿಪ್ಪಂತೆ, ಗೋವುಗಳಲ್ಲಿ ಗೋರಂಜನ ರಂಜಿಸುವಂತೆ, ಶಿಲೆಕಾಷ್ಠಂಗಳಲ್ಲಿ ಅನಲ ಅಡಗಿಪ್ಪಂತೆ, ಸತ್ಯರ ಹೃದಯದಲ್ಲಿ ವರಿõ್ಞಕ್ತಿಕದ ಉದಕದಂತೆ ಭಾವವಿಲ್ಲದೆ ಅಡಗಿದೆಯಲ್ಲಾ ಅಮರೇಶ್ವರಲಿಂಗವೆ.
--------------
ಆಯ್ದಕ್ಕಿ ಮಾರಯ್ಯ
ನೆಲನನೊಳಕೊಂಡ ಸಲಿಲ, ಸಲಿಲವನೊಳಕೊಂಡ ಅನಲ ಅನಲನನೊಳಕೊಂಡ ಅನಿಲ, ಅನಿಲನನೊಳಕೊಂಡ ಆಕಾಶ ಆಕಾಶವನೊಳಕೊಂಡ ಮನ, ಮನವನೊಳಕೊಂಡ ಬುದ್ಧಿ ಬುದ್ಧಿಯನೊಳಕೊಂಡ ಪ್ರಕೃತಿ, ಪ್ರಕೃತಿಪುರುಷಜಗವೆಲ್ಲನೊಳಕೊಂಡ ವಿಶುದ್ಧಕಾಯನು ಭಕ್ತದೇಹಿಕದೇವನು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಪರುಷದ ಪುತ್ಥಳಿಯ ಇರವಿನಂತೆ, ಪೃಥ್ವಿಯ ನುಂಗಿದ ಉದಕದಂತೆ, ಅನಲ ನುಂಗಿದ ತಿಲದಂತೆ, ವರುಣನ ಕಿರಣ ಕೊಂಡ ದ್ರವದಂತೆ, ಇನ್ನೇನನುಪಮಿಸುವೆ ? ಇನ್ನಾರಿಗೆ ಹೇಳುವೆ ? ನೋಡುವದಕ್ಕೆ ಕಣ್ಣಿಲ್ಲ, ಕೇಳುವದಕ್ಕೆ ಕಿವಿಯಿಲ್ಲ, ಕೀರ್ತಿಸುವದಕ್ಕೆ ಬಾಯಿಲ್ಲ, ಏನೂ ಎಂಬುದಕ್ಕೆ ತೆರಪಿಲ್ಲ, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಲಿಂಗೈಕ್ಯವು.
--------------
ಮೋಳಿಗೆ ಮಾರಯ್ಯ
ಹಸಿವರತಲ್ಲದೆ ಪ್ರಸಾದಿವೇದಿಯಲ್ಲ, ತೃಷೆಯರತಲ್ಲದೆ ಪಾದೋದಕವೇದಿಯಲ್ಲ, ನಿದ್ರೆಯರತಲ್ಲದೆ ಭವವಿರಹಿತನಲ್ಲ. ಅನಲ ಪವನ (ಗುಣವರತಲ್ಲದೆ) ಜನನ ಮರಣ ರಹಿತನಲ್ಲಯ್ಯ. ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ ಲಿಂಗೈಕ್ಯವೆಲ್ಲರಿಗೆಲ್ಲಿಯದು ?
