ಅಥವಾ

ಒಟ್ಟು 21 ಕಡೆಗಳಲ್ಲಿ , 11 ವಚನಕಾರರು , 19 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಧಾರ ಸ್ವಾಧಿಷ್ಠಾನ ಮಣಿಪೂರಕ ವಿಶುದ್ಧಿ ಆಜ್ಞೇಯವ ನುಡಿದಡೇನು ಆದಿ ಅನಾದಿಯ ಸುದ್ದಿಯ ಕೇಳಿದಡೇನು ಹೇಳಿದಡೇನು ತನ್ನಲ್ಲಿದ್ದುದ ತಾನರಿಯದನ್ನಕ್ಕರ. ಉನ್ಮನಿಯ ರಭಸದ ಮನ ಪವನದ ಮೇಲೆ ಚೆನ್ನಮಲ್ಲಿಕಾರ್ಜುನಯ್ಯನ ಭೇದಿಸಲರಿಯರು.
--------------
ಅಕ್ಕಮಹಾದೇವಿ
ಶ್ವೇತ ಪೀತ ಕಪೋತ ಹರಿತ ಕೃಷ್ಣ ಮಾಣಿಕವೆಂಬ ಆರು ವರ್ಣ. ಅದಕ್ಕೆ ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಶ್ರೀಗುರು_ಎಂಬ ಆದು ಅಧಿದೇವತೆ, ಈ ಭೇದವನೆಲ್ಲ ತಿಳಿದು ನೋಡಿ, ಉನ್ಮನಿಯ ಜ್ಯೋತಿಯ ಬ್ರಹ್ಮರಂಧ್ರದ ಸಹಸ್ರದಳ ಪದ್ಮದ ಅಮೃತಬಿಂದುವಿನೊಳಗಣ ಪ್ರಾಣವೆ ರೂಪಾಗಿ, ಪ್ರಾಣಲಿಂಗದಲ್ಲಿ ಒಡಗೂಡಬಲ್ಲ ಗುಹೇಶ್ವರಾ ನಿಮ್ಮ ಶರಣ.
--------------
ಅಲ್ಲಮಪ್ರಭುದೇವರು
ಆ [ಆಜ್ಞಾಚಕ್ರದ] ದ್ವಿದಳಪದ್ಮವ ಹೊಕ್ಕು ನೋಡಿ ಸಾದ್ಥಿಸಿ, ಅಲ್ಲಿಹ ಮಂತ್ರ-ಪದ-ವರ್ಣ-ಭುವನ-ತತ್ವ-ಕಲೆಗಳಂ ಕಂಡು ಜೀವ ಪರಮರಂ ಏಕೀಕರಿಸಿ ಅಲ್ಲಿ ಮಾಣಿಕ್ಯವರ್ಣವಾಗಿಹ ಜ್ಯೋತಿರ್ಮಯಲಿಂಗಮಂ ಬೆರಸಿ ಓಂಕಾರಜ್ಯೋತಿಯಂ ಬೆರಸುತ್ತ ಉನ್ಮನಿಯ ಬೆಳಗನೊಳಕೊಂಡು ಕರ್ಣದ್ವಾರದಲ್ಲಿ ಶಂಖ ದುಂದುಬ್ಥಿ ಧ್ವನಿಗಳಂ ಕೇಳುತ್ತ ಪರಮಕಾಷ್ಠಿಯಾಗಿ ತಾನೇ ಜಗತ್ತಾಗಿ ``ಅಣೋರಣೀಯಾನ್ ಮಹತೋ ಮಹೀಯಾನ್'' ``ಏಕಮೇವ ಅದ್ವಿತೀಯಂ'' ಎಂಬ ಶ್ರುತಿಪ್ರಮಾಣದರಿವು ನೆಲೆಗೊಂಡು ಷಡುಚಕ್ರ ಪ್ರಾಪ್ತಿಯಾಗಿ, ಮನ-ಪವನ-ಬಿಂದು-ರವಿ-ಶಶಿ-ಶಿಖಿಗಳನೇಕೀಕರಿಸಿ ಮೇಗಣ ಬಯಲ ಬಾಗಿಲಂ ತೆಗೆದು ಸಹಸ್ರದಳಪದ್ಮವ ಹೊಕ್ಕನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಹೋಗುತ್ತ ಹೋಗುತ್ತ ಹೊಲಬುದಪ್ಪಿತ್ತು, ತನ್ನ ನೆಲೆಯ ತಿಳಿದಿತ್ತು. ಕತ್ತಲೆಯೊಳಗೆ ನಿಂದು ನೋಡುತ್ತಿರಲು, ನೋಟ ಹಿಂದಾಯಿತ್ತು; ಆಟವಡಗಿತ್ತು; ಮಾಟ ನಿಂದಿತ್ತು; ಬೇಟ ಬೆರಗಾಯಿತ್ತು. ಊಟವನುಂಡು ಕೂಟವ ಕೂಡಿ ಉನ್ಮನಿಯ ಬೆಳಗಿನೊಳಗೆ ಒಂದೆಂದರಿದು, ತನ್ನಂದವ ತಿಳಿದು, ಲಿಂಗದಲ್ಲಿ ಸಂದು, ಜಂಗಮದೊಳು ಬೆರೆದು, ಮಂಗಳದ ಮಹಾಬೆಳಗಿನೊಳಗೆ ಆಡುವ ಶರಣ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಶುದ್ಧಪದ್ಮಾಸನದಲ್ಲಿ ಕುಳ್ಳಿರ್ದು ಊಧ್ರ್ವಲೋಚನನಾಗಿ, ಉಲಿವ ಕರಣಂಗಳನೆಲ್ಲ ಉನ್ಮನಿಯ ಸ್ಥಾನದಲ್ಲಡಗಿಸಿ, ಮನವನೊಮ್ಮನವ ಮಾಡಿ ಅನಾಹತಕರ್ಣದಲ್ಲಿ ಲಾಲಿಸಲು, ಸಹಸ್ರದಳಕಮಲಮಧ್ಯದಲ್ಲಿ ಉದ್ಘೋಷಿಸುತ್ತಿರ್ಪುದು ಸುನಾದಬ್ರಹ್ಮವು. ಅಂತಪ್ಪ ಸುನಾದಬ್ರಹ್ಮದಲ್ಲಿ ಮನವಡಗಿ ಮೈಯ್ಮರೆದಿರ್ಪಾತನೆ ಘನಲಿಂಗಯೋಗಿಯಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಉನ್ಮನಿಯ ಮಂಟಪದಲ್ಲಿ ಉಮೆಯಾಣ್ಮನ ಉಗ್ಗಡಣೆಯ ನೋಡಾ ! ಪರಿಪರಿಯ ಗಣಂಗಳು ತರತರದಲ್ಲಿ ನೆರೆದು ನಿಂದು ಉಘೇ ಉಘೇ ಎನುತಿರ್ಪರು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಜನಸ್ಥಾನಗಳಿಂದ ನಾಭಿಯ ಪವನವತ್ತಿ ನಾಶಿಕಾಗ್ರದಲ್ಲಿ ನಿಂದು, ರವಿ ಶಶಿಯ ಬೆಳಗನೊಳಕೊಂಡು, ಉನ್ಮನಿಯ ಸ್ಥಾನದಲ್ಲಿ ನಿಂದು, ನಿರ್ವಿಕಲ್ಪ ನಿತ್ಯಾತ್ಮಕನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ರಾಜಯೋಗದಲ್ಲಿ ನಿಶ್ಚಿಂತನಾದ ಯೋಗೀಶ್ವರನ ಸಹಜವರ್ತನಧರ್ಮವೆಂತೆನೆ : ಅರ್ಧಾವಲೋಚನವೆನಿಸುವ ಅರೆಮುಗಿದ ನೇತ್ರವುಳ್ಳಾತನಾಗಿ, ಸಕಲ ಸಂಶಯಂಗಳ ಬಿಟ್ಟ ಮನವುಳ್ಳಾತನಾಗಿ, ಮತ್ತಾ ಮನವು ಸುಷುಪ್ತಿಯಲ್ಲಿ ಮರೆಯದಂತೆ ಜಾಗ್ರದಲ್ಲಿ ಕೆದರದಂತೆ ನಿಶ್ಚಲಮಂ ಮಾಡಿ, ಭ್ರೂಮಧ್ಯಲಕ್ಷ್ಯದಲ್ಲಿರಲದೇ ಉನ್ಮನಿಯ ಸ್ವರೂಪವು. ಅದೇ ಪರಮಪದವು; ಅದೇ ಜ್ಞಾನವು; ಅದೇ ಮೋಕ್ಷವು; ಅದೇ ಪರಮರಹಸ್ಯಮಾದ ಶಿವಯೋಗವು. ಅದರಿಂದೆ ಅನ್ಯಮಾದ ಅರ್ಥಮಂ ಪೇಳ್ವ ಗ್ರಂಥವಿಸ್ತಾರವೆಲ್ಲವು ವ್ಯರ್ಥಮಪ್ಪುದಾಗಿ ಈ ಉನ್ಮನಿಯ ಸಾಧಿಸುವಾತನೆ ಜೀವನ್ಮುಕ್ತ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ನಾದಬಿಂದುಕಳಾತೀತಲಿಂಗವನು, ಒಬ್ಬ ಪುರುಷನು ಉನ್ಮನಿಯ ಬಾಗಿಲ ಮುಂದೆ ನಿಂದು ಜಂಗಮರೂಪಿನಿಂದ ಲಿಂಗಧ್ಯಾನ ಮಹಾಧ್ಯಾನಮಂ ಮಾಡಿ, ಪಶ್ಚಿಮದಿಕ್ಕಿನಲ್ಲಿ ನಿಂದು ಚಿತ್ರಿಕನಾಗಿ ಎರಡು ಕಮಲಂಗಳ ರಚಿಸಿ, ಅಷ್ಟಕುಳಪರ್ವತದ ಮೇಲೆ ಲಿಂಗಾರ್ಚನೆಯಂ ಮಾಡಿ, ನವಸ್ಥಲದ ಗುಡಿಯ ಶಿಖರವಿಡಿದಿರಲು, ಒಸರುವ ಕೆರೆಬಾವಿಗಳು ಬತ್ತಿದವು ನೋಡಾ! ಸಪ್ತದ್ವೀಪಂಗಳ ರಚಿಸಿದ ನಿಶ್ಚಿಂತ ನಿರಾಕುಳವೆಂಬ ಸಿಂಹಾಸನದ ಮೇಲೆ ಪರಂಜ್ಯೋತಿಯೆಂಬ ಲಿಂಗವು ತೊಳಗಿ ಬೆಳಗುತಿರ್ಪುದು ನೋಡಾ! ಆ ಲಿಂಗದ ಬೆಳಗಿನೊಳಗೆ ಅನಂತಕೋಟಿ ಸೋಮಸೂರ್ಯರ ಬೆಳಗು ನೋಡಾ! ಆ ಲಿಂಗಕ್ಕೆ ಸಜ್ಜನವೆಂಬ ಮಜ್ಜನವ ನೀಡಿ, ಅಂತರಂಗದ ಬೆಳಗಿನ ಮಹಾಚಿದ್ವಿಭೂತಿಯಂ ಧರಿಸಿ, ನಿರ್ಮಲವೆಂಬ ಗಂಧವನೊರೆದು, ಸುಜ್ಞಾನವೆಂಬ ಅಕ್ಷತೆಯನಿಟ್ಟು, ನಿರ್ಭಾವವೆಂಬ ಪತ್ರಿಯನೇರಿಸಿ, ನಿದ್ರ್ವಂದ್ವವೆಂಬ ಧೂಪವ ತೋರಿ, ಭಕ್ತನೆಂಬ ಅಡ್ಡಣಿಗೆ,ಮಹೇಶ್ವರನೆಂಬ ಹರಿವಾಣ, ಪ್ರಸಾದಿಯೆಂಬ ನೈವೇದ್ಯ, ಪ್ರಾಣಲಿಂಗಿಯೆಂಬ ತೈಲ, ಶರಣನೆಂಬ ಮೇಲೋಗರ, ಐಕ್ಯನೆಂಬ ಭೋಜಿಯನು ಆ ಲಿಂಗಕ್ಕೆ ತೃಪ್ತಿಯನೆಯ್ದಿಸಿ, ಮನಜ್ಞಾನವೆ ವೀಳ್ಯೆಯ, ಸುಜ್ಞಾನವೆ ಅಡಕಿ, ಪರಮಜ್ಞಾನವೆ ಸುಣ್ಣ, ಮಹಾಜ್ಞಾನವೆ ತಾಂಬೂಲ, ಅಜಾಂಡಬ್ರಹಾಂಡ್ಮವೆ ಕುಕ್ಷಿ, ಅಲ್ಲಿಂದತ್ತ ಮಹಾಲಿಂಗದ ಬೆಳಗು, ಸ್ವಯಾನಂದದ ತಂಪು, ನಿರಂಜನದ ಸುಖ, ಪರಿಪೂರ್ಣವೆಂಬ ಆಶ್ರಮದಲ್ಲಿ ತೊಳಗಿ ಬೆಳಗುವ ಮಹಾಮಹಿಮಂಗೆ ಓಂ ನಮಃ ಓಂ ನಮಃ ಎನುತಿರ್ದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ದೇಹದ ವಾಸನೆ ಹರಿದು ಆತ್ಮನ ಭವಬಂಧನದ ಕೀಲಮುರಿದು ಪರಾತ್ಪರವಾದ ಪ್ರಾಣಲಿಂಗವನೊಡಗೂಡುವುದಕ್ಕೆ ಆವುದು ಸಾಧನವೆಂದೊಡೆ : ಎಲ್ಲ ಗಣಂಗಳು ತಿಳಿವಂತೆ ಹೇಳುವೆ ಕೇಳಿರಯ್ಯಾ. ಎಂಬತ್ತೆಂಟು ಆಸನದೊಳಗೆ ಮುಖ್ಯವಾಗಿರ್ಪುದು ಶಿವಸಿದ್ಧಾಸನವು. ಆ ಸಿದ್ಧಾಸನದ ವಿವರವೆಂತೆಂದೊಡೆ : ಗುದಗುಹ್ಯಮಧ್ಯಸ್ಥಾನವಾದ ಯೋನಿಮಂಡಲವೆಂಬ ಆಧಾರದ್ವಾರಕ್ಕೆ ಎಡದ ಹಿಮ್ಮಡವನಿಕ್ಕಿ, ಬಲದಹಿಮ್ಮಡವ ಮೇಢ್ರಸ್ಥಾನದಲ್ಲಿರಿಸಿ, ಅತ್ತಿತ್ತಲುಕದೆ ಬೆನ್ನೆಲವು ಕೊಂಕಿಸದೆ ನೆಟ್ಟನೆ ಕುಳ್ಳಿರ್ದು ಉಭಯಲೋಚನವನೊಂದು ಮಾಡಿ ಉನ್ಮನಿಯ ಸ್ಥಾನದಲ್ಲಿರಿಸಿ, ಘ್ರಾಣ ಜಿಹ್ವೆ ನೇತ್ರ ಶ್ರೋತ್ರ ತ್ವಕ್ ಹೃದಯವೆಂಬ ಆರು ದ್ವಾರಂಗಳನು ಆರಂಗುಲಿಗಳಿಂದೊತ್ತಲು ಮೂಲಾಧಾರದಲ್ಲಿರ್ದ ಮೂಲಾಗ್ನಿ ಪಟುತರಮಾಗಿ, ಪವನವನೊಡಗೂಡಿ ಮನವ ಸುತ್ತಿಕೊಂಡು ಊಧ್ರ್ವಕ್ಕೆ ಹೋಗಿ, ಉಭಯದಳದಲ್ಲಿರ್ದ ಮಹಾಲಿಂಗವನೊಡಗೂಡಿ ಅನಂತಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವನೊಳಗೊಂಡು ಅತಿಸೂಕ್ಷ್ಮವಾಗಿ ಅಂಗುಲಪ್ರಮಾಣವಾಗಿ ಶುದ್ಧತಾರೆಯಂತೆ ಕಂಗಳ ನೋಟಕ್ಕೆ ಕರತಲಾಮಲಕವಾಗಿ ಕಾಣಿಸುತಿರ್ಪ ಪ್ರಾಣಲಿಂಗದಲ್ಲಿ ಪ್ರಾಣನ ಸಂಯೋಗವ ಮಾಡಬಲ್ಲಾತನೆ ಪ್ರಾಣಲಿಂಗಸಂಬಂಧಿ. ಆತನೇ ಪ್ರಳಯವಿರಹಿತನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಸ್ಥಾನಭೇದ ಸಂಶಯ ಆಧಾರ ಸ್ವಾದಿಷ್ಟ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞೆ ಎಂಬ ಷಟ್‍ಚಕ್ರಂಗಳ ವರ್ತನೆಯ ನುಡಿದಡೇನು ? ಆದಿ ಅನಾದಿಯ ಕೇಳಿದಡೇನು ? ತನ್ನಲ್ಲಿದ್ದುದ ತಾನರಿಯದನ್ನಕ್ಕ ಉನ್ಮನಿಯ ರಭಸದ ಸಿಂಹಾಸನದ ಮೇಲೆ ಚೆನ್ನಮಲ್ಲಿಕಾರ್ಜುನನ ಭೇದಿಸಲರಿಯರು.
--------------
ಅಕ್ಕಮಹಾದೇವಿ
ಏನೆಂಬೆನೇನೆಂಬೆನಯ್ಯ? ಮತಿಗೆಟ್ಟು ಮಾನವಲೋಕಕ್ಕೆ ಬಂದೆ. ಬಂದ ಬರವಿನಲ್ಲಿಯೆ ಭವವೆಂಬ ಭೂಪತಿ ಎನ್ನ ಸೆರೆವಿಡಿದು ಕಾಲ-ಕಾಮರ ವಶಕ್ಕೆ ಕೊಟ್ಟನಯ್ಯ. ಕಾಲಂಗೆ ಕಾಯುವ ದಂಡವ ತೆತ್ತದ್ದು ಲೆಕ್ಕವಿಲ್ಲ. ಮನಸಿಜಂಗೆ ಮನವ ದಂಡವಿತ್ತುದ್ದು ಲೆಕ್ಕವಿಲ್ಲ. ಹೋದಹೆನೆಂದರೆ ಒಳಕಾವಲವರು, ಹೊರಕಾವಲವರು ಹೊಗಲೀಸರು. ನನ್ನ ಸೆರೆಯಲ್ಲಿ ನಾನು ಬಿಡಿಸಿಕೊಂಡು ಹೋದಹೆನೆಂದರೆ ನಾನು ದರಿದ್ರನಯ್ಯ. ಎನ್ನ ಸೆರೆಯ ಬಿಡಿಸಿಕೊಳ್ಳಿರಯ್ಯ ಬಸವಾದಿ ಪ್ರಮಥರೇ. ನಿಮ್ಮ ಸೆರಗೊಡ್ಡಿ ಬೇಡಿಕೊಂಬೆನಯ್ಯ. ಭಕ್ತಿಗೆ ಭಂಡಾರವಾಗಿಪ್ಪ ಸಂಗನ ಬಸವಣ್ಣ, ಎನಗೆ ಹಾಗತೂಕ ಭಕ್ತಿಯ ಕೊಡಯ್ಯ. ಪ್ರಸಾದವೆ ಚಿತ್ಪಿಂಡಸ್ವರೂಪವಾದ ಚೆನ್ನಬಸವಣ್ಣ, ಎನಗೆ ಹಾಗತೂಕ ಜ್ಞಾನವ ಕೊಡಯ್ಯ. ಮಾಯಾಕೋಲಾಹಲನಪ್ಪ ಅಲ್ಲಮಪ್ರಭುವೇ, ಎನಗೆ ಹಾಗತೂಕ ವೈರಾಗ್ಯವ ಕೊಡಯ್ಯ. ಬೆಟ್ಟದ ಗುಂಡತಂದು ಇಷ್ಟಲಿಂಗದಲ್ಲಿ ಐಕ್ಯವ ಮಾಡಿದ ಘಟ್ಟಿವಾಳಲಿಂಗವೇ, ಎನಗೆ ಹಾಗತೂಕ ಲಿಂಗವ ಕೊಡಯ್ಯ. ಈ ನಾಲ್ಕು ಹಾಗ ಕೂಡಿದಲ್ಲಿಯೆ ಮನಲಿಂಗದಲ್ಲಿ ಒಂದು ಹಣಮಪ್ಪುದು. ಮನಲಿಂಗದಲ್ಲಿ ಒಂದು ಹಣವಾದಲ್ಲಿಯೇ ಆ ಚಂದ್ರಾಯುಧ ದೊರಕೊಂಬುದು. ಎನಗೆ ಚಂದ್ರಾಯುಧವಂ ಪಿಡಿದು, ಒಳಕಾವಲ ನಾಲ್ವರ ಕೊರಳ ಕೊಯ್ದು, ಹೊರಕಾವಲೈವರ ಹರಿಹಂಚುಮಾಡಿ ಕೂಟದ ಕಾವಲವರ ಪಾಟಿಮಾಡದೆ, ಭವದ ಬಳ್ಳಿಯ ಕೊಯ್ದು, ಕಾಲ ಕಾಮರ ಕಣ್ಣ ಕಳೆದು, ಎಡಬಲದ ಹಾದಿಯ ಹೊದ್ದದೆ, ನಡುವಣ ಸಣ್ಣ ಬಟ್ಟೆಗೊಂಡು, ರತ್ನಾಚಲವನೇರಿ, ಅಲ್ಲಿಪ್ಪ ಲಿಂಗಮಂ ಬಲಗೊಂಡು, ನೀವಿದ್ದ ಉನ್ಮನಿಯ ಪುರಕ್ಕೆ ಬಂದು, ನಿಮ್ಮ ಪಡುಗ ಪಾದರಕ್ಷೆಯಿಂ ಪಿಡಿದು, ನಿಮ್ಮ ಬಾಗಿಲ ಕಾಯ್ದಿಪ್ಪುದೇ ಎನಗೆ ಭಾಷೆ. ಎನ್ನ ಬಿನ್ನಪವ ನೀವು ಮನವೊಲಿದು ಕರುಣಿಪುದಯ್ಯ ಇದಕೆ ನೀವೇ ಸಾಕ್ಷಿಯಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಯ್ಯಾ.
--------------
ಘನಲಿಂಗಿದೇವ
ಕನಕನವರತ ಶೋಭಿತವೆಂಬ ದಿನಕರನುದಯದ ಪಟ್ಟಣದೊಳಗೆ ಏಕಬೆಳಗಿನ ಏಕಾಂತವಾಸದೊಳಿಪ್ಪ ನಿಶ್ಶಬ್ದಂ ಬ್ರಹ್ಮಮುಚ್ಯತೇ ಎಂಬ ಮೂಲಾಂಕುರವು. ಉನ್ಮನಿಯ ಪ್ರಾಕಾರದ ಸ್ಫಟಿಕದ ಮನೆಯಲ್ಲಿ ಇಷ್ಟಲಿಂಗವನರಿದಾತಂಗೆ ಮೂರರ ಹಂಗೇಕೆ? ಆರು ಮೂರೆಂಬಿವ ದೂರದಲೆ ಕಳೆದು ಮೀರಿದ ಸ್ಥಲದಲ್ಲಿ ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವಲ್ಲದೆ ಇಲ್ಲವೆಂಬೆ.
