ಅಥವಾ

ಒಟ್ಟು 17 ಕಡೆಗಳಲ್ಲಿ , 10 ವಚನಕಾರರು , 16 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಹಜದಿಂದ ನಿರಾಲಂಬವಾಯಿತ್ತು, ನಿರಾಲಂಬದಿಂದ ನಿರಾಳವಾಯಿತ್ತು. ನಿರಾಳದಿಂದ ನಿರವಯವಾಯಿತ್ತು, ನಿರವಯದಿಂದ ಅನಾದಿಯಾಗಿತ್ತು. ಅನಾದಿಯಲ್ಲಿ ಮೂರ್ತಿಯಾದನೊಬ್ಬ ಶರಣ. ಆ ಶರಣನ ಮೂರ್ತಿಯಿಂದ ಸದಾಶಿವನಾದ, ಆ ಸದಾಶಿವನ ಮೂರ್ತಿಯಿಂದ ಶಿವನಾದ, ಆ ಶಿವನ ಮೂರ್ತಿಯಿಂದ ರುದ್ರನಾದ, ಆ ರುದ್ರನ ಮೂರ್ತಿಯಿಂದ ವಿಷ್ಣುವಾದ. ಆ ವಿಷ್ಣುವಿನ ಮೂರ್ತಿಯಿಂದ ಬ್ರಹ್ಮನಾದ. ಆ ಬ್ರಹ್ಮನ ಮೂರ್ತಿಯಿಂದಾದವು ಸಕಲ ಜಗತ್ತುಗಳೆಲ್ಲಾ_ ಇವರೆಲ್ಲ ನಮ್ಮ ಗುಹೇಶ್ವರನ ಕರಸ್ಥಲದ ಹಂಗಿನಲ್ಲಿ ಹುಟ್ಟಿ ಬೆಳೆದರು
--------------
ಅಲ್ಲಮಪ್ರಭುದೇವರು
ಆದಿಯಲ್ಲಿ ಹುಟ್ಟಿತ್ತಲ್ಲ, ಅನಾದಿಯಲ್ಲಿ ಬೆಳೆಯಿತ್ತಲ್ಲ; ಮೂರ್ತಿಯಲ್ಲಿ ನಿಂದುದಲ್ಲ, ಅಮೂರ್ತಿಯಲ್ಲಿ ಭಾವಿಯಲ್ಲ; ಅರಿವಿನೊಳಗೆ ಅರಿದುದಲ್ಲ, ಮರಹಿನೊಳಗೆ ಮರೆದುದಿಲ್ಲ; ಎಂತಿರ್ದಡಂತೆ ಬ್ರಹ್ಮ ನೋಡಾ ! ಮನ ಮನ ಲೀಯವಾಗಿ ಘನ ಘನ ಒಂದಾದಡೆ ಮತ್ತೆ ಮನಕ್ಕೆ ವಿಸ್ಮಯವೇನು ಹೇಳಾ ? ಕೂಡಲಚೆನ್ನಸಂಗನ ಶರಣರು ಕಾಯವೆಂಬ ಕಂಥೆಯ ಕಳೆಯದೆ ಬಯಲಾದಡೆ ನಿಜವೆಂದು ಪರಿಣಾಮಿಸಬೇಕಲ್ಲದೆ ಅಂತಿಂತೆನಲುಂಟೆ ಸಂಗನಬಸವಣ್ಣಾ ?
--------------
ಚನ್ನಬಸವಣ್ಣ
ಆದಿಯಲ್ಲಿ ಪಿಂಡ ಅನಾದಿಯಲ್ಲಿ ಪ್ರಾಣ ಎರಡನು ಸದ್ಗುರುಸ್ವಾಮಿ ಏಕಾರ್ಥವ ಮಾಡಿದಲ್ಲಿ ಪಿಂಡದಲ್ಲಿ ಲಿಂಗಸಾಹಿತ್ಯ ಪ್ರಾಣದಲ್ಲಿ ಜಂಗಮಸಾಹಿತ್ಯ ಈ ಎರಡರ ಏಕಾರ್ಥದ ಕೊನೆಯ ಮೊನೆಯ ಮೇಲೆ ಪ್ರಸಾದಸಾಹಿತ್ಯ ಪ್ರಾಣಲಿಂಗಪ್ರಸಾದವಿರಹಿತನಾಗಿ ಓಗರ ಪ್ರಸಾದವೆಂದು ಕೊಂಡರೆ ಕಿಲ್ಬಿಷ ಕೂಡಲಚೆನ್ನಸಂಗಮದೇವ ಹುಳುಗೊಂಡದಲ್ಲಿಕ್ಕುವ.
--------------
ಚನ್ನಬಸವಣ್ಣ
ಹೃದಯದೊಳಗಿಪ್ಪ ಪ್ರಾಣಲಿಂಗವನು ಸದಮಲ ಬೆಳಗಿನೊಳು ತಂದು ಅನಾದಿಯಲ್ಲಿ ನಿಂದು ಸಾಧಿಸಿ ಭೇದಿಸಿ ತಾನುತಾನಾಗಿಪ್ಪ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಎಲೆ ಕರುಣಿ, ಜನನಿಯ ಜಠರಕ್ಕೆ ತರಬೇಡವಯ್ಯ. ತಂದರೆ ಮುಂದೆ ತಾಪತ್ರಯಕ್ಕೊಳಗಾದ ತರಳೆಯ ದುಃಖದ ಬಿನ್ನಪವ ಕೇಳಯ್ಯ. ಆಚಾರಲಿಂಗಸ್ವರೂಪವಾದ ಘ್ರಾಣ, ಗುರುಲಿಂಗಸ್ವರೂಪವಾದ ಜಿಹ್ವೆ, ಶಿವಲಿಂಗಸ್ವರೂಪವಾದ ನೇತ್ರ, ಜಂಗಮಲಿಂಗಸ್ವರೂಪವಾದ ತ್ವಕ್ಕು, ಪ್ರಸಾದಲಿಂಗಸ್ವರೂಪವಾದ ಶ್ರೋತ್ರ, ಮಹಾಲಿಂಗಸ್ವರೂಪವಾದ ಪ್ರಾಣ, ಪಂಚಬ್ರಹ್ಮ ಸ್ವರೂಪವಾದ ತನು, ಇಂತಿವೆಲ್ಲವು ಕೂಡಿ ಪರಬ್ರಹ್ಮಸ್ವರೂಪ ತಾನೆಯಾಗಿ, ಆನೆಯ ರೂಪತಾಳಿ ಕೇರಿಯ ನುಸುಳುವ ಹಂದಿಯಂತೆ, ಮೆಟ್ಟುಗುಳಿಯೊತ್ತಿನ ಉಚ್ಚೆಯ ಬಚ್ಚಲೆಂಬ ಹೆಬ್ಬಾಗಿಲ ದಿಡ್ಡಿಯಲ್ಲಿ, ಎಂತು ನುಸುಳುವೆನಯ್ಯ?. ಹೇಸಿ ಹೇಡಿಗೊಂಡೆನಯ್ಯ, ನೊಂದೆನಯ್ಯ, ಬೆಂದೆನಯ್ಯ. ಬೇಗೆವರಿದು ನಿಂದುರಿದೆನಯ್ಯ. ಎನ್ನ ಮೊರೆಯ ಕೇಳಯ್ಯ ಮಹಾಲಿಂಗವೇ. ಎನ್ನ ಭವಕ್ಕೆ ನೂಂಕಬೇಡಯ್ಯ. ನಾನು ಅನಾದಿಯಲ್ಲಿ ಭೋಗಕ್ಕಾಸೆಯ ಮಾಡಿದ ಫಲದಿಂದ, ಅಂದಿಂದ ಇಂದು ಪರಿಯಂತರ ನಾನಾ ಯೋನಿಯಲ್ಲಿ ಬಂದು, ನಾಯಿಯುಣ್ಣದ ಓಡಿನಲ್ಲಿ ಉಂಡು, ನರಗೋಟಲೆಗೊಂಡೆನಯ್ಯ. ಎನಗೆ ಹೊನ್ನು ಬೇಡ, ಹೆಣ್ಣು ಬೇಡ, ಮಣ್ಣು ಬೇಡ, ಫಲವು ಬೇಡ, ಪದವು ಬೇಡ ನಿಮ್ಮ ಶ್ರೀಪಾದವನೊಡಗೂಡಲೂಬೇಡ, ಎನಗೆ ಪುರುಷಾಕಾರವೂ ಬೇಡವಯ್ಯ. ಎನ್ನ ಮನ ಒಪ್ಪಿ, ಪಂಚೈವರು ಸಾಕ್ಷಿಯಾಗಿ, ನುಡಿಯುತ್ತಿಪ್ಪೆನಯ್ಯಾ. ನಿಮ್ಮಾಣೆ, ಎನಗೊಂದ ಕರುಣಿಸಯ್ಯ ತಂದೆ, ಡೋಹರ ಕಕ್ಕಯ್ಯ, ಮಾದಾರ ಚೆನ್ನಯ್ಯ, ಅಂಬಿಗರ ಚೌಡಯ್ಯ ಇಂತಪ್ಪ ಶಿವಶರಣರ ಮನೆಯ ಬಾಗಿಲ ಕಾವ ಶುನಕನ ಮಾಡಿ ಎನ್ನ ನೀ ನಿಲಿಸಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಭೂತಭವಿಷ್ಯದ್ವರ್ತಮಾನಕ್ಕೆ ಮುನ್ನವೆ ಅನಾದಿಯಲ್ಲಿ ಆದ ಜಿನೇಶ್ವರನೆಂದಿದ್ದೆ. ಆದಿ ನಾರಾಯಣನ ಅವತಾರ ತ್ರಿಪುರಸಂಹಾರದಿಂದೀಚೆ. ಆದ ಕುಟಿಲ ನಾಮದಿಂದ ದ್ವಾದಶ ಸಹಸ್ರ ಶ್ರುತಿ ಕುಟಿಲವಂ ಮಾಡಿ, ತ್ರಿಪುರ ನಿಲಬೇಕೆಂಬುದಕ್ಕೆ ಮೊದಲೆ, ಅಸತ್ಯ ಗೆಲಬೇಕೆಂಬುದಕ್ಕೆ [ಮೊದಲೆ], ಶಿವನಿಲ್ಲಾ ಎಂದು ನುಡಿಯಲಾ ಸೊಲ್ಲಿಂಗೆ ಎಲ್ಲರೂ ಕಲಿತು ಗೆಲ್ಲ ಸೋಲಕ್ಕೆ ಹೋರಿ, ಬಲ್ಲತನವಿಲ್ಲದೆ ಬಸದಿಯ ನಿಳಯವಂ ಪೊಕ್ಕು, ಹಿಸಿದಲೆಯಲ್ಲಿ ಗಸಣಿಗೊಳಲಾರದೆ, ನಿಶಿತಮಯ ಕರ್ಮ ಘಟದೂರ ಕುಟಿಲಹರ ಸ್ಫಟಿಕ ಘಟದಂತಿಪ್ಪ ವರ್ಣಭೇದ ನೀನೆ, ಎನ್ನ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಆದಿಯನರಿದ ಮತ್ತೆ ಅನಾದಿಯಲ್ಲಿ ನಡೆವ ಪ್ರಪಂಚೇಕೆ? ಅನಾಗತವನರಿದ ಮತ್ತೆ ಅನ್ಯಾಯದಲ್ಲಿ ನಡೆವ ಗನ್ನವೇಕೆ? ಇಹಪರವೆಂಬುಭಯವನರಿದ ಮತ್ತೆ ಪರರ ಬೋಧಿಸಿ ಹಿರಿಯನಾದೆಹೆನೆಂಬ ಹೊರೆಯೇತಕ್ಕೆ? ಯೋಗಿಯಾದ ಮತ್ತೆ ರೋಗದಲ್ಲಿ ನೋಯಲೇತಕ್ಕೆ? ಆದಿಮಧ್ಯಾಂತರವನರಿದ ಮತ್ತೆ ಸಾಯಸವೇಕೆ ಕರ್ಮದಲ್ಲಿ? ಇಂತೀ ಭೇದಕರಿಗೆ ಅಭೇದ್ಯ, ಅಪ್ರಮಾಣ ಅಭಿನ್ನವಾದ ಶರಣಂಗೆ ನಮೋ ನಮೋ ಎಂದು ಬದುಕಿದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಊರಿಗೆ ಹೋಹಾತ ದಾರಿಯ ಭಯಂಗಳನರಿದು ಆರೈಕೆಯಿಂದ ಹೋಗಬೇಕು. ಕುರಿತ ಕುರುಹ ಹಿಡಿವನ್ನಕ್ಕ ಭೇದ ವಿವರವ ಸೋಧಿಸಬೇಕು. ಸೋಧಿಸಿ ಸ್ವಸ್ಥವಾಗಿ ನಿಜನಿಂದಲ್ಲಿ ಉಭಯದ ಕುರುಹು ಅನಾದಿಯಲ್ಲಿ ಅಡಗಿತ್ತು. ಅಡಗಿದ ಮತ್ತೆ ವೀರಶೂರ ರಾಮೇಶ್ವರಲಿಂಗವ ಕುರುಹಿಡಲಿಲ್ಲ.
