ಅಥವಾ

ಒಟ್ಟು 24 ಕಡೆಗಳಲ್ಲಿ , 16 ವಚನಕಾರರು , 23 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಬುದಕ್ಕೆ ಮೊದಲೆ ಬಯಕೆ ಅರತು, ಕೂಡುವುದಕ್ಕೆ ಮುನ್ನವೆ ಸುಖವರತು, ಉಭಯ ನಾಮಧೇಯ ನಷ್ಟವಾದಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ವಾರಿ ತೆಂಗಿನ ಮರದಲ್ಲಿ ಏರಿತ್ತೊ ? ಅಲ್ಲಾ, ಬೇರೊಂದು ಮಂತ್ರದಲ್ಲಿ ತುಂಬಿತ್ತೊ ? ಅಲ್ಲಾ ವೃಕ್ಷದ ಸಹಜ ಬೀಜವೊ ? ನೀರು ಬಲಿದು ಅದರೊಳಗೆ ಅರತು, ಆ ಸಾರವೆ ಕಾಯಾದಲ್ಲಿ, ಆ ಕಾಯ ತುಷಾರ ಹಿಂಗಿ, ನೆರೆ ಬಲಿತು, ಹಣ್ಣು ಎಣೆಯಾದಲ್ಲಿ, ನೀರೆಲ್ಲಿ ಅಡಗಿತ್ತು? ಹಿಪ್ಪೆ, ಕವಚವೆಲ್ಲಿದ್ದಿತ್ತು ? ಇಂತೀ ಕಾಯ ಆತ್ಮ ಮೇಲೆಂದರಿವೆಂಬ ಕುರುಹೆಲ್ಲಿದ್ದಿತ್ತು ?, ಎಂಬುದನರಿವುದಕ್ಕೆ ಪುರಾಣವ ಪೋಷಿಸಿಕೊಳ್ಳಿ, ಶಾಸ್ತ್ರವ ಸಂದಣಿಸಿಕೊಳ್ಳಿ, ವೇದದ ಆದ್ಯಂತವ ಸಾದ್ಥಿಸಿಕೊಳ್ಳಿ, ಶ್ರುತದಲ್ಲಿ ಕೇಳಿ ದೃಷ್ಟದಲ್ಲಿ ಕಂಡುಕೊಳ್ಳಿ, ಇಂತೀ ಚಿದಾತ್ಮನು ಬಂಧಮೋಕ್ಷಕರ್ಮಂಗಳಲ್ಲಿ ದ್ವಂದಿತನೋ ? ಆ ಅಂಗಭಾವ ವಿರಹಿತನೋ ? ಈ ಉಭಯದ ಸಂದೇಹವುಳ್ಳನ್ನಕ್ಕ ಕರ್ಮವ ಮಾಡುವಂಗೆ, ನಿರ್ಮಲವೊಂದುಂಟೆಂದು ಅರಿವಂಗೆ, ಇಂತೀ ಭೇದಂಗಳನರಿತು, ನಿರವಯದ ಸಮ್ಮಾನದ ಸುಖಿಯಾದೆನೆಂಬವಂಗೆ, ಅದು ಬ್ಥಿನ್ನರೂಪೋ, ಅಬ್ಥಿನ್ನರೂಪೋ ? ಆ ನಿಜದ ನೆಲೆಯ ನೀವೇ ಬಲ್ಲಿರಿ. ಕಾಮಧೂಮ ಧೂಳೇಶ್ವರನಲ್ಲಿ ಕಾಳಿಕೆ ಹಿಂಗಿದ ಕಣ್ಣಿನವಂಗಲ್ಲದೆ ಕಾಣಬಾರದು.
