ಅಥವಾ

ಒಟ್ಟು 15 ಕಡೆಗಳಲ್ಲಿ , 9 ವಚನಕಾರರು , 10 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನು ವಿಶ್ವಾದ್ಥಿಕ ಮಹಾರುದ್ರನುತ್ಪತ್ಯವೆಂತೆಂದಡೆ : ಅನಂತ ಬ್ರಹ್ಮಾಂಡ ಅನಂತ ಕೋಟಿ ಲೋಕಧರನಾದ ಪರಾಪರನಾದ ಮಹಾಸದಾಶಿವನಾದವನು ತನ್ನ ನಿಜಜಾÕನ ಹಿರಿಣ್ಯಗರ್ಭದಲ್ಲಿ ವಿಶ್ವಾದ್ಥಿಕ ಮಹಾರುದ್ರನಂ ನಿರ್ಮಿಸಿ ತನ್ನ ಪಂಚಮುಖದಿಂದ ಪೃಥ್ವಿ ತೇಜ ವಾಯುವಾಕಾಶವೆಂಬ ಮಹಾಭೂತ ಬ್ರಹ್ಮಾಂಡದೊಳು ಚತುರ್ದಶ ಭುವನಂಗಳು, ಸಪ್ತ ಕುಲಪರ್ವತಂಗಳು ಮೊದಲಾದ ಅನಂತ ಗಿರಿ ಗಹ್ವರಂಗಳಂ, ಸಮಸ್ತ ಗ್ರಹರಾಶಿ ತಾರಾಪಥಂಗಳಂ ಗಬ್ರ್ಥೀಕರಿಸಿಕೊಂಡು ನಿರ್ಮಿಸೆಂದು ಬೆಸನಂ ಕೊಟ್ಟು ಕಳುಹಲು, ಮಹಾಪ್ರಸಾದವೆಂದು ಕೈಕೊಂಡು ಆ ಭೂತಬ್ರಹ್ಮಾಂಡದೊಳು ನಿರ್ಮಿಸಿದನೆಂತೆಂದಡೆ : ಜಲದ ಮೇಲೆ ಕಮಠನ ನಿರ್ಮಿಸಿದ. ಆ ಕಮಠನ ಮೇಲೆ ಮಹಾವಾಸುಗಿಯಂ ನಿರ್ಮಿಸಿದ. ಆ ಮಹಾವಾಸುಗಿಯ ಮೇಲೆ ಅಷ್ಟದಿಗ್ಗಜಂಗಳ ನಿರ್ಮಿಸಿದನು ಆ ವಿಶ್ವಾದ್ಥಿಕ ಮಹಾರುದ್ರನು. ಆ ಅಷ್ಟದಿಗ್ಗಜಂಗಳ ಮೇಲೆ ಸಕಲವಾದ ಜೀವಂಗಳಿಗೂ ಸಕಲವಾದ ಪದಾರ್ಥಂಗಳಿಗೂ ಇಹಂತಾಗಿ ಮಹಾಪೃಥ್ವಿಯಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಮಹಾಮೇರುಪರ್ವತದ ತಾವರೆಯ ನಡುವಣ ಪೀಠಿಕೆಯ ಕ್ರಮದಲ್ಲಿ ನಡೆಯ ಪ್ರಮಾಣು ಹದಿನಾರು ಸಾವಿರದ ಯೋಜನ ಪ್ರಮಾಣು. ಉದ್ದ ಎಂಬತ್ನಾಲ್ಕು ಸಾವಿರ ಯೋಜನದುದ್ದ. ವಿಸ್ತೀರ್ಣ ಮೂವತ್ತೆರಡು ಸಾವಿರಯೋಜನ ಪ್ರಮಾಣು ಉಂಟಾಗಿಹಂತಾಗಿ ಮೇರುತನಕ ಸುತಾಳ ತಾಳ, ಪಂಚಾಶತಕೋಟಿ ಸೋಪಾನಂಗಳುಂಟಾಗಿ ದಿವ್ಯರೂಪಾಗಿ ನಿರ್ಮಿಸಿದನು. ಆ ಮೇರುವಿನ ಪೂರ್ವದೆಸೆಯಲ್ಲಿ ಪದ್ಮರಾಗವು, ಆಗ್ನೆಯಲ್ಲಿ ವಜ್ರ, ದಕ್ಷಿಣದಲ್ಲಿ ಮೌಕ್ತಿಕ, ನೈರುತ್ಯಭಾಗದಲ್ಲಿ ನೀಲ, ಪಶ್ಚಿಮದ ದೆಸೆಯ ವಿಭಾಗದಲ್ಲಿ ವೈಡೂರ್ಯ, ವಾಯುವ್ಯದಲ್ಲಿ ಚಿಂತಾಮಣಿ, ಉತ್ತರದಲ್ಲಿ ರತ್ನಕನಕ, ಈಶಾನ್ಯದಲ್ಲಿ ತಾಮ್ರ, ಮೇರುವಿನ ಮಧ್ಯದಲ್ಲಿ ಪುಷ್ಯರಾಗ ಜಾÕನ ದೃಷ್ಟಿಗಳುಂಟಾಗಿ ಪರಿಪೂರಿತಗಳಿಹಂತಾಗಿ ಗಿರಿಯ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಮೇರುವಿನ ಮೇಲುಳ್ಳ ವೃಕ್ಷಂಗಳೆಲ್ಲ ಕಲ್ಪವೃಕ್ಷಂಗಳು. ಆ ಮೇರುವಿನ ಮೇಲುಳ್ಳ ಮೃಗಂಗಳೆಲ್ಲ ಅಚಾಮಚರಿತ್ರಂಗಳು. ಆ ಮೇರುವಿನ ಮೇಲುಳ್ಳ ಗೋವೆಲ್ಲ ಕಾಮಧೇನುಗಳು. ಅಲ್ಲಿದ್ದ ಮನುಷ್ಯರೆಲ್ಲ ಪರಮಾತ್ಮರು. ಅಲ್ಲಿದ್ದ ಸ್ತ್ರೀಯರೆಲ್ಲ ದೇವಸ್ತ್ರೀಯರು. ಆಹಾರಂಗಳೆಲ್ಲ ಅಮೃತಾಹಾರ, ನೀರೆಲ್ಲ ರಜಸ್ತಳೇಯ ; ಅಲ್ಲಿಯ ಮಣ್ಣೆಲ್ಲ ಕಸ್ತೂರಿ ಕುಂಕುಮಾದಿಗಳೆನಿಸಿಕೊಂಬುದು. ಅಲ್ಲಿಯ ಕಾಷ್ಠಂಗಳೆಲ್ಲ ಸುಗಂಧಂಗಳು. ಆ ಮೇರುವಿನ ದೇವತೆಗಳಿಗೂ ಮುನಿಗಳಿಗೂ ಅನಂತ ಸಿದ್ಧರಿಗೂ ಅನಂತ ಯೋಗಿಗಳಿಗೂ ಜೋಗಿಗಳಿಗೂ ಪುರಂಗಳು ಗೃಹಂಗಳು ಗುಡಿಗಳು ಬಿಲದ್ವಾರಂಗಳುಂಟಾಗಿ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಮಹಾಮೇರುವಿಗೆ ನಾಲ್ಕು ಬಾಗಿಲು, ಎಂಟು ಸ್ವರ್ಣಕಂಡಿಗಳು, ಹದಿನಾರು ಮಕರತೋರಣಗಳು, ಮೂವತ್ತೆರಡು ಸೋಮವೀದಿಗಳು, ಅರವತ್ನಾಲ್ಕು ಸಂದುಗಳುಂಟಾಗಿ ಸರ್ವಸಂಪೂರ್ಣವಾಗಿ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಮಹಾಮೇರುವಿನ ಮಧ್ಯದಲ್ಲಿ ಶ್ರೀ ಮಹಾದೇವರಿಗೆ ಶಿವಪುರಮಂ ನಿರ್ಮಿಸಿದನು. ಪಂಚಸಹಸ್ರಯೋಜನ ಚತುಃಚಕ್ರಾಕಾರವಾಗಿ, ನವರತ್ನಖಚಿತವಾಗಿ, ಅಷ್ಟದಳವೇಷ್ಟಿತವಾಗಿ, ಅಷ್ಟಧ್ವಾನಂಗಳುಂಟಾಗಿ, ಶತಸಹಸ್ರಕೋಟಿ ಕನಕಗೃಹಂಗಳುಂಟಾಗಿ. ಪ್ರಮಥಗಣಂಗಳು, ನಂದಿ, ಮಹಾನಂದಿಕೇಶ್ವರ ಮಹಾಗಣಂಗಳು ಅಷ್ಟದಿಕ್ಪಾಲರು, ಏಕಾದಶರುದ್ರರು, ದ್ವಾದಶಾದಿತ್ಯರು, ನವಗ್ರಹಂಗಳು, ಬ್ರಹ್ಮ ವಿಷ್ಣು ನಾರದ ಸುಖದಲ್ಲಿಪ್ಪಂತಾಗಿ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಮೇರುವಿನ ಬಲದ ದೆಸೆಯಲ್ಲಿ ಬ್ರಹ್ಮಪುರವು ತ್ರಿಕೋಣಾಕಾರವಾಗಿ ಅನಿಲಪ್ರಕಾರವೇಷ್ಟಿತವಾಗಿ, ಅಷ್ಟದ್ವಾರಂಗಳುಂಟಾಗಿ ಐನೂರು ಕೋಟಿ ಕನಕಗೃಹಂಗಳು ಅಸಂಖ್ಯಾತಕೋಟಿ ಮಹಾಋಷಿಗಳು ಒಡ್ಡೋಲಂಗಗೊಟ್ಟು, ನಾಲ್ಕು ವೇದಂಗಳು ಮೂರ್ತಿಬಾಂಧವರಾಗಿ ಸರಸ್ವತಿಸಮೇತವಾಗಿ ಬ್ರಹ್ಮದೇವರು ಪರಮಾನಂದಸುಖದೊಳಿಪ್ಪಂತಾಗಿ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಮೇರುವಿನ ವಾಮಭಾಗದಲ್ಲಿ ವಿಷ್ಣುವಿಂಗೆ ವೈಕುಂಠವೆಂಬ ಪುರ ಚಕ್ರಾಕಾರವಾಗಿ ಪದ್ಮರಾಗಪ್ರಕಾಶವೇಷ್ಟಿತವಾಗಿ ಅಷ್ಟದ್ವಾರಂಗಳು ಹತ್ತುನೂರುಕೋಟಿ ಕನಕಗೃಹಂಗಳುಂಟಾಗಿ ಅನಂತಕೋಟಿ ಶಂಕ ಚಕ್ರ ಗದಾಹಸ್ತನಾಗಿ ವೇದ ಓಲೈಸಲಾಗಿ ಶ್ರೀಲಕ್ಷ್ಮೀ ಸಮೇತನಾಗಿ ವಿಷ್ಣು