--------------
ಬಾಲಬೊಮ್ಮಣ್ಣ
ಆದಿಯಲ್ಲಿ ಸಾಧ್ಯವೆಂಬೆನೆ ಅಲ್ಲಿಂದತ್ತತ್ತ, ಅನಾದಿಯಲ್ಲಿ ಸಾಧ್ಯವೆಂಬೆನೆ ಅಲ್ಲಿಂದತ್ತತ್ತ, ಸಾಧ್ಯಾಸಾಧ್ಯವೆಂಬ ಸೂತಕ ಶಬ್ದಕ್ಕತೀತ. ಆ ಲಿಂಗವೆ ಆಲಿಂಗನವಾಗಿ ಅವಿರಳ ಸಂಪನ್ನನಾದಲ್ಲಿ, ಭೇದಭಾವವುಂಟೆಂಬೆನೆ ಅದೆ ಭವಕ್ಕೆ ಬೀಜ. ಎನ್ನ ಪ್ರಾಣಲಿಂಗ ನೀವೆಂದೆ ಇಪ್ಪೆನಯ್ಯಾ ಕೂಡಲಸಂಗಮದೇವಾ.
--------------
ಬಸವಣ್ಣ
ಈ ರಚನೆಯೆಂಬುದು ಇಮ್ಮಡಿ ಮುಮ್ಮಡಿಯಿಂದಲ್ಲದೆ ಒಮ್ಮಡಿಯಿಂದಾಗದು. ಆದಿಯಲ್ಲಿ ಬ್ರಹ್ಮ, ಅನಾದಿಯಲ್ಲಿ ಏನೆಂಬುದಿಲ್ಲ. ಇತ್ತಲದು ಮಾಯಾಶಕ್ತಿಯಿಂ ಮಾಧವನ ಉತ್ಪತ್ತಿ; ಮಾಧವನ ಉತ್ಪತ್ತಿಯಂ ಮೂಲೋಕ ನಿಮಿರಿತ್ತು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಆದಿಯಿಂದ ನಿಮ್ಮಿಂದಲಾನಾದೆನಯ್ಯಾ. ಅನಾದಿಯಲ್ಲಿ ನಿಮ್ಮಲ್ಲಿ ತದ್ಗತನಾಗಿರ್ದೆನಯ್ಯಾ. ನಿಮ್ಮ ಹಸ್ತ ಮುಟ್ಟಿದಲ್ಲಿ, ನಿಮ್ಮನೆನ್ನ ಮನದೊಳಗಿಟ್ಟುಕೊಂಡಿರ್ದೆನಯ್ಯಾ. ಕಾಯವೆಂಬ ಕಪಟವನೊಡ್ಡಿ ನಿಮ್ಮ ಮರಸಿಕೊಂಡಿರ್ದಡೆ, ನಿಮ್ಮ ಬೆಂಬಳಿಯ ಸಂದು ನಿಮ್ಮ ಕಂಡೆನಯ್ಯಾ. ಕಪಿಲಸಿದ್ಧಮಲ್ಲಿನಾಥಯ್ಯಾ, ಎನ್ನಂತರಂಗವ ಶುದ್ಧವ ಮಾಡಿ ತಿಳುಹಾ, ನಿಮ್ಮ ಧರ್ಮ.
--------------
ಸಿದ್ಧರಾಮೇಶ್ವರ
ಅಯ್ಯಾ ಬಸವಾದಿ ಪ್ರಮಥರೇ ನಿಮ್ಮ ಕರುಣಪ್ರಸಾದವ ನಾನು ಆದಿ ಅನಾದಿಯಲ್ಲಿ ದಣಿಯಲುಂಡ ದೆಸೆಯಿಂದಲೆನ್ನ ತನು ಷಟ್ಸ ್ಥಲವನೊಳಕೊಂಡು ಉದಯವಾಯಿತ್ತು. ಎನ್ನ ಪಾದ ಷಟ್‍ಸ್ಥಲಕ್ಕೆ ಒಪ್ಪವಿಟ್ಟಲ್ಲದೆ ಅಡಿಯಿಡದು. ಎನ್ನ ಹಸ್ತ ಷಟ್‍ಸ್ಥಲಪತಿಯನಲ್ಲದೆ ಪೂಜೆಯ ಮಾಡದು. ಎನ್ನ ಘ್ರಾಣ ಮೊದಲು ಶ್ರೋತ್ರ ಕಡೆಯಾದ ಪಂಚೇಂದ್ರಿಯಂಗಳು ಷಟ್ಸ ್ಥಲವನಲ್ಲದೆ ಆಚರಿಸವು. ಎನ್ನ ಮನ ಷಟ್ಸ ್ಥಲದ ಷಡ್ವಿಧಲಿಂಗಂಗಳ ಮೇಲಲ್ಲದೆ ಹರುಷಗೊಂಡು ಹರಿದಾಡದು. ಎನ್ನ ಪ್ರಾಣ ಷಟ್‍ಸ್ಥಲಕ್ಕೆ ಸಲೆ ಸಂದ ಅಕ್ಕಮಹಾದೇವಿಯವರು ಹೋದ ಬಟ್ಟೆಯಲ್ಲಿ ನಡೆಯುವುದಲ್ಲದೆ ಕಿರುಬಟ್ಟೆಯಲ್ಲಿ ನಡೆಯದು. ಇಂತಿವೆಲ್ಲವು ಷಟ್ಸ ್ಥಲವನಪ್ಪಿ ಅವಗ್ರಹಿಸಿದ ನೀಲಾಂಬಿಕೆಯಮ್ಮನವರ ಗರ್ಭದಲ್ಲಿ ಉದಯವಾದ ಮೋಹದಕಂದನಾದ ಕಾರಣ ಎನಗೆ ಷಟ್ಸ ್ಥಲಮಾರ್ಗದ ವಿರತಿ ನೆಲೆಗೊಂಡು ನಿಂದಿತಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಅನುವನರಿಯದೆ, ಆದಿಯ ವಿಚಾರಿಸದೆ ಅನಾದಿಯಲ್ಲಿ ತಾನೆರೆಂಬುದ ನೋಡದೆ ಸ್ತೋತ್ರವ ಮಾಡಿ ಫಲವೇನು ? `ನಿಶ್ಶಬ್ದಂ ಬ್ರಹ್ಮ ಉಚ್ಯತೇ' ಎಂಬ ಘನವು ಹೊಗಳತೆಗೆ ಸಿಕ್ಕುವುದೆ ಎಲೆ ಮರುಳುಗಳಿರಾ ? ಅನಾದಿಯಲ್ಲಿ ಬಸವಣ್ಣನು ಏಳುನೂರೆಪ್ಪತ್ತು ಅಮರಗಣಂಗಳು ಸಹಿತ ಮತ್ರ್ಯಕ್ಕೆ ಬಂದನೊಂದು ಕಾರಣದಲ್ಲಿ. ಬಂದ ಮಣಿಹ ಪೂರೈಸಿತ್ತು_ಸಂದ ಪುರಾತರೆಲ್ಲರೂ ಕೇಳಿ, ಇಂದು ನೀವೆಲ್ಲರು ನಿಮ್ಮ ನೀವು ತಿಳಿದು ನೋಡಿ ನಿಜವನೈದುವುದು. ಇನ್ನು ನಮ್ಮ ಗುಹೇಶ್ವರಲಿಂಗಕ್ಕೆ ಸುರಾಳದ ಸುಳುಹಿಲ್ಲ.
--------------
ಅಲ್ಲಮಪ್ರಭುದೇವರು
ಶಿವನೂ ಉಂಟು, ಆತ್ಮನೂ ಉಂಟು, ಮಾಯೆಯೂ ಉಂಟು ಎಂಬೆ ಎಲೆ ಮರುಳು ಮಾನವ. ಆತ್ಮನನಾದಿಯೋ, ಮಾಯೆಯನಾದಿಯೋ, ಶಿವನನಾದಿಯೋ? ಈ ಮೂರೂ ಅನಾದಿಯಲ್ಲಿ ಉಂಟಾದರೆ, ಆದಿಯೆಂದಡೆ ದೇಹ, ಅನಾದಿಯೆಂದೆಡೆ ಆತ್ಮನು. ದೇಹವೂ ಆತ್ಮನೂ ಮಾಯೆಯೂ ಈ ಮೂರೂ ಇಲ್ಲದಂದು ನಿತ್ಯನಿರಂಜನ ಪರಶಿವತತ್ತ್ವವೊಂದೇ ಇದ್ದಿತ್ತೆಂಬುದು ಯಥಾರ್ಥವಲ್ಲದೆ, ಉಳಿದವೆಲ್ಲ ಹುಸಿ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನವಖಂಡಪೃಥ್ವಿ, ಚತುರ್ದಶಭುವನಗ್ರಾಮದಿಂದತ್ತತ್ತ ಮುನ್ನ ಅನಾದಿಯಲ್ಲಿ, ಜಂಗಮವೆ ಲಿಂಗವೆಂಬಿರಿ. ಇದೇನಿ ಭೋ, ಎಡೆಯಲ್ಲಿ ಕೊಲೆಯಾಯಿತ್ತು ! ಭಕ್ತಿ ಹಿಂದುಮುಂದಾಯಿತ್ತು, ರಕ್ಕಸರ ಪರಿಯಾಯಿತ್ತು ! ಇದ ಕಂಡು ಬೆರಗಾದೆ ಗುಹೇಶ್ವರಾ !
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->