ಅಥವಾ

ಒಟ್ಟು 14 ಕಡೆಗಳಲ್ಲಿ , 10 ವಚನಕಾರರು , 14 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೈಯಲ್ಲಿ ಮುಟ್ಟಿದ ಪದಾರ್ಥ ಕೈಯೊಳಗೆ ಐಕ್ಯ, ಕಂಗಳು ತಾಗಿದ ಪದಾರ್ಥ ಕಂಗಳೊಳೈಕ್ಯ, ನಾಲಗೆ ತಾಗಿದ ಪದಾರ್ಥ ನಾಲಗೆಯೊಳಗೈಕ್ಯ. ನೀಡುವ ಪರಿಚಾರಕರು ಬೇಸತ್ತರಲ್ಲದೆ ಆರೋಗಣೆಯ ಮಾಡುವ ದೇವನೆತ್ತಲೆಂದರಿಯನು. ಬ್ರಹ್ಮಾಂಡವನೊಡಲೊಳಗಡಗಿಸಿಕೊಂಡು ಬಂದ ದೇವಂಗೆ ಆರೋಗಣೆಯ ಮಾಡಿಸಿಹೆನೆಂಬ ಅಹಂಕಾರದಲ್ಲಿ ಇದ್ದೆನಾಗಿ, ನಾನು ಕೆಟ್ಟ ಕೇಡನೇನೆಂಬೆನಯ್ಯಾ ಕೂಡಲಸಂಗಮದೇವರ ತೃಪ್ತಿಯ ತೆರನ ಬಲ್ಲಡೆ ಹೇಳಾ ಮಡಿವಾಳ ಮಾಚಯ್ಯ.
--------------
ಬಸವಣ್ಣ
ಶರಣೆಂದು ಪಾದವ ಹಿಡಿದಿಹೆನೆಂದಡೆ ಚರಣದ ನಿಲವು ಕಾಣಬಾರದು, ಕುರುಹುವಿಡಿದೆಹೆನೆಂದಡೆ ಕೈಗೆ ಸಿಲುಕದು, ಬೆರಸಿ ಹೊಕ್ಕೆಹೆನೆಂದಡೆ ಮುನ್ನವೆ ಅಸಾಧ್ಯ. ಅಕಟಕಟಾ, ಅಹಂಕಾರದಲ್ಲಿ ಕೆಟ್ಟೆನಲ್ಲಾ, ಗುರುವೆ, ಎನ್ನ ಪರಮಗುರುವೆ ಬಾರಯ್ಯಾ, ಅರಿಯದ ತರಳನ ಅವಗುಣವ ನೋಡುವರೆ ಕೂಡಲಸಂಗಮದೇವಾ
--------------
ಬಸವಣ್ಣ
ನಾನೆಂಬ ಅಹಂಕಾರದಲ್ಲಿ ನಾನುಂಡೆನಾದಡೆ, ಎನಗದೆ ಭಂಗ. ಸ್ತುತಿ_ನಿಂದೆಗೆ ನೊಂದೆನಾದಡೆ ಅಂಗೈಯಲ್ಲಿರ್ದ ಗುಹೇಶ್ವರಲಿಂಗಕ್ಕೆ ದೂರ ಕಾಣಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಅರಸಿನ ಭಕ್ತಿ, ಅಹಂಕಾರದಲ್ಲಿ ಹೋಯಿತ್ತು. ವೇಶಿಯ ಭಕ್ತಿ, ಎಂಜಲ ತಿಂದಲ್ಲಿ ಹೋಯಿತ್ತು. ಬ್ರಾಹ್ಮಣನ ಭಕ್ತಿ, ಮುಟ್ಟುತಟ್ಟಿನಲ್ಲಿ ಹೋಯಿತ್ತು. ಶೀಲವಂತನ ಭಕ್ತಿ, ಪ್ರಪಂಚಿನಲ್ಲಿ ಹೋಯಿತ್ತು. ಸೆಟ್ಟಿಯ ಭಕ್ತಿ, ಕುಟಿಲವ್ಯಾಪಾರದಲ್ಲಿ ಹೋಯಿತ್ತು. ಇಂತಿವರ ಭಕ್ತಿಗೆ ಊರಿಂದ ಹೊರಗಣ ಡೊಂಬನೆ ಸಾಕ್ಷಿ ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಮದ್ದ ತಿನ್ನಬೇಕಾದರೆ ವೈದ್ಯನಿದ್ದೆಡೆಗೆ ಹೋಗಿ, ಹಣ ಹೊನ್ನು ಕೊಟ್ಟು, ದೈನ್ಯಂಬಟ್ಟು, ಮದ್ದ ತಿಂಬರು ನೋಡಯ್ಯ. ಇದು ಶುದ್ಧಸಿದ್ಧಪ್ರಸಿದ್ಧಪ್ರಸಾದಕ್ಕೆ ಎಂದು ಬಿನ್ನಹವ ಮಾಡದೆ, ಅಹಂಕಾರದಲ್ಲಿ ತರಿಸಿಕೊಂಡುಂಬ ಗೊಡ್ಡಮೂಳನ ಕಂಡಡೆ ಒದ್ದೊದ್ದು ಕೊಲ್ಲೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ತಿಳಿದೆ ನಾ ತಿಳಿದೆ ನಾ ಎಂದು ಹಲಬರು ಹೋದರು ಅಹಂಕಾರದಲ್ಲಿ. [ತಿಳಿಯೆ ನಾ]ಳಿಯೆ ನಾ ಎಂದು ಹಲಬರು ಹೋದರು ಮರವೆಯಲ್ಲಿ. ತಿಳಿದೆನೆಂಬುದು ತಿಳಿಯೆನೆಂಬುದು ಜ್ಞಾನದ ಮೈದೊಡಕು. ತಿಳಿಯೆ ಅರಿವು ಮರವೆಯೆಂಬುಭಯವ ತಿಳಿದು ತಿಳಿಯದಂತಿರೆ, ತಿಳಿನೀರ ನಳಿನಾಕ್ಷನುತ ಕಪಿಲಸಿದ್ಧಮಲ್ಲಿಕಾರ್ಜುನ ತಾನೆ.
--------------
ಸಿದ್ಧರಾಮೇಶ್ವರ
ಗುರು ಸಂಸಾರಿ, ಶಿಷ್ಯ ಯತಿಯಾದರೇನಯ್ಯಾ ! ಗುನುವಿನೆಡೆಗೆ ಶಿಷ್ಯ ಭಕ್ತಿ ಕಿಂಕುರ್ವಾಣವಿರಬೇಕಯ್ಯಾ. ಇಲ್ಲದ ಅಹಂಕಾರದಲ್ಲಿ `ನಾ ಯತಿ, ಗುರು ಸಂಸಾರಿ ' ಎಂಬ ಭಾವ ಅಂಗದೊಳು ಹೊಳೆದರೆ ಕೂಗಿಡೆ ಕೂಗಿಡೆ ನರಕದಲ್ಲಿಕ್ಕುವ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಕಳವು ಪಾರದ್ವಾರ ಜೀವಹಿಂಸೆಯೆಂಬಿವನತ್ತತ್ತಲೆ ಕೆಡೆನೂಂಕಿ ಕ್ರೋಧ,ಲೋಭ, ಚಿತ್ತದಲ್ಲಿ ಮೊಳೆಯದೆ, ಕಪಟ ಕಳವಳ ಬುದ್ಧಿಯಲ್ಲಿ ಬೆಳೆಯದೆ ಕುಂದು ನಿಂದೆಗಳಿಂದ ಕೆಡೆನುಡಿವ ವಾಕು ಮನದಲ್ಲಿ ಪಲ್ಲವಿಸದೆ, ಮದ ಮತ್ಸರ ಅಹಂಕಾರದಲ್ಲಿ ಮುಗುಳೊತ್ತದೆ, ಪ್ರಕೃತಿ ವಿಕೃತಿ ಭ್ರಾಂತು ಭಾವದಲ್ಲಿ ಫಲಿಸದೆ, ಸುಜ್ಞಾನದಿಂದ ಧರ್ಮಾಧರ್ಮಂಗಳ ವರ್ಮನರಿತು ಮನಕ್ಕೆ ಮನಸ್ಸಾಕ್ಷಿಯಾಗಿ ಸದ್ವರ್ತನೆ ಸಮತೆ ಸಾರಹೃದಯ ಅನಿಂದೆ ಅನುಬಂಧ ಅಕಪಟ ಪಟುತರವಾಗಿ ಸಟೆಯುಳಿದು ದಿಟಘಟಿಸಿ ನಿಜ ನಿರುಗೆಯಾದಲ್ಲಿ ಸೌರಾಷ್ಟ್ರ ಸೋಮೇಶ್ವರನೆಡೆಬಿಡವಿಲ್ಲದಿಪ್ಪನು.
--------------
ಆದಯ್ಯ
ಗುರುಮುಖದಿಂದ ಬಂದುದೇ ಗುರುಪ್ರಸಾದ ಆ ಪ್ರಸಾದವನು ಲಿಂಗಕ್ಕೆ ಅರ್ಪಿಸಿದಲ್ಲಿ ಲಿಂಗಪ್ರಸಾದ. ಭೋಜ್ಯ ಕಟ್ಟಿ ಲಿಂಗಕ್ಕೆ ಕೊಟ್ಟು ಸಲಿಸುವುದೇ ಜಂಗಮಪ್ರಸಾದ. ತತ್ಪ್ರಸಾದಿಗಳಲ್ಲಿ ಯಾಚಿಸಿ, ಅವರ ಪ್ರಸಾದವ ಕೊಂಬುದೆ ಪ್ರಸಾದಿಯ ಪ್ರಸಾದ. ಅಪೇಕ್ಷೆಯಿಂದ ಸಲಿಸುವುದೇ ಆಪ್ಯಾಯನಪ್ರಸಾದ. ಗುರುಲಿಂಗಜಂಗಮವ ಕಂಡು, ಆ ಸಮಯದಲ್ಲಿ ತೆಗೆದು ಕೊಂಬುವುದೇ ಸಮಯಪ್ರಸಾದ. ಪಂಚೇಂದ್ರಿಯಂಗಳಲ್ಲಿ ಪಂಚವಿಷಯ ಪದಾರ್ಥಂಗಳನು ಪಂಚವಿಧಲಿಂಗಕ್ಕೆ ಸಮರ್ಪಣ ಮಾಡುವುದೇ ಪಂಚೇಂದ್ರಿಯವಿರಹಿತಪ್ರಸಾದ. ಮನವೇ ಲಿಂಗ, ಬುದ್ಭಿಯೇ ಶಿವಜ್ಞಾನ, ಚಿತ್ತವೇ ಶಿವದಾಸೋಹ, ಅಹಂಕಾರದಲ್ಲಿ ಶಿವಚಿಂತನೆಯುಳ್ಳವನಾಗಿ ಸಲಿಸಿದ್ದೇ ಅಂತಃಕರಣವಿರಹಿತಪ್ರಸಾದ. ತ್ರಿವಿಧಾಂಗದಲ್ಲಿ ತ್ರಿವಿಧಲಿಂಗವ ಸಂಬಂಧಿಸಿ ಆ ಚಿದ್ಘನಲಿಂಗ ತಾನೆಂದರಿದು, ಆ ತ್ರಿವಿಧಲಿಂಗಕ್ಕೆ ಕೊಡುವುದೇ ಸದ್ಭಾವಪ್ರಸಾದ. ಬಹಿರಂಗದ ಪ್ರಪಂಚವ ನಷ್ಟಮಾಡಿ, ಅರಿವುವಿಡಿದು ಸಲಿಸುವುದೇ ಸಮತಾಪ್ರಸಾದ. ಶ್ರೀಗುರುವಿನ ಪ್ರಸನ್ನತ್ವವೆ ಜ್ಞಾನಪ್ರಸಾದ. ಇಂತೀ ಏಕದಶ ಪ್ರಸಾದವನು ಒಳಹೊರಗೆ ಪರಿಪೂರ್ಣಮಾಗಿ ತಿಳಿಯುವುದೆ ಶಿವತಂತ್ರ, ಗುರುಶಾಂತೇಶ್ವರಾ.