ಪರಮಾನಂದಸುಖದಲ್ಲಿಪ್ಪಂತೆ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಮೇರುವಿನ ಪೂರ್ವದೆಸೆಯಲ್ಲಿ ದೇವೇಂದ್ರಂಗೆ ಅಮರಾವತಿಯ ಪುರಮಂ ನಿರ್ಮಿಸಿದನು. ಆಗ್ನೇಯ ದೆಸೆಯಲ್ಲಿ ಅಗ್ನಿದೇವಂಗೆ ತೇಜೋವತಿಪುರಮಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ದಕ್ಷಿಣದಿಶಾಭಾಗದಲ್ಲಿ ಯಮದೇವಂಗೆ ಸಿಂಹಾವತಿಯ ಪುರಮಂ ನಿರ್ಮಿಸಿದನು. ನೈಋತ್ಯ ದಿಶಾಭಾಗದಲ್ಲಿ ನೈಋತ್ಯಂಗೆ ಕೃಷ್ಣವತಿಪುರಮಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಪಶ್ಚಿಮ ದಿಶಾಭಾಗದಲ್ಲಿ ವರುಣಂಗೆ ಜಂಜನಿತಪುರಮಂ ನಿರ್ಮಿಸಿದನು. ವಾಯುವ್ಯದಲ್ಲಿ ವಾಯುವಿಂಗೆ ಗಂಗಾವತಿಯಪುರಮಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಉತ್ತರದೆಶೆಯಲ್ಲಿ ಕುಬೇರಂಗೆ ಅಳಕಾಪುರಮಂ ನಿರ್ಮಿಸಿದನು. ಈಶಾನ್ಯದಿಶಾಭಾಗದಲ್ಲಿ ಈಶಾನ್ಯದೇವಂಗೆ ಧವಳಾವತಿಪುರಮಂ ಮೊದಲಾಗಿ ಸಮಸ್ತವಾದ ಪುರಗಳಂ ನಿರ್ಮಿಸಿದನು ವಿಶ್ವಾದ್ಥಿಯಕಮಹಾರುದ್ರನು. ಆ ಮಹಾಮೇರುವಿಂಗೆ ವಳಯಾಕೃತವಾಗಿ ಲವಣ ಇಕ್ಷು ಸುರೆ ಘೃತ ದದ್ಥಿ ಕ್ಷೀರ ಶುದ್ಧಜಲಂಗಳೆಂಬ ಸಪ್ತಸಮುದ್ರಂಗಳಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಸಮುದ್ರಂಗಳ ನಡುವೆ ಜಂಬೂದ್ವೀಪ, ಪ್ಲಕ್ಷದ್ವೀಪ, ಶುಕ್ಲದ್ವೀಪ, ಕುಶದ್ವೀಪ, ಶಾಕದ್ವೀಪ, ಶಾಲ್ಮಲೀದ್ವೀಪ, ಪುಷ್ಕರದ್ವೀಪ, ಕ್ರೌಂಚದ್ವೀಪವೆಂಬ ಸಪ್ತದ್ವೀಪಂಗಳ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ದ್ವೀಪಂಗಳಿಗೆ ವಳಯಾಕೃತವಾಗಿ ಮಲಯಜಪರ್ವತ, ನೀಲಪರ್ವತ, ಶ್ವೇತಪರ್ವತ, ಋಕ್ಷಪರ್ವತ, ರಮ್ಯಪರ್ವತ, ಉತ್ತರಕುರುಪರ್ವತ, ಸುಗಂಧಪರ್ವತ, ನಿರಾಕಾರಪರ್ವತ, ಉದಾರಪರ್ವತ, ಮಣಿಶಿಖರಪರ್ವತ, ಅರ್ಧಚಂದ್ರಪರ್ವತ, ಮಧುರಪರ್ವತ, ಮಣಿನಾಗಪರ್ವತ, ಮೈನಾಕಪರ್ವತ, ಉದಯಾದ್ರಿಪರ್ವತ, ತ್ರಿಪುರಾಂತಕಪರ್ವತ, ಶ್ರೀರಾಮಪರ್ವತ, ಮಾಲ್ಯವಂತಪರ್ವತ, ನಿಷಧಪರ್ವತ, ಹೇಮಕೂಟಪರ್ವತ, ನಿರಾಚಲಪರ್ವತ, ಗಂಧಾಚಲಪರ್ವತ, ನೀಲಾಚಲಪರ್ವತ, ಮಂದಾಚಲಪರ್ವತ, ಮೇರುಮಂದಿರಪರ್ವತ, ಶುಬರೀಶ್ವರಪರ್ವತ, ಕುಮುದಉದಯಾದ್ರಿ, ದೇವಕೂಟ, ವಿಂಧ್ಯಾಚಲ, ಪವನಾಚಲ, ಪರಿಯಾಚಲ, ಚಂದ್ರಾಚಲ, ಧಾರಾಚಲ, ಷಡುಲಕ್ಷ್ಮಿಗಿರಿ, ಮಾನಸಾಂತಗಿರಿ, ತಮಂಧಗಿರಿ, ಚಂದ್ರಗಿರಿ, ನಾಗಗಿರಿ, ಲಘುಗಿರಿ, ಮಕರಗಿರಿ, ದ್ರೋಣಗಿರಿ, ಅನಂತವಜ್ರಗಿರಿ, ಕಪಿಲಗಿರಿ, ನೀಲಗಿರಿ, ಪರಗಿರಿ, ತ್ರಿಪುರಗಿರಿ, ಸಿಂಹಗಿರಿ, ಶ್ರೀಕಂಠಗಿರಿ, ಚಕ್ರವಾಳಗಿರಿಪರ್ವತ, ಇಂದ್ರಗಿರಿಪರ್ವತ, ಲೋಕಪರ್ವತಂಗಳು