ಅಥವಾ

ಒಟ್ಟು 20 ಕಡೆಗಳಲ್ಲಿ , 13 ವಚನಕಾರರು , 19 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾದವಿಲ್ಲದ ಗುರುವಿಂಗೆ ತಲೆಯಿಲ್ಲದ ಶಿಷ್ಯನು. ಅನಾಚಾರಿ ಗುರುವಿಂಗೆ ವ್ರತಗೇಡಿ ಶಿಷ್ಯನು. ಈ ಗುರುಶಿಷ್ಯರಿಬ್ಬರೂ ಸತ್ತ ಸಾವ, ನಿಮ್ಮಲ್ಲಿ ಅರಸುವೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಏರಿಯಕೆಳಗೆ ಬಿದ್ದ ನೀರು ಪೂರ್ವದ ತಟಾಕಕ್ಕೆ ಏರಬಲ್ಲುದೆ ? ವ್ರತಾಚಾರವ ಮೀರಿ ಕೆಟ್ಟ ಅನಾಚಾರಿ ಸದ್ಭಕ್ತರ ಕೂಡಬಲ್ಲನೆ ? ದೇವಾಲಯದಲ್ಲಿ ಸತ್ತಡೆ ಸಂಪ್ರೋಕ್ಷಣವಲ್ಲದೆ ದೇವರು ಸತ್ತಲ್ಲಿ ಉಂಟೆ ಸಂಪ್ರೋಕ್ಷಣ ? ಅಂಗದಲ್ಲಿ ಮರವೆಗೆ ಹಿಂಗುವ ಠಾವಲ್ಲದೆ, ಮನವರಿದು ತಾಕು ಸೋಂಕಿಗೆ ಹೆದರದೆ ಕೂಡಿದ ದುರ್ಗಣಕ್ಕುಂಟೆ ಪ್ರಾಯಶ್ಚಿತ್ತ ? ಇಂತಿವ ಕಂಡಲ್ಲಿ ಗುರುವಾದಡೂ ಬಿಡಬೇಕು, ಲಿಂಗವಾದಡೂ ಬಿಡಬೇಕು, ಜಂಗಮವಾದಡೂ ಬಿಡಬೇಕು ; ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವಾದಡೂ ಬಿಡಬೇಕು.
--------------
ಅಕ್ಕಮ್ಮ
ಕಾಳಾಂಧರವೆಂಬ ಕಾಳರಕ್ಕಸಿಯ ಬಸುರಲ್ಲಿ, ಒಬ್ಬ ಭಾಳಲೋಚನ ಹುಟ್ಟಿದ. ಆತ ಕಾಲಸಂಹಾರ, ಕಲ್ಪಿತನಾಶನ. ಆತ ಕಾಳಾಂಧರ ರಕ್ಕಸಿಯ ಕೊಂದ. ತಾಯ ಕೊಂದ ನೋವಿಲ್ಲ, ಹೆತ್ತ ತಾಯ ಕೊಂದ ಅನಾಚಾರಿ. ನಿಃಕಳಂಕ ಮಲ್ಲಿಕಾರ್ಜುನ, ಕಟ್ಟುಮೆಟ್ಟಿನವನಲ್ಲ.
--------------
ಮೋಳಿಗೆ ಮಾರಯ್ಯ
ಈರೇಳು ಭುವನವನೊಳಕೊಂಡ ಮಹಾಘನಲಿಂಗವು ಶಿವಭಕ್ತನ ಕರಸ್ಥಲದಾಲಯಕ್ಕೆ ಬಂದು, ಪೂಜೆಗೊಂಬ ಪರಿಯ ನೋಡ! ಅಪ್ರಮಾಣ-ಅಗೋಚರವಾದ ಲಿಂಗದಲ್ಲಿ ಸಂಗವ ಬಲ್ಲಾತನೆ ಸದಾಚಾರಸದ್ಭಕ್ತನು! ಹೀಂಗಲ್ಲದೆ ಹಣವಿನಾಸೆಗೆ ಹಂಗಿಗನಾಗಿ, ಜಿಹ್ವಾಲಂಪಟಕ್ಕೆ ಅನಾಚಾರದಲ್ಲಿ ಉದರವ ಹೊರದು ಬದುಕುವಂಥ ಭಂಡರು ಭಕ್ತರಾದವರುಂಟೆ ? ಹೇಳ! ಅಂಥ ಅನಾಚಾರಿ ಶಿವದ್ರೋಹಿಗಳ ಮುಖವ ನೋಡಲಾಗದು! ಅದೆಂತೆಂದಡೆ: ಕತ್ತೆ ಭಕ್ತನಾದಡೆ ಕಿಸುಕಳವ ತಿಂಬುದ ಮಾಣ್ಬುದೆ ? ಹಂದಿ ಭಕ್ತನಾದಡೆ ಹಡಿಕೆಯ ತಿಂಬುದ ಮಾಣ್ಬುದೆ ? ಬೆಕ್ಕು ಭಕ್ತನಾದಡೆ ಇಲಿಯ ತಿಂಬುದ ಮಾಣ್ಬುದೆ ? ಸುನಕಗೆ ಪಂಚಾಮೃತವ ನೀಡಲು ಅಡಗ ತಿಂಬುದ ಮಾಣ್ಬುದೆ ? ಇಂತೀ ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ ಮರಳಿ ತನ್ನ ಜಾತಿಯ ಕೂಡಿದಡೆ ಆ ಕತ್ತೆ-ಹಂದಿ-ಬೆಕ್ಕು-ಸುನಕಗಿಂದತ್ತತ್ತ ಕಡೆ ಕಾಣಿರೊ! ಹೊನ್ನಬೆಟ್ಟವನೇರಿ ಕಣ್ಣುಕಾಣದಿಪ್ಪಂತೆ, ಗಣಿಯನೇರಿದ ಡೊಂಬ ಮೈಮರದಿಪ್ಪಂತೆ, ಅಂಕವನೇರಿದ ಬಂಟ ಕೈಮರದಿಪ್ಪಂತೆ! ಇಂತಿವರು ಮಾಡುವ ಭಕ್ತಿಯೆಲ್ಲವು ನಡುನೀರೊಳು ಹೋಗುವ ಹರುಗೋಲು ಹೊಡಗೆಡದಂತಾಯಿತ್ತೆಂದಾತನಂಬಿಗರ ಚೌಡಯ್ಯನು!
--------------
ಅಂಬಿಗರ ಚೌಡಯ್ಯ
ತಲೆಯಿಲ್ಲದ ಪುರುಷನಿಗೆ ಕಾಲಿಲ್ಲದ ಸ್ತ್ರೀ. ಕುಲಗೇಡಿ ಗಂಡಗೆ ಅನಾಚಾರಿ ಹೆಂಡತಿ. ಇಬ್ಬರ ಸಂಗದಿಂದುತ್ಪತ್ಯವಿಲ್ಲದ ಒಂದು ಶಿಶುವು ಹುಟ್ಟಿ, ಒಡಹುಟ್ಟಿದ ಬಂಧುಗಳ ಕೊಂದು, ತಂದಿತಾಯಿಯ ಹತವ ಮಾಡಿ, ಸತ್ತವರ ನುಂಗಿ, ಬದುಕಿದವರ ಹೊತ್ತು ಇತ್ತ ಮರದು, ಅತ್ತ ಹರಿದು, ಸತ್ತು ಕಾಯಕವ ಮಾಡುತಿರ್ದುದು ಶಿಶು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಗುರು ಅನಾಚಾರಿ, ಲಿಂಗವು ನೇಮಸ್ಥ, ಜಂಗಮ ದುರಾಚಾರಿ ಇಂತೀ ತ್ರಿವಿಧ ಭೇದ. ಸ್ಥೂಲ ಸೂಕ್ಷ್ಮ ಕಾರಣ ಇಂತೀ ತನುತ್ರಯ ಕೂಡಿ, ತನುವಿಂಗೆ ಕುರುಹು, ಮನಕ್ಕೆ ಅರಿವು, ಅರಿವಿಂಗೆ ನಿಜದನೆಲೆ ಅಹನ್ನಕ್ಕ ಸೂತಕಸುಳುಹು ಕೆಡದು, ಸರ್ವವ ನೇತಿಗಳೆವ ಮಾತು ಬಿಡದು. ಇಂತೀ ತ್ರಿವಿಧದ ಭೇದವ ಭೇದಿಸಿ ನಿಂದಲ್ಲಿ ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನು ವಿರಳವಿಲ್ಲದ ಅವಿರಳಸಂಬಂಧಿ.
--------------
ಮೋಳಿಗೆ ಮಹಾದೇವಿ
ಪುಣ್ಯಕ್ಷೇತ್ರಯಾತ್ರೆ ಪುಣ್ಯತೀರ್ಥಸ್ನಾನವ ಮಾಡಬೇಕೆಂಬಿರಿ. ಮತ್ರ್ಯಲೋಕದ ಮಹಾಗಣಂಗಳು ನೀವು ಬಲ್ಲಾದರೆ ಪೇಳಿ, ಅರಿಯದಿದ್ದರೆ ಕೇಳಿರಯ್ಯ. ಶ್ರೀಗುರುಕಾರುಣ್ಯವ ಹಡದು ಲಿಂಗಾಂಗಸಂಬಂಧಿಯಾಗಿ ಸರ್ವಾಂಗಲಿಂಗಮಯವಾದ ಒಬ್ಬ ಶಿವಭಕ್ತನ ದರ್ಶನವಾದವರಿಗೆ ಅನಂತಕೋಟಿ ಪುಣ್ಯ ಫಲದೊರಕೊಂಬುವದು. ಅದೆಂತೆಂದೊಡೆ : ಆತನ ಮಂದಿರವೇ ಶಿವಲೋಕ. ಆತನ ಕಾಯವೇ ಸತ್ಯಲೋಕ. ಆತನ ಅಂಗದ ಮೇಲೆ ಇರುವ ಲಿಂಗವೇ ಅನಾದಿಪರಶಿವಲಿಂಗ, ಆತನ ಅಂಗಳವೇ ವಾರಣಾಸಿ. ಅಲ್ಲಿ ಮುನ್ನೂರಾ ಅರುವತ್ತುಕೋಟಿ ಕ್ಷೇತ್ರಂಗಳಿರುವವು. ಆತನ ಬಚ್ಚಲವೇ ಗಂಗಾತೀರ. ಅಲ್ಲಿ ಮುನ್ನೂರರುವತ್ತುಕೋಟಿ ತೀರ್ಥಂಗಳಿರ್ಪವು. ಇಂತಪ್ಪ ನಿರ್ಣಯವನು ಸ್ವಾನುಭಾವಗುರುಮುಖದಿಂ ತಿಳಿದು, ವಿಚಾರಿಸಿ ಕೊಳ್ಳಲರಿಯದೆ ತೀರ್ಥಕ್ಷೇತ್ರವೆಂದು ತಿರುಗುವ ವ್ರತಭ್ರಷ್ಟ ಅನಾಚಾರಿ ಮೂಳಹೊಲೆಯರಿಗೆ ನಾನೇನೆಂಬೆನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕೆರೆಯ ಕಟ್ಟಿಸುವವನೆ ಕರ್ಮಿ? ಅಗ್ರವನೆತ್ತಿಸುವವನೆ ಪಾತಕಿ? ಶಿವಾಲಯವ ಕಟ್ಟಿಸುವವನೆ ದ್ರೋಹಿ? ಗುರುಹಿರಿಯರ ಕಂಡರೆ ನಮಿಸಿದಾತನೆ ಚಾಂಡಾಲ ಸತ್ರಿಯಿಂದ ಶಿವಾರ್ಚನೆಯ ಮಾಡದಾತನೆ ಅನಾಚಾರಿ ಇಂತೀ ಐವರನೊಳಗೊಂಬನೆ? ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಮೂರು ಸ್ಥಲದ ಮೂಲವನರಿಯರು, ಪುಣ್ಯಪಾಪವೆಂಬ ವಿವರವನರಿಯರು. ಇಹಪರವನರಿಯದೆ ಚರ್ಮದ ಬೊಂಬೆಯ ಮೆಚ್ಚಿ ಉಚ್ಚೆಯ ಬಚ್ಚಲಲ್ಲಿ ಬಿದ್ದಿರ್ಪ ಕರ್ಮದ ಸುನಿಗಳನೆಂತು ದೇವರೆಂಬೆನಯ್ಯಾ ? ಹೊನ್ನು ವಸ್ತ್ರವ ಕೊಡುವವ[ನ] ಬಾಗಿಲ ಕಾಯ್ವ ಪಶುಪ್ರಾಣಿಗಳಿಗೆ ದೇವರೆನ್ನಬಹುದೇನಯ್ಯಾ ? ಜಗದ ಕರ್ತನಂತೆ ವೇಷವ ಧರಿಸಿಕೊಂಡು ಸರ್ವವನು ಬೇಡಲಿಕೆ ಕೊಟ್ಟರೆ ಒಳ್ಳಿದನು, ಕೊಡದೆ ಇದ್ದರೆ ಪಾಪಿ, ಚಾಂಡಾಲ, ಅನಾಚಾರಿ ಎಂದು ದೂಷಿಸಿ ಒಳಹೊರಗೆಂದು ಬೊಗಳುವ ಮೂಳಮಾನವರಿಗೆ ಮಹಾಂತಿನ ಆಚರಣೆ ಎಲ್ಲಿಯದೊ ? ಇಲ್ಲವೆಂದಾತ ನಮ್ಮಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಅಯ್ಯಾ ಪಾದಪೂಜೆಯೆಂಬುದು ಅಗಮ್ಯ ಅಗೋಚರ ಅಪ್ರಮಾಣ ಅಸಾಧ್ಯ. ಶ್ರೀಗುರು ಬಸವೇಶ್ವರದೇವರು ತಮ್ಮ ಅಂತರಂಗದೊಳಗಣ ಪಾದಪೂಜೆಯಿಂದಾದ ತೀರ್ಥಪ್ರಸಾದವ `ಗಣಸಮೂಹಕ್ಕೆ ಸಲ್ಲಲಿ' ಎಂದು ನಿರ್ಮಿಸಿ, ಭಕ್ತಿಯ ತೊಟ್ಟು ಮೆರೆದರು. ಇಂತಪ್ಪ ತೀರ್ಥಪ್ರಸಾದವ ಸೇವಿಸುವ ಕ್ರಮವೆಂತೆಂದಡೆ; ಗ್ರಾಮಸೇವಾದಿಸಂರಂಭನೃತ್ಯಗೀತಾದಿ ವರ್ಜಿತಃ ಅನಾಚಾರವಿಹೀನೋ ಯೋ ತಸ್ಯ ತೀರ್ಥಂ ಪಿಬೇತ್ ಸದಾ ಇಂತೆಂದುದಾಗಿ, ತಂಬೂರಿ ಕಿನ್ನರಿವಿಡಿದು ಮನೆಮನೆಯ ಬೇಡುವಾತ ಹಲವು ವೇಷವ ತೊಟ್ಟು ಆಡುವಾತ, ನಗಾರಿ ಸಮ್ಮೇಳ ಕರಣೆ ಕಹಳೆ ಶಂಖ ಬಾರಿಸುವಾತ ಅಷ್ಟಾವರಣ ಪಂಚಾಚಾರದಲ್ಲಿ ಅಹಂಕರಿಸುವಾತ ಅನಾಚಾರಿ. ಪರ್ವತದ ಕಂಬಿ ಮಹಾಧ್ವಜವ ಹೊರುವಾತ ರಾಜಾರ್ಥದಲ್ಲಿ ಅಹುದ ಅಲ್ಲವ ಮಾಡಿ, ಅಲ್ಲವ ಅಹುದ ಮಾಡುವಾತ ಅನಾಚಾರವ ಹೇಳುವಾತ ಸದಾಚಾರದಲ್ಲಿ ತಪ್ಪುವಾತ ಭಕ್ತಗಣಂಗಳ ನಿಂದೆಯ ಮಾಡುವಾತ ಸದಾಚಾರಸದ್ಭಕ್ತಗಣಂಗಳ ಕಂಡಡೆ ಗರ್ವಿಸುವಾತ ಧಾನ್ಯ ಅರಿವೆ ಬೆಳ್ಳಿ ಬಂಗಾರಂಗಳ ಕ್ರಯವಿಕ್ರಯದಲ್ಲಿ ವಂಚಿಸುವಾತ ಗುರುಹಿರಿಯರಲ್ಲಿ ಹಾಸ್ಯರಹಸ್ಯವ ಮಾಡುವಾತ ಪರದೈವ ಪರಧನ ಪರಸ್ತ್ರೀ ಗಮಿಸುವಾತ ಸೂಳೆ ಬಸವಿಯರ ಗೃಹದಲ್ಲಿ ಇರುವಾತ ಆಚಾರಭ್ರಷ್ಟ ಮಾನಹೀನರ ಸಂಗವ ಮಾಡುವಾತ, ದುರುಳು ಮಂಕು. ಅವರ ಗುರುಲಿಂಗಜಂಗಮವೆಂದು ನುಡಿಯಲಾಗದು. ಅದೆಂತೆಂದಡೆ : ಖೇಟಕೋ ದಂಡಚಕ್ರಾಸಿಗದಾತೋಮರಧಾರಿಣಃ ಜಂಗಮಾ ನಾನುಮಂತವ್ಯಾಃ ಸ್ವೀಯಲಕ್ಷಣಸಂಯುತಾಃ ಆಶಾತೋ ವೇಷಧಾರೀ ಚ ವೇಷಸ್ಯ ಗ್ರಾಸತೋಷಕಃ ಗ್ರಾಸಶ್ಚ ದೋಷವಾಹೀ ಚ ಇತಿ ಭೇದೋ ವರಾನನೇ ಅನಾಚಾರವಿಭಾವೇನ ಸದಾಚಾರಂ ನ ವರ್ಜಯೇತ್ ಸದಾಚಾರೀ ಸುಭಕ್ತಾನಾಂ ಪಾದತೀರ್ಥಪ್ರಸಾದಕಃ ಮಹಾಭೋಗಿ ಮಹಾತ್ಯಾಗೀ ಲೋಲುಪೋ ವಿಷಯಾತುರಃ ಯಸ್ತ್ವಂಗವಿಹೀನಃ ಸ್ಯಾತ್ತಸ್ಯ (ಪಾದ) ತೀರ್ಥಂ[ನ]ಸೇವಯೇತ್ ಕುಷಿ*ೀ ಕರಣಹೀನಶ್ಚ ಬಧಿರಃ ಕಲಹಪ್ರಿಯಃ ವ್ಯಾಧಿಭಿಸ್ತ್ವಂಗಹೀನೈಶ್ಚತೈರ್ನ ವಾಸಂ ಚ ಕಾರಯೇತ್ ಇಂತೀ ದುರ್ಮಾರ್ಗ ನಡತೆಗಳಿಲ್ಲದೆ, ಅಯೋಗ್ಯವಾದ ಜಂಗಮವನುಳಿದು, ಯೋಗ್ಯಜಂಗಮವ ವಿಚಾರಿಸಿ ತನು ಮನ ಧನ ವಂಚನೆಯಿಲ್ಲದೆ ಸಮರ್ಪಿಸಿ ಅವರ ತೀರ್ಥಪ್ರಸಾದವ ಕೈಕೊಳ್ಳಬೇಕಲ್ಲದೆ ದುರ್ಮಾರ್ಗದಲ್ಲಿ ಆಚರಿಸುವಾತನಲ್ಲಿ ತ್ರಿಣೇತ್ರವಿದ್ದಡೆಯೂ ತೀರ್ಥಪ್ರಸಾದ ಉಪದೇಶವ ಕೊಳಲಾಗದು ಕಾಣಾ. ಕೂಡಲಚೆನ್ನಸಂಗಮದೇವ ಸಾಕ್ಷಿಯಾಗಿ ಗುರುವಚನವ ತಿಳಿದು ನೋಡಾ ಸಂಗನಬಸವಣ್ಣಾ.
--------------
ಚನ್ನಬಸವಣ್ಣ
ಪಾದಪೂಜೆಯೆಂಬುವುದು ಅಗಮ್ಯ-ಅಗೋಚರ- ಅಪ್ರಮಾಣ ! ಶ್ರೀಗುರುಬಸವೇಶ್ವರದೇವರು ತಮ್ಮ ಅಂತರಂಗದಲ್ಲಿರ್ದ ತೀರ್ಥಪ್ರಸಾದಮಂ ಗಣಸಮೂಹಕ್ಕೆ ಸಲ್ಲಲೆಂದು ನಿರ್ಮಿಸಿ ಭಕ್ತಿ ತೊಟ್ಟು ಮೆರದರು. ಇಂತಪ್ಪ ತೀರ್ಥಪ್ರಸಾದವ ಸೇವಿಸುವ ಕ್ರಮವೆಂತೆಂದಡೆ- ಗ್ರಾಮದ ಮಠದಯ್ಯ, ಮಠಪತಿ, ಓದಿಸುವ ಜಂಗಮ, ಹಾಡುವ ಜಂಗಮ, ಆಡುವ ಜಂಗಮ, ಬಾರಿಸುವ ಜಂಗಮ, ಅಗಹೀನ, ಅನಾಚಾರಿ, ಕಂಬಿಕಾರ, ಓಲೆಕಾರನಾಗಿಹ, ವಾದಿಸುವನು, ಗರ್ವಿಸುವವನು, ಅಹಂಕಾರಿ, ದಲ್ಲಾಲ, ವೈದಿಕ, ಧನಪಾಲ, ಉದ್ಯೋಗಿ, ನಾನಾ ವಿಚಾರವ ಹೊತ್ತು, ಕಾಣಿಕಿಗೆ ಒಡೆಯರಾಗಿ ಚೆಂಗಿತನದವರು, ಪರಿಹಾಸಕದವರು, ಮರುಳು ಮಂಕುತನ ಮಾಡುವ[ವರು], ಪಟ್ಟಾಧಿಪತಿಯೆಂದೆನಿಸಿ, ಚರಮೂರ್ತಿಯೆಂದೆನಿಸಿ, ವಿರಕ್ತರೆಂದೆನಿಸಿ, ನಾಸಿ, ತೊಂಬಾಕ, ಭಂಗಿ, ಮಾಜೂಮ, ಗಂಜಿ ಅರವಿ, ಅಪು ಹೊದಿಕೆ[ಯವರು], ಹಲ್ಲುಮುರುಕ, ಉದ್ದೇಶಹೀನ, ಬೆಚ್ಚಿದವ, ಚುಚ್ಚಿದವ, ಕಚ್ಚಿದವ, ಬೆಳ್ಳಿಬಂಗಾರ ಹಲ್ಲಣಿಸಿಕೊಂಡ ಭವಿಸಂಗ, ಕರ್ಣಹೀನ, ಮೂಕ, ನಪುಂಸಕ, ವೀರಣ್ಣ, ಬಸವಣ್ಣ, ಸ್ಥಾವರದೈವಂಗಳಿಗೆ ತೀರ್ಥಕುಡುವ, ಉಡಕಿ, ಸೋಹಿ ಬಯಲಾದ ಜಂಗಮಕ್ಕೆ ಕಟಕಟೆಯಿಟ್ಟು ಹಾವಿಗೆಯಿಟ್ಟು ಧೂಳತಿಟ್ಟು ಗೊರವನಂತೆ ಪೂಜೆ ಮಾಡಿಸುವ- ಇಂತಿಷ್ಟು ಅಜ್ಞಾನಿಜಂಗಮರಲ್ಲಿ ಪಾದೋದಕ ಪ್ರಸಾದವ ಕೊಳಲಾಗದು ! ಅಥವಾ ಕೊಂಡಡೆ ಕೊಟ್ಟಾತಂಗೆ ದೋಷ, ಕೊಂಡಾತಂಗೆ ಪಾಪ ! ತ್ರಿನೇತ್ರವಿರ್ದಡು ಕೊಳಲಾಗದು ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ನಿರಾಳ ನಿಶ್ಶೂನ್ಯ ಪರಮಜಂಗಮದರಿವು ತಾನಾಗದೆ, ಬರಿದೆ ಅಹಂಕಾರದಿಂದ ಮೂರು ಮಲಂಗಳ ಸ್ವೀಕರಿಸುತ್ತ ನಾವೆ ಜಂಗಮವೆಂದು ನುಡಿವ ಕರ್ಮ ಪಾಷಂಡಿಗಳು_ ಕಾಶಿ ಕೇದಾರ ಶ್ರೀಶೈಲ ವಿರೂಪಾಕ್ಷನೆಂದು, ಮತ್ತೆ ಈರಣ್ಣ ಮಲ್ಲಣ್ಣ ಬಸವಣ್ಣ ಇವರೇ ದೇವರೆಂದು ಆ ಕಲ್ಲುಗಳ ತಮ್ಮ ಮನೆಯೊಳಗೊಂದು ಮೂಲೆ ಸಂದಿ ಗೊಂದಿ ಗೊತ್ತಿನೊಳಗಿಟ್ಟು ಅದರ ಬಳಿದ [ತೊಳೆದ] ನೀರು, ಅವರೆಂಜಲ ತಿಂಬುವ ಪಶುಗಳಿಗೆ ದೇವಭಕ್ತರೆನಬಹುದೇನಯ್ಯಾ ? ಎನಲಾಗದು. ಇಂತಪ್ಪ ಅನಾಚಾರಿ ಅಪಸ್ಮಾರಿ ಶ್ವಪಚರ ಜಂಗಮವೆಂದು ಪೂಜಿಸಲಾಗದು ಕಾಣಿರೊ. ವೀರಶೈವ ಆಚಾರವುಳ್ಳ ಭಕ್ತನು ಇದ ಮೀರಿ ಪೂಜಿಸಿದಡೆ ಅವರಿಬ್ಬರಿಗೆಯೂ ಭವಕರ್ಮಂಗಳು ತಪ್ಪವು ಕಾಣಾ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಭಕ್ತನಾಚಾರ ಜಂಗಮಲಿಂಗಸನ್ನಿಹಿತ, ಜಂಗಮದಾಚಾರ ಲಿಂಗಜಂಗಮಸನ್ನಿಹಿತ, ಷಟ್ಕøಷಿ ಸತ್ಕಾಯಕವೇ ಮುಕ್ತಿಯ ಬೀಡು, ಭಕ್ತಂಗಾದರು ಸತ್ಕಾಯಕವೇಬೇಕು, ಜಂಗಮಕ್ಕಾದರೂ ಸತ್ಕಾಯಕವೇಬೇಕು. ಭಕ್ತಂಗಾಚರಣೆ, ಜಂಗಮಕ್ಕೆ ಸಂಬಂಧ. ಅದೆಂತೆಂದೊಡೆ, ಜ್ಞಾನೋದಯವಾದ ಮಹಾತ್ಮನು ಮಾಯಾನಿವೃತ್ತಿಯ ಮಾಡಿ ತನುಸಂಬಂಧ ಸದ್ಗುರು ಸಮ್ಮುಖೋಪಾವಸ್ತೆಯನೆಯಿದು ಕಂಡು, ತನುತ್ರಯವನಿತ್ತು ದೀಕ್ಷಾತ್ರಯಾನ್ವಿತನಾಗಿ ಬಂದು ಸರ್ವಾಚಾರಸಂಪತ್ತು ಶೋಭನಲೀಲೆಯ ನಟಿಸುವಲ್ಲಿ ಸ್ಥಲಸ್ಥಲಂಗಳ ತಾಮಸಸುಳುಹಿಂಗೆ ಸುಜ್ಞಾನಶಾಸ್ತ್ರವನು ಸುಚಿತ್ತದಲ್ಲಿ ಧರಿಸಿ ಸಾಕಾರ ಸುದ್ರವ್ಯಂಗಳನು ನಿರ್ವಂಚಕತ್ವ ತ್ರಿಕರಣ ಶುದ್ಭಾತ್ಮಕದಿಂದೆ ಸಗುಣಜಂಗಮಲಿಂಗಸನ್ನಿಹಿತ ಭೋಗೋಪಭೋಗಿಯಾಗಿಹುದೇ ಶ್ರದ್ಧಾಭಕ್ತನಾಚಾರವಯ್ಯಾ. ಆ ತದ್ಭಾವಸಮೇತ ನಿಜಲಿಂಗಜಂಗಮಸನ್ನಿಹಿತ ಭೋಗೋಪಭೋಗಿಯಾಗಿಹುದೇ ಆಚಾರಲಿಂಗ ಜಂಗಮದ ಸ್ಥಲ. ಇದು ಅಸಿಯೆಂಬ ವ್ಯಾಪಾರವಯ್ಯ. ಆಚಾರಂಗ, ವಿಚಾರ ಮನ, ಸಮಯಾಚಾರ ಭಾವವೆಂಬ ನಿರ್ಮಲಸುಕ್ಷೇತ್ರಂಕನಾಗಿ ಸಾವಧಾನಮುಖಸುಖಭಕ್ತಿಯಿಂದೆ ಸಾಕಾರಜಂಗಮಲಿಂಗಸನ್ನಿಹಿತ ಭೋಗೋಪಭೋಗಿಯಾಗಿಹುದೇ ಸಾವಧಾನ ಪ್ರಸಾದಿಭಕ್ತನಾಚಾರವಯ್ಯಾ. ತದ್ಭಾವಭರಿತನಾಗಿ ಸ್ವಯಂ ಲಿಂಗಜಂಗಮಸನ್ನಿಹಿತನಾಗಿಹುದೇ ಶಿವಲಿಂಗಜಂಗಮಸ್ಥಲ. ಇದು ಕೃಷಿಯೆಂಬ ವ್ಯಾಪಾರವಯ್ಯಾ. ಮತ್ತೆ ಸ್ಥಲಸ್ಥಲಂಗಳಲ್ಲಿ ಭೇದಾಭೇದ ಸದ್ವಿವೇಕಮುಖ ಲೇಖನ ಸ್ಥಾಪ್ಯ ನಿರ್ಮಲನಿಷ್ಟಾಂಗನಾಗಿ ವೀರಜಂಗಮಲಿಂಗಸನ್ನಿಹಿತ ಭೋಗೋಪಭೋಗಿಯಾಗಿಹುದೇ ನಿಷಾ*ಮಹೇಶ್ವರ ಭಕ್ತನಸ್ಥಲ. ಅಂತಪ್ಪ ನಿಷಾ*ಂಗಮಂತ್ರಮೂರ್ತಿಯಾಗಿ ನಿಜಲಿಂಗಜಂಗಮಭೋಗೋಪಭೋಗಿಯಾಗಿಹುದೇ ಗುರುಲಿಂಗಜಂಗಮಸ್ಥಲ. ಇದು ಮಸಿಯೆಂಬ ವ್ಯಾಪಾರವಯ್ಯಾ. ಮತ್ತೆ ಸ್ಥಲಸ್ಥಲಂಗಳಲ್ಲಿ ದಶವಾಯುವಿನ ದಂದುಗವನು ಸುಜ್ಞಾನಕ್ರಿಯಾಸಂಭಾಷಣೆಯಲ್ಲಡಗಿಸಿ ಅಷ್ಟ ಕುಶಬ್ದ ಬಾಹ್ಯಪ್ರಣವ ಪರಿಪೂರ್ಣನಾಗಿ ಅನುಭಾವಭಕ್ತಿಯಿಂದೆ, ಸತ್ಯಜಂಗಮಲಿಂಗಸನ್ನಿಹಿತ ಭೋಗೋಪಭೋಗಿಯಾಗಿಹುದೇ ಪ್ರಾಣಲಿಂಗಿಭಕ್ತನಸ್ಥಲ. ತದ್ಭಾವ ಪರಿಪೂರ್ಣನಾಗಿ ಅನುಭಾವ ಲಿಂಗಜಂಗಮ ಭೋಗೋಪಭೋಗಿಯಾಗಿಹುದೇ ಚರಲಿಂಗ ಜಂಗಮಸ್ಥಲ. ಇದು ವಾಣಿಜ್ಯತ್ವವೆಂಬ ವ್ಯಾಪಾರವಯ್ಯಾ. ಮತ್ತೆ ಸ್ಥಲಸ್ಥಲಂಗಳಲ್ಲಿ ಅವಿರಳತ್ವದಿಂದೆ ಏಕೋತ್ತರಶತ ಸಕೀಲ ಸರ್ವಕಲಾಭಿಜ್ಞತೆಯಾತ್ಮಕನಾಗಿ, ಚಿದೇಂದ್ರಿ ಚಿತ್ಕರಣ ಚಿದ್ವಿಷಯಾನಂದಪ್ರಸಾದಕ್ಕೆ ಸುಜ್ಞಾನದಿಂ ಕಾಮ್ಯಾಂಗನಾಗಿ ಜಂಗಮಲಿಂಗ ಭೋಗೋಪಭೋಗಿಯಾಗಿಹುದೇ ಶರಣ ಭಕ್ತನಾಚಾರವಯ್ಯ. ತದ್ಭಾವಾತ್ಮಕನಾಗಿ ಆ ವೀರ ಲಿಂಗಜಂಗಮ ಭೋಗೋಪಭೋಗಿಯಾಗಿಹುದೇ ಪ್ರಸಾದಲಿಂಗ ಜಂಗಮಸ್ಥಲ. ಇದು ಯಾಚಕತ್ವವೆಂಬ ವ್ಯಾಪಾರವಯ್ಯಾ. ಸ್ಥಲಸ್ಥಲಂಗಳಲ್ಲಿ ಅಹಂಭಾವವಳಿದು ಸೋಹಂಭಾವವನುಳಿದು, ದಾಸೋಹಂಭಾವಭರಿತನಾಗಿ ತನುಮನಧನದ ಮಾಟ ನೋಟ ಕೂಟ ಶೂನ್ಯನಾಗಿ ಘನಜಂಗಮಲಿಂಗಸನ್ನಿಹಿತ ಭೋಗೋಪಭೋಗಿಯಾಗಿಹುದೇ ಐಕ್ಯಸ್ಥಲದಾಚಾರವಯ್ಯಾ. ತದ್ಭಾವಪೂರ್ಣನಾಗಿ ಸರ್ವಶೂನ್ಯತ್ವದಿಂದೆ ನಿರಾಮಯಲಿಂಗಜಂಗಮ ಭೋಗೋಪಭೋಗಿಯಾಗಿಹುದೇ ಮಹಾಲಿಂಗಜಂಗಮಸ್ಥಲ. ಇದು ಗೋಪಾಲತ್ವವೆಂಬ ವ್ಯಾಪಾರವಯ್ಯಾ. ಈ ಭೇದವನರಿಯದೆ ಭಕ್ತನೆನಿಸಿ ವರ್ತಿಸುವ ಪ್ರಾಣಿ ಅನಾಚಾರಿ. ಈ ಭೇದವನರಿಯದೆ ಕಾಯ ಕಂದಿಸಿ ಮನವ ಸಂಸಾರಕ್ಕಿಕ್ಕಿ ಭಾವ ಭ್ರಾಂತಿಗೊಂಡು ಮಾಟಕೂಟವ ಹೊತ್ತು ತಿರುಗುವ ಪ್ರಾಣಿ ಅಜ್ಞಾನಿ. ಈ ಉಭಯವನರಿಯದೆ ಸಂಬಂಧವನು ಅಸಂಬಂಧವÀ ಮಾಡಿ, ಅಸಂಬಂಧವನು ಸಂಬಂಧವ ಮಾಡಿಕೊಟ್ಟು ಹಿರಿಯನೆನಿಸುವವ ಮೂಢಪ್ರಾಣಿ. ಇದು ಕಾರಣ ಈ ಅನಾಚಾರಿ ಅಜ್ಞಾನಿ ಮೂಢ ಪ್ರಾಣಿಗಳ ನೋಡಿ ನಗುತಿರ್ದರು ಕಾಣಾ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣರು.
--------------
ದೇಶಿಕೇಂದ್ರ ಸಂಗನಬಸವಯ್ಯ
ಕೆಸರಲ್ಲಿ ತಾವರೆ ಹುಟ್ಟಿ ದೇವರ ಮಂಡೆಯಲ್ಲಿರದೆ ? ಉಚ್ಛಿಷ್ಟದಲ್ಲಿ, ಜಲಮಲಾದಿಗಳಲ್ಲಿ, ಸಮಸ್ತಜಗದಲ್ಲಿ, ಸೂರ್ಯನ ಪ್ರಭೆ ಇದ್ದಡೇನು ಅಲ್ಲಿ ಅದು ಸಿಕ್ಕಿಹುದೆ ? ಹೊಲೆಹದಿನೆಂಟು ಜಾತಿ ನೂರೊಂದು ಕುಲದಲ್ಲಿ ಶರಣನು ಹುಟ್ಟಿದಡೆ, ಆ ಜಾತಿ-ಕುಲದಂತಿರಬಲ್ಲನೆ ? ಸಾಕ್ಷಾತ್ ಪರಬ್ರಹ್ಮವೆ ಇಹ [ಲೋಕದಲ್ಲಿ] ಸಂಸಾರಿಯಾಗಿ ಬಂದನೆಂದರಿವುದು. ಬಹಿರಂಗದಲ್ಲಿ ಕ್ರಿಯಾರಚನೆ, ಅಂತರಂಗದಲ್ಲಿ ಅರುಹಿನ ಸ್ವಾನುಭಾವಸಿದ್ಧಾಂತ ಪರಿಪೂರ್ಣ ಶರಣನ, ಈ ಮತ್ರ್ಯದ ನರಕಿ ಪ್ರಾಣಿಗಳು ಜರಿವರು. ಕ್ರಿಯಾಚಾರವಿಲ್ಲದೆ, ಅರುಹಿನ ನೆಲೆಯನರಿಯದೆ, ನಾನೇ ದೇವರೆಂದು ಅಹಂಕರಿಸಿಕೊಂಡಿಪ್ಪ ಅನಾಚಾರಿ ಹೊಲೆಯರಿಗೆ ಅಘೋರನರಕ ತಪ್ಪದು ಕಾಣಾ, ಕೂಡಲಚೆನ್ನಸಂಗಮದೇವರಲ್ಲಿ ಬಸವೇಶ್ವರದೇವರು ಸಾಕ್ಷಿಯಾಗಿ.
--------------
ಚನ್ನಬಸವಣ್ಣ
ಜಾತಿಬ್ರಾಹ್ಮಣಂಗೆ ಕರಸ್ಥಲದಲ್ಲಿ ಲಿಂಗ, ಉರಸ್ಥಲದಲ್ಲಿ ರುದ್ರಾಕ್ಷಿಮಾಲೆ, ಉಪನಯನ ನೊಸಲಕಣ್ಣು, ಕಾಯ ಧೋತ್ರ, ಗಾಯತ್ರಿಮಂತ್ರ ಪುರುಷಪ್ರಮಾಣ ದಂಡ, `ಭವತಿಭಿಕ್ಷಾಂದೇಹಿ'ಯೆಂದು ಪರಬ್ರಹ್ಮವನಾಚರಿಸಿಕೊಂಡಿಪ್ಪಾತನೆ ಬ್ರಾಹ್ಮಣ. ಇಂತಲ್ಲದೆ ಮಿಕ್ಕವರೆಲ್ಲ ಶಾಪಹತ ವಿಪ್ರರು ನೀವು ಕೇಳಿರೊ. ಕೃತಯುಗ ಮೂವತ್ನಾಲ್ಕು ಲಕ್ಷದ ಐವತ್ಮೂರು ಸಾವಿರ ವರುಷಂಗಳಲ್ಲಿ ಗಜಾಸುರನೆಂಬ ಆನೆಯ ಕೊಂದು ಹೋಮಕ್ಕಿಕ್ಕಿ ಮಾಂಸವ ತಿನ್ನಹೇಳಿತ್ತೇ ವೇದರಿ ಅಹುದು ತಿನ್ನ ಹೇಳಿತ್ತು. ಅದೆಂತೆಂದಡೆ: ಕುಲ ಚಲ ಯೌವನ ರೂಪು ವಿದ್ಯಾ ರಾಜ್ಯ ತಪವೆಂಬ ಅಷ್ಟಮದಂಗಳ ಕೊಲ್ಲ ಹೇಳಿತ್ತಲ್ಲದೆ ಆನೆಯ ತಿಂಬ ಹೀನ ಹೊಲೆಯರ ಮುಖವ ನೋಡಲಾಗದು. ತ್ರೇತಾಯುಗದ ಹದಿನೇಳು ಲಕ್ಷದ ಇಪ್ಪತ್ತೆಂಟು ಸಾವಿರ ವರುಷಂಗಳಲ್ಲಿ ಅಶ್ವನೆಂಬ ಕುದುರೆಯ ಕೊಂದು ಹೋಮಕ್ಕಿಕ್ಕಿ ಮಾಂಸವ ತಿನ್ನಹೇಳಿತ್ತೇ ವೇದ? ಅಹುದು ತಿನ್ನಹೇಳಿತ್ತು ವೇದ. ಅದೆಂತೆಂದಡೆ: ಪ್ರಾಣ ವ್ಯಾನ ಅಪಾನ ಉದಾನ ಸಮಾನ ನಾಗ ಕೂರ್ಮ ಕೃಕರ ದೇವದತ್ತ ಧನಂಜಯವೆಂಬ ಕುದುರೆಯ ತಿಂಬ ತಿನ್ನ ಹೇಳಿತ್ತಲ್ಲದೆ, ಕುದುರೆಯ ತಿಂಬ ಜಿನುಗು ಹೊಲೆಯರ ಮುಖವಂ ನೋಡಲಾಗದು. ದ್ವಾಪರ ಎಂಟು ಲಕ್ಷದ ಐವತ್ಕಾಲ್ಕು ಸಾವಿರ ವರುಷಂಗಳಲ್ಲಿ ಮಹಿಷಾಸುರನೆಂಬ ಕೋಣನ ಕೊಂದು ಹೋಮಕ್ಕಿಕ್ಕಿ ಮಾಂಸವ ತಿನ್ನ ಹೇಳಿತ್ತೇ ವೇದ? ಅಹುದು ತಿನ್ನ ಹೇಳಿತ್ತು. ಅದೆಂತೆಂದಡೆ: ಜಾತಿ ವರ್ಣ ಆಶ್ರಮ ಕುಲಗೋತ್ರ ನಾಮವೆಂಬ ಕೋಣನ ಕೊಲ್ಲ ಹೇಳಿತ್ತಲ್ಲದೆ, ಕೋಣನ ತಿಂಬ ಕುನ್ನಿ ಹೊಲೆಯರ ಮುಖವ ನೋಡಲಾಗದು. ಕಲಿಯುಗದ ನಾಲ್ಕು ಲಕ್ಷ ಮೂವತ್ತೆರಡು ಸಾವಿರ ವರುಷಂಗಳಲ್ಲಿ ಮಾಂಸವ ತಿನ್ನ ಹೇಳಿತ್ತೇ ವೇದ? ಅಹುದು ತಿನ್ನ ಹೇಳಿತ್ತು, ಅದೆಂತೆಂದಡೆ, ಮನ ಬುದ್ಧಿ ಚಿತ್ತ ಅಹಂಕಾರವೆಂಬ ಹೋತನ ಕೊಲ್ಲ ಹೇಳಿತ್ತಲ್ಲದೆ, ಹೋತನ ಕೊಂದು ತಿಂಬ ಹೊಲೆಯರ ಮುಖವ ನೋಡಲಾಗದು. ಇಂತೀ ನಾಲ್ಕು ಯುಗದಲ್ಲಿ ಮಾಂಸವ ತಿಂಬ ಅನಾಚಾರಿ ಹೊಲೆಯರ ಮುಖವಂ ನೋಡಲಾಗದು ಅಜಂಗೆ ದ್ವಿಜನೆ ಗುರು, ದ್ವಿಜಂಗೆ ಹರಿಯೆ ಗುರು. ಹರಿ ಹರಿಣಾವತಾರವಾದಲ್ಲಿ ಎರಳೆಯ ತಿಂಬುದಾವಾಚಾರ? ಹರಿ ಮತ್ಸ್ಯಾವತಾರವಾದಲ್ಲಿ ಮೀನ ತಿಂಬುದಾವಾಚಾರ? ಇಂತೀ ಹೊನ್ನಗೋವ ತಿಂಬ ಕುನ್ನಿಗಳ ತೋರದಿರಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಇನ್ನಷ್ಟು ... -->