ಅಥವಾ

ಒಟ್ಟು 46 ಕಡೆಗಳಲ್ಲಿ , 13 ವಚನಕಾರರು , 26 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಯ್ಯಾ, ನಿಮ್ಮ ಶರಣರ ಚರಣದ ಭಕ್ತಿಯೇ ಎನಗೆ ಸಾಲೋಕ್ಯಪದವಯ್ಯಾ. ನಿಮ್ಮ ಶರಣರ ಅರ್ಚನೆ ಪೂಜೆಯೇ ಎನಗೆ ಸಾಮೀಪ್ಯಪದವಯ್ಯಾ. ಅಯ್ಯಾ, ನಿಮ್ಮ ಗಣಂಗಳ ಧ್ಯಾನವೇ ಎನಗೆ ಸಾರೂಪ್ಯಪದವಯ್ಯಾ. ಅಯ್ಯಾ, ನಿಮ್ಮ ಪುರಾತನರ ಜ್ಞಾನಾನುಭಾವ ಸಮರಸಾನಂದವೇ ಎನಗೆ ಸಾಯುಜ್ಯಪದವಯ್ಯಾ. ಇಂತೀ ಚತುರ್ವಿಧಪದಂಗಳನಲ್ಲದೆ ಅನ್ಯವ ನಾನರಿಯೆನಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಅಯ್ಯಾ, ಕಾಮ ಕಾಡಿತ್ತು ಕ್ರೋಧ ಕೊಂದಿತ್ತು ಆಮಿಷ ತಾಮಸಂಗಳೆಳವುತ್ತಿವೆ. ಕರುಣಮಾಡಾ ಹರಹರಾ ಮಹಾದೇವ ಕರುಣಮಾಡಾ ಶಿವಶಿವ ಮಹಾದೇವ ಕರುಣಮಾಡಾ ದೆಸೆಗೆಟ್ಟ ಪಶುವಿಂಗೊಮ್ಮೆ ಕರುಣಮಾಡಾ ವಶವಲ್ಲದ ಪಶುವಿಂಗೊಮ್ಮೆ ಕರುಣಮಾಡಾ ನೀವಲ್ಲದೆ ಬಲ್ಲವರಿಲ್ಲ ಕರುಣಮಾಡಾ ಅನ್ಯವ ನಾನರಿಯೆ ನಿಮ್ಮ ಪಾದವನುರೆ ಮಚ್ಚಿದೆ, ಎನ್ನ ಕಪಿಲಸಿದ್ಧಮಲ್ಲಿಕಾರ್ಜುನಯ್ಯ ತಂದೆ.
--------------
ಸಿದ್ಧರಾಮೇಶ್ವರ
ಸಟೆಯಿಲ್ಲದಂತೆ, ಪ್ರಪಂಚವಿಲ್ಲದಂತೆ, ವೈಶಿಕವಿಲ್ಲದಂತೆ, ನಡೆಸಯ್ಯಾ ಲಿಂಗತಂದೆ. ಒಂದು ನಿಮಿಷವಾದಡೆಯೂ ನಿಮ್ಮ ಶರಣರ ಸಂಗದಲ್ಲಿರಿಸಯ್ಯಾ. ಬೇರೆ ಮತ್ತೆ ಅನ್ಯವ ತೋರದಿರಯ್ಯಾ. ಹೊಲಬುಗೆಟ್ಟೆನಯ್ಯಾ, ಕೂಡಲಸಂಗಮದೇವಾ. 61
--------------
ಬಸವಣ್ಣ
ಗುರುತ್ವವುಳ್ಳ ಮಹದ್ಗುರುವನರಿಯದೆ ನಾನು ಗುರು ತಾನು ಗುರುವೆಂದು ನುಡಿವಿರಿ. ಧನದಲ್ಲಿ ಗುರುವೆ? ಮನದಲ್ಲಿ ಗುರುವೆ? ತನುವಿನಲ್ಲಿ ಗುರುವೆ? ನಿತ್ಯದಲ್ಲಿ ಗುರುವೆ? ವಿದ್ಯೆಯಲ್ಲಿ ಗುರುವೆ? ಭಕ್ತಿಯಲ್ಲಿ ಗುರುವೆ? ಜ್ಞಾನದಲ್ಲಿ ಗುರುವೆ? ವೈರಾಗ್ಯದಲ್ಲಿ ಗುರುವೆ? ದೀಕ್ಷೆಯಲ್ಲಿ ಗುರುವೆರಿ ಶಿಕ್ಷೆಯಲ್ಲಿ ಗುರುವೆರಿ ಸ್ವಾನುಭಾವದಲ್ಲಿ ಗುರುವೆರಿ ಮಾತಾಪಿತರಲ್ಲಿ ಗುರುವೆರಿ ದೇವದಾನವ ಮಾನವರೆಲ್ಲರು ನೀವೆಲ್ಲರು ಆವ ಪರಿಯಲ್ಲಿ ಗುರು ಹೇಳಿರಣ್ಣಾ? ಗುರುವಾರು ಲಘುವಾರೆಂದರಿಯರಿ, ಮನ ಬಂದಂತೆ ನುಡಿದು ಕೆಡುವಿರಾಗಿ. ಹರಿಬ್ರಹ್ಮರು ಗುರುತ್ವಕ್ಕೆ ಸಂವಾದಿಸಿ ಮಹದ್ಗುರುವಪ್ಪ ಪರಂಜ್ಯೋತಿರ್ಲಿಂಗದ ಆದಿಮಧ್ಯಾವಸಾನದ ಕಾಲವನರಿಯದೆ ಲಘುವಾಗಿ ಹೋದರು. ಮತ್ತಂ ಅದೊಮ್ಮೆ ವಿಷ್ಣ್ವಾದಿ ದೇವಜಾತಿಗಳೆಲ್ಲರೂ ನೆರೆದು ನಾ ಘನ, ತಾ ಘನ, ನಾನು ಗುರು, ತಾನು ಗುರುವೆಂದು ಮಹಾಸಂವಾದದಿಂದ ಅತಿತರ್ಕವ ಮಾಡಿ ಗುರುತ್ವವುಳ್ಳ ಪುರುಷನ ನಿಶ್ಚೈಸಲರಿಯದೆ, ಆ ಸಭಾಮಧ್ಯದಿ ಪರಮಾಕಾಶದಿ `ಅತ್ಯತಿಷ*ದ್ದಶಾಂಗುಲನೆನಿಪ' ಮದ್ಗುರುವಪ್ಪ ಮಹಾಲಿಂಗವು ಇವರುಗಳ ಅಜ್ಞಾನವ ಕಂಡು ಮಹಾವಿಪರೀತಕ್ರೀಯಲ್ಲಿ ನಗುತಿರಲು ನಮ್ಮೆಲ್ಲರನೂ ನೋಡಿ ನಗುವ ಪುರುಷನಾರು? ಈ ಪುರುಷನ ನೋಡುವ, ಈ ಪುರುಷನಿಂದ ನಮ್ಮಲ್ಲಿ ಆರು ಘನ ಆರು ಗುರುವೆಂದು ಕೇಳುವೆವೆಂದು ಆ ಮಹಾಪುರುಷನ ಸಮೀಪಕ್ಕೆ ಅಗ್ನಿ ವಾಯು ಮೊದಲಾಗಿಹ ದೇವಜಾತಿಗಳೆಲ್ಲರೂ ಪ್ರತ್ಯೇಕರಾಗಿ ಹೋಗಲು ಅತ್ಯತಿಷ*ದ್ದಶಾಂಗುಲಮಾಗಿರ್ದು ಇವರುಗಳ ಗುರುತ್ವವೆಲ್ಲವನೂ ಒಂದೇ ತೃಣದಲ್ಲಿ ಮುರಿದು ತೃಣದಿಂದವೂ ಕಷ್ಟ ಲಘುತ್ವವ ಮಾಡಿದನು. ಇದು ಕಾರಣ, ಪರಶಿವನೆ ಮದ್ಗುರು ಕಾಣಿರೆ. ಧನದಲ್ಲಿ ಗುರುವೆರಿ ನೀವೆಲ್ಲರು ಧನದಲ್ಲಿ ಗುರುವೆಂಬಡೆ ನೀವು ಕೇಳಿರೆ, ಕಾಣಿವುಳ್ಳವಂಗೆ ಶತಸಂಖ್ಯೆ ಉಳ್ಳವನೆ ಗುರು, ಶತಸಂಖ್ಯೆ ಉಳ್ಳವಂಗೆ ಸಹಸ್ರಸಂಖ್ಯೆ ಉಳ್ಳವನೆ ಗುರು, ಸಹಸ್ರಸಂಖ್ಯೆ ಉಳ್ಳವಂಗೆ ಮಹದೈಶ್ವರ್ಯ ಉಳ್ಳವನೆ ಗುರು, ಮಹದೈಶ್ವರ್ಯ ಉಳ್ಳವಂಗೆ ಕಾಮಧೇನು ಕಲ್ಪವೃಕ್ಷ ಚಿಂತಾಮಣಿ ಮೊದಲಾದ ಮಹದೈಶ್ವರ್ಯವುಳ್ಳ ಇಂದ್ರನೆ ಗುರು. ಇಂದ್ರಂಗೆ ಅನೂನೈಶ್ವರ್ಯವನುಳ್ಳ ಬ್ರಹ್ಮನೆ ಗುರು, ಆ ಬ್ರಹ್ಮಂಗೆ ಐಶ್ವರ್ಯಕ್ಕೆ ಅಧಿದೇವತೆಯಪ್ಪ ಮಹಾಲಕ್ಷ್ಮಿಯನುಳ್ಳ ವಿಷ್ಣುವೆ ಗುರು, ಆ ವಿಷ್ಣುವಿಂಗೆ ಅಷ್ಟಮಹದೈಶ್ವರ್ಯವನುಳ್ಳ ರುದ್ರನೆ ಗುರು, ಆ ರುದ್ರಂಗೆ ಈಶ್ವರನೆ ಗುರು, ಈಶ್ವರಂಗೆ ಸದಾಶಿವನೆ ಗುರು. ಬ್ರಹ್ಮಾ ವಿಷ್ಣುಶ್ಚ ರುದ್ರಶ್ಚ ಈಶ್ವರಶ್ಚ ಸದಾಶಿವಃ ಯೇ ತೇ ಗರ್ಭಗತಾ ಯಸ್ಯ ತಸ್ಮೈ ಶ್ರೀಗುರವೇ ನಮಃ ಎಂದುದಾಗಿ, ಅಂತಹ ಸದಾಶಿವಂಗೆ ಎಮ್ಮ ಪರಶಿವಮೂರ್ತಿ ಶ್ರೀಗುರುವೆ ಗುರು ಕಾಣಿರೆ. ಮನದಲ್ಲಿ ಗುರುವೇ ನೀವೆಲ್ಲರು ದುರ್ಮನಸ್ಸಿಗಳು ಪರಧನ ಪರಸ್ತ್ರೀ ಅನ್ಯದೈವಕ್ಕೆ ಆಸೆ ಮಾಡುವಿರಿ. ಇಂತಹ ದುರ್ಮನಸ್ಸಿನವರನೂ ಸುಮನವ ಮಾಡಿ ಸುಜ್ಞಾನಪದವ ತೋರುವ ಪರಶಿವಮೂರ್ತಿ ಶ್ರೀಗುರುವೆ ಗುರು ಕಾಣಿರೆ. ತನುವಿನಲ್ಲಿ ಗುರುವೆ? ಜನನ ಮರಣ ಎಂಬತ್ತುನಾಲ್ಕು ಲಕ್ಷ ಯೋನಿಯಲ್ಲಿ ಜನಿಸುವ ಅನಿತ್ಯತನು ನಿಮಗೆ. ಇಂತಪ್ಪ ತನುವನುಳ್ಳವರ ಪೂರ್ವಜಾತನ ಕಳೆದು, ಶುದ್ಧತನುವ ಮಾಡಿ ಪಂರ್ಚಭೂತತನುವ ಕಳೆದು, ಶುದ್ಧತನುವ ಮಾಡಿ ಭಕ್ತಕಾಯ ಮಮಕಾಯವೆಂದು ಶಿವನುಡಿದಂತಹ ಪ್ರಸಾದಕಾಯವ ಮಾಡಿ ನಿತ್ಯಸುಖದೊಳಿರಿಸಿದ ಪರಶಿವಮೂರ್ತಿ ಶ್ರೀಗುರುವೇ ಗುರು ಕಾಣಿರೆ. ವಿದ್ಯೆಯಲ್ಲಿ ಗುರುವೆ? ನೀವೆಲ್ಲರು ವೇದದ ಬಲ್ಲಡೆ, ಶಾಸ್ತ್ರವನರಿಯರಿ, ವೇದಶಾಸ್ತ್ರವ ಬಲ್ಲಡೆ, ಪುರಾಣವನರಿಯರಿ, ವೇದಶಾಸ್ತ್ರಪುರಾಣವ ಬಲ್ಲಡೆ, ಆಗಮವನರಿಯರಿ, ವೇದಶಾಸ್ತ್ರಪುರಾಣ ಆಗಮನ ಬಲ್ಲಡೆ ಅವರ ತಾತ್ಪರ್ಯವನರಿಯರಿ, ಅಷ್ಟಾದಶವಿದ್ಯೆಗಳ ಮರ್ಮವನರಿಯರಿ. ವೇದಂಗಳು, `ಏಕ ಏವ ರುದ್ರೋ ನ ದ್ವಿತೀಯಾಯ ತಸ್ಥೇ' ಎಂದವು. ಅದನ್ನರಿಯರಿ ನೀವು, ಅನ್ಯವುಂಟೆಂಬಿರಿ, `ಶಿವ ಏಕೋ ದ್ಯೇಯಃ ಶಿವಶಂಕರಃ ಸರ್ವಮನ್ಯತ್ಪರಿತ್ಯಾಜ್ಯಂ' ಅಂದವು, ನೀವು ಅನ್ಯವ ಧ್ಯಾನಿಸುವಿರಿ, ಅನ್ಯವ ಪೂಜಿಸುವಿರಿ, ವಿದ್ಯೆ ನಿಮಗಿಲ್ಲ, ನಿಮಗೆ ಹೇಳಿಕೊಡುವ ವ್ಯಾಸಾದಿಗಳಿಗಿಲ್ಲ, ಅವರಿಗೆ ಅಧಿಕನಾಗಿಹ ವಿಷ್ಣುಬ್ರಹ್ಮಾದಿಗಳಿಗಿಲ್ಲ, ವೇದಾದಿ ಅಷ್ಟಾದಶವಿದ್ಯೆಗಳ ಶಿವನೆ ಬಲ್ಲನು. ಸರ್ವವಿದ್ಯೆಗಳನೂ ಶಿವನೇ ಮಾಡಿದನು, ಶಿವನೇ ಕರ್ತನು `ಆದಿಕರ್ತಾ ಕವಿಸ್ಸಾಕ್ಷಾತ್ ಶೂಲಪಾಣಿರಿತಿಶ್ರುತಿಃ ಎಂದುದಾಗಿ. `ನಮೋ ಮಂತ್ರಿಣೇ ವಾಣಿಜಾಯ ಕಕ್ಷಾಣಾಂ ಕತಯೇ ನಮಃ ಎಂದುದಾಗಿ, `ಈಶಾನಸ್ಸರ್ವವಿದ್ಯಾನಾಂ ಎಂದುದಾಗಿ, ವಿದ್ಯಾರೂಪನಪ್ಪ ಎಮ್ಮ ಪರಶಿವಮೂರ್ತಿ ಶ್ರೀಗುರುವೇ ವಿದ್ಯೆಯಲ್ಲಿ ಗುರು ಕಾಣಿರೆ, ದೀಕ್ಷೆಯಲ್ಲಿ ಗುರುವೇರಿ ನೀವು `ವರ್ಣಾನಾಂ ಬ್ರಾಹ್ಮಣೋ ಗುರುಃ' ಎಂಬಿರಿ, ಆ ವಿಷ್ಣುವ ಭಜಿಸಿ ವಿಷ್ಣುವೇ ಗುರುವೆಂಬಿರಿ. ಅಂತಹ ವಿಷ್ಣುವಿಂಗೆಯೂ ಉಪಮನ್ಯು ಗುರು ಕಾಣಿರೆ. ಅಂತಹ ಉಪಮನ್ಯು ಮೊದಲಾದ ದೇವಋಷಿ ಬ್ರಹ್ಮಋಷಿ ರಾಜಋಷಿ ದೇವಜಾತಿ ಮಾನವಜಾತಿಗಳಿಗೆ ಪರಶಿವನಾಚಾರ್ಯನಾಗಿ ಉಪದೇಶವ ಮಾಡಿದನು. ವೇದಶಾಸ್ತ್ರ ಆಗಮ ಪುರಾಣಂಗಳಲ್ಲಿ, ವಿಚಾರಿಸಿ ನೋಡಿರೆ. ಅದು ಕಾರಣ ಮಹಾಚಾರ್ಯನು ಮಹಾದೀಕ್ಷಿತನಪ್ಪ ಎಮ್ಮ ಪರಶಿವಮೂರ್ತಿ ಮಹಾಸದ್ಗುರುವೇ ಗುರು ಕಾಣಿರೆ. ಶಿಕ್ಷೆಯಲ್ಲಿ ಗುರುವೇರಿ ನಿಮಗೆ ಶಿಕ್ಷಾಸತ್ವವಿಲ್ಲ. ವೀರಭದ್ರ ದೂರ್ವಾಸ ಗೌತಮಾದಿಗಳಿಂ ನೀವೆಲ್ಲಾ ಶಿಕ್ಷೆಗೊಳಗಾದಿರಿ. ಶಿಕ್ಷಾಮೂರ್ತಿ ಚರಲಿಂಗವಾಗಿ ಶಿಕ್ಷಿಸಿ ರಕ್ಷಿಸಿದನು