ಅಥವಾ

ಒಟ್ಟು 33 ಕಡೆಗಳಲ್ಲಿ , 19 ವಚನಕಾರರು , 29 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಿನಚರಿಯೆಂಬ ಪಟ್ಟಣದಲ್ಲಿ ಕನಕರತಿಯೆಂಬರಸು, ಮನಸಿಜನೆಂಬ ಪ್ರಧಾನ, ಕನಸಕಂಡಡೆ ಅರಿವ ತಮಸೂನು ತಳವಾರ. ಇವರೆಲ್ಲರ ವಂಚಿಸಿ ಅರಸಿನ ಹೆಂಡತಿ ಹೆಂಡವ ಕುಡಿವವನ ಅಂಗದಲ್ಲಿ ಸಿಕ್ಕಿದಳು. ಪ್ರಧಾನ ಕಂಡ; ಅರಸು ತಳವಾರ ಕಂಡುದಿಲ್ಲ. ಮನಸಿಜ ಕಂಡು ಬದುಕಿದೆ ಹೋಗೆಂದ. ಅರಸಿಗೆ ಕೂಪನಾದ; ಮಾನಹಾನಿಗೆ ಕೇಡಿಲ್ಲದಂತೆ. ಇಂತೀ ಭೇದವನರಿ, ಪಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಕಾಮುಕಗೆ ದುರ್ಜನಗೆ ಕಪಟಿಗೆ ಹೇಮಚೋರಗೆ ಕಾರುಕ ಸಮ್ಮಗಾರಗೆ ಆವ ಭಾವದ ವ್ರತವ ಮಾಡಲಿಕ್ಕೆ, ಅವ ಭಾವಿಸಿ ನಡೆಯಬಲ್ಲನೆ? ಕಾಗೆಗೆ ರಸಾನ್ನ ಮುಂದಿರಲಿಕೆ, ಹರಿವ ಕೀಟಕಂಗೆ ಸರಿವುದಲ್ಲದೆ ಮತ್ತೆ ಅದು ಸವಿಯಸಾರವ ಬಲ್ಲುದೆ? ಇಂತೀ ಇವು ತಮ್ಮ ಜಾತಿಯ ಲಕ್ಷಣವ ಕೊಂದಡೂ ಬಿಡವಾಗಿ, ವ್ರತಾಚಾರವ ಸಂಬಂದ್ಥಿಸುವಲ್ಲಿ ಶರಣರೆಲ್ಲರ ಕೂಡಿ, ಈ ಗುಣ ಅಹುದು ಅಲ್ಲ ಎಂದು ಹೇಳಿ, ಜಾತಿವರ್ಗದ ಗುಣವ ನೀಕರಿಸಿ ಬಿಡಿಸಿ, ಸುಜಾತಿಯ ಅರಸಿನ ಪಟ್ಟವಂ ಕಟ್ಟಿ ಶರಣರೆಲ್ಲರು ನಿಹಿತಾಚಾರದಲ್ಲಿ ಸಹಭೋಜನವಂ ಮಾಡಿ ಇಂತೀ ಗುಣನಿಹಿತವ್ರತ ಅಜಾತನ ಒಲುಮೆ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ನಿಹಿತದ ಶೀಲದ ನೇಮ.
--------------
ಅಕ್ಕಮ್ಮ
ಧರಣಿಯನಾಳುವ ಅರಸಿಂಗೆ, ಮಾರಿಯ ಭಯ, ಭೂರಿಯ ಭಯ, ಚೋರ ಭಯ. ಅಗ್ನಿಯ ಭಯ, ಹಿರಿದಪ್ಪ ಅರಿರಾಯರ ಭಯ. ಇವೈದು ಭಯಕಂಜಿ, ಅಷ್ಟದಳಮಂಟಪದ ಕೋಣೆಯ ನೆರೆ ಪೂರ್ವದಿಕ್ಕಿನ ರಾಜ್ಯಕ್ಕೊಳಿತಂ ಬಯಸಿ, ಅಗ್ನಿಕೋಣೆಯ ರಾಜ್ಯವ ಭಕ್ಷಿಪೆನೆಂದು, ಯಮದಿಕ್ಕಿನ ರಾಜ್ಯವ ಕ್ರೋಧದಲ್ಲುರುಹುವೆನೆಂದು, ನೈಋತ್ಯದಿಕ್ಕಿನ ರಾಜ್ಯವ ಮರತು ಮಲಗಿಸುವೆನೆಂದು, ವರುಣದಿಕ್ಕಿನ ರಾಜ್ಯಕ್ಕೆ ಸತ್ಯವ ಬಯಸಿ, ವಾಯುವ್ಯದಿಕ್ಕಿನ ರಾಜ್ಯವ ಗಾಳಿಗಿಕ್ಕಿ ಹಾರಿಸುವೆನೆಂದು, ಕುಬೇರದಿಕ್ಕಿನ ರಾಜ್ಯಕ್ಕೆ ಧರ್ಮನು ಬಯಸಿ ಈಶಾನ್ಯಕೋಣೆಯ ರಾಜ್ಯದ ಹೆಣ್ಣ ವಿಷಯತೂರ್ಯದಲ್ಲಿ ದಳೆಯ ಹಿಡಿವೆನೆಂದು, ಅಷ್ಟದಿಕ್ಕಿನ ರಾಜ್ಯದ ನಟ್ಟನಡುವೆ ಕಷ್ಟಬಡುತಿರ್ಪ ಅರಸಿನ ಕಳವಳಿಕೆ ; ಬುದ್ಧಿಗುಡುವ ಮಂತ್ರಿ, ಕಪಿಚಾಷ್ಠಿ ತಂತ್ರಿ, ತಾಮಸಬುದ್ಧಿ ದಳವಾಯಿಗಳು, ದಶಗುಣಿಗಳು ಮನ್ನೆಯ ನಾಯಕರು, ಮದಡರು ಪಾಯದಳ. ಪರಿಯಾಟಗೊಳಿಸುವ ಅರಸಿನ ಪ್ರಜೆ ಪರಿವಾರ ಮಂತ್ರಿಮನ್ನೆಯರನೆಲ್ಲ ಕೈಸೆರೆಯ ಹಿಡಿದು ಆಳುವ ಅಂಗನೆ ರಾಜ್ಯಾದ್ಥಿಪತಿಯಾದುದೇನು ಚೋದ್ಯ ಹೇಳಾ ! ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅಕಾಯದ ಕಣ್ಣಿನಲ್ಲಿ ನೋಡಿ ವಿಕಾರವಳಿದು ಸುಖಪಟ್ಟಣವ ಕಂಡೆ. ಆ ಪಟ್ಟಣದರಸಿಂಗೆ ಭಾವ ಕಾಲಿಲ್ಲ. ಪ್ರಧಾನಂಗೆ ಪಾರುಪತ್ಯಕ್ಕೆ ನುಡಿವಡೆ ಬಾಯಿಲ್ಲ. ತಳವಾರ ತಿರುಗುವುದಕ್ಕೆ ಕಣ್ಣಿಲ್ಲ. ಆ ಪಟ್ಟಣದಲ್ಲಿ ಮೂವರಿಗೆ ಕರ್ತನೊಬ್ಬ ಅರಸು. ಆ ಅರಸ ಕಣ್ಣಿನಲ್ಲಿ ಕಾಣಲಿಲ್ಲ, ಎಲ್ಲಿದ್ದಹರೆಂದು ಕೇಳಲಿಲ್ಲ. ಇದ್ದ ಠಾವಿಂಗೆ ಒಬ್ಬರೂ ಹೊದ್ದಲಿಲ್ಲ. ಅರಸಿನ ಆಜ್ಞೆ, ಬಲುಹ, ಓಲಗಕ್ಕೆ ತೆರಪಿಲ್ಲ. ಜೀವಿತಕ್ಕೆ ಅಡಹಿಲ್ಲ, ಎನ್ನ ಬಡತನವ ಇನ್ನಾರಿಗೆ ಹೇಳುವೆ? ಬಂಟರು ಸತ್ತರು, ಅರಸು ನಷ್ಟವಾದ. ಆ ಉಭಯದ ಬೇಧವ ನಾನರಿಯೆ, ನೀ ಹೇಳು. ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಕರಿಯ ಕಾಲೊಳಗೆ ಸಿಕ್ಕಿದ ಮರಿಯ ನಾಯಿಯಂತೆ, ಅಷ್ಟಮದವೆಂಬ ಕರಿಯ ಕಾಲೊಳಗೆನ್ನ ಸಿಗಿಸಿ, ಮೆಟ್ಟಿ ಮೆಟ್ಟಿ ತುಳಿಸುತ್ತಿದ್ದೆಯಲ್ಲ ! ಅರಸಿನ ಉಪ್ಪನುಂಡು ಆನೆ ಸೇನೆ ದಳ ಅರಸWನಘೆ ಕೈಸೆರೆ ಹಿಡಿವಂತೆ, ಎನ್ನಾತ್ಮದಲ್ಲಿ ಹುಟ್ಟಿದ ಮದ, ಎನ್ನನೆ ತಿಂದು ತೇಗುತ್ತಿದ್ದವಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಆ ನಿಜದರಿವು ತಾನೊಂದು ಬಂಧನದಿಂದ ಮರೆಯಾದುದ ತಾನರಿಯದೆ, ಮರವೆಯ ಗುಣ ಇದಿರಿಗೆ ಅದೆಯೆಂದು ಸಂಪಾದಿಸುವಾಗ, ಆ ತೆರ ಶಿಲೆಯ ನೆಳಲಿನ ಮರೆಯಲ್ಲಿ ತನ್ನಂಗ ಬಿಂಬಿಸಲಿಂತಾಗಿ, ಅರಿ ಇದಿರಾಯಿತ್ತೆಂದು, ಶಿಲೆಯ ಕೊಂಡು, ತಾನೊಂದು ಚೇತರಿಸಿಕೊಂಡು ನಿಂದ ಗಜದಂತೆ, ನಿಜದರಿವು ತ್ರಿಗುಣಾತ್ಮಕದಲ್ಲಿ ಬೆರಸಿ, ತ್ರಿದೋಷದ ದೆಸೆಯಿಂದ ನಾನಾದರುಶನ ಪಕ್ಷಪಾತಂಗಳಲ್ಲಿ ಹೊತ್ತು ಹೋರಿ, ಅಧ್ಯಾತ್ಮ, ಆದಿಭೌತಿಕ, ಆದಿದೈವಿಕಂಗಳ ತಿಳಿಯಬೇಕೆಂದು, ಭೂತಭವಿಷ್ಯದ್ವರ್ತಮಾನವ ವಿಚಾರಿಸಿಹೆನೆಂದು, ಷಡುದರುಶನವ ಸಂಪಾದಿಸಿಹೆನೆಂದು, ಪಂಚಭೌತಿಕ ಭೇದ, ಪಂಚವಿಂಶತಿತತ್ವ ಮೂವತ್ತಾರು ಕ್ರಮ, ಐವತ್ತೊಂದು ಮೆಟ್ಟು, ನೂರೊಂದರ ಲಕ್ಷ. ಇಂತಿವ ಪ್ರಮಾಣಿಸಿ ತಿಳಿದಲ್ಲಿ, ಅದಕ್ಕೆ ಬೇರೆ ಬೇರೆ ಸೂರ್ಯ ಚಂದ್ರ ಆಕಾಶ ವಾಯು ಆಗ್ನಿ ಉದಕ ಪೃಥ್ವಿ ಬೇರೊಂದು ನೆಲಹೊಲಬುಂಟೆ ? ಇಂತಿವೆಲ್ಲವು ವಸ್ತುಮಯದೊಳಗಿದ್ದ ಲಕ್ಷ. ಊರೊಳಗಣ ಹಲವು ಕುಲವೆಲ್ಲವೂ ಅರಸಿನ ದೆಸೆ ಕುಲದಲ್ಲಿ ಎಸಕವ ತಿಳಿದಡಗಿದ ತೆರದಂತೆ, ಅರಿದು ನಡೆವ ಪರಮವಿರಕ್ತಂಗೆ ಹಲವುಮಾತಿನ ಬಲೆಯ ಭ್ರಮೆಯಿಲ್ಲ. ಗೆಲ್ಲಸೋಲದ ಕಲ್ಲೆದೆಯವನಲ್ಲ. ಅಲ್ಲಿಗಲ್ಲಿಗೆ ಬಲ್ಲರಿಯರೆಂದು ಕೋಲಾಟಿಗರಂತೆ ಥೆಕಾವ್ಯವೆಲ್ಲವ ಹೇಳುವನಲ್ಲ. ತ್ರಿವಿಧಮಲವಿಲ್ಲದಡೆ ಒಲ್ಲೆನೆಂದು ತನ್ನಲ್ಲಿಗೆ ಬಂದಡೆ, ಕೂಡಿ ಕದಂಬನಾಗಿ, ಮಧು ಮಕ್ಷಿಕನಂತೆ ಸಂಸಾರದಲ್ಲಿಯೆ ಸಾವನಲ್ಲ. ಕಲ್ಲಿಯೊಳಗಣ ಮಕರದ ಜೀವದಂತೆ, ಸಂಸಾರದಲ್ಲಿಯೆ ಹೋದ ಕುಳಿಗೊಂಬನಲ್ಲ. ಆತನ ಇರವು ದಗ್ಧಪಟದಂತೆ, ರತ್ನದೀಪ್ತಿಯ ಹೊದ್ದಿಗೆಯ ತೆರದಂತೆ, ಸ್ಫಟಿಕದ ನಿರ್ದೇಹದ ವರ್ಣದ ಹೊದ್ದಿಗೆಯಂತೆ, ಇಂತು ಚಿದ್ರೂಪನ ಇರವು. ಊಧ್ರ್ವರೇತೋಮೂರ್ತಿ ಶ್ವೇತಸ್ವಯಂಭು ಕಪಿಲೇಶ್ವರಲಿಂಗದೊಳಗಾದವನ ಇರವು
--------------
ಮಹಾಲಿಂಗ ಶಶಿಮೌಳಿ ಸದಾಶಿವ
ರಂಜನಿಪುರದಲ್ಲಿ ಕಪಿ ಉಡವ ಕಚ್ಚಿ ತಿರುಗಾಡುವದ ಕಂಡೆನಯ್ಯ. ಆ ಉಡುವಿನ ಬಾಯೊಳಗೆ ಮೂರುಲೋಕವೆಲ್ಲ ಏಳುತ್ತ ಬೀಳುತ್ತ ಇರ್ಪುದ ಕಂಡೆ. ಆ ಕೋಡಗದಾಟವ ಕಂಡು ಈರೇಳುಲೋಕದ ಪ್ರಾಣಿಗಳು ಬೆರಗಾದುದ ಕಂಡೆ. ಅದಾರಿಗೂ ಸಾಧ್ಯವಲ್ಲ. ಅಷ್ಟರಲ್ಲಿಯೇ ಅರಸನ ಮನೆಯಲ್ಲಿ ಒಂದು ಎಳೆ ಶಿಶು ಹುಟ್ಟಿ, ಕಸ ನೀರು ಹೊರುವ ಗಾಡಿಯ ಕೊಂದು, ಕೋತಿಯ ತಿಂದು, ಉಡವ ನುಂಗಿ, ತ್ರೈಲೋಕದ ಬಂಧನವ ಬಿಡಿಸಿ, ತಂಗಿಯನೊಡಗೂಡಿ, ಅಕ್ಕನ ಸಂಗವ ಮಾಡಿ, ಅರಸಿನ ಅರಮನೆಯಲ್ಲಿ ಆರು ಕಾಣದೆ ಅಡಗಿಹೋಯಿತ್ತು. ಇದರಂದಚಂದವ ನಿಮ್ಮ ಶರಣ ಬಲ್ಲ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅರಗಿನ ತೇಜಿಯ ಮೇಲೆ ಉರಿಯ ಹಿರಿಯರಸು ಮೂರ್ತಿಗೊಂಡಿರಲು ಮಂಜಿನ ಪರಿವಾರ ಸಂದಣಿಸಿ ಸಂತೈಸಿ ಅವರಂಗಕ್ಕೆ ಬಿಸಿಲಿನ ಜೋಡ ತೊಡಿಸಿ ತಾ ತುರಂಗದ ಮೇಲೆ ಪಶುತಮವೆಂಬ ಖಂಡೆಯವ ಪಿಡಿದು ಚಂಜಿಕಾಕಿರಣದ ಮೇಲೆ ಅಂಗೈಸಿ ಏರಲಾಗಿ ಫೌಜು ಬೆರಸಿತ್ತು. ಉರಿಯರಸು ಎತ್ತಿದ ಖಂಡೆಯ ವರುಣನ ಕಿರಣದೊಳಗೆಬಯಲಾಯಿತ್ತು. ಮಂಜಿನ ಪರಿವಾರ ಆ ರಂಜನೆಯೊಳಡಗಿತ್ತು. ಉರಿಯರಸು ವಾಯುವಿನ ಸಿರಿಯೊಳಗಾದ. ಅರಗಿನ ಅಶ್ವ ಅರಸಿನ ತೊಡೆಯೊಳಗೆ ಹರಿಯಿತ್ತು. ಇಂತೀ ದೊರೆಗೆ ಅರಿ ಇದಿರಿಲ್ಲಾ ಎಂದು ಗೋರಕ್ಷಪಾಲಕ ಮಹಾಪ್ರಭು ಸಿದ್ಧಸೋಮನಾಥಲಿಂಗಕ್ಕೆ ಇದಿರಿಲ್ಲಾ ಎನುತಿರ್ದೆ.
