ಅಥವಾ

ಒಟ್ಟು 36 ಕಡೆಗಳಲ್ಲಿ , 17 ವಚನಕಾರರು , 35 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಮನವರಿತು ಸುಳಿಯಬಲ್ಲಡೆ ಆಪ್ಯಾಯನವರಿತು ಉಣಬಲ್ಲಡೆ ಇಚ್ಛೆಯರಿತು ಬೇಡಬಲ್ಲಡೆ ಈ ತ್ರಿವಿಧ ಗುಣದ ಅನುವ ಬಲ್ಲವರು ದೇವರಿಗೆ ದೇವರಾಗಿಪ್ಪರು ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನ ದೇವರ ದೇವಾ.
--------------
ಸಿದ್ಧರಾಮೇಶ್ವರ
ಮಾಂಸದೊಳಗಿದ್ದ ಕ್ಷೀರವ, ಕ್ಷೀರದೊಳಗಿದ್ದ ಬೆಸುಗೆಯ ಬಿನ್ನಾಣದಿಂದ ತೆಗೆದ ಬೆಣ್ಣೆಯ, ಆರೈದು ನೋಡಿ, ಕರಗಿ ಕಡೆಯಲ್ಲಿ ಮೀರಿ ಘೃತವಾದುದು ಪಶುವೋ, ಪಯವೋ, ದದ್ಥಿಯೋ ? ನವನೀತವೋ ? ಘೃತಸ್ವಯವೋ ? ಅಲ್ಲ ಬೆಸುಗೆಯ ಎಸಕವೋ ? ಇಂತೀ ಗುಣವೊಂದರಿಂದೊಂದೊಂದ ಕಂಡು ಕಾಣಿಸಿಕೊಂಬ ಮನೋನಾಥನ ಅನುವ ವಿಚಾರಿಸಿ ಮನ ಮನನೀಯ ಭಾವ ಭಾವನೆ ಧ್ಯಾನ ಪ್ರಮಾಣು ಪೂಜೆ ವಿಶ್ವಾಸ ಇವನರಿದುದು ಅರಿಕೆ. ಇಂತಿವನೆಲ್ಲವನೂ ತೆರದರಿಶನದಿಂದರಿದು ಬಿಟ್ಟುದ ಮುಟ್ಟದೆ, ಮುಟ್ಟಿದುದ ಮುಟ್ಟಿ ತನ್ನಷ್ಟ ಉಭಯಭ್ರಾಂತು ಹುಟ್ಟುಗೆಟ್ಟಲ್ಲಿ ಕಮಠೇಶ್ವರಲಿಂಗವು ತಾನಾದ ಶರಣ.
--------------
ಬಾಲಸಂಗಣ್ಣ
ಘನವ ಕಂಡೆ, ಅನುವ ಕಂಡೆ, ಆಯತ ಸ್ವಾಯತ ಸನ್ನಿಹಿತ ಸುಖವ ಕಂಡೆ. ಅರಿವರಿದು ಮರಹ ಮರೆದೆ. ಕುರುಹಿನ ಮೋಹ ಮೊರೆಗೆಡದೆ ಚೆನ್ನಮಲ್ಲಿಕಾರ್ಜುನಾ, ನಿಮ್ಮನರಿದು ಸೀಮೆಗೆಟ್ಟೆನು.
--------------
ಅಕ್ಕಮಹಾದೇವಿ
ಅರಮನೆಯ ಕೂಳನಾದಡೆಯು ತಮ್ಮುದರದ ಕುದಿಹಕ್ಕೆ ಲಿಂಗಾರ್ಪಿತವೆಂದೆಡೆ ಅದು ಲಿಂಗಾರ್ಪಿತವಲ್ಲ ಆನರ್ಪಿತ. ಅದೆಂತೆಂದೆಡೆ : ಅರ್ಪಿತಂಚ ಗುರೋರ್ವಾಕ್ಯಂ ಕಿಲ್ಬಿಷಸ್ಯ ಮನೋ[s]ರ್ಪಿತಂ ಅನರ್ಪಿತಸ್ಯ ಭುಂಜಿಯಾನ್ ರೌರವಂ ನರಕಂ ವ್ರಜೇತ್ ಎಂದುದಾಗಿ ತನ್ನ ಒಡಲಕಕ್ಕುಲತೆಗೆ ಆಚಾರವನನುಸರಿಸಿ ಭವಿಶೈವ ದೈವ ತಿಥಿವಾರಂಗಳ ಹೆಸರಿನಲ್ಲಿ ಅಟ್ಟಿ ಕೂಳತಂದು ತಮ್ಮ ಇಷ್ಟಲಿಂಗಕ್ಕೆ ಕೊಟ್ಟು ಹೊಟ್ಟೆಯ ಹೊರೆವ ಆಚಾರಭ್ರಷ್ಟ ಪಂಚಮಹಾಪಾತಕರಿಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ ಪಾದೋದಕವಿಲ್ಲ ಪ್ರಸಾದವಿಲ್ಲ, ಪ್ರಸಾದವಿಲ್ಲವಾಗಿ ಮುಕ್ತಿಯಿಲ್ಲ. ಮುಂದೆ ಅಘೋರ ನರಕವನುಂಬರು. ಇದನರಿದು ನಮ್ಮ ಬಸವಣ್ಣನು ತನುವಿನಲ್ಲಿ ಆಚಾರಸ್ವಾಯತವಾಗಿ. ಮನದಲ್ಲಿ ಅರಿವು ಸಾಹಿತ್ಯವಾಗಿ ಪ್ರಾಣದಲ್ಲಿ ಪ್ರಸಾದ ಸಾಹಿತ್ಯವಾಗಿ ಇಂತೀ ತನು-ಮನ-ಪ್ರಾಣಂಗಳಲ್ಲಿ ಸತ್ಯ ಸದಾಚಾರವಲ್ಲದೆ ಮತ್ತೊಂದನರಿಯದ ಭಕ್ತನು ಭವಿಶೈವ ದೈವ ತಿಥಿ ಮಾಟ ಕೂಟಂಗಳ ಮನದಲ್ಲಿ ನೆನೆಯ. ತನುವಿನಲ್ಲಿ ಬೆರಸ ಭಾವದಲ್ಲಿ ಬಗೆಗೊಳ್ಳ ಏಕಲಿಂಗ ನಿಷ್ಠಾಪರನು ಪಂಚಾಚಾರಯುಕ್ತನು ವೀರಶೈವ ಸಂಪನ್ನ ಸರ್ವಾಂಗಲಿಂಗಿ ಸಂಗನಬಸವಣ್ಣನು ಈ ಅನುವ ಎನಗೆ ಅರುಹಿಸಿ ತೋರಿದ ಕಾರಣ ನಾನು ಬದುಕಿದೆನು ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ತನುವಿನ ಕೊನೆಯಲ್ಲಿ ನೇತ್ರದ ಅನುವ ಕಂಡೆನಯ್ಯಾ ಆ ನೇತ್ರದ ಕೊನೆಯಲ್ಲಿ ಮನದ ಸುಳುಹು ಕಂಡೆನಯ್ಯಾ. ಆ ಮನದ ಕೊನೆಯಲ್ಲಿ ಘನಮಹಾಶಿವನ ಕಂಡೆನಯ್ಯಾ. ಆ ಶಿವನೊಳಗೆ ಅನಂತಕೋಟಿಬ್ರಹ್ಮಾಂಡಗಳಡಗಿರ್ಪುದ ಕಂಡು ಬೆರಗಾದೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಭೂತಿಕನ ಸೀರೆಯ ಸಾತ್ವಿಕ ನೆರೆ ಉಟ್ಟಡೆ ಭೂತಿಕ ಸಾತ್ವಿಕನಾದ, ಸಾತ್ವಿಕ ಭೂತಿಕನಾದ; ಈ ಮಾತು ಬಿದ್ದುದು ನೋಡಾ, ರಾಜಬೀದಿಯಲ್ಲಿ. ಅಯ್ಯಾ, ಭೂತ ಕೆಣಕಿದಡಿಲ್ಲ, ಮಾತ ಮುಚ್ಚಿದಡಿಲ್ಲ ಓತು ಕೂಡುವ ಅನುವ, ಕೂಡಲಸಂಗಮದೇವ ತಾನೆ ಬಲ್ಲ.
