ಅಥವಾ

ಒಟ್ಟು 20 ಕಡೆಗಳಲ್ಲಿ , 10 ವಚನಕಾರರು , 18 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶೀಲಶೀಲವೆಂದೇನೊ, ಪಿಂಡ ಬ್ರಹ್ಮಾಂಡ ಸಂಯೋಗವಾಗದನ್ನಕ್ಕರ ? ಅಷ್ಟತನುವಿನ ಗುಣಧರ್ಮವನರಿದು ಬಿಡದನ್ನಕ್ಕರ ? ಅಕ್ರೋಧ ಸತ್ಯವಚನ ಸಾವಧಾನ ವ್ರತಾನುಗ್ರಹವಾಗದನ್ನಕ್ಕರ ? ``ಅಕ್ರೋಧಃ ಸತ್ಯವಚನಂ ಸಾವಧಾನೋ ದಮಃ ಕ್ಷಮಾ ಅನುಗ್ರಹಶ್ಚ ದಾನಂ ಚ ಶೀಲಮೇವ ಪ್ರಶಸ್ಯತೇ ' ಎಂದುದಾಗಿ, ಕೂಡಲಚೆನ್ನಸಂಗಮದೇವಯ್ಯಾ, ಶೀಲವೆಂಬುದು ಅಪೂರ್ವ.
--------------
ಚನ್ನಬಸವಣ್ಣ
ಸೃಷ್ಟಿಯ ಮೇಲಣ ಕಣಿಯ ತಂದು, ಅಷ್ಟತನುವಿನ ಕೈಯಲ್ಲಿ ಕೊಡಲು, ಅಷ್ಟತನು ತಪ್ಪಿ ಸೃಷ್ಟಿಯ ಮೇಲೆ ಬಿದ್ದಡೆ_ ಕೆಟ್ಟನಲ್ಲಾ, ಅನಾಚಾರಿಯೆಂದು ಮುಟ್ಟರು ನೋಡಾ, ಮುಟ್ಟದ ಭೇದವನು, ವಿಖಂಡಿಸಿದ ಭಾವವನು; ಭಾವವ್ರತಗೇಡಿಗಳು ತಾವೆತ್ತ ಬಲ್ಲರು ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಅಯ್ಯ ನಿನ್ನ ಅಷ್ಟತನುವಿನ ಮಧ್ಯದಲ್ಲಿ ಆ ಪರಬ್ರಹ್ಮನಿಜವಸ್ತುವೆ ನಿನ್ನ ಪಾವನ ನಿಮಿತ್ಯಾರ್ಥವಾಗಿ ಅಷ್ಟಾವರಣಸ್ವರೂಪಿನದಿಂದ ನೆರದಿರ್ಪುದು ನೋಡ. ಅದರ ವಿಚಾರವೆಂತೆಂದಡೆ : ನಿನ್ನ ಸ್ಥೂಲತನುವಿನ ಮಧ್ಯದಲ್ಲಿ ಅರುಹೆ ಗುರುವಾಗಿ ನೆಲಸಿರ್ಪರು ನೋಡ. ನಿನ್ನ ಸೂಕ್ಷ್ಮತನುವಿನ ಮಧ್ಯದಲ್ಲಿ ಸುಜ್ಞಾನವೆ ಲಿಂಗವಾಗಿ ನೆಲಸಿರ್ಪರು ನೋಡ. ನಿನ್ನ ಕಾರಣತನುವಿನ ಮಧ್ಯದಲ್ಲಿ ಸ್ವಾನುಭಾವಜಂಗಮವಾಗಿ ನೆಲಸಿರ್ಪರು ನೋಡ. ನಿನ್ನ ನಿರ್ಮಲತನುವಿನ ಮಧ್ಯದಲ್ಲಿ ಕರುಣಾಮೃತ ಪಾದೋದಕವಾಗಿ ನೆಲಸಿರ್ಪರು ನೋಡ. ನಿನ್ನ ಆನಂದತನುವಿನ ಮಧ್ಯದಲ್ಲಿ ಕೃಪಾಪ್ರಸಾದವಾಗಿ ನೆಲಸಿರ್ಪರು ನೋಡ. ನಿನ್ನ ಚಿದ್ರೂಪತನುವಿನ ಮಧ್ಯದಲ್ಲಿ ಚಿತ್ಪ್ರಕಾಶಭಸಿತವಾಗಿ ನೆಲಸಿರ್ಪರು ನೋಡ. ನಿನ್ನ ಚಿನ್ಮಯತನುವಿನ ಮಧ್ಯದಲ್ಲಿ ಚಿತ್ಕಾಂತೆ ರುದ್ರಾಕ್ಷಿಯಾಗಿ ನೆಲಸಿರ್ಪರು ನೋಡ. ಇಂತು ನಿನ್ನ ಸರ್ವಾಂಗದಲ್ಲಿ ಅಷ್ಟಾವರಣಸ್ವರೂಪಿನಿಂದ ಪರಾತ್ಪರ ನಿಜವಸ್ತು ನೆರದಿರ್ಪುದು ನೋಡ. ನಿನ್ನ ನಿರ್ಮಾಯಚಿತ್ತ ಮಹಾಜ್ಞಾನ ನಿಜದೃಷ್ಟಿಯಿಂದ ನಿನ್ನ ನೀ ತಿಳಿದು ನೋಡ. ಎಂದು ಗಣಸಾಕ್ಷಿಯಾಗಿ ಶ್ರೀಗುರು ನಿಷ್ಕಳಂಕ ಚೆನ್ನಬಸವರಾಜೇಂದ್ರನು ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ಉಪಮಾದೀಕ್ಷೆ ಇಂತುಂಟೆಂದು ನಿರೂಪಂ ಕೊಡುತ್ತಿರ್ದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಕಾಯದ ಜನನಸ್ಥಾನ ಅಷ್ಟತನುವಿನ ಕೊನೆಯ ಮೊನೆಯಲ್ಲಿ, ವಾ[ಕಿ]ನ ಜನನಸ್ಥಾನ ಮನದ ಕೊನೆಯ ಮೊನೆಯಲ್ಲಿ, ಮನದ ಜನನಸ್ಥಾನ ಚಿತ್ತಿನ ಕೊನೆಯ ಮೊನೆಯಲ್ಲಿ, ಚಿತ್ತಿನ ಜನನಸ್ಥಾನ ಆತ್ಮನ ಕೊನೆಯ ಮೊನೆಯಲ್ಲಿ, ಸೌರಾಷ್ಟ್ರ ಸೋಮೇಶ್ವರನ ಜನನಸ್ಥಾನ ``ಸರ್ವಂ ಖಲ್ವಿದಂ ಬ್ರಹ್ಮ ಎಂಬಲ್ಲಿ.
--------------
ಆದಯ್ಯ
ಅಷ್ಟತನುವಿನ ಕಷ್ಟದೊಳಗಿರ್ದು ದೃಷ್ಟಲಿಂಗವ ಕರದಲ್ಲಿ ಪಿಡಿದು ಕೆಟ್ಟ ವಾಕ ಜಿನುಗುತ ಮುಟ್ಟಿ ಲಿಂಗಾನುಭಾವವ ಮಾಡುವ ಭ್ರಷ್ಟಜೀವಿಗಳನೆಂತು ಶರಣರೆನ್ನಬಹುದಯ್ಯಾ? ಹುಟ್ಟಿದ ಯೋನಿಯ ಬಿಟ್ಟು ಕಳೆಯದೆ ನೆಟ್ಟನೆ ಲಿಂಗಶರಣನೆಂದೊಡೆ ಕೆಟ್ಟು ಹೋಯಿತ್ತು ಇವರರುಹು ಗುರುನಿರಂಜನ ಚನ್ನಬಸವಲಿಂಗವ ಮುಟ್ಟದೆ.
--------------
ದೇಶಿಕೇಂದ್ರ ಸಂಗನಬಸವಯ್ಯ
[ಪೃಥ್ವಿ ಸಲಿಲ ಪಾವಕ ಪವನ ಅಂಬರ]ರವಿ ಶಶಿ ಆತ್ಮವೆಂಬ ಅಷ್ಟತನುವಿನ ಭೇದವ ಭೇದಿಸಿ ಶ್ರೋತ್ರ ನೇತ್ರ ತ್ವಕ್ಕು ಘ್ರಾಣ ಜಿಹ್ವೆ [ಎಂಬ] ಪಂಚೇಂದ್ರಿಯವನರಿದು, ವಾಕು ಪಾಣಿ ಪಾದ ಪಾಯು ಗುಹ್ಯವೆಂಬ ಕರ್ಮೇಂದ್ರಿಯಂ[ಗಳ] ತೊರೆದು, ಪ್ರಾಣಾಪಾನ ವ್ಯಾನೋದಾನ ಸಮಾನ ನಾಗ ಕೂರ್ಮ ಕೃಕರ ದೇವದತ್ತ ಧನಂಜಯವೆಂಬ ದಶವಾಯುಗಳ ಸಂಚವನರಿದು, ಮನಬುದ್ಧಿ ಚಿತ್ತಹಂಕಾರವೆಂಬ ಚತುರ್ವಿಧ ಕರಣಂಗಳನೊಂದು ಮಾಡಿ, ಉತ್ಪತ್ತಿ ಸ್ಥಿತಿ ಲಯವೆಂಬ ಕಾಲಮೂಲಾದಿಗಳಂ ಸುಟ್ಟು, ಜ್ಞಾನವನೆ ಬೆಳಗಿ, ಧ್ಯಾನವನೆ ನಿಲಿಸಿ, ಸುಚಿತ್ತದಲ್ಲಿ ಲಿಂಗಾರ್ಚನೆಯ ಮಾಡುವ ಶರಣ. ವ್ಯಾಪಾರಂ ಸಕಲಂ ತ್ಯಕ್ತ್ವಾ ರುದ್ರೋ ರುದ್ರಂ ಸಮರ್ಚಯೇತ್ ಎಂಬ ಶ್ರುತಿಯ ನಿಮ್ಮ ಶರಣರಲ್ಲಿ ಕಾಣಬಹುದು ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಸೃಷ್ಟಿಯ ಮೇಲಣ ಕಣಿಯ ತಂದು, ಅಷ್ಟತನುವಿನ ಕೈಯಲ್ಲಿ ಕೊಟ್ಟು, ಕಟ್ಟಿ ಪೂಜೆಯ ಮಾಡಬೇಕೆಂಬರಯ್ಯಾ. ಅದೆಂತೆಂದಡೆ:ಭೂಮಿಗೆ ಹುಟ್ಟಿ ಶಿಲೆಯಾದ, ಕಲ್ಲುಕುಟಿಕನ ಕೈಯಲ್ಲಿ ರೂಪಾದ, ಗುರುವಿನ ಕೈಯಲ್ಲಿ ಮೂರ್ತಿಯಾದ. ಇಂತೀ ಮೂವರಿಗೆ ಹುಟ್ಟಿದ ಸೂಳೆಯ ಮಗನ ನಾನೇನೆಂದು ಪೂಜೆಯ ಮಾಡಲಿ ? ಅದು ಬಿದ್ದಿತ್ತೆಂದು ಸಮಾಧಿಯ ಹೊಕ್ಕಿಹೆನೆಂಬವನು, ಅಸ್ತ್ರ ಸಮಾಧಿ ಜಲಾಂತರ ವನಾಂತರ ದಿಗಂತರದಲ್ಲಿ ಸತ್ತಡೆ ಕುಂಭಿನಿಪಾತಕ ನಾಯಕನರಕ. ಕೈಯ ಲಿಂಗ ಹೋದಡೆ ಮನದ ಲಿಂಗ ಹೋದುದೆ ?