ಅಥವಾ

ಒಟ್ಟು 36 ಕಡೆಗಳಲ್ಲಿ , 21 ವಚನಕಾರರು , 36 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕ್ರೋಧ ಬಂದಲ್ಲಿ ಕೊಲ್ಲೆಂಬುದು, ದಯೆ ಬಂದಲ್ಲಿ ಬೇಡಾ ಎಂಬುದು, ಅದು ಅರಿವೊ? ಅಜ್ಞಾನವೊ? ಬೇರೊಂದು ಹೊಲಬೊ? ಮಾಡುವ ಕ್ರೀ ಜಡನೆಂಬುದು, ಕ್ರೀ ಹೊರಗಾದುದು ಅರಿವೆಂಬುದು, ಅದನರಿವುದು ಅದೇನು ಹೇಳಾ? ಆತ್ಮನರಿವೊ ಅದೇನು ಮರವೆಯೊ? ತೊಳೆದಡೆ ಮಡಿಯಾಗಿ ಮಾಸಿದಡೆ ಮೈಲಿಗೆಯಾಗಿ ಪುಸಿಯಹುದೊಂದೊ ಎರಡೊ? ಅರಿದಡೆ ತಾನೆಂಬ ಮರೆದಡೆ ಜಗವೆಂಬ ಉಭಯಕ್ಕೊಳಗಾಗದ ಮುನ್ನವೆ ಅರಿ, ಕಾಮಭೀಮ ಜೀವಧನದೊಡೆಯನ.
--------------
ಒಕ್ಕಲಿಗ ಮುದ್ದಣ್ಣ
ಅಂಗಭಾವದಿಂದ ಲಿಂಗಮುಖವನು ಅಂಗಮುಖವನು ಅರಿದು ಜಂಗಮ ಮುಖವನು ಅರಿದಡೆ ಸಂಸಾರವೆಂಬ ಬಂಧನವಿಲ್ಲವಯ್ಯ. ಜಂಗಮವೆಂದರೆ ಸಾಕ್ಷಾತ್ ಪರವಸ್ತು ತಾನೆ ನೋಡಾ. ಅದೇನು ಕಾರಣವೆಂದಡೆ: ಅಂಗವಾರಕ್ಕೆ ಲಿಂಗವಾರಕ್ಕೆ ಮೇಲಾಗಿ ಆ ಅಂಗವನು ಲಿಂಗವನು ತನ್ನಲ್ಲಿ ಏಕೀಕರಿಸಿಕೊಂಡು ತಾನು ಪರಮ ಚೈತನ್ಯನಾದ ಕಾರಣ. ಆ ಪರವಸ್ತುವಿನ ಪ್ರಸನ್ನ ಪ್ರಸಾದಮುಖವನರಿದು ಇಹ ಪರವ ನಿಶ್ಚೆ ೈಸೂದಿಲ್ಲ ನೋಡಾ. ಅದೇನು ಕಾರಣವೆಂದಡೆ: ಇಹ ಪರಕ್ಕೆ ಹೊರಗಾಗಿ ಪರಮ ಪದದಲ್ಲಿ ಪರಿಣಾಮಿಯಾದನಾಗಿ ಈ ತ್ರಿವಿಧವು ಒಂದೆಯೆಂದರಿದಾತನೆ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭು ತಾನೆ ಕಾಣಿರೋ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಗುರುಭಕ್ತನಾದಡೆ ತನುವಿನಾಸೆಯ ಬಿಡಬೇಕು. ಲಿಂಗಭಕ್ತನಾದಡೆ ಮನದಾಸೆಯ ಬಿಡಬೇಕು. ಜಂಗಮಭಕ್ತನಾದಡೆ ಧನದಾಸೆಯ ಬಿಡಬೇಕು. ಗುರುವಿನ ಅನುವನರಿಯನಾಗಿ ಗುರು ಸಂಬಂದ್ಥಿಯಲ್ಲ. ಲಿಂಗದ ನಿಲವನರಿಯನಾಗಿ ಲಿಂಗಸಂಬಂದ್ಥಿಯಲ್ಲ. ಜಂಗಮದಲ್ಲಿ ನಿಜವನರಿಯನಾಗಿ ಜಂಗಮ ಸಂಬಂದ್ಥಿಯಲ್ಲ. ಇದು ಕಾರಣ, ಗುರುಲಿಂಗಜಂಗಮವನರಿಯಲೇ ಆಗದು, ನೆರೆ ಅರಿದಡೆ, ಅರಿಯಬೇಕು ನಿಃಕಳಂಕ ಮಲ್ಲಿಕಾರ್ಜುನಲ್ಲಿ. ಆ ಶರಣ ಉರಿಯುಂಡ ಕರ್ಪುರದಂತೆ.
