ಅಥವಾ

ಒಟ್ಟು 13 ಕಡೆಗಳಲ್ಲಿ , 6 ವಚನಕಾರರು , 6 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಿಂಗವು ಸರ್ವಾಂಗದಲ್ಲಿ ಭರಿತವಾಗಿರಲು ಮನ ಅರಿಯದು, ತನು ಸೋಂಕದು, ಜ್ಞಾನ ಕಾಣಿಸದು, ಭಾವ ಮುಟ್ಟದು. ಶಿವಶಿವಾ ವಿಶ್ವಾಸದಿಂ ಗ್ರಹಿಸಿ ಹಿಡಿಯದೆ ಕೆಟ್ಟೆ. ಅಂತರಂಗ ಬಹಿರಂಗ ಭರಿತವಾಗಿ ಲಿಂಗವಿದಾನೆ ಇದಾನೆ. ಮನವೇ, ನಿಮಿಷದಲಿ ವಿಶ್ವಾಸದಿಂ ಗ್ರಹಿಸಿದಡೆ ಸತ್ಯನಪ್ಪೆ ನಿತ್ಯನಪ್ಪೆ ಮುಕ್ತನಪ್ಪೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಎನ್ನ ದೃಷ್ಟಿ ನಿಮ್ಮ ರೂಪಿನಲ್ಲಿ ನಿಂದು ಕಾಣದು; ಎನ್ನ ಮನ ನಿಮ್ಮ ಕಳೆಯಲ್ಲಿ ಬೆರಸಿ ಅರಿಯದು. ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ ಅನುಪಮಸುಖಿಯಾನು !
--------------
ಚನ್ನಬಸವಣ್ಣ
ಅಷ್ಟೋತ್ತರಶತವ್ಯಾಧಿಗಳ ಧರಿಸಿಕೊಂಡಿಪ್ಪುದು ಆತ್ಮನೊ, ಘಟನೊ ? ಆತ್ಮನೆಂದಡೆ ಸಾಯದು ಚಿತ್ತ , ಘಟವೆಂದಡೆ ಆತ್ಮನಿಲ್ಲದೆ ಅರಿಯದು ದೇಹ. ಇಂತೀ ಒಂದ ಕಳೆದು, ಒಂದಕ್ಕೆ ಔಷಧಿಯ ಕೊಟ್ಟಿಹನೆಂದಡೆ, ಆ ಎರಡರ ಸಂಗದಿಂದ ರುಜೆ ಪ್ರಮಾಣು. ಇಂತೀ ಶರೀರಾತ್ಮ ಆದಿಯಾಗಿ ಬಂದ ವ್ಯಾಧಿಗೆ ನಾನೊಂದು ಔಷಧಿಯ ಭೇದವ ಹೇಳಿಹೆ. ಆಧಾರದಲ್ಲಿಪ್ಪ, ಮೂಲಿಕೆಯ ಬೇರನರದು, ಐದಿಂದ್ರಿಯವ ಕೂಡಿಕೊಂಡು. ಮೂರು ಮುಟ್ಟದ ತಟ್ಟೆಯಲ್ಲಿ ಬೇಗ ತೆಗೆದುಕೊಳ್ಳಿ. ಆ ಮದು ವಾಂತಿಗೆ ಸಲ್ಲ, ವಿರೋಚನವಿಲ್ಲ. ನಾನಾ ವೈದ್ಯರ ಭೇದಗಾಹಿನ ಕ್ರಮವಲ್ಲ. ಇದು ಸಿದ್ಧಾಂತ ಮೂಲಿಕೆ, ಇದ ಸಾಧಿಸಿಕೊಳ್ಳಿ. ಎಂದೆಂದಿಗೂ ರುಜೆಯಿಲ್ಲ, ಸಂದುಸಂಶಯವಿಲ್ಲ, ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗದಲ್ಲಿ.
--------------
ವೈದ್ಯ ಸಂಗಣ್ಣ
ಇದ್ದೊಂದು ಕಲ್ಲೊಳು ಪ್ರಸಿದ್ಧವಾಗಿಹ ಮುಗ್ಧನ ಕಂಡೆ. ಆ ಮುಗ್ಧ ಮಾತಾಡನು, ಮಾತಾಡದೆ ಸುಮ್ಮನಿರನು. ಆತನ ಸೊಮ್ಮು ಅರಿಯದು; ಅರಿಯಬೇಕೆಂದಡೆ ಕರಣಂಗಳ ಒಡನಾಟ ಆಗಬಾರದು, ನೋಡೈ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಗಿರಿಯ ಮೇಲಣ ಕೋಡಗ, ಹಿರಿಯ ಮಾರಿಯ ನುಂಗಿತ್ತು ನೋಡಾ. ಹಿರಿಯ ಮಾರಿಯ ನುಂಗಿ ಅವಸ್ಥೆ ಅಡಗದೆ, ಎಪ್ಪತ್ತೆ ೈದು ಗ್ರಾಮವನೆಯಿದೆ ನುಂಗಿತ್ತು ನೋಡಾ. ದಶಗಮನಂಗಳ ಕೂಡಿ ವಿಶ್ವತೋಪಥದಲ್ಲಿ ನಡೆವುತಿಪ್ಪುದು ನೋಡಾ. ಒಂದು ಪಥವ ತಾನೆಂದೂ ಅರಿಯದು ನೋಡಾ. ತಾ ಬಂದಂದಿಂದ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶಬ್ದವನು ಕಿವಿಗಳು ಬಲ್ಲವೆ? ಅರಿಯವು. ಅಲ್ಲಿದ್ದ ಆಕಾಶ ತಾ ಬಲ್ಲುದೆ? ಅರಿಯದು. ಸ್ಪರ್ಶನವ ತ್ವಕ್ಕು ಬಲ್ಲುದೆ? ಅರಿಯದು. ಅಲ್ಲಿದ್ದ ವಾಯು ತಾ ಬಲ್ಲುದೆ? ಅರಿಯದು. ರೂಪನು ಕಣ್ಣು ಬಲ್ಲುದೆ? ಅರಿಯದು. ಅಲ್ಲಿದ್ದ ಅಗ್ನಿ ತಾ ಬಲ್ಲುದೆ? ಅರಿಯದು. ಸ್ವಾದವನು ನಾಲಿಗೆ ಬಲ್ಲುದೆ? ಅರಿಯದು. ಅಲ್ಲಿದ್ದ ಅಪ್ಪು ತಾ ಬಲ್ಲುದೆ? ಅರಿಯದು. ಗಂಧವನು ಘ್ರಾಣ ಬಲ್ಲುದೆ? ಅರಿಯದು. ಅವರಲ್ಲಿ ನಿಂದು, ವಿಷಯಂಗಳನು ಭಕ್ತನ ಇಂದ್ರಿಯಂಗಳೊಡನೆ ಕೂಡಿ ಅರಿವಾತ ನೀನೇ. ನೀನೆ ಭಕ್ತವತ್ಸಲ, ದಯಾನಿಧಿ, ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.
--------------
ಸ್ವತಂತ್ರ ಸಿದ್ಧಲಿಂಗ
-->