_ಎಂದು ಎತ್ತಿಕೊಂಡು, ಅಷ್ಟವಿಧಾರ್ಚನೆ ಷೋಡಶೋಪಚಾರ ಮಾಡುವುದೆ ವ್ರತವು. ಇದ ಕಟ್ಟುವ ಭೇದವ, ಮುಟ್ಟುವ ಪಥವ ಚೆನ್ನಬಸವಣ್ಣನೊಬ್ಬನೆ ಬಲ್ಲನಲ್ಲದೆ ಮಿಕ್ಕ ಅಭ್ಯಾಸಕ್ಕೆ ಅಗ್ಘವಣಿಯ ಕೊಟ್ಟು ಪರವನೆಯ್ದಿದೆನೆಂಬ ಲಜ್ಜಗೇಡಿಗಳನೇನೆಂಬೆ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಅಷ್ಟತನುವಿನ ನಿಷಾ*ಪರವ ಬಿಟ್ಟು, ಬಟ್ಟಬಯಲಲಿ ನಿಂದ ನಿಜವ ನೋಡಾ. ಹತ್ತೆಂಬ ಪ್ರಾಣವ ಸುತ್ತಿ ಸುಳಿಯಲೀಸದೆ ಬತ್ತಿ ಸುಟ್ಟು ಸಯವಾದ ಘನಚೈತನ್ಯವ ನೋಡಾ. ನಿಷೆ* ನಿಬ್ಬರ ತೊಟ್ಟುಬಿಟ್ಟು ಸಚ್ಚಿದಾನಂದವಾದ ಪರಿಯ ನೋಡಾ. ಕಲಿದೇವರದೇವನ ನಿಲುವಿಂಗೆ ನಮೋ ನಮೋ ಎನುತಿರ್ದೆನು.
--------------
ಮಡಿವಾಳ ಮಾಚಿದೇವ
ಪೃಥ್ವಿ ಸಲಿಲ ಪಾವಕ ಪವನ ಅಂಬರ ರವಿ ಶಶಿ ಆತ್ಮರೆಂಬ ಅಷ್ಟತನುವಿನ ಮೇಲೆ ದೃಷ್ಟಲಿಂಗವ ಕಂಡೆನಯ್ಯ. ಆ ಲಿಂಗದಲ್ಲಿ ತನ್ನ ಮರೆದು ಮುಂದೆ ನಿಶ್ಚೈಸಬಲ್ಲಾತನೆ ನಿಮ್ಮ ಪ್ರಮಥನೆಂಬೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪೃಥ್ವಿಯ ಮೇಲಣ ಕಣಿಯ ತಂದು, ಪೂಜಾವಿಧಾನಕ್ಕೊಳಗಾದ ಅಷ್ಟತನುವಿನ ಕೈಯಲ್ಲಿ ಕೊಟ್ಟು ಮುಟ್ಟಿ ಪೂಜಿಸಬೇಕೆಂಬರು. ಮೂವರಿಗೆ ಹುಟ್ಟಿದಾತನೆಂದು ಪೂಜಿಸುವಿರೊ ? ಭೂಮಿಗೆ ಹುಟ್ಟಿ ಶಿಲೆಯಾಯಿತ್ತು ಕಲ್ಲುಕುಟ್ಟಿಗ ಮುಟ್ಟಿ ರೂಪಾಯಿತ್ತು. ಗುರುಮುಟ್ಟಿ ಲಿಂಗವಾಯಿತ್ತು. ಇದು ಬಿದ್ದಿತ್ತೆಂದು ಸಮಾಧಿಯ ಹೊಕ್ಕೆವೆಂಬರು ಎತ್ತಿಕೊಂಡು ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡುವುದೆ ವ್ರತವು. ಕಟ್ಟುವ ಠಾವನು ಮುಟ್ಟುವ ಭೇದವನು ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣನೆ ಬಲ್ಲ.