--------------
ಮೋಳಿಗೆ ಮಾರಯ್ಯ
ಬ್ರಹ್ಮ ಸೋರೆಯಾಗಿ, ವಿಷ್ಣು ದಂಡವಾಗಿ, ಸಕಲದೇವತಾಕುಲ ದಾರವಾಗಿ, ಶ್ರುತಿನಾದ ವಸ್ತುವಾಗಿ ತೋರುತ್ತಿರೆ, ತನ್ನ ಲೀಲೆಯಿಂದ, ಜಗಕ್ರೀಡಾಭಾವದಿಂದ ಒಂದಕ್ಕೊಂದು ಸೇರಿಸಿ, ಉತ್ತಮ ಕನಿಷ್ಠ ಮಧ್ಯಮವೆಂಬ ತ್ರಿವಿಧಮೂರ್ತಿಯಾಗಿ, ಕಲ್ಪಿಸಿದ ಜಗ ಹಾಹೆಯಿಂದ ಎಂಬುದನರಿಯದೆ, ಮಲಕ್ಕೂ ನಿರ್ಮಲಕ್ಕೂ ಸರಿಯೆನಬಹುದೆ? ವಾದಕ್ಕೆ ಈ ತೆರ ಅರಿದಡೆ ಆ ತೆರ. ಸದಾಶಿವಮೂರ್ತಿಲಿಂಗವು ಅತ್ಯತಿಷ್ಠದ್ದಶಾಂಗುಲವು.
--------------
ಅರಿವಿನ ಮಾರಿತಂದೆ
ಅರಿದಡೆ ಆತ್ಮನಲ್ಲ, ಅರಿಯದಿದ್ದಡೆ ಆತ್ಮನಲ್ಲ. ತೋರಿತ್ತಾದಡೆ ವಿಷಯ, ತೋರದಿದ್ದಡೆ ಶೂನ್ಯವೆನಿಸುಗು, ಬೊಮ್ಮದ ಅರಿವಿನ್ನೆಲ್ಲಿಯದೊ ? ಅವು ತಾನರಿವಾಗಿದ್ದು, ಸ್ವಾನುಭಾವದ ಹೊರೆಯಲ್ಲಿದ್ದು, ಸನ್ನಿದ್ಥಿ, ನಿತ್ಯನಿಜಾನಂದಾತ್ಮ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನೆಂದರಿವುದು.
--------------
ಉರಿಲಿಂಗಪೆದ್ದಿ
ದೇಹವೆಂಬುದು ಅವಿದ್ಯೆ ಎಂಬುವರು; ಅದೆಂತಯ್ಯಾ? ದೇಹ ತಾನಿಲ್ಲರೆ ಆಶ್ರಯಿಸುವ ಪರಿ ಎಂತಯ್ಯಾ? ಅರಿದಡೆ ಆಶ್ರಯಿಸ; ಮರೆದಡೆ ಆಶ್ರಯಿಸುವ. `ಅಜ್ಞಾನಾದಧಶ್ಚಲ್ಕ' ಎಂಬುದ ಅರಿದೆನಯ್ಯಾ, ದೇಹವದು ಜಡಸಾಕ್ಷಿ! ಅಜಡವೆಂಬ ಭಾವ ವಚನದಲ್ಲಲ್ಲದೆ ಅನುಭಾವದ್ಲಲ್ಲ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಐಗೈಮನೆ ನಾಗೈಕಂಬ ಮೂಗೈತೊಲೆ ಭೇದ ಕರವಳವ ಹಾಕಿ ನೋಡಿ ಅರಿದಡೆ ಆಯ ಬಂದಿತ್ತು. ಮಸದಡೆ ಆಯ ಹೋಯಿತ್ತು. ಮೂಗೆಯ್ಯ ಕರದಲ್ಲಿ ಇದರರಿಕೆಯಾಗಿ ಹೇಳಾ ಧಾರೇಶ್ವರ ನಿನ್ನಾಲಯಕ್ಕೆ.
--------------
ಕಾಮಾಟದ ಭೀಮಣ್ಣ
ಪಂಚವಿಷಯಂಗಳೆಂದು, ಅಷ್ಟಮದಂಗಳೆಂದು, ಚತುಷ್ಟಯಭಾವಂಗಳೆಂದು, ಷೋಡಶಭೇದಂಗಳೆಂದು, ಸದ್ಗುಣಸಾಧಕಂಗಳೆಂದು, ತ್ರಿಗುಣಭೇದ ಆತ್ಮಂಗಳೆಂದು ಕಲ್ಪಿಸಿಕೊಂಡಿಪ್ಪ ಆತ್ಮನೊಂದೆ ಭೇದ. ಅದ ವಿಚಾರಿಸಿದಲ್ಲಿ ಅರಿದಡೆ ತಾ, ಮರೆದಡೆ ಜಗವಾಯಿತ್ತು. ಉಭಯವನಳಿದು ನಿಂದಲ್ಲಿ ಸದಾಶಿವಮೂರ್ತಿಲಿಂಗವಾಯಿತ್ತು.