--------------
ಬಾಚಿಕಾಯಕದ ಬಸವಣ್ಣ
ನಾಮರೂಪಕ್ರಿಯೆಯಿಲ್ಲದ ಮೂರ್ತಿಯೊಬ್ಬ. ಚಿದಂಗನೆಯು ಉನ್ಮನಿಯ ಬಾಗಿಲಮುಂದೆ ನಿಂದು, ಓಂ ಎಂಬ ಶ್ರುತಿವಿಡಿದು ಪವನಧ್ಯಾನ ಲಿಂಗಧ್ಯಾನವ ಮಾಡುತಿರ್ಪಳು ನೋಡಾ! ಇದು ಕಾರಣ ಇಪ್ಪತ್ತೈದು ಕಂಬದ ಶಿವಾಲಯದೊಳಗೆ ಸುಳಿದಾಡುವ ಜಂಗಮವ ಕಂಡೆನಯ್ಯ. ಆ ಜಂಗಮವು ಸಪ್ತೇಳುಸಾಗರಂಗಳ ದಾಂಟಿ, ಅಷ್ಟಕುಲಪರ್ವತಂಗಳ ಮೆಟ್ಟಿ, ಒಂಬತ್ತು ಬಾಗಿಲ ಮುಂದೆ ನಿಂದು, ತಲೆಯೋಡಿನಲಿ ತಿರಿದುಂಬ ಜಂಗಮದ ಪರಿಯೆಂತು ನೋಡಾ! ಇದು ಕಾರಣ ಆ ಚಿದಂಗನೆಯ ಕೈವಿಡಿದು, ಪರಬ್ರಹ್ಮವಂ ಪೊಕ್ಕು ನಿಷ್ಪತಿಲಿಂಗವೆ ನಿಮ್ಮ ಶರಣಸಂತತಿಗಳಲ್ಲದೆ ಉಳಿದಾದ ಮತ್ತಜ್ಞಾನಿಗಳು ಇವರೆತ್ತ ಬಲ್ಲರಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕಾಲವನಾದಿ ಕರ್ಮವನಾದಿ ಜೀವವನಾದಿಯಾದಡೆಯೂ ಆಗಲಿ, ಘನನಿಧಿಶಕ್ತಿಯನರಿದಲ್ಲದೆ, ಘನನಿಲಯಶಕ್ತಿಯನರಿಯಬಾರದು. ಘನನಿಲಯಶಕ್ತಿಯನರಿದಲ್ಲದೆ, ತನೂದ್ವಹನಶಕ್ತಿಯನರಿಯಬಾರದು. ತನೂದ್ವಹನಶಕ್ತಿಯನರಿದಲ್ಲದೆ, ಆದಿಮಧ್ಯಾವಸಾನವನರಿಯಬಾರದು. ಆದಿಮಧ್ಯಾವಸಾನವನರಿದಲ್ಲದೆ, ಪಿಂಡಬ್ರಹ್ಮಾಂಡವನರಿಯಬಾರದು. ಪಿಂಡಬ್ರಹ್ಮಾಂಡವನರಿದಲ್ಲದೆ, ಉನ್ಮನಿಯ ಮುಖವ ಕಾಣಬಾರದು. ಉನ್ಮನಿಯ ಮುಖವ ಕಂಡಲ್ಲದೆ, ಲಿಂಗವ ಕಾಣಬಾರದು. ಲಿಂಗವ ಕಂಡು ಗಹಗಹಿಸಿ ಕೂಡಿದಲ್ಲದೆ, ಮತ್ರ್ಯದ ಹಂಗು ಹರಿಯದು. ಮತ್ರ್ಯದ ಹಂಗು ಹರಿದಲ್ಲದೆ, ಭವಂ ನಾಸ್ತಿಯಾಗದು ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಇನ್ನಷ್ಟು ... -->