ಅಥವಾ

ಒಟ್ಟು 12 ಕಡೆಗಳಲ್ಲಿ , 9 ವಚನಕಾರರು , 11 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರ್ಮ ನಾಸ್ತಿ ಎಂಬೆ, ಅಸ್ತಿ ನಾಸ್ತಿ (ಅನಾಸ್ತಿ ?) ಎಂಬೆ. ಜಾÕನ [ದ] ಕೊಬ್ಬಿನಲಿ ಉಲಿವೆ, ಉಲಿದಂತೆ ನಡೆವೆ. ಸಂಗಡ ಸಹಿತ ಕರಸ್ಥಲಕ್ಕೆ ಬಂದು, ನೀನು ಬಯಲಾಗೆಯಲ್ಲಾ, ಎನ್ನನೂ ಬಯಲು ಮಾಡೆ_ಗುಹೇಶ್ವರಾ,
--------------
ಅಲ್ಲಮಪ್ರಭುದೇವರು
ಮುನಿಯದಿರಿ ಮುನಿಯದಿರಿ ನಿಮಗೊಂದು ಯುಕ್ತಿಯ ಹೇಳಿಹೆನು, ಅದೆಂತೆಂದಡೆ: ನೀವೆನ್ನ ವಂಶೀಭೂತರಾದ ಕಾರಣ_ನಿಮ್ಮ ಹೆಚ್ಚು ಕುಂದು ಎನ್ನದಾಗಿ, ನಿಮ್ಮ ಅಸ್ತಿ ನಾಸ್ತಿ ಎನ್ನದಾಗಿ, ನಿಮ್ಮ ಹಾನಿವೃದ್ಧಿ ಎನ್ನದಾಗಿ. ಹಾವ ಹಡದವರು ಬೇಲಿಯ ಹೊಗುವರೆ ಹೋಹುದೆ ಅಯ್ಯಾ ? ವ್ಯಾಧನು ಸೂಸಲ ಚೆಲ್ಲಿ ಜಂತ್ರವ ಹಣ್ಣಿ, ಅಡಿಗಲ್ಲನೊಡ್ಡಿ ಹೋದಬಳಿಕ ಸೂಸಲ ಕಂಪಿಗೆ ಹೆಗ್ಗಣ ಬಂದು ಬಿದ್ದಂತೆ ಬಿದ್ದಿರಲ್ಲಾ ಮಾಯದ ಬಲೆಯಲ್ಲಿ ! ಕೋಪವೆಂಬ ಅಡಗನೊಡ್ಡಿ ತಾಪವೆಂಬ ಅರೆಗಲ್ಲನಿರಿಸಿ ಹುಸಿಯೆಂಬ ಮೀಟುಗವಣೆಯ ಜಂತ್ರಿಸಿ, ಹೊನ್ನು ಹೆಣ್ಣು ಮಣ್ಣೆಂಬ ಅಡಿಗಲ್ಲನೊಡ್ಡಿ ಕೆಡಹಿದನಲ್ಲಾ ನಿಷ್ಕರುಣಿ ಮುಕ್ಕಣ್ಣ ವ್ಯಾಧನು ! ಅದೆಂತೆಂದಡೆ, ಶಿವರಹಸ್ಯದಲ್ಲಿ: ``ನಿಸ್ಸಂಗತ್ವಂ ನಿರಾಭಾರೀ ನಿಸ್ಸೀಮಂ ನಿರುಪಾಧಿಕಂ ನಿರ್ದೇಹಂ ನಿರ್ಮಲಂ ನಿತ್ಯಂ ಸತ್ಯಂ ಜಂಗಮಲಕ್ಷಣಂ ಇಂತೆಂಬ ಶ್ರುತ್ಯರ್ಥವ ಕೇಳದೆ, ಜಂಗಮವಾಗಿ ಸುಳಿವ ಮರುಳುಗಳಿರಾ ಕೇಳಿರೆ, ಇದಕ್ಕೆ ಮತ್ತೆಯೂ ಶ್ರುತಿ: ``ಸುಖಂ ಚ ಬಿಂದುಮಾತ್ರೇಣ ದುಃಖಂ ಪರ್ವತ ಏವ ಚ ಹರಿಣೀಪಾದಮಾತ್ರೇಣ ಬಂಧನಂ ತು ಜಗತ್ರಯಂ ಇಂತೆಂಬ ಶ್ರುತಿಗೊಳಗಾಗದೆ ಹೊನ್ನು ಹೆಣ್ಣು ಮಣ್ಣಿನಾಸೆಯಂ ಬಿಟ್ಟು ಕೋಪ ತಾಪಮಂ ಬಿಟ್ಟು, ಭ್ರಾಂತು ಭ್ರಮೆಯಂ ಬಿಟ್ಟು ಜಂಗಮವಾಗಬೇಕು ಕಾಣಿರೆ ಮರುಳುಗಳಿರಾ. ಇಂತೀ ಷಡುಲೋಭದ ರುಚಿ ಹಿಂಗಿ ಜಂಗಮವಾದಲ್ಲದೆ ಭವ ಹಿಂಗದು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಭಕ್ತಿಯುಕ್ತಿ ಸತ್ಯ ಸಮತೆಯ ಹೇಳಿ ಭೃತ್ಯನುತ್ತಮ ನೀವು ಕರ್ತುವೆಂದು ಅವರುವ ಅಸ್ತಿ ನಾಸ್ತಿಯನರಿಯದೆ ಕತ್ತರಿಯ ಮೊನೆಯಂತೆ ಹೊಕ್ಕು ಕೆಡಹುವ ಕೃತ್ತಿಮರು ತೂತಿನ ಅತ್ತಣವರು, ಅತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಅಸ್ತಿ ಭಾತಿಯೆಂಬ ಬ್ಥಿತ್ತಿಯ ಮೇಲೆ, ಕ್ರೀ ನಾಮ ರೂಪವೆಂಬ ಚಿತ್ರ ಬರೆಯಿತ್ತು. ಇಲ್ಲದ ಬ್ಥಿತ್ತಿಯ ಮೇಲೆ ಉಂಟೆಂಬ ಚಿತ್ರದಂತಿರ್ದಿತ್ತು. ಅದೆಂತೆಂದಡೆ; ಅಸ್ತಿ ಭಾತಿ ಪ್ರಿಯಂ ರೂಪಂ ನಾಮ ಚೇತ್ಯಂಶಪಂಚಕಂ ಆದ್ಯತ್ರಯಂ ಬ್ರಹ್ಮರೂಪಂ ಮಾಯಾರೂಪಂ ತತೋದ್ವಯಂ ಎಂದುದಾಗಿ- ಎನಗಿದೇ ಮಾಯೆಯಾಗಿ ಕಾಡಿತ್ತು, ಕೂಡಲಸಂಗಮದೇವಾ.
--------------
ಬಸವಣ್ಣ
ಅಸ್ತಿ ಭಾತಿ[ಪ್ರಿ]ಯವೆಂಬ ತ್ರಿವಾಕ್ಯದಿಂದಲ್ಲವಾದುದಲ್ಲ. ಅಪ್ರಮಾಣ ಅಗೋಚರ ಆತ್ಯತಿಷ್ಠದ್ದಶಾಂಗುಲ ಅಭೇದ್ಯದಿಂ ನಾಮರೂಪುಗಳುಂಟಾದುದಲ್ಲ. ಇದು ಕಾರಣ ಸ್ತ್ರೀಯಲ್ಲ ಪುರುಷನಲ್ಲ ನಪುಂಸಕನಲ್ಲ ಮೂರ್ತನಲ್ಲ ಭಾವಿಯಲ್ಲ ಪ್ರಾಣಿಯಲ್ಲ ಇದಕ್ಕೆ ಶ್ರುತಿ: ನೈವಂಚೋವಾಚಾಸ್ತ್ರೀಯಾನ್ ಭೂಮಾನಚನಸ್ತ್ರೀ ಪುಮಾನ್ನಪುಮಾನ್ ಪ್ರಮಾನ್ನಪ್ರಮಾನ್ ಭವಾನ್ ಯೇನೇದಂ ವದತಿ ಶತ್ವನಃ ಇತಿ ಬ್ರಹ್ಮಾ ಎಂಬ ಉಪನಿಷದುಕ್ತಿಯನರಿದು ಅರಿವೆ ತಾನಾಗಿ ಲಿಂಗದಲ್ಲಿ ಸಂದುಭೇದವಿಲ್ಲದೆ ಇಪ್ಪರಯ್ಯಾ ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣರು.
--------------
ಆದಯ್ಯ
ಮದ ಮೋಹ ರಾಗ ವಿಷಾದ ತಾಪ ಶೋಕ ವೈಚಿಂತೆಯೆಂಬ ಸಪ್ತ ಮಲವನು, ಸಮತಾಜಲದಿಂದೆ ತೊಳೆದು ಭಾವನಿರ್ಮಲವ ಮಾಡಿ ಪರಶಿವಾನಂದಸ್ವರೂಪವು ಸಂಬಂಧವಾದ ಬಳಿಕ ಭಾವಲಿಂಗೈಕ್ಯ ತಾನೆ ನೋಡಾ. ತನುವ್ಯಸನ ಮನವ್ಯಸನ ಧನವ್ಯಸನ ಉತ್ಸಾಹವ್ಯಸನ ರಾಜ್ಯವ್ಯಸನ ವಿಶ್ವಾಸವ್ಯಸನ ಸೇವಕವ್ಯಸನವೆಂಬ ಸಪ್ತವ್ಯಸನವನು ವಿನಯಜಲದಿಂದೆ ತೊಳೆದು ಮನ ನಿರ್ಮಲ ಮಾಡಿ ಪರಶಿವನ ಚಿತ್ಸ್ವರೂಪ ಸಂಯೋಗವಾದ ಬಳಿಕ ಪ್ರಾಣಲಿಂಗೈಕ್ಯ ತಾನೇ ನೋಡಾ. ರಸ ರುಧಿರ ಮಾಂಸ ಮೇದಸ್ಸು ಅಸ್ತಿ ಮಜ್ಜೆ ಶುಕ್ಲವೆಂಬ ಸಪ್ತಧಾತುವಿನ ಕಳಂಕವ ಕರುಣಜಲದಿಂದೆ ತೊಳೆದು ತನು ನಿರ್ಮಲ ಮಾಡಿ ಪರಶಿವನ ಸತ್ತುರೂಪ ಸಮರಸವಾದ ಬಳಿಕ ಇಷ್ಟಲಿಂಗೈಕ್ಯ ತಾನೆ ನೋಡಾ. ಇದು ಕಾರಣ ಗುರುವಿನಿಂದುದಿಸಿ ಅಷ್ಟಾವರಣದಲ್ಲಿ ಬೆಳೆದು ಮಹಾಲಿಂಗೈಕ್ಯ ಮಹಾತ್ಮನಿಗೆ ಸಕಲ ಪ್ರಕೃತಿಯೊಂದುವೇಳೆ ಬೆರಸಲುಂಟೆ ? ಭೂಮಲದೊಳೆದ ಜಲ ಶರಧಿಯೋಳ್ವೆರಸಿ ಶರಧಿಯಾದಂತೆ ಶರಣ ಜ್ಞಾನಶರಧಿಯೊಳ್ವೆರೆದ ಕರಣವೆಲ್ಲ ಕಿರಣಮಯವಾಗಿ ಕೂಡೆ ಗುರುನಿರಂಜನ ಚನ್ನಬಸವಲಿಂಗವ ಬೆರಸಿ ಬೇರಿಲ್ಲದಿರ್ದವು.
--------------
ದೇಶಿಕೇಂದ್ರ ಸಂಗನಬಸವಯ್ಯ
ಆಸ್ತಿ ಜಾಯತೇ ವಿಪರಿಣಮತೇ ವಿವರ್ಧತೇ ಅಪಕ್ಷೀಯತೇ ವಿನಶೃತಿ ಎಂಬ ಷಡ್ಭಾವವಿಕಾರಂಗಳು ಕೆಡುವುದಕ್ಕೆ ವಿವರವೆಂತೆಂದಡೆ; ಶ್ರೀಗುರುವಿನ ಕೃಪಾಗರ್ಭದ ಮಧ್ಯದಲ್ಲಿರ್ದವ ನಾನಹುದೆಂದರಿದಾಗವೆ ಅಸ್ತಿ ಎಂಬ ವಿಕಾರ ಕೆಟ್ಟಿತ್ತು. ಗುರುಕರದಲ್ಲಿ ಜನಿಸಿದೆನಾಗಿ ನಾ ಮಾಯಾಯೋನಿಜನವಲ್ಲವೆಂದು ಅರಿದಾಗವೆ ಜಾಯತೇ ಎಂಬ ವಿಕಾರ ಕೆಟ್ಟಿತ್ತು. ಗುರುವಿನ ಸದ್ಭಾವಜಾತಲಿಂಗವನಂಗದಲ್ಲಿ ಧರಿಸಿ ಪರಮಪರಿಣಾಮದಲ್ಲಿ ಪರಿಣಮಿಸುತ್ತಿರ್ದ ಕಾರಣ ವಿಪರಿಣಮತೇ ಎಂಬ ವಿಕಾರ ಕೆಟ್ಟಿತ್ತು. ಗುರುವಿನ ಆಚಾರ ಜ್ಞಾನಮಾರ್ಗದಲ್ಲಿ ಆಚರಿಸಿ ಬೆಳೆವುತ್ತಿದ್ದ ಕಾರಣ ವಿವರ್ಧತೇ ಎಂಬ ವಿಕಾರ ಕೆಟ್ಟಿತ್ತು. ದೇಹೇಂದ್ರಿಯಾದಿಗಳೆಲ್ಲ ಲಿಂಗದಲ್ಲಿ ಅಡಗಿ ಶಿಥಿಲವಾಗಲು ಅಪಕ್ಷೀಯತೇ ಎಂಬ ವಿಕಾರ ಕೆಟ್ಟಿತ್ತು. ಲಿಂಗಾಂಗದ ಐಕ್ಯವನರಿದು ಲಿಂಗದಲ್ಲಿ ಲೀಯವಾಗಲು ವಿನಶ್ಯತಿ ಎಂಬ ವಿಕಾರ ಕೆಟ್ಟಿತ್ತು. ಇಂತೀ `ಲಿಂಗಸಂಗದಿಂದ ಷಡ್ಭಾವವಿಕಾರಂಗಳಳಿದು ನಿಮ್ಮವಿಕಾರವೆಡೆಗೊಂಡಿತ್ತು' ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮಭಕ್ತಂಗೆ.
--------------
ಸ್ವತಂತ್ರ ಸಿದ್ಧಲಿಂಗ
ಕಾಯವೆಂಬ ಕದಳಿಯ ಹೊಕ್ಕು ಜೀವಪರಮರ ನೆಲೆಯನರಿದು, ರಸ ರುಧಿರ ಮಾಂಸ ಮಜ್ಜೆ ಮಿದುಳು ಅಸ್ತಿ ಶುಕ್ಲ ಈ ಸಪ್ತಧಾತುಗಳ ಸಂಚವ ತಿಳಿದು, ಮತ್ತೆ ಮನ ಪವನ ಬಿಂದುವನೊಡಗೂಡಿ ಉತ್ತರಕ್ಕೇರಿ ನೋಡಲು ಬಟ್ಟಬಯಲಾಯಿತ್ತು. ಆ ಬಯಲಲ್ಲಿ ನಿಂದು, ನಿರಾಳದೊಳಗಾಡಿ ಮಹಾಬೆಳಗನೆ ಕೂಡಿ ನಾ ನಿಜಮುಕ್ತಳಾದೆನಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಅಸ್ತಿ ಭಾತಿಯೆಂಬ ಎನ್ನ ಸತ್ಯದಲ್ಲಿ, ನಾಮ ರೂಪೆಂಬ ಹುಸಿಯೆಂತು ಜನಿಸಿತೆಂದರಿಯೆನಯ್ಯಾ! ಇಲ್ಲದ ಹೆಸರುಳ್ಳ ಚಿತ್ತಾರದಂತೆ, ದೇಹ ನಾಮವೀತೆರನೆಂದರಿಯದೆ ತೊಳಲಿ ಬಳಲುತ್ತಿದ್ದೆನಯ್ಯಾ, ಕೂಡಲಚೆನ್ನಸಂಗಯ್ಯಾ, ಸಂಸಾರಬಂಧನಯೆನಗಿದೇ ಕಂಡಯ್ಯಾ.