--------------
ಗೋರಕ್ಷ / ಗೋರಖನಾಥ
ಅರಸಿನ ಭಕ್ತಿ, ಅಹಂಕಾರದಲ್ಲಿ ಹೋಯಿತ್ತು. ವೇಶಿಯ ಭಕ್ತಿ, ಎಂಜಲ ತಿಂದಲ್ಲಿ ಹೋಯಿತ್ತು. ಬ್ರಾಹ್ಮಣನ ಭಕ್ತಿ, ಮುಟ್ಟುತಟ್ಟಿನಲ್ಲಿ ಹೋಯಿತ್ತು. ಶೀಲವಂತನ ಭಕ್ತಿ, ಪ್ರಪಂಚಿನಲ್ಲಿ ಹೋಯಿತ್ತು. ಸೆಟ್ಟಿಯ ಭಕ್ತಿ, ಕುಟಿಲವ್ಯಾಪಾರದಲ್ಲಿ ಹೋಯಿತ್ತು. ಇಂತಿವರ ಭಕ್ತಿಗೆ ಊರಿಂದ ಹೊರಗಣ ಡೊಂಬನೆ ಸಾಕ್ಷಿ ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಮಹಾಮಲೆಯಲ್ಲಿ ಮಕ್ಷಿಕವಿರ್ಪುದು. ಆ ಮಕ್ಷಿಕನ ಬಾಯೊಳಗೆ ಉಡುವಿರ್ಪುದು. ಆ ಉಡುವಿನ ಬಾಯೊಳಗೆ ವ್ಯಾಘ್ರವಿರ್ಪುದು. ಆ ವ್ಯಾಘ್ರನ ಬಾಯೊಳಗೆ ಅರಸಿನ ಶಿಶುವಿರ್ಪುದು. ಆ ಶಿಶು ಒದರಲು ಮಕ್ಷಿಕ ಬಿಟ್ಟಿತ್ತು, ಉಡವು ಸತ್ತಿತ್ತು, ವ್ಯಾಘ್ರ ಬಿಟ್ಟಿತ್ತು. ಆ ಶಿಶು ಮೂರು ಲೋಕವ ನುಂಗಿ ತಾಯಿತಂದೆಯ ಕೊಂದು ಬಟ್ಟಬಯಲಲ್ಲಿ ನಿರ್ವಯಲಾಯಿತ್ತು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಗ್ರಾಮಕ್ಕೊಬ್ಬರಸಿಲ್ಲದೆ ಗ್ರಾಮವಳುತ್ತಿದೆ ನೋಡಾ. ಗ್ರಾಮವನಾಳುವ ಅರಸಿನ ಮನೆಯ್ಲ ಸದೆ ಬೆಳೆಯಲ್ಲಿದೆಯಯ್ಯಾ. ಗ್ರಾಮಕ್ಕೆ ಬಂದ ಕಟ್ಟರಸಿಂಗೆ ಪಟ್ಟವ ಕಟ್ಟಿ, ಅರಸಿನ ಮನೆಗಳನನುಗೆಯ್ದು, ಹರುಷದಿಂದ ಕಾಣಿಕೆಯಿಕ್ಕಿಸಿಕೊಳ್ಳಾ, ಕಪಿಲಸಿದ್ಧಮಲ್ಲಿನಾಥಯ್ಯಾ.
