ಅಥವಾ

ಒಟ್ಟು 46 ಕಡೆಗಳಲ್ಲಿ , 14 ವಚನಕಾರರು , 28 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನು ಆಧಾರ ಧಾರಣವೆಂತೆಂದಡೆ : ಪುಣ್ಯ-ಪಾಪ ಸ್ವರ್ಗ-ನರಕಾದಿಗಳಿಗೆ ಹೇತುಭೂತವಾಗಿಹ ಅನ್ನ ಪಾನಾದಿಗಳಂ ಬಿಟ್ಟು-ಸಿದ್ಧಾಸನದಲ್ಲಿ ಕುಳ್ಳಿರ್ದು, ಮೂಲಬಂಧ ಒಡ್ಡ್ಯಾಣಬಂಧ ಜಾಳಾಂದರಬಂಧಮಂ ಮಾಡಿ ಜಾಗ್ರ ಸ್ವಪ್ನ ಸುಷುಪ್ತಿ ತಲೆದೋರದೆ ಶಬ್ದ ಸ್ಪರ್ಶ ರೂಪ ರಸ ಗಂಧವೆಂಬ ಪಚೇಂದ್ರಿಯಂಗಳಲ್ಲಿ ಮನ ಪವನಮಂ ಸೂಸಲೀಯದೆ, ಏಕಾಗ್ರಚಿತ್ತನಾಗಿ ಮೂಲವಾಯುವಂ ಪಿಡಿದು ಆಕುಂಚನಂ ಮಾಡಿ, ಮೂಲಾಗ್ನಿಯನೆಬ್ಬಿಸಿ, ಆಧಾರಚಕ್ರ ಚತುರ್ದಳಪದ್ಮವ ಪೊಕ್ಕು ಸಾದ್ಥಿಸಿ, ಅಲ್ಲಿಹ ಮಂತ್ರ-ಪದ-ವರ್ಣ-ಭುವನ-ತತ್ವ-ಕಲೆಗಳಂ ಕಂಡು, ಅಲ್ಲಿ ಪಚ್ಚೆವರ್ಣವಾಗಿಹ ಜ್ಯೋತಿರ್ಮಯಲಿಂಗಮಂ ಬೆರಸಿ ಅಗ್ನಿಯಂ ಪಟುಮಾಡಿ, ಮನಮಂ ಏಕೀಕರಿಸಿ, ಅಲ್ಲಿಂದ ಮೇಲೆ ಸ್ವಾದ್ಥಿಷ್ಠಾನಚಕ್ರದ ಷಡುದಳಪದ್ಮವ ಪೊಕ್ಕನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾದ್ಥಿ ಎಂದು ಈಯೆಂಟು ಅಷ್ಟಾಂಗಯೋಗಂಗಳು. ಈ ಯೋಗಂಗಳೊಳಗೆ ಉತ್ತರಭಾಗ, ಪೂರ್ವಭಾಗೆಯೆಂದು ಎರಡು ಪ್ರಕಾರವಾಗಿಹವು. ಯಮಾದಿ ಪಂಚಕವೈದು ಪೂರ್ವಯೋಗ; ಧ್ಯಾನ, ಧಾರಣ, ಸಮಾದ್ಥಿಯೆಂದು ಮೂರು ಉತ್ತರಯೋಗ. ಇವಕ್ಕೆ ವಿವರ: ಇನ್ನು ಯಮಯೋಗ ಅದಕ್ಕೆ ವಿವರ: ಅನೃತ, ಹಿಂಸೆ, ಪರಧನ, ಪರಸ್ತ್ರೀ, ಪರನಿಂದೆ ಇಂತಿವೈದನು ಬಿಟ್ಟು ಲಿಂಗಪೂಜೆಯ ಮಾಡುವುದೀಗ ಯಮಯೋಗ. ಇನ್ನು ನಿಯಮಯೋಗ- ಅದಕ್ಕೆ ವಿವರ: ಬ್ರಹ್ಮಚಾರಿಯಾಗಿ ನಿರಪೇಕ್ಷನಾಗಿ ಆಗಮಧರ್ಮಂಗಳಲ್ಲಿ ನಡೆವವನು. ಶಿವನಿಂದೆಯ ಕೇಳದಿಹನು. ಇಂದ್ರಿಯಂಗಳ ನಿಗ್ರಹವ ಮಾಡುವವನು. ಮಾನಸ, ವಾಚಸ, ಉಪಾಂಶಿಕವೆಂಬ ತ್ರಿಕರಣದಲ್ಲಿ ಪ್ರಣವ ಪಂಚಾಕ್ಷರಿಯ ಸ್ಮರಿಸುತ್ತ ಶುಚಿಯಾಗಿಹನು. ಆಶುಚಿತ್ತವ ಬಿಟ್ಟು ವಿಭೂತಿ ರುದ್ರಾಕ್ಷೆಯ ಧರಿಸಿ ಶಿವಲಿಂಗಾರ್ಚನತತ್ಪರನಾಗಿ ಪಾಪಕ್ಕೆ ಬ್ಥೀತನಾಗಿಹನು. ಇದು ನಿಯಮಯೋಗ. ಇನ್ನು ಆಸನಯೋಗ- ಅದಕ್ಕೆ ವಿವರ: ಸಿದ್ಧಾಸನ, ಪದ್ಮಾಸನ, ಸ್ವಸ್ತಿಕಾಸನ, ಅರ್ಧಚಂದ್ರಾಸನ, ಪರ್ಯಂಕಾಸನ ಈ ಐದು ಆಸನಯೋಗಂಗಳಲ್ಲಿ ಸ್ವಸ್ಥಿರಚಿತ್ತನಾಗಿ ಮೂರ್ತಿಗೊಂಡು ಶಿವಲಿಂಗಾರ್ಚನೆಯ ಮಾಡುವುದೀಗ ಆಸನಯೋಗ. ಇನ್ನು ಪ್ರಾಣಾಯಾಮ- ಅದಕ್ಕೆ ವಿವರ: ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ, ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯವೆಂಬ ದಶವಾಯುಗಳು. ಇವಕ್ಕೆ ವಿವರ: ಪ್ರಾಣವಾಯು ಇಂದ್ರ ನೀಲವರ್ಣ. ಹೃದಯಸ್ಥಾನದಲ್ಲಿರ್ದ ಉಂಗುಷ್ಠತೊಡಗಿ ವಾ[ಣಾ]ಗ್ರಪರಿಯಂತರದಲ್ಲಿ ಸತ್ಪ್ರಾಣಿಸಿಕೊಂಡು ಉಚ್ಛಾಸ ನಿಶ್ವಾಸನಂಗೆಯ್ದು ಅನ್ನ ಜೀರ್ಣೀಕರಣವಂ ಮಾಡಿಸುತ್ತಿಹುದು. ಅಪಾನವಾಯು ಹರಿತವರ್ಣ. ಗುಧಸ್ಥಾನದಲ್ಲಿರ್ದು ಮಲಮೂತ್ರಂಗಳ ವಿಸರ್ಜನೆಯಂ ಮಾಡಿಸಿ ಆಧೋದ್ವಾರಮಂ ಬಲಿದು ಅನ್ನರಸ ವ್ಯಾಪ್ತಿಯಂ ಮಾಡಿಸುತ್ತಿಹುದು. ವ್ಯಾನವಾಯು ಗೋಕ್ಷಿರವರ್ಣ. ಸರ್ವಸಂದಿಗಳಲ್ಲಿರ್ದು ನೀಡಿಕೊಂಡಿರ್ದುದನು ಮುದುಡಿಕೊಂಡಿರ್ದುದನು ಅನುಮಾಡಿಸಿ ಅನ್ನಪಾನವ ತುಂಬಿಸುತ್ತಿಹುದು. ಉದಾನವಾಯ ಎಳೆಮಿಂಚಿನವರ್ಣ. ಕಂಠಸ್ಥಾನದಲ್ಲಿರ್ದು ಸೀನುವ, ಕೆಮ್ಮುವ, ಕನಸ ಕಾಣುವ, ಏಳಿಸುವ ಛರ್ದಿ ನಿರೋಧನಂಗಳಂ ಮಾಡಿ ಅನ್ನ ರಸವ ಆಹಾರಸ್ಥಾನಂಗೆಯಿಸುತ್ತಿಹುದು. ಸಮಾನವಾಯು ನೀಲವರ್ಣ. ನಾಬ್ಥಿಸ್ಥಾನದಲ್ಲಿರ್ದು ಅಪಾದಮಸ್ತಕ ಪರಿಯಂತರ ದೇಹಮಂ ಪಸರಿಸಿಕೊಂಡಂಥಾ ಅನ್ನರಸವನು ಎಲ್ಲಾ[ಲೋ] ಮನಾಳಂಗಳಿಗೆ ಹಂಚಿಕ್ಕುವುದು. ಈ ಐದು ಪ್ರಾಣಪಂಚಕ. ಇನ್ನು ನಾಗವಾಯು ಪೀತವರ್ಣ. [ಲೋ] ಮನಾಳಂಗಳಲ್ಲಿರ್ದು ಚಲನೆಯಿಲ್ಲದೆ ಹಾಡಿಸುತ್ತಿಹುದು. ಕೂಮವಾಯುವ ಶ್ವೇತವರ್ಣ. ಉದರ ಲಲಾಟದಲ್ಲಿರ್ದು ಶರೀರಮಂ ತಾಳ್ದು [ದೇಹಮಂ] ಪುಷ್ಟಿಯಂ ಮಾಡಿಕೊಂಡು ಬಾಯ ಮುಚ್ಚುತ್ತ ತೆರೆವುತ್ತ ನೇತ್ರದಲ್ಲಿ ಉನ್ಮೀಲನ ನಿಮೀಲನವಂ ಮಾಡಿಸುತ್ತಿಹುದು. ಕೃಕರವಾಯು ಅಂಜನವರ್ಣ. ನಾಸಿಕಾಗ್ರದಲ್ಲಿರ್ದು ಕ್ಷುಧಾದಿ ಧರ್ಮಂಗಳಂ ನೆಗಳೆ ಗಮನಾಗಮನಂಗಳಂ ಮಾಡಿಸುತ್ತಿಹುದು. ದೇವದತ್ತವಾಯು ಸ್ಫಟಿಕವರ್ಣ. ಗುಹ್ಯ[ಕಟಿ] ಸ್ಥಾನದಲ್ಲಿರ್ದು ಕುಳ್ಳಿರ್ದಲ್ಲಿ ಮಲಗಿಸಿ, ಮಲಗಿರ್ದಲ್ಲಿ ಏಳಿಸಿ ನಿಂದಿರಿಸಿ ಚೇತರಿಸಿ ಒರಲಿಸಿ ಮಾತಾಡಿಸುತ್ತಿಹುದು. ಧನಂಜಯವಾಯು ನೀಲವರ್ಣ. ಬ್ರಹ್ಮರಂಧ್ರದಲ್ಲಿರ್ದು ಕರ್ಣದಲ್ಲಿ ಸಮುದ್ರಘೋಷಮಂ ಘೋಷಿಸಿ ಮರಣಗಾಲಕ್ಕೆ ನಿರ್ಘೋಷಮಪ್ಪುದು. ಈ ಪ್ರಕಾರದಲ್ಲಿ ಮೂಲವಾಯುವೊಂದೇ ಸರ್ವಾಂಗದಲ್ಲಿ ಸರ್ವತೋಮುಖವಾಗಿ ಚರಿಸುತ್ತಿಹುದು. ಆ ಪವನದೊಡನೆ ಪ್ರಾಣ ಕೂಡಿ ಪ್ರಾಣದೊಡನೆ ಪವನ ಕೂಡಿ ಹೃದಯ ಸ್ಥಾನದಲ್ಲಿ ನಿಂದು ಹಂಸನೆನಿಸಿಕೊಂಡು ಆಧಾರ, ಸ್ವಾದ್ಥಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಗ್ನೇಯ ಎಂಬ ಷಡುಚಕ್ರದಳಂಗಳಮೇಲೆ ಸುಳಿದು ನವನಾಳಂಗಳೊಳಗೆ ಚರಿಸುತ್ತಿಹುದು. ಅಷ್ಟದಳಂಗಳೇ ಆಶ್ರಯವಾಗಿ ಅಷ್ಟದಳಂಗಳ ಮೆಟ್ಟಿ ಚರಿಸುವ ಹಂಸನು ಅಷ್ಟದಳಂಗಳಿಂದ ವಿಶುದ್ಧಿಚಕ್ರವನೆಯ್ದಿ ಅಲ್ಲಿಂದ ನಾಸಿಕಾಗ್ರದಲ್ಲಿ ಹದಿನಾರಂಗುಲ ಪ್ರಮಾಣ ಹೊರಸೂಸುತ್ತಿಹುದು; ಹನ್ನೆರಡಂಗುಲ ಪ್ರಮಾಣ ಒಳಗೆ ತುಂಬುತ್ತಿಹುದು. ಹೀಂಗೆ ರೇಚಕ ಪೂರಕದಿಂದ ಮರುತ ಚರಿಸುತ್ತಿರಲು ಸಮಸ್ತ್ರ ಪ್ರಾಣಿಗಳ ಆಯುಷ್ಯವು ದಿನ ದಿನಕ್ಕೆ ಕುಂದುತ್ತಿಹುದು. ಹೀಂಗೆ ಈಡಾ ಪಿಂಗಳದಲ್ಲಿ ಚರಿಸುವ ರೇಚಕ ಪೂರಕಂಗಳ ಭೇದವನರಿದು ಮನ ಪವನಂಗಳ ಮೇಲೆ ಲಿಂಗವ ಸಂಬಂದ್ಥಿಸಿ ಮನ ಪವನ ಪ್ರಾಣಂಗಳ ಲಿಂಗದೊಡನೆ ಕೂಡಿ ಲಿಂಗ ಸ್ವರೂಪವ ಮಾಡಿ ವಾಯು ಪ್ರಾಣತ್ವವ ಕಳೆದು ಲಿಂಗ ಪ್ರಾಣಿಯ ಮಾಡಿ ಹೃದಯ ಕಮಲ ಮಧ್ಯದಲ್ಲಿ ಪ್ರಣವವನುಚ್ಚರಿಸುತ್ತ ಪರಶಿವ ಧ್ಯಾನದಲ್ಲಿ ತರಹರವಾಗಿಪ್ಪುದೀಗ ಪ್ರಾಣಾಯಾಮ. ಇನ್ನು ಪ್ರತ್ಯಾಹಾರಯೋಗ-ಅದಕ್ಕೆ ವಿವರ: ಆಹಾರದಿಂ ನಿದ್ರೆ, ನಿದ್ರೆಯಿಂ ಇಂದ್ರಿಯಂಗಳು, ಇಂದ್ರಿಯಂಗಳಿಂದ ವಿಷಯಂಗಳು ಘನವಾಗುತ್ತಿಹುವು ನೋಡಾ. ಆ ವಿಷಯದಿಂದ ದುಃಕರ್ಮಗಳ ಮಿಗೆ ಮಾಡಿ ಜೀವಂಗೆ ಭವ ಭವದ ಬಂಧನವನೊಡಗೂಡಿ ಆಯಸಂ ಬಡುತ್ತಿಪ್ಪರಜ್ಞ್ಞಾನ ಕರ್ಮಿಗಳು; ಈ ಅವಸ್ಥೆಯ ಹೊಗದಿಹರು ಸುಜ್ಞಾನಿ ಧರ್ಮಿಗಳು. ಅದರಿಂದಲಾಹಾರಮಂ ಕ್ರಮ ಕ್ರಮದಿಂದ ಉದರಕ್ಕೆ ಹವಣಿಸುತ್ತ ಬಹುದು. ಗುರು ಕೃಪೆಯಿಂದ ಈ ಪ್ರಕಾರದಲ್ಲಿ ಸರ್ವೇಂದ್ರಿಯಂಗಳನು ಲಿಂಗಮುಖದಿಂದ ಸಾವಧಾನವ ಮಾಡಿಕೊಂಡಿಪ್ಪುದೀಗ ಪ್ರತ್ಯಾಹಾರಯೋಗ. ಈ ಐದು ಪೂರ್ವಯೋಗಂಗಳು. ಇನ್ನು ಧ್ಯಾನ, ಧಾರಣ, ಸಮಾದ್ಥಿಯೆಂದು ಮೂರು ಉತ್ತರಯೋಗಂಗಳು. ಇನ್ನು ಧ್ಯಾನಯೋಗ- ಅದಕ್ಕೆ ವಿವರ: ಅಂತರಂಗದ ಶುದ್ಧ ಪರಮಾತ್ಮ ಲಿಂಗವನೇ ಶಿವಲಿಂಗ ಸ್ವರೂಪವ ಮಾಡಿ ಕರಸ್ಥಲಕ್ಕೆ ಶ್ರೀಗುರು ತಂದು ಕೊಟ್ಟನಾಗಿ ಆ ಕರಸ್ಥಲದಲ್ಲಿದ್ದ ಶಿವಲಿಂಗವೇ ಪರಮಾರ್ಥಚಿಹ್ನವೆಂದರಿದು ಆ ಲಿಂಗವನೇ ಆಧಾರ, ಸ್ವಾದ್ಥಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞೇಯ, ಬ್ರಹ್ಮರಂಧ್ರ ಮುಖ್ಯವಾದ ಸ್ಥಾನಂಗಳಲ್ಲಿ ಆ ಶಿವಲಿಂಗಮೂರ್ತಿಯನೆ ಆಹ್ವಾನ ವಿಸರ್ಜನೆಯಿಲ್ಲದೆ ಧ್ಯಾನಿಪುದೀಗ ಧ್ಯಾನಯೋಗ. ಆ ಲಿಂಗವ ಭಾವ, ಮನ, ಕರಣ ಮುಖ್ಯವಾದ ಸರ್ವಾಂಗದಲ್ಲಿ ಧರಿಸುವುದೀಗ ಧಾರಣಯೋಗ. ಆ ಸತ್ಕಿ ್ರಯಾ ಜ್ಞಾನಯೋಗದಿಂದ ಪ್ರಾಣಂಗೆ ಶಿವಕಳೆಯ ಸಂಬಂದ್ಥಿಸಿ ಇಷ್ಟ, ಪ್ರಾಣ, ಭಾವವೆಂಬ ಲಿಂಗತ್ರಯವನು ಏಕಾಕಾರವ ಮಾಡಿ ಅಖಂಡ ಪರಿಪೂರ್ಣ ಕೇವಲ ಪರಂಜ್ಯೋತಿ ಸ್ವರೂಪವಪ್ಪ ಮಹಾಲಿಂಗದೊಳಗೆ ಸಂಯೋಗವಾಗಿ ಬ್ಥಿನ್ನವಿಲ್ಲದೆ ಏಕಾರ್ಥವಾಗಿಹುದೀಗ ಸಮಾದ್ಥಿಯೋಗ. ಇಂತೀ ಅಷ್ಟಾಂಗಯೋಗದಲ್ಲಿ ಶಿವಲಿಂಗಾರ್ಚನೆಯ ಮಾಡಿ ಶಿವತತ್ವದೊಡನೆ ಕೂಡುವುದೀಗ ಲಿಂಗಾಂಗಯೋಗ. ಇನ್ನು ಕರ್ಮಕಾಂಡಿಗಳು ಮಾಡುವ ಕರ್ಮಯೋಗಂಗಳು- ಅವಾವವೆಂದಡೆ: ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರವೆಂಬ ಈ ಐದನು ಲಿಂಗವಿರಹಿತವಾಗಿ ಮಾಡುತ್ತಿಪ್ಪರಾಗಿ ಈ ಐದು ಕರ್ಮಯೋಗಂಗಳು. ಅವರು ಲಕ್ಷಿಸುವಂಥಾ ವಸ್ತುಗಳು ಉತ್ತರಯೋಗವಾಗಿ ಮೂರು ತೆರ. ಅವಾವವೆಂದಡೆ: ನಾದಲಕ್ಷ ್ಯ, ಬಿಂದುಲಕ್ಷ ್ಯ, ಕಲಾಲಕ್ಷ ್ಯವೆಂದು ಮೂರು ತೆರ. ನಾದವೇ ಸಾಕ್ಷಾತ್ ಪರತತ್ವವೆಂದೇ ಲಕ್ಷಿಸುವರು. ಬಿಂದುವೇ ಆಕಾರ, ಉಕಾರ, ಮಕಾರ, ಈ ಮೂರು ಶುದ್ಧಬಿಂದು ಸಂಬಂಧವೆಂದೂ. ಆ ಶುದ್ಧ ಬಿಂದುವೇ ಕೇವಲ ದಿವ್ಯ ಪ್ರಕಾಶವನುಳ್ಳದೆಂದೂ ಲಕ್ಷಿಸುವರು. ಕಲೆಯೇ ಚಂದ್ರನ ಕಲೆಯ ಹಾಂಗೆ, ಸೂರ್ಯನ ಕಿರಣಂಗಳ ಹಾಂಗೆ, ಮಿಂಚುಗಳ ಪ್ರಕಾಶದ ಹಾಂಗೆ, ಮುತ್ತು, ಮಾಣಿಕ್ಯ, ನವರತ್ನದ ದೀಪ್ತಿಗಳ ಹಾಂಗೆ, ಪ್ರಕಾಶಮಾಯವಾಗಿಹುದೆಂದು ಲಕ್ಷಿಸುವುದೀಗ ಕಲಾಲಕ್ಷ ್ಯ. ಈ ಎಂಟು ಇತರ ಮತದವರು ಮಾಡುವ ಯೋಗಂಗಳು. ಇವ ಲಿಂಗವಿರಹಿತವಾಗಿ ಮಾಡುವರಾಗಿ ಕರ್ಮಯೋಗಂಗಳು. ಈ ಕರ್ಮಕೌಶಲ್ಯದಲ್ಲಿ ಲಿಂಗವಿಲ್ಲ ನೋಡಾ. ಅದುಕಾರಣ ಇವ ಮುಟ್ಟಲಾಗದು. ಇನ್ನು ವೀರಮಾಹೇಶ್ವರರುಗಳ ಲಿಂಗಸಂಧಾನವೆಂತೆಂದರೆ: ಬ್ರಹ್ಮರಂಧ್ರದಲ್ಲಿಪ್ಪ ನಾದ ಚೈತನ್ಯವಪ್ಪ ಪರಮ ಚಿತ್ಕಲೆಯನೇ ಭಾವ, ಮನ, ಕರದಲ್ಲಿ ಶ್ರೀಗುರು ತಂದು ಸಾಹಿತ್ಯವ ಮಾಡಿದನಾಗಿ ಭಾವದಲ್ಲಿ ಸತ್ತ್ವರೂಪವಪ್ಪ ಭಾವಲಿಂಗವೆನಿಸಿ, ಪ್ರಾಣದಲ್ಲಿ ಚಿತ್ ಸ್ವರೂಪವಪ್ಪ ಪ್ರಾಣಲಿಂಗವೆನಿಸಿ, ಕರಸ್ಥಲದಲ್ಲಿ ಆನಂದ ಸ್ವರೂಪವಪ್ಪ ಇಷ್ಟಲಿಂಗವೆನಿಸಿ, ಒಂದೇ ವಸ್ತು ತನು, ಮನ, ಭಾವಂಗಳಲ್ಲಿ ಇಷ್ಟ, ಪ್ರಾಣ, ಭಾವವಾದ ಭೇದವನರಿದು ಇಷ್ಟಲಿಂಗವ ದೃಷ್ಟಿಯಿಂದ ಗ್ರಹಿಸಿ ಪ್ರಾಣಲಿಂಗವ ಮನಜ್ಞಾನದಿಂದ ಗ್ರಹಿಸಿ ತೃಪ್ತಿಲಿಂಗವ ಭಾವಜ್ಞಾನದಿಂದ ಗ್ರಹಿಸಿ ಈ ಲಿಂಗತ್ರಯವಿಡಿದಾಚರಿಸಿ ಲಿಂಗದೊಡನೆ ಕೂಡಿ ಲಿಂಗವೇ ತಾನು ತಾನಾಗಿ ವಿರಾಜಿಸುತ್ತಿಪ್ಪುದೀಗ ಶಿವಯೋಗ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಯ್ಯಾ ಎನಗೆ ರುದ್ರಾಕ್ಷಿಯೇ ಪುಣ್ಯದ ಪುಂಜ ನೋಡಾ. ಅಯ್ಯಾ ಎನಗೆ ರುದ್ರಾಕ್ಷಿಯೇ ಭಾಗ್ಯದ ನಿದ್ಥಿಯು ನೋಡಾ. ಅಯ್ಯಾ ಎನಗೆ ರುದ್ರಾಕ್ಷಿಯೇ ಸತ್ಯದ ಸದನ ನೋಡಾ. ಏಕಭಾಜನಸ್ಥಲ, ಸಹಜಭೋಜನಸ್ಥಲಯೆಂಬ ಎಂಟು ಸ್ಥಲಂಗಳನ್ನು ಶೇಷಾಂಗಸ್ವರೂಪವಾದ ಶರಣ ಮಹದಂಗಸ್ವರೂಪವಾದೈಕ್ಯ ಯೋಗಾಂಗಸ್ಥಲವನೊಳಕೊಂಡು, ಜಂಗಮದಲ್ಲಿ ತಿಳಿದು, ಆ ಜಂಗಮವ ಪರಿಪೂರ್ಣಜ್ಞಾನಾನುಭಾವದಲ್ಲಿ ಕಂಡು, ಆ ಪರಿಪೂರ್ಣಜ್ಞಾನಾನುಭಾವವನೆ ಮಹಾಜ್ಞಾನಮಂಡಲಂಗಳಲ್ಲಿ ತರಹರವಾಗಿ, ಅಲ್ಲಿಂದ ದೀಕ್ಷಾಪಾದೋದಕಸ್ಥಲ, ಶಿಕ್ಷಾಪಾದೋದಕಸ್ಥಲ, ಜ್ಞಾನಪಾದೋದಕಸ್ಥಲ, ಕ್ರಿಯಾನಿಷ್ಪತ್ತಿಸ್ಥಲ, ಭಾವನಿಷ್ಪತ್ತಿಸ್ಥಲ, ಜ್ಞಾನನಿಷ್ಪತ್ತಿಸ್ಥಲ, ಪಿಂಡಾಕಾಶಸ್ಥಲ, ಬಿಂದ್ವಾಕಾಶಸ್ಥಲ, ಮಹದಾಕಾಶಸ್ಥಲ, ಕ್ರಿಯಾಪ್ರಕಾಶಸ್ಥಲ, ಭಾವಪ್ರಕಾಶಸ್ಥಲ, ಜ್ಞಾನಪ್ರಕಾಶಸ್ಥಲ, ಕೊಂಡುದು ಪ್ರಸಾದಿಸ್ಥಲ, ನಿಂದುದು ಓಗರಸ್ಥಲ, ಚರಾಚರನಾಸ್ತಿಸ್ಥಲ, ಭಾಂಡಸ್ಥಲ, ಭಾಜನಸ್ಥಲ, ಅಂಗಲೇಪನಸ್ಥಲವೆಂಬ ಹದಿನೆಂಟುಸ್ಥಲಂಗಳನ್ನು ಮೂವತ್ತಾರು ಸಕೀಲಂಗಳನೊಳಕೊಂಡು ಪರಿಶೋಬ್ಥಿಸುವಂಥ ಮಹಾಲಿಂಗ. ಜ್ಞಾನಶೂನ್ಯಸ್ಥಲವನೊಳಕೊಂಡು, ನಿರಂಜನಲಿಂಗದಲ್ಲಿ ತಿಳಿದು, ಆ ನಿರಂಜನಬ್ರಹ್ಮವೇ ತಾನೇ ತಾನಾಗಿ, ಮೂವತ್ತಾರು ಚಿತ್ಪಾದೋದಕಪ್ರಸಾದಪ್ರಣಮಂಗಳೆಂಬ ಮೂಲಮಂತ್ರಸ್ವರೂಪನಾಗಿ ವಿರಾಜಿಸುವಾತನೆ ಪರಿಪೂರ್ಣಾನುಭಾವಜಂಗಮಭಕ್ತನಾದ ನಿರವಯಮೂರ್ತಿಯಿರವು ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಷಣ್ಮುಖಸ್ವಾಮಿ