ಪರಶಿವನು. ಯೇ ರುದ್ರಲೋಕಾದವತೀರ್ಯ ರುದ್ರಾ ಮಾನುಷ್ಯಮಾಶ್ರಿತ್ಯ ಜಗದ್ಧಿತಾಯ ಚರಂತಿ ನಾನಾವಿಧಚಾರುಚೇಷ್ಟಾಸ್ತೇಭ್ಯೋ ನಮಸ್ತ್ರ್ಯಂಬಕಪೂಜಕೇಭ್ಯಃ ಎಂದುದಾಗಿ, ದಂಡಕ್ಷೀರದ್ವಯಂ ಹಸ್ತೇ ಜಂಗಮೋ ಭಕ್ತಿಮಂದಿರಂ ಅತಿಭಕ್ತ್ಯಾ ಲಿಂಗಸಂತುಷ್ಟಿರಪಹಾಸ್ಯಂ ಯಮದಂಡನಂ ಎಂದುದಾಗಿ, ಶಿಕ್ಷೆಯಲ್ಲಿ ಗುರು ಎಮ್ಮ ಪರಶಿವಮೂರ್ತಿ ಮದ್ಗುರುವೇ ಗುರು ಕಾಣಿರೆ. ಸ್ವಾನುಭಾವದಲ್ಲಿ ಗುರುವೆ? ನೀವು ದೇವದಾನವಮಾನವರೆಲ್ಲರು ದೇಹಗುಣವಿಡಿದು ಮದಾಂಧರಾಗಿ ಸ್ವಾನುಭಾವ[ರಹಿತರಾದಿರಿ]. ಸ್ಕಂದ ನಂದಿ ವೀರಭದ್ರ ಭೃಂಗಿನಾಥ ಬಸವರಾಜ ಮೊದಲಾದ ಎಮ್ಮ ಮಾಹೇಶ್ವರರೇ ಸ್ವಾನುಭಾವಸಂಪನ್ನರು. ಇಂತಹ ಮಹಾಮಹೇಶ್ವರರಿಗೆ ಸ್ವಾನುಭಾವವ ಕರುಣಿಸಬಲ್ಲ ಎಮ್ಮ ಪರಶಿವಮೂರ್ತಿ ಮಹದ್ಗುರು[ವೇ] ಸ್ವಾನುಭಾವದಲ್ಲಿ ಗುರು ಕಾಣಿರೆ. ಮಾತಾಪಿತರ ಗುರುವೆಂಬಿರಿ, ಲಘುವಿನಲ್ಲಿ ತಾವೆಲ್ಲರು ಜನಿಸಿದಿರಿ. ತಮ್ಮ ಸ್ಥಿತಿಯೂ ಲಘು, ಲಘುವಾಗಿ ಲಯವಪ್ಪುದು ಗುರುವೆ? ಅಲ್ಲ. ಸೋಮಃ ಪವತೇ ಜನಿತಾ ಮತೀನಾಂ ಜದಿತಾ ದಿವೋ ಜನಿತಾ ಪೃಥ್ವಿವ್ಯಾ ಜನಿತಾಗ್ನೇರ್ಜನಿತಾ ಸೂರ್ಯಸ್ಯ `ಜನಿತೋಥವಿಷ್ಣೋಃ ಎಂದುದಾಗಿ, `ಶಿವೋ ಮಮೈವ ಪಿತಾ ಎಂದುದಾಗಿ, ಸರ್ವರಿಗೂ ಮಾತಾಪಿತನಪ್ಪ ಎಮ್ಮ ಪರಶಿವಮೂರ್ತಿ ಮಹಾಸದ್ಗುರುವೇ ಗುರು ಕಾಣಿರೊ. ಭಕ್ತಿಯಲ್ಲಿ ಗುರುವೆ? ನಿಮಗೆ ಲವಲೇಶ ಭಕ್ತಿಯಿಲ್ಲ, ನೀವೆಲ್ಲರು ಉಪಾಧಿಕರು. ನಿರುಪಾಧಿಕರು ಎಮ್ಮ ಮಹಾಸದ್ಭಕ್ತರು ತನು ಮನ ಧನವನರ್ಪಿಸಿ ಉಂಡು ಉಣಿಸಿ ಆಡಿ ಹಾಡಿ ಸುಖಿಯಾದರು ಶರಣರು. ಇಂತಹ ಶರಣಭರಿತ ಸದಾಶಿವಮೂರ್ತಿ ಮಹಾಸದ್ಗುರುವೇ ಭಕ್ತಿಯಲ್ಲಿ ಗುರು ಕಾಣಿರೆ. ಜ್ಞಾನದಲ್ಲಿ ಗುರುವೇ? ನೀವೆಲ್ಲರು ದೇವದಾನವ ಮಾನವರು ಅಜ್ಞಾನಿಗಳು. ಜ್ಞಾತೃ ಜ್ಞಾನ ಜ್ಞೇಯವಪ್ಪ ಪರಶಿವಲಿಂಗವನರಿಯದೆ ಅಹಂಕಾರದಿಂ ಲಘುವಾದಿರಿ. ಪರಧನ ಪರಸ್ತ್ರೀ ಪರಕ್ಷೇತ್ರಕ್ಕೆ ಆಸೆಮಾಡಿ ಲಘುವಾದಿರಿ ನಿರಾಶಸಂಪೂರ್ಣರು ಶಿವಜ್ಞಾನಸಂಪನ್ನರು ಎಮ್ಮ ಮಾಹೇಶ್ವರರು ಇಂತಹ ಮಾಹೇಶ್ವರರಿಂಗೆ ಶಿವಜ್ಞಾನವ ಕರುಣಿಸುವ ಎಮ್ಮ ಪರಶಿವಮೂರ್ತಿ ಮಹಾಸದ್ಗುರುವೇ ಗುರು ಕಾಣಿರೆ. ವೈರಾಗ್ಯದಲ್ಲಿ ಗುರುವೆ? ನೀವು ಆಶಾಬದ್ಧರು, ನಿರಾಶಾಸಂಪೂರ್ಣರು ಎಮ್ಮ ಸದ್ಭಕ್ತರು. ಇಂತಹ ಭಕ್ತದೇಹಿಕನಪ್ಪ ದೇವ ಎಮ್ಮ ಪರಶಿವಮೂರ್ತಿ ಮಹಾಸದ್ಗುರುವೇ ವೈರಾಗ್ಯದಲ್ಲಿ ಗುರು ಕಾಣಿರೆ. ಇದು ಕಾರಣ, ನಿತ್ಯದಲ್ಲಿ, ಸತ್ಯದಲ್ಲಿ, ಅಷ್ಟಮಹದೈಶ್ವರ್ಯದಲ್ಲಿ ದೀಕ್ಷೆಯಲ್ಲಿ, ಸ್ವಾನುಭಾವದಲ್ಲಿ, ಜ್ಞಾನದಲ್ಲಿ ವಿದ್ಯೆಯಲ್ಲಿ, ಬುದ್ಧಿಯಲ್ಲಿ, ವೈರಾಗ್ಯದಲ್ಲಿ, ಮಾತಾಪಿತರಲ್ಲಿ ಉಪಮಾತೀತನಪ್ಪ ಎಮ್ಮ ಪರಶಿವಮೂರ್ತಿ ಮಹಾಸದ್ಗುರುವೇ ಗುರು ಕಾಣಿರೆ. `ನಾಸ್ತಿ ತತ್ತ್ವಂ ಗುರೋಃ ಪರಂ' ಎಂದುದಾಗಿ, ಮಹಾಘನತರವಪ್ಪ ಪರಶಿವಮೂರ್ತಿ ಮಹಾಸದ್ಗುರುವೇ ಗುರು ಕಾಣಿರೆ. ಲಲಾಟಲೋಚನಂ ಚಾಂದ್ರೀಂ ಕಲಾಮಪಿ ಚ ದೋದ್ರ್ವಯಂ ಅಂತರ್ನಿಧಾಯ ವರ್ತೇ[s]ಹಂ ಗುರುರೂಪೋ ಮಹೇಶ್ವರಿ ಎಂದುದಾಗಿ ಪರಶಿವನೇ ಗುರು, ಶ್ರೀಗುರುವೇ ಪರಶಿವನು. ಇಂತಹ ಮಹಾಸದ್ಗುರುವಪ್ಪ ಪರಶಿವಮೂರ್ತಿ ಕಾರುಣ್ಯವ ಮಾಡಿ, ಸದ್ಭಕ್ತಿಪದವ ತೋರಿದ ಎಮ್ಮ ಗಣನಾಥದೇವರೇ ಗುರು ಕಾಣಿರೆ. ಇದು ಕಾರಣ, ಶರಣಮೂರ್ತಿ ಶ್ರೀಗುರು. ಶ್ರೀಗುರು ಲಿಂಗ ಜಂಗಮ ಒಂದೆಯಾಗಿ ಶ್ರೀಗುರುವೇ ಗುರು, ಉಳಿದದ್ದೆಲ್ಲಾ ಲಘು. ಪರಶಿವಲಿಂಗವೇ ಗುರು, ಉಳಿದವೆಲ್ಲವೂ ಲಘು. ಜಂಗಮವೇ ಗುರು, ಉಳಿದವೆಲ್ಲವೂ ಲಘು. ಇದನರಿದು ಶ್ರೀಗುರುವನೇ ನಂಬುವುದು. ತನು ಮನ ಧನವನರ್ಪಿಸುವುದು, ನಿರ್ವಂಚಕನಾಗಿ ನಿರುಪಾಧಿಕನಾಗಿ ನಿರಾಶಾಸಂಪೂರ್ಣನಾಗಿ, ಧ್ಯಾನಿಸಿ ಪೂಜಿಸಿ ಸದ್ಭಕ್ತಿಯಿಂ ವರ್ತಿಸಿ ಪ್ರಸಾದವ ಪಡೆದು ಮುಕ್ತನಪ್ಪುದಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಬೆಳಕಿನ ಕಳೆಯಲ್ಲಿ. ನಾಗವಾಯುವ ನಿಲಿಸಿದರು ಸುಚಿತ್ತ ಸುಬುದ್ಧಿ ಸುಗೋಷಿ*ಯ ಸುಜ್ಞಾನದ ಬೆಳಗಿನ ಕಳೆಯೊಡನೆ ಸುಳಿದಾಡುವ ಮಹಾಲಿಂಗವಂತರ ಅನುಭಾವದಲ್ಲಿ. ಕೂರ್ಮವಾಯುವ ನಿಲಿಸಿದರು, ಶಿವಶ್ರುತಿ ಶಿವಮಂತ್ರ ಷಡಕ್ಷರಿ ಬೀಜಂಗಳ ಜಪಿಸುವಲ್ಲಿ. ಕೃಕರ ವಾಯುವ ನಿಲಿಸಿದರು ಚತುರ್ವಿಧ ಪುರುಷಾರ್ಥಂಗಳ ಕಳೆದು ಷಡ್ವಿಧ ದಾಸೋಹ ಭಕ್ತರತಿಯಾನಂದ ಸೂಕ್ಷ್ಮಸಂಬಂಧದ ಕೂಟದಲ್ಲಿ ತೆರಹಿಲ್ಲದ ತನ್ನ ತಾನರಿವಲ್ಲಿ. ದೇವದತ್ತವಾಯುವ ನಿಲಿಸಿದರು ಶಿವಲಿಂಗವೆ ಲಿಂಗ ಶಿವಭಕ್ತರೆ ಕುಲಜರು, ಶಿವಾಗಮವೆ ಆಗಮ, ಶಿವಾಚಾರವೆ ಆಚಾರವೆಂಬ ಏಕೋಭಾವದ ನಿಷೆ*ಯಿಂದ ಭಾಷೆಯ ನುಡಿದು ದೃಢವಿಡಿದು ಅನ್ಯವ ಜರಿವಲ್ಲಿ. ಧನಂಜಯ ವಾಯುವ ನಿಲಿಸಿದರು, ಅನಂತ ಪರಿಯಲ್ಲಿ ಧಾವತಿಗೊಂಡು ಕಾಯಕ್ಲೇಶದಿಂದ ತನು