--------------
ಸಿದ್ಧರಾಮೇಶ್ವರ
ಆರೆಂಬ ಸಂಖ್ಯೆ ಆರೂ ಇಲ್ಲದ ರಾಜ್ಯದಿ ಮಾರಾರಿಯೊಬ್ಬನೇ ಅರಸು ನೋಡಾ. ಅರಸು ಪ್ರಧಾನಿ ಮಂತ್ರಿ ಆನೆ ಸೇನೆ ಪ್ರಜೆ ಪರಿವಾರವೆಲ್ಲವು ಸತ್ತು ಅರಸಿನ ಅರಸುತನ ಕೆಟ್ಟಿತ್ತು ನೋಡಾ. ತನ್ನಿಂದನ್ಯವಾಗಿ ಇನ್ನಾರೂ ಆರು ಏನುಯೇನೂ ಇಲ್ಲದ ನಿರಾಕಾರವ ನೆರೆದು ಆ ನಿರಾಕಾರ ಪರವಸ್ತುವೆಯಾದನಾಗಿ, ಅದು ಲಿಂಗಾಂಗ ಸಂಯೋಗ ಕಾಣಾ, ಮಹಾಲಿಂಗುಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮುಚ್ಚಿ ಮೂದಲಿಸಿ ಮೊನೆಗೆಡಿಸುವ ಮಾಯಾಪ್ರಪಂಚಿನ ಬಲೆಗೆ ಸಿಲುಕದೆ ನಾನು ಧ್ಯಾನ ಮೌನ ಉಪಾವಸ್ಥೆಯಿಂದ ಷಟ್‍ಕೋಣೆಯ ಸುವರ್ಣದ್ವೀಪದ ಅರಸಿನ ಬಲವಿಡಿದು ಪಂಚವಿಂಶತಿತತ್ವಂಗಳೆಂಬ ಮಾಯಾಸುಭಟರ ಸ[ೂ]ಡಕೊಂದು ಪಂಚಬ್ರಹ್ಮವೇ ಪಂಚಭೂತಂಗಳಾಗಿ ತನುವಿಡಿದು ಲಿಂಗನಿಷೆ*ಯಿಂದ ಓಂಕಾರಸ್ವರೂಪವಾಗಿ ಅಹಂಕರಿಸದೆ ದಾಸೋಹಂಭಾವದಿಂದ ತ್ರಿಕೂಟಪರ್ವತಕ್ಕೆ ಪಶ್ಚಿಮದಿಕ್ಕಿನಲ್ಲಿ ಅನಂತ ಕಾರ್ಮುಗಿಲ ಮಿಂಚಿನಂತೆ [ತೋರುತ್ತಿಪ್ಪು]ದೀಗ ಶಾಂಭವದ್ವೀಪ. ಆ ಶಾಂಭವದ್ವೀಪದಲ್ಲಿ ನೆಲಸಿರ್ಪ ನಿರವಯಲ ಬೆಳ್ದಿಂಗಲ ಬೀಜಮಂ ನಾನು ಕಂಡು ಕಂಬನಿದುಂಬಿ ನಮಸ್ಕಾರಮಂ ಮಾಡಿದ ಘನದಿಂದ ಬ್ರಹ್ಮ ವಿಷ್ಣು ರುದ್ರ ಇಂತೀ ಮೂವರಂ ಕೆಡೆಮೆಟ್ಟಿ ಜನನ ಮರಣಂಗಳಂ ಗೆಲಿದು ನಾನು ಹುಟ್ಟುಗೆಟ್ಟೆನಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಭೃತ್ಯನಾದಲ್ಲಿ ಕರ್ತೃವಿನ ಕೈಯ ಊಳಿಗವ ಕೊಂಬ ಭಕ್ತರ ಕಂಡು ನಾಚಿತ್ತೆನ್ನ ಮನ. ಆಳುವ ಅರಸಿನ ಕೈಯಲ್ಲಿ ಊಳಿಗವ ಕೊಂಬಂತೆ, ತೊತ್ತು ಒಡತಿಯ ಕೈಯಲ್ಲಿ ಭೃತ್ಯತ್ವವ ಮಾಡಿಸಿಕೊಂಬಂತೆ, ಮೊದಲಿಗೆ ಮೋಸ ಲಾಭವನರಸಲುಂಟೆ ? ಅರ್ತಿಗಾರರೆಲ್ಲಕ್ಕೆ ನಿಶ್ಚಯದ ಭಕ್ತಿಯುಂಟೆ ? ಹೊತ್ತುಹೋಕರ ಭಕ್ತರೆಂದಡೆ, ಒಪ್ಪುವರೆ ನಿಚ್ಚಟಶರಣರು ? ಅಚ್ಚು ಮುರಿದ ಹಾರಕ್ಕೆ ಎತ್ತಿನ ಹಂಗೇಕೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಊರೊಳಗೊಬ್ಬ ಹಗಲುಗಳ್ಳನು ಮನೆಯ ಮಾಡಿಕೊಂಡು ಐವರು ಇರುಳುಗಳ್ಳರ ಕೂಡಿಕೊಂಡು ಅರಸಿನ ಅರಮನೆಯ ಕನ್ನವ ಕೊರೆದು ಮಾಣಿಕ್ಯವ ಕದ್ದು ಐವರು ಕಳ್ಳರಿಗೆ ಕೊಟ್ಟ. ಅರಸು ಎದ್ದು ಹಗಲುಗಳ್ಳನ ಹಿಡಿದುದ ಕಂಡೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇನ್ನಷ್ಟು ... -->