--------------
ಬಸವಣ್ಣ
ಯುಗದ ಉತ್ಸಾಹವ (ಉತ್ಸವವ?) ನೋಡಿರೆ ! ಪಂಚಶಕ್ತಿಗಳಿಗೆ ಪಂಚಪ್ರಧಾನರು. ಅವರ ಆಗುಹೋಗನು ಆ ಶರಣನೆ ಬಲ್ಲ. ಆ ಶರಣನು ತಾನು ತಾನಾಗಿ ಆರು ದರುಶನಕ್ಕೆ ಯಾಚಕನಲ್ಲ ! ಮೂರು ದರುಶನಕ್ಕೆ ಮುಯ್ಯಾನುವನಲ್ಲ, ವೇದ ಶಾಸ್ತ್ರಾಗಮ ಪುರಾಣ ಛಂದಸ್ಸು, ನಿಘಂಟುಗಳೆಂಬುವಕ್ಕೆ ಭೇದಕನಲ್ಲ, ಅದೆಂತೆಂದಡೆ:ಅವರ ಅಂಗದ ಮೇಲೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ. ಪ್ರಸಾದವಿಲ್ಲ ಪಾದೋದಕವಿಲ್ಲದ ಭಾಷೆ. ಆ ಗುರು ಲಿಂಗ ಜಂಗಮ ಪ್ರಸಾದ ಪಾದೋದಕ ಏಕಾರ್ಥವಾದ ಕಾರಣ ಪ್ರಾಣಿಗಳೆಲ್ಲವು ಪ್ರಣಾಮಂಗೆಯ್ಯುತ್ತಿದ್ದವು, ಜೀವಿಗಳೆಲ್ಲವು ಜಯ ಜೀಯಾ ಎನುತ್ತಿದ್ದುವು. ಆತ್ಮಂಗಳೆಲ್ಲ ಅನುವ ಬೇಡುತ್ತಿದ್ದವು. ಗುಹೇಶ್ವರಾ ಸಂಗನಬಸವಣ್ಣನ ಪಾದಕ್ಕೆ ಈರೇಳುಭುವನವೆಲ್ಲವೂ ಜಯ ಜೀಯಾ ಎನುತ್ತಿದ್ದವು.
--------------
ಅಲ್ಲಮಪ್ರಭುದೇವರು
ಅರ್ಪಿತದ ಮಹಿಮೆಯ ಅನುವ, ಪ್ರಸಾದದ ಮಹಿಮೆಯ ಆವಂಗಾವಂಗರಿಯಬಾರದು. ವಿಷ್ಣ್ವಾದಿ ದೇವ ದಾನವ ಮಾನವ, ಋಷಿಜನಂಗಳಿಗೆಯೂ ಅರಿಯಬಾರದು. ಕಿಂಚಿತ್ತರಿದಡೆಯೂ ಅರ್ಪಿಸಬಾರದು. ಕಿಂಚಿತ್ ಅರ್ಪಿಸಿದಡೆಯೂ ಪ್ರಸಾದವ ಹಡೆಯಬಾರದು. ಕಿಂಚಿತ್ ಪ್ರಸಾದವ ಹಡೆದಡೆಯೂ, ಪ್ರಸಾದವ ಭೋಗಿಸಿ ಪರಿಣಾಮದಿಂ ಮುಕ್ತರಾಗಿರಲರಿಯರು. ಶಿವ ಶಿವಾ ! ಗುರು ಲಿಂಗ ಜಂಗಮಕ್ಕೆ ತನು ಮನ ಧನವನರ್ಪಿಸಲರಿಯರು. ಗುರು ಲಿಂಗ ಜಂಗಮವನೇಕೀಭವಿಸಿ ಮಹಾಲಿಂಗವನು ನೇತ್ರದಲ್ಲಿ ಧರಿಸಿ, ನೇತ್ರಲಿಂಗಕ್ಕೆ ನೇತ್ರದ ಕೈಯಲೂ ರೂಪವನರ್ಪಿಸಲರಿಯರು. ಆ ಮಹಾಲಿಂಗವನು ಶ್ರೋತ್ರದಲ್ಲಿ ಧರಿಸಿ ಶ್ರೋತ್ರಲಿಂಗಕ್ಕೆ ಶ್ರೋತ್ರದ ಕೈಯಲೂ ಮಹಾಶಬ್ದವನರ್ಪಿಸಲರಿಯರು. ಆ ಮಹಾಲಿಂಗವನು ಘ್ರಾಣದಲ್ಲಿ ಧರಿಸಿ ಘ್ರಾಣಲಿಂಗಕ್ಕೆ ಘ್ರಾಣದ ಕೈಯಲೂ ಸುಗಂಧವನರ್ಪಿಸಲರಿಯರು. ಆ ಮಹಾಲಿಂಗವನು ಜಿಹ್ವೆಯಲ್ಲಿ ಧರಿಸಿ ಜಿಹ್ವೆಯಲಿಂಗಕ್ಕೆ ಜಿಹ್ವೆಯ ಕೈಯಲೂ ಮಹಾರಸವನರ್ಪಿಸಲರಿಯರು. [ಆ ಮಹಾಲಿಂಗವನು ತ್ವಕ್ಕಿನಲ್ಲಿ ಧರಿಸಿ ತ್ವಕ್‍ಲಿಂಗಕ್ಕೆ ಘ್ರಾಣದ ಕೈಯಲ್ಲಿ ಮಹಾಸ್ಪರ್ಶವನರ್ಪಿಸಲರಿಯರು] ಆ ಮಹಾಲಿಂಗವನು ಭಾವದಲ್ಲಿ ಧರಿಸಿ ಭಾವಲಿಂಗಕ್ಕೆ ಭಾವದ ಕೈಯಲೂ ಸರ್ವಸುಖಪರಿಣಾಮ ಮೊದಲಾದ ಭಾವಾಭಾವ ನಿಷ್ಕಲವಸ್ತುವನರ್ಪಿಸಲರಿಯರು. ಆ ಮಹಾಲಿಂಗವನು ಮನದಲ್ಲಿ ಧರಿಸಿ ಮನೋಮಯಲಿಂಗಕ್ಕೆ ಮನದ ಕೈಯಲೂ ಸಕಲ ನಿಷ್ಕಲಾದಿ ರೂಪವನರ್ಪಿಸಲರಿಯರು. ಆ ಮಹಾಲಿಂಗವನು ವಾಕ್ಕಿನಲ್ಲಿ ಧರಿಸಿ ವಾಕ್‍ಲಿಂಗಕ್ಕೆ ವಾಕ್ಕಿನ ಕೈಯಲ್ಲೂ ಪಡಿಪದಾರ್ಥ ಮೊದಲಾದ ಸಕಲದ್ರವ್ಯಂಗಳ ರುಚಿ ಮೊದಲಾದ ಸುಖವನರ್ಪಿಸಲರಿಯರು. ಆ ಮಹಾಲಿಂಗವನು ಇಂತು ಮನೋವಾಕ್ಕಾಯವೆಂಬ ತ್ರಿವಿಧದಲ್ಲಿ ಏಕಾದಶ ಅರ್ಪಿತ ಸ್ಥಾನವನರಿದು ಅರ್ಪಿತವಾದ ಏಕಾದಶ ಪ್ರಸಾದವನರಿಯರು. ಮಹಾರ್ಪಿತವನು ಮಹಾಪ್ರಸಾದವನು ಎಂತೂ ಅರಿಯರು. ಪರಂಜ್ಯೋತಿಃ ಪರಂ ತತ್ತ್ವಂ ಪರಾತ್ಪರತರಂ ತಥಾ ಪರವಸ್ತು ಪ್ರಸಾದಃ ಸ್ಯಾದಪ್ರಮಾಣಂ ಪ್ರಸಾದಕಃ ಎಂಬುದನರಿಯರು. ಪೂಜಕಾ ಬಹವಸ್ಪಂತಿ ಭಕ್ತಾಶ್ಯತಸಹಸ್ರಶಃ ಮಹಾಪ್ರಸಾದಪಾತ್ರಂ ತು ದ್ವಿತ್ರಾ ವಾ ನೈವ ಪಂಚಷಃ ಪ್ರಸಾದಂ ಗಿರಿಜಾದೇವಿ ಸಿದ್ಧಕಿನ್ನರಗುಹ್ಯಕಾಃ ವಿಷ್ಣುಪ್ರಮುಖದೇವಾಶ್ಚ ನ ಜಾನಂತಿ ಶಿವಂಕರಂ ಎಂಬ ಪ್ರಸಾದ ಎಲ್ಲರಿಗೆಯೂ ಅಸಾಧ್ಯ. ಅರ್ಪಿತ ಮುನ್ನವೇ ಅಸಾಧ್ಯ. ಅರ್ಪಿತವೂ ಪ್ರಸಾದವೂ ಚನ್ನಬಸವಣ್ಣಂಗಾಯಿತ್ತು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಅರಮನೆಯ ಕೂಳನಾದರೆಯೂ ತಂದು, ಒಡಲ ಕುದಿಹಕ್ಕೆ ಲಿಂಗಾರ್ಪಿತವ ಮಾಡಿದರೆ ಅದು ಲಿಂಗಾರ್ಪಿತವಹುದೆಳ ಅಲ್ಲ, ಅದು ಅನರ್ಪಿತ. ಅರ್ಪಿತಂ ಚ ಗುರೋರ್ವಾಕ್ಯಾತ್ಕಿಲ್ಬಿಷಂ ಸ್ಯಾದನರ್ಪಿತಂ ಯದ್ಯನರ್ಪಿತಂ ಭುಂಜೀಯಾತ್ ಕೌರವಂ ನರಕಂ ವ್ರಜೇತ್ ತನುಸಾಹಿತ್ಯ ಮನಸಾಹಿತ್ಯ ಧನಸಾಹಿತ್ಯ ಲಿಂಗಸಾಹಿತ್ಯ ಪ್ರಸಾದಸಾಹಿತ್ಯವಾದ ಕಾರಣ, ಕೂಡಲಚೆನ್ನಸಂಗಮದೇವರಲ್ಲಿ ಈ ಅನುವ ಬಸವಣ್ಣ ತೋರಿದನಾಗಿ, ಅನು ಬದುಕಿದೆನು.