--------------
ಚನ್ನಬಸವಣ್ಣ
ಭಕ್ತ ಮಾಡಿಹನೆಂಬಿರಿ, ಭಕ್ತ ಮಾಡಿಹನೆಂಬಿರಿ;_ ಭಕ್ತ ಮಾಡಿಹನೆಂದು ಗೆಗ್ಗೆವಾಯ್ದುಕೊಳ್ಳಲಾಗದು. ಅದೇಕೆಂದಡೆ: ಭಕ್ತನು ಅಸ್ತಿ ನಾಸ್ತಿ ಅರಿಯದನ್ನಕ್ಕ, ಉಂಟು ಇಲ್ಲವೆಂದು ತಿಳಿಯದನ್ನಕ್ಕ ಮಾಡಿತ್ತೇ ಗೆಲ್ಲ ಎಂದುಕೊಂಡಡೆ ಆ ಸುಳುಹಿಂಗೆ ಭಂಗ. ತೂಳವೆತ್ತಿದಾತನು ಇರಿದುಕೊಂಬುದು, ಭೂತದ ಗುಣವಲ್ಲದೆ ವೀರದ ಗುಣವಲ್ಲ. ಸ್ವೇಚ್ಛಾತುರದ ಮಾಟವೊ ? ಮುಕ್ತ್ಯಾತುರದ ಮಾಟವೊ ? ರಿಣಾತುರದ ಮಾಟವೊ ?_ಎಂಬುದ ತಿಳಿಯಬೇಕಲ್ಲದೆ ಕೊಂಡುದೆ ಕೋಳಾಗಿ ಹೋಹನ್ನಕ್ಕರ ಜಂಗಮಲಕ್ಷಣವಲ್ಲ. ತುಂಬಿದ ಬಂಡಿಯ ಹಾರವನರಿದು ನಡೆಸುವನ ಜಾಣಿಕೆಯಂತಿರಬೇಡಾ ಲಿಂಗಜಾಣರು ? ಸ್ವೇಚ್ಛಾತುರವನಾಚರಿಸುವ ಜಂಗಮಕ್ಕೆ ಭವಂ ನಾಸ್ತಿ ಮುಕ್ತ್ಯಾತುರವನಾಚರಿಸುವ ಜಂಗಮಕ್ಕೆ ಭವ ಹಿಂಗದು. ರಿಣಾತುರವನಾಚರಿಸುವ ಜಂಗಮಕ್ಕೆ ಯಮದಂಡನೆ. ಹರಿದು ಬರಲಿ ಕಿತ್ತು ಬರಲಿ ಅವನೇನಾದರೂ ಆಗಲಿ ನಾನು ತೆಕ್ಕೊಂಡು ಹೋದೆನೆಂಬನ್ನಕ್ಕರ ಜಂಗಮಲಕ್ಷಣವಲ್ಲ,_ ಜಂಗಮ ಕರುಣರಸಭರಿತನಾಗಿ, ಭಕ್ತನಲ್ಲಿ ಜಂಗಮದಲ್ಲಿ ಭಾವಭೇದವಿಲ್ಲಾಗಿ. ಇಂತೀ ಕ್ರಮಾದಿಕ್ರಮಂಗಳನರಿದು ಸುಳಿಯದಿದ್ದಡೆ ನಿರ್ವಯಲಸ್ಥಲಕ್ಕೆ ದೂರ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ತನ್ನ ಶರೀರದ ಗುಣವನಳಿದು, ಕರಣೇಂದ್ರಿಯದ ಗುನ್ಮದ ಗಲಗ ಕಿತ್ತು, ಉಚ್ಚೆಯ ಬಚ್ಚಲ ಕೊಚ್ಚೆಯ ಕೊಳಕ ತೊಡೆದು, ತ್ರಿಸಂಧಿಯಲ್ಲಿ ತ್ರಿಗುಣದ ತ್ರಿಕಾಲವ ಭೇದಿಸುತ್ತ, ತನ್ನಯ ಕರಕಮಲದಲ್ಲಿ ಒದಗಿದ ಶಿಷ್ಯವರ್ಗದ ಅಸ್ತಿ ನಾಸ್ತಿಯನರಿತು ಬಿಡುಮುಡಿಯಲ್ಲಿ ಇರಬೇಕು. ಹೀಗಲ್ಲದೆ, ತೆಂಗನೇರಿದ ಲಂಡನಂತೆ ಎಲ್ಲವು ತನಗೆ ಸರಿಯೆಂದಡೆ, ಬಲ್ಲವರೊಪ್ಪುವರೆ ಅಯ್ಯಾ ಅವನ ಗುರುತನದ ಇರವು? ಬಟ್ಟೆಯ ಬಡಿದು ಉಂಬವಂಗೆ ಸತ್ಕರ್ಮದ ಜೀವದ ದಯವುಂಟೆ ಅಯ್ಯಾ? ಇದು ಕಾರಣದಲ್ಲಿ, ಸದ್ಭಾವ ಗುರುವಾಗಬೇಕು, ನಿರ್ಮಲಾತ್ಮಕ ಶಿಷ್ಯನಾಗಬೇಕು. ಇಂತೀ ಉಭಯವನರಿತಲ್ಲಿ ಉರಿ ಕರ್ಪುರದಿರವಿನಂತಾಗಬೇಕು, ಸದಾಶಿವಮೂರ್ತಿಲಿಂಗವನರಿವ ಭೇದಕ್ಕೆ.
--------------
ಅರಿವಿನ ಮಾರಿತಂದೆ
-->