ಮನ ಬಳಲಿ ಗಳಿಸಿದಂತಹ ಧನವ ಅನರ್ಥವ ಮಾಡಿ ಕೆಡಿಸದೆ, ಲಿಂಗಾರ್ಚನೆಯ ಮಾಡಿ ಗುರುಲಿಂಗಜಂಗಮವೆಂಬ ತ್ರಿವಿಧ ದಾಸೋಹದ ಪರಿಣಾಮದಲ್ಲಿ, ಈ ದಶವಾಯುಗಳ ಪ್ರಯತ್ನಕ್ಕೆ ಧ್ಯಾನ ಗಮನ ಸಂಗ ಸುಬುದ್ಧಿ ನಿರ್ಗುಣ ತಮಂಧ ಕೋಪ ಚಿಂತೆ ಎಂಬಿವನರಿದು, ದುಶ್ಚಿತ್ತವ ಮುರಿದು, ಅಹಂಕಾರವಳಿದು, ದಶವಾಯುಗಳ ದಶಸ್ಥಾನದಲ್ಲಿ ನಿಲಿಸಿ ಭಕ್ತರಾಗಬೇಕು ಕಾಣಿರೆ, ಎಲೆ ಅಣ್ಣಗಳಿರಾ ! ಅಲ್ಲಲ್ಲಿ ಇವರ ಓತು, ಭರವ ಕೆಡಿಸಿ ತಗ್ಗಲೊತ್ತಿ, ಮೇಲೆ ತಲೆಯೆತ್ತಲೀಯದೆ ದಶವಾಯುಗಳ ದಶಸ್ಥಾನದಲ್ಲಿ [ನಿಲಿಸಿ] ದಶಾವಸ್ಥೆಯಿಂದ ಲಿಂಗವನೊಲಿಸಿದ ಮಹಾಮಹಿಮನ ಮಸ್ತಕವೆ ಶ್ರೀಪರ್ವತ, ಲಲಾಟವೆ ಕೇತಾರವೆನಿಸುವುದು. ಆತನ ಹೃದಯದಲ್ಲಿ ಅಷ್ಟಷಷ್ಟಿ ತೀರ್ಥಂಗಳಿಪ್ಪವು. ಆತನ ಶ್ರೀಪಾದ ವಾರಣಾಸಿ ಅವಿಮುಕ್ತಕ್ಷೇತ್ರದಿಂದ ವಿಶೇಷ. ಆತನ ಪಾದಾಂಗುಷ*ಕ್ಕೆ ಸಮಸ್ತ ತೀರ್ಥಕ್ಷೇತ್ರ ಸಪ್ತಸಮುದ್ರಂಗಳ ತಿರುಗಿ ಮಿಂದ ಒಂದು ಕೋಟಿ ಫಲ ಸರಿಯಲ್ಲ. ಆತನು ಸತ್ಯವೆಂಬ ವೃಕ್ಷವನೇರಿ, ನಿಷೆ*ಯೆಂಬ ಕೊನೆಯ ಹಿಡಿದು ಪರಬ್ರಹ್ಮವೆಂಬ ಫಲವ ಸುವಿವೇಕದಿಂದ ಸವಿದು ಸುಖಿಯಾಗಿರ್ಪನಾಗಿ, ಆತನು ಪುಣ್ಯಪಾಪವೆಂಬೆರಡರ ಸುಖದುಃಖದವನಲ್ಲ; ಗತಿ ಅವಗತಿಯೆಂಬೆರಡರ ಮತಿಗೇಡಿಯಲ್ಲ; ಧರ್ಮ ಕರ್ಮವೆಂಬೆರಡರ ಭ್ರಮೆಯವನಲ್ಲ; ಆತನ ನಿಲವು ಪುಷ್ಪ ನುಂಗಿದ ಪರಿಮಳದಂತೆ, ಆಲಿಕಲ್ಲು ನುಂಗಿದ ಅಪ್ಪುವಿನಂತೆ, ಅಗ್ನಿ ಆಹುತಿಗೊಂಡ ಘೃತದಂತೆ, ಕಬ್ಬುನವುಂಡ ನೀರಿನಂತೆ, ಉರಿಯುಂಡ ಕರ್ಪುರದಂತೆ ! ಆತಂಗೆ ತೋರಲೊಂದು ಪ್ರತಿಯಿಲ್ಲ, ಎಣೆಯಿಲ್ಲ. ಆತ ನಿತ್ಯ ನಿರಂಜನ ಚಿನ್ಮಯ ಚಿದ್ರೂಪ ನಿಶ್ಚಿಂತ ನಿರಾಳನಯ್ಯಾ. ಕೂಡಲಚೆನ್ನಸಂಗಮದೇವಾ, ನಿಮ್ಮ ಪ್ರಾಣಲಿಂಗ ಸಂಬಂಧಿಯ ನಿಲವು ಮಹವ ನುಂಗಿದ ಬಯಲೊ !
--------------
ಮಾರುಡಿಗೆಯ ನಾಚಯ್ಯ
ಅಂಗದ ಕೊನೆಯಲ್ಲಿ ಲಿಂಗ ಮುಂತಲ್ಲದೆ ಸಂಗವ ಮಾಡನಾ ಶರಣನು, ನಯನದ ಕೊನೆಯಲ್ಲಿ ಲಿಂಗ ಮುಂತಲ್ಲದೆ ಅನ್ಯವ ನೋಡನಾ ಶರಣನು, ಶ್ರೋತ್ರದ ಕೊನೆಯಲ್ಲಿ ಲಿಂಗ ಮುಂತಲ್ಲದೆ ಅನ್ಯವ ಕೇಳನಾ ಶರಣನು, ನಾಸಿಕದ ಕೊನೆಯಲ್ಲಿ ಲಿಂಗ ಮುಂತಲ್ಲದೆ ಪರಿಮಳವ ವೇಧಿಸ ಶರಣನು, ಜಿಹ್ವೆಯ ಕೊನೆಯಲ್ಲಿ ಲಿಂಗ ಮುಂತಲ್ಲದೆ ರುಚಿಯ ನಿಶ್ಚಯಿಸ ಶರಣನು, ಕೂಡಲಚೆನ್ನಸಂಗಾ ನಿಮ್ಮ ಶರಣ ಸರ್ವಾಂಗಲಿಂಗಿಯಾದ ಕಾರಣ.