--------------
ಚನ್ನಬಸವಣ್ಣ
ಕಾಣಬಾರದ ಕದಳಿಯಲೊಂದು ಮಾಣಿಕ ಹುಟ್ಟಿತ್ತು. ಇದಾರಿಗೂ ಕಾಣಬಾರದು. ಮಾರಿಹೆನೆಂದಡೆ ಮಾನವರಿಗೆ ಸಾಧ್ಯವಾಗದು. ಸಾವಿರಕ್ಕೆ ಬೆಲೆಯಾಯಿತ್ತು. ಆ ಬೆಲೆಯಾದ ಮಾಣಿಕ ನಮ್ಮ ಶಿವಶರಣರಿಗೆ ಸಾಧ್ಯವಾಯಿತ್ತು. ಅವರು ಆ ಮಾಣಿಕವ ಹೇಗೆ ಬೆಲೆಮಾಡಿದರೆಂದಡೆ ಕಾಣಬಾರದ ಕದಳಿಯ ಹೊಕ್ಕು, ನೂನ ಕದಳಿಯ ದಾಂಟಿ, ಜಲವ ಶೋಧಿಸಿ, ಮನವ ನಿಲಿಸಿ, ತನುವಿನೊಳಗಣ ಅನುವ ನೋಡುವನ್ನಕ್ಕ, ಮಾಣಿಕ ಸಿಕ್ಕಿತ್ತು. ಆ ಮಾಣಿಕವ ನೋಡಿದೆನೆಂದು ಜಗದ ಮನುಜರನೆ ಮರೆದು, ತಾನುತಾನಾಗಿ ಜ್ಞಾನಜ್ಯೋತಿಯ ಬೆಳಗಿನೊಳಗೋಲಾಡಿ ಸುಖಿಯಾದೆನಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ. !
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಕೊಂಡ ಅನ್ನದಿಂದ ಅಜೀರ್ಣ ಬಂದಡೆ, ಆ ಅಜೀರ್ಣ ತನಗೊ, ಅಂಗಕ್ಕೊ ? ತನ್ನ ಅನುವ ತಾನರಿಯದೆ, ಬಂದುಂಬ ಜಂಗಮದಲ್ಲಿ ಅಂಗವನರಸುವ ಲಿಂಗದೂರರಿಗೇಕೆ ಜಂಗಮಭಕ್ತಿ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಹೊನ್ನ ಬಿಟ್ಟು, ಹೆಣ್ಣ ಬಿಟ್ಟು, ಮಣ್ಣ ಬಿಟ್ಟು, ಮಂಡೆಯ ಬೋಳಿಸಿಕೊಂಡು ಬೋಳಾದ ಬಳಿಕ ನಿರಾಸಕ್ತನಾಗಿ, ಭಿಕ್ಷಾಹಾರಿಯಾಗಿ ಶಿವಧ್ಯಾನಪರಾಯಣನಾಗಿಪ್ಪುದೀಗ ಪ್ರಥಮ ಬೋಳು. ಲಿಂಗಾಣತಿಯಿಂದ ಬಂದುದ ಕೈಕೊಂಡು ಲಿಂಗ ಸಾವಧಾನವಾಗಿಪ್ಪುದೀಗ ದ್ವಿತೀಯಬೋಳು. ಶರಣಸತಿ ಲಿಂಗಪತಿಯೆಂಬುಭಯವಳಿದು ಪರಮಾನಂದದಲ್ಲಿಪ್ಪುದೀಗ ತೃತೀಯಬೋಳು. ಈ ಬೋಳಿನ ಅನುವ ಕೂಡಲಚೆನ್ನಸಂಗಯ್ಯನಲ್ಲಿ ಅಲ್ಲಯ್ಯ ಬಲ್ಲ.
--------------
ಚನ್ನಬಸವಣ್ಣ
ಸಮಯವಿರೋಧವಾದೀತೆಂದು ಪಾದಾರ್ಚನೆಯ ಮಾಡುವರಯ್ಯಾ. ಲಿಂಗಜಂಗಮಕ್ಕೆ ಪಾದವಾವುದು ? ಅರ್ಚನೆ ಯಾವುದು ? ಎಂಬ ತುದಿ ಮೊದಲನರಿಯರು. ಉದಾಸೀನದಿಂದ ಪಾದಾರ್ಚನೆಯ ಮಾಡಿ, ಪಾದೋದಕ ಧರಿಸಿದಡೆ ಅದೇ ಪ್ರಳಯಕಾಲಜಲ. ವರ್ಮವನರಿದು ಕೊಂಡಡೆ ತನ್ನ ಭವಕ್ಕೆ ಪ್ರಳಯಕಾಲಜಲ ! ಈ ಉಭಯವ ಭೇದಿಸಿ ಸಂಸಾರಮಲಿನವ ತೊಳೆವಡೆ ಕೂಡಲಚೆನ್ನಸಂಗಾ ಈ ಅನುವ ನಿಮ್ಮ ಶರಣ ಬಲ್ಲ.
--------------
ಚನ್ನಬಸವಣ್ಣ
ಭಕ್ತಿ ಭಕ್ತಿಯೆಂದೇನು ತುತ್ತಿಡುವನ್ನಕ್ಕವೆ ? ಗುರು ಗುರುವೆಂದೇನು ಪರಕೆ ಹೆಸರ ಹೇಳುವನ್ನಕ್ಕವೆ ? ಲಿಂಗ ಲಿಂಗವೆಂದೇನು ಅಂಗ ಬೀಳುವನ್ನಕ್ಕವೆ ? ಜಂಗಮ ಜಂಗಮವೆಂದೇನು ಮುಂದಿದ್ದ ಧನವೆಲ್ಲಾ ಸವೆವನ್ನಕ್ಕವೆ ? ಪಾದೋದಕ ಪಾದೋದಕವೆಂದೇನು ಇವೆಲ್ಲಾ ಜಲವ ಕೂಡಿ ಹೋಹನ್ನಕ್ಕವೆ ? ಪ್ರಸಾದ ಪ್ರಸಾದವೆಂದೇನು ಉಂಡುಂಡು ತನು ಕಳಚಿ ಪ್ರಳಯಕ್ಕೊಳಗಹನ್ನಕ್ಕವೆ ? ಅಲ್ಲಿ ನಿಂದಿರದಿರಾ ಮನವೆ, ನಿಂದಿದ್ದರೆ ನೀ ಕೆಡುವೆ, ಬಂದರೆ ನಾ ಕೆಡುವೆ, ಎನ್ನ ತಂದೆ ಕೂಡಲಚೆನ್ನಸಂಗಯ್ಯಾ, ಈ ಅನುವ ಬಸವಣ್ಣ ತೋರಿದನಾಗಿ, ಆನು ಬದುಕಿದೆನು.
--------------
ಚನ್ನಬಸವಣ್ಣ
ನಿಮ್ಮ ಶಕ್ತಿ ಆತನಲ್ಲಿಪ್ಪುದು ಕಂಡಯ್ಯಾ, ಆತನ ಪ್ರಾಣ ನಿಮ್ಮಲ್ಲಿಪ್ಪುದು. ನಿಮ್ಮ ತಮ್ಮ ಭೇದವನಾರು ಬಲ್ಲರು ಹೇಳಯ್ಯಾ. ಕಪಿಲಸಿದ್ಧಮಲ್ಲಿನಾಥಯ್ಯಾ, ನಿಮ್ಮ ಶರಣ ಬಸವಣ್ಣನ ಅನುವ ನೀವೆ ಬಲ್ಲಿರಿ.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->