ಆಧಾರಾದಿ ಷಡುಚಕ್ರಂಗಳು ಇವಕ್ಕೆ ವಿವರ: ಆಧಾರಸ್ಥಾನದಲ್ಲಿ ಚತುರ್ದಳ ಪದ್ಮವಿಹುದು ಅದು ಸುವರ್ಣವರ್ಣ ಅದಕ್ಕೆ ಅಕ್ಷರ ವಶಷಸ ಎಂಬ ನಾಲ್ಕಕ್ಷರ, ಅಧಿದೈವ ಬ್ರಹ್ಮನು. ಸ್ವಾಧಿಷ್ಠಾನ ಸ್ಥಾನದಲ್ಲಿ ಷಡ್ದಳ ಪದ್ಮವಿಹುದು, ಅದು ಕಪ್ಪುವರ್ಣ ಅದಕ್ಕೆ ಅಕ್ಷರ ಬಭಮಯರಲ ಎಂಬ ಷಡಕ್ಷರ, ವಿಷ್ಣು ಅಧಿದೈವ. ಮಣಿಪೂರದ ಸ್ಥಾನದಲ್ಲಿ ದಶದಳ ಪದ್ಮವಿಹುದು, ಅದು ಕೆಂಪುವರ್ಣ ಅದಕ್ಕೆ ಅಕ್ಷರ ಡಢಣ ತಥದಧನ ಪಫ ಎಂಬ ದಶ ಅಕ್ಷರ, ರುದ್ರನಧಿದೈವ. ಅನಾಹತಸ್ಥಾನದಲ್ಲಿ ದ್ವಾದಶದಳದ ಪದ್ಮವಿಹುದು, ಅದು ನೀಲವರ್ಣ, ಅದಕ್ಕೆ ಅಕ್ಷರ ಕಖಗಘಙ ಚ ಛ ಜಝಞ ಠ ಎಂಬ ದ್ವಾದಶ ಅಕ್ಷರ ಅದಕ್ಕೆ ಮಹೇಶ್ವರ ಅಧಿದೈವ. ವಿಶುದ್ಧಿಸ್ಥಾನದಲ್ಲಿ ಷೋಡಶದಳ ಪದ್ಮವಿಹುದು, ಅದು ಸ್ಪಟಿಕವರ್ಣ ಅದಕ್ಕೆ ಅಕ್ಷರ ಅ ಆ ಇ ಈ ಉ ಊ ಋ ಋೂ ಎ ಏ ಐ ಒ ಓ ಔ ಅಂ ಅಃ ಎಂಬ ಷೋಡಶಾಕ್ಷರ, ಅದಕ್ಕೆ ಸದಾಶಿವ ಅಧಿದೈವ. ಆಜ್ಞಾಸ್ಥಾನದಲ್ಲಿ ದ್ವಿದಳದ ಪದ್ಮವಿಹುದು. ಅದು ಮಾಣಿಕ್ಯವರ್ಣ, ಅದಕ್ಕೆ ಅಕ್ಷರ `ಹಕ್ಷ ಎಂಬ ದ್ವಯಾಕ್ಷರ. ಅದಕ್ಕೆ ಮಹಾಶ್ರೀಗುರು ಅಧಿದೈವ. ಅಲ್ಲಿಂದ ಮೇಲೆ ಬ್ರಹ್ಮರಂಧ್ರಸ್ಥಾನದಲ್ಲಿ ಸಹಸ್ರದಳ ಪದ್ಮವಿಹುದು. ಅದು ಹೇಮವರ್ಣ ಅಲ್ಲಿಗೆ ಓಂಕಾರವೆಂಬ ಅಕ್ಷರ ಪರಂಜ್ಯೋತಿ ಪರಬ್ರಹ್ಮ ಅದು ಅನಂತಕೋಟಿ ಸೂರ್ಯಪ್ರಕಾಶವಾಗಿ ಬೆಳಗುತ್ತಿಹುದು. ಅಲ್ಲಿಗೆ ಅಧಿದೈವ ಶ್ರೀಗುರು ಮೂರ್ತಿಯೇ ಕರ್ತನು. ಇಂತೀ ಷಟ್ ಚಕ್ರಂಗಳಂ ತಿಳಿದು ಪರತತ್ವದಲ್ಲಿ ಇರಬಲ್ಲಡೆ ಕೂಡಲಚೆನ್ನಸಂಗಯ್ಯನಲ್ಲಿ ಶರಣನೆನಿಸುವನು.
--------------
ಚನ್ನಬಸವಣ್ಣ
ಕೇಳಿರಯ್ಯಾ ಮಾನವರೆ, ಗಂಡ ಹೆಂಡಿರ ಮನಸ್ಸು ಒಂದಾಗಿದ್ದರೆ ದೇವರ ಮುಂದೆ ನಂದಾದೀವಿಗೆಯ ಮುಡಿಸಿದ ಹಾಗೆ. ಗಂಡ ಹೆಂಡಿರ ಮನಸ್ಸು ಬೇರಾದರೆ ಗಂಜಳದೊಳಗೆ ಹಂದಿ ಹೊರಳಾಡಿ ಒಂದರ ಮೇಲೆ ಒಂದು ಬಂದು ಮೂಸಿದ ಹಾಗೆ. ಛೇ, ಛೇ, ಇದು ಭಕ್ತಿಯಲ್ಲಣ್ಣ. ಅದೇನು ಕಾರಣವೆಂದೊಡೆ, ಕಾಶಿಗೆ ಹೋದೆನೆಂಬವರು ಹೇಸಿ ತೊತ್ತಿನ ಮಕ್ಕಳಯ್ಯ. ಮೈಲಾರಕ್ಕೆ ಹೋದೆನೆಂಬವರು ಮಾದಗಿತ್ತಿಯ ಮಕ್ಕಳಯ್ಯ. ಪರ್ವತಕ್ಕೆ ಹೋದೆನೆಂಬವರು ಹಾದರಗಿತ್ತಿಯ ಮಕ್ಕಳಯ್ಯ. ರಾಚೋಟಿಗೆ ಹೋದೆನೆಂಬವರು ಲಜ್ಜೆಮಾರಿ ತೊತ್ತಿನ ಮಕ್ಕಳಯ್ಯ. ಛೇ, ಛೇ, ಇದು ಭಕ್ತಿಯಲ್ಲವಯ್ಯ. ಅದೆಂತೆಂದೊಡೆ; ಪರಬ್ರಹ್ಮ ಮೂರುತಿಯಾದ ಪರಶಿವನೆ ಗುರುನಾಮದಿಂ ಬಂದು ಇಷ್ಟಲಿಂಗವ ಧರಿಸಿ, ಪಂಚಾಕ್ಷರಿಯ ಬೋದ್ಥಿಸಿದ ಮೇಲೆ ಆ ಭಕ್ತನ ಕಾಯವೇ ಕೈಲಾಸ. ಅವನ ಒಡಲೆ ಸೇತುಬಂಧ ರಾಮೇಶ್ವರ. ಅವನ ಶಿರವೆ ಶ್ರೀಶೈಲ. ಆತ ಮಾಡುವ ಆಚಾರವೆ ಪಂಚಪರುಷ. ಇದು ತಿಳಿಯದೆ ಶಾಸ್ತ್ರದಿಂದ ಕೇಳಿ, ಅರಿಯದೆ ಮಂದಬುದ್ಧಿಯಿಂದ ಪರ್ವತಕ್ಕೆ ಹೋಗಿ ಪಾತಾಳಗಂಗೆಯಲ್ಲಿ ಮುಳುಮುಳುಗೆದ್ದರೆ, ಛೇ, ಛೇ, ನಿನ್ನ ದೇಹದ ಮೇಲಣ ಮಣ್ಣು ಹೋಯಿತಲ್ಲದೆ, ನಿನ್ನ ಪಾಪವು ಹೋಗಲಿಲ್ಲವು. ಅಲ್ಲಿಂದ ಕಡೆಗೆ ಬಂದು, ಕೆಟ್ಟ ಕತ್ತಿಯ ಕೊಂಡು ಕೆರವಿನಟ್ಟೆಯ ಮೇಲೆ ಮಸೆದು ಮಸ್ತಕವ ತೋಯಿಸಿ ತಲೆಯ ಬೋಳಿಸಿಕೊಂಡರೆ, ನಿನ್ನ ತಲೆಯ ತಿಂಡಿ ಹೋಯಿತಲ್ಲದೆ ನಿನ್ನ ಪಾಪವು ಬಿಡಲಿಲ್ಲವಯ್ಯ ! ಅಲ್ಲಿಂದ ಕೋಲು ಬುಟ್ಟಿಯ ತೆಗೆದುಕೊಂಡು ಬರುವಂತಹ ದಿಂಡೆತೊತ್ತಿನ ಮಕ್ಕಳ ಕಣ್ಣಲಿ ಕಂಡು, ಪಡಿಹಾರಿ ಉತ್ತಣ್ಣನ ಎಡದ ಪಾದ ಎಕ್ಕಡದಿಂದೆ ಪಟಪಟನೆ ಹೊಡೆ ಎಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ನೀ ಕೊಟ್ಟ ಭೂಮಿಗೆ ಮುಂದೆ ಕರಲು, ಹಿಂದೆ ಇಗ್ಗರಲು, ಅಲ್ಲಿಂದ ಆಚೆ ಮಧ್ಯಭೂಮಿ. ಮೂರು ನೆಲದ ಭೂಮಿಯ ಆರೈದು ಬೆಳೆದೆಹೆನೆಂದಡೆ, ಇದಾರ ವಶವೂ ಅಲ್ಲ, ಕಾಮಭೀಮ ಜೀವಧನದೊಡೆಯ ನೀನೆ ಬಲ್ಲೆ.
--------------
ಒಕ್ಕಲಿಗ ಮುದ್ದಣ್ಣ
ಇಂತೆಂಬ ಭಕ್ತ ಜಂಗಮಸ್ಥಲದ ಆದಿ ಅನಾದಿಯನರಿದು, ಮಾಯಾಭೋಗ ಮರೆದು, ಜಂಗಮಾರಾಧನೆಯಂ ಮಾಡಿ, ಘನಪಾದತೀರ್ಥವ ಪಡಕೊಂಬುವ ಶಿವಶರಣನು ಅನಿಮಿಷಾವಲೋಕನ ಪೂರ್ಣದೃಷ್ಟಿಯಿಂದ ಚಿತ್ಸೂರ್ಯ ಜ್ಯೋತಿರ್ಮಂಡಲಸಂಬಂಧವಾದ ಬಲದಂಗುಷ*ದ ಮೇಲೆ ಚತುರಂಗುಲಿಪ್ರಮಾಣದಿಂದ ಬಿಂದು ಬಿಂದುಗಳದುರಿದಂತೆ ನೀಡುವಾಗ, ಆ ಸ್ಥಾನದಲ್ಲಿ ತನ್ನ ದೀಕ್ಷಾಗುರು ಇಷ್ಟಲಿಂಗಮೂರ್ತಿಯ ಧ್ಯಾನಿಸುವುದು. ಅಲ್ಲಿ ನಾದಬಿಂದುಕಳೆ ಚಿನ್ನಾದಬಿಂದುಕಳೆಗಳ ದೀರ್ಘಬಿಂದುಗಳು ಕೂಡಿದಲ್ಲಿ ಮೂಲಷಡಕ್ಷರವೆನಿಸುವುದು. ಆ ಷಡಕ್ಷರಂಗಳ ಆರುವೇಳೆ ಘನಮನಮಂತ್ರವಾಗಿ ಅಲ್ಲಿಂದ ಚಿಚ್ಚಂದ್ರ ಅಖಂಡ ಜ್ಯೋತಿರ್ಮಂಡಲಸಂಬಂಧವಾದ ಎಡದಂಗುಷ*ದಮೇಲೆ ಮೊದಲಂತೆ ನೀಡುವಾಗ, ಆ ಸ್ಥಾನದಲ್ಲಿ ತನ್ನ ಶಿಕ್ಷಾಗುರು ಪ್ರಾಣಲಿಂಗಮೂರ್ತಿಯ ಧ್ಯಾನಿಸುವುದು. ಅಲ್ಲಿ ಸತ್ತುಚಿತ್ತಾನಂದನಿತ್ಯಪರಿಪೂರ್ಣವೆಂಬ ಪಂಚಾಕ್ಷರದೊಳು ದೀರ್ಘಬಿಂದು ಕೂಡಲಾಗಿ ಪರಮಪಂಚಾಕ್ಷರವೆನಿಸುವುದು. ಆ ಪರಮಪಂಚಾಕ್ಷರವು ಐದು ವೇಳೆ ಮನಮಂತ್ರಧ್ಯಾನವಾಗಿ ಅಲ್ಲಿಂದಚಿದಗ್ನಿ ಅಖಂಡಮಹಾಪರಿಪೂರ್ಣಜ್ಯೋತಿರ್ಮಂಡಲಸಂಬಂಧವಾದ ಉಭಯಾಂಗುಷ*ಮಧ್ಯದಲ್ಲಿ ನೀಡುವಂತೆ ನೀಡುವಾಗ್ಗೆ , ಆ ಸ್ಥಾನದಲ್ಲಿ ತನ್ನ ಮೋಕ್ಷಗುರು ಅನಾದಿಭಾವಲಿಂಗಮೂರ್ತಿಯ ಧ್ಯಾನಿಸುವುದು. ಅವಿರಳಮೂರ್ತಿ ಪರಾತ್ಪರ ಜ್ಯೋತಿರ್ಮಯ ಅಖಂಡಜ್ಯೋತಿರ್ಮಯ ಅಖಂಡ ಮಹಾಜ್ಯೋತಿರ್ಮಯ ನಿತ್ಯತೃಪ್ತ ನಿಃಕಳಂಕ ನಿಶ್ಶೂನ್ಯ ನಿರಾತಂಕವೆಂಬ ನವಮಾಕ್ಷರದೊಳಗೆ ದೀರ್ಘಬಿಂದು ಕೂಡಲಾಗಿ, ಅನಾದಿಮೂಲದೊಡೆಯ ನವಪ್ರಣಮಮಂತ್ರವೆನಿಸುವುದು. ಆ ಪ್ರಣಮಂಗಳಂ ಒಂದೆವೇಳೆ ಪರಿಪೂರ್ಣ ನಿಜದೃಷ್ಟಿಯಿಂದ ಉನ್ಮನಘನಮಂತ್ರವೆ ಧ್ಯಾನವಾಗಿ ಅಲ್ಲಿಂದ ಮಿಳ್ಳಿಯ ಮುಚ್ಚಿಟ್ಟು ದ್ರವವನಾರಿಸಿ, ನಿರವಯತೀರ್ಥವ ನಿರವಯಲಿಂಗಜಂಗಮಕ್ಕೆ ಸ್ಪರಿಶನತೃಪ್ತಿಯ ಸಮರ್ಪಿಸಿದ ಪರಿಣಾಮತೃಪ್ತರೆ ನಿರವಯಪ್ರಭು ಮಹಾಂತರೆಂಬೆ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಹೊರಗಣ ಒಂಬತ್ತು ಬಾಗಿಲವ ಮುಚ್ಚಿ ಒಳಗಣ ಅಂಬರದ ಬಾಗಿಲ ಬೀಗವ ತೆಗೆದು ಒಳಹೊಕ್ಕು ನೋಡಲು, ಗಂಗೆ ಸರಸ್ವತಿ ಯಮುನೆಯೆಂಬ ತ್ರಿನದಿಗಳು ಕೂಡಿದ ಠಾವಿನಲ್ಲಿ ಸಂಗಮಕ್ಷೇತ್ರವೆಂಬ ರಂಗಮಂಟಪವುಂಟು. ಆ ರಂಗಮಂಟಪದಲ್ಲಿ ರವಿಕೋಟಿಪ್ರಭೆಯಿಂದೆ ರಾಜಿಸುವ ಮಹಾಲಿಂಗವ ಕಂಡು, ಆ ಮಹಾಲಿಂಗಕ್ಕೆ ತನ್ನಾತ್ಮಸಂಬಂಧವಾದ ದ್ರವ್ಯಂಗಳಿಂದರ್ಚಿಸಿ, ಆ ಮಹಾಲಿಂಗದ ಬೆಳಗನು ಕಂಗಳು ತುಂಬಿ ನೋಡಿ ಮನ ಸಂತೋಷಗೊಂಡು, ಅಲ್ಲಿಂದತ್ತ ಪಶ್ಚಿಮದಿಕ್ಕಿನಲ್ಲಿ ಮಹಾಕೈಲಾಸವಿರ್ಪುದನು ತನ್ನ ಸ್ವಾತ್ಮಜ್ಞಾನದಿಂದ ತಿಳಿದು ನೋಡಿ, ಎಡಬಲದ ಬಟ್ಟೆಯ ಮೆಟ್ಟದೆ ನಟ್ಟನಡುಮಧ್ಯಮಾರ್ಗವಿಡಿದು ಹೋಗಿ, ಕೈಲಾಸದ ಪೂರ್ವದಿಕ್ಕಿನ ಹೆಬ್ಬಾಗಿಲ ಉಪ್ಪರ ಗೋಪುರವ ಕಂಡು ಒಳಹೊಕ್ಕು ಹೋಗಿ ಕಂಗಳಿಗೆ ಮಂಗಳವಾದ ಶಿವಮಹಾಸಭೆಯ ಕಂಡು, ಅಲ್ಲಿ ಹೊಡೆವ ಭೇರಿಯನಾದ, ತುಡುಮು ತಾಳ ಮದ್ದಳೆಯನಾದ, ಗಡಗಡ ಝಲ್ಲೆಂಬ ಸಮಾಳ ಕರಡಿ ಕೌಸಾಳನಾದ ನುಡಿಸುವ ವೀಣೆ ಕಿನ್ನರಿ ಸ್ವರಮಂಡಲ ತಂಬೂರಿ ಕಾಮಾಕ್ಷಿಯನಾದ, ಭೋರಿಡುವ ಶಂಖ ಘಂಟೆಯನಾದ, ಸ್ವರಗೈವ ನಾಗಸ್ವರ ಕೊಳಲು ಸನಾಯದ ನಾದ, ಕೂಗಿಡುವ ಕಹಳೆ ಹೆಗ್ಗಹಳೆ ಚಿನಿಕಹಳೆ ಕರಣೆಯನಾದ, ಇಂತಿವು ಮೊದಲಾದ ನಾನಾ ತೆರದ ನಾದಂಗಳನು ಕಿವಿದುಂಬಿ ಕೇಳಿ ಮನದುಂಬಿ ಸಂತೋಷಿಸಿ, ಅಲ್ಲಿಂದ ಮುಂದಕ್ಕೆ ಹೋಗಿ ಸೂರ್ಯವೀಥಿಯ ಕಂಡು ಪೊಕ್ಕು, ಅಲ್ಲಿ ನಿಂದು ಓಲಗಂಗೊಡುವ ಮೂವತ್ತೆರಡು ತೆರದ ತೂರ್ಯಗಣಂಗಳಂ ಕಂಡು, ಅಲ್ಲಿಂದ ಮುಂದಕ್ಕೆ ಹೋಗಿ ಸೋಮವೀಥಿಯ ಕಂಡು ಪೊಕ್ಕು, ಅಲ್ಲಿ ನಿಂದು ಓಲಗಂಗೊಡುವ ಹದಿನಾರು ತೆರದ ಪ್ರಮಥಗಣಂಗಳ ಕಂಡು ಅಲ್ಲಿಂದ ಮುಂದಕ್ಕೆ ಹೋಗಿ ಅನಲವೀಥಿಯ ಕಂಡು ಪೊಕ್ಕು, ಅಲ್ಲಿ ಅಷ್ಟದಿಕ್ಕುಗಳಲ್ಲಿ ನಿಂದು ಓಲಗಂಗೊಡುವ ಅಷ್ಟ ತೆರದ ಅಮರಗಣಂಗಳ ಕಂಡು, ಅಲ್ಲಿಂದ ಮುಂದೆ ಹೋಗಿ ಚತುರ್ದಿಕ್ಕಿನಲ್ಲಿ ನಿಂದು ಓಲಗಂಗೊಡುವ ಚತುಃಶಕ್ತಿಯರ ಸಮ್ಮೇಳವ ಕಂಡು, ಅಲ್ಲಿಂದ ಮುಂದಕ್ಕೆ ಹೋಗಿ ನಟ್ಟನಡುವಿರ್ದ ಶೃಂಗಾರಮಂಟಪದ ಮಹಾಸದರಿನಲ್ಲಿ ಮೂರ್ತಿಗೊಂಡಿರ್ದ ನಿಷ್ಕಲ ಪರಶಿವನ ಕಂಡು ತನು ಉಬ್ಬಿ ಮನ ಕರಗಿ, ಕಂಗಳಲ್ಲಿ ಪರಿಣಾಮಜಲ ಉಕ್ಕಿ ಕಡೆಗೋಡಿವರಿವುತ್ತ, ಉರಿಕರ್ಪುರ ಸಂಯೋಗದಂತೆ ಆ ನಿಷ್ಕಲಪರಶಿವನೊಡನೆ ಬೆರೆದು ಪರಿಪೂರ್ಣವಾದ ಮಹಾಶರಣರ ತೋರಿಸಿ ಬದುಕಿಸಯ್ಯಾ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
`ಶುದ್ಧ ಶೈವಮಿತಿ ಪ್ರೋಕ್ತಂ| ವೀರಶೈವಮತ ಃ ಶ್ರುಣು':ಈ ಪ್ರಕಾರದಿಂದ ಶುದ್ಧಶೈವವು ನಿರೂಪಿಸಲ್ಪಟ್ಟಿತ್ತು. ಅಲ್ಲಿಂದ ಮೇಲೆ ವೀರಶೈವವನು ಕೇಳು:`ವೀರತಂತ್ರೇ ಸರ್ವೇಷಾಮಪಿ ಶೈವಾನಾಂ ವೀರಶೈವಂ ಮಹೋತ್ತಮಂ|| ಸಲಭಾದೇವ ಪೂಜಾ ಸು | ಸುಲಭಂ ಚ ಕ್ರಿಯಾವಹಂ'|| ಎಲೆ ದೇವಿಯೆ, ಸಮಸ್ತಶೈವಂಗಳೊಳಗೆ ವೀರಶೈವವೆ ಅತ್ಯುತ್ತಮವಾದುದು. ಆ ವೀರಶೈವ ಮಾಡುವ ಶಿವಪೂಜೆ ಲೇಸಾಗಿ ಸುಲಭವಾದಂಥಾದು. ಪೂಜಾದಿಗಳ ಮಾಟವು ಸುಲಭವಹಂಥಾದುದು. ಈಶ್ವರನು ದೇವಿಯರಿಗೆ ನಿರೂಪಿಸುತ್ತಿರ್ದನಯ್ಯ ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಪರಾರ್ಥಪೂಜೆಯನಾಯಿತ್ತಾದೊಡೆ, ಅಲ್ಲಿಂದ ಮೇಲೆ ಕೇಳು:`ಗ್ರಾಮಾದೌ ಸ್ಥಾಪಿತೇ ಲಿಂಗೇ ಯದ್ವಾದೈವಾದಿ ನಿರ್ಮಿತೇ ಪರಾರ್ಥಮಿತಿಜ್ಞೇಯಂ ಸರ್ವಪ್ರಾಣಿತಾವಹಿ' ಇಂತೆಂದು ಆವುದಾನೊಂದು ಕಾರಣದಿಂದ ದೇವ ಋಷಿ ದಾನವ ಮಾನವಾದಿಗಳಿಂದ ನಿರ್ಮಿಸಿ, ಗ್ರಾಮಗಿರಿ ಗಂಹರವನ ಮೊದಲಾದವ ರಲ್ಲಿ ಪ್ರತಿಷಿ*ತವಾದ ಶಿವಲಿಂಗಪೂಜೆ ಪರಾರ್ಥ ಪೂಜೆ ಎಂದು ಅರಿಯ ಬೇಕಾದುದು. ಆ ಪೂಜೆಯಲ್ಲಿ ಪ್ರಾಣಿಗಳಿಗೆಯೂ ಹಿತವ ಮಾಡುವಂಥಾದು `ಶಿವದ್ವಿಜೇನ ಕರ್ತನ್ಯಂ ದ್ವಿಧಾ ಪೂಜೇತಿ ಬೋಧಿತಾ' ಎಂದು ಈ ಕ್ರಮದಿಂದ ಹೇಳಲ್ಪಟ್ಟಎರಡು ಪ್ರಕಾರದ ಪೂಜೆ ಶಿವಬ್ರಾಹ್ಮಣನಿಂದವೆ ಮಾಡಲ್ತಕ್ಕಂಥಾದು ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಕಾಯವೆಂಬ ಪುರನಾಳುವ ಜೀವನೆಂಬರಸು ನಿಜಬಲದಿಂ ಕರ್ಮವೆಂಬ ರಾಜ್ಯದಲ್ಲಿ ಸಂಪಾದಿಸಿದ ಸುಕೃತ ದುಷ್ಕøತಗಳೆಂಬ ದ್ರವ್ಯವನ್ನು ಮನವೆಂಬ ಬೊಕ್ಕಸದೊಳಗಿಟ್ಟು, ಅಲ್ಲಿಂದ ಶಬ್ದಾಚಾರಮುಖದಿಂದ ನರಕಾದಿ ಯಾತನೆಗಳನ್ನೂ ಸ್ವರ್ಗಾದಿ ಭೋಗಂಗಳನ್ನೂ ಅನುಭವಿಸುತ್ತಿರ್ಪ ಕೋಟಲೆಗಲಸಿ, ವೇದಾಂತಸಮುದ್ರದಲ್ಲಿ ಮುಳುಗಿ, ಅಲ್ಲಿರ್ಪ ಜ್ಞಾನವೆಂಬ ಮಕ್ತಾರತ್ನಮಂ ಕೊಂಡು, ಪರತತ್ವದೇಶದಲ್ಲಿ ಪರಿಣಾಮಿಸುತ್ತಿರ್ಪ ಗುರುವೆಂಬ ಮಹಾರಾಜಂಗೆ ಕಾಣಿಕೆಯಂ ಕೊಟ್ಟು, ಅನಂತಬ್ರಹ್ಮಾಂಡಗಳಂ ತುಂಬಿ, ತಾನನುಭವಿಸಿ, ಲಿಂಗವೆಂಬಕ್ಷಯನಿಧಾನಮಂ ಪಡೆದು, ಅದನ್ನು ಮನೋಭಂಡಾರದೊಳಿಟ್ಟು, ಅತಿಜಾಗರೂಕತೆಯಿಂ ತಾನೇ ಕಾಪಾಡುತ್ತಿರಲು, ಕತಪಯಕಾಲಕ್ಕೆ ಕಾಲದೂತರು ಬಂದು, ಅಂಗಪುರಭಂಗವಂ ಮಾಡಲು, ತತ್ಪುರವಾಸಿಗಳಾದ ರುದ್ರರು ಕಾಲದೂತರಂ ತರಿದು, ಯಮನಂ ಪರಿದು, ಲಿಂಗವಿಧಾನಬಲದಿಂ ಮೋಕ್ಷಸಾಮ್ರಾಜ್ಯಮಂ ಸಂಪಾದಿಸುತ್ತಾ ಬಾಳುವ ನಿತ್ಯಸುಖವನ್ನು ನನಗೆ ಕೊಟ್ಟು ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಧರೆಗೆ ತೊಂಬತ್ತೆಂಟುಸಾವಿರ ಯೋಜನದುದ್ದದಲು ಸಿಡಿಲು ಮಿಂಚು ಮುಗಿಲುಗಳಿಹವು. ಅದರಿಂದ ಮೇಲೆ ಒಂದುಲಕ್ಷ ಯೋಜನದುದ್ದದಲು ಬೃಹಸ್ಪತಿ ಇಹನು. ಆ ಬೃಹಸ್ಪತಿಯಿಂದ ಮೇಲೆ ಮೂವತ್ತೆರಡುಲಕ್ಷ ಯೋಜನದುದ್ದದಲು ಶುಕ್ರನಿಹನು. ಆ ಶುಕ್ರನಿಂದ ಮೇಲೆ ಅರುವತ್ತುನಾಲ್ಕು (ಸಾವಿರರಿ) ಯೋಜನದುದ್ದದಲು ಶನಿಯಿಹನು. ಆ ಶನಿಯಿಂದ ಮೇಲೆ ಒಂದಕೋಟಿ ಇಪ್ಪತ್ತೆಂಟುಲಕ್ಷ ಯೋಜನದುದ್ದಲು ಆದಿತ್ಯನಿಹನು. ಆ ಆದಿತ್ಯನಿಂದ ಮೇಲೆ ಎರಡುಕೋಟಿಯುಂ ಐವತ್ತುಸಾವಿರ (ಐವತ್ತಾರುರಿ)ಲಕ್ಷ ಯೋಜನದುದ್ದದಲು ರಾಹುಕೇತುಗಳು ಪ್ರವರ್ತಿಸಿಕೊಂಡಿಹವು. ಅಲ್ಲಿಂದ ಮೇಲೆ ಐದುಕೋಟಿಯುಂ ಹನ್ನೆರಡುಲಕ್ಷ ಯೋಜನದುದ್ದದಲು ನಕ್ಷತ್ರವಿಹವು. ಆ ನಕ್ಷತ್ರಂಗಳಿಂದ ಮೇಲೆ ಹತ್ತುಕೋಟಿಯುಂ ಇಪ್ಪತ್ತುನಾಲ್ಕು (ಲಕ್ಷ) ಯೋಜನದುದ್ದದಲು ಸಕಲ ಮಹಾಋಷಿಗಳಿಹರು. ಆ ಋಷಿಗಳಿಂದ ಮೇಲೆ ಇಪ್ಪತ್ತುಕೋಟಿಯುಂ ನಾಲ್ವತ್ತೆಂಟುಲಕ್ಷ ಯೋಜನದುದ್ದದಲು ತ್ರಿವಿಧ ದೇವತೆಗಳಿಹರು. ಆ ತ್ರಿವಿಧ ದೇವತೆಗಳಿಂದಂ ಮೇಲೆ ನಾಲ್ವತ್ತುಕೋಟಿಯುಂ ತೊಂಬತ್ತಾರುಲಕ್ಷ ಯೋಜನದುದ್ದದಲು ದೇವರ್ಕಳಿಹರು. ಆ ದೇವರ್ಕಳಿಂದಂ ಮೇಲೆ ಎಂಬತ್ತೊಂದುಕೋಟಿಯುಂ ತೊಂಬತ್ತೆರಡುಲಕ್ಷ ಯೋಜನದುದ್ದದಲು ದ್ವಾದಶಾದಿತ್ಯರಿಹರು. ಆ ದ್ವಾದಶಾದಿತ್ಯರಿಂದಂ ಮೇಲೆ ನೂರರುವತ್ತುಮೂರುಕೋಟಿಯುಂ ಎಂಬತ್ತುನಾಲ್ಕುಲಕ್ಷ ಯೋಜನದುದ್ದದಲು ಮಹಾಸೇನರಿಹರು. ಆ ಮಹಾಸೇನರಿಂದಂ ಮೇಲೆ ಮುನ್ನೂರಿಪ್ಪತ್ತೇಳುಕೋಟಿಯುಂ ಅರವತ್ತೆಂಟುಲಕ್ಷ ಯೋಜನದುದ್ದದಲು ಕೃತರೆಂಬ ಮಹಾಮುನಿಗಳಿಹರು. ಇಂತು_ಧರೆಯಿಂದಂ ಆಕಾಶ ಉಭಯಂ ಕೂಡಲು ಆರುನೂರೈವತ್ತೈದು ಕೋಟಿ ಐದು ಲಕ್ಷ ತೊಂಬತ್ತೆಂಟು ಸಾವಿರ ಯೋಜನದುದ್ದದಲು ಒಂದು ಮಹಾಲೋಕವಿಹುದು. ಆ ಲೋಕದಿಂದ ಹದಿನಾಲ್ಕು ಲೋಕವುಂಟು. ಅವು ಎಲ್ಲಿಹವೆಂದಡೆ: ಪಾತಾಳಲೋಕ ದೇವರ ಕಟಿಯಲ್ಲಿಹುದು, ರಸಾತಳಲೋಕ ದೇವರ ಗುಹ್ಯದಲ್ಲಿಹುದು, ತಳಾತಳಲೋಕ ಊರುವಿನಲ್ಲಿಹುದು, ಸುತಳಲೋಕ ಜಾನುವಿನಲ್ಲಿಹುದು, ನಿತಳಲೋಕ ಜಂಘೆಯಲ್ಲಿಹುದು, ವಿತಳಲೋಕ ಪಾದೋಧ್ರ್ವದಲ್ಲಿಹುದು, ಅತಳಲೋಕ ಪಾದತಳದಲ್ಲಿಹುದು. ಅಲ್ಲಿಂದತ್ತ ಕೆಳಗುಳ್ಳ ಲೋಕವನಾತನೆ ಬಲ್ಲ. ಭೂಲೋಕ ನಾಭಿಯಲ್ಲಿಹುದು, ಭುವರ್ಲೋಕ ಹೃದಯದಲ್ಲಿಹುದು, ಸ್ವರ್ಲೋಕ ಉರೋಮಧ್ಯದಲ್ಲಿಹುದು, ಮಹರ್ಲೋಕ ಕಂಠದಲ್ಲಿಹುದು, ಜನರ್ಲೋಕ ತಾಲವ್ಯದಲ್ಲಿಹುದು, ತಪರ್ಲೋಕ ಲಲಾಟದಲ್ಲಿಹುದು, ಸತ್ಯಲೋಕ ಬ್ರಹ್ಮರಂಧ್ರದಲ್ಲಿಹುದು. ಅಲ್ಲಿಂದತ್ತ ಮೇಲುಳ್ಳ ಲೋಕವನಾತನೆ ಬಲ್ಲ. ಇಂತೀ ಈರೇಳು ಲೋಕವು ತಾನೆಯಾಗಿಪ್ಪ ಮಹಾಲಿಂಗವನ್ನು ಅಡಗಿಸಿಹೆನೆಂಬ ಅತುಳಬಲ್ಲಿದರು ಕೆಲಬರುಂಟೆ ? ಅಡಗುವನು ಮತ್ತೊಂದು ಪರಿಯಲ್ಲಿ, ಅದು ಹೇಂಗೆ ? ಅಡರಿ ಹಿಡಿಯಲು ಬಹುದು ಭಕ್ತಿಯೆಂಬ ಭಾವದಲ್ಲಿ ಸತ್ಯಸದಾಚಾರವನರಿದು ಪಾಪಕ್ಕೆ ನಿಲ್ಲದೆ ಕೋಪಕ್ಕೆ ಸಲ್ಲದೆ ಮಾಯವನುಣ್ಣದೆ ಮನದಲ್ಲಿ ಅಜ್ಞಾನವ ಬೆರಸದೆ ಅಲ್ಲದುದನೆ ಬಿಟ್ಟು, ಬಲ್ಲುದನೆ ಲಿಂಗಾರ್ಚನೆಯೆಂದು `ಓಂ' ಎಂಬ ಅಕ್ಷರವನೋದಿ ಅರಿತ ಬಳಿಕ ಬಸುರಲ್ಲಿ ಬಂದಿಪ್ಪ, ಶಿರದಲ್ಲಿ ನಿಂದಿಪ್ಪ ಅಂಗೈಯೊಳಗೆ ಅಪ್ರತಿಮನಾಗಿ (ಸಿಲ್ಕಿಪ್ಪ) ಕಾಣಾ ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
ಇತ್ತಲಾಗಿ,ಅದೇ ನಿರಾಕಾರಪರಿಪೂರ್ಣ ಪರಶಿವಮೂರ್ತಿಯೆ ನಿಜಗುರುಲಿಂಗಜಂಗಮಲೀಲೆಯ ಧರಿಸಿ, ಪಾವನಾರ್ಥವಾಗಿ ಪಂಚಮಹಾಪಾತಕಸೂತಕಂಗಳ ಬಾಹ್ಯಾಂತರಂಗಳಲ್ಲಿ ಮಹಾಜ್ಞಾನ ಕ್ರಿಯಾಚರಣದಿಂದ ಕಡಿದು ಕಂಡರಿಸಿ, ಬಿಡುಗಡೆಯನುಳ್ಳ ಹರಗಣಂಗಳಿಗೆ ನಿಜೇಷ*ಲಿಂಗ ಭಸಿತ ರುದ್ರಾಕ್ಷಿಗಳ ಕಾಯವೆನಿಸಿ, ಸತ್ಕ್ರಿಯಾಚಾರ ಭಕ್ತಿ ಸಾಧನೆಯ ನಿರ್ವಾಣಪದವಿತ್ತರು ನೋಡಾ. ಅಲ್ಲಿಂದ ಚಿತ್ಪಾದೋದಕ ಪ್ರಸಾದ ಮಂತ್ರವೆ ಪ್ರಾಣವೆನಿಸಿ, ಶಿವಯೋಗಾನುಸಂಧಾನದಿಂದ ಮಹಾಜ್ಞಾನದ ಚಿದ್ಬೆಳಗನಿತ್ತರು ನೋಡಾ. ಆ ಬೆಳಗೆ ತಾವಾದ ಶರಣಗಣಾರಾಧ್ಯ ಭಕ್ತಮಹೇಶ್ವರರು, ಅನ್ಯಮಣಿಮಾಲೆಗಳ ಧರಿಸಿ, ಅನ್ಯಜಪಕ್ರಿಯೆಗಳ ಮಾಡಲಾಗದು. ಅದೇನು ಕಾರಣವೆಂದಡೆ : ಹಿಂದೆ ಕಲ್ಯಾಣಪಟ್ಟಣದಲ್ಲಿ ಚೆನ್ನಮಲ್ಲಿಕಾರ್ಜುನಾರಾಧ್ಯರು, ಉಡುತಡಿ ಮಹಾದೇವಿಗಳು ಪುರುಷನ ಬಿಡುಗಡೆಯ ಮಾಡಿ, ವೈರಾಗ್ಯದೊಳ್ ಅಲ್ಲಮಪ್ರಭುವಿದ್ದೆಡೆಗೆ ಬಂದು ಶರಣಾಗತರಾಗಲು, ಆ ಪ್ರಭುಸ್ವಾಮಿಗಳು ಅವರೀರ್ವರ ಭಕ್ತಿಜ್ಞಾನವೈರಾಗ್ಯ ಸದಾಚಾರಕ್ರಿಯಾವರ್ತನೆಯ ನೋಡಿ ಸಂತೋಷಗೊಂಡು, ಇಂತಪ್ಪ ಸದ್ಧರ್ಮಿಗಳಂ ದಂಡನಾಥ ಮೊದಲಾಗಿ ಅಕ್ಕನಾಗಾಂಬಿಕೆಯು ಮೊದಲಾದ ಪ್ರಮಥಗಣಾದ್ಯರಿಗೆ ದರುಶನ ಸ್ಪರುಶನ ಸಂಭಾಷಣೆ ಪಾದೋದಕ ಪ್ರಸಾದಾನುಭಾವವೆಂಬ ಷಡ್ರಸಾಮೃತವ ಕೊಡಿಸಬೇಕೆಂದು, ತಮ್ಮ ಭಾವದ ಕೊನೆಯಲ್ಲಿ ಅಚ್ಚೊತ್ತಿ , ಹರುಷಾನಂದ ಹೊರಚೆಲ್ಲಿ , ಆಗವರೀರ್ವರಂ ಕೈವಿಡಿದು ಕಲ್ಯಾಣಪಟ್ಟಣಕ್ಕೆ ಹೋಗಿ, ಅನಾದಿ ಪ್ರಮಥಗಣಾಧೀಶ್ವರರ ಸಂದರ್ಶನವಾಗಬೇಕೆಂದು ಕರೆದಲ್ಲಿ , ಆಗ ಮಹಾದೇವಿಯಮ್ಮನು ಸಂತೋಷಂಗೊಂಡು, ಹರಹರಾ ಸ್ವಾಮಿ ಅವರಲ್ಲಿ ಸನ್ಮಾರ್ಗ ನಡೆನುಡಿಗಳೇನೆಂದು ಬೆಸಗೊಳಲು, ಅವರು ಕೇವಲ ಪರಿಪೂರ್ಣಜ್ಯೋತಿರ್ಮಯ ಲಿಂಗಜಂಗಮದಲ್ಲಿ ಕೂಟಸ್ಥರಾಗಿ, ಬಾಹ್ಯಾಂತರಂಗದೊಳ್ ಪರಮಪಾತಕ ಸೂತಕ ಅನಾಚಾರ ಅಜ್ಞಾನ ಅಪಶೈವ ಅಸತ್ಯವಿರಹಿತರಾಗಿ, ನಿರ್ವಂಚಕ ನಿಃಪ್ರಪಂಚ ನಿರ್ವಾಣ ನಿಃಕಾಮ ಸತ್ಯಶುದ್ಧಕಾಯಕ ಸದಾಚಾರ ಕ್ರಿಯಾಜ್ಞಾನಾನಂದ ನಡೆನುಡಿಯುಳ್ಳ ಸದ್ಧರ್ಮ ಅಪಾತ್ರ ಸತ್ಪಾತ್ರವರಿದ ಶಿವಸನ್ಮಾನಿತರು, ನಿಜಾನಂದಯೋಗತೂರ್ಯರು, ಕೇವಲ ಪರಶಿವನಪ್ಪಣೆವಿಡಿದು ಚಿಚ್ಛಕ್ತಿಗಳೊಡಗೂಡಿ ಪಾವನಾರ್ಥ ಅಷ್ಟಾವರಣ ನಿಜವೀರಶೈವಮತೋದ್ಧಾರಕ ಮಹಿಮರ ಚರಣದ ದರುಶನಮಾತ್ರದಿಂದಿವೆ ಜ್ಯೋತಿರ್ಮಯ ಕೈವಲ್ಯಪದವಪ್ಪುದು ತಪ್ಪದುಯೆಂದು ಅಲ್ಲಮನುಸುರಲು, ಆಗ ಸಮ್ಯಕ್‍ಜ್ಞಾನಿ ಮಹಾದೇವಿಯರು ಸತ್ಕ್ರಿಯಾಮೂರ್ತಿ ಚೆನ್ನಮಲ್ಲಿಕಾರ್ಜುನಗುರುವರನು ಸಂತೋಷಗೊಂಡು, ತ್ರಿವಿಧರು ಕಲ್ಯಾಣಕ್ಕೆ ಅಭಿಮುಖವಾಗಲು, ಆ ಪ್ರಶ್ನೆಯು ಹಿರಿಯ ದಂಡನಾಥಂಗೆ ಲಿಂಗದಲ್ಲಿ ಪ್ರಸನ್ನವಾಗಲು, ಆಗ ಸಮಸ್ತಪ್ರಮಥರೊಡಗೂಡಿ, ಆ ಅಲ್ಲಮರು ಸಹಿತ ತ್ರಿವಿಧರು ಬರುವ ಮಾರ್ಗಪಥದಲ್ಲಿ ಅಡಿಯಿಡುವುದರೊಳಗೆ, ಇಳೆಯಾಳ ಬ್ರಹ್ಮಯ್ಯನೆಂಬ ಶಿವಶರಣನು ಈ ತ್ರಿವಿಧರಿಗೆ ಲಿಂಗಾರ್ಚನಾರ್ಪಣಕ್ಕೆ ಶರಣಾಗತನಾಗಿರಲು, ಅವರು ಅರ್ಚನಾರ್ಪಣಕ್ಕೆ ಬಪ್ಪದೆ ಇರ್ಪಷ್ಟರೊಳಗೆ ಹಿರಿದಂಡನಾಥ ಪ್ರಮಥರೊಡಗೂಡಿ, ಅಲ್ಲಮ ಮೊದಲಾದ ತ್ರಿವಿಧರಿಗೆ ವಂದಿಸಿ, ಲಿಂಗಾರ್ಚನಾರ್ಪಣಕ್ಕೆ ಶರಣುಶರಣಾರ್ಥಿಯೆನಲು, ಆಗ ಮಹಾದೇವಿಯಮ್ಮನವರು ಒಂದು ಕಡೆಗೆ ಕೇಶಾಂಬರವ ಹೊದೆದು, ಶರಣುಶರಣಾರ್ಥಿ ನಿಜವೀರಶೈವ ಸದ್ಧರ್ಮ ದಂಡನಾಥ ಮೊದಲಾದ ಸಮಸ್ತ ಗಣಾರಾಧ್ಯರುಗಳ ಶ್ರೀಪಾದಪದ್ಮಂಗಳಿಗೆಯೆಂದು ಸ್ತುತಿಸುವ ದನಿಯ ಕೇಳಿ, ಸಮಸ್ತ ಗಣಸಮ್ಮೇಳವೆಲ್ಲ ಒಪ್ಪಿ ಸಂತೋಷಗೊಂಡು, ಶರಣೆಗೆ ಶರಣೆಂದು ಬಿನ್ನಹವೆನಲು, ನಿಮಗಿಂದ ಮೊದಲೆ ಶರಣುಹೊಕ್ಕ ಶಿವಶರಣೆಗೆ ಏನಪ್ಪಣೆ ಸ್ವಾಮಿಯೆನಲು, ಆಗ ಆ ಬ್ರಹ್ಮಯ್ಯನು ಅಲ್ಲಮಪ್ರಭು ಚನ್ನಮಲ್ಲಿಕಾರ್ಜುನ ದಂಡನಾಥ ಮೊದಲಾದ ಸಮಸ್ತಪ್ರಮಥಗಣ ಸಮ್ಮೇಳಕ್ಕೆ ಶರಣುಶರಣಾರ್ಥಿ, ಈ ತನು-ಮನ-ಧನವು ನಿಮಗೆ ಸಮರ್ಪಣೆಯಾಗಬೇಕೆಂದು ಅಭಿವಂದಿಸಲು, ಆಗ ಕಲಿಗಣನಾಥ ಕಲಕೇತಯ್ಯಗಳು ನೀವು ನಿಮ್ಮ ಪ್ರಮಥರು ಅರೆಭಕ್ತಿಯಲ್ಲಾಚರಿಸುತ್ತಿಪ್ಪಿರಿ, ನಿಮ್ಮ ಗೃಹಕ್ಕೆ ನಿರಾಭಾರಿವೀರಶೈವಸಂಪನ್ನೆ ಮಹಾದೇವಿಯಮ್ಮನವರು ಬರೋದುಯೆಂಥಾದ್ದೊ ನೀವೆ ಬಲ್ಲಿರಿ. ಆ ಮಾತ ನೀವೆ ವಿಚಾರಿಸಬೇಕೆಂದು ನುಡಿಯಲು, ಆಗ ಬ್ರಹ್ಮಯ್ಯಗಳು ತಮ್ಮ ಕರ್ತನಾದ ಕಿನ್ನರಿಯ ಬ್ರಹ್ಮಯ್ಯನ ಕಡೆಗೆ ದೃಷ್ಟಿಯಿಟ್ಟು ನೋಡಲು, ಆ ಕಿನ್ನರಿಯ ಬ್ರಹ್ಮಯ್ಯನು ಹರಹರಾ, ಶರಣುಶರಣಾರ್ಥಿ, ನಮಗೆ ತಿಳಿಯದು, ನಿಮ್ಮ ಕೃಪೆಯಾದಲ್ಲಿ ನಮ್ಮ ಅರೆಭಕ್ತಿಸ್ಥಲವನಳಿದುಳಿದು, ನಿಮ್ಮ ಸದ್ಧರ್ಮ ನಿಜಭಕ್ತಿಮಾರ್ಗವ ಕರುಣಿಸಿ, ದಯವಿಟ್ಟು ಪ್ರತಿಪಾಲರ ಮಾಡಿ ರಕ್ಷಿಸಬೇಕಯ್ಯಸ್ವಾಮಿಯೆಂದು ಅಭಿವಂದಿಸಲು, ಅಯ್ಯಾ, ನಿಮ್ಮಿಬ್ಬರಿಂದಲೇನಾಯ್ತು ? ಇನ್ನೂ ಅನೇಕರುಂಟುಯೆಂದು ಕಲಿಗಣ ಕಲಕೇತರು ನುಡಿಯಲು, ಹರಹರಾ, ಪ್ರಭುಸ್ವಾಮಿಗಳೆ ನಿಮ್ಮಲ್ಲಿ ನುಡಿ ಎರಡಾಯಿತ್ತು , ಅದೇನು ಕಾರಣವೆಂದು ಮಹಾದೇವಿಯಮ್ಮನವರು ಪ್ರಭುವಿನೊಡನೆ ನುಡಿಯಲು, ಆಗ ಆ ಪ್ರಭುಸ್ವಾಮಿಗಳು ಅಹುದಹುದು ತಾಯಿ ನಾವು ನುಡಿದ ನುಡಿ ದಿಟ ದಿಟವು. ನಿಮ್ಮಂಶವಲ್ಲವಾದಡೆ ನಿಮಗಡಿಯಿಡಲಂಜೆಯೆಂದು ನುಡಿಯಲು, ಹರಹರಾ, ಹಾಗಾದೊಡೆ ಅವರ ಬಿನ್ನಹಂಗಳ ಕೈಕೊಂಡು ಅವರಲ್ಲಿರುವ ಅಸತ್ಯಾಚಾರದವಗುಣಗಳ ನಡೆನುಡಿಗಳ ಪರಿಹರಿಸಬೇಕು. ಮುಸುಂಕೇತಕೆ ಸ್ವಾಮಿಯೆಂದು ಮಹಾದೇವಮ್ಮನವರು ನುಡಿಯಲು, ಆಗ ಹಿರಿದಂಡನಾಥನು ಹರಹರಾ ನಮೋ ನಮೋಯೆಂದು ಕಲಿಗಣನಾಥ ಕಲಕೇತರೆ ನಮ್ಮವಗುಣಂಗಳ ಪರಿಹರಿಸಿ, ನಿಮ್ಮ ಕವಳಿಗೆಗೆ ಯೋಗ್ಯರಾಗುವಂತೆ ಪ್ರತಿಜ್ಞೆಯ ಮಾಡಿ, ನಮ್ಮ ಬಿನ್ನಪವನವಧರಿಸಿ ಲಿಂಗಾರ್ಚನಾರ್ಪಣಗಳ ಮಾಡಬೇಕು ಗುರುಗಳಿರಾಯೆಂದು ಅಭಿವಂದಿಸಲು, ಆ ನುಡಿಗೆ ಸಮಸ್ತಗಣ ಪ್ರಮಥಗಣಾರಾಧ್ಯರೆಲ್ಲ ಅಭಿವಂದಿಸಿ, ನಮ್ಮರೆಭಕ್ತಿ ನಿಲುಕಡೆಯೇನೆಂದು ಹಸ್ತಾಂಜುಲಿತರಾಗಿ ಇದಿರಿಗೆ ನಿಲಲು, ಆಗ ಆ ಕಲಿಗಣನಾಥ ಕಲಕೇತಯ್ಯಗಳು ನುಡಿದ ಪ್ರತ್ಯುತ್ತರವು ಅದೆಂತೆಂದೊಡೆ: ಅಯ್ಯಾ, ಕೈಲಾಸದಿಂದ ಪರಶಿವಮೂರ್ತಿ ನಿಮಗೆ ಅಷ್ಟಾವರಣ ಪಂಚಾಚಾರ ಸತ್ಯಶುದ್ಧ ನಡೆನುಡಿ ವೀರಶೈವಮತ ಸದ್ಭಕ್ತಿ ಮಾರ್ಗವ ಮತ್ರ್ಯಲೋಕದ ಮಹಾಗಣಗಳಿಗೆ ತೋರಿ, ಎಚ್ಚರವೆಚ್ಚರವೆಂದು ಬೆನ್ನಮೇಲೆ ಚಪ್ಪರಿಸಿ, ನಿಮ್ಮ ತನುಮನಧನವ ಶ್ರೀಗುರುಲಿಂಗಜಂಗಮಕ್ಕೆ ಸಮರ್ಪಿಸಿ, ವರಗುರುಲಿಂಗಜಂಗಮದ ಮಹಾಬೆಳಗಿನೊಳಗೆ ಬನ್ನಿರೆಂದು ಪ್ರತಿಜ್ಞೆಯ ಮಾಡಿ, ಪಂಚಪರುಷವ ಕೊಟ್ಟು, ಆ ಜಡಶಕ್ತಿಸಮ್ಮೇಳನೆನಿಸಿ ಕಳುಹಿಕೊಟ್ಟಲ್ಲಿ, ನೀವು ಬಂದು, ಎರಡುತೆರದಭಕ್ತಿಗೆ ನಿಂದುದೆ ಅರೆಭಕ್ತಿಸ್ಥಲವೆಂದು ನುಡಿಯಲು, ಆ ಎರಡುತೆರದ ಭಕ್ತಿ ವಿಚಾರವೆಂತೆಂದಡೆ : ಒಮ್ಮೆ ನಿಮ್ಮ ತನು-ಮನ-ಧನ, ನಿಮ್ಮ ಸತಿಸುತರ ತನುಮನಧನಂಗಳು ಶೈವಮತದವರ ಭೂಪ್ರತಿಷಾ*ದಿಗಳಿಗೆ ನೈವೇದ್ಯವಾಗಿರ್ಪವು. ಆ ನೈವೇದ್ಯವ ತಂದು ಶ್ರೀಗುರುಲಿಂಗಜಂಗಮಕ್ಕೆ ನಮ್ಮ ತನುಮನಧನವರ್ಪಿತವೆಂದು ಹುಸಿ ನುಡಿಯ ನುಡಿದು, ಎರಡು ಕಡೆಗೆ ತನುಮನಧನಂಗಳ ಚೆಲ್ಲಾಡಿ, ಅಶುದ್ಧವೆನಿಸಿ ಶುದ್ಧಸಿದ್ಧಪ್ರಸಿದ್ಧಪ್ರಸಾದ ನಮ್ಮ ತನುಮನಧನಂಗಳೆಂದು, ಕಾಯಾರ್ಪಣ ಕರಣಾರ್ಪಣ ಭಾವಾರ್ಪಣವೆಂದು ಒಪ್ಪವಿಟ್ಟು ನುಡಿವಲ್ಲಿ, ನೀವು ವೀರಶೈವಸಂಪನ್ನರೆಂತಾದಿರಿ ? ನಿಮ್ಮಲ್ಲಿ ಲಿಂಗಾರ್ಚನಾರ್ಪಣವೆಂತಾಗಬೇಕು ? ಹೇಳಿರಯ್ಯ ಪ್ರಮಥರೆಯೆಂದು ನುಡಿಯಲು, ಆಗ್ಯೆ ಏಳುನೂರಾಯೆಪ್ಪತ್ತು ಅಮರಗಣಂಗಳೆಲ್ಲ ಬೆರಗಾಗಿ, ಆ ಹರಹರಾ ಅಹುದಹುದೆಂದು ಬಂದ ನುಡಿ ತಪ್ಪಿ ನಡೆದೆವೆಂದು ಒಪ್ಪಿ ಒಡಂಬಟ್ಟು, ಅರೆಭಕ್ತಿ ಮಾಡುವವರ ವಿಚಾರಿಸಿ, ಕಡೆಗೆ ತೆಗೆದು ಗಣಿತವ ಮಾಡಿದಲ್ಲಿ, ಮುನ್ನೂರರವತ್ತು ಗಣಂಗಳಿರ್ಪರು. ಆ ಗಣಂಗಳ ಸಮ್ಮೇಳವ ಕೂಡಿಸಿ ಒಂದೊಡಲಮಾಡಿ, ನಿಮ್ಮೊಳಗಣ ಪ್ರೀತಿಯೇನೆಂದು ಮಹಾದೇವಮ್ಮನವರು ನುಡಿದು