--------------
ಚನ್ನಬಸವಣ್ಣ
ಮುಕ್ತಿಗೆ ಸದಾ ಸಂಧಾನವಾದ ಮಹಾಜ್ಞಾನ ಶಿವಕ್ಷೇತ್ರವೆಂಬ ಶಾಂಭವಿಯಚಕ್ರವಿವರವೆಂತೆಂದೊಡೆ: ಅಗ್ನಿಮಂಡಲದ ಪೂರ್ವದಿಕ್ಕಿನ ಸಕಾರವೇ ವಾಮೆ, ಷಕಾರವೇ ಜೇಷೆ*, ಶಕಾರವೇ ರೌದ್ರಿ, ವಕಾರವೇ ಕಾಳಿ. ಅಗ್ನಿಮಂಡಲದ ನೈಋತ್ಯದಳಕ್ಕೆ ಆಧಾರಚಕ್ರಸಂಬಂಧವು. ಅದರ ಮುಂದಣ ಲಕಾರವೇ ಬಾಲೆ, ರಕಾರವೇ ಬಲಪ್ರಮಥಿನಿ, ಯಕಾರವೇ ಸರ್ವಭೂತದಮನಿ, ಮಕಾರವೇ ಮನೋನ್ಮನಿ. ಇನ್ನು ಸೂರ್ಯಮಂಡಲದ ಬಕಾರ ಭಕಾರಗಳೆರಡು ಕೂಡಿ ಅಗ್ನಿಮಂಡಲದ ಈಶಾನ್ಯದಳಕ್ಕೆ ಸ್ವಾಧಿಷಾ*ನಚಕ್ರಸಂಬಂಧವು. ಮುಂದೆ ಚಂದ್ರಮಂಡಲದ ವಿವರವೆಂತೆಂದೊಡೆ: ಅಃ ಎಂಬುದೇ ಷಣ್ಮುಖಿ, ಅಂ ಎಂಬುದೇ ಭವ, ಔಕಾರವೇ ಶರ್ವ, ಓಕಾರವೇ ರುದ್ರ, ಐಕಾರವೇ ಮಹಾದೇವ, ಏಕಾರವೇ ಸೋಮ, ಲೂೃಕಾರವೇ ಭೀಮ, ಲೃಕಾರವೇ ಉಗ್ರ, Iೂಕಾರವೇ ಪಶುಪತಿ, ಋಕಾರವೇ ಉಮೇಶ್ವರ, ಊಕಾರವೇ ಚಂಡೇಶ್ವರ, ಉಕಾರವೇ ನಂದೀಶ್ವರ, ಈಕಾರವೇ ಮಹಾಕಾಳ, ಇಕಾರವೇ ಭೃಂಗಿರಿಟಿ, ಆಕಾರವೇ ಗಣೇಶ್ವರ, ಅಕಾರವೇ ವೃಷಭೇಶ್ವರ, ಚಂದ್ರಮಂಡಲದಲ್ಲಿ ವಿಶುದ್ಧಿಚಕ್ರಸಂಬಂಧವು. ಇನ್ನು ಮುಂದೆ ಸೂರ್ಯಮಂಡಲವೆಂತೆಂದೊಡೆ: ಪೂರ್ವದಳದ ಕಕಾರವೇ ಅನಂತ, ಖಕಾರವೇ ಸೂಕ್ಷ್ಮ, ಗಕಾರವೇ ಶಿವೋತ್ತಮ, ಘಕಾರವೇ ಏಕನೇತ್ರ, ಙಕಾರವೇ ಏಕರುದ್ರ. ಚಕಾರವೇ ತ್ರಿಮೂರ್ತಿ, ಛಕಾರವೇ ಶ್ರೀಕಂಠ, ಜಕಾರವೇ ಶಿಖಂಡಿ, ಝಕಾರವೇ ಇಂದ್ರ, ಞಕಾರವೇ ಅಗ್ನಿ. ಟಕಾರವೇ ಯಮ, ಠಕಾರವೇ ನೈಋತ್ಯ. ಸೂರ್ಯಮಂಡಲದ ನೈಋತ್ಯದಳಕ್ಕೆ ಅನಾಹತಚಕ್ರಸಂಬಂಧವು. ಡಕಾರವೇ ವರುಣ, ಢಕಾರವೇ ವಾಯುವ್ಯ, ಣಕಾರವೇ ಕುಬೇರ, ತಕಾರವೇ ಈಶಾನ್ಯ, ಥಕಾರವೇ ಧರಾ, ದಕಾರವೇ ಧ್ರುವ, ಧಕಾರವೇ ಸೋಮ, ನಕಾರವೇ ಅಪ್ಪು, ಪಕಾರವೇ ಅನಿಲ, ಫಕಾರವೇ ಅನಲ, ಸೂರ್ಯಮಂಡಲದ ವರುಣದಳದಿಂದೆ ಈಶಾನ್ಯದಳಕ್ಕೆ ಮಣಿಪೂರಕಚಕ್ರ ಸಂಬಂಧವು. ಈಶಾನ್ಯ ಇಂದ್ರ ಮಧ್ಯದ ಬಕಾರ ಭಕಾರಂಗಳ ಪೆಸರು, ಬಕಾರವೇ ಪ್ರತ್ಯೇಶ, ಭಕಾರವೇ ಪ್ರಭವ, ಇವೆರಡು ಸ್ವಾಧಿಷಾ*ನಚಕ್ರದವು. ಇನ್ನು ಅಕಾರ ಹಕಾರಂಗಳಿಗೆ ಭೇದವಿಲ್ಲದ ಕಾರಣ ಚಂದ್ರಮಂಡಲದ ಅ ಎಂಬಕ್ಷರವು ಅಗ್ನಿಮಂಡಲದ ಲಂಬಕ್ಷರವು ಇವೆರಡು ಆಜ್ಞಾಚಕ್ರಸಂಬಂಧವಾಗಿಹವು. ಈ ಷಟ್‍ಚಕ್ರಂಗಳು ಶಾಂಭವಿಚಕ್ರದಲ್ಲಿ ಸಂಬಂಧವಾಗಿಹವು. ಇನ್ನು ಅಷ್ಟದಳಂಗಳಿಗೆ ಹಂಚಿಹಾಕುವ ವಿವರವೆಂತೆಂದೊಡೆ: ವಾಮ, ಗಣೇಶ್ವರ, ವೃಷಭೇಶ್ವರ, ಅನಂತ, ಸೂಕ್ಷ್ಮ, ಶಿವೋತ್ತಮ, ಇಂದ್ರ, ಸತ್ಯ, ಭೃಂಗಿ, ಅಂತರ್ಲಕ್ಷ ಈ ಹತ್ತು ಇಂದ್ರದಳದಲ್ಲಿ ಸಂಬಂಧವು. ಜೇಷ*, ಮಹಾಕಾಳ, ಭೃಂಗರೀಟಿ, ಏಕನೇತ್ರ, ಏಕರುದ್ರ, ತ್ರಿಮೂರ್ತಿ, ಅಗ್ನಿ, ಪೂಷನ್, ವಿಧಿ, ದಮ ಈ ಹತ್ತು ಅಗ್ನಿದಳದಲ್ಲಿ ಸಂಬಂಧವು. ರೌದ್ರಿ, ನಂದೀಶ್ವರ, ಚಂಡೇಶ್ವರ, ಶ್ರೀಕಂಠ, ಶಿಖಂಡಿ, ಇಂದ್ರ ಯಮ, ಭಾಸ್ಕರ, ಪುಷ್ಪದತ್ತ , ಬಲಾಟ ಈ ಹತ್ತು ಯಮದಳದಲ್ಲಿ ಸಂಬಂಧವು. ಕಾಳಿ, ಉಮೇಶ್ವರ, ಪಶುಪತಿ, ಅಗ್ನಿ, ಯಮ, ನೈಋತ್ಯ, ದೌವಾರಿಕ, ಸುಗ್ರೀವ, ಆವರಣ ಈ ಹತ್ತು ನೈಋತ್ಯದಳದಲ್ಲಿ ಸಂಬಂಧವು. ಬಾಲೆ, ಉಗ್ರ, ಭೀಮ, ವರುಣ, ಏಕನೇತ್ರ, ಕುಬೇರ, ಅರುಣ, ಅಸುರ, ಗಂಹ್ವರ, ವೇಗ, ಈ ಹತ್ತು ವರುಣದಳದಲ್ಲಿ ಸಂಬಂಧವು. ಬಲಪ್ರಮಥಿನಿ, ಸೋಮ, ಅಪನಿಲ, ಮಹಾದೇವ, ಈಶಾನ್ಯ, ಧರಾ, ಧ್ರುವ, ವಾಯು, ನಾಗಮುಖ, ಸೋಮ, ಈ ಹತ್ತು ವಾಯುವ್ಯದಳದಲ್ಲಿ ಸಂಬಂಧವು. ಸರ್ವಭೂತದಮನಿ, ರುದ್ರ, ಶರ್ವ, ಸೋಮ, ಅಪ್ಪು, ನೀಲ, ಕುಬೇರ, ಅಘೋರ, ದಿತಿ, ಅದಿತಿ, ಈ ಹತ್ತು ಕುಬೇರದಳದಲ್ಲಿ ಸಂಬಂಧವು. ಮನೋನ್ಮನಿ, ಭವ, ಷಣ್ಮುಖಿ, ನಳ, ಪ್ರತ್ಯೇಶ, ಪ್ರಭವ, ಈಶಾನ್ಯ, ಪರ್ಜನ್ಯ, ಜಯಂತ, ಸಂಕರ, ಈ ಹತ್ತು ಈಶಾನ್ಯದಳದಲ್ಲಿ ಸಂಬಂಧವು. ಇಲ್ಲಿಗೆ ಅಷ್ಟದಳದ ವಿವರ ಮುಗಿಯಿತು. ಇನ್ನು ಮುಂದೆ ಚೌದಳದ ವಿವರವೆಂತೆಂದೊಡೆ : ಇಂತಪ್ಪ ಅಷ್ಟದಳವನೊಳಕೊಂಡು ಅಂಬಿಕೆ, ಗಣಾನಿ, ಈಶ್ವರಿ, ಮನೋನ್ಮನಿ ಎಂಬ ಚತುರ್ದಳ ಶಕ್ತಿಯರಿರ್ಪರು. ಪೂರ್ವದಳದ ಸಕಾರವೇ ಅಂಬಿಕೆ. ದಕ್ಷಿಣದಳದ ಅಕಅರವೇ ಗಣಾನಿ. ಪಶ್ಚಿಮದಳದ ವಿಕಾರವೇ ಈಶ್ವರಿ. ಉತ್ತರದಳದ ಕ್ಷಕಾರವೇ ಮನೋನ್ಮನಿ. ಇಂತೀ ಚತುರ್ವಿಧಶಕ್ತಿಯನೊಳಕೊಂಡಿರ್ಪಳು ಹ್ರೀಂಕಾರಶಕ್ತಿ. ಹ್ರೀಂಕಾರಶಕ್ತಿ ಎಂದಡೂ ಮೂಲಜ್ಞಾನ ಚಿತ್ತು ಎಂದಡೂ ಚಿದಾತ್ಮ ಎಂದಡೂ ಪರ್ಯಾಯ ನಾಮವು. ಇಂತಪ್ಪ ಹ್ರೀಂಕಾರಶಕ್ತಿಗೆ ಆಶ್ರಯವಾಗಿರ್ಪುದು ನಿಷ್ಕಲಲಿಂಗವು. ನಿಷ್ಕಲಲಿಂಗವೆಂದಡೂ ಶುದ್ಧಪ್ರಸಾದವೆಂದಡೂ ಹಕಾರಪ್ರಣವವೆಂದಡೂ ಪರ್ಯಾಯ ನಾಮಂಗಳು. ಇಂತಪ್ಪ ನಾಮಂಗಳನೊಳಕೊಂಡು ಪಿಂಡ ಬ್ರಹ್ಮಾಂಡಗಳೊಳಹೊರಗೆ ಪರಿಪೂರ್ಣವಾಗಿ ತುಂಬಿ ತೊಳಗಿ ಬೆಳಗುತಿರ್ಪುದು ನೋಡಾ ನಿಷ್ಕಲಲಿಂಗವು. ಇಂತಪ್ಪ ಅನಾದಿ ನಿಷ್ಕಲ ಪರಶಿವಬ್ರಹ್ಮದ ನಿಜದ ನಿಲವನು ಶ್ರುತಿಗುರುವಚನ ಸ್ವಾನುಭಾವಂಗಳಿಂದರಿದು ತನ್ನೊಳಗೆ ಗರ್ಭೀಕರಿಸಿಕೊಂಡು ಸುಳಿವ ಮಹಾಶರಣರ ಶ್ರೀಚರಣಕ್ಕೆ ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ದೇವ ದೇವ ಮಹಾಪ್ರಸಾದ, ಅವಧರಿಸಯ್ಯಾ ಎನ್ನ ಬಿನ್ನಹವ; ಅತಳ, ವಿತಳ, ಸುತಳ, ರಸಾತಳ, ತಳಾತಳ, ಮಹಾತಳ, ಪಾತಾಳಾದಿ ಲೋಕದಿಂದತ್ತತ್ತ ನಿಮ್ಮ ಶ್ರೀಚರಣ. ಭೂಲೋಕ ಭುವರ್ಲೋಕ, ಸ್ವರ್ಲೋಕ, ಮಹರ್ಲೋಕ, ಜನರ್ಲೋಕ, ತಪೋಲೋಕ, ಸತ್ಯಲೋಕದಿಂದತ್ತತ್ತ ನಿಮ್ಮ ಉತ್ತಮಾಂಗ, ತರುವಿನೊಳಗೆ ಅನಲ ಭರಿತನಾಗಿರ್ದು ಮಥನದಿಂದ ತೋರಿ ಆಹುತಿಗೊಂಬಂತೆ, ಸರ್ವಕರ್ತೃ ನಿತ್ಯಾನಂದಮಯನೆ, ಭಕ್ತಿಲೀಲಾವಿನೋದನೆ, ಕೂಡಲಸಂಗಮದೇವಾ, ಸುಚಿತ್ತದಲ್ಲಿ ಮನಮೀಸಲ ಬೋನವನಾರೋಗಿಸಯ್ಯಾ.