--------------
ಚನ್ನಬಸವಣ್ಣ
ಸೃಷ್ಟಿಯ ಮೇಲಣ ಕಣಿಯ ತಂದು ಇಷ್ಟಲಿಂಗವೆಂದು ಮಾಡಿ ಅಷ್ಟತನುವಿನ ಕೈಯಲ್ಲಿ ಕೊಟ್ಟು ಆ ಅಷ್ಟತನುವಿನ ಕಯ್ ತಪ್ಪಿ ಸೃಷ್ಟಿಯ ಮೇಲೆ ಬಿದ್ದಡೆ ಮೆಟ್ಟಿ ಮೆಟ್ಟಿ ಹೂಳಿಸಿಕೊಂಬ ಗುರುದ್ರೋಹಿಗಳ ಮುಖವ ನೋಡಲಾಗದು, ಅವರ ನುಡಿಯ ಕೇಳಲಾಗದು. ಇದಕ್ಕೆ ದೃಷ್ಟಾಂತ, ಗಾರುಡ ಪುರಾಣೇ: ಲಿಂಗಮಧ್ಯೇ ಜಗತ್‍ಸರ್ವಂ ತ್ರೈಲೋಕ್ಯಂ ಸಚರಾಚರಂ ಲಿಂಗಬಾಹ್ಯಾತ್ ಪರಂ ನಾಸ್ತಿ ತಸ್ಮಾಲ್ಲಿಂಗಂ ಪ್ರಪೂಜಯೇತ್ ಇಂತೆಂದುದಾಗಿ, ಇಷ್ಟಲಿಂಗ ಬಿದ್ದಡೆ ಆಚಾರಲಿಂಗ ಬಿದ್ದಿತೆ ? ಆಚಾರಲಿಂಗ ಬಿದ್ದಡೆ ಗುರುಲಿಂಗ ಬಿದ್ದಿತೆ ? ಗುರುಲಿಂಗ ಬಿದ್ದಡೆ ಶಿವಲಿಂಗ ಬಿದ್ದಿತೆ ? ಶಿವಲಿಂಗ ಬಿದ್ದಡೆ ಜಂಗಮಲಿಂಗ ಬಿದ್ದಿತೆ ? ಜಂಗಮಲಿಂಗ ಬಿದ್ದಡೆ ಪ್ರಸಾದಲಿಂಗ ಬಿದ್ದಿತೆ ? ಪ್ರಸಾದಲಿಂಗ ಬಿದ್ದಡೆ ಮಹಾಲಿಂಗ ಬಿದ್ದಿತೆ ? ಅಕಟಕಟ ಷಡ್ವಿಧಲಿಂಗದ ಭೇದವನರಿಯದೆ ಕೆಟ್ಟ ಕೇಡ ನೋಡಾ ! ಅಭ್ಯಾಸವ ಮಾಡುವಲ್ಲಿ ಕೋಲು ಬಿದ್ದಡೆ ತನ್ನ ತಾನೆ ಇರಿದುಕೊಂಡು ಸಾಯಬಹುದೆ ? ಆ ಕೋಲಿನಲ್ಲಿ ಅಭ್ಯಾಸವನೆ ಮಾಡಿ ಸುರಗಿಯ ಮೊನೆಯನೆ ಗೆಲಿಯಬೇಕಲ್ಲದೆ ? ಇದು ಕಾರಣ:ಜಲ ಅಗ್ನಿ ನೇಣು ವಿಷ ಅಸಿಪತ್ರ ಸಮಾಧಿ ಇಂತವರಿಂದ ಪ್ರಾಣಹಿಂಸೆಯ ಮಾಡುವರನು ಅಘೋರನರಕದಲ್ಲಿ ಅದ್ದಿ ಅದ್ದಿ ಇಕ್ಕುವ ನಮ್ಮ ಕೂಡಲಸಂಗಮದೇವ.
--------------
ಚನ್ನಬಸವಣ್ಣ
ಧ್ಯಾನ ಧಾರಣ ಸಮಾಧಿಯೆಂತೆಂದಡೆ ಸದ್ಗುರುವೆ ಕರುಣಿಪುದು. ಕೇಳಯ್ಯ ಮಗನೆ : ಧ್ಯಾನ ಯೋಗವೆಂತೆಂದಡೆ : ಷಡಾಧಾರಚಕ್ರದೊಳಗೆ ಆಧಾರ ಮೊದಲಾಗಿ ಆಜ್ಞೆ ಕಡೆತನಕ ಇಷ್ಟಲಿಂಗವ ಧ್ಯಾನಿಸಿ ಅರ್ಚಿಸಿ ಪೂಜಿಸಿ ಅಲ್ಲಿ ತ್ರಿಕೂಟ ಸಂಗಮದಲ್ಲಿ ಗಂಗಾ ಯಮುನಾ ಸರಸ್ವತಿ ನದಿಗಳು ಕೂಡಿದ ಠಾವಿನಲ್ಲಿ ಪ್ರಮಥಗಣಂಗಳು ಮೊದಲಾಗಿ ಅಲ್ಲಿ ಮಜ್ಜನವ ನೀಡುತ್ತಿಹರು. ಅಲ್ಲಿ ಸೂರ್ಯಪೀಠದ ಮೇಲೆ ಗುರುವು ಮೂರ್ತವ ಮಾಡಿರಲು ಅವರ ಪಾದಾರ್ಚನೆಯಂ ಮಾಡಿ, ಪಾದೋದಕದ ನದಿಗಳಲ್ಲಿ ಸ್ನಾನವ ಮಾಡಿ ಅವರ ಸಂಗಡ ಏಳನೆಯ ಮಂಟಪಕ್ಕೆ ಹೋಗಿ ಅಲ್ಲಿ ಪಶ್ಚಿಮಚಕ್ರದಿಂದ ನಿರಂಜನಜಂಗಮವು ಶಿಖಾಚಕ್ರದಲ್ಲಿರ್ದ ಬಸವಾದಿ ಪ್ರಮಥರು ಮೊದಲಾದವರು ಬಿಜಯಮಾಡಿ, ಅಲ್ಲಿ ಅಸಂಖ್ಯಾತ ಪ್ರಮಥರು, ನೂತನ ಗಣಂಗಳು ಸಹವಾಗಿ ಲಿಂಗಾರ್ಚನೆಯ ಮಾಡುತ್ತಿಹರು. ಆ ಲಿಂಗಾರ್ಚನೆ ಎಂತೆಂದಡೆ : ಮೊದಲು ಚಿದ್ಭಸ್ಮವನೆ ಧರಿಸಿ, ಆನಂದೋದಕದಿಂದ ಲಿಂಗಕ್ಕೆ ಕ್ರಿಯಾಮಜ್ಜನವ ನೀಡಿ, ಅಷ್ಟತನುವಿನ ಅಷ್ಟಸುಗಂಧವ ಧರಿಸಿ, ಕರಣಂಗಳ ಸಂಚಲವಿಲ್ಲದ ಗುಣತ್ರಯದಕ್ಷತೆಯ ಧರಿಸಿ, ಸಾವಿರದೈವತ್ತು ಪ್ರಣವದ ಪರಿಮಳ ತುಂಬಿರ್ದ ಪುಷ್ಪವ ಧರಿಸಿ, ದಶವಾಯುಗಳ ಗುಣಧರ್ಮಂಗಳ ಜ್ಞಾನಾಗ್ನಿಯೊಳು ನೀಡಿ, ದಶಾಂಗದ ಸದ್ವಾಸನೆಯ ಧೂಪವ ಧರಿಸಿ, ಹೃದಯವೆಂಬ ಪ್ರಣತಿಯಲ್ಲಿ ದೃಢಚಿತ್ತವೆಂಬ ಬತ್ತಿಯನಿರಿಸಿ, ಅರುಹೆಂಬ ತೈಲವನೆರದು, ಮಹಾಜ್ಞಾನವೆಂಬ ಜ್ಯೋತಿಯ ಮುಟ್ಟಿಸಿ ಅದರಿಂದೊದಗಿದ ಏಕಾರತಿ ತ್ರಿಯಾರತಿ ಪಂಚಾರತಿ ಕಡ್ಡಿ ಬತ್ತಿ ಮೊದಲಾದ ಮಹಾಪ್ರಕಾಶದ ದೀಪವ ಧರಿಸಿ, ಕ್ರಿಯಾ ಜ್ಞಾನ ಇಚ್ಫಾ ಆದಿ ಪರ ಚಿತ್‍ಶಕ್ತಿ ಮೊದಲಾದವರು ಆರತಿಯ ಪಿಡಿದಿಹರು. ಆ ಮೇಲೆ ಪಾದತೀರ್ಥವ ಸಲಿಸಿ, ಮತ್ತೆ ಐವತ್ತು ದಳದಲ್ಲಿರ್ದ ಐವತ್ತು ರುದ್ರಕನ್ನಿಕೆಯರು ಅಡುಗೆಯ ಮಾಡಿ, ಅವರಿಗೆ ಇಚ್ಫಾಪದಾರ್ಥವ ನೀಡುತ್ತಿಹರು. ಅವರ ಒಕ್ಕುಮಿಕ್ಕ ಪ್ರಸಾದವನುಂಡು ಫಲದಾಕಾಂಕ್ಷೆಗಳಿಲ್ಲದೆ ಉಲುಹಡಗಿದ ನಿಜ ಪ್ರಭಾಲತೆ ಪರ್ಣದ ವೀಳ್ಯವನಿತ್ತು ಅವರ ತಾಂಬೂಲ ಪ್ರಸಾದವ ಕೊಂಡು ಪರಿಣಾಮಿಸಿ ಮನ ಭಾವಂಗಳಿಂದ ಪ್ರತ್ಯಕ್ಷವಾಗಿ ಕಂಡು, ಧ್ಯಾನಿಸುವುದೇ ಧ್ಯಾನ ಯೋಗ. ಇನ್ನು ಧಾರಣಯೋಗದ ವಿವರ : ಕರದೊಳಗೆ ಇಷ್ಟಲಿಂಗವ ಮೂರ್ತವ ಮಾಡಿಸಿ ಮನದೊಳಗೆ ಪ್ರಾಣಲಿಂಗವ ಮೂರ್ತವ ಮಾಡಿಸಿ ಭಾವದೊಳಗೆ ತೃಪ್ತಿಲಿಂಗವ ಮೂರ್ತವ ಮಾಡಿಸಿ ಕರ ಮನ ಭಾವದೊಳಗೆ ಪ್ರತ್ಯಕ್ಷವಾಗಿ ಕಂಡು ಧರಿಸಿಕೊಂಡಿಪ್ಪುದೀಗ ಧಾರಣಯೋಗ. ಇನ್ನು ಸಮಾಧಿಯೋಗದ ವಿವರ : ಆ ಇಷ್ಟ ಪ್ರಾಣ ಭಾವಲಿಂಗವ ಏಕವ ಮಾಡಿ, ಅಲ್ಲಿ ಐಕ್ಯವಾಗಿಪ್ಪುದೀಗ ಸಮಾಧಿಯೋಗ ಎಂದರುಹಿದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಪೃಥ್ವಿ ಅಪ್ಪು ತೇಜ ವಾಯು ಆಕಾಶ ಸೂರ್ಯ ಚಂದ್ರ ಆತ್ಮರೆಂಬ ಅಷ್ಟತನುವಿನ ಮೇಲೆ ದೃಷ್ಟಲಿಂಗವ ಕಂಡು ಬಟ್ಟಬಯಲಲಿಂಗವನಾಚರಿಸುತಿರ್ದೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಲಿಂಗ ಬಿದ್ದರೆ ಸಮಾಧಿಯ ಕೊಂಡೆನೆಂಬಿರಿ. ಗುರು ಸತ್ತರೇಕೆ ಸಮಾಧಿಯ ಕೊಳ್ಳರಣ್ಣಾ. ಬಲ್ಲರೆ ಹೇಳಿ, ಅರಿಯದಿದ್ದರೆ ಕೇಳಿ. ಪೃಥ್ವಿಯಲ್ಲಿ ಹುಟ್ಟಿದ ಕಣಿಯನೆ ತಂದು, ಅಷ್ಟತನುವಿನ ಕೈಯಲ್ಲಿ ಕೊಡಲು, ಇದ ಮುಟ್ಟಿ ಪೂಜಿಸಲಿಕ್ಕೆ, ನಾ ಹೇಗೆ ಪೂಜಿಸಲಯ್ಯಾ ? ಲಿಂಗ ಮೂವರಿಗೆ ಹುಟ್ಟಿತ್ತು. ಪೃಥ್ವಿಯಲ್ಲಿ ಶಿಲೆಯಾಯಿತ್ತು, ಬಿನ್ನಾಣದ ಕೈಯಲ್ಲಿ ರೂಪಾಯಿತ್ತು, ಗುರುವಿನ ಕೈಯಲ್ಲಿ ಮೋಕ್ಷವಾಯಿತ್ತು. ಈ ಲಿಂಗ ಬೀಳಬಲ್ಲುದೆ ? ಪೃಥ್ವಿ ತಾಳಬಲ್ಲುದೆ ? ಲಿಂಗ ಬಿದ್ದೀತೆಂದು ಷೋಡಶೋಪಚಾರವ ಮಾಡಲಾಗದು. ಲಿಂಗದ ಕೂಡ ಸಮಾಧಿಯ ಕೊಂಡೆನೆಂತೆಂಬ ಭಕ್ತರಿಗೆ ನಾಯಕನರಕ ತಪ್ಪದೆಂದ, ನಿಃಕಳಂಕ ಮಲ್ಲಿಕಾರ್ಜುನ.
--------------
ಮೋಳಿಗೆ ಮಾರಯ್ಯ
ಅಯ್ಯಾ, ಮತ್ತೊಂದು ವೇಳೆ ಅಷ್ಟತನುವಿನ ಮೂಲಹಂಕಾರವನೆತ್ತಿ ಚರಿಸಿತಯ್ಯ. ಅದೆಂತೆಂದಡೆ : ಆ ಮೂಲಹಂಕಾರವೆ ಷೋಡಶಮದವಾಗಿ ಬ್ರಹ್ಮನ ಶಿರವ ಕಳೆಯಿತಯ್ಯ, ವಿಷ್ಣುವನು ಹಂದಿಯಾಗಿ ಹುಟ್ಟಿಸಿತಯ್ಯ. ಇಂದ್ರನ ಶರೀರವ ಭವದ ಬೀಡು ಯೋನಿದ್ವಾರವ ಮಾಡಿತಯ್ಯ. ಸೂರ್ಯ ಚಂದ್ರರ ಭವರಾಟಾಳದಲ್ಲಿ ತಿರಿಗಿಸಿತಯ್ಯ. ಆ ಮದಂಗಳಾವುವೆಂದಡೆ : ಕುಲಮದ, ಛಲಮದ, ಧನಮದ, ಯೌವನಮದ, ರೂಪುಮದ, ವಿದ್ಯಾಮದ, ರಾಜ್ಯಮದ, ತಪಮದ, ಸಂಸ್ಥಿತ, ತೃಣೀಕೃತ, ವರ್ತಿನಿ, ಕ್ರೋಧಿನಿ, ಮೋಹಿನಿ, ಅತಿಚಾರಿಣಿ, ಗಂಧಚಾರಿಣಿ, ವಾಸಿನಿ ಎಂಬ ಷೋಡಶಮದದ ಸಂದಿನಲ್ಲಿ ಎನ್ನ ಕೆಡಹಿ, ಬಹುದುಃಖದಲ್ಲಿ ಅಳಲಿಸಿತಯ್ಯ. ಗುರುವೆ, ಇಂಥ ದುರ್ಜೀವ ಮನದ ಸಂಗವ ತೊಲಗಿಸಿ ಕಾಯಯ್ಯ ಕರುಣಾಳುವೆ, ಸಚ್ಚಿದಾನಂದಮೂರ್ತಿ ಭವರೋಗವೈದ್ಯನೆ ಶ್ರೀಗುರುಲಿಂಗಜಂಗಮವೆ, ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ ಮಹಾಶ್ರೀಗುರುಸಿದ್ಧಲಿಂಗೇಶ್ವರ.
--------------
ಬಸವಲಿಂಗದೇವ
ಇನ್ನಷ್ಟು ... -->