ಹಸ್ತಾಂಜುಲಿತರಾಗಿ ಬೆಸಗೊಳಲು, ಆಗ ಮುನ್ನೂರರವತ್ತು ಗಣಂಗಳು ನುಡಿವ ಪ್ರತ್ಯುತ್ತರ ಅದೆಂತೆಂದಡೆ : ಹರಹರಾ, ನಾವು ಬಂದ ಬಟ್ಟೆ ಅಹುದಹುದು, ಇಲ್ಲಿ ನಿಂದ ನಡೆ ಅಹುದಹುದು. ನಾವು ಕ್ರಿಯಾಮಾರ್ಗವ ಬಿಟ್ಟು ಮಹಾಜ್ಞಾನಮಾರ್ಗವ ಭಾವಿಸಿದೆವು, ಎಡವಿಬಿದ್ದೆವು, ತಪ್ಪನೋಡದೆ, ಒಪ್ಪವಿಟ್ಟು ಉಳುಹಿಕೊಳ್ಳಿರಯ್ಯ. ನಡೆಪರುಷ, ನುಡಿಪರುಷ, ನೋಟಪರುಷ, ಹಸ್ತಪರುಷ, ಭಾವಪರುಷರೆ ತ್ರಾಹಿ ತ್ರಾಹಿ, ನಮೋ ನಮೋಯೆಂದು ಅಭಿವಂದಿಸಲು, ಆಗ ಚೆನ್ನಮಲ್ಲಾರಾಧ್ಯರು, ನೀವು ತಪ್ಪಿದ ತಪ್ಪಿಗೆ ಆಜ್ಞೆಯೇನೆಂದು ನುಡಿಯಲು, ಆಗ್ಯೆ ಮುನ್ನೂರರವತ್ತು ಗಣಂಗಳು ನುಡಿದ ಪ್ರತ್ಯುತ್ತರವದೆಂತೆಂದೊಡೆ : ಅಯ್ಯಾ, ನಾವು ತಪ್ಪಿದ ತಪ್ಪಿಂಗೆ ಕ್ರಿಯಾಲೀಲೆಸಮಾಪ್ತಪರ್ಯಂತರವು ನಾವು ಮುನ್ನೂರರವತ್ತು ಕೂಡಿ, ನಿತ್ಯದಲ್ಲು ನಿಮಗೆ ಗುರುಲಿಂಗಜಂಗಮಕ್ಕೆ ಆರಾಧನೆಯ ಮಾಡಿ, ಕೌಪ ಕಟಿಸೂತ್ರ ಹುದುಗು ಶಿವದಾರ ವಿಭೂತಿ ವಸ್ತ್ರ ಪಾವುಡ ರಕ್ಷೆ ಪಾವುಗೆಗಳ ಪರುಷಕೊಂದು ಬಿನ್ನಹಗಳ ಸತ್ಯಶುದ್ಧ ಕಾಯಕವ ಮಾಡಿ, ಋಣಪಾತಕರಾಗದೆ, ನಿಮ್ಮ ತೊತ್ತಿನ ಪಡಿದೊತ್ತೆನಿಸಿರಯ್ಯಯೆಂದು ಅಭಿವಂದಿಸಲು, ಆಗ ಅಲ್ಲಮಪ್ರಭು ಮೊದಲಾದ ಘನಗಂಭೀರರೆಲ್ಲ ಒಪ್ಪಿ, ಶೈವಾರಾಧನೆಗಳಂ ಖಂಡಿಸಿ, ವೀರಶೈವ ಗುರುಲಿಂಗಜಂಗಮ ಭಕ್ತರೆ ಘನಕ್ಕೆ ಮಹಾಘನವೆಂದು ನುಡಿ ನಡೆ ಒಂದಾಗಿ, ಚೆನ್ನಮಲ್ಲಾರಾಧ್ಯರ ನಿರೂಪದಿಂದ ದಂಡನಾಥನ ಭಕ್ತಿಪ್ರಿಯರಾದ ಲಕ್ಷದಮೇಲೆ ತೊಂಬತ್ತಾರುಸಾವಿರ ಘನದೊಳಗೆ ಮಾರ್ಗಕ್ರಿಯೆ ಮೀರಿದ ಕ್ರಿಯಾಚರಣೆಸಂಬಂಧ ಸ್ವಸ್ವರೂಪ ಜ್ಞಾನಾಚಾರ ನಡೆನುಡಿ ಅಚ್ಚಪ್ರಸಾದ ನಿಚ್ಚಪ್ರಸಾದ ಸಮಯಪ್ರಸಾದವೆ ತಮಗೆ ಅಂಗ ಮನ ಪ್ರಾಣವಾಗಿ, ಮೊದಲಾದ ಚಿತ್ಕಲಾಪ್ರಸಾದ ಸಲ್ಲದ ಗಣಂಗಳ ಕಲಿಗಣನಾಥ ಕಲಕೇತರು ಖಂಡಿಸಿ ಆ ಹನ್ನೆರಡುಸಾವಿರಮಂ ತೆಗೆದು ಚೆನ್ನಮಲ್ಲಾರಾಧ್ಯರಿಗೆ ತೋರಲು, ಅವರು ಗಣಸಮೂಹಂಗಳೆಲ್ಲ ಸಂತೋಷದಿಂದ ಸನ್ಮತಂಬಟ್ಟು ಒಪ್ಪಿದ ತದನಂತರದೊಳು, ಪ್ರಭುಸ್ವಾಮಿಗಳು ಅಯ್ಯಾ, ದಂಡನಾಥ ಮೊದಲಾದ ಅಸಂಖ್ಯಾತ ಪ್ರಮಥಗಣಂಗಳೆ ಇನ್ನು ಹಿಂದಣ ಅರೆಭಕ್ತಿಸ್ಥಲವ ಮೆಟ್ಟಿದ ಪುತ್ರ ಮಿತ್ರ ಕಳತ್ರರ ಒಡಗೂಡಿ ಬಳಸಿದೊಡೆ, ಅಷ್ಟಾವರಣ ಪಂಚಾಚಾರಕ್ಕೆ ಹೊರಗೆಂದು ನಿಮ್ಮ ಗಣ ಮೆಟ್ಟಿಗೆಯಲಿ ಪಾವುಡವ ಕೊರಳಿಗೆ ಸುತ್ತಿ, ಭವದತ್ತ ನೂಂಕಿ, ಕಾಮಕಾಲರ ಪಾಶಕ್ಕೆ ಕೊಟ್ಟೆವೆಂದು ನುಡಿಯಲು, ಆ ಮಾತಿಗೆ ದಂಡನಾಥ ಮೊದಲಾದ ಅಚ್ಚಪ್ರಸಾದಿ ನಿಚ್ಚಪ್ರಸಾದಿ ಸಮಯಪ್ರಸಾದಿ ಚಿತ್ಕಲಾಪ್ರಸಾದಿಗಣಂಗಳೆಲ್ಲ ಎದ್ದು , ಹಸ್ತಾಂಜುಲಿತರಾಗಿ, ಹಸಾದ ಹಸಾದವೆಂದು ಕೈಕೊಂಡು, ಪರಮಪಾತಕಸೂತಕನಾಚರಂಗಳಂ ವಿಡಂಬಿಸಿ, ಶಿವಲಿಂಗಲಾಂಛನಯುಕ್ತರಾದ ಶಿವಜಂಗಮದ ಭಿಕ್ಷಾನ್ನದ ಶಬ್ದಮಂ ಕೇಳಿ, ಕ್ಷುಧೆಗೆ ಭಿಕ್ಷೆ, ಸೀತಕ್ಕೆ ವಸನಮಂ ಸಮರ್ಪಿಸಿ ಹಿರಿಕಿರಿದಿನ ನೂನಕೂನಂಗಳಂ ನೋಡದೆ ಶಿವರೂಪವೆಂದು ಭಾವಿಸಿ, ಅಲ್ಲಿ ಚೆನ್ನಮಲ್ಲಿಕಾರ್ಜುನಾರಾಧ್ಯ ಕಲಿಗಣನಾಥ ಕಲಕೇತರು ಖಂಡಿಸಿದ ಹನ್ನೆರಡುಸಾವಿರ ಪರಶಿವಜಂಗಮದೊಡನೆ ತೀರ್ಥಪ್ರಸಾದಾನುಭಾವ ಸಮರಸದಾಚರಣೆಯಂ ಬಳಸಿ ಬ್ರಹ್ಮಾನಂದರಾಗಿ, ಚಿತ್ಕಲಾಪ್ರಸಾದಿ ಜಂಗಮದೊಡವೆರೆದು, ಅಚ್ಚಪ್ರಸಾದಿಗಳು ಅಚ್ಚಪ್ರಸಾದಿಗಳೊಡವೆರೆದು, ನಿಚ್ಚಪ್ರಸಾದಿ ನಿಚ್ಚಪ್ರಸಾದಿಗಳೊಡವೆರೆದು, ಸಮಯಪ್ರಸಾದಿ ಸಮಯಪ್ರಸಾದಿಗಳೊಡವೆರೆದು ಒಂದೊಡಲಾಗಿ, ಚಿತ್ಕಲಾಪ್ರಸಾದಿಗಳು ತಮ್ಮಾನಂದದಿಂದ ಅಚ್ಚಪ್ರಸಾದಿಸ್ಥಲವನಾಚರಿಸಿದೊಡೆ ಬಹುಲೇಸು, ನಿಚ್ಚಪ್ರಸಾದಿ ಸಮಯಪ್ರಸಾದಿಗಳು ಅಚ್ಚಪ್ರಸಾದಿಸ್ಥಲವನಾಚರಿಸಿದೊಡೆ ಉತ್ತಮಕ್ಕುತ್ತಮ, ಅಚ್ಚಪ್ರಸಾದಿ ನಿಚ್ಚಪ್ರಸಾದಿಸ್ಥಲಕೆ ನಿಂದಡೆ ಅಯೋಗ್ಯವೆನಿಸುವುದು. ನಿಚ್ಚಪ್ರಸಾದಿ ಸಮಯಪ್ರಸಾದಿಸ್ಥಲಕೆ ನಿಂದೊಡೆ ಅಯೋಗ್ಯರೆನಿಸುವರು. ಈ ವರ್ಮಾದಿವರ್ಮಮಂ ತ್ರಿಕರಣದಲ್ಲಿ ಅರಿದು ಮರೆಯದೆ ಸಾವಧಾನದೆಚ್ಚರದೊಡನೆ ಲಿಂಗಾಂಗಸಮರಸೈಕ್ಯದೊಡನೆ ಕೂಡಿ ಎರಡಳಿದಿರಬಲ್ಲಾತ ನಿರವಯಪ್ರಭು ಮಹಾಂತ ತಾನೆ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಕಾಶಿಯಾತ್ರೆಗೆ ಹೋದೆನೆಂಬ ಹೇಸಿಮೂಳರ ಮಾತ ಕೇಳಲಾಗದು! ಕೇತಾರಕ್ಕೆ ಹೋದೆನೆಂಬ ಹೇಸಿಹೀನರ ನುಡಿಯ ಲಾಲಿಸಲಾಗದು! ಸೇತುಬಂಧ ರಾಮೇಶ್ವರಕ್ಕೆ ಹೋದೆನೆಂಬ ಸರ್ವಹೀನರ ಮುಖವ ನೋಡಲಾಗದು! ಪರ್ವತಕ್ಕೆ ಹೋದೆನೆಂಬ ಪಂಚಮಹಾಪಾತಕರ ಮುಖವ ನೋಡಲಾಗದು! ಅದೆಂತೆಂದಡೆ: ಕಾಯವೆ ಕಾಶಿ, ಒಡಲೆ ಕೇತಾರ, ಮಾಡಿನೀಡುವ ಹಸ್ತವೆ ಸೇತುಬಂಧರಾಮೇಶ್ವರ, ಮಹಾಲಿಂಗವ ಹೊತ್ತಿರುವ ಶಿರಸ್ಸೆ ಶ್ರೀಶೈಲಪರ್ವತ ನೋಡಾ. ಇಂತಿವನರಿಯದೆ ಪರ್ವತಕ್ಕೆ ಹೋಗಿ, ಪಾತಾಳಗಂಗೆಯ ಮುಳುಗಿ, ತಲೆಯ ಬೋಳಿಸಿಕೊಂಡು, ಗಡ್ಡವ ಕೆರೆಸಿಕೊಂಡು, ಮೀಸೆಯ ತರಿಸಿಕೊಂಡು, ಗಂಗೆಯೊಳು ಕೋಣನ ಹಾಂಗೆ ಮೈಗೆಟ್ಟು ಫಕ್ಕನೆ ಮುಳುಗಿ, ಅಲ್ಲಿಂದ ಬಂದು ಅನ್ನವಸ್ತ್ರವಂ ಕಾಸುವೀಸವಂ ಕೊಟ್ಟು, ಪಾಪ ಹೋಯಿತ್ತೆಂದು ಅಲ್ಲಿಂದ ಬಂದು ಲಿಂಗವಡಿಗಡಿಗೆ ಹಾಯ್ದು, ಬಾರದ ಪಾಪವ ತಾವಾಗ ಬರಸಿಕೊಂಡು, ತಗರ ಜನ್ಮದಲ್ಲಿ ಹುಟ್ಟುವರಯ್ಯ. ಕೋಲು ಪುಟ್ಟಿಯಂ ಕೊಟ್ಟು ಅಟ್ಟಿಸಿ ಬಿಟ್ಟ ಬಳಿಕ, ಅಲ್ಲಿಂದ ಬಂದವರಿಗೆ ಇಲ್ಲಿದ್ದವರು ಹೋಗಿ, ಇದಿರುಗೊಂಡು ಕರತರುವುದಕ್ಕೆ! ಕತ್ತೆ ಮೂಳಹೊಲೆಯರಿರ, ನೀವು ಕೇಳಿರೋ, ಅದಂತೆಂದಡೆ: ಶ್ರೀಮಹಾಪರ್ವತಕ್ಕೆ ಹೋದವರು ತಿರಿಗಿಬಪ್ಪರೆ ? ಶ್ರೀಮಹಾಮೇರುವಿಗೆ ಹೋದವರು ಮರಳಿಬಪ್ಪರೆ ? ಛೀ! ಛೀ! ನೀಚ ಮೂಳ ದಿಂಡೆಯ ನೀಳಹೊಲೆಯರೆಂದಾತ ನಮ್ಮ ದಿಟ್ಟ ವೀರಾಧಿವೀರನಂಬಿಗರ ಚೌಡಯ್ಯನು.