--------------
ಚನ್ನಬಸವಣ್ಣ
ಅಂಗದ ಕೊನೆಯ ಮೊನೆಯಲ್ಲಿ ಸಂಗಿಸುವುದು ಲಿಂಗ ತಾನೆಯಯ್ಯ. ಕಂಗಳ ಕೊನೆಯ ಮೊನೆಯಲ್ಲಿ ಕಾಣುವುದು ಲಿಂಗ ತಾನೆಯಯ್ಯ. ನಾಸಿಕದ ಕೊನೆಯ ಮೊನೆಯಲ್ಲಿ ವಾಸಿಸುವುದು ಲಿಂಗ ತಾನೆಯಯ್ಯ. ಜಿಹ್ವೆಯ ಕೊನೆಯ ಮೊನೆಯಲ್ಲಿ ರುಚಿಸುವುದು ಲಿಂಗ ತಾನೆಯಯ್ಯ. ತ್ವಕ್ಕಿನ ಕೊನೆಯ ಮೊನೆಯಲ್ಲಿ ಸೋಂಕುವುದು ಲಿಂಗ ತಾನೆಯಯ್ಯ. ಶ್ರೋತ್ರದ ಕೊನೆಯ ಮೊನೆಯಲ್ಲಿ ಕೇಳುವುದು ಲಿಂಗ ತಾನೆಯಯ್ಯ. ಭಾವದ ಕೊನೆಯ ಮೊನೆಯಲ್ಲಿ ತೃಪ್ತಿಯಿಂದ ಪರಿಣಾಮಿಸುವುದು ಲಿಂಗ ತಾನೆಯಯ್ಯ. ಇದುಕಾರಣ, ಲಿಂಗ ಮುಂತಲ್ಲದೆ ಸಂಗವ ಮಾಡೆ. ಲಿಂಗ ಮುಂತಲ್ಲದೆ ಅನ್ಯವ ನೋಡೆ. ಲಿಂಗ ಮುಂತಲ್ಲದೆ ಅನ್ಯವ ವಾಸಿಸೆ. ಲಿಂಗ ಮುಂತಲ್ಲದೆ ಅನ್ಯವ ರುಚಿಸೆ. ಲಿಂಗ ಮುಂತಲ್ಲದೆ ಅನ್ಯವ ಸೋಂಕೆ. ಲಿಂಗ ಮುಂತಲ್ಲದೆ ಅನ್ಯವ ಕೇಳೆನು. ಲಿಂಗ ಮುಂತಲ್ಲದೆ ಅನ್ಯವ ಪರಿಣಾಮಿಸೆನು. ಹೀಂಗೆಂಬ ನೆನಹು ನಿತ್ಯಾನಿತ್ಯ ವಿವೇಕವ್ರತವಯ್ಯಾ ಎನಗೆ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ!
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಜಾಗ್ರಸ್ವಪ್ನಸುಷುಪ್ತಿಯಲ್ಲಿ ಮತ್ತೊಂದ ನೆನೆದಡೆ ತಲೆದಂಡ, ತಲೆದಂಡ ! ಹುಸಿಯಾದಡೆ, ದೇವಾ ತಲೆದಂಡ, ತಲೆದಂಡ ! ಕೂಡಲಸಂಗಮದೇವಾ, ನೀವಲ್ಲದೆ ಅನ್ಯವ ನೆನೆದಡೆ ತಲೆದಂಡ, ತಲೆದಂಡ !
--------------
ಬಸವಣ್ಣ
ಎಚ್ಚರವಿರಲೆಂದು ನಿಶ್ಚಯಿಸಿದಿಷ್ಟ, ಅಷ್ಟವಾಗಿ ಅಂಗಮನಪ್ರಾಣಭಾವಂಗಳಿಗೆ ಗೋಚರವಾಗಿರಲು, ಅನ್ಯವ ನೆಚ್ಚಿ ನಾನು ಕೆಟ್ಟೆನಯ್ಯಾ ದಿಟವಾಗಿ. ಚಂದ್ರ ಸೂರ್ಯಮಾರ್ಗವಿಡಿದು ಕಟುಕರೊಳಗಿರ್ದ ಸೈತಾನಸೌಖ್ಯವೇದಿ, ಸಗುಣ ನಿರ್ಗುಣ ನಿರಾವಯವರಿದು ನಿವೇದಿಸಿಕೊಂಬ ನಿಜಪ್ರಸಾದಿಯ ದರ್ಶನ ಸ್ಪರ್ಶನ ಸಂಭಾಷಣೆಯೆಂಬ ಘನಪ್ರಸಾದವ ಕರುಣಿಸಯ್ಯಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಜಾತಲಿಂಗ ಸುಕ್ಷೇತ್ರದಲ್ಲಿ ಪವಿತ್ರಶರಣ, ಪದಾರ್ಥವ ಬಿತ್ತಿ ಪ್ರಸಾದವ ಬೆಳೆವ, ಅಂದಂದಿಗೆ ಹೊಸಫಲವನುಂಬ, ಅನ್ಯವ ಮುಟ್ಟನಾ ಶರಣ. ಕೂಡಲಚೆನ್ನಸಂಗನ ಶರಣ ಮತ್ರ್ಯನೆಂದರೆ ನರಕ ತಪ್ಪದು.
--------------
ಚನ್ನಬಸವಣ್ಣ
ಹಲವುತೆರದ ಕ್ರೀಯನಾಧರಿಸಿ ನಡೆವಲ್ಲಿ ಅಂಗಕ್ಕೆ ಆಚಾರ, ಮನಕ್ಕೆ ಅರಿವು ಮುಂತಾಗಿ, ಪೂರ್ವದ ಸ್ವಸ್ಥಾನ, ಉತ್ತರದ ನಿಶ್ಚಯವ ಕಂಡು, ಸತ್ಕ್ರೀಯಿಂದ ಆದರಿಸಿ, ಪರಧನ ಪರಸತಿ ಪರಾಪೇಕ್ಷೆ ಅನ್ಯನಿಂದೆ ದುರ್ಗುಣ ದುಶ್ಚರಿತ್ರ ದುರ್ವಿಕಾರ ದುರ್ಬೋಧೆ ಇಂತೀ ಅನ್ಯವ ನೇತಿಗಳೆದು, ತನಗೆ ಅನ್ಯವಿಲ್ಲದುದ ಅಂಗೀಕರಿಸಿ, ತಾ ಹಿಡಿದ ವ್ರತಕ್ಕೆ ತನ್ನ ಸತಿಸುತ, ತನ್ನ ಕ್ರೀ ಮುಂತಾದ ಒಡೆಯರು ಭಕ್ತರು ಸಹವಾಗಿ ತಾ ತಪ್ಪದೆ, ತಪ್ಪಿದವರ ಕಂಡು ಒಳಗಿಟ್ಟುಕೊಂಡು ಒಪ್ಪದೆ ಇಪ್ಪ ಭಕ್ತನ ಸತ್ಯದ ಕಾಯವಳಿಯಿತ್ತು ಉಳಿಯಿತ್ತೆಂಬ ಸಂದೇಹವಿಲ್ಲ. ಆತನಿಹಪರದಲ್ಲಿ ಸುಖಿ. ಆತನಾಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ.