--------------
ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮ
ಚಿನ್ನ ಲೋಹಾದಿಗಳು ಕರಗಿ ಒಂದುಗೂಡುವುದಲ್ಲದೆ ಮಣ್ಣು ಬೆಂದು ಹಿಂಗಿ ಓಡಾದುದು ಸರಿಯಿಂದ ಸಂದುಗೂಡುವುದೆ? ಅರಿಯದ ಮರವೆಯ ಒಡಗೂಡಬಹುದಲ್ಲದೆ ಅರಿತು ಹೇಳಿ ಕೇಳಿ ಮತ್ತರಿಯೆನೆಂದು ಅಹಂಕಾರದಲ್ಲಿ ನುಡಿವವನ ಒಡಗೂಡಬಹುದೆ? ಇಂತೀ ಗುಣವ ಅರಿದು ಒಪ್ಪಿದಡೆ ಪರಕ್ಕೆ ದೂರ, ಅಲ್ಲ- ಅಹುದೆಂದಡೆ ಶರಣರ ಗೆಲ್ಲ ಸೋಲದ ಹೋರಾಟ. ಇಂತಿವರೆಲ್ಲರೂ ಕೂಡಿ ನೊಂದಡೆ ನೋಯಲಿ, ನಾ ಕೊಂಡ ವ್ರತದಲ್ಲಿಗೆ ತಪ್ಪೆನು. ಇದು ವ್ರತಾಚಾರವ ಬಲ್ಲವರ ಭಾಷೆ. ಏಲೇಶ್ವರಲಿಂಗವು ಕುಲ್ಲತನವಾದಡೂ ಒಲ್ಲೆನು.
--------------
ಏಲೇಶ್ವರ ಕೇತಯ್ಯ
ಶಿವಪೂಜೆಯ ಮಾಡುತಿದ್ದೆನೆಂಬ ಅಣ್ಣಗಳು ನೀವು ಕೇಳಿರೊ. ಶಿವ ಮಹೇಶ್ವರರುಗಳು ಗೃಹದ ಮುಂದೆ ಬಂದು ಲಿಂಗಾರ್ಪಿತವೆಂಬ ಶಬ್ದವಿಡಲು, ಜಪವ ಮಾಡುತ ನಾನೇಳಬಾರದೆಂದು ಬೆಬ್ಬನೆ ಬೆರತು, ಅಹಂಕಾರದಲ್ಲಿ ಸತಿ ಸುತರುಗಳ ಕೈಯಲ್ಲಿ ಬಿನ್ನಹವ ಮಾಡಿಸದೆ, ತಾನೆ ಭಕ್ತಿಕಿಂಕುರ್ವಾಣದಿಂದೆದ್ದು ಭಸ್ಮಾಂಗಿಗಳಿಗೆ ಆಸನವ ಕೊಟ್ಟು, ಮಾಡುವ ನಡೆನುಡಿಯು ಒಂದೇ ಆದರೆ, ಮೃಡಬೇರೆ ಒಂದೆ ಕಡೆ [ಇರದೆ ಇವರೊ]ಡಲೊಳಿಪ್ಪನು ಕಾಣಿರೋ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅರಸಿನ ಭಕ್ತಿ ಅಹಂಕಾರದಲ್ಲಿ ಹೋಯಿತ್ತು, ಓಲೆಕಾರನ ಭಕ್ತಿ ಅಲಗಿನ ಮನೆಯಲ್ಲಿ ಹೋಯಿತ್ತು, ಬಣಜಿಗನ ಭಕ್ತಿ ಬಳ್ಳದ ಮೊನೆಯಲ್ಲಿ ಹೋಯಿತ್ತು, ಅಕ್ಕಸಾಲೆಯ ಭಕ್ತಿ ಅಗ್ಗಷ್ಟಿಗೆಯಲ್ಲಿ ಹೋಯಿತ್ತು, ಶೀಲವಂತನ ಭಕ್ತಿ ಶಂಕೆಯಲ್ಲಿ ಹೋಯಿತ್ತು, ಮಾಟ ಕೊಟದವನ ಭಕ್ತಿ ಅಂಜಿಕೆಯಲ್ಲಿ ಹೋಯಿತ್ತು, ವ್ರತಸ್ಥನ ಭಕ್ತಿ ಪ್ರಪಂಚಿನಲ್ಲಿ ಹೋಯಿತ್ತು. ಇದು ಕಾರಣ, ಕೂಡಲಚೆನ್ನಸಂಗಯ್ಯಾ ಕಿರಾತರು ಹುಟ್ಟಿ ಪುರಾತರು ಅಡಗಿದರು.
