ಅಥವಾ

ಒಟ್ಟು 16 ಕಡೆಗಳಲ್ಲಿ , 9 ವಚನಕಾರರು , 15 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲೆ ತಂಗಿ, ಶರಣಸತಿ ಲಿಂಗಪತಿಯಾದ ಪತಿವ್ರತಾಭಾವದ ಚಿಹ್ನೆ, ನಿನ್ನ ನಡೆ ನುಡಿಯಲ್ಲಿ, ಹೊಗರುದೋರುತ್ತಿದೆ, ನಿನ್ನ ಪೂರ್ವಾಪರವಾವುದಮ್ಮ?. ಸುತ್ತೂರು ಸಿಂಹಾಸನದ ಪರ್ವತದೇವರ ಶಿಷ್ಯರು, ಭಂಡಾರಿ ಬಸವಪ್ಪೊಡೆಯದೇವರು. ಆ ಭಂಡಾರಿ ಬಸವಪ್ಪೊಡೆಯದೇವರ ಶಿಷ್ಯರು. ಕೂಗಲೂರು ನಂಜಯ್ಯದೇವರು. ಆ ನಂಜಯ್ಯದೇವರ ಕರಕಮಲದಲ್ಲಿ, ಉದಯವಾದ ಶರಣವೆಣ್ಣಯ್ಯಾ ನಾನು. ಎನ್ನ ಗುರುವಿನ ಗುರು ಪರಮಗುರು, ಪರಮಾರಾಧ್ಯ ತೋಂಟದಾರ್ಯನಿಗೆ ಗುರುಭಕ್ತಿಯಿಂದೆನ್ನ ಶರಣುಮಾಡಿದರು. ಆ ತೋಂಟದಾರ್ಯನು, ತನ್ನ ಕೃಪೆಯೆಂಬ ತೊಟ್ಟಿಲೊಳಗೆನ್ನಂ ಮಲಗಿಸಿ, ಪ್ರಮಥಗಣಂಗಳ ವಚನಸ್ವರೂಪತತ್ವಾರ್ಥವೆಂಬ, ಹಾಲು ತುಪ್ಪಮಂ ಸದಾ ದಣಿಯಲೆರೆದು, ಅಕ್ಕರಿಂದ ರಕ್ಷಣೆಯಂ ಮಾಡಿ, ``ಘನಲಿಂಗಿ' ಎಂಬ ನಾಮಕರಣಮಂ ಕೊಟ್ಟು, ಪ್ರಾಯಸಮರ್ಥೆಯಂ ಮಾಡಿ, ಸತ್ಯಸದಾಚಾರ, ಜ್ಞಾನಕ್ರಿಯೆಗಳೆಂಬ, ದಿವ್ಯಾಭರಣಂಗಳಂ ತೊಡಿಸಿ, ಅರುಹೆಂಬ ಬಣ್ಣವ ನಿರಿವಿಡಿದುಡಿಸಿ, ಅರ್ತಿಯ ಮಾಡುತ್ತಿಪ್ಪ ಸಮಯದಲ್ಲಿ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ, ತನಗೆ ನಾನಾಗಬೇಕೆಂದು ಬೇಡಿಕಳುಹಲು, ಎಮ್ಮವರು ಅವಂಗೆ ಮಾತನಿಕ್ಕಿದರಮ್ಮಾ.
--------------
ಘನಲಿಂಗಿದೇವ
ಪೃಥ್ವಿಯಲ್ಲಿ ಹುಟ್ಟಿದ ಶಿಲೆಯ ತಂದು ಕಲ್ಲುಕುಟಿಕನಿಂದ ಕಟಿಸಿ, ಕರಿಯ ಕೆಸರ ಮೆತ್ತಿ, ಪಾತಕಗುರುವಿನ ಕೈಯಲ್ಲಿ ಪ್ರೇತಲಿಂಗವ ಕೊಟ್ಟು, ಭೂತದೇಹಿಗಳು ಪಡಕೊಂಡು ಅಂಗೈಯಲ್ಲಿ ಆ ಲಿಂಗವ ಕುಳ್ಳಿರಿಸಿ, ಕರುವಿಲ್ಲದ ಎಮ್ಮಿಗೆ ಮುರುವು ಹಾಕಿದಹಾಗೆ, ಅಡವಿಯೊಳಗಣ ಕಾಡುಮರದ ಹಸರು ತಪ್ಪಲು ತಂದು ಆ ಲಿಂಗಕ್ಕೆ ಹಾಕಿದರೆ ಸಾಕೆನ್ನದು ಬೇಕೆನ್ನದು. ಅನ್ನ ನೀರು ತೊರೆದರೆ ಒಂದಗುಳನ್ನ ಸೇವಿಸದು. ಒಂದು ಹನಿ ಉದಕವ ಮುಟ್ಟದು. ಇಂತಪ್ಪ ಲಿಂಗವ ಪೂಜಿಸಿ ಮರಣಕ್ಕೆ ಒಳಗಾಗಿ ಹೋಹಲ್ಲಿ ಪ್ರಾಣಕ್ಕೆ ಲಿಂಗವಾವುದು ಎಂದರಿಯದೆ ತ್ರಿಲೋಕವೆಲ್ಲ ಪ್ರಳಯವಾಗಿ ಹೋಗುತಿರ್ಪುದು ನೋಡಾ. ಅದೇನು ಕಾರಣವೆಂದಡೆ : ತಮ್ಮ ನಿಜವ ಮರೆದ ಕಾರಣ. ಲಿಂಗದ ಗೊತ್ತು ತಮಗಿಲ್ಲ, ತಮ್ಮ ಗೊತ್ತು ಲಿಂಗಕ್ಕಿಲ್ಲ. ಇಂತಪ್ಪ ಆಚಾರವೆಲ್ಲ ಶೈವಮಾರ್ಗವಲ್ಲದೆ ವೀರಶೈವಮಾರ್ಗ ಮುನ್ನವೇ ಅಲ್ಲ. ಅದೆಂತೆಂದೊಡೆ : ಆದಿ ಅನಾದಿಯಿಂದತ್ತತ್ತಲಾದ ನಿಃಕಲಚಿದ್ರೂಪಲಿಂಗವನು ನಿಃಕಲಸದ್ರೂಪಾಚಾರ್ಯನಲ್ಲಿ ಪಡಕೊಂಡು ಆತ್ಮನೆಂಬ ಅಂಗದ ಮೇಲೆ ಅರುಹೆಂಬ ಲಿಂಗವ ಧರಿಸಿಕೊಂಡು, ಸದ್ಭಾವವೆಂಬ ಹಸ್ತದಲ್ಲಿ ಸುಜ್ಞಾನವೆಂಬ ಲಿಂಗವ ಮೂರ್ತಗೊಳಿಸಿ, ಪರಮಾನಂದವೆಂಬ ಜಂಗಮದ ಜಲದಿಂ ಮಜ್ಜನಕ್ಕೆರದು, ಮಹಾಜ್ಞಾನ ಕುಸುಮದಿಂ ಪುಷ್ಪವ ಧರಿಸಿ, ಪೂಜಿಸಬಲ್ಲರೆ ಭವಹಿಂಗುವದು. ಮುಕ್ತಿಯೆಂಬುವದು ಕರತಳಾಮಳಕವಾಗಿ ತೋರುವದು ಎಂದನಯ್ಯ ನಿಮ್ಮ ಶರಣ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕಾಯವೆಂಬ ಕಣ್ಣಡವಿಲ್ಲ ಪ್ರಾಣವಿಲ್ಲಾಗಿ; ಮನವೆಂಬ ನೆನಹಿಲ್ಲ ಅನುಭಾವವಿಲ್ಲವಾಗಿ; ಅರುಹೆಂಬ ಕುರುಹಿಲ್ಲ ಪ್ರತಿಯಿಲ್ಲವಾಗಿ, ಕೂಡಲಚೆನ್ನಸಂಗಮದೇವರಲ್ಲಿ ಪ್ರಭುದೇವರ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕಿದೆನು ಕಾಣಾ, ಸಿದ್ಧರಾಮಯ್ಯಾ.
--------------
ಚನ್ನಬಸವಣ್ಣ
ಸದ್ಯೋಜಾತ ವಾಮದೇವ ಅಘೋರ ತತ್ಪುರುಷ ಈಶಾನ್ಯವೆಂಬ ಪರಶಿವನ ಪಂಚಮುಖವೆ ಪಂಚಕಳಸವೆಂದಿಕ್ಕಿ, ಹಸೆ-ಹಂದರದ ನಡುವೆ, ಶಿವಗಣಂಗಳ ಮಧ್ಯದಲ್ಲಿ ದೀಕ್ಷವನಿತ್ತು, ದೀಕ್ಷವೆಂಬೆರಡಕ್ಷರದ ವರ್ಮವನರುಹಿದ. ದೀಕಾರವೆ ಲಿಂಗಸಂಬಂಧವೆಂದು, ಕ್ಷಕಾರವೆ ಮಲತ್ರಯಂಗಳ ಕಳೆವುದೆಂದು ಅರುಹಿದ. ಸಾಕ್ಷಿ :``ದೀಯತೇ ಲಿಂಗಸಂಬಂಧಃ ಕ್ಷೀಯತೇ ಚ ಮಲತ್ರಯಂ | ದೀಯತೇ ಕ್ಷೀಯತೇ ಚೈವ ಶಿವದೀಕ್ಷಾಭಿಧೀಯತೇ ||'' ಎಂದುದಾಗಿ, ದೀಕ್ಷದ ವರ್ಮವನರುಹಿ, ಅರುಹೆಂಬ ಸೂತ್ರವ ಹಿಡಿಸಿ, ಮರವೆಂಬ ಮಾಯವ ಕಳೆದು, ಹಸ್ತಮಸ್ತಕ ಸಂಯೋಗ ಮಾಡಿ, ನೆತ್ತಿಯೊಳಿಹ ಪರಬ್ರಹ್ಮವಸ್ತುವ ಇಂತೆನ್ನ ಕರ ಉರ ಶಿರ ಮನ ಜ್ಞಾನದೊಳು ನೆಲೆಗೊಳಿಸಿ, ಪ್ರಣವಮಂತ್ರವ ಕರ್ಣದಲ್ಲಿ ಹೇಳಿ, ಮಾಂಸಪಿಂಡವ ಕಳೆದು ಮಂತ್ರಪಿಂಡವ ಮಾಡಿದ ಗುರು ಪರಮಾತ್ಮನಲ್ಲದೆ ನರನೆನಬಹುದೇ ? ಎನಲಾಗದು. ಎಂದರೆ ಕುಂಭೀ ನಾಯಕ ನರಕದಲ್ಲಿಕ್ಕುವ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಭಕ್ತಿಯೆಂಬ ಪೃಥ್ವಿಯಲ್ಲಿ ಗುರೂಪದೇಶವೆಂಬ ನೇಗಿಲಂ ಪಿಡಿದು, ಅಂತಃಕರಣ ಚತುಷ್ಟಯವೆಂಬ ಪಶುವಂ ಕಟ್ಟಿ ಓಂಕಾರನಾದವೆಂಬ ಸೆಳೆಕೋಲಂ ಪಿಡಿದು ಉತ್ತರ ಕ್ರೀಯೆಂಬ ಸಾಲನೆತ್ತಿ ದುಃಕರ್ಮವೆಂಬ ಕಂಟಕದ ಗುಲ್ಮವಂ ಕಡಿದು ಅರುಹೆಂಬ ರವಿಯ ಕಿರಣದಿಂದ ಒಣಗಿಸಿ ಅವಂ ಕೂಡಲೊಟ್ಟಿ, ಜ್ಞಾನಾಗ್ನಿಯೆಂಬ ಅಗ್ನಿಯಿಂದ ಸುಟ್ಟುರುಹಿ ಆ ಹೊಲನಂ ಹಸಮಾಡಿ, ಬಿತ್ತುವ ಪರಿ ಇನ್ನಾವುದಯ್ಯಾ ಎಂದಡೆ: ನಾದ. ಬಿಂದು, ಕಳೆ, ಮಳೆಗಾಲದ ಹದಬೆದೆಯನರಿದು ಸ್ಥೂಲವೆಂಬ ದಿಂಡಿಗೆ ತ್ರಿದೇವರೆಂಬ ತಾಳ ನಟ್ಟು ಇಡಾಪಿಂಗಳ ಸುಷುಮ್ನಾನಾಳವೆಂಬ ಕೋವಿಗಳ ಜೋಡಿಸಿ, ಮೇಲೆ ತ್ರಿಕೂಟಸ್ಥಾನವೆಂಬ ಬಟ್ಟಲಂ ಬಲಿದು, ಕುಂಡಲೀಸರ್ಪನೆಂಬ ಹಗ್ಗವ ಸೇದಿ ಕಟ್ಟಿ, ಹಂಸನೆಂಬ ಎತ್ತಂ ಹೂಡಿ, ಪ್ರಣವನೆಂಬ ಬೀಜವ ಪಶ್ಚಿಮ ಮುಖಕ್ಕೆ ಬಿತ್ತಿ, ಸರ್ವಶಾಂತಿ ನಿರ್ಮಲವೆಂಬ ಮೇಘ ಸುರಿಯಲ್ಕೆ ನೀಲಬ್ರಹ್ಮವೆಂಬ ಸಸಿ ಹುಟ್ಟಿತ್ತ. ಆ ಸಸಿಯ ಮುಟ್ಟುವ ಸಪ್ತವರ್ಣದ ಸದೆಯ ಕಳೆದು ಅಷ್ಟವರ್ಣದ ಅಲಬಂ ಕಿತ್ತು, ದಶವಾಯುವೆಂಬ ಕಸಮಂ ತೆಗೆದು, ಆ ಸಸಿ ಪಸರಿಸಿ ಪ್ರಜ್ವಲಿಸಿ ಫಲಕ್ಕೆ ಬರಲಾಗಿ ಚತುರ್ವಿಧವೆಂಬ ಮಂಚಿಗೆಯಂ ಮೆಟ್ಟಿ ಬಾಲಚಂದ್ರನೆಂಬ ಕವಣೆಯಂ ಪಿಡಿದು ಪ್ರಪಂಚುವೆಂಬ ಹಕ್ಕಿಯಂ ಸೋವಿ ಆ ಬತ್ತ ಬಲಿದು ನಿಂದಿರಲು, ಕೊಯ್ದುಂಬ ಪರಿ ಇನ್ನಾವುದಯ್ಯಾ ಎಂದಡೆ: ಇಷ್ಟವೆಂಬ ಕುಡುಗೋಲಿಗೆ ಪ್ರಣವವೆಂಬ ಹಿಡಿಯಂ ತೊಡಿಸಿ, ಭಾವವೆಂಬ ಹಸ್ತದಿಂ ಪಿಡಿದು, ಜನನದ ನಿಲವಂ ಕೊಯ್ದು, ಮರಣದ ಸಿವುಡ ಕಟ್ಟಿ, ಆಕಾಶವೆಂಬ ಬಣವೆಯನೊಟ್ಟಿ ಉನ್ಮನಿಯೆಂಬ ತೆನೆಯನ್ನರಿದು, ಮನೋರಥವೆಂಬ ಬಂಡಿಯಲ್ಲಿ ಹೇರಿ, ಮುಕ್ತಿಯೆಂಬ ಕೋಟಾರಕ್ಕೆ ತಂದು, ಅಷ್ಟಾಂಗಯೋಗವೆಂಬ ಜೀವಧನದಿಂದೊಕ್ಕಿ, ತಾಪತ್ರಯದ ಮೆಟ್ಟನೇರಿ, ಪಾಪದ ಹೊಟ್ಟ ತೂರಿ, ಪುಣ್ಯದ ಬೀಜಮಂ [ತ]ಳೆದು ಷಡುವರ್ಗ ಷಡೂರ್ಮೆಯೆಂಬ ಬೇಗಾರಮಂ ಕಳೆದು ಅಂಗಜಾಲನ ಕಣ್ಣ[ಮು]ಚ್ಚಿ, ಚಿತ್ರಗುಪ್ತರೆಂಬ ಕರಣಿಕರ ಸಂಪುಟಕೆ ಬರಿಸದೆ ಯಮರಾಜನೆಂಬರಸಿಗೆ ಕೋರನಿಕ್ಕದೆ ಸುಖ ಶಂಕರೋತಿ ಶಂಕರೋತಿ ಎಂಬ ಸಯಿದಾನವನುಂಡು ಸುಖಿಯಾಗಿಪ್ಪ ಒಕ್ಕಲಮಗನ ತೋರಿ ಬದುಕಿಸಯ್ಯಾ, ಕಾಮಭೀಮ ಜೀವಧನದೊಡೆಯ ಪ್ರಭುವೆ ನಿಮ್ಮ ಧರ್ಮ, ನಿಮ್ಮ ಧರ್ಮ..
--------------
ಒಕ್ಕಲಿಗ ಮುದ್ದಣ್ಣ
ಮಡಕೆಯ ತುಂಬಿ ಪಾವಡೆಯ ಕಟ್ಟುವರಲ್ಲದೆ ಸರ್ವಾಂಗವನು ಸದಾಚಾರವೆಂಬ ಪಾವಡದಲ್ಲಿ ಕಟ್ಟುವರನಾರನೂ ಕಾಣೆನಯ್ಯ. ಬಾಯ ತುಂಬಿ ಪಾವಡೆಯ ಬಿಗಿಬಿಗಿದು ಕಟ್ಟುವರಲ್ಲದೆ ಮನದ ಬಾಯ ಅರುಹೆಂಬ ಪಾವಡೆಯಲ್ಲಿ ಕಟ್ಟುವರನಾರನು ಕಾಣೆನಯ್ಯ. ಮುಖ ತುಂಬಿ ಪಾವಡೆಯ ಕಟ್ಟುವರಲ್ಲದೆ ಮೂಗು ಹೋದವರಂತೆ ಭಾವ ತುಂಬಿ ನಿರ್ವಾಣವೆಂಬ ಪಾವಡೆಯ ಕಟ್ಟುವರನಾರನೂ ಕಾಣೆನಯ್ಯ. ಅಂಗ ಆಚಾರದಲ್ಲಿ ಸಾವಧಾನವಾಗದೆ, ಮನ ಅರುಹಿನಲ್ಲಿ ಸಾವಧಾನವಾಗದೆ, ಭಾವ ನಿರ್ವಾಣದಲ್ಲಿ ಸಾವಧಾನವಾಗದೆ, ಬರಿದೆ ಶೀಲವಂತರು ಶೀಲವಂತರೆಂದರೇನಯ್ಯ. ತನು ಮನ ಧನ ಅವಗುಣವೆಂಬ ಭವಿಯ ಕಳೆಯದೆ ಹೊರಗೆ ವ್ರತಿಗಳೆಂದರೆ ಆರು ಮಚ್ಚುವರಯ್ಯ? ಹುಚ್ಚರಿರಾ ಸುಮ್ಮನಿರಿ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭು ಇವರ ಮೆಚ್ಚನು ಕಾಣಿರೋ!