ಮೊದಲಾದ ಪರ್ವತಂಗಳೆಲ್ಲವಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಇದಕ್ಕೆ ದೇಶಂಗಳಾಗಬೇಕೆಂದು ಪಾಂಚಾಲ, ಬರ್ಬರ, ಮತ್ಸ್ಯ, ಮಗಧ, ಮಲೆಯಾಳ, ತೆಲುಂಗ, ಕಳಿಂಗ, ಕುಕರ, ಕೊಂಕಣ, ತ್ರಿಕರರಾಷ್ಟ್ರ, ಶ್ವಾಸಿನಿ, ಕಂಠರಹಿತ, ಕುತಿಷ್ಟ, ದಶಾರ್ಣ, ಕುರು, ಮುಖಸರ, ಕೌಸಯಿವರ್ಣ, ಆವಂತಿ, ಲಾಳ, ಮಹೇಂದ್ರ, ಪಾಂಡ್ಯ, ಸರ್ವೇಶ್ವರ, ವಿಷ್ಣು, ಶಾಂತಕ, ತುರಾದ್ರ, ಮಗಧಾದ್ರ, ವಿದೇಹ, ಮಗಧ, ದ್ರವಿಳ, ಕಿರಾಂತ, ಕುಂತಳ, ಕಾಮೀರ, ಗಾಂಧಾರ, ಕಾಂಭೋಜ, ಕೀಳುಗುಜ್ಜರ, ಅತಿದೃಷ್ಟ, ನೇಪಾಳ, ಬಂಗಾಳ, ಪುಳಿಂದ್ರ, ಜಾಳೇಂದ್ರ, ಕಲ್ವರ-ಇಂಥಾ ದೇಶಂಗಳೆಲ್ಲವಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಇನ್ನು ಭೂಮಿಯಿಂದಂ ಮೇಲೆ ಮೇಘಮಂಡಲ ಮೊದಲಾಗಿ ಶಿವಾಂಡ ಚಿದ್ಬ ್ರಹ್ಮಾಂಡ ಕಡೆಯಾಗಿ ಎಲ್ಲಾ ಲೋಕಂಗಳಂ ನಿರ್ಮಿಸಿ, ಸಪ್ತಪಾತಾಳವ ನಿರ್ಮಿಸಿದನದೆಂತೆಂದಡೆ: ಅಲ್ಲಿ ಪೃಥ್ವಿಯ ಕೆಳಗೆ ಶತಕಯೋಜನದಲ್ಲಿ ಅತಳಲೋಕದಲ್ಲಿ ಇಶಿತಮಂಡಲಮಂ ನಿರ್ಮಿಸಿದನು. ಅತಳಲೋಕದಿಂದಂ ಕೆಳಗೆ ಕೋಟಿಯೋಜನದುದ್ದದಲ್ಲಿ ವಿತಳಲೋಕದಲ್ಲಿ ಸ್ವರ್ಣ ನಾಗಮಂಡಲಮಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ವಿತಳಲೋಕದಿಂದಲು ಕೆಳಗೆ ದ್ವಿಕೋಟಿ ಯೋಜನದುದ್ದದಲ್ಲಿ ಸುತಳತೋಲಕದಲ್ಲಿ ಕೃಷ್ಣನಾಗಮಂಡಲಮಂ ನಿರ್ಮಿಸಿದನು. ಆ ಸುತಳಲೋಕದಿಂದಲು ಕೆಳಗೆ ರಸಾತಳಲೋಕದಲ್ಲಿ ರತ್ನನಾಗಮಂಡಲಮಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ರಸಾತಳಲೋಕದಿಂದಲು ಕೆಳಗೆ ಚತುಃಕೋಟಿ ಯೋಜನದುದ್ದದಲ್ಲಿ ಮಹಾತಳಲೋಕದಿಂದಲು ಕೆಳಗೆ ಶತಕೋಟಿ ಯೋಜನದುದ್ದದಲ್ಲಿ ಪಾತಾಳಲೋಕದಲ್ಲಿ ಅವಿಷ್ಟಕೆ ಆಧಾರವಾಗಿ ಕಮಠನಂ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ಕಮಠನ ಮೇಲೆ ಜಲಂಗಳಂ, ಕಮಲಂಗಳಂ, ಮಹಾಪೃಥ್ವಿಯಂ, ಮೇರುಪರ್ವತ ಸಮಸ್ತದೇವಾಸುರಂಗಳಂ ಮಹಾಪೃಥ್ವಿಯು ಸಮಸ್ತ ಸಪ್ತಸಮುದ್ರಂಗಳಂ, ಸಪ್ತದ್ವೀಪಂಗಳಂ ಮೊದಲಾದ ಲೋಕಾದಿಲೋಕ ಪರ್ವತಂಗಳ ನಿರ್ಮಿಸಿದನು ವಿಶ್ವಾದ್ಥಿಕಮಹಾರುದ್ರನು. ಆ ವಿತಳಲೋಕದಿಂದಲೂ ಕೆಳಗೆ ದ್ವಿಕೋಟಿ ಯೋಜನದುದ್ದದಲ್ಲಿ ಅತಳ ವಿತಳ ಸುತಳ ರಸಾತಳ ತಳಾತಳ ಮಹಾತಳ ಪಾತಾಳ ಭೂಲೋಕ, ಭುವರ್ಲೋಕ, ಸ್ವರ್ಲೋಕ, ಮಹರ್ಲೋಕ, ಜನರ್ಲೋಕ, ತಪರ್ಲೋಕ, ಸತ್ಯರ್ಲೋಕ-ಇಂಥ ಲೋಕಂಗಳೆಂಬ ಹದಿನಾಲ್ಕು ಲೋಕಂಗಳಂ ನಿರ್ಮಿಸಿ ಮತ್ತೆ ಸ್ವರ್ಗ-ಮತ್ರ್ಯ-ಪಾತಾಳಗಳ ವಿವರಿಸಿ ನೋಡಿ ಆ ಲೋಕದವರಿಗೆ ವೇದಶಾಸ್ತ್ರಂಗಳಂ ನಿರ್ಮಿಸಿದನದೆಂತೆಂದಡೆ : ವೇದ ವೇದಾಂಗ, ಮಂತ್ರಶಾಸ್ತ್ರ, ತರ್ಕಶಾಸ್ತ್ರ, ಯೋಗಶಾಸ್ತ್ರ, ಜ್ಯೋತಿಷ್ಯಶಾಸ್ತ್ರ, ವೈದ್ಯಶಾಸ್ತ್ರ, ನೀತಿಶಾಸ್ತ್ರ, ಧರ್ಮಶಾಸ್ತ್ರ, ಶಕುನಶಾಸ್ತ್ರ, ಶಸ್ತ್ರಶಾಸ್ತ್ರ, ಶಿಲ್ಪಶಾಸ್ತ್ರ, ಜಲಶಾಸ್ತ್ರ, ಸಾಮುದ್ರಿಕಶಾಸ್ತ್ರ, ನೃಪತಿಶಾಸ್ತ್ರ, ಅಂಜನಶಾಸ್ತ್ರ, ರಸವೈದ್ಯಶಾಸ್ತ್ರ, ಬಿಲ್ಲುಶಾಸ್ತ್ರ, ಗೋಪಶಾಸ್ತ್ರ, ಮನುಷ್ಯಶಾಸ್ತ್ರ, ರಥಿಕಶಾಸ್ತ್ರ, ಅಂಗುಲಿಶಾಸ್ತ್ರ, ಶ್ರವಣಶಾಸ್ತ್ರ, ಗಂಧಪಾದ್ಯಶಾಸ್ತ್ರ, ಭುಜಗಶಾಸ್ತ್ರ, ಯೋಗಿಣಿಶಾಸ್ತ್ರ, ಯಕ್ಷಿಣಿಶಾಸ್ತ್ರ, ಶಬ್ದನೀತಿಶಾಸ್ತ್ರ, ಅಲಂಕಾರಶಾಸ್ತ್ರ, ವಿಶ್ವಶಾಸ್ತ್ರ, ಗಂಡಶಾಸ್ತ್ರ, ವ್ಯಾದ್ಥಿಶಾಸ್ತ್ರ, ಯುದ್ಧಶಾಸ್ತ್ರ, ಹಸರಶಾಸ್ತ್ರ, ಶುಂಭನಶಾಸ್ತ್ರ, ಮುಖಶಾಸ್ತ್ರ, ಬಂಧಶಾಸ್ತ್ರ, ಜಲಸ್ತಂಭಶಾಸ್ತ್ರ, ಅಗ್ನಿಶಾಸ್ತ್ರ, ಕರ್ಮಶಾಸ್ತ್ರ, ಪುರಾಣಿಕಶಾಸ್ತ್ರ, ಇಂಗಶಾಸ್ತ್ರ, ವೈದ್ಯಶಾಸ್ತ್ರ, ಇಂದ್ರಜಾಲ, ಮಹೇಂದ್ರಜಾಲ ಶಾಸ್ತ್ರಂಗಳು ಮೊದಲಾದ ಚೌಷಷ್ಠಿ ವಿದ್ಯಂಗಳ ನಿರ್ಮಿಸಿದನು ನೋಡಾ [ಅಪ್ರಮಾಣ] ಕೂಡಲಸಂಗಯ್ಯನ ಶರಣ ವಿಶ್ವಾದ್ಥಿಕಮಹಾರುದ್ರನು.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಯ್ಯಾ ಹಳೆಯ ಹುತ್ತದೊಳಗೊಂದು ಎಳೆಯ ಸರ್ಪನ ಕಂಡೆ. ಆ ಎಳೆಯ ಸರ್ಪ ಹೊರಟು, ಬೆಳಗು ಕತ್ತಲೆಯೆರಡೂ ನುಂಗಿತ್ತು. ಆ ಎಳೆಯ ಸರ್ಪನ ಕಂಡು, ಅಲ್ಲಿದ್ದ ತಳಿರ ಮರ ನುಂಗಿತ್ತು. ಆ ತಳಿರ ಮರನ ಕಂಡು ಮಹಾಬೆಳಗು ನುಂಗಿತ್ತು. ಆ ಮಹಾಬೆಳಗ ಕಂಡು, ನಾನೊಳಹೊಕ್ಕು ನೋಡಿದಡೆ, ಒಳಹೊರಗೆ ತೊಳತೊಳಗಿ ಬೆಳಗುತ್ತಿದ್ದಿತಯ್ಯಾ, ಬಸವಪ್ರಿಯ ಕೂಡಲಚೆನ್ನಸಂಗಮದೇವ.
--------------
ಸಂಗಮೇಶ್ವರದ ಅಪ್ಪಣ್ಣ
ಒಂದು ಹುತ್ತಕ್ಕೆ ಒಂಬತ್ತು ಬಾಗಿಲು. ಒಂದು ಸರ್ಪ ಒಂಬತ್ತು ಬಾಗಿಲಲ್ಲಿಯೂ ನೋಡುತ್ತಿಪ್ಪುದು. ಒಂಬತ್ತು ಬಾಗಿಲಿಗೆ ಕದವನಿಕ್ಕಿ, ಒಂದು ಬಾಗಿಲ ಅಗುಳಿ ದಾರವಂದವನಿಕ್ಕಿ ಬಲಿಯಲು, ತಿರುಗುವುದಕ್ಕೆ ಠಾವ ಕಾಣದೆ, ಇರುವುದಕ್ಕೆ ಇಂಬ ಕಾಣದೆ, ನಿಲುವುದಕ್ಕೆ ಎಡೆಯ ಕಾಣದೆ, ಉರಿ ಎದ್ದು ಊರ್ದ್ವಕ್ಕೇರಲು, ಶರಧಿ ಬತ್ತಿತ್ತು, ಅಲ್ಲಿದ್ದ ಖಗಮೃಗವೆಲ್ಲ ದಹನವಾದವು. ಸರೋವರವೆಲ್ಲ ಉರಿದು ಹೋದವು, ಕತ್ತಲೆ ಹರಿಯಿತ್ತು. ಮುಂದೆ ದಿಟ್ಟಿಸಿ ನೋಡುವನ್ನಕ್ಕ ಇಟ್ಟೆಡೆಯ ಬಾಗಿಲು ಸಿಕ್ಕಿತ್ತು. ಆ ಇಟ್ಟೆಡೆಯ ಬಾಗಿಲ ಹೊಕ್ಕು ಹೊಡೆಕರಿಸಿ, ಪಶ್ಚಿಮದ ಕದವ ತೆಗೆದು, ಬಟ್ಟ ಬಯಲಲ್ಲಿ ನಿಂದು ನಾನೆತ್ತ ಹೋದೆಹೆನೆಂದರಿಯೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಕವಿಗಳುಯೆಂದು ಹೆಸರಿಟ್ಟುಕೊಂಡು ನುಡಿವ ಅಣ್ಣಗಳು ನೀವು ಕೇಳಿರೊ. ಪ್ರಥಮ ಶಿವಾಲ್ಯದಲ್ಲಿ ಮೂಲಸ್ಥಾನದ ಲಿಂಗವನರಿದು ಅಲ್ಲಿದ್ದ ವಿಮಳವಾದ ಗಂಟ ಕೊಯಿದು, ಸಕಲ ಪರಿಮಳ ದ್ರವ್ಯಂಗಳ ಆ ಮೂಲಲಿಂಗಕ್ಕೆ ಕೊಡಬಲ್ಲಡೆ ಕ ಎಂಬ ಅಕ್ಷರದ ಭೇದವ ಬಲ್ಲನೆಂದೆನ್ನಬಹುದು. ಪರಬ್ರಹ್ಮನ ಆಶ್ರೈಸಬಲ್ಲಡೆ ವಿ ಎಂಬ ಅಕ್ಷರದ ಭೇದವ ಬಲ್ಲಡೆ ನಿಮ್ಮ ಹೆಸರ ನೀವೇ ಇಟ್ಟುಕೊಂಡು, ಕವಿಯೆಂಬ ಎರಡಕ್ಷರದ ಬೇದವನರಿಯದೆ ವಾದ ತರ್ಕವ ಮಾಡಿ ಗುರುಗುಡುವುದು ಕಾರಣವಲ್ಲ. ಬಲ್ಲರೆ ಹೇಳಿ, ಅರಿಯದಿದ್ದರೆ ಕೇಳಿ. ಕವಿಯೆಂಬ ಎರಡು ಐವತ್ತೆರಡು ಅಕ್ಷರದ ಭೇದವ ಅಷ್ಟದಳಕಮಲವ ವಿಚಾರಿಸುವುದು, ಅಲ್ಲದ ಕಾರಣ (?) ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ
ಪೂರ್ವಸಿಂಹಾಸನದಲ್ಲಿ, ಮಹಾಪರ್ವತದ ಮಸ್ತಕದಲ್ಲಿ, ಆ ಪರ್ವತಕ್ಕೆ ಕಾವಲು ಒಂಬತ್ತಾಗಿ, ಆ ಒಂಬತ್ತ ಕೂಡಿದ ದ್ವಾರ ಕೆಳಗಾಗಿ, ಅದರಿಂದ ನಡೆಯುತಿದ್ದು ಸಕಲ ವ್ಯವಹಾರಂಗಳು. ಆ ಪೂರ್ವದ್ವಾರದಲ್ಲಿ ಮಹಾಜ್ವಲ, ಮಹಾಜ್ವಲದಲ್ಲಿ ಗಂಭೀರ ಕಮಲ, ಗಂಭೀರ ಕಮಲದಲ್ಲಿ ಭವಿಸಿದಗ್ನಿ, ಪೂರ್ವದ್ವಾರವ ತಾಗೆ ಅಲ್ಲಿದ್ದ ವಾಯುರಾಜನು ದುರ್ಗ ಒಂಬತ್ತಕ್ಕೆ ಒಂದೇ ದ್ವಾರದಲ್ಲಿ ದಾಳಿಯನಿಟ್ಟು ನಾಯಕ ದುರ್ಗದಲ್ಲಿದ್ದ ಸುಗುಣ ಸುಜ್ಞಾನವೆಂಬ ಸರೋವರ ಹೊಕ್ಕು, ಮೂರು ಮೆಟ್ಟಿನ ಭಾವಿಯನ್ನಿಳಿದು, ಆ ಜಲವ ಕದಡಲಾಗಿ ಬಪ್ಪ ಬಾಹತ್ತರ ನಿಯೋಗದ ಧಾಳಾಧಾಳಿಯಂ ಕಂಡು, ಅಯ್ಯ, ಜಲವ ಹೋಗೆ ಇವರು ಕದಡಿದ ಜಲದೊಳಗೆ ಹೋದವರೆಲ್ಲಾ ಮುಕ್ತರಾ, ನೀನೆ ಕಪಿಲಸಿದ್ಧಮಲ್ಲಿಕಾರ್ಜುನಯ್ಯ ಹಿಡಿಗೊಳಗಾದ.
