ಅಥವಾ

ಒಟ್ಟು 14 ಕಡೆಗಳಲ್ಲಿ , 7 ವಚನಕಾರರು , 12 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಯ್ಯ, ಇಂತು ನಿರಂಜನ ಮಹಾಲಿಂಗಾನುಭಾವಸೂತ್ರವ ಎರಡೆಂಬತ್ತೆಂಟುಕೋಟಿ ಹರಗುರು ವಾಕ್ಯಪ್ರಮಾಣವಚನಾನುಭಾವವ ಪ್ರಕಟಿಸಿ ಈ ಒಂದು ವಚನಾರ್ಥದಲ್ಲಿ ಅತಿಗೋಪ್ಯದಿಂದ ಅನಾದಿ ನಿಃಕಳಂಕ ನಿಶ್ಶೂನ್ಯ ನಿರಂಜನ ನಿರಾವಯ ಶರಣಸೂತ್ರವಿಡಿದು ನಿರಾಯಾಸಂ ಆಯಾಸಂಗಳೇನು ತೋರದೆ ಈ ವಚನಾರ್ಥದ ಆದಿ-ಅಂತ್ಯವನರುಹಿಸಿಕೊಟ್ಟೆವು ನೋಡ. ಆ ವಿಚಾರವೆಂತೆಂದಡೆ : ಶ್ರೀ ಮದ್ಗುರು ಕಾರುಣ್ಯವೇದ್ಯನು, ವಿಭೂತಿ-ರುದ್ರಾಕ್ಷಧಾರಕನು, ಪಂಚಾಕ್ಷರೀ ಭಾಷಾಸಮೇತನು, ಲಿಂಗಾಂಗಸಂಬಂದ್ಥಿ, ನಿತ್ಯಲಿಂಗಾರ್ಚಕನು, ಅರ್ಪಿತದಲ್ಲಿ ಅವಧಾನಿ, ಪಾದೋದಕ-ಪ್ರಸಾದಗ್ರಾಹಕನು, ಗುರುಭಕ್ತಿ ಸಂಪನ್ನನು, ಏಕಲಿಂಗ ನಿಷ್ಠಾಪರನು, ಚರಲಿಂಗ ಲೋಲುಪ್ತನು, ಶರಣ ಸಂಗವೈಶ್ವರ್ಯನು, ತ್ರಿವಿಧಕ್ಕಾಯತನು, ತ್ರಿಕರಣಶುದ್ಧನು, ತ್ರಿವಿಧ ಲಿಂಗಾಂಗಸಂಬಂದ್ಥಿ, ಅನ್ಯದೈವದ ಸ್ಮರಣೆಯ ಹೊದ್ದ, ಭವಿಸಂಗವ ಮಾಡ, ಭವಿಪಾಕವ ಕೊಳ್ಳ, ಪರಸ್ತ್ರೀಯರ ಬೆರಸ, ಪರಧನವನೊಲ್ಲ, ಪರನಿಂದ್ಯವನಾಡ, ಅನೃತವ ನುಡಿಯ, ಹಿಂಸೆಯ ಮಾಡ, ತಾಮಸಭಕ್ತರ ಸಂಗವಮಾಡ, ಗುರುಲಿಂಗಜಂಗಮಕ್ಕೆ ಅರ್ಥಪ್ರಾಣಾಬ್ಥಿಮಾನ ಮುಂತಾದವೆಲ್ಲವ ಸಮರ್ಪಿಸಿ ಪ್ರಸಾದ ಮುಂತಾಗಿ ಭೋಗಿಸುವ, ಜಂಗಮನಿಂದ್ಯವ ಸೈರಿಸ, ಪ್ರಸಾದನಿಂದ್ಯವ ಕೇಳ, ಅನ್ಯರನಾಸೆಗೈಯ್ಯ, ಪಾತ್ರಾಪಾತ್ರವನರಿದೀವ, ಚತುರ್ವಿಧಪದವಿಯ ಹಾರೈಸ, ಅರಿಷಡ್ವರ್ಗಕ್ಕೆ ಅಳುಕ, ಕುಲಾದಿಮದಂಗಳ ಬಗೆಗೊಳ್ಳ, ದ್ವೈತಾದ್ವೈತವ ನುಡಿವನಲ್ಲ, ಸಂಕಲ್ಪ-ವಿಕಲ್ಪವ ಮಾಡುವನಲ್ಲ, ಕಾಲೋಚಿತವ ಬಲ್ಲ, ಕ್ರಮಯುಕ್ತನಾಗಿ ಷಟ್‍ಸ್ಥಲಭರಿತ, ಸರ್ವಾಂಗಲಿಂಗಿ, ದಾಸೋಹಂ ಸಂಪನ್ನ ಇಂತೀ ಭಾವನ್ನದಿರವ ಅಂತರಂಗದಲ್ಲಿ ಒಳಕೊಂಡು ಬಹಿರಂಗದಲ್ಲಿ ನಡೆದಂತೆ ನುಡಿದು, ನುಡಿದಂತೆ ನಡದು, ಸದ್ಭಕ್ತಿ-ಜ್ಞಾನ-ವೈರಾಗ್ಯ ಸಂಪನ್ನತ್ವದಿಂದ ಸಕಲಪ್ರಮಥಗಣಂಗಳಿರುವ ಕೀರ್ತಿಸಿಕೊಳ್ಳುತ್ತ, ಆ ಆದಿಪ್ರಮಥರ ಕೀರ್ತನೆ ವಿಚಾರವೆಂತೆಂದಡೆ : ಶ್ರೀಮದನೇಕಲೋಕ-ವಿಸ್ತಾರಕ ಕಾರಣರೂಪ, ಸತ್ತಿಚಿತ್ತಾನಂದ ನಿತ್ಯಪರಿಪೂರ್ಣ ಅವಿರಳ ಪರಂಜ್ಯೋತಿಸ್ವರೂಪ, ಪರತರ ಪರಬ್ರಹ್ಮಾನುಭಾವ ಸಾರ್ವಭೌಮ, ಷಟ್ಸ್ಥಲಸ್ಥಾಪನಾಚಾರ್ಯ, ಪಂಚಾಚಾರ ಪ್ರಮಥನಾಯಕ ಸರ್ವಾಚಾರ ನಿಷ್ಠಾಗರಿಷ್ಠ, ಲಿಂಗಲೋಲುಪ್ತ, ಲಿಂಗಭೋಗೋಪಭೋಗಿ, ಜಂಗಮಾನುಭಾವ, ಸದ್ಭಕ್ತ ಹೃನ್ಮಂದಿರವಾಸ, ನಿತ್ಯ ಕಲ್ಯಾಣೋತ್ಸಹಪೂರ್ಣಾವತರ್ಯ, ಲಿಂಗಲೀಲಾನಂದ, ಏಕವಿಂಶತಿಯುಗಸ್ಥಾಪನಾಚಾರ್ಯವರ್ಯ, ಮಂಜುಳಾಂತರಂಗ, ಮನುಮುನಿವಂದ್ಯ, ಪ್ರದಾಯಕ ತ್ರೈದಶಪರ್ವತಾದ್ಥೀಶ್ವರ, ಮದನಮರ್ದನ, ಮಾಯಾಕೋಲಾಹಲ, ಅಷ್ಟಾವರಣ ಸ್ವರೂಪ, ತ್ರಿವಿಧಾನುಗ್ರಹ ಪ್ರತಿಪಾದಕ, ತ್ರಿವಿಧ ಪಾದೋದಕ ಪ್ರಸಾದಲೋಲುಪ್ತ, ತ್ರಿವಿಧಾಚಾರಸನ್ಮೋಹಿ, ತ್ರಿಗುಣಾನಂದಭರಿತ, ತ್ರಿಮಲದೂರ, ನಿರ್ಮಲ-ನಿಃಕಳಂಕ-ನಿಃಶೂನ್ಯ-ನಿರಂಜನ, ಅನುಮಿಷಾರಾಧ್ಯ, ತ್ರಿವಿಧ ಲಿಂಗಾನುಭಾವ ಅಖಿಳಾಂಡ ಪ್ರತಿಷ್ಠಾಪ್ರದಾಯಕ, ಸದ್ಧರ್ಮಸ್ವರೂಪ, ಸತ್ಕ್ರಿಯಾ ಸಮ್ಯಜ್ಞಾನ ಸದಾಭರಿತ, ನಿತ್ಯ ತೃಪ್ತಾನಂದಮಂತ್ರಸ್ವರೂಪ, ಅನಂತಸೂರ್ಯಚಂದ್ರಾಗ್ನಿಪ್ರಕಾಶ, ಅಜ್ಞಾನ ತಿಮಿರಾಂಧಸ್ಯ, ಕಾರಣಾವತಾರ ಸರ್ವಜ್ಞ ಪ್ರದಾಯಕ, ಕಾಮಧೇನು-ಕಲ್ಪವೃಕ್ಷ, ಚಿಂತಾಮಣಿಗೆ ಮಾತೃಸ್ವರೂಪ, ವಾಚಾತೀತ-ವರ್ಣಾತೀತ-ಭಾವಾತೀತ-ಜ್ಞಾನಾತೀತ, ಚಿತ್ಕಲಾಸ್ವರೂಪ, ಅಯೋನಿಸಂಭವ, ಅಜಡಸ್ವರೂಪ, ಬತ್ತೀಶಕಳಾಮೂರ್ತಿ, ಜರೆಮರಣ ಸಂಸ್ಕøತಿದೂರ, ವರವೀರಶೈವಮತ ಸ್ಥಾಪನಾಚಾರ್ಯ, ನಿಜ ಶಿವಯೋಗಭರಿತಾನಂದಮೂರ್ತಿ, ಗುರುಮಾರ್ಗಾಚಾರ ಪ್ರತಿಷ್ಠಾಪ್ರದಾಯಕ, ಅನಾಚಾರ ಸಂಹಾರ, ಮಹಿಮಾಸ್ವರೂಪ, ಸದ್ಭಕ್ತಜಿಹ್ವಾಗ್ರ ಹೃನ್ಮಂದಿರಾವಾಸ. ಏಕವಿಂಶತಿ ದೀಕ್ಷಾಬೋಧಸ್ವರೂಪ, ಷಡ್ಗುಣೈಶ್ವರ್ಯ ಸಂಪತ್ಕರವನುಳ್ಳ ಮುಕ್ತಿಪ್ರದಾಯಕ, ಮೂಲಮಂತ್ರಮೂರ್ತಿ ಲೋಕಪಾವನಾರ್ಥ ಕೂಡಲಸಂಗಮೇಶ್ವರನ ಚಿದ್ಗರ್ಭೋದಯ ಬಸವದಂಡನಾಥ ಪ್ರಮಥಗಣಂಗಳ ಭಕ್ತಿಹಿತಾರ್ಥವಾಗಿ, ಅವತರಿಸಿದಂಥ ವಿರಾಣ್ಮೂರ್ತಿ! ಅನಾದಿಗಣೇಶ್ವರ, ಅನಾದಿಗಣೇಶ್ವರನ ಶಿಷ್ಯರು ಆದಿಗಣೇಶ್ವರ, ಆದಿಗಣೇಶ್ವರನ ಶಿಷ್ಯರು ನಿರ್ಮಾಯವೆಂಬ ಗಣೇಶ್ವರ, ನಿರ್ಮಾಯನೆಂಬ ಗಣೇಶ್ವರನ ಶಿಷ್ಯರು ನಿರಂಜನನೆಂಬ ಗಣೇಶ್ವರ, ನಿರಂಜನನೆಂಬ ಗಣೇಶ್ವರನ ಶಿಷ್ಯರು ಜ್ಞಾನಾನಂದನೆಂಬ ಗಣೇಶ್ವರ, ಜ್ಞಾನಾನಂದನೆಂಬ ಗಣೇಶ್ವರನ ಶಿಷ್ಯರು ಆತ್ಮ ಗಣೇಶ್ವರ, ಆತ್ಮಗಣೇಶ್ವರನ ಶಿಷ್ಯರು ಆಧ್ಯಾತ್ಮ ಗಣೇಶ್ವರ, ಆಧ್ಯಾತ್ಮಗಣೇಶ್ವರನ ಶಿಷ್ಯರು ರುದ್ರನೆಂಬ ಗಣೇಶ್ವರ, ರುದ್ರನೆಂಬ ಗಣೇಶ್ವರನ ಶಿಷ್ಯರು ಬಸವಪ್ರಭುದೇವರು, ಬಸವಪ್ರಭುದೇವರ ಶಿಷ್ಯರು ಆದಿಲಿಂಗದೇವರು, ಆದಿಲಿಂಗದೇವರ ಶಿಷ್ಯರು ಚೆನ್ನವೀರೇಶ್ವರದೇವರು, ಚೆನ್ನವೀರೇಶ್ವರದೇವರ ಶಿಷ್ಯರು ಹರದನಹಳ್ಳಿ ಗೋಸಲದೇವರು, ಹರದನಹಳ್ಳಿ ಗೋಸಲದೇವರ ಶಿಷ್ಯರು ಶಂಕರದೇವರು, ಶಂಕರದೇವರ ಶಿಷ್ಯರು ದಿವ್ಯಲಿಂಗದೇವರು, ದಿವ್ಯಲಿಂಗದೇವರ ಶಿಷ್ಯರು ಚೆನ್ನಬಸವೇಶ್ವರದೇವರು, ಚೆನ್ನಬಸವೇಶ್ವರದೇವರ ಶಿಷ್ಯರು ತೋಂಟದ ಸಿದ್ಧೇಶ್ವರಸ್ವಾಮಿಗಳು, ತೋಂಟದ ಶಿದ್ಧೇಶ್ವರಸ್ವಾಮಿಗಳ ಸಿಷ್ಯರು ಮರುಳಸಿದ್ಧೇಶ್ವರಸ್ವಾಮಿಗಳು, ಮರುಳಸಿದ್ಧೇಶ್ವರಸ್ವಾಮಿಗಳ ಶಿಷ್ಯರು ರೇವಣಸಿದ್ಧೇಶ್ವರಸ್ವಾಮಿಗಳು, ರೇವಣಸಿದ್ಧೇಶ್ವರಸ್ವಾಮಿಗಳ ಶಿಷ್ಯರು ಶಿವಲಿಂಗೇಶ್ವರಸ್ವಾಮಿಗಳು, ಶಿವಲಿಂಗೇಶ್ವರಸ್ವಾಮಿಗಳ ಶಿಷ್ಯರು ನಿರಂಜನೇಶ್ವರಸ್ವಾಮಿಗಳು, ನಿರಂರನೇಶ್ವರಸ್ವಾಮಿಗಳ ಶಿಷ್ಯರು ಮರಿಬಸವಲಿಂಗೇಶ್ವರಸ್ವಾಮಿಗಳು, ಮರಿಬಸವಲಿಂಗೇಶ್ವರಸ್ವಾಮಿಗಳ ಶಿಷ್ಯರು ಸ್ವತಂತ್ರಸಿದ್ಧಲಿಂಗೇಶ್ವರಸ್ವಾಮಿಗಳು, ಸ್ವತಂತ್ರಸಿದ್ಧಲಿಂಗೇಶ್ವರಸ್ವಾಮಿಗಳ ಶಿಷ್ಯರು ಚೆನ್ನಮಲ್ಲೇಶ್ವರಸ್ವಾಮಿಗಳು ಚೆನ್ನಮಲ್ಲೇಶ್ವರಸ್ವಾಮಿಗಳ ಶಿಷ್ಯರು ಚೆನ್ನಂಜೇಶ್ವರಸ್ವಾಮಿಗಳು, ಚೆನ್ನಂಜೇಶ್ವರಸ್ವಾಮಿಗಳ ಶಿಷ್ಯರು ಗುರುಶಾಂತೇಶ್ವರಸ್ವಾಮಿಗಳು, ಗುರುಶಾಂತೇಶ್ವರಸ್ವಾಮಿಗಳ ಶಿಷ್ಯರು ಶಾಂತಮಲ್ಲಸ್ವಾಮಿಗಳು ಶಾಂತಮಲ್ಲಸ್ವಾಮಿಗಳ ಕರ-ಮನ-ಭಾವದಲ್ಲುದಯವಾದ ಗುರುಸಿದ್ಧಲಿಂಗ ನಾನಯ್ಯ. ಆ ಗುರುಸಿದ್ಧಲಿಂಗನ ಕರ-ಮನ-ಸುಭಾವದಲ್ಲಿ ಶರಣಗಣಂಗಳ ಶುದ್ಧಸಿದ್ಧಪ್ರಸಿದ್ಧ ಪ್ರಸಾದವಾಗಿ ಅಷ್ಟವಿಧಾರ್ಚನೆ-ಷೋಡಶೋಪಚಾರ-ಮಂತ್ರ-ಧ್ಯಾನ- ಜಪ-ಸ್ತೋತ್ರ-ಮನೋರ್ಲಯ-ನಿರಂಜನ ಪೂಜೆಯ ಕೈಕೊಂಡು ಪ್ರಮಥಗಣಂಗಳ ಸ್ವಾನುಭಾವಸೂತ್ರವನೊಳಕೊಂಡು ಒಳಗು ಬೆಳಗನೆ ನುಂಗಿ ಬೆಳಗು ಒಳಗನೆ ನುಂಗಿ, ಛಳಿ ಮೋಹಕದ ಮಂಜು ನುಂಗಿದಂತೆ ಹಲವು ದೀಪವ ಬಯಲ ಗಾಳಿ ನುಂಗಿದ ತೆರದಿ ಕಳೆಯಳಿದ ಕೂಡಲಚೆನ್ನಸಂಗಯ್ಯನು. ಇಂತು ಚಿಕ್ಕದಂಡನಾಥ ಚೆನ್ನಬಸವೇಶ್ವರಸ್ವಾಮಿಗಳ ಪ್ರಸನ್ನಪ್ರಸಾದಕ್ಕೆ ಒಪ್ಪಿಗೆಯಾಗಿ ಈ ವಚನಾನುಭಾವಶಾಸ್ತ್ರವ ಕೈಕೊಂಡು ಸದ್ಭಕ್ತಶರಣಗಣಂಗಳಿಗೆ ಬೋದ್ಥಿಸಿ ಸಂಪೂರ್ಣವಮಾಡುವುದಕ್ಕೆ ಕರ್ತುಗಳಾಗಿ ಒಪ್ಪುತಿರ್ಪಿರಿ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಲಿಂಗವಂತ ಲಿಂಗವಂತ ಎಂಬಿರಿ, ಎಂತು ಲಿಂಗವಂತರಾದಿರೋ, ಅನ್ಯದೈವದ ಭಜನೆ ಮಾಣದನ್ನಕ್ಕ ? ಭವಿಗಳ ಸಂಗವ ಮಾಣದನ್ನಕ್ಕ, ಎಂತು ಲಿಂಗವಂತರಾದಿರೋ ನೀವು ? ಅದೆಂತೆಂದಡೆ, ಶಿವಾಚಾರಸಮಾಯುಕ್ತಃ ಅನ್ಯದೈವಸ್ಯ ಪೂಜನಾತ್ ಶ್ವಾನಯೋನಿಶತಂ ಗತ್ವಾ ಚಂಡಾಲಗೃಹಮಾವಿಶೇತ್ ಅಶನೇ ಶಯನೇ ಯಾನೇ ಸಂಪರ್ಕೇ ಸಹಭೋಜನೇ ಸಂಚರಂತಿ ಮಹಾಘೋರೇ ನರಕೇ ಕಾಲಮಕ್ಷಯಂ ಇಂತೆಂದುದಾಗಿ, ಅನ್ಯದೈವ ಭವಿವುಳ್ಳನಕ, ನೀವು ಲಿಂಗವಂತರೆಂದಿರೋ, ಮರುಳುಗಳಿರಾ ? ಇದನರಿತು ಭಕ್ತಿಪಥವ ಸೇರದಿರ್ದಡೆ, ನೀವೆಂದೆಂದಿಗೂ ಭವಭವದ ಲೆಂಕರು. ಇದು ಕಾರಣ, ನಮ್ಮ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಲಿಂಗ ಮುನ್ನವೇ ದೂರವಯ್ಯ.
--------------
ಉರಿಲಿಂಗಪೆದ್ದಿ
ಮಸ್ತಕದಲ್ಲಿ ರುದ್ರಾಕ್ಷಿಯಂ ಧರಿಸಿ ಅನ್ಯದೈವದ ಗುಡಿಯ ಹೊಗಲಾಗದು ಶರಣ. ಕರಣಂಗಗಳಲ್ಲಿ ರುದ್ರಾಕ್ಷಿಯಂ ಧರಿಸಿ ಹರನಿಂದೆ ಗುರುನಿಂದೆಯ ಕೇಳಲಾಗದು ಶರಣ. ತೋಳುಗಳಲ್ಲಿ ರುದ್ರಾಕ್ಷಿಯಂ ಧರಿಸಿ ಪರಸತಿಯನಪ್ಪಲಾಗದು ಶರಣ. ಮುಂಗೈಯಲ್ಲಿ ರುದ್ರಾಕ್ಷಿಯಂ ಧರಿಸಿ ಅನ್ಯರಿಗೆ ಕೈಮುಗಿಯಲಾಗದು ಶರಣ. ಇದನರಿದು ಧರಿಸಿದಡೆ ಶ್ರೀರುದ್ರಾಕ್ಷಿಯಹುದು. ಅಂತಲ್ಲದಿರ್ದಡೆ, [ಡ]ಂಬ ಹಗರಣವ ಹೊತ್ತು ಬಂದಂತೆ ಎಂದಾತನಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಕೀಳು ಮೇಲಾವುದೆಂದರಿಯದೆ, ಹದಿನೆಂಟುಜಾತವೆಲ್ಲ ತರ್ಕಕಿಕ್ಕಿ, ಕೂಳ ಸೊಕ್ಕಿನಲ್ಲಿ ಕಣ್ಣಿಗೆ ಕಾಳಗತ್ತಲೆ ಕವಿದು, ಸತ್ಯ ಸದಾಚಾರದ ಹಕ್ಕೆಯನರಿಯದೆ, ಸೂಳೆ ಸುರೆ ಅನ್ಯದೈವದ ಎಂಜಲ ಭುಂಜಿಸುವ ಕೀಳು ಜಾತಿಗಳು, ಶಿವ ನಿಮ್ಮ ನೆನೆವ ಭಕ್ತರುಗಳ ಅನುವನರಿಯದೆ, ಏಳೇಳುಜನ್ಮ ನರಕಕ್ಕೊಳಗಾದರು ನೋಡಾ ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಶಿವಭಕ್ತನಾದ ಬಳಿಕ ಭವಿ ಮಿಶ್ರವ ನಡೆಯಲಾಗದು ಅನ್ಯದೈವದ ಭಜನೆಯ ಮಾಡಲಾಗದು. `ಮಾತರಃ ಪಿತರಶ್ಚೈವ ಭರ್ತಾರೋ ಬಾಂಧವಾಸ್ತಥಾ ಶಿವಸಂಸ್ಕಾರಹೀನಾಶ್ಚೇತ್ ಪಾಕೋ ಗೋಮಾಂಸಭಕ್ಷಣಂ' ಎಂದುದಾಗಿ ಕೂಡಲಚೆನ್ನಸಂಗಯ್ಯಾ ನಿಮ್ಮ ಲಿಂಗಸಂಗಿಗಳಂಗವಿಸರು
--------------
ಚನ್ನಬಸವಣ್ಣ
ಉಂಬ ಕೂಳಿಗೆ ಉಪದೇಶವ ಮಾಡುವ ಚುಂಬಕರು ಹೆಚ್ಚಿ, ಭಕ್ತಿಯಪಥವ ಕೆಡಿಸಿದರು. ಡೊಂಬ ಡೋಹರ ಹೊಲೆಯರು ಮಾದಿಗರು. ಉಪದೇಶವಿಲ್ಲದವರು ಪಿಂಬೇರ ಅನಾಚಾರಿಯ ಆರಾಧಿಸಿ, ಶಂಭುವಿನ ಸರಿಯೆಂದು ಅವರೊಳಗೆ ಹಲವರು ಕೊಂಬನೂದುವ, ಸೊಣಕನ ಕೊರಳಲ್ಲಿ ಬಾರ ಕವಡೆಯ ಕಟ್ಟಿಕೊಂಡು ನಾಯಾಗಿ ಬೊಗಳುವರು. ಕಂಬದ ಬೊಂಬೆಯ ಮಾಡಿ ಮೈಲಾರ ಭೈರವ ಆಯಿರ (?) ಧೂಳಕೇತನೆಂಬ ಕಾಳುದೈವವ ಊರೂರದಪ್ಪದೆ ತಿರಿದುತಿಂಬ ಡಂಭಕರ ಕೈಯಲ್ಲಿ ಉಪದೇಶವ ಕೊಂಡವರು, ಗುರುಲಿಂಗಜಂಗಮದ ಹೊಲಬನರಿಯದೆ ಭಂಗಿತರಾದರು. ಅಂಗದ ಮೇಲಣ ಸೂತಕ ಹಿಂಗದು. ಅನ್ಯದೈವದ ಜಾತ್ರೆಗೆ ಹೋಗಿ, ನಾಡನರಕದಲ್ಲಿ ಬೆರಣಿಯ ಮಾಡುವ ನಾನಾ ಜಾತಿಗಳು ಹರಕೆಯ ಹಿಂಗಿಸದೆ, ಗುರುಕಾರುಣ್ಯವ ಕೊಟ್ಟವಂಗೆ ಕುಂಭಿನಿಪಾತಕ ತಪ್ಪದೆಂದ ಕಲಿದೇವರದೇವಯ್ಯ.
--------------
ಮಡಿವಾಳ ಮಾಚಿದೇವ
ಅನ್ನದ ಗೊಡವಿಲ್ಲದಾತಂಗೆ ಆರಂಭದ ಗೊಡವಿಯುಂಟೇ ? ಖೇಚರ ಪವನಸಾಧಕಂಗೆ ಭೂಚರದಲಡಿಯಿಡುವ ಬಯಕೆಯುಂಟೇ ? ವಜ್ರಾಂಗಿಯ ತೊಟ್ಟಿಪ್ಪಾತಂಗೆ ಬಾಣದ ಭಯವುಂಟೇನಯ್ಯಾ ? ನಿರ್ಮಾಯಕಂಗೆ ಮಾಯದ ಹಂಗುಂಟೇ ? ನಿವ್ರ್ಯಸನಿಗೆ ವ್ಯಸನದ ಹಂಗುಂಟೇ ? ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥನೊಳು ಬೆರೆದಾತಂಗೆ ಅನ್ಯದೈವದ ಹಂಗುಂಟೇ ?
--------------
ಹೇಮಗಲ್ಲ ಹಂಪ
ಅನ್ಯದೈವವ ಬಿಟ್ಟುದಕಾವುದು ಕ್ರಮವೆಂದಡೆ; ಅನ್ಯದೈವದ ಮಾತನಾಡಲಾಗದು, ಅನ್ಯದೈವದ ಪೂಜೆಯ ನೋಡಲಾಗದು, ಸ್ಥಾವರಲಿಂಗಕ್ಕೆರಗಲಾಗದು, ಆ ಲಿಂಗದ ಪ್ರಸಾದವ ಕೊಳಲಾಗದು, ಇಷ್ಟು ನಾಸ್ತಿಯಾದಡೆ ಅನ್ಯದೈವವ ಬಿಟ್ಟು ಭಕ್ತನೆನಿಸುವನು. ಇವರೊಳಗನುಸರಣೆಯ ಮಾಡಿದನಾದಡೆ, ಕುಂಭೀಪಾಕ ನಾಯಕನರಕದಲ್ಲಿಕ್ಕುವ ನಮ್ಮ ಕೂಡಲಸಂಗಮದೇವರು.
--------------
ಬಸವಣ್ಣ
ಶಿವಲಿಂಗಮೋಹಿತನಾದಡೆ ಅನ್ಯಮೋಹವ ಮರೆಯಬೇಕು. ಶಿವಲಿಂಗ ಭಕ್ತನಾದಡೆ ಅನ್ಯದೈವದ ಭಜನೆ ಮಾಡಲಾಗದು. ಶಿವಲಿಂಗಪೂಜಕನಾದಡೆ ಅನ್ಯದೈವದ ಪೂಜೆಯ ಮಾಡಾಗದು. ಶಿವಲಿಂಗವೀರನಾದಡೆ ಪುಣ್ಯಕ್ಷೇತ್ರಂಗಳ ಕುರಿತು ಹೋಗಲಾಗದು. ಶಿವಲಿಂಗಪ್ರಸಾದಿಯಾದಡೆ ಅಂಗಭೋಗವ ಮರೆಯಬೇಕು. ಶಿವಲಿಂಗಪ್ರಾಣಿಯಾದಡೆ (ಪರ)ಸತಿಸಂಗವ ಮಾಡಲಾಗದು. ಇದು ಕಾರಣ_ ಕೂಡಲಚೆನ್ನಸಂಗಯ್ಯನಲ್ಲಿ ಈ ಆರು ಸಹಿತ ಶಿವಲಿಂಗಭಕ್ತಿ.
--------------
ಚನ್ನಬಸವಣ್ಣ
ಅನ್ಯದೈವವ ಬಿಟ್ಟುದಕ್ಕೆ ಆವುದು ಕ್ರಮವೆಂದರೆ: ಅನ್ಯದೈವವ ಮನದಲ್ಲಿ ನೆನೆಯಲಾಗದು, ಅನ್ಯದೈವವ ಮಾತನಾಡಲಾಗದು. ಅನ್ಯದೈವದ ಪೂಜೆಯ ಮಾಡಲಾಗದು. ಸ್ಥಾವರಲಿಂಗಕ್ಕೆರಗಲಾಗದು. ಆ ಲಿಂಗ ಪ್ರಸಾದವ ಕೊಳಲೆಂತೂ ಬಾರದು. ಇಷ್ಟು ನಾಸ್ತಿಯಾದರೆ ಆತ ಅನ್ಯದೈವವ ಬಿಟ್ಟು ಲಿಂಗವಂತನೆನಿಸಿಕೊಂಬನು. ಇವರೊಳಗೆ ಅನುಸರಣೆಯ ಮಾಡಿಕೊಂಡು ನಡೆದನಾದೊಡೆ ಅವಂಗೆ ಕುಂಭೀಪಾತಕ ನಾಯಕನರಕ ತಪ್ಪದು ಕಾಣಾ ಕೂಡಲಚೆನ್ನಸಂಗಯ್ಯ.
