ಅಥವಾ

ಒಟ್ಟು 27 ಕಡೆಗಳಲ್ಲಿ , 16 ವಚನಕಾರರು , 26 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉರಿವ ಕೊಳ್ಳಿಯ ಮಂಡೆಯಲಿಕ್ಕಿದಡುರಿವುದು ಮಾಬುದೆ ಕಲ್ಲು ಗುಗ್ಗರಿಯ ಮೆಲಿದಡೆ ಹಲ್ಲು ಹೋಹುದು ಮಾಬುದೆ ಶರಣರೊಡನೆ ಸರಸವಾಡಿದಡೆ ನರಕ ತಪ್ಪದು ಕಾಣಾ ಕೂಡಲಸಂಗಮದೇವಾ.
--------------
ಬಸವಣ್ಣ
ಬೀಸುವ ಬಿರುಗಾಳಿ ಬೀಸಬಾರದು, ಬೀಸದಿರಬಾರದು. ಸುರಿವ ಮಳೆ ಸುರಿಯಬಾರದು, ಸುರಿಯದಿರಬಾರದು. ಉರಿವ ಕಿಚ್ಚು ಉರಿಯಬಾರದು, ಉರಿಯದಿರಬಾರದು, ಚಂದ್ರಸೂರ್ಯರು ನಿಂದಾಗಲೇ ಸಂದಿತ್ತು, ಸೊಡ್ಡಳಾ ನಿಮ್ಮ ರಾಜತೇಜದ ಮಹಿಮೆ.
--------------
ಸೊಡ್ಡಳ ಬಾಚರಸ
ಉಪೇಕ್ಷೆಯಿಂದ ಉರಿವ ಬೆಳಗು, ಪವನನ ಪ್ರಾಣಕ್ಕೆ ಒಳಗು. ಸ್ವಯಸಂಪರ್ಕದಿಂದ ಒದಗಿದ ಬೆಳಗು, ಅನಲನ ಆಹುತಿಗೆ ಹೊರಗಾಗಿಪ್ಪುದು. ಇಂತೀ ವಾಗದ್ವೈತದ ಮಾತಿನ ಮಾಲೆ, ಸ್ವಯಾದ್ವೈತವ ಮುಟ್ಟಬಲ್ಲುದೆ? ಸ್ಥಲಜ್ಞಾನ, ಯಾಚಕತ್ವ, ಸ್ಥಲಭರಿತನ ಮುಟ್ಟಬಲ್ಲುದೆ? ಇಂತೀ ಉಭಯದೊಳಗನರಿತು, ಇಷ್ಟಕ್ಕೆ ಕ್ರೀ, ಭಾವಕ್ಕೆ ಜ್ಞಾನ ಸಂಪೂರ್ಣವಾದಲ್ಲಿ, ನಿಃಕಳಂಕ ಮಲ್ಲಿಕಾರ್ಜುನ ತಾನು ತಾನೆ.
--------------
ಮೋಳಿಗೆ ಮಾರಯ್ಯ
ಹಸಿವ ಕೊಂದಿಹೆವೆಂದು ತುಪ್ಪ ಹಾಲು ಸಕ್ಕರೆ ಹಣ್ಣು ಮುಂತಾದ ಫಲಾಹಾರಮಂ ಕೊಂಡು, ಫಲಕ್ಕೆ ಬಾರೆವೆಂದು ಬಲೋತ್ತರವ ನುಡಿದು, ಬಲ್ಲವರಾದೆವೆಂಬ ಗೆಲ್ಲಗೂಳಿಗಳು ನೀವು ಕೇಳಿರೊ. ಉರಿವ ಬೆಂಕಿಗೆ ತರಿದುಪ್ಪ ತಿಲ ಮೊದಲಾದವರು ಹಾಕಿ, ಅನಲನ ಕೆಡಿಸಿಹೆವೆಂಬ ಕಲಿಕೆಯ ಮಾತಿನ ನೆರೆ ಬಾಲಕರ ಕಂಡು, ಇವರಿಗೆ ಅರಿಕೆಯಿಲ್ಲವೆಂದೆ. ಗರಿಕೆಯನಗೆದು ಕೊರಡನಿರಿಸಿದಂತೆ, ಇದಾರಿಗೆಯೂ ಅಘಟಿತ ನೋಡಾ. ಪ್ರಕಟದೂರ ಸಕೀಲಸಾರ ಮುಕುರಗುಣನಿಧಿಯೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಬೆಟ್ಟದ ತುದಿಯ ಮೇಲೆ ಉರಿವ ಕಂಬವ ಕಂಡೆ ನೋಡಾ! ಆ ಕಂಬದ ಮೇಲೊಂದು ಕೋಗಿಲೆ ಕುಳಿತು ಕೂಗುತಿದೆ ನೋಡಾ! ಆ ಕೋಗಿಲೆಯ ಹಿಡಿದು ನಿಶ್ಚೈಸಬಲ್ಲ ಹಿರಿಯರ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪಂಜ ಹಿಡಿವಂಗೆ ಸಂದೇಹವೆಲ್ಲಿದೆ ಉರಿವ ಬೆಳಗಿಂಗೆ ಸಂದೇಹವುಂಟೆ? ಸಂಸಾರ ಸಂದಣಿಯಲ್ಲಿ ಅನಂಗನ ಆತುರದಲ್ಲಿ ಹೊಂದಿ ಬೇವಂಗೆ ಲಂದಣತನವಲ್ಲದೆ ನಿಜಪ್ರಸಂಗಿಗೆ, ನಿರತಿಶಯ ಲಿಂಗಾಂಗಿಗೆ, ಪರಬ್ರಹ್ಮಪರಿಣಾಮಿಗೆ ಜಗದ ಹರದಿಗರಲ್ಲಿ ಸಿಕ್ಕಿ ಪರಿಭ್ರಮಣಕ್ಕೊಳಗಾಹನೆ? ಇಂತೀ ನಿಜವನರಿದಾತನೆ ಚೆನ್ನಬಸವಣ್ಣ ಸಾಕ್ಷಿಯಾಗಿ ಕಮಳೇಶ್ವರಲಿಂಗವು ತಾನೆಂಬೆನು.
--------------
ಶ್ರೀಗುರು ಪ್ರಭುನ್ಮುನೀಶ್ವರ
ಅರಿದು ಮರೆದು ಎಚ್ಚತ್ತೆನೆಂಬಲ್ಲಿ ಅರಿವುಂಟೆ ? ತೊಳಗಿ ಬೆಳಗಿ ಪ್ರಜ್ವಲಿಸಿ ಉರಿವ ಬೆಳಗು ಕೆಡುವಲ್ಲಿ, ಉಡುಗುತ್ತಿದ್ದೇನೆ ಎಂದು ನುಡಿಯಿತ್ತೆ ? ಇಂತಿವ ಹಿಡಿವಲ್ಲಿ, ಬಿಡುವಲ್ಲಿ, ಮಿಕ್ಕಾದವ ಒಡಗೂಡುವಲ್ಲಿ, ಅಡಿಯೇರಿದ ಮತ್ತೆ ಪುನರಪಿ ಅಡಿ ಉಂಟೆ ? ತೊಟ್ಟು ಬಿಟ್ಟ ಹಣ್ಣಿಂಗೆ ಮತ್ತಾ ಬುಡದಾಸೆಯೇಕೆ ? ನಿಶ್ಚಯವೆಂಬುದು ನಷ್ಟವಾದಲ್ಲಿ, ಕಾಮಧೂಮ ಧೂಳೇಶ್ವರನೆಂಬ ಲಕ್ಷವೇತಕ್ಕೆ ?
