ಅಥವಾ

ಒಟ್ಟು 70 ಕಡೆಗಳಲ್ಲಿ , 37 ವಚನಕಾರರು , 68 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧರೆಯಗಲದ ಹುಲ್ಲೆ ಹರಿದು ಮೇಯಿತ್ತ ಕಂಡೆ. ಬಲೆಯ ಬೀಸುವ ಗಂಡರಾರೂ ಇಲ್ಲ, ಹರಿದು ಹಿಡಿದಹೆನೆಂದಡೆ ತಲೆ ಕಾಣಬರುತ್ತಲಿದೆ. ಶಿರವ ಹಿಡಿದೆಹೆನೆಂಬವರಿನ್ನಾರೂ ಇಲ್ಲ. ಹರಿದಾಡುವ ಹುಲ್ಲೆಯ ಕಂಡು ಹಲವು ಬೇಳಾರ (ಬೆಳ್ಳಾರ?)ವ ಬಿಟ್ಟು, ