ಅಥವಾ

ಒಟ್ಟು 19 ಕಡೆಗಳಲ್ಲಿ , 7 ವಚನಕಾರರು , 15 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಡಿಲಲ್ಲಿ ಸುತ್ತಿದ ಹಾವಿನಂತೆ ಮಡಿಲಲ್ಲಿ ಕಟ್ಟಿದಡೇನು ? ಕೊರಳಲ್ಲಿ ಸುತ್ತಿದ ಹಾವಿನಂತೆ ಕೊರಳಲ್ಲಿ ಕಟ್ಟಿದಡೇನು ? ಕಳವು ಹಾದರ ಭವಿಯ ಸಂಗ ಅನ್ಯದೈವವ ಬಿಡದನ್ನಕ್ಕ ಲಿಂಗಭಕ್ತನೆನಿಸಲು ಬಾರದಯ್ಯ. ಅನಾಚಾರದಿಂದ ನರಕ, ಆಚಾರದಿಂದ ಸ್ವರ್ಗ. ಕೂಡಲಚೆನ್ನಸಂಗಯ್ಯನೊಲ್ಲ ಭೂಮಿಭಾರಕರ.
--------------
ಚನ್ನಬಸವಣ್ಣ
ಅಸಮಾಕ್ಷಲಿಂಗಕ್ಕೆ ಅನ್ಯದೈವವ ಸರಿಯೆಂಬವನ ಬಾಯಲ್ಲಿ ಮಸೆದ ಕೂರಲಗನಿಕ್ಕದೆ ಮಾಬನೆ ಹುಸಿಯಾಗಿ ನುಡಿವವನ ನಾಯಾಗಿ ಬಗುಳಿಸನೆ ಹಿರಿಯರುತ್ತಮರೆನ್ನದವರ ಕುದುರೆಯಾಗಿ ಕಟ್ಟಿಸನೆ ಗುರುಲಘುವೆನ್ನದವರ ಬಾಯಲ್ಲಿ ಮೆಟ್ಟಿ ಹುಡಿಯ ಹೊಯ್ಯದೆ ಮಾಬನೆ ಪರಸ್ತ್ರೀಗಳುಪಿದವರ ಗಾಣದಲಿಕ್ಕಿ ಹಿಳಿಯನೆ ಪರಧನಕ್ಕಳುಪಿದವರ ಹಿಡಿ ಖಂಡವ ಕೊಯ್ಯನೆ ಎಲೆ ಕೂಡಲಸಂಗಮದೇವಾ, ನಿಮ್ಮ ಹೇಳಿದ ಹೇಳಿಕೆಯಿಂದ ಪಿಂಬೇರ ಮೈ[ಲುಗ] ಮೇಳವಾಡುತ ಇದ್ದ ಕಾಣಾ, ತೃಜಗದೊಳಗೆ.
--------------
ಬಸವಣ್ಣ
ಹರಿಯ ನಯನ ಹರನ ಶ್ರೀಪಾದದೊಳು ಅಡಕವಾದುದ ಸಟೆಯೆಂಬ ವಿಪ್ರ ನೀ ಕೇಳಾ. ಹರಿ ಸಹಸ್ರಕಮಲದಲ್ಲಿ ಹರನ ಶ್ರೀಪಾದದ ಪೂಜೆ ಮಾಡುತಿರೆ, ಒಂದರಳು ಕುಂದಿದರೆ ನಯನಕಮಲವನೇರಿಸಿ, ಶಿವನ ಪಾದಕೃಪೆಯಿಂದ ಶಂಖ ಚಕ್ರವ ಪಡೆದುದು ಹುಸಿಯೆ ? ಹುಸಿಯಲ್ಲ. ಮತ್ತೆ ಹೇಳುವೆ ಕೇಳು ದ್ವಿಜ. ಹರಿಯಜರಿಬ್ಬರು ಹರನ ಶ್ರೀಪಾದಮಗುಟವ ಕಾಣ್ಬೆನೆಂದು ವರಗೃಧ್ರಗಳಾದುದು ಸಟೆಯೇ ? ಸಾಕ್ಷಿ :``ಯುಗ್ಧಸಂಯುಕ್ತ ಉಭಯ ಚ ದೃಷ್ಟ ಬ್ರಾಹ್ಮಣ ರಾಜಸಬದ್ಧ ವರಗೃಧ್ರ |'' (?) ಎಂದುದಾಗಿ, ಹದ್ದು ಹೆಬ್ಬಂದಿಯಾಗಿ ಶ್ರೀಪರಮಾತ್ಮನ ಮಗುಟಚರಣವ ಕಾಣದೆ ತೊಳಲಿ ಬಳಲುತಿರಲು, ಹರಿಯಜರ ಮಧ್ಯದಲ್ಲಿ ಉರಿಲಿಂಗವಾದ ಪರಮಾತ್ಮನ ನಿಲವನರಿಯದೆ, ಅನ್ಯದೈವವ ತಂದು ಪನ್ನಗಧರಗೆ ಸರಿಯೆಂಬ ಕುನ್ನಿಮಾನವರ ತಲೆಕೆಳಗಾಗಿ ನರಕಕ್ಕೆ ಕೆಡುವುದ ಮಾಣ್ಬನೆ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಭವಿರಹಿತ ಮಜ್ಜನಕ್ಕೆರೆದೆವೆಂಬರು, ಶ್ವಾನ ಮುಟ್ಟಿದ ಎಂಜಲ ಮನಮುಟ್ಟಿ ಉಣ್ಣೆವೆಂಬರು, ಭವಿಯಿಂದ ಕಷ್ಟವಲ್ಲಾ. ಅನ್ಯದೈವವ ಪೂಜಿಸುವ ಸತಿ ಮನೆಯೊಳಗಿದ್ದರೆ ಶ್ವಾನನಿಂದ ಕಷ್ಟವಲ್ಲಾ. ಭವಿಮಿಶ್ರವಾದ ಮನುಷ್ಯರು ಮನೆಯೊಳಗಿದ್ದರೆ ಶ್ವಾನನಿಂದ ಕಷ್ಟವಲ್ಲಾ. ಶ್ವಾನ ಭವಿಗಳೆದೆವೆಂಬವರು, ಅವೆಲ್ಲಿಗೆಯೂ ಹೋಗವು. ಶ್ವಾನ ಭವಿಗಳೆಂಬುಭಯವರ್ಗ ಕಳೆದಲ್ಲದೆ ಕೂಡಲಚೆನ್ನಸಂಗನ ಹೊಂದಬಾರದು.
--------------
ಚನ್ನಬಸವಣ್ಣ
ಇನ್ನು ಗುರುಪೂಜಾವಿಧಿಯ ಕ್ರಮ ತಾನೇ ಅಷ್ಟಾಂಗಯೋಗ. ಅದೆಂತೆಂದಡೆ : ಹಿಂಸೆಯನತಿಗಳೆದು, ಅನ್ಯದೈವವ ಬಿಡುವ, ಅನ್ಯಕರ್ಮವನಾಚರಿಸದಿಹ, ಪರಧನ ಪರಸ್ತ್ರೀ ವರ್ಜಿತ, ಇವು ಐದು ಯಮಯೋಗ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಎತ್ತು ಬಿತ್ತಿತ್ತು, ಒಕ್ಕಲಿಗನಿಂದ ಉತ್ತಮರಿಲ್ಲೆಂದು ನುಡಿವರು. ಹೊತ್ತಾರೆದ್ದು ಶಿವಲಿಂಗಾರ್ಚನೆಯ ಮಾಡಲರಿಯರು. ಎತ್ತಾಗಿ ಬಿತ್ತಿದ ನಮ್ಮ ಬಸವಣ್ಣ. ಹೊತ್ತು ಹೊರೆದನು ಜಗವನು. ಮತ್ತೆ ಮರಳಿ ಅನ್ಯದೈವವ ನೆನೆಯಲೇಕೊ ? ಎತ್ತು ಬಿತ್ತಿತ್ತು, ಹಾಲುಹಯನ ಬಸವನಿಂದಾಯಿತ್ತು. ಇಂತೀ ಬೆಳೆದ ಬಸವನ ಪ್ರಸಾದವನೊಲಿದು, ಮೃತ್ಯು ಮಾರಿಯ ಎಂಜಲ ಮಾಡಿಕೊಂಡು, ಭುಂಜಿಸುವ ತೊತ್ತುಜಾತಿಗಳ ನುಡಿಯ ಕೇಳಲಾಗದೆಂದ ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಗುರುದೀಕ್ಷೆಯ ಪಡೆದು, ಗುರುಲಿಂಗವ ಶಿರದಲ್ಲಿ ಧರಿಸಿ, ಗುರುಮಂತ್ರವ ಕರ್ಣದಲ್ಲಿ ಕೇಳಿ, ಗುರುಕುಮಾರ ತಾನಾಗಿ, ಮುಂಡೆಗೆ ಮುತ್ತೈದೆತನ ಬಂದಂತೆ ಭವದಂಡಲೆಯ ಕಳೆದು, ಶಿವಭಕ್ತನ ಮಾಡಿದ ಗುರುದೈವವನರಿಯದೆ, ಅನ್ಯದೈವವ ಹೊಗಳುವ ಕುನ್ನಿ ಮಾನವ ನೀ ಕೇಳಾ ! ಗರುದೇವರಲ್ಲದನ್ಯದೇವರ ಹೊಗಳಿದರೆ ನರಕವೆಂಬುದನರಿಯಾ. ಗುರುವೆ ಪರಬ್ರಹ್ಮ, ಪರಶಿವ. ಗುರುವಿನಿಂದ ಪರಮಾತ್ಮನ ನೆನಹು ಅಂಗದೊಳು ನೆಲೆಗೊಂಡಿತಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಪಾಪಿಗೆ ಪ್ರಾಯಶ್ಚಿತ್ತವುಂಟು. ಪರವಾದಿಗೆ ಪ್ರಾಯಶ್ಚಿತ್ತವುಂಟು. ಶಿವಭಕ್ತನಾಗಿ ಅನ್ಯದೈವವ ಪೂಜಿಸುವಂಗೆ ಪ್ರಾಯಶ್ಚಿತ್ತವಿಲ್ಲವೆಂದ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ನಾಲಿಗೆಗೆ ಶಿವನ ಹೊಗಳುವುದೇ ವಿಧಿಯೆಂದು ಹೇಳಿತ್ತು ವೇದ. ಮತ್ತೆಯೂ ಶಿವನನೆ ಸ್ತುತಿಸುವುದೆ ವಿಧಿಯೆಂದು ಹೇಳಿತ್ತು ವೇದ. ಅನ್ಯದೈವವ ಹೊಗಳಲಾಗದೆಂದುದು, ಋಗ್ವೇದ. ಸ್ತುಹಿ ಶ್ರುತಂ ಗರ್ತಸದಂ ಯುವಾನಂ ಮೃಗಂ ನ ಬೀಮಮುಪಹತ್ನು ಮುಗ್ರಂ | ಮೃಡಾ ಜರಿತ್ರೇ ರುದ್ರಸ್ತವಾನೋ ಅನ್ಯಂತೇ ಅಸ್ಮಿನ್ನಿವ ಪಂತು ಸೇನಾಃ || ಎಂದುದು ಶ್ರುತಿ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ಅಷ್ಟಾವರಣ ಪಂಚಾಚಾರವುಳ್ಳ ಸದ್ಭಕ್ತರ ಉದರದಲ್ಲಿ ಜನಿಸಿ, ಶಿವಭಕ್ತನಾಗಿದ್ದು, ಭವಿಯ ಸಂಗವ ಮಾಡಿದ ದೇಹ ಪಾಪ. ಆ ಭವಿಯ ಸಂಗಕಿಂದಲೂ ಸುರಾಪಾನಿಯ ಸಂಗ ಪಾಪ. ಆ ಸುರಾಪಾನಿಯ ಸಂಗಕಿಂದಲೂ ಮಾಂಸಾಹಾರಿಯ ಸಂಗ ಪಾಪ. ಆ ಮಾಂಸಾಹಾರಿಯ ಸಂಗಕಿಂದಲೂ ಭಂಗಿಭಕ್ಷಕನ ಸಂಗ ಪಾಪ. ಆ ಭಂಗಿಭಕ್ಷಕನ ಸಂಗಕಿಂದಲೂ ಶಿವಭಕ್ತನಾಗಿ ಅನ್ಯದೈವವ ಭಜಿಸುವವನ ಸಂಗ ಅಂದೇ ದೂರ, ಹಿರಿಯ ನರಕವೆಂದಾತ, ನಮ್ಮ ದಿಟ್ಟ ವೀರಾಧಿವೀರ ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಅನ್ಯದೈವವ ಬಿಟ್ಟುದಕಾವುದು ಕ್ರಮವೆಂದಡೆ; ಅನ್ಯದೈವದ ಮಾತನಾಡಲಾಗದು, ಅನ್ಯದೈವದ ಪೂಜೆಯ ನೋಡಲಾಗದು, ಸ್ಥಾವರಲಿಂಗಕ್ಕೆರಗಲಾಗದು, ಆ ಲಿಂಗದ ಪ್ರಸಾದವ ಕೊಳಲಾಗದು, ಇಷ್ಟು ನಾಸ್ತಿಯಾದಡೆ ಅನ್ಯದೈವವ ಬಿಟ್ಟು ಭಕ್ತನೆನಿಸುವನು. ಇವರೊಳಗನುಸರಣೆಯ ಮಾಡಿದನಾದಡೆ, ಕುಂಭೀಪಾಕ ನಾಯಕನರಕದಲ್ಲಿಕ್ಕುವ ನಮ್ಮ ಕೂಡಲಸಂಗಮದೇವರು.