--------------
ಮಾದಾರ ಧೂಳಯ್ಯ
ಬೀಜ ಕೊಳೆತಾಗ ಅಂಕುರ ನಷ್ಟವಾಯಿತ್ತು. ಸಸಿಯಿಲ್ಲದ ಫಲವುಂಟೆ ಅಯ್ಯಾ ? ಇಷ್ಟದ ಅರ್ಚನೆ ಅರತು, ಚಿತ್ತ ದೃಷ್ಟವ ಕಾಬುದಕ್ಕೆ ಗೊತ್ತಾವುದು ಹೇಳಯ್ಯಾ ? ಅದು ಮುಟ್ಟಿದ ಮುಟ್ಟಿನಲ್ಲಿ ಒದಗು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಬಂದುದನೆಲ್ಲವ ನುಂಗಿ, ಬಾರದುದನೆಲ್ಲವ ನುಂಗಿ, ಆರಿಗಿಲ್ಲದ ಅವಸ್ಥೆ ಎನಗಾಯಿತ್ತು. ಆ ಅವಸ್ಥೆ ಅರತು ನೀನು, ನಾನೆಂದರಿದೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ನದಿ ಕೂಪ ತಟಾಕ ಜಲಾಶಯದಲ್ಲಿ ಅಗ್ಗಣಿಯ ತಂದು ಮಜ್ಜನಕ್ಕೆ ನೀಡುವರೆಲ್ಲ ಶೀಲವಂತರೆ ? ಪಾಕದಲ್ಲಿ ಪರಪಾಕ ಭವಿಪಾಕ ಎಂಬವರೆಲ್ಲ ಶೀಲವಂತರೆ ? ತಳಿಗೆ ಬಟ್ಟಲ ಪ್ರಗಾಳಿಸಿ ನೇಮವ ಮಾಡಿಕೊಂಬವರೆಲ್ಲ ಶೀಲವಂತರೆ ? ಕಂಠಪಾವಡ, ಧೂಳಿಪಾವಡ, ಸರ್ವಾಂಗಪಾವಡವೆಂಬವರೆಲ್ಲ ಶೀಲವಂತರೆ ? [ಲ್ಲ], ಅದೇನು ಕಾರಣವೆಂದಡೆ; ಅವರು `ಸಂಕಲ್ಪಂ ಚ ವಿಕಲ್ಪಂ ಚ ಆ ಎಂದುದಾಗಿ, ಶುದ್ಧಭವಿಗಳು. ಭವಿಯೆಂಬವನೆ ಶ್ವಪಚ, ವ್ರತಸ್ಥನೆಂಬವನೆ ಸಮ್ಮಗಾರ. ಶೀಲವಿನ್ನಾವುದೆಂದಡೆ; ಆಶನ ಅರತು, ವ್ಯಸನ ನಿಂದು, ವ್ಯಾಪ್ತಿಯಳಿದು, ಅಷ್ಟಮದವೆಲ್ಲ ನಷ್ಟವಾದಲ್ಲದೆ, ಕೂಡಲಚೆನ್ನಸಂಗಮದೇವರಲ್ಲಿ ಶೀಲವಿಲ್ಲ ಕಾಣಿರೊ
--------------
ಚನ್ನಬಸವಣ್ಣ
ಕಾಯಗುಣದಲ್ಲಿದ್ದು ಕರಣಂಗಳಂತಾಡದಿದ್ದಡೆ, ಕಾಯದ ಸಂಗವೇ ಲೇಸು, ಇಂದ್ರಿಯಂಗಳ ಸಂಸರ್ಗದಲ್ಲಿದ್ದು ಮುಟ್ಟುವ ಸಂಗವ ಬಲ್ಲಡೆ, ಇಂದ್ರಿಯಂಗಳ ಸಂಗವೇ ಲೇಸು. ಅವಗುಣದಲ್ಲಿದ್ದು ಅರತು, ತನ್ನಯ ಸಾವರಿತಡೆ, ಸಾವಯವ ಲೇಸು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು ಕೂಡಿ ಕೂಟವಾದ ಮತ್ತೆ.
--------------
ಸಗರದ ಬೊಮ್ಮಣ್ಣ
ಕಣ್ಣಿನೊಳಗಣ ಕಸ, ಕೈಯೊಳಗಣ [ಮೆ]ಳೆ, ಬಾಯೊಳಗಣ ಬಗದಳ, ಮನದ ಶಂಕೆ ಹರಿದಲ್ಲದೆ ಪ್ರಾಣಲಿಂಗಿಯಾಗಬಾರದು. ಕಣ್ಣಿನ ನೋಟ, ಕೈಯ ಕುರುಹು, ಬಾಯ ಬಯಕೆ, ಚಿತ್ತದ ವೈಕಲ್ಯ ನಷ್ಟವಾಗಿಯಲ್ಲದೆ ವಸ್ತುನಿರ್ದೇಶವನರಿಯಬಾರದು. ಅರಕೆ ಅರತು ಅರಿತಡೆ, ಅದೇ ವಸ್ತು, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಅಂಗಸಂಸಾರ ಲಿಂಗದಲ್ಲಿತ್ತು ಅರತು ಕಾಯವೆಂಬ ಸಂಬಂಧ ಸಂಶಯವಳಿದು ನಿಸ್ಸಂದೇಹಿಯಾಗಿಪ್ಪನು ನೋಡಾ ಬಸವಣ್ಣನು. ಪ್ರಾಣ ಭಾವವೆಂಬ ಶಂಕೆ ತಲೆದೋರದೆ ನಿಶ್ಶಂಕನಿಜೈಕ್ಯನಾಗಿಪ್ಪನು ನೋಡಾ ಬಸವಣ್ಣನು. ಆ ಬಸವಣ್ಣನ ಅಂತರಂಗದಲ್ಲಿ ನಿಶ್ಚಿಂತನಿವಾಸಿಯಾಗಿದ್ದೆನು. ಆ ಬಸವಣ್ಣನ ಅಂತರಂಗದಲ್ಲಿ ನಿರಾಲಂಬಜ್ಞಾನಿಯಾಗಿದ್ದೆನು. ಆ ಬಸವಣ್ಣನೊಳಗೆ ನಾನು ಅಳಿದುಳಿದೆನು. ಬಸವಣ್ಣನೆನ್ನ ಅಂತರಂಗದೊಳಗೆ ನಿಜನಿವಾಸಿಯಾಗಿದ್ದನು. ಇದು ಕಾರಣ:ಒಂದಕ್ಕೊಂದ ಬಿಚ್ಚಿ ಬೇರು(ರೆ?) ಮಾಡಬಾರದು ನೋಡಾ. ಗುಹೇಶ್ವರಲಿಂಗದಲ್ಲಿ `ಸಂಗನಬಸವ-ಪ್ರಭು'ವೆಂಬ ಎರಡು ಭಾವಭ್ರಾಂತಿಯಳಿದು, ನಿಭ್ರಾಂತಿ ಎಡೆಗೊಂಡಿತ್ತು ನೋಡಾ ಚನ್ನಬಸವಣ್ಣಾ
--------------
ಅಲ್ಲಮಪ್ರಭುದೇವರು
ಮೇರುವಿನ ಮಧ್ಯದ ಓರಂತೆ ಸುಧೆವರಿದು ಆರಾರು ಆರುವರೈ ಅತ್ಯ್ಕಶಿಷ*. ಧಾರುಣಿಗೆವರಿಯದಾ ಮೇಲಪ್ಪ ಪಸರದ ಮೂರು ಮಸ್ತಕದಲ್ಲಿ ಅರತು ಅರತ, ಓರಂತೆ ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಅಹೋರಾತ್ರಿಲಿಯ ಅರಸಿ ಕಂಡೆ ನಾನು.