--------------
ಚನ್ನಬಸವಣ್ಣ
ಕೃತಯುಗದಲ್ಲಿ ದೇವರು ದೇವಾಸುರನ ಕೊಲುವಲ್ಲಿ, ಪ್ರಮಥನೆಂಬ ಗಣೇಶ್ವರನಾಗಿರ್ದನು. ಗಜಾಸುರನ ಚರ್ಮವ ಬಿಚ್ಚಿ ಅಜಾರಿ ಹೊದೆವಲ್ಲಿ ಉಗ್ರನೆಂಬ ಗಣೇಶ್ವರನಾಗಿರ್ದನು. ಅಸುರರ ಶಿರೋಮಾಲೆಯ ಕೊರಳಲ್ಲಿ ಉರದಲ್ಲಿ ಹಾರವಾಗಿ ಧರಿಸಿ ಜಗಕ್ಕೆ ಜೂಬಾಗಿಪ್ಪಲ್ಲಿ, ಶಂಕೆಯಿಲ್ಲದೆ ನಿಶ್ಶಂಕನೆಂಬ ಗಣೇಶ್ವರನಾಗಿರ್ದನು. ಸಮಸ್ತ ದೇವರಿಗೆ ಕರುಣಾಮೃತವ ಸುರಿದು ಸುಖವನಿತ್ತು ರಕ್ಷಿಸುವಲ್ಲಿ ಶಂಕರನೆಂಬ ಗಣೇಶ್ವರನಾಗಿರ್ದನು. ಜಾಳಂಧರನೆಂಬ ಅಸುರನ ಕೊಲುವಲ್ಲಿ ಜಾಣರಿಗೆ ಜಾಣನಾಗಿ ವಿಚಿತ್ರನೆಂಬ ಗಣೇಶ್ವರನಾಗಿರ್ದನು. ತ್ರೇತಾಯುಗದಲ್ಲಿ ಕಾಳಂಧರದೊಳಗೆ ಶಿವನು ನಿಜಮಂದಿರವಾಗಿದ್ದಲ್ಲಿ, ಕಾಲಾಗ್ನಿರುದ್ರನೆಂಬ ಗಣೇಶ್ವನಾಗಿರ್ದನು. ಪಿತಾಸುರನೆಂಬ ದೈತ್ಯನ ಕೊಂದು ಜಗವ ರಕ್ಷಿಸುವಲ್ಲಿ, ಮಾತಾಪಿತನೆಂಬ ಗಣೇಶ್ವರನಾಗಿರ್ದನು. ತಾಳಾಸುರನೆಂಬ ದೈತ್ಯನ ಕೊಂದು ಜಗವ ರಕ್ಷಿಸಿ ಸೃಷ್ಟಿಯ ಕಲ್ಪಿಸಿ ಬ್ರಹ್ಮಾಂಡ ಭಾರಮಂ ಧರಿಸುವಲ್ಲಿ, ತಾಳಸಮ್ಮೇಳನೆಂಬ ಗಣೇಶ್ವರನಾಗಿರ್ದನು. ಜಲಪ್ರಳಯದಲ್ಲಿ ಜಗನ್ನಾಥನು ಅಳಿಯದೆ ಇಪ್ಪಲ್ಲಿ ಜನನಮರಣವರ್ಜಿತನೆಂಬ ಗಣೇಶ್ವರನಾಗಿರ್ದನು. ಜಗವೆಲ್ಲಾ ಶೂನ್ಯವೆಂದಡೆ ನಾನೆ ಹುಟ್ಟಿಸಿದೆನೆಂದು, ಆದಿಗಣನಾಥನೆಂಬ ಗಣೇಶ್ವರನಾಗಿರ್ದನು. ಸುರಾಸುರರು ಅಹಂಕಾರದಲ್ಲಿ ಹೆಚ್ಚಿ ಮೇರೆದಪ್ಪಿದಲ್ಲಿ ಗೂಳಿಯಾಗಿ ಹೋರಿ ಎಲ್ಲರ ತೊತ್ತ?