--------------
ಬಸವಣ್ಣ
ಕೊಡುವಾತ ಶಿವ, ಕೊಂಬಾತ ಶಿವ, ಹುಟ್ಟಿಸುವಾತ ಶಿವ, ಕೊಲ್ಲುವಾತ ಶಿವನೆಂಬ ದೃಷ್ಟವನರಿಯದೆ, ನಡುಮನೆಯಲೊಂದು ದೇವರ ಜಗುಲಿಯನಿಕ್ಕಿ ಅದರ ಮೇಲೆ ಹಲವು ಕಲ್ಲು ಕಂಚು ಬೆಳ್ಳಿ ತಾಮ್ರದ ಪಾತ್ರೆಯನಿಟ್ಟು ಪೂಜೆ ಮಾಡಿ, ತಲೆ, ಹೊಟ್ಟೆ, ಕಣ್ಣುಬೇನೆ ಹಲವು ವ್ಯಾಧಿ ದಿನ ತಮ್ಮ ಕಾಡುವಾಗ ನಮ್ಮನೆದೇವರೊಡ್ಡಿದ ಕಂಟಕವೆಂದು ಬೇಡಿಕೊಂಡು ಹರಕೆಯ ಮಾಡಿ, ತನ್ನ ಸವಿಸುಖವ ಕೊಂಡು ಪರಿಣಾಮಿಸಿ, ವಿಧಿ ವಿಘ್ನ ಹೋದ ಮೇಲೆ ಪರದೇವರು ಕಾಯಿತೆಂದು ನುಡಿವವರ ಲೋಕದ ಗಾದೆಯ ಕಂಡು ನಾ ಬೆರಗಾದೆನೆಂದರೆ : ಹುಟ್ಟಿಸಿದ ಶಿವ ಪರಮಾತ್ಮ ಭಕ್ಷಿಸಿಕೊಂಡೊಯ್ಯುವಾಗ ಕಟ್ಟೆಯ ಮೇಲಣ ಕಲ್ಲು ಕಾಯುವುದೆ ? ಕಾಯದಯ್ಯ. ಮತ್ತೆ ಹೇಳುವೆ ಕೇಳಿರಣ್ಣಾ : ಸಿರಿ ತೊಲಗಿ ದರಿದ್ರ ಎಡೆಗೊಂಡು, ಮನೆಯೊಳಿಹ ಚಿನ್ನ ಬೆಳ್ಳಿ ತಾಮ್ರ ಕಂಚಿನ ಪ್ರತಿಮೆಯನೆಲ್ಲ ಒತ್ತೆಯ ಹಾಕಿ, ಹಣವ ತಂದು, ಉದರವ ಹೊರೆವಗೆ ಎತ್ತ ಹೋದನಯ್ಯಾ ಅವರ ಮನೆಯೊಳಿಹ ಮಿಥ್ಯದೈವ ? ಅಕ್ಕಸಾಲೆಯ ಮನೆಯ ಕುಪ್ಟುಟೆಯಲುರಿವುತಿಹ ಅಗ್ನಿದೇವತೆಗೆ ಗುರಿಯಾಗಿ ಹೋದವಯ್ಯಾ. ಸರ್ವದೇವಪಿತ ಶಂಭು[ವೆಂಬು]ದನರಿಯದೆ ಶಿವನಿಂದ ಹುಟ್ಟಿ, ಶಿವನಿಂದ ಬೆಳೆದು, ಶಿವದೈವವ ಮರೆದು, ಅನ್ಯದೈವವ ಹೊಗಳುವ ಕುನ್ನಿಮಾನವರ ಕಂಡು ನಾ ಬೆರಗಾದೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅನ್ಯದೈವವ ಬಿಟ್ಟುದಕ್ಕೆ ಆವುದು ಕ್ರಮವೆಂದರೆ: ಅನ್ಯದೈವವ ಮನದಲ್ಲಿ ನೆನೆಯಲಾಗದು, ಅನ್ಯದೈವವ ಮಾತನಾಡಲಾಗದು. ಅನ್ಯದೈವದ ಪೂಜೆಯ ಮಾಡಲಾಗದು. ಸ್ಥಾವರಲಿಂಗಕ್ಕೆರಗಲಾಗದು. ಆ ಲಿಂಗ ಪ್ರಸಾದವ ಕೊಳಲೆಂತೂ ಬಾರದು. ಇಷ್ಟು ನಾಸ್ತಿಯಾದರೆ ಆತ ಅನ್ಯದೈವವ ಬಿಟ್ಟು ಲಿಂಗವಂತನೆನಿಸಿಕೊಂಬನು. ಇವರೊಳಗೆ ಅನುಸರಣೆಯ ಮಾಡಿಕೊಂಡು ನಡೆದನಾದೊಡೆ ಅವಂಗೆ ಕುಂಭೀಪಾತಕ ನಾಯಕನರಕ ತಪ್ಪದು ಕಾಣಾ ಕೂಡಲಚೆನ್ನಸಂಗಯ್ಯ.
--------------
ಚನ್ನಬಸವಣ್ಣ
ಭವಿತನವ ಕಳೆದು ಭಕ್ತನಾದ ಬಳಿಕ ಮತ್ತೆ ಭಕ್ತಿಯ ಹೊಲಬ ಹೊದ್ದಲೊಲ್ಲದೆ, ಆಚಾರವನತಿಗಳೆದು ಅನ್ಯದೈವವ ಭಜಿಸಿ, ಅವರೆಂಜಲ ಭುಂಜಿಸಿ ನರಕಕ್ಕಿಳಿವ ಪಾತಕರು ತಾವು ಕೆಟ್ಟುದಲ್ಲದೆ; ಇತ್ತ ಮತ್ತೆ ಎತ್ತಲಾನೊಬ್ಬನು ಸತ್ಯಸದಾಚಾರವಿಡಿದು ಗುರುಲಿಂಗಜಂಗಮವನಾರಾಧಿಸಿ ಪ್ರಸಾದವ ಕೊಂಡು ಬದುಕುವೆನೆಂಬ ಭಕ್ತಿಯುಕ್ತನ ಅಂದಂದಿಗೆ ಜರೆದು, ನಿಮ್ಮ ತಂದೆತಾಯಿಗಳಿಗೆ ಬಳಿವಿಡಿದು ಬಂದ ಕುಲದೈವ ಮನೆದೈವವ ಬಿಟ್ಟು ಈ ಲಿಂಗಜಂಗಮದ ಪ್ರಸಾದ ಭಕ್ತಿಯುಕ್ತಿಗಳಲ್ಲಿ ಏನುಂಟೆಂದು ಕೆಡೆನುಡಿದು ಬಿಡಿಸಿ, ಆ ಅನ್ಯದೈವಂಗಳ ಹಿಡಿಸಿ ತಾ ಕೆಡುವ ಅಘೋರನರಕದೊಳಗೆ ಅವರನೂ ಒಡಗೂಡಿಕೊಂಡು ಮುಳುಗೇನೆಂಬ ಕಡುಸ್ವಾಮಿದ್ರೋಹಿನಾಯ ಹಿಡಿದು, ಮೂಗ ಕೊಯಿದು ನಡೆಸಿ ಕೆಡಹುವ ನಾಯಕನರಕದಲ್ಲಿ ಎನ್ನೊಡೆಯ ಕೂಡಲಚೆನ್ನಸಂಗಯ್ಯ.
--------------
ಚನ್ನಬಸವಣ್ಣ
ಆವಾವ ಘಟವ ಧರಿಸಿ ಜೀವಿಸುವ ಜೀವರಿಗೆ, ಬೇರೆ ಬೇರೆ ಅವಕವಕೆ ತಕ್ಕ ವಿಷಯಜ್ಞಾನವ ಕೊಟ್ಟು ಸಲಹುವ ದೇವನ ಮರೆದು, ಹುಲುದೈವವ ಹಿಡಿದು ಹುಲ್ಲಿಂದ ಕಡೆಯಾದರು ಅಕಟಕಟಾ! ಹೆತ್ತು ಮೊಲೆಯೂಡಿ ಸಲಹುವ ತಾಯ ಮರೆದು, ತೊತ್ತಿನ ಕಾಲಿಗೆ ಬೀಳುವ ವ್ಯರ್ಥಜೀವರ ನೋಡಾ. ನಿತ್ಯ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬ ಕರ್ತನನರಿಯದೆ ಅನ್ಯದೈವವ ಭಜಿಸುವ ಕುನ್ನಿಗಳನೇನೆಂಬೆನು?
--------------
ಸ್ವತಂತ್ರ ಸಿದ್ಧಲಿಂಗ
-->