--------------
ಸಿದ್ಧರಾಮೇಶ್ವರ
ಕ್ಷೀರಕ್ಕೆ ವಾರಿ ಅರತಲ್ಲದೆ ಮಧುರಗುಣವಿಲ್ಲ. ಶರೀರವಿಡಿದಿದ್ದಲ್ಲಿ ಅಂಗಕ್ಕೆ ಆಸೆ ಅರತು, ರೋಷ ಹಿಂಗಿ, ಈಷಣತ್ರಯದ ಲೇಸು ಕಷ್ಟವನರಿತು, ಈಶನ ವೇಷದ ಭಾಷೆಗೆ ತಪ್ಪದೆ ಇಪ್ಪುದು ಗುರುಚರಮತ, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಅದ್ವೈತವೆಂಬ ಶಿಶುವೆನ್ನ ಕರಸ್ಥಲವ ಸೋಂಕಲೊಡನೆ ಎನ್ನ ತನ್ನಂತೆ ಮಾಡಿತ್ತಾಗಿ, ಎನ್ನ ನಾನೆಂಬ ವಿಚಾರವು ಅರತು ಹೋಯಿತ್ತು ಕೇಳಾ. ಮತ್ತೆ ಅನ್ಯವಿಚಾರವನೆಂತೂ ಅರಿಯೆನು. ಎನ್ನ ಪೂರ್ವಾಪರವ ನಿಮ್ಮಿಂದಲರಿಯಲೆಂದು ಬಂದು ನಿಮ್ಮ ಮರೆಹೊಕ್ಕೆನಾಗಿ, ಸಂಗನಬಸವಣ್ಣನ ಮಹಿಮೆಯ ನಾನೆತ್ತ ಬಲ್ಲೆನು ? ಗುಹೇಶ್ವರನ ಸಾಕ್ಷಿಯಾಗಿ ಸಂಗನಬಸವಣ್ಣ ನಿನ್ನ ಅಂತರಂಗದೊಳಗೆ ಬೆಳಗುತ್ತೈದಾನೆ. ಎನಗೊಮ್ಮೆ ಬಸವಣ್ಣನ ಘನವ ತಿಳುಹಿ ಕೊಡಾ ಚೆನ್ನಬಸವಣಾ
--------------
ಅಲ್ಲಮಪ್ರಭುದೇವರು
ಬೀಜ ಹುಟ್ಟುವ ತತ್ಕಾಲವೆಂತೆಂದಡೆ: ಹೊಯ್ದಿದ್ದ ಹೊಯಿಗಿಲದಲ್ಲಿಯೆ ಬೇರು ಬಿಟ್ಟು, ಸಸಿ ಬೆಳೆದು ಎಲೆ ನೀಡಿ ಫಲ ಬೆಳೆದುದುಂಟೆ ? ಸಕಲ ಸ್ಥಲ ಕುಳವನರಿತ ಬ್ರಹ್ಮಿ ತಾನೆಂದಡೆ ಅರ್ಚನೆ ಅರತು, ಪೂಜೆ ನಿಂದು, ಸತ್ಯ ಕೆಟ್ಟು ಭಕ್ತಿ ಹಾರಿದಲ್ಲಿ, ಆತ ನಿಜತತ್ವಜ್ಞನಪ್ಪನೆ ? ಇದು ವಿಶ್ವಾಸದ ಭಿತ್ತಿ, ವಿರಕ್ತಿಯ ನಿಳಯ. ಸಂಗನಬಸವಣ್ಣ ಭಕ್ತಿ ವಿರಕ್ತಿಗಿಕ್ಕಿದ ಕಟ್ಟು. ಬ್ರಹ್ಮೇಶ್ವರಲಿಂಗವ ಮುಟ್ಟುವ ಮುಟ್ಟು.