--------------
ಅಕ್ಕಮ್ಮ
ಅರ್ಪಿತವ ಮಾಡುವ ಅವಧಾನವು, ಅನ್ಯವ ಸೋಂಕದ ಅವಧಾನವು, ಅರಿಷಡ್ವರ್ಗಂಗಳ ಮುಟ್ಟಲೀಯದವಧಾನದ ಪರಿಯ ನೋಡಾ, ಪಂಚಭೂತವೆಂಬ ಭವಿಯ ಕಳೆದು ಪ್ರಸಾದಿಯಾಗಿಪ್ಪ ಪರಿಯ ನೋಡಾ, ಪಂಚೇಂದ್ರಿಯಂಗಳ ಗುಣವಳಿದು ಪಂಚವಿಂಶತಿತತ್ವದಲ್ಲಿ ಪರಿಣಾಮಿ ಕೂಡಲಸಂಗಮದೇವರಲ್ಲಿ ಚೆನ್ನಬಸವಣ್ಣನು.
--------------
ಬಸವಣ್ಣ
ಕರಸ್ಥಲದಲ್ಲಿ ಶಿವಲಿಂಗವ ಬಿಜಯಂಗೈಸಿಕೊಂಡು ಕಣ್ಣ ಮುಚ್ಚಿ, ಬಾಯ ತೆರೆದು, ಅನ್ಯವ ನೆನೆವನ್ನಬರ ಇನ್ನು ಲಿಂಗದ ಮರ್ಮವನರಿದುದಿಲ್ಲ. ಉಂಟಾದುದ ಹುಸಿಮಾಡಿ, ಇಲ್ಲದುದ ನೆನೆದಡೆ ಅದು ಸಹಜವಾಗಬಲ್ಲುದೆ ? ದೇವದೇಹಿಕ ಭಕ್ತ, ಭಕ್ತದೇಹಿಕ ದೇವನೆಂದುದಾಗಿ, ತನ್ನೊಳಗೆ ಲಿಂಗ, ಲಿಂಗದೊಳಗೆ ತಾನು, ನೆನೆಯಲಿಲ್ಲ, ನೆನೆಯಿಸಿಕೊಳ್ಳಲಿಲ್ಲವಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಭಕ್ತಿ ವಿಶ್ವಾಸ ವಿರಕ್ತಿ ಜಗದ ವೈಭವದ ದೇಹಿಗಳು ಕೇಳಿರೊ. ಅಹಿ ಹಲ್ಲಿ ವಿಹಂಗ ಮಾರ್ಜಾಲ ಜಂಬುಕ ಕರೋತಿ ಜಾತಿ ಉತ್ತರ ಪಿಂಗಲಿ ಲೆಕ್ಕ ಸಹದೇವ ಬೌದ್ಧ ಮತಂಗಳೆಂಬ ನಿಮಿತ್ತವ ನೋಡಿ, ಕಾರ್ಯಸಿದ್ಧಿಯೆಂಬ ಸಾಕಾರಿಗಳಿಗೆ ಆಚಾರ ಅರಿವು ನೀತಿಯೇಕೆ ? ಕರಸ್ಥಲದ ಜ್ಯೋತಿರ್ಮಯಲಿಂಗವಿದ್ದಂತೆ, ಅಪರವನರಿವ ಪರಂಜ್ಯೋತಿಯ ಬೆಳಗು ಇದ್ದಂತೆ, ಇಂತೀ ಅನ್ಯವ ನೀತಿಯೆಂದು ಕೇಳುವಾತ, ಮಾಡುವ ಪೂಜೆ ಹಾವಿನ ಘಾತದಂತೆ. ಆತ ನುಡಿವ ಮಾತಿನ ಬಳಕೆ, ಸುರೆಯ ಮಡಕೆಯಲ್ಲಿ ಹೂಸಿಪ್ಪ ಶ್ವೇತದಂತೆ. ಆತನಿರವು ಮೃತ್ತಿ[ಕೆ]ಯ ಬೊಂಬೆಯ ಜಲದ ಕುಪ್ಪಸದಂತೆ. ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗವೆ ಇದಾರಿಗೂ ಚೋದ್ಯ.
--------------
ಮನುಮುನಿ ಗುಮ್ಮಟದೇವ
ಶಿವಶಿವಾ ಮಹಾಪ್ರಸಾದ ಎನ್ನ ಚರಣವು ನಿಮ್ಮ ಶಿವಾಚಾರಮಾರ್ಗದಲ್ಲಲ್ಲದೆ ಅನ್ಯಮಾರ್ಗದಲ್ಲಿ ಚರಿಸದಂತೆ ಮಾಡಯ್ಯ. ಎನ್ನ ಹಸ್ತವು ನಿಮ್ಮನಲ್ಲದೆ ಅನ್ಯವ ಮುಟ್ಟದಂತೆ ಮಾಡಯ್ಯ. ಎನ್ನ ಕಂಗಳು ನಿಮ್ಮನಲ್ಲದೆ ಅನ್ಯವ ನೋಡದಂತೆ ಮಾಡಯ್ಯ. ಎನ್ನ ಶ್ರೋತ್ರವು ನಿಮ್ಮ ಕಿರ್ತನೆಯನಲ್ಲದೆ ಅನ್ಯವ ಕೇಳದಂತೆ ಮಾಡಯ್ಯ. ಎನ್ನ ಜಿಹ್ವೆಯು ನಿಮ್ಮನಲ್ಲದೆ ಅನ್ಯರ ಹೊಗಳದಂತೆ ಮಾಡಯ್ಯ. ಎನ್ನ ಮನವು ನಿಮ್ಮನಲ್ಲದೆ ಅನ್ಯವ ಬಯಸದಂತೆ ಮಾಡಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಇನ್ನಷ್ಟು ... -->