ಅಥವಾ

ಒಟ್ಟು 14 ಕಡೆಗಳಲ್ಲಿ , 9 ವಚನಕಾರರು , 13 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಗನೆಯ ಚಿತ್ತ, ರಮಣನ ಸುತ್ತಿಮುತ್ತಿ ಅಪ್ಪಿ ಅಗಲದಿಪ್ಪಂತೆ ಜಾಗ್ರ, ಸ್ವಪ್ನ, ಸುಷುಪ್ತಿಯಲ್ಲಿ ಶರಣ ಚಿತ್ತರತಿ ಶಿವಲಿಂಗವ ಸುತ್ತಿ ಮುತ್ತಿ ಅಪ್ಪಿ ಅಗಲದಿಪ್ಪರೆ ಆ ಮಹಾತ್ಮನ ಏನೆಂದುಪಮಿಸುವೆನಯ್ಯ? ಲಿಂಗಪ್ರಾಣಿಯ, ಪ್ರಾಣಲಿಂಗಸಂಬಂದ್ಥಿಯ? ಸ್ವತಂತ್ರ ವಸ್ತುವಿನಲ್ಲಿ ಅರಿವರತು ಬೆರಗು ನಿಬ್ಬೆರಗಾದ, ಘನಲಿಂಗಪ್ರಾಣಿಗೆ ನಮೋ ನಮೋಯೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇಷ್ಟಲಿಂಗದ ಪೂಜೆಯಾವುದು, ಪ್ರಾಣಲಿಂಗದ ಪೂಜೆಯಾವುದು, ಭಾವಲಿಂಗದ ಪೂಡೆಯಾವುದುಯೆಂದರೆ ಹೇಳಿಹೆ ಕೇಳಿರಯ್ಯ. ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆಯ ಮಾಡುವುದು, ಅದು ಇಷ್ಟಲಿಂಗದ ಪೂಜೆ. ಆ ಲಿಂಗವನು ಮನಸ್ಸಿನಲ್ಲಿ ಧ್ಯಾನಿಸಿ ಮನೋಮಧ್ಯದಲಿಪ್ಪ ನಿಃಕಲ ಬ್ರಹ್ಮವನು ಧ್ಯಾನವೆಂಬ ಹಸ್ತದಲ್ಲಿ ಹಿಡಿದು ಕರಸ್ಥಲದಲ್ಲಿಪ್ಪ ಲಿಂಗದ ಗೊತ್ತಿನಲ್ಲಿ ಕಟ್ಟಿ ನೆರೆವುದೀಗ ಪ್ರಾಣಲಿಂಗದ ಪೂಜೆಯೆಂದು ಹೇಳಲ್ಪಟ್ಟಿತ್ತಯ್ಯ. ಮನಸು ಲಿಂಗದಲ್ಲಿ ತಲ್ಲೀಯವಾಗಿ ನಚ್ಚಿ ಮಚ್ಚಿ ಅಚ್ಚೊತ್ತಿ ಅಪ್ಪಿ ಅಗಲದಿಪ್ಪುದೇ ಭಾವಲಿಂಗದ ಪೂಜೆಯೆಂದು ಹೇಳಲ್ಪಟ್ಟಿತ್ತಯ್ಯ. ಇವು ಮೂರು ಲಿಂಗದ ಅರ್ಚನೆ. ಮೂರು ಲಿಂಗದ ಉಪಚಾರ. ಶಿವಾರ್ಥಿಗಳಾದ ವೀರಶೈವರುಗಳು ಮಾಡುವ ಲಿಂಗಾರ್ಚನೆಯ ಕ್ರಮವೆಂದು ಹೇಳಲ್ಪಟ್ಟಿತ್ತಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕಾಯದ ಕರಸ್ಥಲದಲ್ಲಿ ಕಂಡು ಶರಣೆಂಬುದ ಮರೆದು ಶರಣೆನುತಿರ್ದನಯ್ಯಾ. ಮನದ ಕರಸ್ಥಲದಲ್ಲಿ ಕಂಡು ಶರಣೆಂಬುದ ಮರೆದು ಶರಣೆನುತಿರ್ದನಯ್ಯಾ. ಭಾವದ ಕರಸ್ಥಲದಲ್ಲಿ ಕಂಡು ಶರಣೆಂಬುದ ಮರೆದು ಶರಣೆನುತಿರ್ದನಯ್ಯಾ. ಕರ ಮನ ಭಾವದ ಕೊನೆಯ ಮೊನೆಯ ಮೇಲಿರ್ಪ ಗುರುನಿರಂಜನ ಚನ್ನಬಸವಲಿಂಗವನು ಎನ್ನ ಸರ್ವಾಂಗದಲ್ಲಿ ಕಂಡು ತೆರಹಿಲ್ಲದೆ ಅಪ್ಪಿ ಅಗಲದ ಮರೆದ ಶರಣೆನುತಿರ್ದೆನಯ್ಯಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕರ್ಮಿ ಬಲ್ಲನೆ ಭಕ್ತಿಯ ಮರ್ಮವ, ಚರ್ಮವ ತಿಂಬ ಸೊಣಗಬಲ್ಲುದೆ ಪಾಯಸದ ಸವಿಯ? ಉಚ್ಚಿಯ ಬಚ್ಚಲ ಮಚ್ಚಿ ಕಚ್ಚಿ ಕಡಿದಾಡುವ ಮರುಳುಮಾನವರು ನಿಶ್ಚಿಂತ ನಿರಾಳನಿಗೊಲಿದು ಒಚ್ಚತ ಹೋಗಿ ಅಪ್ಪಿ ಅಗಲದಿಪ್ಪ ಅನುಪಮಸುಖನಿವರೆತ್ತ ಬಲ್ಲರು? ಸಂಸಾರವೆಂಬ ಸೊಕ್ಕು ತಲೆಗೇರಿ ಮುಂದುಗಾಣದೆ ಅಕಟಕಟಾ ಕೆಟ್ಟಿತ್ತು ನೋಡ ತ್ರೆ ೈಜಗವೆಲ್ಲ. ಸ್ವರ್ಗ ಮತ್ರ್ಯ ಪಾತಾಳಕ್ಕೆ ಪಶುಪತಿ ಏಕೋದೇವನೆಂದು ಅರಿದು ಸಂಸಾರಪ್ರಪಂಚ ಮರೆಯಾ ಮರುಳೇ. ಪರಮಸುಖದೊಳಗಿರ್ದು ಅಲ್ಪಸುಖಕ್ಕೆ ಆಸೆಮಾಡುವ ಅಜ್ಞಾನಿಗಳನೇನೆಂಬೆನಯ್ಯಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ?
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ತನ್ನ ಪ್ರೀತಿಯ ಪುತ್ರ ಮಿತ್ರಾದಿಗಳು ಪರದೇಶದೊಳಗಿಪ್ಪರೆಂಬ ಭಾವದಲ್ಲಿ ಅಡಗಿದ ಆನಂದಕ್ಕಿಂತ ಮನಮುಟ್ಟಿ ನೆನೆವುದರಿಂದಾದ ಆನಂದ ಮಿಗಿಲಾಗಿಪ್ಪುದು ನೋಡಾ ! ಮನಮುಟ್ಟಿ ನೆನೆವುದರ ಸುಖಕ್ಕಿಂತ, ಅವರನಪ್ಪಿ ಆಲಂಗಿಸುವುದರಿಂದಾದ ಸುಖ ಅಧಿಕವಾಗಿ ತೋರ್ಪುದು ನೋಡಾ ! ಒಮ್ಮೆ ಅಪ್ಪಿ ಆಲಂಗಿಸಿದ ಆನಂದಕ್ಕಿಂತ ಅವರೊಡನೆ ಸದಾ ಕೂಡಿಪ್ಪ ಹರ್ಷ ಹಿರಿದಾಗಿಪ್ಪುದು ನೋಡಾ ! ಇಂತೀ ದೃಷ್ಟಾಂತದಂತೆ, ಪರಶಿವಲಿಂಗವ ಭಾವದಲ್ಲಿ ಭಾವಿಸುವುದಕ್ಕಿಂತ ಮನಮುಟ್ಟಿ ನೆನೆವುದು, ಮನಮುಟ್ಟಿ ನೆನೆವುದಕ್ಕಿಂತ ಕಣ್ಮುಚ್ಚಿ ಕಾಣುವುದು, ಕಣ್ಮುಚ್ಚಿ ಕಾಣುವುದಕ್ಕಿಂತ ಕರಮುಟ್ಟಿ ಪೂಜಿಸುವುದು, ಕರಮುಟ್ಟಿ ಪೂಜಿಸುವುದಕ್ಕಿಂತ ಸದಾ ಅಂಗದಲ್ಲಿ ಹಿಂಗದೆ ಧರಿಸುವ ಹರ್ಷವು, ಪರಮಾವಧಿಯಾಗಿಪ್ಪುದು ನೋಡಾ ! ಇದು ಕಾರಣ_ಕೂಡಲಚೆನ್ನಸಂಗಯ್ಯನ ಶರಣರು ಭಾವದಿಂದ ಮನಕ್ಕೆ, ಮನದಿಂದ ನೇತ್ರಕ್ಕೆ, ನೇತ್ರದಿಂದ ಕರಕ್ಕೆ ಆ ಶಿವಲಿಂಗವ ಬಿಜಯಂಗೈಸಿಕೊಂಡು ಪೂಜಾದಿ ಸತ್ಕ್ರಿಯೆಗಳನಗಲದೆ ಆಲಸದೆ ಆಚರಿಸುತಿಪ್ಪರು
--------------
ಚನ್ನಬಸವಣ್ಣ
ನಿಜಮುಕ್ತಿಗೆ ಸದಾ ಸಂಧಾನದಲ್ಲಿರಬೇಕೆಂದು ಶಿವಶರಣರು ನುಡಿಯುತ್ತಿಪ್ಪರು. ಆ ಸಂಧಾನದ ಹೊಲಬ ನಾನರಿಯೆ, ಎನಗೆ ಮುಕ್ತಿಯಿಲ್ಲ. ಇನ್ನೇವೆನೆಂದು ಕಂಬನಿದುಂಬಿ ಕರಗುತಿಪ್ಪೆ ಮನವೇ. ಗುರು ಕೊಟ್ಟ ಸಂಧಾನವೆ ಕರಕಮಲದಲ್ಲಿ ಪ್ರಸನ್ನ ಪ್ರಸಾದಮಂ ಪ್ರತ್ಯಕ್ಷವಾಗಿ ತೋರುತ್ತಿದೆ. ಗುರು ಕೊಟ್ಟ ಸಂಧಾನವೆ ಎಂಟೆಸಳಿನ ಚೌದಳದ ಮಧ್ಯದಲ್ಲಿ ಹೊಂಗಲಶದಂತೆ ಥಳಥಳನೆ ಹೊಳೆಯುತ್ತಿದೆ. ಗುರುಕೊಟ್ಟ ಸಂಧಾನವೆ ಮುಪ್ಪುರದ ಮಧ್ಯದಲ್ಲಿ ರತ್ನ ಮಿಂಚಿನಂತೆ ಕುಡಿವರಿದು ಉರಿಯುತ್ತಿದೆ. ಗುರು ಕೊಟ್ಟ ಸಂಧಾನವೆ ಪಂಚಪತ್ರದ ಮಧ್ಯದಲ್ಲಿ ಬೆಳ್ದಿಂಗಳ ಲತೆಯಂತೆ ಬೀದಿವರಿದು ಬೆಳಗ ಬೀರುತ್ತಿದೆ. ಈ ಪ್ರಕಾರದ ಬೆಳಗೆ ಮುಕ್ತಿಸಂಧಾನವಾಗಿ ಒಪ್ಪುತ್ತಿಹವು. ಇವನೆ ಕಣ್ದುಂಬಿ ನೋಡು ಇವನೆ ಮನದಣಿವಂತೆ ಹಾಡು ಇವನೆ ಅಪ್ಪಿ ಅಗಲದಿಪ್ಪುದೇ ನಿಜಮುಕ್ತಿ. ತಪ್ಪದು ನೀನಂಜಬೇಡ. ಗುರು ಕೊಟ್ಟ ಸಂಧಾನವಂ ಮರೆದು ಭಿನ್ನವಿಟ್ಟು ಲಕ್ಷಿಪರ ಸಂಧಾನವೆಲ್ಲಾ ಭವಸಂಧಾನವಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಆರೂ ಸಾಧಿಸಬಾರದ ವಸ್ತುವ ಸಾಧಿಸಿ ತಂದುಕೊಟ್ಟನಯ್ಯ ಶ್ರೀಗುರುವೆನ್ನ ಕರಸ್ಥಲಕ್ಕೆ. ಆರೂ ಭೇದಿಸಬಾರದ ವಸ್ತುವ ಭೇದಿಸಿ ತಂದುಕೊಟ್ಟನಯ್ಯ ಶ್ರೀಗುರುವೆನ್ನ ಕರಸ್ಥಲಕ್ಕೆ. ಆರೂ ನೋಡಬಾರದ ವಸ್ತುವ ನೋಡೆಂದು ತಂದುಕೊಟ್ಟನಯ್ಯ ಶ್ರೀಗುರುವೆನ್ನ ಕರಸ್ಥಲಕ್ಕೆ. ಆರೂ ಹಾಡಬಾರದ ವಸ್ತುವ ಹಾಡೆಂದು ತಂದುಕೊಟ್ಟನಯ್ಯ ಶ್ರೀಗುರುವೆನ್ನ ಕರಸ್ಥಲಕ್ಕೆ. ಆರೂ ಕೂಡಬಾರದ ವಸ್ತುವ ಕೂಡೆಂದು ತಂದುಕೊಟ್ಟನಯ್ಯ ಶ್ರೀಗುರುವೆನ್ನ ಕರಸ್ಥಲಕ್ಕೆ. ಎನ್ನ ಕರಸ್ಥಲದಲ್ಲಿ ಮೂರ್ತಿಗೊಂಡು ಬೆಳಗುವ ಪರಬ್ರಹ್ಮವ ಎನ್ನ ಕಂಗಳು ತುಂಬಿ ನೋಡಿ, ಕೈಮುಟ್ಟಿ ಪೂಜಿಸಿ, ಜಿಹ್ವೆತುಂಬಿ ಕೊಂಡಾಡಿ, ಮನತುಂಬಿ ಅಪ್ಪಿ, ಅಗಲದೆ ಇಪ್ಪೆನಯ್ಯ ನಿಮ್ಮ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಪ್ರಾಣಲಿಂಗದಲ್ಲಿ ಅವಿಶ್ವಾಸ ಕಂಡಾ. ತೀರ್ಥಲಿಂಗದಲ್ಲಿ ವಿಶ್ವಾಸವ ಮಾಡುವ, ಬಣಗರ ಎನಗೊಮ್ಮೆ ತೋರದಿರ. ಉಡಿಸಿ ತೊಡಿಸಿ ನೋಡುವ ಗಂಡನ ತನು ಮುಟ್ಟಿ ಅಪ್ಪಿ, ಮನ ಮುಟ್ಟಿ ನೆರೆಯದೆ, ಕಡೆಯಲ್ಲಿದ್ದವರಿಗೆ ಕಾಮಿಸುವ, ತುಡುಗುಣಿ ಹೊಲತಿಯಂತೆ, ತನ್ನ ಲಿಂಗವ ಬಿಟ್ಟು, ಅನ್ಯಲಿಂಗಕ್ಕೆ ಹರಿವ ಅನಾಚಾರಿಗಳಿಗೆ, ಮುನ್ನವೆ ಶಿವನಿಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಬರದ ಮಂಡಲದಲ್ಲಿ ಚಿದಾದಿತ್ಯನುದಯವಾಗಲು ಅಂಬುಜ ಉದಯವಾಗಿ ಅಮರಗಣಂಗಳು ಸಂಭ್ರಮಿಸುತ್ತಿದಾರೆ ನೋಡಾ. ಅಮರಗಣ ತಿಂಥಿಣಿಯೊಳಗೆ ಅನುಪಮ ಮಹಿಮನ ಕಂಡು ಅಪ್ಪಿ ಅಗಲದೆ ಅಪ್ರತಿಮನಾಗಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವವ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮನಮುಟ್ಟಿ ನೆನವಲ್ಲಿ ತನು ನಿಮ್ಮದಾಯಿತ್ತು. ತನುಮುಟ್ಟಿ ಅಪ್ಪಿ, ಮನಮುಟ್ಟಿ ನೆರದು ವನಿತೆಯರ ಕೂಟಕ್ಕೆ ತೆರಪಿಲ್ಲವಾಯಿತ್ತು. ಜನನ ಮರಣದ ಬಾಧೆ ಹರಿಯಿತ್ತು. ಈಶ್ವರ! ನಿಮ್ಮ ಪಾದಸೇವೆಯಿಂದ ಕಾಣಾ!ರಾಮನಾಥ.
--------------
ಜೇಡರ ದಾಸಿಮಯ್ಯ
ಅಂಗ ಮುಟ್ಟಿ ಅಪ್ಪಿ, ಕಂಗಳು ತುಂಬಿ ನೋಡಿ, ಕೈಯಾಟ ಹೆರೆಹಿಂಗದೆ ಪೂಜಿಸಿ, ಮನಕ್ಕೆ ತೆರಪಿಲ್ಲದೆ ಅರಿದು, ಎಡೆಬಿಡುವಿಲ್ಲದ ಸುಖ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವ ಕೂಡುವ ಕೂಟ.
--------------
ಶಿವಲೆಂಕ ಮಂಚಣ್ಣ
ತನು ಭ್ರೂಮಧ್ಯದಲ್ಲಿ, ಮನವನಾನಂದಲ್ಲಿ, ಲೋಕ ಲೋಕಂವೇಕವಾದವೈ. ಅಯ್ಯಾ ನೀನು ತನು ಮನ ನೀನೆ ಅಪ್ಪಿ ಕಂಡಾ ಆದಿಯಾಧಾರಕ್ಕೆ ಸ್ವಾಮಿ ನೀನೆ ನೀನೆ, ಕಪಿಲಸಿದ್ಧಮಲ್ಲಿನಾಥಯ್ಯ.
--------------
ಸಿದ್ಧರಾಮೇಶ್ವರ
ಒಳಗನರಿತು, ಹೊರಗನರಿದಡೆ, ಹೊರಗು ಶುದ್ಧವಲ್ಲ. ಹೊರಗನರಿತು ಒಳಗೆ ನುಡಿದಡೆ, ಅದು ಕಾಣಬಾರದ ಬಯಲು. ಕಣ್ಣಿನಲ್ಲಿ ನೋಡಿ, ಮನದಲ್ಲಿ ಅಪ್ಪಿ, ಉಭಯದೃಷ್ಟವಾಗಿಯಲ್ಲದೆ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರನಾಗ.
--------------
ಸಗರದ ಬೊಮ್ಮಣ್ಣ
-->