--------------
ಅರಿವಿನ ಮಾರಿತಂದೆ
ಅರಿವರಿವಿನ ಮುಂದಣ ಅರಿವು ಅದೇನೊ? ಅರಿವಿನ ಎರಡರ ಅರಿವು ನಿಃಪತಿ! ಮಾಯೆಯ ಮುಂದಡಗಿತ್ತಲ್ಲಾ! ಅರಿದಡೆ ಹಿಂದಾಯಿತ್ತು, ಮರೆದಡೆ ಮುಂದಾಯಿತ್ತು. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿತ್ಯ ಸಾರಾ.
--------------
ಘಟ್ಟಿವಾಳಯ್ಯ
ಚತುರ್ವಿಂಶತಿಯೇ ದೇಹ, ಪಂಚವಿಂಶಕನೇ ದೇಹಿ, ಷಡ್‍ವಿಂಶಕನೇ ಆತ್ಮಕನು. ಅರಿದಡೆ ಸಚ್ಚಿದಾನಂದಮಪ್ಪ ನಿಜವು ನೀನೆ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ನಿರ್ಗುಣ ಮಹಾದೇವನೆಂದ ಬಳಿಕ ಗುಣಹೀನನಲ್ಲವೆ? ಸಗುಣನವನು ತನ್ನರಿವಿಗೆ; ನಿರ್ಗುಣನವನು ಜಗಜ್ಜೀವಿಗಳಿಗೆ. ಅರಿದಡೆ ನಿರ್ಗುಣನಲ್ಲ, ಸಗುಣ ಗುಣಾಗ್ರಗಣ್ಯ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಅರಿದಡೆ ಸುಖವಿಲ್ಲ; ಮರದಡೆ ದುಃಖವಿಲ್ಲ ! ಸತ್ತಡೆ ಚೇಗೆಯಿಲ್ಲ; ಬದುಕಿದಡೆ ಆಗಿಲ್ಲವೆಂಬ ! ನಿರ್ಣಯದಲ್ಲಿ ನಿಶ್ಚಯಿಸಿ ನಿಲ್ಲದೆ ! ನಾನು ನೀನೆಂಬ ಉಭಯವಳಿದು ಕೂಡುವ ಯೋಗದ ಹೊಲಬನರಿಯದೆ ! ಬರಿಯ ಮರವೆಯ ಪ್ರೌಡಿsಕೆಯಲ್ಲಿ ಕೆಟ್ಟರಯ್ಯ ಗುಹೇಶ್ವರ.
--------------
ಅಲ್ಲಮಪ್ರಭುದೇವರು
ಕಾಯವ ಹೊತ್ತು ತಿರುಗಾಡುವನ್ನಬರ ನಾನರಿದೆನೆಂಬುದು ಹುಸಿಯಾಯಿತ್ತು. ಅರಿದಡೆ ತಾವರೆ ಎಲೆಯ ಬಿಂದುವಿನಂತೆ ಲೇಪವಿಲ್ಲದೆ ಗುಹೇಶ್ವರಲಿಂಗವನರಿಯಬೇಕು ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಎರಳೆ ಯತಿಯಂತೆ, ಕಾಕ ಪಿಕದಂತಿರಬೇಡವೆ ? ತಿಟ್ಟನೆ ತಿರುಗಿ, ತೊಟ್ಟನೆ ತೊಳಲಿ ಬಳಲುವರ ಕಳ ಹೇಸಿಕೆಯ ನೋಡಾ! ಇರುಳು ಹಗಲೆನ್ನದೆ ತಿರುಗುವವರ ಕಂಡು ಹೇಸಿದೆ. ಅರಿದಡೆ ಶರಣ, ಮರೆದಡೆ ಮಾನವ. ಸತ್ತ ಕಸನ ಹೊತ್ತುಕೊಂಡು ಊರೂರಿಗೆ ಮಾರುವ ಕಾಶಾಂಬರಧಾರಿಗಳನೊಲ್ಲ, ನಿಜಗುರು ಶಂಕರದೇವ.
--------------
ಅಂಗಸೋಂಕಿನ ಲಿಂಗತಂದೆ
ಉಚಿತ ಬಂದಲ್ಲಿ ನಾಳೆಗೆಂದಾಗವೆ ಕುಚಿತವಲ್ಲವೆ ? ನೆರೆ ಅರಿದು ಸಂಸಾರವ ಹರಿಯದಿದ್ದಾಗವೆ ಮರವೆಯಲ್ಲವೆ ? ಅರಿದಡೆ ಮರೀಚಿಕದಂತೆ, ಸುರಚಾಪದಂತೆ, ಅಂಬರದ ಆಕಾರದಂತೆ ತೋರಿ ಅಡಗುವ ನಿಜಲಿಂಗಾಂಗಿಯ ಇರವು. ಅದರಂಗ ವೇಧಿಸಿದಲ್ಲಿಯೆ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಇನ್ನಷ್ಟು ... -->