--------------
ಸಿದ್ಧರಾಮೇಶ್ವರ
ಅಂಬರದೊಳಗಣ ಅಮೃತದ ಕೊಣನುಕ್ಕಿ ಕುಂಭಿನಿಯ ಮೇಲೆ ಸೂಸಲು, ಅಲ್ಲಿದ್ದ ಸಕಲ ಜನವೆಲ್ಲ ಅಮೃತವ ಕಂಡು ದಣಿಯಲುಂಡು, ಅನಿತ್ಯದ ಭೋಗವ ಮರೆದು ಮರ್ತ್ಯದ ಹಂಗು ಹರಿದು ನಿತ್ಯಮುಕ್ತರಾಗಿರ್ದರಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಗುರುಲಿಂಗಜಂಗಮದ ತ್ರಿವಿಧಭಕ್ತನೆನಿಸಿಕೊಂಬ ಅಣ್ಣಗಳು ನೀವು ಕೇಳಿರೋ. ಸ್ಥೂಲ ಸೂಕ್ಷ್ಮ ಕಾರಣವೆಂಬ ತ್ರಿವಿಧವ ತಿಳಿಯಬಲ್ಲರೆ ತ್ರಿವಿಧಭಕ್ತನೆಂದೆಸಬಹುದು. ಸ್ಥೂಲ ಸೂಕ್ಷ್ಮ ಕಾರಣದಲ್ಲಿ ದಶವಾಯುಗಳುಂಟು. ಅಲ್ಲಿದ್ದ ತ್ರಿವಿಧಪತಿಗಳಿಗೆ ನಾಲ್ಕು ಮುಖಗಳುಂಟು. ಉತ್ತರ ದಕ್ಷಿಣ ಪೂರ್ವ ಪಶ್ವಿಮವುಂಟು. ಪವನ ನಾಲ್ಕು ಮೂಲವುಂಟು. ಅಲ್ಲಿ ಸಕಲ ಆಚಾರ್ಯರ ಕ್ರೀಯ ಸಂಬಂಧವುಂಟುಶ್ರೀ ಇಂತೀ ಸ್ಥಳದಲ್ಲಿ ಸಂಬಂಧವನರಿಯಬಲ್ಲರೆ ಭಕ್ತನೆಂದೆಸಬಹುದು. ನಿಷೆ* ನಿಜ ಸತ್ಯ ಸದಾಚಾರ ಸದ್ಭಾವ ಜೀವನವಿದ್ದ ಬಿಡಾರವ ನೋಡಿ : ಅಲ್ಲಿದ್ದ ಅಧಿಪತಿಗೆ ಮುಖವುಂಟು. ಸಕಲ ವೈಪತಿಗಳ ಮರದು ಜಂಗಮಲಿಂಗವ ನಿರೀಕ್ಷಣವ ಮಾಡಬಲ್ಲರೆ ಸೂಕ್ಷ್ಮ ಶರಣನೆಂದೆನಿಸಬಹುದು. ಪುರದ ಜನರುಗಳೆಲ್ಲರನು ಮೈಮರೆಸಿ ನಿರ್ಭವಿಗಳಂ ಮಾಡಿ ಕೆಡಹಿ, ಚಿತ್ರಮಂಟಪದ ಬಾಗಿಲೊಳು ಹೊಕ್ಕು ಎರಡು ಮುಖದ ಅಧಿಪತಿಯ ನಿರೀಕ್ಷಣವಂ ಮಾಡಿ ಆದಿಪುರದ ಸುಖಂಗಳ ಹಿಂದುಗಳೆದು ಬಾರದ ಬಟ್ಟೆಯ ಮೆಟ್ಟಿ, ಸೋಸದ ಜಲವ ಕೊಳಬಲ್ಲಡೆ ಕಾರಣೈಕ್ಯನೆಂದೆನಿಸಬಹುದು. ಇದನರಿಯದೆ ಸ್ಥೂಲ ಸೂಕ್ಷ್ಮ ಕಾರಣವೆಂದು ನುಡಿವ ಮರವೀಯ ಮರಳುಗಳ ನೋಡಿ ನಗುತಿರ್ದ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ
ಅಯ್ಯಾ, ಹುಟ್ಟಿದ ಮನುಜರೆಲ್ಲ ಹೊಟ್ಟೆ ಹೊಟ್ಟೆ ಎಂದು ಹೊಟ್ಟೆಗೆ ಹಸಿದು, ಹೊಟ್ಟೆಗೆ ಕುದಿದು, ಹೊಟ್ಟೆಗೆ ಹೊರೆದು, ಹೊಟ್ಟೆಗೆ ತುಂಬಿ, ತಾವು ಬಂದ ಬಟ್ಟೆಯನೆ ಅರಿಯದೆ ಕೆಟ್ಟಿತ್ತು ಜಗವೆಲ್ಲ. ಅದಂತಿರಲಿ. ಇನ್ನು ಆ ಶರಣರ ಮತವೆಂತೆಂದರೆ, ಹೊಟ್ಟೆ ಎಂಬುದನೆ ಮೆಟ್ಟಿಟ್ಟು ತೂರಿ, ಅಲ್ಲಿದ್ದ ಗಟ್ಟಿಯಾಗಿರ್ದ ಪ್ರಸಾದವನೆ ಊಟವೆಂದು ಹಿಡಿದು, ಮುಟ್ಟ ನಿಮ್ಮೊಳೊಡವೆರೆದು, ಬಟ್ಟಬಯಲಾದರು ಕಾಣಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಶಬ್ದವನು ಕಿವಿಗಳು ಬಲ್ಲವೆ? ಅರಿಯವು. ಅಲ್ಲಿದ್ದ ಆಕಾಶ ತಾ ಬಲ್ಲುದೆ? ಅರಿಯದು. ಸ್ಪರ್ಶನವ ತ್ವಕ್ಕು ಬಲ್ಲುದೆ? ಅರಿಯದು. ಅಲ್ಲಿದ್ದ ವಾಯು ತಾ ಬಲ್ಲುದೆ? ಅರಿಯದು. ರೂಪನು ಕಣ್ಣು ಬಲ್ಲುದೆ? ಅರಿಯದು. ಅಲ್ಲಿದ್ದ ಅಗ್ನಿ ತಾ ಬಲ್ಲುದೆ? ಅರಿಯದು. ಸ್ವಾದವನು ನಾಲಿಗೆ ಬಲ್ಲುದೆ? ಅರಿಯದು. ಅಲ್ಲಿದ್ದ ಅಪ್ಪು ತಾ ಬಲ್ಲುದೆ? ಅರಿಯದು. ಗಂಧವನು ಘ್ರಾಣ ಬಲ್ಲುದೆ? ಅರಿಯದು. ಅವರಲ್ಲಿ ನಿಂದು, ವಿಷಯಂಗಳನು ಭಕ್ತನ ಇಂದ್ರಿಯಂಗಳೊಡನೆ ಕೂಡಿ ಅರಿವಾತ ನೀನೇ. ನೀನೆ ಭಕ್ತವತ್ಸಲ, ದಯಾನಿಧಿ, ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.
--------------
ಸ್ವತಂತ್ರ ಸಿದ್ಧಲಿಂಗ
ಕ್ರೀಯಲ್ಲಿ ವಸ್ತುವಿಪ್ಪುದೆ ದಿಟವಾದಡೆ, ತಿಳಿದು ನೋಡಿದಲ್ಲಿ, ವಸ್ತುವಿನಲ್ಲಿ ಕ್ರೀ ಇಪ್ಪುದೆ ದಿಟ. ಇಂತು ಇನ್ನೀ ಉಭಯವ ತಿಳಿದು ನೋಡಿದಲ್ಲಿ, ವಸ್ತುವಿಂಗೂ ಕ್ರೀಗೂ ಭಿನ್ನ ಉಂಟೆ ? ಅದೆಂತೆಂದಡೆ : ಸಕ್ಕರೆಯ ಕುಂಭವೆನಲಿಕೆ, ತುಪ್ಪದ ಕಂದಳೆನಲಿಕೆ, ಕರ್ಪುರದ ಕರಂಡವೆನಲಿಕೆ, ಆ ವಸ್ತು ದೃಷ್ಟ ದಿಟವೆ ? ಕುಂಭ ಸಕ್ಕರೆಯಲ್ಲ, ಸಕ್ಕರೆ ಕುಂಭವಲ್ಲ, ತುಪ್ಪ ಕಂದಳಲ್ಲ, ಕಂದಳ ತುಪ್ಪವಲ್ಲ, ಕರಂಡ ಕರ್ಪುರವಲ್ಲ, ಕರ್ಪುರ ಕರಂಡವಲ್ಲ. ಅಲ್ಲಿದ್ದ ವಸ್ತು ಹೋದ ಮತ್ತೆ ಉಪದೃಷ್ಟದ ಮಾತಡಗಿತ್ತು. ಬಣ್ಣವಿಲ್ಲದ ಮತ್ತೆ ಬಂಗಾರವೆಂಬ ಕುರುಹುಂಟೆ ? ಸಕ್ಕರೆ ತುಪ್ಪ ಕರ್ಪುರ ಹೋದ ಮತ್ತೆ, ಘಟವಲ್ಲದ ವಸ್ತು ನಾಮವಿಲ್ಲ. ವಸ್ತು ವಸ್ತುಕದಂತೆ, ಘಟ ಆತ್ಮನಂತೆ, ಉಭಯಕ್ಕೂ ಭಿನ್ನವಿಲ್ಲದೆ ಸಿದ್ಧಿಯಾಗಿ, ಆ ಸಿದ್ಧಿ ಪ್ರಸಿದ್ಧಿಯಾಗಿ, ಆ ಪ್ರಸಿದ್ಧಿ ಪ್ರಸನ್ನವಾಗಿ, ಆ ಪ್ರಸನ್ನ ಪ್ರಸಂಗಕ್ಕೆ ಒಡಲರತುದು, ಗೋಳಕಾಕಾರ ವಿಶ್ವವಿರಹಿತಲಿಂಗವು ತಾನಾದುದು.
--------------
ಸಿದ್ಧಾಂತಿ ವೀರಸಂಗಯ್ಯ
-->