ಅಥವಾ

ಒಟ್ಟು 13 ಕಡೆಗಳಲ್ಲಿ , 8 ವಚನಕಾರರು , 13 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿವೈತ್ತಿ ಕಲೆ ಪ್ರತಿಷ್ಠಾಕಲೆ ತಾನಿರ್ದಲ್ಲಿ, ವಿದ್ಯಾಕಲೆ ಶಾಂತಿಕಲೆ ತಾನಿರ್ದಲ್ಲಿ, ಶಾಂತ್ಯತೀತಕಲೆ ಶಾಂತ್ಯತೀತೋತ್ತರಕಲೆ ತಾನಿರ್ದಲ್ಲಿ, ಕರ್ಮಸಾದಾಖ್ಯ ಕರ್ತೃಸಾದಾಖ್ಯ ತಾನಿರ್ದಲ್ಲಿ, ಮೂರ್ತಿಸಾದಾಖ್ಯ ಅಮೂರ್ತಿಸಾದಾಖ್ಯ ತಾನಿರ್ದಲ್ಲಿ , ಶಿವಸಾದಾಖ್ಯ ತಾನಿರ್ದಲ್ಲಿ, ಮಹಾಸಾದಾಖ್ಯ ತಾನಿರ್ದಲ್ಲಿ . ಇವೆಲ್ಲಾ ತನ್ನ ಮೂರ್ತಿಯಿಂದಾದುದಲ್ಲದೆ ಮತ್ತೊಂದು ಮೂರ್ತಿಯಿಂದಾದುದಿಲ್ಲ. ತಾನೆ ಶಿವತತ್ವ ತಾನೆ ಪರತತ್ವ ತಾನೆ ಪರಾತ್ಪರತತ್ವ ತನ್ನಿಂದದ್ಥಿಕವಪ್ಪ ಘನವೊಂದಿಲ್ಲವಾಗಿ ತಾನೆ ನಿರಾಲಂಬ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಶಾಂತ್ಯತೀತೋತ್ತರಕಲೆ, ಶಾಂತ್ಯತೀತಕಲೆಗಳಿಲ್ಲದಂದು, ಶಾಂತಿಕಲೆ ವಿದ್ಯಾಕಲೆಗಳಿಲ್ಲದಂದು, ಪ್ರತಿಷ್ಠೆಕಲೆ ನಿವೃತ್ತಿಕಲೆಗಳಿಲ್ಲದಂದು, ಮಹಾಸಾದಾಖ್ಯ ಶಿವಸಾದಾಖ್ಯವಿಲ್ಲದಂದು, ಅಮೂರ್ತಿಸಾದಾಖ್ಯ ಮೂರ್ತಿಸಾದಾಖ್ಯವಿಲ್ಲದಂದು, ಕರ್ತೃಸಾದಾಖ್ಯ ಕರ್ಮಸಾದಾಖ್ಯವಿಲ್ಲದಂದು, ಅವಾಚ್ಯಪ್ರಣವವಾಗಿದ್ದನಯ್ಯ ಇಲ್ಲದಂತೆ, ನಮ್ಮ ಅಪ್ರಮಾಣಕೂಡಲಸಂಗಮದೇವನು.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಓಂಕಾರವೇ ಶಿವ, ಯಕಾರವೇ ಸದಾಶಿವ, ವಾಕಾರವೇ ಈಶ್ವರ, ಶಿಕಾರವೇ ಮಹೇಶ್ವರ, ಮಃಕಾರವೇ ಈಶ್ವರ, ನಕಾರವೇ ಈಶಾನ. ಈ ಷಡಕ್ಷರವೆ ಷಡ್ವಿಧಮಂತ್ರಮೂರ್ತಿಯಾಗಿ ಒಪ್ಪುತಿಪ್ಪುದಯ್ಯ, ಮತ್ತೆ-ನಕಾರವೇ ಮೂರ್ತಿಬ್ರಹ್ಮ, ಮಃಕಾರವೇ ಪಿಂಡಬ್ರಹ್ಮ, ಶಿಕಾರವೇ ಕಲಾಬ್ರಹ್ಮ, ವಾಕಾರವೇ ಆನಂದಬ್ರಹ್ಮ, ಯಕಾರವೇ ವಿಜ್ಞಾನಬ್ರಹ್ಮ, ಓಂಕಾರವೇ ಪರಬ್ರಹ್ಮ, ಈ ಷಡಕ್ಷರವೆ ಷಡ್ವಿಧಬ್ರಹ್ಮವೆಂದು ಹೇಳಲ್ಪಟ್ಟಿತ್ತು ನೋಡಾ. ಮತ್ತೆ-ನಕಾರವೇ ಕ್ರಿಯಾಶಕ್ತಿ:ಮಕಾರವೇ ಜ್ಞಾನಶಕ್ತಿ, ಶಿಕಾರವೇ ಇಚ್ಛಾಶಕ್ತಿ, ವಾಕಾರವೇ ಆದಿಶಕ್ತಿ, ಯಕಾರವೇ ಪರಶಕ್ತಿ, ಓಂಕಾರವೇ ಚಿಚ್ಛಕ್ತಿ, ಇಂತಿವು ಮಂತ್ರಶಕ್ತಿಸ್ವರೂಪೆಂದರಿವುದು ನೋಡಾ. ಮತ್ತೆ-ನಕಾರವೇ ಕರ್ಮಸಾದಾಖ್ಯ, ಮಃಕಾರವೇ ಕರ್ತೃಸಾದಾಖ್ಯ, ಶಿಕಾರವೇ ಮೂರ್ತಿಸಾದಾಖ್ಯ, ವಾಕಾರವೇ ಅಮೂರ್ತಿಸಾದಾಖ್ಯ; ಯಕಾರವೇ ಶಿವಸಾದಾಖ್ಯ, ಓಂಕಾರವೇ ಮಹಾಸಾದಾಖ್ಯ ನೋಡ. ಮತ್ತೆ-ನಕಾರವೇ ಪೀತವರ್ಣ, ಮಃಕಾರವೇ ನೀಲವರ್ಣ, ಶಿಕಾರವೇ ಕುಂಕುಮವರ್ಣ, ವಾಕಾರವೇ ಶ್ವೇತವರ್ಣ, ಯಕಾರವೇ ಸ್ಫಟಿಕವರ್ಣ, ಓಂಕಾರವೇ ಜ್ಯೋತಿರ್ಮಯಸ್ವರೂಪು ನೋಡಾ. ಇಂತಿವು ಮಂತ್ರಮೂರ್ತಿಯ ವರ್ಣಭೇದವೆಂದರಿವುದಯ್ಯ. ಮತ್ತೆ-ನಕಾರವೇ ಸದ್ಯೋಜಾತಮಂತ್ರಮೂರ್ತಿ. ಮಃಕಾರವೇ ವಾಮದೇವಮಂತ್ರಮೂರ್ತಿ. ಶಿಕಾರವೇ ಅಘೋರಮಂತ್ರಮೂರ್ತಿ. ವಾಕಾರವೇ ತತ್ಪುರುಷಮಂತ್ರಮೂರ್ತಿ. ಯಕಾರವೇ ಈಶಾನ್ಯಮಂತ್ರಮೂರ್ತಿ. ಓಂಕಾರವೇ ಮಹಾಮಂತ್ರಮೂರ್ತಿ. ಇಂತಿವು ಮಂತ್ರಮೂರ್ತಿಯ ವದನಭೇದವೆಂದರಿವುದು ನೋಡಾ. ಮತ್ತೆ-ನಕಾರವೇ ಸತ್ತು, ಮಃಕಾರವೇ ಚಿತ್ತು, ಶಿಕಾರವೇ ಆನಂದ ವಾಕಾರವೇ ನಿತ್ಯ, ಯಕಾರವೇ ಪರಿಪೂರ್ಣ, ಓಂಕಾರವೇ ನಿರಂಜನಸ್ವರೂಪವೆಂದರಿವುದಯ್ಯ. ಮತ್ತೆ-ನಕಾರವೇ ಆಚಾರಲಿಂಗ, ಮಃಕಾರವೇ ಗುರುಲಿಂಗ, ಶಿಕಾರವೇ ಶಿವಲಿಂಗ, ವಾಕಾರವೇ ಜಂಗಮಲಿಂಗ, ಯಕಾರವೇ ಪ್ರಸಾದಲಿಂಗ, ಓಂಕಾರವೇ ಮಹಾಲಿಂಗ ಇಂತಿವು ಷಡಕ್ಷರ ಮಂತ್ರಲಿಂಗವೆಂದರಿವುದಯ್ಯ. ಇಂತಿವು ಲಿಂಗಷಡಕ್ಷರವೆಂದು ಹೇಳಲ್ಪಟ್ಟವು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅತಕ್ರ್ಯ ಅಪ್ರಮಾಣ ಅನಾಮಯ ಅನುಪಮ ಸರ್ವಗತ ಸರ್ವಜ್ಞ ಸರ್ವೇಶ್ವರನಪ್ಪ ಪರಶಿವನು ಜಗತ್‍ಸೃಷ್ಟ್ಯರ್ಥವಾಗಿ ಸಮಸ್ತತತ್ವಂಗಳುತ್ಪತ್ತಿಗೆ ಮೂಲಿಗನಾಗಿ ತನ್ನಿಚ್ಛೆಯ ನೆನಹೆಂಬ ಚಿಂತಾಶಕ್ತಿಯ ಸಹಸ್ರದೊಳೊಂದಂಶದಲ್ಲಿ ಕುಂಡಲಿನಿಯಪ್ಪ ಪರೆ ಜನಿಸಿತ್ತು. ಆ ಪರಶಿವನಪ್ಪ ನಿಷ್ಕಲಬ್ರಹ್ಮವು ಈ ಕುಂಡಲಿನಿಯು [ತಾದಾತ್ಯ]ದಿಂ ಬ್ಥಿನ್ನವಿಲ್ಲದಿಹುದೆ ಸಕಲ ನಿಷ್ಕಲವಪ್ಪ ಸದಾಶಿವನು. ಆ ಸದಾಶಿವನು ತಾನೆ ಸಾದಾಖ್ಯದಿಂ ಪಂಚಬ್ರಹ್ಮಮೂರ್ತಿಯಾದುದು. ಎಂತೆಂದೊಡೆ: ಆ ಕುಂಡಲಿನಿಯಪ್ಪ ಪರೆಯ ಸಹಸ್ರದೊಳೊಂದಂಶಂದಲ್ಲಿ ಆದಿಶಕ್ತಿ ಜನಿಸಿತ್ತು. ಆದಿಶಕ್ತಿಯ ಸಹಸ್ರದೊಳೊಂದಂಶದಲ್ಲಿ ಇಚ್ಛಾಶಕ್ತಿ ಜನಿಸಿತ್ತು. ಇಚ್ಛಾಶಕ್ತಿಯ ಸಹಸ್ರದೊಳೊಂದಂಶದಲ್ಲಿ ಜ್ಞಾನಶಕ್ತಿ ಜನಿಸಿತ್ತು. ಜ್ಞಾನಶಕ್ತಿಯ ಸಹಸ್ರದೊಳೊಂದಂಶದಲ್ಲಿ ಕ್ರಿಯಾಶಕ್ತಿ ಜನಿಸಿತ್ತು. ಆ ನಿಷ್ಕಲವಪ್ಪ ಶಿವನ ನಿಷ್ಕಲೆಯಪ್ಪ ಕುಂಡಲಿನಿಯಪ್ಪ ಪರೆಯ ಹತ್ತರೊಳೊಂದಂಶದಲ್ಲಿ ಶಿವಸಾದಾಖ್ಯ ಜನಿಸಿತ್ತು. ಆದಿಶಕ್ತಿಯ ಹತ್ತರೊಳೊಂದಂಶದಲ್ಲಿ ಅಮೂರ್ತಿಸಾದಾಖ್ಯ ಜನಿಸಿತ್ತು. ಇಚ್ಛಾಶಕ್ತಿಯ ಹತ್ತರೊಳೊಂದಂಶದಲ್ಲಿ ಮೂರ್ತಿಸಾದಾಖ್ಯ ಜನಿಸಿತ್ತು. ಜ್ಞಾನಶಕ್ತಿಯ ಹತ್ತರೊಳೊಂದಂಶದಲ್ಲಿ ಕರ್ತೃಸಾದಾಖ್ಯ ಜನಿಸಿತ್ತು. ಕ್ರಿಯಾಶಕ್ತಿಯ ಹತ್ತರೊಳೊಂದಂಶದಲ್ಲಿ ಕರ್ಮಸಾದಾಖ್ಯ ಜನಿಸಿತ್ತು. ಆ ಕರ್ಮಸಾದಾಖ್ಯವಪ್ಪ ಮಾಹೇಶ್ವರನು ಸಕಲಸ್ವರೂಪದಿಂ ಸೋಮಧರ ಮೊದಲಾದ ಲಿಂಗೋದ್ಭವ ಕಡೆಯಾದ ಪಂಚವಿಂಶತಿಲೀಲೆಯ ತಾಳ್ದ ಸಕಲವಪ್ಪ ಮಾಹೇಶ್ವರನು ಸಕಲನಿಷ್ಕಲವಪ್ಪ ಸದಾಶಿವನು ನಿಷ್ಕಲವಪ್ಪ ಶಿವನೊಬ್ಬನಲ್ಲದೆ ಬೇರಲ್ಲವೆಂಬುದಕ್ಕೆ `ತತ್ಪರಂ ಬ್ರಹ್ಮೇತಿ, ಸ ಏಕೋ ರುದ್ರಸ ಈಶಾನಸ್ಸ ಭಗವಾನ್ ಶ್ರುತಿ: ಸ ಮಹೇಶ್ವರಸ್ಸ ಮಹಾದೇವ ಇತಿ ಇಂತೆಂದುದಾಗಿ, ಏಕಮೇವ ಅದ್ವಿತೀಯನಪ್ಪ ಸೋಮಧರನು, ಉಮಾಸಹವಾದ ಸೋಮನಿಂದ ವಾಯು, ಅಗ್ನಿ, ಪೃಥ್ವಿ, ರವಿ ಮೊದಲಾದ ಅಷ್ಟಮೂರ್ತಿಗಳು ದೇವರ್ಕಳು ಸುರಪ ಹರಿವಿರಿಂಚಿಗಳು ಜನಿಸಿದುದಕ್ಕೆ ಶ್ರುತಿ:ಸೋಮಃ ಪವತೇ ಜನಿತಾ ಮತೀನಾಂ ಜನಿತಾ ದಿವೋ ಜನಿತಾ ಪೃಥಿವ್ಯಾರ್ಜನಿತಾಗ್ನಿ ಸೂರ್ಯಸ್ಯ ಜನಿತೇಂದ್ರಸ್ಯ ಜನಿತಾಥ ವಿಷ್ಣೋಃ ಎಂದುದಾಗಿ, ತನ್ಮಹೇಶ್ವರಕೋಟ್ಯಂಶ ಬ್ರಹ್ಮವಿಷ್ಣುಸಮುದ್ಭವಂ ಋಷಯಃ ಕೃತವೋ ಕೋಟಿರ್ನಿಮಿಷೇಣ ಸಮುದ್ಭವಂ ಎಂದುದಾಗಿ, ಅಷ್ಟತನುವಿನೊಳಗಾದ ಜಗದ ರಚನೆ ಆರಿಂದ ರಚಿಸಿತ್ತು? ಅದ್ಥಿಕಾರ ಲಯ ಭೋಗಕ್ಕೆ ಅವನೊರ್ವ ಕರ್ತನು ಸೃಷ್ಟಿ, ಸ್ಥಿತಿ, ಸಂಹೃತಿ ತಿರೋಧಾನಾನುಗ್ರಹವಾವನಿಂದಹುದು; ಸರ್ವಜ್ಞತ್ವ ಕರ್ತೃತ್ವ ಅನಾದಿಬೋಧತ್ವ ಸ್ವತಂತ್ರತ್ವ ನಿತ್ಯತ್ವ ಅಲುಪ್ತಶಕ್ತಿತ್ವವಾವಗುಂಟು, ಆ ಶಿವನೆ ಘೃತಕಾಠಿಣ್ಯದಂತೆ, ನೀರಾಲಿಕಲ್ಲಂತೆ, ಸಕಲ ಸಕಲನಿಷ್ಕಲ ನಿಷ್ಕಲವಾದವನು, ಸೌರಾಷ್ಟ್ರ ಸೋಮೇಶ್ವರಲಿಂಗನೊಬ್ಬನೆ ಕಾಣಿರೆ.
--------------
ಆದಯ್ಯ
ಆಕಾರ ನಿರಾಕಾರವಿಲ್ಲದಂದು, ಹಮ್ಮುಬಿಮ್ಮುಗಳಿಲ್ಲದಂದು, ಜೀವ ಪರಮರಿಲ್ಲದಂದು, ಮನ ಮನನ ಮನುನೀಯವಿಲ್ಲದಂದು, ಶೂನ್ಯ ನಿಶೂನ್ಯ ನಾಮ ನಿರ್ನಾಮ ಇವೇನೂ ಇಲ್ಲದೆ, ಬಚ್ಚಬರಿಯ ಬಯಲೆ ಸಹಜದಿಂದ ಗಟ್ಟಿಗೊಂಡು, ಘನಲಿಂಗವೆಂಬ ಪುರುಷತತ್ತ್ವವಾಯಿತ್ತಯ್ಯ. ಆ ಘನಲಿಂಗದಿಂದ ಚಿಚ್ಛಕ್ತಿ ಜನಿಸಿದಳು. ಚಿಚ್ಚಕ್ತಿಯಿಂದ ಪರಶಕ್ತಿ ಪುಟ್ಟಿದಳು. ಪರಶಕ್ತಿಯಿಂದ ನಾದ ಬಿಂದು ಕಳೆಗಳಾದವು. ಅಕಾರವೇ ನಾದ, ಉಕಾರವೇ ಬಿಂದು, ಮಕಾರವೇ ಕಳೆ. ಇಂತೀ ತ್ರಿವಿಧಕ್ಕೆ ಪರಶಕ್ತಿಯೇ ತಾಯಿ. ಇಂತೀ ನಾಲ್ಕು ಒಂದಾದಲ್ಲಿ ಓಂಕಾರವಾಯಿತ್ತಯ್ಯ. ಮುಂದೀ ಪ್ರಣವ ತಾನೆ ಪಂಚಲಕ್ಷಣವಾಯಿತ್ತು. ಆ ಘನಲಿಂಗದಿಂದಲೇ ಪಂಚಸಾದಾಖ್ಯಮೂರ್ತಿಗಳಾದುವು. ಆ ಚಿಚ್ಛಕ್ತಿಯಿಂದಲೇ ಪಂಚಶಕ್ತಿಯರಾದರು. ಆ ಪಂಚಶಕ್ತಿಯರಿಂದಲೇ ಪಂಚಕಲೆಗಳಾದವು. ಆ ಪಂಚಲಕ್ಷಣವುಳ್ಳ ಮೂರ್ತಿ ತಾನೆ ತ್ರಯವಾದ ಭೇದವ ಹೇಳಿಹೆನು. ಅದೆಂತೆಂದಡೆ: ಶಿವತತ್ತ್ವ ಸದಾಶಿವತತ್ತ್ವ ಮಾಹೇಶ್ವರತತ್ತ್ವವೆಂದು ಮೂರುತೆರನಾಗಿಪ್ಪುದು. ಬಾಹ್ಯ ನಿಃಕಲತತ್ತ್ವವಾಗಿಪ್ಪುದು. ಒಂದು ಸಕಲನಿಃಕಲತತ್ತ್ವವಾಗಿಪ್ಪುದು. ಒಂದು ಸಕಲತತ್ತ್ವವಾಗಿಪ್ಪುದು. ಶಿವತತ್ತ್ವ ಏಕಮೇವ ಒಂದೆಯಾಗಿಪ್ಪುದು. ಸದಾಶಿವತತ್ತ್ವ ಐದುತೆರನಾಗಿಪ್ಪುದು. ಮಾಹೇಶ್ವರತತ್ವ ಇಪ್ಪತ್ತೆ ೈದು ತೆರನಾಗಿಪ್ಪುದು. ಹೀಂಗೆ ಶಿವತತ್ತ್ವ ಮೂವತ್ತೊಂದು ತೆರನೆಂದರಿವುದು. ಸ್ಥೂಲ, ಸೂಕ್ಷ ್ಮ, ಪರತತ್ವವೆಂಬ ಈ ಮೂರು ತತ್ತ್ವವೆ ಆರಾದ ಭೇದಮಂ ಪೇಳ್ವೆ. ಅದೆಂತೆಂದಡೆ: ಆ ಘನಲಿಂಗದ ಸಹಸ್ರಾಂಶದಲ್ಲಿ ಚಿತ್‍ಶಕ್ತಿ. ಚಿತ್‍ಶಕ್ತಿಯ ಸಹಸ್ರಾಂಶದಿಂದ ಪರಮೇಶ್ವರ. ಪರಮೇಶ್ವರನ ಸಹಸ್ರಾಂಶದಿಂದ ಪರಶಕ್ತಿ. ಆ ಪರಶಕ್ತಿಯ ಸಹಸ್ರಾಂಶದಿಂದ ಸದಾಶಿವನು. ಆ ಸದಾಶಿವನ ಸಹಸ್ರಾಂಶದಿಂದ ಆದಿಶಕ್ತಿ. ಆದಿಶಕ್ತಿಯ ಸಹಸ್ರಾಂಶದಿಂದ ಈಶ್ವರ. ಆ ಈಶ್ವರನ ಸಹಸ್ರಾಂಶದಿಂದ ಇಚ್ಛಾಶಕ್ತಿ. ಇಚ್ಛಾಶಕ್ತಿಯ ಸಹಸ್ರಾಂಶದಿಂದ ಮಾಹೇಶ್ವರ. ಮಾಹೇಶ್ವರನ ಸಹಸ್ರಾಂಶದಿಂದ ಜ್ಞಾನಶಕ್ತಿ. ಆ ಜ್ಞಾನಶಕ್ತಿಯ ಸಹಸ್ರಾಂಶದಿಂದ ರುದ್ರನು. ಆ ರುದ್ರನ ಸಹಸ್ರಾಂಶದಿಂದ ಕ್ರಿಯಾಶಕ್ತಿ. ಆ ಕ್ರಿಯಾಶಕ್ತಿಯ ಸಹಸ್ರಾಂಶದಿಂದ ಈಶಾನ್ಯಮೂರ್ತಿಯಾದನು. ಹೀಂಗೆ ಮೂರು ಆರು ತೆರನಾಯಿತ್ತಯ್ಯ. ಇನ್ನೀ ಲಿಂಗಂಗಳಿಗೆ ಸರ್ವ ಲಕ್ಷಣ ಸಂಪೂರ್ಣವ ಹೇಳಿಹೆನು. ಅದೆಂತೆಂದಡೆ: ಒಂದು ಮೂರ್ತಿ ಸರ್ವತೋಮುಖ ಸರ್ವತೋಚಕ್ಷು, ಸರ್ವತೋಬಾಹು, ಸರ್ವತೋಪಾದ, ಸರ್ವಪರಿಪೂರ್ಣನಾಗಿ ಮಾಣಿಕ್ಯವರ್ಣದ ಧಾತುವಿನಲ್ಲಿ ಭಾವಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ಏಕ ಶಿರಸ್ಸು, ತ್ರಿಣೇತ್ರ, ಎರಡು ಹಸ್ತ, ಎರಡು ಪಾದ. ಮಿಂಚಿನವರ್ಣದ ಧಾತುವಿನಲ್ಲಿ ಜ್ಞಾನಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ಎರಡು ಶಿರಸ್ಸು, ಆರು ಕಂಗಳು, ನಾಲ್ಕು ಭುಜ, ಎರಡು ಪಾದ, ಸುವರ್ಣದ ಧಾತುವಿನಲ್ಲಿ ಮನೋಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ಮೂರು ಮುಖ, ಒಂಬತ್ತು ಕಂಗಳು, ಆರು ಭುಜ, ಎರಡು ಪಾದ, ಶ್ವೇತವರ್ಣದ ಧಾತುವಿನಲ್ಲಿ ಅಹಂಕಾರಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ನಾಲ್ಕುಮುಖ, ಹನ್ನೆರಡು ಕಂಗಳು, ಎಂಟು ಭುಜ, ಎರಡು ಪಾದ, ಕುಂಕುಮವರ್ಣದ ಧಾತುವಿನಲ್ಲಿ ಬುದ್ಧಿಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ಪಂಚಮುಖ, ದಶಭುಜ, ದಶಪಂಚನೇತ್ರ, ದ್ವಿಪಾದ, ತನುಯೇಕ, ಶುದ್ಧಸ್ಫಟಿಕವರ್ಣದ ಧಾತುವಿನಲ್ಲಿ ಚಿತ್ತಗಮ್ಯವಾಗಿ ಒಪ್ಪುತಿಪ್ಪುದು. ನಿರಾಕಾರವೇ ಸಾಕಾರವಾಗಿ ತೋರಿತ್ತು. ಸಾಕಾರ ನಿರಾಕಾರವೇಕವೆಂಬುದನು ಸ್ವಾನುಭಾವದಿಂದ ಅನುಭಾವಕೆ ತಂದೆನಯ್ಯ. ಇದು ತನ್ನಿಂದ ತಾನೆ ಸ್ವಯಂಭುವಾದ ಮೂರ್ತಿಯಲ್ಲದೆ ಮತ್ತೊಂದರಿಂದಾದುದಲ್ಲ. ಇಂತೆಸೆವ ಶಿವನ ಮುಖದಲ್ಲಿ ಒಗೆದ ಭೂತಂಗಳಾವವೆಂದಡೆ: ಸದ್ಯೋಜಾತ ಮುಖದಲ್ಲಿ ಪೃಥ್ವಿ. ವಾಮದೇವ ಮುಖದಲ್ಲಿ ಅಪ್ಪು. ಅಘೋರ ಮುಖದಲ್ಲಿ ಅಗ್ನಿ. ತತ್ಪುರುಷ ಮುಖದಲ್ಲಿ ವಾಯು. ಈಶಾನ್ಯ ಮುಖದಲ್ಲಿ ಆಕಾಶ. ಇಂತುದಯವಾದ ಪಂಚಭೂತಂಗಳು ಪಂಚವಿಂಶತಿತತ್ವವಾದ ಭೇದವ ಹೇಳಿಹೆನು. ಆವಾವೆಂದರೆ: ಪೃಥ್ವಿ ಅಪ್ಪು ತೇಜ ವಾಯು ಆಕಾಶ ಇಂತಪ್ಪ ಸ್ಥೂಲಭೂತಿಕವೈದು. ಪ್ರಾಣ ಅಪಾನ ವ್ಯಾನ ಉದಾನ ಸಮಾನವೆಂದು ವಾಯುಗಳೈದು. ವಾಕು ಪಾಣಿ ಪಾದ ಪಾಯು ಗುಹ್ಯವೆಂದು ಕರ್ಮೇಂದ್ರಿಯಂಗಳೈದು. ಶ್ರೋತ್ರ ತ್ವಕ್ಕು ನೇತ್ರ ಜಿಹ್ವೆ ಘ್ರಾಣವೆಂದು ಬುದ್ಧೀಂದ್ರಿಯಂಗಳೈದು. ಮನ ಬುದ್ಧಿ ಚಿತ್ತ ಅಹಂಕಾರವೆಂದು ಕರಣ ಚತುಷ್ಟಯ ನಾಲ್ಕು. ಜೀವನೊಬ್ಬನು; ಅಂತು ಆತ್ಮತತ್ತ್ವವಿಪ್ಪತ್ತೆ ೈದು. ವಿದ್ಯಾತತ್ತ್ವಹತ್ತು ತೆರನು. ಅದೆಂತೆಂದಡೆ: ಶಾಂತಾತೀತ, ಶಾಂತಿ, ವಿದ್ಯೆ, ಪ್ರತಿಷೆ*, ನಿವೃತ್ತಿ ಎಂದು ಕಲಾಶಕ್ತಿಯರೈದು. ಶಿವಸಾದಾಖ್ಯ ಅಮೂರ್ತಿಸಾದಾಖ್ಯ ಮೂರ್ತಿಸಾದಾಖ್ಯ ಕರ್ತೃಸಾದಾಖ್ಯ ಕರ್ಮಸಾದಾಖ್ಯವೆಂದು ಶಿವಾದಿಯಾದ ಸಾದಾಖ್ಯಮೂರ್ತಿಗಳೈದು. ಅಂತು ವಿದ್ಯಾತತ್ವ ಹತ್ತು ತೆರನು. ದ್ವಿತೀಯ ತತ್ತ್ವಮೂವತ್ತೆ ೈದು ತೆರನು. ಇವೆಲ್ಲಾ ತತ್ತ್ವಂಗಳಿಗನುತ್ತರತತ್ತ್ವವಾಗಿ ಶಿವತತ್ತ್ವವೊಂದು. ಅಂತು ತತ್ತ್ವ ಮೂವತ್ತಾರು. ಅಂತು ಆತ್ಮತತ್ತ್ವ ವಿದ್ಯಾತತ್ತ್ವ ಶಿವತತ್ತ್ವವೆಂಬ ತ್ರೆ ೈತತ್ತ್ವ ಮೂವತ್ತಾರು ತೆರನು. ಈ ತತ್ತ್ವಂಗಳಲ್ಲಿಯೇ ತತ್ತ್ವಮಸ್ಯಾದಿ ವಾಕ್ಯಾರ್ಥ ಕಾಣಲಾಯಿತ್ತು. ಅದು ಹೇಂಗೆಂದಡೆ: ತತ್‍ಪದ ತ್ತ್ವಂಪದ ಅಸಿಪದವೆಂದು ಮೂರು ತೆರನು. ತತ್‍ಪದವೆಂದು ತೂರ್ಯನಾಮದ ಶಿವತತ್ತ್ವವು. ತ್ವಂ ಪದವೆಂದು ಇಪ್ಪತ್ತೆ ೈದು ತೆರನಾಗುತಂ ಇದ್ದಂಥಾ ಆತ್ಮತತ್ತ್ವವು. ಅಸಿ ಪದವೆಂದು ಹತ್ತು ತೆರನಾಗುತಂ ಇದ್ದಂಥಾ ವಿದ್ಯಾತತ್ತ್ವವು. ತತ್‍ಪದವೇ ಲಿಂಗ, ತ್ವಂ ಪದವೇ ಅಂಗ, ಅಸಿ ಪದವೇ ಲಿಂಗಾಂಗ ಸಂಬಂಧ. ಈ ತ್ರಿವಿಧ ಪದವನೊಳಕೊಂಡು ನಿಂದುದೇ ಪರತತ್ತ್ವವಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಬಳಿಕಮೀ ಪಂಚವಿಂಶತಿ ಬ್ರಹ್ಮಂಗಳ ಲಕ್ಷಣಮಂ ಪೇಳ್ವೆನೆಂತೆನೆ- ಈಶಾನಾಮೀಶ್ವರಂ ಬ್ರಹ್ಮಶಿವಂ ಸದಾಶಿವಗೀ ಪಂಚಮೂತ್ರ್ಯಾಕೃತಿಗಳಾವಾವವುಂಟವೆ ಪಂಚ ಪ್ರಣವಾಕೃತಿಗಳಿವೆ ಸದ್ಯಾದಿ ಪಂಚಬ್ರಹ್ಮಂಗಳವರ ಲಕ್ಷಣಮೆಂತನೆ ಪೇಳ್ವೆಂ- ಕರ್ತೃಸಾದಾಖ್ಯ, ಕರ್ಮಸಾದಾಖ್ಯ, ಮೂರ್ತಿಸಾದಾಖ್ಯ, ಅಮೂರ್ತಿಸಾದಾಖ್ಯ, ಶಿವಸಾದಾಖ್ಯಂಗಳವರ ಭಾವಮಂ ತರದಿಂ ಸದ್ಯಾದಿಗಳಲ್ಲಿ ತಿಳಿವುದು. ಇಂತು ತಿಳಿದೊಡೆ ಪರಿವಿಡಿಯಿಂ ಪಂಚಪ್ರಸಾದಂಗಳ ಕುರುಪುಗಳುಂಟಾದಪವೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮತ್ತಂತರದಿಂ ಪಂಚಬ್ರಹ್ಮಮೂರ್ತಿ ಧ್ಯಾನದ ನಿರೂಪಣಾನಂತರದಲ್ಲಿ ಪಿಂಡಸಾದಾಖ್ಯಮಂ ಪೇಳ್ವೆನೆಂತೆನೆ- ಸದ್ಯೋಜಾತಮುಖವೆ ಮೂರ್ತಿಸಾದಾಖ್ಯ ಪಿಂಡಬ್ರಹ್ಮಂ. ವಾಮದೇವಮುಖವೆ ಅಮೂರ್ತಿಸಾದಾಖ್ಯ ಪಿಂಡಬ್ರಹ್ಮಂ. ಅಘೋರಮುಖವೆ ಕರ್ತೃಸಾದಾಖ್ಯ ಪಿಂಡಬ್ರಹ್ಮಂ. ತತ್ಪುರುಷಮುಖವೆ ಕರ್ಮಸಾದಾಖ್ಯ ಪಿಂಡಬ್ರಹ್ಮಂ. ಈಶಾನಮುಖವೆ ಶಿವಸಾದಾಖ್ಯ ಪಿಂಡಬ್ರಹ್ಮ- ಮಿಂತನ್ಯೋನ್ಯ ಭೇದದಿಂ ಪಂಚಮುಖವೆ ಪಂಚಸಾದಾಖ್ಯ ಪಿಂಡಬ್ರಹ್ಮವೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ತಾರಕಾಕೃತಿ, ನಕಾರಪ್ರಣಮ, ಆಧಾರಚಕ್ರ, ಸದ್‍ಭಕ್ತನೆ ಅಂಗ, ಸುಚಿತ್ತವೆ ಹಸ್ತ, ಆಚಾರಲಿಂಗ, ಘ್ರಾಣವೆಂಬ ಮುಖ, ಕ್ರಿಯಾಶಕ್ತಿ, ಶ್ರದ್ಧಾಭಕ್ತಿ, ಸುಗಂಧಪದಾರ್ಥ, ಗಂಧಪ್ರಸಾದ, ನಿವೃತ್ತಿಕಲೆ, ಕರ್ಮಸಾದಾಖ್ಯ, ಸತ್ತುವೆಂಬ ಲಕ್ಷಣ, ಪರವೆಂಬ ಸಂಜ್ಞೆ, ಋಗ್ವೇದ- ಇಂತಿವೆಲ್ಲವು ಇಷ್ಟಲಿಂಗದ ವೃತ್ತದಲ್ಲಿ ಸಂಬಂಧವು. ದಂಡಕಾಕೃತಿ, ಮಕಾರಪ್ರಣಮ, ಸಾಧಿಷಾ*ನಚಕ್ರ, ಮಹೇಶ್ವರನೆ ಅಂಗ, ಸುಬುದ್ಧಿಯೆ ಹಸ್ತ, ಗುರುಲಿಂಗ, ಜಿಹ್ವೆಯೆಂಬ ಮುಖ, ಜ್ಞಾನಶಕ್ತಿ, ನೈಷಿ*ಕಭಕ್ತಿ , ಸುರಸಪದಾರ್ಥ, ರಸಪ್ರಸಾದ, ಪ್ರತಿಷಾ*ಕಲೆ, ಕರ್ತೃಸಾದಾಖ್ಯ, ಚಿತ್ತುವೆಂಬ ಲಕ್ಷಣ, ಗೂಢವೆಂಬ ಸಂಜ್ಞೆ, ಯುಜುರ್ವೇದ ಇಂತಿವೆಲ್ಲವು ಇಷ್ಟಲಿಂಗದ ಕಟಿಯಲ್ಲಿ ಸಂಬಂಧವು. ಕುಂಡಲಾಕೃತಿ, ಶಿಕಾರಪ್ರಣಮ, ಮಣಿಪೂರಕಚಕ್ರ, ಪ್ರಸಾದಿಯೆ ಅಂಗ, ನಿರಹಂಕಾರವೆ ಹಸ್ತ , ಶಿವಲಿಂಗನೇತ್ರವೆಂಬ ಮುಖ, ಇಚ್ಛಾಶಕ್ತಿ , ಸಾವಧಾನಭಕ್ತಿ , ಸುರೂಪುಪದಾರ್ಥ, ರೂಪುಪ್ರಸಾದ, ವಿದ್ಯಾಕಲೆ, ಮೂರ್ತಿಸಾದಾಖ್ಯ, ಆನಂದವೆಂಬ ಲಕ್ಷಣ, ಶರೀರಸ್ಥವೆಂಬ ಸಂಜ್ಞೆ, ಸಾಮವೇದ- ಇಂತಿವೆಲ್ಲ ಇಷ್ಟಲಿಂಗದ ಗೋಳಕದಲ್ಲಿ ಸಂಬಂಧವು. ಅರ್ಧಚಂದ್ರಾಕೃತಿ, ವಕಾರಪ್ರಣಮ, ಅನಾಹತ ಚಕ್ರ, ಪ್ರಾಣಲಿಂಗಿಯೆ ಅಂಗ, ಸುಮನವೆ ಹಸ್ತ , ಜಂಗಮಲಿಂಗ, ತ್ವಗೀಂದ್ರಿಯವೆಂಬ ಮುಖ, ಆದಿಶಕ್ತಿ , ಅನುಭಾವಭಕ್ತಿ , ಸುಸ್ಪರ್ಶನಪದಾರ್ಥ, ಸ್ಪರ್ಶನಪ್ರಸಾದ, ಶಾಂತಿಕಲೆ, ಅಮೂರ್ತಿಸಾದಾಖ್ಯ, ನಿತ್ಯವೆಂಬ ಲಕ್ಷಣ, ಲಿಂಗಕ್ಷೇತ್ರಸಂಜ್ಞೆ, ಅಥರ್ವಣವೇದ- ಇಂತಿವೆಲ್ಲ ಇಷ್ಟಲಿಂಗದ ಗೋಮುಖದಲ್ಲಿ ಸಂಬಂಧವು. ದರ್ಪಣಾಕೃತಿ, ಯಕಾರಪ್ರಣಮ, ವಿಶುದ್ಧಿ ಚಕ್ರ, ಶರಣನೆ ಅಂಗ, ಸುಜ್ಞಾನವೆ ಹಸ್ತ, ಪ್ರಸಾದಲಿಂಗ, ಶ್ರೋತ್ರವೆಂಬ ಮುಖ, ಪರಾಶಕ್ತಿ , ಆನಂದ ಭಕ್ತಿ , ಸುಶಬ್ದಪದಾರ್ಥ, ಶಬ್ದಪ್ರಸಾದ, ಶಾಂತ್ಯತೀತಕಲೆ, ಶಿವಸಾದಾಖ್ಯ, ಪರಿಣಾಮವೆಂಬ ಲಕ್ಷಣ, ಅನಾದಿವತ್ ಎಂಬ ಸಂಜ್ಞೆ, ಅಜಪೆವೇದ- ಇಂತಿವೆಲ್ಲ ಇಷ್ಟಲಿಂಗದ ನಾಳದಲ್ಲಿ ಸಂಬಂಧವು. ಒಂಕಾರಾಕೃತಿ, ಒಂಕಾರಪ್ರಣಮ, ಆಜ್ಞೇಯಚಕ್ರ, ಐಕ್ಯನೆ ಅಂಗ, ಸದ್‍ಭಾವಹಸ್ತ, ಮಹಾಲಿಂಗ, ಹೃದಯವೆಂಬ ಮುಖ, ಚಿಚ್ಛಕ್ತಿ , ಸಮರಸಭಕ್ತಿ , ಸುತೃಪ್ತಿಪದಾರ್ಥ, ತೃಪ್ತಿಪ್ರಸಾದ, ಶಾಂತ್ಯತೀತೋತ್ತರಕಲೆ, ಮಹಾಸಾದಾಖ್ಯ, ಅಖಂಡವೆಂಬ ಲಕ್ಷಣ, ಮಹಾಸಂಜ್ಞೆ, ಗಾಯತ್ರಿಯೆಂಬ ವೇದ- ಇಂತಿವೆಲ್ಲ ಇಷ್ಟಲಿಂಗದ ಮಸ್ತಕದಲ್ಲಿ ಸಂಬಂಧವು. ಇಂತೀ ತೊಂಬತ್ತಾರು ಸಕೀಲಗಳನೊಳಕೊಂಡ ಮಹಾಘನ ಪರಾತ್ಪರವಾದ ಇಷ್ಟಲಿಂಗವನೆ ಕರ ಮನ ಭಾವದೊಳಗೆ ಕುಳ್ಳಿರಿಸಿ ಅರ್ಚಿಸಿ, ಧ್ಯಾನಿಸಿ ಕೂಡಿ ಎರಡಳಿದ ಮಹಾಘನ ಶರಣರ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಪ್ರಾಣಲಿಂಗಿಗೆ ವಾಯುವೆ ಅಂಗ, ಆ ಅಂಗಕ್ಕೆ ಸುಮನವೆ ಹಸ್ತ, ಆ ಹಸ್ತಕ್ಕೆ ಅಮೂರ್ತಿಸಾದಾಖ್ಯ, ಆ ಸಾದಾಖ್ಯಕ್ಕೆ ಆದಿಶಕ್ತಿ, ಆ ಶಕ್ತಿಗೆ ಜಂಗಮಲಿಂಗ, ಆ ಲಿಂಗಕ್ಕೆ ಶಾಂತಿಯೇ ಕಳೆ, ಆ ಕಳೆಗೆ ತ್ವಗಿಂದ್ರಿಯವೆ ಮುಖ, ಆ ಮುಖಕ್ಕೆ ಸ್ಪರ್ಶದ್ರವ್ಯಂಗಳನು ರೂಪು_ರುಚಿ_ತೃಪ್ತಿಯನರಿದು ಅನುಭಾವಭಕ್ತಿಯಿಂದರ್ಪಿಸಿ, ಆ ಸುಸ್ಪರ್ಶಪ್ರಸಾದವನು ಭೋಗಿಸಿ ಸುಖಿಸುತ್ತಿಹನು ಕೂಡಲಚೆನ್ನಸಂಗಾ ನಿಮ್ಮ ಪ್ರಾಣಲಿಂಗಿ
--------------
ಚನ್ನಬಸವಣ್ಣ
ಅಯ್ಯಾ, ಎನ್ನಾಧಾರಚಕ್ರದಲ್ಲಿ ಕರ್ಮಸಾದಾಖ್ಯ ಹೊಂದಿ, ನಿವೃತ್ತಿಕಲಾಪರ್ಯಾಯನಾಮವನುಳ್ಳ ಕ್ರಿಯಾಶಕ್ತಿಸಮೇತವಾದ ಆಚಾರಲಿಂಗವ ಧರಿಸಿಪ್ಪೆನಾಗಿ ಅಲುಪ್ತಶಕ್ತಿತ್ವಾನುಭಾವಿಯಾದೆನಯ್ಯಾ. ಎನ್ನ ಸ್ವಾಧಿµ*ನಚಕ್ರದಲ್ಲಿ ಕರ್ತೃಸಾದಾಖ್ಯ ಹೊಂದಿ ಪ್ರತಿಷಾ*ಕಲಾಪರ್ಯಾಯನಾಮವನುಳ್ಳ ಜ್ಞಾನಶಕ್ತಿಸಮೇತವಾದ ಗುರುಲಿಂಗವ ಧರಿಸಿಪ್ಪೆನಾಗಿ ಸ್ವತಂತ್ರತ್ವಾನುಭಾವಿಯಾದೆನಯ್ಯಾ. ಎನ್ನ ಮಣಿಪೂರಕಚಕ್ರದಲ್ಲಿ ಮೂರ್ತಿಸಾದಾಖ್ಯ ಹೊಂದಿ ವಿದ್ಯಾಕಲಾಪರ್ಯಾಯನಾಮವನುಳ್ಳ ಇಚ್ಫಾಶಕ್ತಿಸಮೇತವಾದ ಶಿವಲಿಂಗವ ಧರಿಸಿಪ್ಪೆನಾಗಿ ನಿತ್ಯತ್ವಾನುಭಾವಿಯಾದೆನಯ್ಯಾ. ಎನ್ನ ಅನಾಹತಚಕ್ರದಲ್ಲಿ ಅಮೂರ್ತಿಸಾದಾಖ್ಯ ಹೊಂದಿ ಶಾಂತಿಕಲಾಪರ್ಯಾಯನಾಮವನುಳ್ಳ ಆದಿಶಕ್ತಿಸಮೇತವಾದ ಜಂಗಮಲಿಂಗವ ಧರಿಸಿಪ್ಪೆನಾಗಿ ಅನಾದಿಬೋಧತ್ವಾನುಭಾವಿಯಾದೆನಯ್ಯಾ. ಎನ್ನ ವಿಶುದ್ಧಿಚಕ್ರದಲ್ಲಿ ಶಿವಸಾದಾಖ್ಯ ಹೊಂದಿ ಶಾಂತ್ಯತೀತಕಲಾಪರ್ಯಾಯನಾಮವನುಳ್ಳ ಪರಶಕ್ತಿಸಮೇತವಾದ ಪ್ರಸಾದಲಿಂಗವ ಧರಿಸಿಪ್ಪೆನಾಗಿ ಸರ್ವಜ್ಞತ್ವಾನುಭಾವಿಯಾದೆನಯ್ಯಾ. ಎನ್ನ ಅಜ್ಞಾಚಕ್ರದಲ್ಲಿ ಮಹಾಸಾದಾಖ್ಯ ಹೊಂದಿ ಶಾಂತ್ಯತೀತೋತ್ತರೆಕಲಾಪರ್ಯಾಯನಾಮವನುಳ್ಳ ಚಿಚ್ಛಕ್ತಿ ಸಮೇತವಾದ ಮಹಾಲಿಂಗವ ಧರಿಸಿಪ್ಪೆನಾಗಿ ತೃಪ್ತತ್ವಾನುಭಾವಿಯಾದೆನಯ್ಯಾ. ಇಂತು ಎನ್ನ ಷಡಂಗದಲ್ಲಿ ಷಡುಲಿಂಗವ ಧರಿಸಿ ಷಟ್‍ಸ್ಥಲಜ್ಞಾನಾನುಭಾವಿಯಾದೆನಯ್ಯಾ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ನಿಃಕಲ ಶಿವನ ಮಧ್ಯದಲ್ಲಿ ಚಚ್ಛಕ್ತಿ ಉದಯಿಸಿದಳು. ಆ ಚಿಚ್ಛಕ್ತಿಯ ಮಧ್ಯದಲ್ಲಿ ಶಾಂತ್ಯತೀತೋತ್ತರೆಯೆಂಬ ಕಲೆ. ಆ ಶಾಂತ್ಯತೀತೋತ್ತರೆಯೆಂಬ ಕಲೆಯ ಮಧ್ಯದಲ್ಲಿ ಮಹಾಲಿಂಗ. ಆತ ಮಹಾಲಿಂಗದ ಮಧ್ಯದಲ್ಲಿ ನಿರ್ಮುಕ್ತಸಾದಾಖ್ಯ. ಆ ನಿರ್ಮುಕ್ತಸಾದಾಖ್ಯದ ಮಧ್ಯದಲ್ಲಿ ಪಶುಪತಿಯೆಂಬ ಕಲಾಮೂರ್ತಿ. ಆ ಪಶುಪತಿಯೆಂಬ ಕಲಾಮೂರ್ತಿಯ ಮಧ್ಯದಲ್ಲಿ ಶಿವನೆಂಬ ಐಕ್ಯನು. ಆ ಶಿವನೆಂಬ ಐಕ್ಯನ ಮಧ್ಯದಲ್ಲಿ ಉಪಮಾತೀತನು. ಆ ಉಪಮಾತೀತನ ಮಧ್ಯದಲ್ಲಿ ಆತ್ಮನು. -ಇಂತು ಮಹಾಸಾದಾಖ್ಯದ ಸೃಷ್ಟಿ. ಆ ನಿಃಕಲ ಶಿವನ ಮಧ್ಯದಲ್ಲಿ ಪರಾಶಕ್ತಿ; ಆ ಪರಾಶಕ್ತಿಯ ಮಧ್ಯದಲ್ಲಿ ಶಾಂತ್ಯಾತೀತೆಯೆಂಬ ಕಲೆ. ಆ ಶಾಂತ್ಯಾತೀತೆಯೆಂಬ ಕಲೆಯ ಮಧ್ಯದಲ್ಲಿ ಪ್ರಸಾದಲಿಂಗ. ಆ ಪ್ರಸಾದಲಿಂಗದ ಮಧ್ಯದಲ್ಲಿ ಶಿವಸಾದಾಖ್ಯ. ಆ ಶಿವಸಾದಾಖ್ಯದ ಮಧ್ಯದಲ್ಲಿ ಮಹಾದೇವನೆಂಬ ಕಲಾಮೂರ್ತಿ. ಆ ಮಹಾದೇವನೆಂಬ ಕಲಾಮೂರ್ತಿಯ ಮಧ್ಯದಲ್ಲಿ ಕ್ಷೇತ್ರಜ್ಞನೆಂಬ ಶರಣ. ಆ ಶರಣನ ಮಧ್ಯದಲ್ಲಿ ಸದಾಶಿವನು. ಆ ಸದಾಶಿವನ ಮಧ್ಯದಲ್ಲಿ ಆಕಾಶ. ಇಂತು ಶಿವಸಾದಾಖ್ಯದ ಸೃಷ್ಟಿ. ಆ ನಿಃಕಲ ಶಿವನ ಮಧ್ಯದಲ್ಲಿ ಆದಿಶಕ್ತಿ. ಆ ಆದಿಶಕ್ತಿಯ ಮಧ್ಯದಲ್ಲಿ ಶಾಂತಿಯೆಂಬ ಕಲೆ. ಆ ಶಾಂತಿಯೆಂಬ ಕಲೆಯ ಮಧ್ಯದಲ್ಲಿ ಜಂಗಮಲಿಂಗ. ಆ ಜಂಗಮಲಿಂಗದ ಮಧ್ಯದಲ್ಲಿ ಅಮೂರ್ತಿಸಾದಾಖ್ಯ. ಆ ಅಮೂರ್ತಿಸಾದಾಖ್ಯದ ಮಧ್ಯದಲ್ಲಿ ಭೀಮೇಶ್ವರನೆಂಬ ಕಲಾಮೂರ್ತಿ. ಆ ಭೀಮೇಶ್ವರನೆಂಬ ಕಲಾಮೂರ್ತಿಯ ಮಧ್ಯದಲ್ಲಿ ಕರ್ತಾರನೆಂಬ ಪ್ರಾಣಲಿಂಗಿ. ಆ ಕರ್ತಾರನೆಂಬ ಪ್ರಾಣಲಿಂಗಿಯ ಮಧ್ಯದಲ್ಲಿ ಈಶ್ವರ. ಆ ಈಶ್ವರನ ಮಧ್ಯದಲ್ಲಿ ವಾಯು. -ಇಂತು ಅಮೂರ್ತಿಸಾದಾಖ್ಯದ ಸೃಷ್ಟಿ. ಆ ನಿಃಕಲ ಶಿವನ ಮಧ್ಯದಲ್ಲಿ ಇಚ್ಛಾಶಕ್ತಿ. ಆ ಇಚ್ಛಾಶಕ್ತಿಯ ಮಧ್ಯದಲ್ಲಿ ವಿದ್ಯೆಯೆಂಬ ಕಲೆ. ಆ ವಿದ್ಯೆಯೆಂಬ ಕಲೆಯ ಮಧ್ಯದಲ್ಲಿ ಶಿವಲಿಂಗ. ಆ ಶಿವಲಿಂಗದ ಮಧ್ಯದಲ್ಲಿ ಮೂರ್ತಿಸಾದಾಖ್ಯ. ಆ ಮೂರ್ತಿಸಾದಾಖ್ಯದ ಮಧ್ಯದಲ್ಲಿ ಮಹಾರುದ್ರನೆಂಬ ಕಲಾಮೂರ್ತಿ. ಆ ಮಹಾರುದ್ರನೆಂಬ ಕಲಾಮೂರ್ತಿಯ ಮಧ್ಯದಲ್ಲಿ ಭಾವನೆಂಬ ಪ್ರಸಾದಿ. ಆ ಭಾವನೆಂಬ ಪ್ರಸಾದಿಯ ಮಧ್ಯದಲ್ಲಿ ರುದ್ರನು. ಆ ರುದ್ರನ ಮಧ್ಯದಲ್ಲಿ ಅಗ್ನಿ. -ಇಂತು ಮೂರ್ತಿಸಾದಾಖ್ಯದ ಸೃಷ್ಟಿ. ಆ ನಿಃಕಲ ಶಿವನ ಮಧ್ಯದಲ್ಲಿ ಪ್ರತಿಷೆ*ಯೆಂಬ ಕಲೆ. ಆ ಪ್ರತಿಷೆ*ಯೆಂಬ ಕಲೆಯ ಮಧ್ಯದಲ್ಲಿ ಗುರುಲಿಂಗ. ಆ ಗುರುಲಿಂಗದ ಮಧ್ಯದಲ್ಲಿ ಕರ್ತುಸಾದಾಖ್ಯ. ಆ ಕರ್ತುಸಾದಾಖ್ಯದ ಮಧ್ಯದಲ್ಲಿ ಸರ್ವನೆಂಬ ಕಲಾಮೂರ್ತಿ. ಆ ಸರ್ವನೆಂಬ ಕಲಾಮೂರ್ತಿಯ ಮಧ್ಯದಲ್ಲಿ ಚೈತನ್ಯವೆಂಬ ಮಾಹೇಶ್ವರ. ಆ ಚೈತನ್ಯನೆಂಬ ಮಾಹೇಶ್ವರನ ಮಧ್ಯದಲ್ಲಿ ವಿಷ್ಣು. ಆ ವಿಷ್ಣುವಿನ ಮಧ್ಯದಲ್ಲಿ ಅಪ್ಪು. -ಇಂತು ಕರ್ತುಸಾದಾಖ್ಯದ ಸೃಷ್ಟಿ. ಆ ನಿಃಕಲ ಶಿವನ ಮಧ್ಯದಲ್ಲಿ ಕ್ರಿಯಾಶಕ್ತಿ. ಆ ಕ್ರಿಯಾಶಕ್ತಿಯ ಮಧ್ಯದಲ್ಲಿ ನಿವೃತ್ತಿಯೆಂಬ ಕಲೆ. ಆ ನಿವೃತ್ತಿಯೆಂಬ ಕಲೆಯ ಮಧ್ಯದಲ್ಲಿ ಆಚಾರಲಿಂಗ. ಆ ಆಚಾರಲಿಂಗದ ಮಧ್ಯದಲ್ಲಿ ಕರ್ಮಸಾದಾಖ್ಯ. ಆ ಕರ್ಮಸಾದಾಖ್ಯದ ಮಧ್ಯದಲ್ಲಿ ಭವನೆಂಬ ಕಲಾಮೂರ್ತಿ. ಆ ಭವನೆಂಬ ಕಲಾಮೂರ್ತಿಯ ಮಧ್ಯದಲ್ಲಿ ಅಂತರ್ಯಾಮಿಯೆಂಬ ಭಕ್ತ. ಆ ಅಂತರ್ಯಾಮಿಯೆಂಬ ಭಕ್ತನ ಮಧ್ಯದಲ್ಲಿ ಬ್ರಹ್ಮ. ಆ ಬ್ರಹ್ಮನ ಮಧ್ಯದಲ್ಲಿ ಪೃಥ್ವಿ. ಆ ಬ್ರಹ್ಮನಿಂದ ನರರು ಸುರರು ಅಸುರರು ಅಂಡಜ ಸ್ವೇದಜ ಉದ್ಭಿಜ ಜರಾಯುಜವೆಂಬ ಸಕಲ ಚರಾಚರಂಗಳೆಲ್ಲವೂ ಹುಟ್ಟಿದವು. ಇಂತಿವೆಲ್ಲವು ಶಿವನ ನೆನಹುಮಾತ್ರದಿಂದಲಾದವಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮತ್ತಂ, ಕ್ರಮದಿಂ ಹ್ರೌಂ ಎಂಬ ಮೂಲಪ್ರಸಾದವಾಚಕದಲ್ಲಿ ಕರ್ಮಸಾದಾಖ್ಯ ವಾಚ್ಯಮಂ ನ್ಯಾಸಂಗೆಯ್ವುದು. ಹಂ ಎಂಬ ತತ್ವಪ್ರಸಾದವಾಚಕದಲ್ಲಿ ಕರ್ತೃಸಾದಾಖ್ಯ ವಾಚ್ಯಮಂ ನ್ಯಾಸಂಗೆಯ್ವುದು. ಹೌಂ ಎಂಬಾದಿ ಪ್ರಸಾದಿವಾಚಕದಲ್ಲಿ ಮೂರ್ತಿಸಾದಾಖ್ಯ ವಾಚ್ಯಮಂ ನ್ಯಾಸಂಗೆಯ್ವುದು. ಹಂಸ ಎಂಬಾತ್ಮಪ್ರಸಾದವಾಚಕದಲ್ಲಿ ಅಮೂರ್ತಿಸಾದಾಖ್ಯ ವಾಚ್ಯಮಂ ನ್ಯಾಸಂಗೆಯ್ವುದು. ಹ ಎಂಬ ಶುದ್ಧಪ್ರಸಾದವಾಚಕದಲ್ಲಿ ಶಿವಸಾದಾಖ್ಯ ವಾಚ್ಯಮಂ ನ್ಯಾಸಂಗೆಯ್ವುದಿಂತು ಪಂಚಪ್ರಸಾದದಲ್ಲಿ ಪಂಚಸಾದಾಖ್ಯ ತತ್ವಮಂ ನ್ಯಾಸೀಕರಿಸಿದೆಯಯ್ಯಾ, ಪರಶಿವಲಿಂಗಯ್ಯಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಅಯ್ಯ, ಅರ್ಧಚಂದ್ರಾಕೃತಿ, ವಕಾರಪ್ರಣಮ, ಮೇಘನಾದ, ಅನಾಹತಚಕ್ರ, ಮಾಂಜಿಷ*ವರ್ಣ, ಪ್ರಾಣಲಿಂಗಿಸ್ಥಲ, ನಿರ್ಮಿಲತನು, ಸುಮನಹಸ್ತ, ಜಂಗಮಲಿಂಗ, ತ್ವಕ್ಕೆಂಬ ಮುಖ, ಅನುಭಾವಭಕ್ತಿ, ಸುಸ್ಪರ್ಶನ ಪದಾರ್ಥ, ಸುಸ್ಪರ್ಶನ ಪ್ರಸಾದ, ಈಶ್ವರಿ ಪೂಜಾರಿ, ಈಶ್ವರನಧಿದೇವತೆ, ಅಮೂರ್ತಿಸಾದಾಖ್ಯ, ನಿತ್ಯವೆಂಬ ಲಕ್ಷಣ, ನಿರ್ಮಲಾತ್ಮ, ಆದಿಶಕ್ತಿ, ಶಾಂತಿಕಲೆ-ಇಂತು ಇಪ್ಪತ್ತುನಾಲ್ಕು ಸಂಕೀಲಂಗಳನೊಳಕೊಂಡು, ಎನ್ನ ಅನಾಹತಚಕ್ರವೆಂಬ ಹಿಮವತ್ಕೇತಾರಕ್ಷೇತ್ರದಲ್ಲಿ ಮೂರ್ತಿಗೊಂಡಿರ್ದ ಯಜನಸ್ವರೂಪವಾದ ಜಂಗಮಲಿಂಗವೆ ಹಿಮಗಿರೀಶ್ವರಲಿಂಗವೆಂದು, ಪ್ರಾಣತ್ರಯವ ಮಡಿಮಾಡಿ, ಶಾಂತಿಯೆಂಬ ಜಲದಿಂ ಮಜ್ಜನಕ್ಕೆರದು, ವಾಯು ನಿವೃತ್ತಿಯಾದ ಗಂಧವ ಧರಿಸಿ, ಮನ ಸುಮನವಾದಕ್ಷತೆಯನಿಟ್ಟು ಅಲ್ಲಿಹ ದ್ವಾದಶದಳಂಗಳನೆ ಪುಷ್ಪದಮಾಲೆಯೆಂದು ಧರಿಸಿ, ಅಲ್ಲಿಹ ಕಮಲಸದ್ವಾಸನೆಯ ಧೂಪವ ಬೀಸಿ, ಅಲ್ಲಿಹ ಮಾಂಜಿಷ*ವರ್ಣವೆ ಕರ್ಪೂರದ ಜ್ಯೋತಿಯೆಂದು ಬೆಳಗಿ, ಅಲ್ಲಿಹ ತೂರ್ಯಾವಸ್ಥೆಯೆಂಬ ನವೀನವಸ್ತ್ರವ ಹೊದ್ದಿಸಿ, ನಿರ್ಲೇಪವೆಂಬಾಭರಣವ ತೊಡಿಸಿ, ಸುಸ್ಪರ್ಶನವೆಂಬ ನೈವೇದ್ಯವನರ್ಪಿಸಿ, ಅನುಭಾವವೆಂಬ ತಾಂಬೂಲವನಿತ್ತು ಇಂತು ಜಂಗಮಲಿಂಗಕ್ಕೆ ಅಷ್ಟವಿಧಾರ್ಚನೆಯಂ ಮಾಡಿ, ಕೋಟಿಸೂರ್ಯನ ಪ್ರಭೆಯಂತೆ ಬೆಳಗುವ ಜಂಗಮಲಿಂಗವನ್ನು ಕಂಗಳುತುಂಬಿ ನೋಡಿ, ಮನದಲ್ಲಿ ಸಂತೋಷಗೊಂಡು, ಆ ಜಂಗಮಲಿಂಗದ ಪೂಜೆಯ ಸಮಾಪ್ತವ ಮಾಡಿ, ಓಂ ವಾಂ ವಾಂ ವಾಂ ವಾಂ ವಾಂ ವಾಂ ಎಂಬ ವಾಕಾರಷಡ್ವಿಧ ಮಂತ್ರಂಗಳಿಂದೆ ನಮಸ್ಕರಿಸಿ, ಆ ಜಂಗಲಿಂಗಮವೆ ತಾನೆಂದರಿದು ಕೂಡಿ ಎರಡಳಿದು ನಿಃಪ್ರಪಂಚಿಯಾಗಿ ಆಚರಿಸಬಲ್ಲಾತನೆ ಅನುಭಾವಭಕ್ತಿಯನುಳ್ಳ ಲಿಂಗಪ್ರಾಣಿ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
-->