ಅಥವಾ

ಒಟ್ಟು 19 ಕಡೆಗಳಲ್ಲಿ , 14 ವಚನಕಾರರು , 19 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಯತದಲ್ಲಿ ಅಂಗಭೋಗಿಯಾಗಿರಬೇಕು. ಸ್ವಾಯತದಲ್ಲಿ ಸನ್ನಹಿತನಾಗಿರಬೇಕು. ಸನ್ನಹಿತದಲ್ಲಿ ಸದಾಚಾರಿಯಾಗಿರಬೇಕು. ಇಂತೀ ತ್ರಿವಿಧದಲ್ಲಿ ಏಕವಾಗಿರಬಲ್ಲಡೆ, ಅದು ವರ್ಮ, ಅದು ಸಂಬಂಧ, ಅದು ನಿಯತಾಚಾರವೆಂದೆಂಬೆನು. ಅದಲ್ಲದೆ ಲಿಂಗವ ಮರೆದು, ಅಂಗ[ವ]ಭೋಗಿಸಿ, ಅಂಗಸಂಗದಲ್ಲಿರ್ದು, ಅಂಗವೆ ಪ್ರಾಣವಾಗಿಹರಿಗೆಲ್ಲರಿಗೆಯೂ ಲಿಂಗದ ಶುದ್ಧಿ ನಿಮಗೇಕೆ ಕೇಳಿರಣ್ಣಾ. ಲಿಂಗವಂತನು ಅಂಗಸೂತಕಿಯಲ್ಲ. ಅಲಗಿನ ಕೊನೆಯ ಮೊನೆಯ ಮೇಲಣ ಸಿಂಹಾಸನದ ಮೇಲೆ ಲಿಂಗದ ಪ್ರಾಣವ ತನ್ನಲ್ಲಿ ಕೂಡಿಕೊಂಡು, ತನ್ನ ಪ್ರಾಣವ ಲಿಂಗದಲ್ಲಿ ಕೂಡಿಕೊಂಡು, ಏಕಪ್ರಾಣವ ಮಾಡಿಕೊಂಡಿಪ್ಪ ಶರಣನ ಜ್ಯೋತಿರ್ಮಯನೆಂಬೆನು, ಜಗದ ಕರ್ತನೆಂಬೆನು, ಜಗದಾರಾಧ್ಯನೆಂದೆಂಬೆನು ಕಾಣಾ, ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ. ನಿಮ್ಮ ಸಂಗಿಯ ನಿಲವಿನ ಪರಿಯ ನೀವೇ ಬಲ್ಲಿರಲ್ಲದೆ, ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಅಂಗ ಮನ ಪ್ರಾಣಂಗಳೆಂಬಲ್ಲಿ ಘನಲಿಂಗವಿಪ್ಪೆಡೆ ಯಾವುದು ? ಪಂಕಕ್ಕೆ ಜಲ ಒಳಗೋ, ಹೊರಗೋ ? ಅಂಗಕ್ಕೂ ಮನಸ್ಸಿಂಗೂ ಆತ್ಮಂಗೂ ಲಿಂಗವ ಹಿಂಗಿ ಅರಿವ ಠಾವಿನ್ನಾವುದು ? ಬೀಜದೊಳಗಾದ ವೃಕ್ಷ, ವೃಕ್ಷದೊಳಗಾದ ಬೀಜ ಈ ಉಭಯವ ಮೀರಿ ಬೆಳೆವ ಠಾವಿನ್ನಾವುದೊ ? ಮೊನೆಗೂಡಿಯೆ ಗ್ರಹಿಸುವ ಅಲಗಿನ ತೆರದಂತೆ ಅದು ಲಿಂಗಾಂಗಸಂಯೋಗಸಂಬಂಧ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಸರ್ವಸುಯಿಧಾನಿ ಎಂದೆನಿಸಿಕೊಳ್ಳಬಲ್ಲಡೆ, ಬಂದ ಕಾಮ ಕ್ರೋಧವ ಲಿಂಗಕ್ಕರ್ಪಿತವ ಮಾಡಬೇಕು. ಅಲಗಿನ ಕೊನೆಯ ಮೊನೆಯ ಮೇಲಣ ಸಿಂಹಾಸನ ಹೊರಳಿ ಹೋಗಬಾರದು! ಶಿವಾಚಾರದ ಧಾರೆ ಮೇರೆ ಮುಟ್ಟದ ಮುನ್ನ, ಅರ್ಪಿತವ ಮಾಡಬಲ್ಲಡೆ; ಭಿನ್ನಭಾವವೆಲ್ಲಿಯದೊ_ಗುಹೇಶ್ವರಾ?
--------------
ಅಲ್ಲಮಪ್ರಭುದೇವರು
ಮೊನೆ ತಪ್ಪಿದಲ್ಲಿ ಅಲಗಿನ ಘನವೇನ ಮಾಡುವುದು? ವರ್ತನ ಶುದ್ದವಿಲ್ಲದೆ ಲಾಂಛನದ ಉತ್ಕೃಷ್ಟವೇನ ಮಾಡುವುದು? ತ್ರಿಕರಣ ಶುದ್ಧವಿಲ್ಲದ ಮಾಟ ದ್ರವ್ಯದ ಕೇಡು, ಭಕ್ತಿಗೆ ಹಾನಿ. ಇಂತೀ ಗುಣಾದಿಗುಣಂಗಳಲ್ಲಿ ಅರಿಯಬೇಕು, ಸದಾಶಿವಮೂರ್ತಿಲಿಂಗವನರಿಯಬೇಕು.
--------------
ಅರಿವಿನ ಮಾರಿತಂದೆ
ಕರ್ಪುರದ ಹಣತೆಯಲ್ಲಿ ಬತ್ತಿಯ ಹಾಕಿ ಉರುಹಬಹುದೆ? ಕಿಚ್ಚಿನ ಮಧ್ಯದಲ್ಲಿ ನಿಂದು ಕೆಟ್ಟಿತ್ತೆಂದು ಹುಲ್ಲ ಸೊಪ್ಪ ಹಾಕಿ ಹೊತ್ತಿಸಬಹುದೆ? ಅಲಗು ಕ್ರೂರವಾಯಿತ್ತೆಂದು ತನ್ನೊಡಲನಿರಿದು ಅಲಗಿನ ಕ್ರೂರ ಸುಲಲಿತವೆನ್ನಬಹುದೆ? ಆ ಗುಣ ಅಲ್ಲಲ್ಲಿಗೆ ದೃಷ್ಟ. ಇದು ನಿಶ್ಚಯ ನಿಜ ಲಿಂಗಾಂಗಿಗೆ ಅರಿವಿನ ಭೇದ. ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗದವನ ತೆರ.
--------------
ಶಂಕರದಾಸಿಮಯ್ಯ
ಆಳುತನದ ಮಾತನಾಡದಿರೆಲವೊ ಮೇಲೆ ಕಾರ್ಯದಿಮ್ಮಿತ್ತಣ್ಣಾ. ಅಲಗಿನ ಮೊನೆಯ ಧಾರೆ ಮಿಂಚುವಾಗ ಕೊಡದೆ ಕೊಂಕದೆ ನಿಲಬೇಕಯ್ಯ. ಬಂಟ ಬೆಟ್ಟ ಭಕ್ತಿಯೊಂದೆ ಕಂಡಯ್ಯ. ಚೆನ್ನಮಲ್ಲಿಕಾರ್ಜುನನಂತಲ್ಲದೊಲ್ಲ.
--------------
ಅಕ್ಕಮಹಾದೇವಿ
ಶೂಲದ ಮೇಲಣ ಕುಣಪಂಗಳು ತಾಳು ತಾಳಮರದ ಮೇಲೆ ಕುಣಿವುದ ಕಂಡೆನು. ಏಳು ಸಮುದ್ರದೊಳಿಪ್ಪ ಕಪ್ಪೆಯಧ್ವನಿ ಮೂರುಲೋಕ ಕೇಳಿಸುವುದ ಕಂಡೆನು. ಹೆಣನ ತಿನಬಂದ ನಾಯಿ ಕಪ್ಪೆಯ ಗೆಣೆತನದಿಂದ ಅಲಗಿನ ಮೇಲೆ ಅಡಿ ಇಡುವುದ ಕಂಡೆನು. ಇದೇನು ಚೋದ್ಯ ಹೇಳಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ !
--------------
ಹೇಮಗಲ್ಲ ಹಂಪ
ಊರೊಳಗಣ ಉಡು ಕೇರಿಯ ನುಂಗಿತ್ತು. ಜಾಗಟದೊಳಗಣ ಧ್ವನಿ ಆ ಜಾಗಟವ ನುಂಗಿತಹತಹತ್ತು. ಸಾರಬಂದ ಧೀರನ ಬಾರಿಕ ಕೊಂದ. ನಾಡು ಹಾಳಾಯಿತ್ತು, ಪಟ್ಟಣ ಸೂರೆಹೋಯಿತ್ತು. ಕಟ್ಟರಸು ಸಿಕ್ಕಿದ, ಪ್ರಧಾನ ತಪ್ಪಿದ. ಎಕ್ಕಟಿಗನ ಮಕ್ಕಳು ಕೆಟ್ಟೋಡಿದರು. ತಪ್ಪಿದ ಪ್ರಧಾನ ಒಪ್ಪವಿಟ್ಟ ರಾಜ್ಯವ, ಸಿಕ್ಕಿದರಸ ಬಿಡಿಸಿ, ಎಕ್ಕಟಿಗನ ಮಕ್ಕಳ ಸಂತೈಸಿ, ಹಿರಿಯರಸನ ಕೈಸೆರೆಯ ಬಿಡಿಸಿ, ತಾ ಕೈಯೊಳಗಾಗಿ ಕೆಟ್ಟ ಪ್ರಧಾನಿ, ಸಿಕ್ಕದ ಕೆಟ್ಟ ಅರಸು. ಇವರೆಲ್ಲರು ಕೆಟ್ಟ ಕೇಡ ನೋಡಿ ತಪ್ಪಿದೆನಯ್ಯಾ. ಈ ಮಾಟಕೂಟದ ಹೋರಟೆಗಂಜಿ ಬಿರಿದ ಬಿಟ್ಟ ಮೇಲೆ, ಅಲಗಿನ ಹಂಗೇಕೆ? ನಾಡಬಿಟ್ಟು ತೊಲಗಿದವಂಗೆ, ಒಂದೂರ ಸುದ್ದಿಯೇಕೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಬಲ್ಲವ ಮಾತ ಕಲಿತರೇನಯ್ಯ ಬಯಲ ಬೊಮ್ಮದ ಮೇಳದೆ ಮಾತಿನ ಮಾಲೆಯೊಳು ಘಾತಕವಿಪ್ಪುದು. ಹಲ್ಲ ಕಿರಿವರು ಕನ್ನಡಿಗಿದಿರು ಕನ್ನಡಿ ಕೊಡುವುದೆ ಕಳೆಯುವ ? ಅಲ್ಲದ ಮಾತು ಅಲಗಿನ ಘಾಯ, ಬೆಲ್ಲದ ಮಾತು ಭಲ್ಲೆಯದ ಘಾಯ. ಎಲ್ಲರು ಮಾತಿನಿಂದ ಮರಣವಾದರು ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ
ಧೀರಸಂಪನ್ನರೆಲ್ಲ ಅಲಗಿನ ಮೊನೆಗೆ ಭಾಜನವಾದರು ನೋಡಯ್ಯಾ ! ಧನಸಂಪನ್ನರೆಲ್ಲ ರಾಜರಿಗೆ ಭಾಜನವಾದರು ನೋಡಯ್ಯಾ ! ರೂಪಸಂಪನ್ನರೆಲ್ಲ ಸ್ತ್ರೀಯರಿಗೆ ಭಾಜನವಾದರು ನೋಡಯ್ಯಾ ! ಗುಣಸಂಪನ್ನರೆಲ್ಲ ಬಂಧುಗಳಿಗೆ ಭಾಜನವಾದರು ನೋಡಯ್ಯಾ ! ಜ್ಞಾನಸಂಪನ್ನರೆಲ್ಲ ಬಸವಣ್ಣ ಲಿಂಗಕ್ಕೆ ಭಾಜನವಾದ ನೋಡಯ್ಯಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ವಾಗದ್ವೈತದಲ್ಲಿ ನುಡಿದು ಸ್ವಯಾದ್ವೈತದಲ್ಲಿ ನಡೆದು ತೋರಬೇಕು. ಊರೊಳಗೆ ಪಂಥ ರಣದೊಳಗೆ ಓಟವೆ? ಮಾತಿನಲ್ಲಿ ರಚನೆ ಮನದಲ್ಲಿ ಆಸೆಯೆ? ಈ ಘಾತಕರ ಶಾಸ್ತ್ರ, ವಚನ ರಚನೆಗೆ ಮೆಚ್ಚಿ ಮಾಡುವನ ಭಕ್ತಿ, ಅಲಗಿನ ಘೃತವ ಶ್ವಾನ ನೆಕ್ಕಿ ನಾಲಗೆ ಹರಿದು ಮತ್ತಲಗ ಕಂಡು ತೊಲಗುವಂತಾಯಿತ್ತು, ಉಭಯದ ಇರವು. ಇಂತೀ ಭೇದಂಗಳಲ್ಲಿ ಅರಿತು ನಿರತನಾಗಿರಬೇಕು, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಪಂಚತತ್ವದಲ್ಲಿದ್ದು ಪರತತ್ವವನರಿಬೇಕು. ಅದಕ್ಕೆ ದೃಷ್ಟ; ಪಶುವಿನ ಹೊಟ್ಟೆಯಲ್ಲಿ ಕರುವಿದ್ದಡೆ ಕರೆವುದಕ್ಕೆ ಮನೋಹರವುಂಟೆ ? ಅದು ಭಿನ್ನಭಾವವಾಗಿ ಇದಿರಿಟ್ಟು ಉಂಡಲ್ಲದೆ ಮೊಲೆ ತೊರೆಯವು. ಆ ತೆರನನರಿದಲ್ಲಿ ಅರಿವುದಕ್ಕೊಂದು ಕುರುಹು ಬೇಕು. ಬಲ್ಲಿದ ವೀರನೆಂದಡೂ ಅಲಗಿನ ಮೊನೆಯಿಲ್ಲದೆ ಗೆಲಬಹುದೆ ? ಆ ಅರಿವ ಚಿತ್ತ ಕುರುಹಿನ ಘಟದಲ್ಲಿದ್ದು ಅರಿವುತಿದ್ದಿಹಿತಾದ ಕಾರಣ. ಇದನರಿತು ಆತ್ಮವಾದವೆಂದು ಎನಲಿಲ್ಲ. ಸದಾಶಿವಮೂರ್ತಿಲಿಂಗವನರಿವುದಕ್ಕೆ ಇದಿರಿಟ್ಟು ಕ[ಳೆ]ದುಳಿಯಬೇಕು.
--------------
ಅರಿವಿನ ಮಾರಿತಂದೆ
ಸಂದೇಹವುಳ್ಳನ್ನಕ್ಕ ವ್ರತಾಂಗಿಯಲ್ಲ. ಅಲಗಿನ ಮೊನೆಗಂಜುವನ್ನಕ್ಕ ಪಟುಭಟನಲ್ಲ. ತ್ರಿವಿಧದ ಅಂಗವುಳ್ಳನ್ನಕ್ಕ ಲಿಂಗಾಂಗಿಯಲ್ಲ. ಸೋಂಕು ಬಂದಲ್ಲಿ ಆ ಅಂಗವ ಬಿಡದಿದ್ದಡೆ ಶೀಲವಂತನಲ್ಲ. ಈ ನೇಮಂಗಳಲ್ಲಿ ನಿರತನಾದವಂಗೆ ಅಲ್ಲಿ ಇಲ್ಲಿಯೆಂಬ ಅಂಜಿಕೆ ಎಲ್ಲಿಯೂ ಇಲ್ಲದೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿಯೂ ಇಲ್ಲ.
--------------
ಅಕ್ಕಮ್ಮ
ಚಕ್ರ ಬೆಸಗೆಯ್ವಡೆ ಅಲಗಿನ ಹಂಗೇಕೆ ? ಮಾಣಿಕ್ಯದ ಬೆಳಗುಳ್ಳಡೆ ದೀಪದ ಹಂಗೇಕೆ ? ಪರುಷ ಕೈಯ್ಯಲುಳ್ಳಡೆ ಸಿರಿಯ ಹಂಗೇಕೆ ? ಕಾಮಧೇನು ಕರೆವಡೆ ಕರುವಿನ ಹಂಗೇಕೆ ? ಎನ್ನದೇವ ಚೆನ್ನಮಲ್ಲಿಕಾರ್ಜುನಲಿಂಗವು ಕರಸ್ಥಳದೊಳಗುಳ್ಳಡೆ ಇನ್ನಾವ ಹಂಗೇಕೆ ?
--------------
ಅಕ್ಕಮಹಾದೇವಿ
ಅಲಗಿನ ಮೊನೆಯನೇರಬಹುದು, ಹುಲಿಯ ಬಲೆಯ ಹೊಗಬಹುದು, ಸಿಂಹದ ಕೊರಳಿಗೆ ಹಾಯಬಹುದು, ಸಿದ್ಧಸೋಮನಾಥಾ, ನಿಮ್ಮ ಮುಟ್ಟದೆ ನಿಮಿಷ ಕುಳ್ಳಿರಬಾರದು.
--------------
ಅಮುಗಿದೇವಯ್ಯ
ಇನ್ನಷ್ಟು ... -->