--------------
ಬಸವಣ್ಣ
ಮರಲ್ದುಂ, ಮೂರನೆಯ ಸೂರ್ಯಮಂಡಲದ ಮೂವತ್ತೆರಡೆಸಳ್ಗಳಲ್ಲಿ,್ಞ ಆನಂತ ಸೂಕ್ಷ್ಮ ಶಿವೋತ್ತಮೈಕ ನೇತ್ರೈಕ ಏಕರುದ್ರ ತ್ರಿಮೂರ್ತಿ ಶ್ರೀಕಂಠ ಶಿಖಂಡಿಗಳೆಂಬಷ್ಟ ವಿದ್ಯೇಶ್ವರರುದ್ರರು ಇಂದ್ರಾಗ್ನಿ ಯಮ ನಿಋತಿ ವರುಣ ವಾಯು ಕುಬೇರೀಶಾನರೆಂಬಷ್ಟ ಲೋಕಪಾಲರಂ ಧವ ಧ್ರುವಂ ಸೋಮ ನಪ[ನ]ನಿಲಂ ಅನಲ ಪ್ರತ್ಯೂಷ ಪ್ರಭಾಸರೆಂಬೀಯಷ್ಟವಸುಗಳ ಇಂದ್ರ ಸತ್ಯ ಭೃಂಗಿಯಂತರ್ಲಕ್ಷಣನೆಂಬೀಯಿಂದ್ರದಿಕ್ಕಿನ ಚೌದಳ ವಾಸ್ತವದೇವತೆಗಳ ನಗ್ನಿ ಪೂಷ ವಿತಿ ದಮರೆಂಬಗ್ನಿದಿಕ್ಕಿನ ಚೌದಳದ ವಾಸ್ತವದೇವತೆಗಳು, ಯಮ ಭಾಸ್ಕರ ಪುಷ್ಷದತ್ತ ಬಲಾಷ್ಮರೆಂಬೀ ಯಮದಿಕ್ಕಿನ ಚೌದಳದ ವಾಸ್ತವದೇವತೆಗಳನುಂ, ನೈಋತ್ಯ ದೌವಾರಿಕ ಸುಗ್ರೀವಾರುಣರೆಂಬೀ ನೈಋತ್ಯದಿಕ್ಕಿನ ಚೌದಳದ ವಾಸ್ತವದೇವತೆಗಳನುಂ, ವರುಣೌಸುರ ಗಹ್ವರರ ವೇದರೆಂಬೀ ವರುಣದಿಕ್ಕಿನ ಚೌದಳದ ವಾಸ್ತವದೇವತೆಗಳನುಂ, ವಾಯು ನಾಗ ಮುಖ್ಯ ಸೋಮರೆಂಬೀ ವಾಯುದಿಕ್ಕಿನ ಚೌದಳದ ವಾಸ್ತವದೇವತೆಗಳನುಂ, ಕುಬೇರಅಗ್ಭರಾದಿತ್ಯದಂತಿಗಳೆಂಬ ಕುಬೇರದಿಕ್ಕಿನ ಚೌದಳದ ವಾಸ್ತವದೇವತೆಗಳನು ಈಶಾನ್ಯ ಪರ್ಜನ್ಯ ಜಯಂತ ಸಂಕ್ರಂದರೆಂಬೀ ಈಶಾನ್ಯದಿಕ್ಕಿನ ಚೌದಳದ ವಾಸ್ತವದೇವತೆಗಳನುಮೀ ಪ್ರಕಾರಮಾದ ಮೂವತ್ತೆರಡು ದಳಂಗಳಲ್ಲಿ ಭಾವಿಪುದೆಂದು ನಿರವಿಸಿದೆಯಯ್ಯಾ, ಪರಮ ಶಿವಲಿಂಗೇಶ್ವರ ಚಿದ್‍ವ್ಯೋಮ ಪ್ರಭಾಕರಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಸರ್ವಾವಧಾನಿಯ ಇರವು, ಅನಲ ಅನಿಲನ ತೆರದಂತೆ, ಅಂಕುರ ಅಪ್ಪುವಿನ ತೆರದಂತೆ, ಸಾರ ಸವಿಯ ತೆರದಂತೆ, ಆಲಿ ನೂಲಿನ ತೆರದಂತೆ, ಭಾವ ಲಿಂಗೈಕ್ಯವು, ಸ್ವಾನುಭಾವಾತ್ಮಕ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->