--------------
ಮಾದಾರ ಧೂಳಯ್ಯ
ಸುರಿವ ಜಲಕ್ಕೆ ನೆಲೆ(ನೆಲ?), ಹೊಲೆಯೆಂದು ಪ್ರಮಾಣಿಸಬಹುದೆ ? ಉರಿವ ಅನಲಂಗೆ ಶತಡೊಂಕು ಸಸಿನವೆಂಬುದುಂಟೆ ? ಗುಹೇಶ್ವರಲಿಂಗಕ್ಕೆ ಲೇಸು ಕಷ್ಟವೆಂಬುದಿಲ್ಲ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಉರಿವ ತೃಣದ ಮೇಲೆ ಪುಣ್ಯವ ತಂದಿರಿಸಿದಡೆ ಆ ತೃಣವನ್ನು ಆ ಕೆಂಡ ನುಂಗುವಂತೆ ಗುರುಚರಣದ ಮೇಲೆ ತನುತೃಣವನಿರಿಸಿದಡೆ ಆ ತನುವೆಲ್ಲ ಲಿಂಗಮಯ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಉರಿವ ಕಿಚ್ಚಿನೊಳಗೆ ಹಾಯ್ಕಿದಡೆ, ಬೆಂದಿತ್ತೆಂದರಿಯಬಾರದು ಬೇಯದೆಂದರಿಯಬಾರದು. ಹಿಡಿದು ಸುಟ್ಟು ಬೂದಿಯ ಹೂಸಿಕೊಂಡಡೆ ಮರಳಿ ಹುಟ್ಟಲಿಲ್ಲ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಘಟ್ಟಬೆಟ್ಟದ ನಟ್ಟನಡುವಿನ ಗಿರಿಯಲ್ಲಿ ಹುಟ್ಟಿತೊಂದು ಸೋಜಿಗದಗ್ನಿಯ ಕಳೆ. ಆ ಕಳೆಯ ಬೆಳಗ ಕಾಣೆನೆಂದು ಇಬ್ಬರು ಮುಂದುಗೆಟ್ಟರು, ಮೂವರು ತಾಮಸಕ್ಕೊಳಗಾದರು, ನಾಲ್ವರು ನಡೆಗೆಟ್ಟರು, ಐವರು ಅಂಧಕರಾದರು, ಆರುಮಂದಿ ಹೋರಾಟಗೊಳುತಿರೆ, ಏಳುಮಂದಿ ಕೂಪವ ಬಿದ್ದರು, ಎಂಟುಮಂದಿ ತಂಟುಕಕ್ಕೆ ಒಳಗಾದರು. ಒಂಬತ್ತು [ಮಂದಿ] ಕಣವಿಯ ಹರವರಿಯಲ್ಲಿ [ಹೊಕ್ಕರು.] ಹತ್ತು ಬಗೆಯವರು ಹರಿದಾಡುತಿರೆ, ಇದನು ಕಂಡು, ತರುಗಿರಿಯ ನಡುವೆ ಹರಿವ ಉದಕ ಗಾಳಿ ಬಂದು ಬೆಟ್ಟವನಡರಿ, ಉರಿವ ಜ್ಯೋತಿಯ ತಾಗದ ಮುನ್ನ ನೀರಹರಿಯನಡ್ಡಂಗಟ್ಟಿ, ಗಾಳಿಯ ಹಿಮ್ಮೆಟ್ಟಿಸಿ, ಜ್ಞಾನಪರಬ್ರಹ್ಮದಲ್ಲಿ ನಿಂದವರಾರೆಂದರೆ : ಪ್ರಭುದೇವರು, ಚೆನ್ನಬಸವೇಶ್ವರದೇವರು, ಮೋಳಿಗೆಯ್ಯನವರು, ಸಂಗನಬಸವೇಶ್ವರದೇವರು, ನೀಲಾಂಬಿಕೆ ತಾಯಿ, ಅಕ್ಕನಾಗಮ್ಮ, ಮಹಾದೇವಿಯಕ್ಕ, ಮುಕ್ತಾಯಿ ಮುಖ್ಯವಾದ ಏಳುನೂರಾ ಎಪ್ಪತ್ತು ಅಮರಗಣಂಗಳ ಲೆಂಕರ ಲೆಂಕನಾಗಿ ಎನ್ನ ಆದಿಪಿಂಡಿವ ಧರಿಸಿ, ಮತ್ರ್ಯಕ್ಕೆ ಕಳುಹಿದ ಭೇದವ ಪಿಂಡಜ್ಞಾನದಿಂದಲರಿದು ಆಚರಿಸುತ್ತಿದ್ದೆನಯ್ಯಾ ಎನ್ನಾಳ್ದ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ತನುವಿಂದ ಅನುವನರಿತೆಹೆನೆಂದಡೆ, ಆ ಅನುವಿಂಗೂ ತನುವಿಂಗೂ ಸಂಬಂಧವಲ್ಲ. ಅನುವಿಂದ ತನುವನರಿತೆಹೆನೆಂದಡೆ ಅನು ಬಯಲು, ತನು ರೂಪು. ಕಾಷ* ಪಾಷಾಣ ಘಟದಲ್ಲಿ ತೋರಿ, ಉರಿವ ಅಗ್ನಿಯಂತೆ, ಒಂದನಳಿದು, ಒಂದನುಳಿದಿಹವಹ್ನಿಯ ತೆರನನರಿದಲ್ಲಿ, ಬೇರೊಂದನ್ಯವ ಕುರುಹಿಡಿದಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಒಂದು ಹರಿವ ಹಾವು, ಒಂದು ದನಿ ಸರಕ್ಕೆ ನಿಂದ ಹಾವು, ಒಂದು ಉರಿವ ಹಾವು. ಮೂವರ ನಡುವೆ ನಿಂದು ಆಡುವ ಕೋಡಗದಿರವು ಎಂತೆಂದಡೆ: ಹರಿವ ಹಾವ ಮೆಟ್ಟಿ, ನಿಂದ ಹಾವ ಕೈಯ್ಯಲ್ಲಿ ಹಿಡಿದು, ಉರಿವ ಹಾವ ಬಾಯಲ್ಲಿ ಕಚ್ಚಿ ಆಡುತ್ತಿರಲಾಗಿ, ಕೋಡಗನೊಡೆಯ ಬಂದು ನೋಡಿ, ಕೋಲ ಹಿಡಿದು ಕುಟ್ಟೆ, ಮೂರು ಹಾವ ಬಿಟ್ಟು, ಕುಟ್ಟಿದ ಕೋಲ ನುಂಗಿತ್ತು. ಆ ಕೋಲು ಕೋಡಗದ ಒಡಲೊಳಗೊಡೆದು ಕೋಡಗ ಸತ್ತಿತ್ತು. ದಡಿ ಒಡೆಯನ ನುಂಗಿ ಒಡೆಯನಡಗಿ, ಸದಾಶಿವಮೂರ್ತಿಲಿಂಗವ ಒಡಗೂಡಿ ಬಚ್ಚಬಯಲಾಯಿತ್ತು.
--------------
ಅರಿವಿನ ಮಾರಿತಂದೆ
ಧರೆಗೆ ಸೂತಕವುಂಟೆ ? ವಾರಿಧಿಗೆ ಹೊಲೆಯುಂಟೆ ? ಉರಿವ ಅನಲಂಗೆ ಜಾತಿಭೇದವುಂಟೆ ? ಹರಿದು ಚರಿಸುವ ಅನಿಲಂಗೆ ಸೀಮೆಯುಂಟೆ ? ಆಕಾಶಕ್ಕೆ ದಾರಿ ಮೇರೆಯುಂಟೆ ? [ಇನಿತ]ರಿಂದಲೊದಗಿದ ಘಟವನು ಆರು ಹೊಲ್ಲೆಂಬರು ? ಸಾರವು ಕರ್ಮ, ಕೂಡಲಚೆನ್ನಸಂಗಮದೇವಾ ನಿಮ್ಮ ಶರಣಂಗೆ.
--------------
ಚನ್ನಬಸವಣ್ಣ
ಯೋಗದ ಲಾಗನರಿದು ಯೋಗಿಸಿಹೆನೆಂಬ ಯೋಗಿಗಳು ನೀವು ಕೇಳಿ. ನೆಲವಾಗಿಲ ಮುಚ್ಚಿ, ಜಲವಾಗಿಲ ಮುಚ್ಚಿ, ತಲೆವಾಗಿಲ ತೆಗೆದು ಗಗನಗಿರಿಯ ಪೂರ್ವಪಶ್ಚಿಮ ಉತ್ತರ ದಕ್ಷಿಣದ ನಡುವೆ ಉರಿವ ಅಗ್ನಿಯ ಕಂಡು, ಆ ಅಗ್ನಿಯ ಮೇಲೆ ಸ್ವರನಾಲ್ಕರ ಕೀಲುಕೂಟದ ಸಂಚಯವ ಕಂಡು, ಆ ಸಂಚಯದಲ್ಲಿ ಆಮೃತಸ್ವರವ ಹಿಡಿದು ಕೂಡುವುದೇ ಪರಮಶಿವಯೋಗ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಅದೇ ಪರಮನಿರ್ವಾಣ.
--------------
ಸ್ವತಂತ್ರ ಸಿದ್ಧಲಿಂಗ
ಇನ್ನಷ್ಟು ... -->