--------------
ಅಂಬಿಗರ ಚೌಡಯ್ಯ
ಭೂಲೋಕದ ನಚ್ಚನೆ ಮೀರಿ ನಿಶ್ಚಟನಾಗಿ ಜ್ಞಾನ ಕ್ರೀಗಳಿಂದ ಆಚರಿಸಿ ಅಂಗಲಿಂಗ ಸಂಬಂಧಿಗಳಾದ ಶಿವಲಿಂಗ ಮೋಹಿಗಳು ಕೇಳಿರಯ್ಯ. ಶರಣರು ಮುಕ್ತಿಪುರಕ್ಕೆ ಹೋಗುವ ಹಾದಿಯಲ್ಲಿ ಒಂದು ಪಂಚವರ್ಣದ ಹಣ್ಣು, ಮನವೇಟದ ಮಹಾಪಟ್ಟಣವೊಂದು. ಆ ಪಟ್ಟಣದ ಕಡೆ ಮೊದಲಾಗಿಯೂ ಹಾಳಾಗಿಪ್ಪುದು. ಆ ಪಟ್ಟಣದ ನಡುವೆ ಹೋಗುತ್ತಿಪ್ಪ ಹಾದಿಯಲ್ಲಿ ಅಹಂಕಾರ ಮಮಕಾರಗಳೆರಡು ಪಟ್ಟಣಗಳು ತುಂಬಿ ತುಳುಕುತವೆ. ಆ ಎರಡು ಪಟ್ಟಣಕ್ಕೆ ಹೋಹಾದಿ ಹೆಬ್ಬೆಟ್ಟಗಳಾಗಿಪ್ಪವು. ಆ ಎರಡು ಪಟ್ಟಣದ ದಿಕ್ಕಿನಲ್ಲಿ ಒಂದು ಭಕ್ತಿಯ ಪುರವಿದೆ. ಆ ಭಕ್ತಿ ಪುರಕ್ಕೆ ಹಾದಿಯಿಲ್ಲ. ಆ ಭಕ್ತಿಪುರಕ್ಕೆ ಹೋದಲ್ಲದೆ ಮುಂದಳ ಮುಕ್ತಿಪುರದ ಬಟ್ಟೆ ಕಾಣಬಾರದು. ಮುಂದಳ ಪಯಣ ಗತಿಯ ಸಂಚದೋವರಿಯ ಸಂಚಮಾಕರಣ ಮನ ಎಂಬತ್ತು ನಾಲ್ಕು ಲಕ್ಷದ ಪ್ರಕಾರದಲ್ಲಿಪ್ಪರಾ ಮಂಡಲದಲ್ಲಿ ಸುಳಿವುದು ತಪ್ಪದೆಂದು ಅದಕ್ಕೆ ಹೇಹಮಂ ಮಾಡಿ, ತಮ್ಮವರು ಹೋದ ನಸುದೋಯಲ (?) ಬೆಂಬಳಿವಿಡಿದು ಹೋಗಿ ಭಕ್ತಿಪುರಮಂ ಕಂಡು ಆ ಭಕ್ತಿಪುರದಿ ನಡುವೆ ಹೋಗುತ್ತಿದ್ದ ಹಾದಿಯಲ್ಲಿ ಹೆಬ್ಬುಲಿ ಕರಡಿ ಕಾಳರಕ್ಕಸಿ ಕರಿಘಟೆಯಿಪ್ಪ ಮಹಾಸರೋವರದ ಅರಣ್ಯವಿದೆ. ಆ ಸರೋವರದ ಅರಣ್ಯಮಧ್ಯದಲ್ಲಿ ಎಂಟು ಕಳಸದ ಚೌಕಮಂಟಪದ ಸುವರ್ಣದ ದೇಗುಲವಿದೆ. ಆ ದೇಗುಲದಲ್ಲಿ ಮುಕ್ತಿರಾಜ್ಯಕ್ಕೆ ಪಟ್ಟವಕಟ್ಟುವ ಸಮರ್ಥಿಕೆಯನ್ನುಳ್ಳ ಜಂಗಮಲಿಂಗವದೆ. ಆ ಲಿಂಗಜಂಗಮಂ ಶರಣ ಕಂಡು ಹರ್ಷಗೊಂಡ ಭಾವದಲ್ಲಿ ಷೋಡಶೋಪಚಾರ ಅಷ್ಟವಿಧಾರ್ಚನೆಗಳಿಂದ ಪೂಜೆಯಂ ಮಾಡಿ ತನ್ನ ಮನದ ಅಭೀಷ್ಟೆಯಂ ಮನ ನೆನದಂತೆ ಮನದಲ್ಲಿ ಭೇದಿಸಿ ದೇಹ ಮನ ಪ್ರಾಣಕುಳ ಸಮಸ್ತ ಶರಣಾದಿಗಳ ಗುಣಕಂಗಳೆಲ್ಲವೂ ಸುಟ್ಟು ಬೊಟ್ಟಿಕ್ಕಿ ನಿರ್ಮಲದ ರೂಪನಾಗಿ ಅಲ್ಲಿಂದ ಮುಂದೆ ನಡೆಸುತ್ತಿದ್ದಾಗ ಉತ್ತರ ದಿಕ್ಕಿನ ಆಕಾಶದಲ್ಲಿ ಅನೇಕ ಚೋದ್ಯವನೊಳಕೊಂಡಿಪ್ಪ ತ್ರಿಪುರಮಂ ಕಂಡು, ಆ ತ್ರಿಪುರದ ಮೇಲೆ ಬ್ರಹ್ಮರಂಧ್ರವೆಂಬ ಕೈಲಾಸದ ಕಡೆಯ ಬಾಗಿಲೊಳಿಪ್ಪ ಐಕ್ಯಸ್ಥಲವೆನಿಸುವ ಅಣುನೆಲೆಯ ಮಾಣಿಕ್ಯವರ್ಣದ ಉಪ್ಪರಿಗೆಯ ತಳಮಂ ಕಂಡು ಪತಿಯಿದ್ದ ಮನೆಯ ಬಾಗಿಲ ಸತಿಸಾರುವಂತೆ ಶರಣ ಉಪ್ಪರಿಗೆಯ ಬಾಗಿಲಂ ಸಾರಿ ಬಾಗಿಲಲ್ಲಿ ಡಾಕಿಣಿ, ರಾಕಿಣಿ, ಲಾಕಿಣಿ, ಕಾಕಿಣಿ, ಸಾಕಿಣಿ, ಹಾಕಿಣಿಯರೆಂಬ ಪಡ್ವಿಧಶಕ್ತಿಗಳಿಗೆ ಆದಿನಾಯಕಿಯಾಗಿಪ್ಪಳು. ಅರ್ಧಕುಂಡಲಿ ಎಂಬ ಜ್ಞಾನಶಕ್ತಿ, ಆ ಶಕ್ತಿಯ ಬಾಗಿಲಿಗೆ ದ್ವಾರಪಾಲಕಿಯಾಗಿಪ್ಪಳು. ಅವಳ ಅಂಗರಂ ತಡವಳು, ನಿರಂಗರಂ ಬಿಡುವಳು ಎಂಬುದ ಶರಣ ತನ್ನ ಮನದಲ್ಲಿ ತಾನೆ ತಿಳಿದು ಅಲ್ಲಿಪ್ಪ ಮಹಾಲಿಂಗಮಂ ಶರಣ ಮಂತ್ರಮಾಲೆಯಂ ಮಾಡಿ ಮನದಲ್ಲಿ ಧರಿಸಿ, ಸೋಮಸೂರ್ಯರ ಕಾಲಾಟಮಂ ನಿಲ್ಲಿಸಿ, ಕುಂಭಕಮಂ ಇಂಬುಗೊಳಿಸಿ, ಝಂ ಝಂ ಎಂದು ಝೇಂಕರಿಸುತ್ತಿದ್ದ ಪೆಣ್ದುಂಬಿಯ ನಾದಮಂ ಚಿಣಿಮಿಣಿಯೆಂದು ಸಣ್ಣರಾಗದಿ ಘನವ ಸೋಂಕುತಿಪ್ಪ ವೀಣಾನಾದಮಂ ಲಿಂಗಲಿಂಗ ಎಂದು ಕರವುತಿಪ್ಪ ಘಂಟಾನಾದಮಂ ಢಂ ಢಂ ಎನುತಿಪ್ಪ ಪೂರಿತವಾದ ಭೇರಿನಾದಮಂ ಚಿಟಪಟಲು ಭುಗಿಲು ಭುಗಿಲೆನುತಿಪ್ಪ ಮೇಘನಾದಮಂ ಝಂ ಝಂ ಎಂದು ಎಡವಿಡದೆ ಬಲಿವುತಿಪ್ಪ ಪ್ರಣಮನಾದಮಂ ಓಂ ಹ್ರಾಂ ಹ್ರೀಂ ಹ್ರೂಂ ಹ್ರೀ ಎಂದು ಬೆಳಗಿ ಬೀರುತಿಪ್ಪ ದಿವ್ಯ ನಾದಮಂ, ಆರಣ್ಯ ಘೀಳಿಡುವಂತೆ ಹೂಂಕರಿಸುತಿಪ್ಪ ಸಿಂಹನಾದಮಂ ಈ ಪ್ರಕಾರ ನಾದಂಗಳ ಶರಣ ಕೇಳಿ ಮನಂ ದಣಿದು ಹರುಷಣ ಮಿಕ್ಕು ಆ ಬಾಗಿಲ ದಾಟಿ ಪಶ್ಚಿಮ ದಿಕ್ಕಿಗೆ ಮುಖವಾಗಲೊಡನೆ ಚೌಕಮಧ್ಯದಲ್ಲಿ ವಜ್ರ ವೈಢೂರ್ಯ ಪುಷ್ಯರಾಗ ಗೋಮೇಧಿಕ ಇಂತಿವರೊಳಗಾದ ನವರತ್ನಂಗಳ ಕಂಬ ಬೋದಿಗೆ ಹಲಗೆಗಳಿಂದ ಅನುಗೈದು ತೀರಿಸಿದ ಮಹಾಶ್ರೀಗುರುವಿನ ಒಡ್ಡೋಲಗದ ಪ್ರಭೆ ಆಕಾಶಮಂ ಸಲವುತಿಪ್ಪುದ ಕಂಡು ಬಹಿರಾವರಣದಿ ಎಸೆವ ಪ್ರಾಕಾರದಕೋಟೆ ಎರಡು ಹದಿನಾರು ಕೊತ್ತಳಗಳಲ್ಲಿ ಈಶಾನ್ಯ ಪರ್ಜನ್ಯ ಜಯಂತರೊಳಗಾದಿ ಮೂವತ್ತೆರಡು ತಂಡದ ಅನಂತ ವಸ್ತು ದೇವತೆಗಳ ಕಾವಲ ಅತ್ಯುಗ್ರಮಂ ಕಂಡು ಶರಣರ್ಗೆ ತಡಹಿಲ್ಲವೆಂಬುದಂ ತನ್ನ ಮನೋವೇಗದಿಂದ ಅರಿದು ಕಾವಲಾಗಿಪ್ಪ ವಸ್ತು ದೇವತೆಯ ಕೃಪಾದೃಷ್ಟಿಯಿಂದ ಸಂತೈಸಿ ಮುಕ್ತಿಪುರಕೆ ಮೂಲಸೂತ್ರವಾದ ಬ್ರಹ್ಮರಂಧ್ರದ ಪೂರ್ವದಿಕ್ಕಿನ ಚಂದ್ರಮಂಡಲದಲ್ಲಿಪ್ಪ ಬಾಗಿಲ ಬೀಗಮಂ ತೆಗೆದು ಶರಣ ಒಳಹೊಗಲೊಡನೆ ಬಹಿರಾವರಣದ ವೀದಿಯ ಓಲಗದೊಳಿಪ್ಪ ಹರಿಸುರ ಬ್ರಹ್ಮಾದಿ ದೇವತೆಗಳು ಮನು ಮುನಿ ಗರುಡ ಗಂಧರ್ವ ಇಂದ್ರ ಚಂದ್ರರೊಳಗಾದ ಅನಂತರೆಲ್ಲಾ ಅಂಜಿ ಕೆಲಸಾರೆ, ಸೋಮವೀದಿಯೊಳಿಪ್ಪ ಅನಂತರ ರುದ್ರರೊಳಗಾದ ಇಪ್ಪತ್ತುನಾಲ್ಕು ತಂಡದ ಅನಂತರು, ಶಿವನ ಒಡ್ಡೋಲಗವ ನಡೆಸುವ ಪರಿಚಾರಕರು, ಅವರು ಬಂದು, ಶರಣಲಿಂಗದ ದೃಷ್ಟಿಸಂಧಾನವಾಗಲೆಂದು ಮುಖವಂ ಮಾಡಿ, ಸೂರ್ಯವೀದಿಯೊಳಿಪ್ಪ ಉಮಾಚಂಡಿಕೇಶ್ವರ ನಂದಿಕೇಶ್ವರರೊಳಗಾದ ಹದಿನಾರು ತಂಡದ ಅನಂತ ರುದ್ರರು ಬಂದು ಶರಣನ ಸನ್ಮಾನವಂ ಮಾಡಿ, ಅಗ್ನಿವೀದಿಯೊಳಿಪ್ಪ ಉಮೆ ಜೇಷೆ*ಯರೊಳಗಾದ ಎಂಟು ತಂಡದ ಅನಂತ ಶಕ್ತಿಯರು [ಕರ್ಪೂ]ರದ ಪುತ್ಥಳಿ ಬಂದು ಉರಿಯ ಪುತ್ಥಳಿಯ ಆಲಂಗಿಸಿದಂತೆ ಶರಣ ಬಂದು ಆ ಘನಲಿಂಗಮಂ ಅಮರ್ದಪ್ಪಿ ಪುಷ್ಪ ಪರಿಮಳದಂತೆ ಏಕವಾಗಿ, ಆ ಘನಲಿಂಗ[ವೆ] ತಾನೆಯಾದ ಮಹಾಗುರು ಸಿದ್ಧೇಶ್ವರನ ಶ್ರೀ ಚರಣಮಂ ನಾನು ಕರಸ್ಥಳದಲ್ಲಿ ಪಿಡಿದು ಪೂಜೆಯಂ ಮಾಡಲೊಡನೆ ಎನ್ನ ತನುವೆ ಪಂಚಬ್ರಹ್ಮ, ಪ್ರಾಣವೆ ಪರಬ್ರಹ್ಮವಾಯಿತ್ತು.
--------------
ಕಲ್ಲಯ್ಯದೇವರು
ಇನ್ನಷ್ಟು ... -->