--------------
ಬಾಹೂರ ಬೊಮ್ಮಣ್ಣ
ಲಿಂಗದಲ್ಲಿ ನಿಷೆ* ನಿಬ್ಬೆರಸಿದ ನಿಜೈಕ್ಯಂಗೆ ತೋರುವವೇ ಅರಿಷಡ್ವರ್ಗಂಗಳು ? ತೋರುವವೇ ಷಡೂರ್ಮಿಗಳು ? ತೋರುವವೇ ಕುಲಾದಿ ಮದಂಗಳು ? ಸಾರಿಪ್ಪವೇ ಇಂದ್ರಿಯ ವಿಷಯ ರಚನೆಗಳು ? ಮೀರಿಪ್ಪವೇ ಮನಾದಿ ಕರಣವೃಂದಕಲೆತು ? ಗುರುನಿರಂಜನ ಚನ್ನಬಸವಲಿಂಗದಲ್ಲಿ ಅರತು ನಿಜವಾಗಿರ್ದುವು ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ವೇಷದಲ್ಲಿ ತಿರುಗುವುದು ಸಮಯದ ಹಂಗು. ಮಾತಿನಲ್ಲಿ ತಿರುಗುವರೆಲ್ಲರು ಶಾಸ್ತ್ರದ ಹಂಗು. ಯತಿಭೇದದಲ್ಲಿ ತಿರುಗುವರೆಲ್ಲರು ಮನಸಿಜನ ಹಂಗು. ಆಸೆ ಅರತು ನಿಬ್ಬೆರಗಾಗಿ ತಿರುಗುವರೆಲ್ಲರು ಶರೀರದ ಹಂಗು. ಹಿಂದ ಮರೆದು ಮುಂದಳ ಮೋಕ್ಷವನರಸುವರೆಲ್ಲರು ರುದ್ರನ ಹಂಗು. ಇಷ್ಟಾರ್ಥ ಕಾಮ್ಯಾರ್ಥ ಮೋಕ್ಷಾರ್ಥವೆಂಬ ಬಟ್ಟೆಯ ಮೆಟ್ಟದೆ, ಹಿಂದಳ ಇರವು ಮುಂದಳ ಸಂಶಯವೆಂಬುದ ಏನೆಂದರಿಯದೆ ನಿಂದುದು, ಸದಾಶಿವಮೂರ್ತಿಲಿಂಗದಲ್ಲಿ ಸಂದ ಮನ.
--------------
ಅರಿವಿನ ಮಾರಿತಂದೆ
ಸಪ್ಪೆಯ ವ್ರತವೆಂಬುದ ನಾವರಿಯೆವು, ನೀವು ಹೇಳಿರಯ್ಯಾ. ಸರ್ವ ಫಲರಸ ಘೃತ ತೈಲ ಮಧುರ ವಿದಳಧಾನ್ಯ ಮುಂತಾದವಕ್ಕೆ ಎಲ್ಲಕ್ಕೂ ತಮ್ಮ ತಮ್ಮಲ್ಲಿಯ ರುಚಿ ಸಪ್ಪೆಯ ನೇಮವನೊಂದನೂ ಕಾಣೆ. ಇದ ನೀವೆ ಬಲ್ಲಿರಿ. ಸಪ್ಪೆ ಯಾವುದೆಂದಡೆ ಸುಖದುಃಖಂಗಳೆಂಬುದನರಿಯದೆ, ತನುವಾಡಿದಂತೆ ಆಡದೆ, ಮನ ಹರಿದಂತೆ ಹರಿಯದೆ, ಬಯಕೆ ಅರತು ಭ್ರಾಮಕ ಹಿಂಗಿ ಸರ್ವವಿಕಾರ ವಿಸರ್ಜನವಾಗಿ, ಹಿಂದಾದುದ ಮರೆದು ಮುಂದಕ್ಕೆ ಗತಿಯೆಂದು ಒಂದ ಕಾಣದೆ, ಹಿಂದು ಮುಂದೆಂದು ಒಂದನರಿಯದಿದ್ದುದೆ ಸಪ್ಪೆ. ಇದು ಅಂತರಂಗದ ವ್ರತ ಲವಣವ ಬಿಟ್ಟುದು ಬಹಿರಂಗ ಶೀಲ. ಇಂತೀ ಉಭಯವ್ರತ ಏಕವಾದಲ್ಲಿ ಸರ್ವಸಪ್ಪೆ ಸಂದಿತ್ತು ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಪ್ಪೆಯ ವ್ರತ ಅರ್ಪಿತವಾಯಿತ್ತು.
--------------
ಅಕ್ಕಮ್ಮ
ಇನ್ನಷ್ಟು ... -->