--------------
ಚನ್ನಬಸವಣ್ಣ
ಧ್ಯಾನಕೆಲ್ಲ ಮೂಲ ಗುರುವಿನ ಮೂರ್ತಿ ಕಾಣಿರೊ ! ಪೂಜೆಗೆಲ್ಲ ಮೂಲ ಗುರುವಿನ ಪಾದ ಕಾಣಿರೋ ! ಮಂತ್ರಕೆಲ್ಲ ಮೂಲ ಗುರುವಿನ ವಾಕ್ಯ ಕಾಣಿರೋ ! ಮುಕ್ತಿಗೆಲ್ಲ ಮೂಲ ಗುರುವಿನ ಕೃಪೆ ಕಾಣಿರೋ ! ಗುರು ಹೇಳಿದಂತಿಹುದೆ ವೇದಾಗಮಶಾಸ್ತ್ರ ಕಾಣಿರೋ ! ಸಾಕ್ಷಿ :``ಧ್ಯಾನಮೂಲಂ ಗುರೋರ್ಮೂರ್ತಿಃ ಪೂಜಾಮೂಲಂ ಗುರೋಃ ಪದಂಃ | ಮಂತ್ರಮೂಲಂ ಗುರೋರ್ವಾಕ್ಯಂ | ಮುಕ್ತಿಮೂಲಂ ಗುರೋಃ ಕೃಪಾ ||'' ಎಂದುದಾಗಿ, ಗುರುಮೂರ್ತಿಯ ಧ್ಯಾನದಲ್ಲಿ ನೀನೇಯಾದೆ, ಅನ್ಯವ ಧ್ಯಾನಿಸುವ ಅಜ್ಞಾನಿ ನೀ ಕೇಳಾ. ಗುರುಪಾದಪೂಜೆಯ ಮಾಡದೆ ಅನ್ಯಪೂಜೆಯ ಮಾಡುವ ಅಧಮ ಚಾಂಡಾಲಿ ಮಾನವ ನೀ ಕೇಳಾ. ಗುರುಮಂತ್ರವ ಜಪಿಸದೆ ಅನ್ಯಮಂತ್ರವ ಜಪಿಸುವ ಅನಾಮಿಕ ಹೊಲೆಯ ನೀ ಕೇಳಾ. ಗುರುಕೃಪೆಯ ಪಡೆಯದೆ ಅನ್ಯದೈವದ ಕೃಪೆಯ ಪಡೆದೆನೆಂಬ ಪಾಪಿ ನೀ ಕೇಳಾ. ಗುರುಕರುಣ ಕೃಪೆಯ ಪಡೆದರೆ ಹರಿದು ಹೋಹುದು ನಿನ್ನ ಪೂರ್ವಜನ್ಮದ ಹೊಲೆ. ಗುರುವನರಿಯದೆ, ಲಿಂಗವನರಿಯದೆ, ಜಂಗಮವನರಿಯದೆ, ಅನ್ಯದೈವ ಕೊಟ್ಟಿತೆಂದು ಅನ್ಯವ ಹೊಗಳಿದರೆ ಎಂದೆಂದಿಗೂ ಭವಹಿಂಗದೆಂದಾತ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಹುಟ್ಟಿಸುವ ಹೊಂದಿಸುವ ಶಿವನ ನಿµ*ಯಿಲ್ಲದ ಸಾಹಿತ್ಯವ ಕೊಂಡು, ಕ್ರೀಯಿಲ್ಲದಿರ್ದಡೆ ಭಕ್ತರೆಂತೆಂಬೆನಯ್ಯ ? ಅಟ್ಟ ಕೂಳೆಲ್ಲವಂ ಅನ್ಯದೈವದ ಹೆಸರ ಹೇಳಿ ಭುಂಜಿಸುವ ಚೆಟ್ಟಿ ಮಾಳ ಅಕ್ಕತದಿಗಿಯೆಂದು ತಮ್ಮ ಗೋತ್ರಕ್ಕೆ ಬೊಟ್ಟನಿಡುವರು. ಮುಖ್ಯರಾಗಬೇಕೆಂದು ಅಟ್ಟ ಅಡಿಗೆ ಮೀಸಲವೆಂದು ಅಶುದ್ಧವ ತಿಂಬ ಕಾಗೆಗೆ ಕೂಳ ಚೆಲ್ಲಿ, ತಮ್ಮ ಪಿತರುಂಡರೆಂದು ಮಿಕ್ಕ ಕೂಳ ತಮ್ಮ ಲಿಂಗಕ್ಕೆ ತೋರಿ ಭುಂಜಿಸುವ ಭಕ್ತರೆನಿಸಿಕೊಂಬ ಭ್ರಷ್ಟಜಾತಿಗಳು ಕೆಟ್ಟಕೇಡಿಂಗೆ ಕಡೆಯಿಲ್ಲವೆಂದ, ನಮ್ಮ ಕಲಿದೇವರದೇವ.
--------------
ಮಡಿವಾಳ ಮಾಚಿದೇವ
-->