ದುಳಿದು, ಒಕ್ಕಲಿಕ್ಕಿ ಮಿಕ್ಕು ಮೀರಿ ನಂದಿಮಹಾಕಾಳನೆಂಬ ಗಣೇಶ್ವರನಾಗಿರ್ದನು. ಉರಿಗಣ್ಣ ತೆರೆದಡೆ ಉರಿದಹವು ಲೋಕಂಗಳೆಂದು ಜಗವ ಹಿಂದಿಕ್ಕಿಕೊಂಡು ವಂದ್ಯನೆಂಬ ಗಣೇಶ್ವರನಾಗಿರ್ದನು. ಉಮೆಯ ಕಲ್ಯಾಣದಲ್ಲಿ ಕಾಲಲೋಚನನೆಂಬ ಗಣೇಶ್ವರನಾಗಿರ್ದನು. ಅಂಧಕಾಸುರನ ಕೊಲುವಲ್ಲಿ ನೀಲಲೋಹಿತನೆಂಬ ಗಣೇಶ್ವರನಾಗಿರ್ದನು. ತ್ರಿಪುರದಹನವ ಮಾಡುವಲ್ಲಿ ಸ್ಕಂದನೆಂಬ ಗಣೇಶ್ವರನಾಗಿರ್ದನು. ಬ್ರಹ್ಮಕಪಾಲ ವಿಷ್ಣುಕಂಕಾಳವನಿಕ್ಕುವಲ್ಲಿ ನೀಲಕಂಠನೆಂಬ ಗಣೇಶ್ವರನಾಗಿರ್ದನು. ದ್ವಾಪರದಲ್ಲಿ ಲಿಂಗಪ್ರಾಣಸಂಯೋಗವಾಗಿ ವೃಷಭನೆಂಬ ಗಣೇಶ್ವರನಾಗಿರ್ದನು. ಇಂತು ನಾಲ್ಕು ಯುಗ, ಹದಿನಾಲ್ಕು ಭುವನಂಗಳು ಮಡಿವಲ್ಲಿ, ಹುಟ್ಟುವಲ್ಲಿ ನಂದಿಕೇಶ್ವರನೆಂಬ ಗಣೇಶ್ವರನಾಗಿರ್ದನು. ಕಲಿಯುಗದಲ್ಲಿ ಗುರು ಲಿಂಗ ಜಂಗಮ ಪಾದೋದಕ ಪ್ರಸಾದನದಫ ಪೂರ್ವಾಶ್ರಯವ ಕಳೆದು ಲಿಂಗವಾಗಿ ಕುಳಸ್ಥಳವನರಿತು ಮಹಾಂತ ಕೂಡಲಚೆನ್ನಸಂಗನ ಮಹಾಮನೆಯಲ್ಲಿ, ಸರ್ವಾಚಾರಸಂಪನ್ನ ಬಸವಣ್ಣನೆಂಬ ಗಣೇಶ್ವರನಾಗಿರ್ದನು ಕೇಳಾ ಪ್ರಭುವೆ !
--------------
ಚನ್ನಬಸವಣ್ಣ
ಗುರುಲಿಂಗವಿದ್ದ ಊರು ಸೀಮೆಯ ಕಂಡಾಕ್ಷಣವೆ ತುರಗ ಅಂದಣಾದಿಗಳನಿಳಿದು, ಭಯಭಕ್ತಿಕಿಂಕುರ್ವಾಣದಿಂದ ಹೋಗಿ, ಗುರುವಿನ ಪಾದೋದಕವ ಕೊಂಬುದು ಶಿಷ್ಯಗೆ ನೀತಿ. ಸಾಕ್ಷಿ :`` ಶಿಷ್ಯೋ ಗುರುಸ್ಥಿತಂ ಗ್ರಾಮಂ ಪ್ರವೇಶಿತಂ ವಾಹನಾದಿಕಂ | ವರ್ಜಯೇತ್ ಗೃಹಸಾವಿೂಪ್ಯಂ ಛಂದಯೋಶ್ಚ ವಿಪಾದುಕಃ || '' ಎಂದುದಾಗಿ, ಹೀಗೆಂಬುದನರಿಯದೆ ಅಹಂಕಾರದಲ್ಲಿ ಬೆಬ್ಬನೆ ಬೆರತು, ಗುರುವಿದ್ದ ಊರು ಸೀಮೆಯೊಳು ಅಂದಣ ಕುದುರೆಯನೇರಿ ನಡೆದರೆ ರೌರವ ನರಕದಲ್ಲಿಕ್ಕುವ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
-->