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕಾಯವೆಂಬ ಕೆರೆಗೆ, ತನುವೆಂಬ ಏರಿ, ಮನವೆಂಬ ಕಟ್ಟೆಯ ಕಟ್ಟಿ, ದೃಢವೆಂಬ ತೂಬನಿಕ್ಕಬೇಕಯ್ಯ. ಆನಂದವೆಂಬ ಜಲವ ತುಂಬಿ, ಸ್ವಾನುಭಾವವೆಂಬ ಸೋಪಾನವ ಮಾಡಬೇಕಯ್ಯ. ಆ ಕೆರೆಯ ಏರಿಯ ಮೇಲೆ, ಆಚಾರವೆಂಬ ವೃಕ್ಷವ ಬೆಳೆಸಿ, ಅರುಹೆಂಬ ಹೂವ, ಅದ್ವೆ ೈತವೆಂಬ ಹಸ್ತದಿಂದ ಕುಯಿದು ಅನುಪಮಲಿಂಗಕ್ಕೆ, ಪೂಜಿಸಬಲ್ಲರೆ ಲಿಂಗಾರ್ಚಕರೆಂಬೆ. ಈ ಭೇದವನರಿಯದೆ, ಹುಸಿಯನೆ ಪೂಜಿಸಿ, ಗಸಣೆಗೊಳಗಾದ ಪಿಸುಣಿಗಳ ಲಿಂಗಪೂಜಕರೆಂತೆಂಬೆನಯ್ಯಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಧ್ಯಾನ ಧಾರಣ ಸಮಾಧಿಯೆಂತೆಂದಡೆ ಸದ್ಗುರುವೆ ಕರುಣಿಪುದು. ಕೇಳಯ್ಯ ಮಗನೆ : ಧ್ಯಾನ ಯೋಗವೆಂತೆಂದಡೆ : ಷಡಾಧಾರಚಕ್ರದೊಳಗೆ ಆಧಾರ ಮೊದಲಾಗಿ ಆಜ್ಞೆ ಕಡೆತನಕ ಇಷ್ಟಲಿಂಗವ ಧ್ಯಾನಿಸಿ ಅರ್ಚಿಸಿ ಪೂಜಿಸಿ ಅಲ್ಲಿ ತ್ರಿಕೂಟ ಸಂಗಮದಲ್ಲಿ ಗಂಗಾ ಯಮುನಾ ಸರಸ್ವತಿ ನದಿಗಳು ಕೂಡಿದ ಠಾವಿನಲ್ಲಿ ಪ್ರಮಥಗಣಂಗಳು ಮೊದಲಾಗಿ ಅಲ್ಲಿ ಮಜ್ಜನವ ನೀಡುತ್ತಿಹರು. ಅಲ್ಲಿ ಸೂರ್ಯಪೀಠದ ಮೇಲೆ ಗುರುವು ಮೂರ್ತವ ಮಾಡಿರಲು ಅವರ ಪಾದಾರ್ಚನೆಯಂ ಮಾಡಿ, ಪಾದೋದಕದ ನದಿಗಳಲ್ಲಿ ಸ್ನಾನವ ಮಾಡಿ ಅವರ ಸಂಗಡ ಏಳನೆಯ ಮಂಟಪಕ್ಕೆ ಹೋಗಿ ಅಲ್ಲಿ ಪಶ್ಚಿಮಚಕ್ರದಿಂದ ನಿರಂಜನಜಂಗಮವು ಶಿಖಾಚಕ್ರದಲ್ಲಿರ್ದ ಬಸವಾದಿ ಪ್ರಮಥರು ಮೊದಲಾದವರು ಬಿಜಯಮಾಡಿ, ಅಲ್ಲಿ ಅಸಂಖ್ಯಾತ ಪ್ರಮಥರು, ನೂತನ ಗಣಂಗಳು ಸಹವಾಗಿ ಲಿಂಗಾರ್ಚನೆಯ ಮಾಡುತ್ತಿಹರು. ಆ ಲಿಂಗಾರ್ಚನೆ ಎಂತೆಂದಡೆ : ಮೊದಲು ಚಿದ್ಭಸ್ಮವನೆ ಧರಿಸಿ, ಆನಂದೋದಕದಿಂದ ಲಿಂಗಕ್ಕೆ ಕ್ರಿಯಾಮಜ್ಜನವ ನೀಡಿ, ಅಷ್ಟತನುವಿನ ಅಷ್ಟಸುಗಂಧವ ಧರಿಸಿ, ಕರಣಂಗಳ ಸಂಚಲವಿಲ್ಲದ ಗುಣತ್ರಯದಕ್ಷತೆಯ ಧರಿಸಿ, ಸಾವಿರದೈವತ್ತು ಪ್ರಣವದ ಪರಿಮಳ ತುಂಬಿರ್ದ ಪುಷ್ಪವ ಧರಿಸಿ, ದಶವಾಯುಗಳ ಗುಣಧರ್ಮಂಗಳ ಜ್ಞಾನಾಗ್ನಿಯೊಳು ನೀಡಿ, ದಶಾಂಗದ ಸದ್ವಾಸನೆಯ ಧೂಪವ ಧರಿಸಿ, ಹೃದಯವೆಂಬ ಪ್ರಣತಿಯಲ್ಲಿ ದೃಢಚಿತ್ತವೆಂಬ ಬತ್ತಿಯನಿರಿಸಿ, ಅರುಹೆಂಬ ತೈಲವನೆರದು, ಮಹಾಜ್ಞಾನವೆಂಬ ಜ್ಯೋತಿಯ ಮುಟ್ಟಿಸಿ ಅದರಿಂದೊದಗಿದ ಏಕಾರತಿ ತ್ರಿಯಾರತಿ ಪಂಚಾರತಿ ಕಡ್ಡಿ ಬತ್ತಿ ಮೊದಲಾದ ಮಹಾಪ್ರಕಾಶದ ದೀಪವ ಧರಿಸಿ, ಕ್ರಿಯಾ ಜ್ಞಾನ ಇಚ್ಫಾ ಆದಿ ಪರ ಚಿತ್‍ಶಕ್ತಿ ಮೊದಲಾದವರು ಆರತಿಯ ಪಿಡಿದಿಹರು. ಆ ಮೇಲೆ ಪಾದತೀರ್ಥವ ಸಲಿಸಿ, ಮತ್ತೆ ಐವತ್ತು ದಳದಲ್ಲಿರ್ದ ಐವತ್ತು ರುದ್ರಕನ್ನಿಕೆಯರು ಅಡುಗೆಯ ಮಾಡಿ, ಅವರಿಗೆ ಇಚ್ಫಾಪದಾರ್ಥವ ನೀಡುತ್ತಿಹರು. ಅವರ ಒಕ್ಕುಮಿಕ್ಕ ಪ್ರಸಾದವನುಂಡು ಫಲದಾಕಾಂಕ್ಷೆಗಳಿಲ್ಲದೆ ಉಲುಹಡಗಿದ ನಿಜ ಪ್ರಭಾಲತೆ ಪರ್ಣದ ವೀಳ್ಯವನಿತ್ತು ಅವರ ತಾಂಬೂಲ ಪ್ರಸಾದವ ಕೊಂಡು ಪರಿಣಾಮಿಸಿ ಮನ ಭಾವಂಗಳಿಂದ ಪ್ರತ್ಯಕ್ಷವಾಗಿ ಕಂಡು, ಧ್ಯಾನಿಸುವುದೇ ಧ್ಯಾನ ಯೋಗ. ಇನ್ನು ಧಾರಣಯೋಗದ ವಿವರ : ಕರದೊಳಗೆ ಇಷ್ಟಲಿಂಗವ ಮೂರ್ತವ ಮಾಡಿಸಿ ಮನದೊಳಗೆ ಪ್ರಾಣಲಿಂಗವ ಮೂರ್ತವ ಮಾಡಿಸಿ ಭಾವದೊಳಗೆ ತೃಪ್ತಿಲಿಂಗವ ಮೂರ್ತವ ಮಾಡಿಸಿ ಕರ ಮನ ಭಾವದೊಳಗೆ ಪ್ರತ್ಯಕ್ಷವಾಗಿ ಕಂಡು ಧರಿಸಿಕೊಂಡಿಪ್ಪುದೀಗ ಧಾರಣಯೋಗ. ಇನ್ನು ಸಮಾಧಿಯೋಗದ ವಿವರ : ಆ ಇಷ್ಟ ಪ್ರಾಣ ಭಾವಲಿಂಗವ ಏಕವ ಮಾಡಿ, ಅಲ್ಲಿ ಐಕ್ಯವಾಗಿಪ್ಪುದೀಗ ಸಮಾಧಿಯೋಗ ಎಂದರುಹಿದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಒಬ್ಬ ಶಿವಶರಣನು ಶಿವರಾತ್ರಿಯಲ್ಲಿ ನಿತ್ಯ ಶಿವಯೋಗವ ಮಾಡುವುದ ಕಂಡೆನಯ್ಯ. ಅದು ಹೇಗೆಂದಡೆ: ಅರುಹೆಂಬ ಸಮ್ಮಾರ್ಜನೆಯ ಮಾಡಿ, ಕುರುಹೆಂಬ ಗದ್ದುಗೆಯ ನೆಲೆಯಂಗೊಳಿಸಿ, ಸುಜ್ಞಾನವೆಂಬ ರಂಗವಾಲಿಯ ತುಂಬಿ, ಚಂದ್ರಸೂರ್ಯಾದಿಗಳೆಂಬ ದೀವಿಗೆಯ ಮುಟ್ಟಿಸಿ, ಮಹಲಿಂಗವೆಂಬ ಮೂರ್ತಿಯಂ ನೆಲೆಯಂಗೊಳಿಸಿ, ಆ ಲಿಂಗಕ್ಕೆ ಸಜ್ಜನವೆಂಬ ಮಜ್ಜನವಂ ನೀಡಿ, ಅಂತರಂಗದ ಬೆಳಗಿನ ಮಹಾಚಿದ್ವಿಭೂತಿಯಂ ಧರಿಸಿ, ನಿರ್ಮಳವೆಂಬ ಗಂಧವನೊರೆದು, ಸುಜ್ಞಾನವೆಂಬ ಅಕ್ಷತೆಯನಿಟ್ಟು, ನಿರ್ಭಾವವೆಂಬ ಪತ್ರಿಯನೇರಿಸಿ, ನಿದ್ರ್ವಂದ್ವವೆಂಬ ಧೂಪವ ತೋರಿ, ಒಬ್ಬ ಮೂರ್ತಿ ನವರತ್ನದ ಹರಿವಾಣದಲ್ಲಿ ಪಂಚಾರ್ತಿಯ ಮೇಲೆ ಏಕಾರ್ತಿಯನಿಕ್ಕಿ, ಪಂಚದೀಪಂಗಳ ರಚಿಸಿ, ಆ ಲಿಂಗಕ್ಕೆ ಓಂ ನಮೋ ಓಂ ನಮೋ ಎಂದು ಬೆಳಗುತಿರ್ಪರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪಂಚಮುದ್ರೆ ಪಂಚಮುದ್ರೆಯೆಂದೇನೋ? ಹೇಳಿಹೆ ಕೇಳಿ; ಸರ್ವಾಂಗವನು ಸಮತೆಯೆಂಬ ಸದಾಚಾರದಲ್ಲಿಯೆ ನೆಲೆಗೊಳಿಸಿದ್ದುದೇ ಕಂಥೆಯಯ್ಯ. ಸುಬುದ್ಧಿಯೆಂಬ ಮಕುಟಕ್ಕೆ ಅರುಹೆಂಬ ಬಟ್ಟಪಾವಡೆ, ಕ್ರೀಯೆಂಬ ಪಾಗ. ವಿಚಾರದಿಂದ ಬಳಸಿ ಸುತ್ತಬೇಕು ಕಾಣಿರಣ್ಣ. ದೃಢವೆಂಬ ದಂಡ, ವಿವೇಕವೆಂಬ ಕಪ್ಪರವ ಹಿಡಿಯಬೇಕು ಕಾಣಿರಯ್ಯ. ಜ್ಞಾನವೆಂಬ ಭಸ್ಮಘುಟಿಕೆ ಸುಮನವೆಂಬ ಗಮನ, ಸುಚಿತ್ತವೆಂಬ ಸುಳುಹು, ಪರತತ್ವ ಸದ್ಭಾವದಿಂದ ಪರಮದೇಹಿಯೆಂದು ಸುಳಿವ ಪರದೇಶಿಕನ ತೋರಿ ಬದುಕಿಸಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆರು ಮೂರು ಮಂಟಪದ ಮೇಲೆ ಒಂದು ಕೋಗಿಲೆ ಕುಳಿತು ಕೂಗುತ್ತಿದೆ ನೋಡಾ. ಆ ಕೋಗಿಲೆಯ ಸ್ವರವ ಕೇಳಿ, ಒಬ್ಬ ಬೇಂಟೆಕಾರನು ಅರುಹೆಂಬ ಗದೆಯ ತಕ್ಕೊಂಡು ಇಡುವ ಬೇಂಟೆಕಾರನ ಆ ಕೋಗಿಲೆ ನುಂಗಿ ನಿರ್ವಯಲಾದ ವಿಚಿತ್ರವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ತನುವಿನಲ್ಲಿ ಜ್ಞಾನಗುರು ಸಾಹಿತ್ಯವಾಗಿ ತನುಭಾವವಿಲ್ಲ ನೋಡಾ. ಮನದಲ್ಲಿ ಅರುಹೆಂಬ ಶಿವಲಿಂಗ ಅಚ್ಚೊತ್ತಿತ್ತಾಗಿ ಮನಭಾವವಿಲ್ಲ ನೋಡಾ. ಭಾವದಲ್ಲಿ ಮಹಾನುಭಾವವೆಂಬ ಜಂಗಮ ಸಂಬಂಧವಾಯಿತ್ತಾಗಿ ಭಾವಾಭಾವಂಗಳಿಲ್ಲದ ಸದ್ಭಾವಿ ನೋಡಾ. ಪ್ರಾಣದಲ್ಲಿ ಪ್ರಸಾದ ಸಾಹಿತ್ಯವಾದ ನಿಃಪ್ರಪಂಚಿಯ ನೋಡಾ. ಆಚಾರ ಅಂಗವಾಗಿ ಅರುಹು ಹೃದಯವಾಗಿ, ಹೃದಯ ಶುದ್ಧವಾಗಿ ಹದುಳಿಗನಾದ ಸದ್ಭಕ್ತನಲ್ಲಿ ಮದನಹರನಿಪ್ಪನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮನ ಘನವಸ್ತುವಾದ ಬಳಿಕ, ಮನ ವಚನ ಕಾಯವೆಂಬ ತ್ರಿಕರಣ ಶುದ್ಧಾತ್ಮನೆಂಬೆ. ನಿತ್ಯ ಮುಕ್ತನೆಂಬೆ. ನಿರಾಲಂಬಿಯೆಂಬೆ. ಆತನ ತನು ಶುದ್ಧವಾಗಿ ತನುವೇ ಗುರು; ಆತನ ಮನ ಶುದ್ಧವಾಗಿ ಮನವೇ ಲಿಂಗ. ಆತನ ಭಾವ ಶುದ್ಧವಾಗಿ ಭಾವವೇ ಮಹಾನುಭಾವ ಚರಲಿಂಗ ನೋಡಾ. ಇಂತೀ ಜ್ಞಾನವೇ ಗುರು. ಆರುಹೇ ಶಿವಲಿಂಗ, ಮಹಾನುಭಾವವೇ ಜಂಗಮ. ಇಂತೀ ತ್ರಿವಿಧವು, ತನ್ನ ತ್ರಿವಿಧಾತ್ಮ ನೋಡಾ. ಜ್ಞಾನ ಗುರುವೆಂದರೆ ತನ್ನ ಜೀವಾತ್ಮ. ಅರುಹೆಂಬ ಶಿವಲಿಂಗವೆಂದರೆ ತನ್ನ ಅಂತರಾತ್ಮ. ಮಹಾನುಭಾವ ಜಂಗಮವೆಂದರೆ ತನ್ನ ಪರಮಾತ್ಮ. ಇಂತ್ರೀ ತ್ರಯಾತ್ಮ ಏಕಾತ್ಮವಾದರೆ ಸಚ್ಚಿದಾನಂದ ನಿರಂಜನ ಪರಾಪರವಸ್ತು ನೀನೇ. ಅಲ್ಲಿ ನಾ ನೀನೆನಲಿಲ್ಲ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅರುಹೆಂಬ ಗುರುವಿನ ಕೈಯಲ್ಲಿ, ವಿರತಿಯೆಂಬ ಶಿವದಾರಮಂ ಕೊಟ್ಟು, ಸುಮತಿಯೆಂಬ ಸಜ್ಜೆಯಂ ಪವಣಿಸಿ, ಸಮತೆಯೆಂಬ ಲಿಂಗಸಾಹಿತ್ಯವ ಬಿಜಯಂಗೈಸಿಕೊಂಡು, ಸರ್ವಜೀವದಯಾಪರನೆಂದು ಲಿಂಗಾರ್ಚನೆಯಂ ಮಾಡುವ ಭಕ್ತನ ಕರಾಧಾರದ ಲಿಂಗವು ತಪ್ಪಿ ಆಧಾರಸ್ಥಾಪ್ಯವಾದಡೇನು ? ಶಂಕೆಗೊಳಲಿಲ್ಲ. ತೆಗೆದುಕೊಂಡು ಮಜ್ಜನಕ್ಕೆರೆವುದೇ ಸದಾಚಾರ. ಮುನ್ನ ಶ್ರೀಗುರು ಷಟ್‍ಸ್ಥಲವನು ಅಂತರಂಗದಲ್ಲಿ ನಿಕ್ಷೇಪಿಸಿದನಾಗಿ ದೃಶ್ಯಕ್ಕೆ ತ್ಯಾಗವಲ್ಲದೆ ಅದೃಶ್ಯಕ್ಕೆ ತ್ಯಾಗವುಂಟೆ ?ಇಲ್ಲ. ಉಂಟೆಂದನಾದಡೆ ಗುರುದ್ರೋಹ. ಆ ಭಕ್ತನಿಂತವನಂತನೆಂದು ದೂಷಿಸಿ ನುಡಿದವರಿಗೆ ಅಘೋರನರಕ ತಪ್ಪದಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಕಾಯವೆಂಬ ಭೂಮಿಯ ಮೇಲೆ ಆರಂಬವ ಮಾಡಬಂದ ಗೌಡನ ಪರ್ಯಾಯವ ನೋಡಿರಣ್ಣ ? ಶಿವಜ್ಞಾನವೆಂಬ ಕೊಡಲಿಗೆ ನಿಶ್ಚಿತವೆಂಬ ಕಾವನಿಕ್ಕಿ ಅಷ್ಟದುಡಿಯೆಂಬ ಅಡವಿಯನೆ ಕಡಿದು ಕುಟಿಲ ಕುಹಕವೆಂಬ ಕಿಚ್ಚ ಹತ್ತಿಸಿ ಸುಟ್ಟು ಲೋಭತ್ವವೆಂಬ ಬಟ್ಟೆಯನೆ ಕಟ್ಟಿ ಶಿವಭಕ್ತರ ನುಡಿಯೆಂಬ ಹಿಂಗಲ್ಲನಿಕ್ಕಿ ವೈರಾಗ್ಯವೆಂಬ ಹಡಗಂ ಹತ್ತಿಸಿ ದೃಷ್ಟ ಮುಟ್ಟಿಯೆಂಬ ನೇಗಿಲಿಗೆ ಅವಧಾನವೆಂಬ ಮೀಣಿಯನಳವಡಿಸಿ ಜೀವಭಾವವೆಂಬ ಎರಡೆತ್ತುಗಳ ಹೂಡಿ ಅರುಹೆಂಬ ಹಗ್ಗವನೆ ಹಿಡಿದು ಎಚ್ಚರಿಕೆಯೆಂಬ ಬಾರುಕೋಲ ತಳೆದುಕೊಂಡು ಒತ್ತಿನೂಕಿ ಭೂಮಿಯ ಹಸನ ಮಾಡಬಂದ ಗೌಡನ ಪರ್ಯಾಯವ ನೋಡಿರಣ್ಣ ಅನೀತಿಯೆಂಬ ಗಾಳಿ ಬೀಸಿ ವಿಷಯವೆಂಬ ಮಳೆ ಸುರಿದು ಹದನಾರದ ಮುಂಚೆ ಅರುಹೆಂಬ ಬೀಜವನೆ ಬಿತ್ತಿ ಪ್ರಸಾದವೆಂಬ ಗೊಬ್ಬರವನೆ ತಳೆದು ಆಚಾರವೆಂಬ ಸಸಿಹುಟ್ಟಿ ಪ್ರಪಂಚೆಂಬ ಹಕ್ಕಿ ಬಂದು ಹಕ್ಕಲ ಮಾಡದ ಮುನ್ನ ನೆನಹೆಂಬ ಕವಣೆಯನೆ ತೆಕ್ಕೊಂಡು ನಾಲ್ಕು ದಿಕ್ಕಿನಲ್ಲಿ ನಿಂತು ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯಯೆಂದು ಅರ್ಭಟಿಸುತಿರ್ದನಯ್ಯ ಇಂತು ಈ ಬೆಳಸು ಸಾಧ್ಯವಾಯಿತ್ತು. ಉಳಿದವರಿಗಸಾಧ್ಯಕಾಣಾ, ಕೂಡಲಚೆನ್ನಸಂಗಮದೇವ
--------------
ಚನ್ನಬಸವಣ್ಣ
-->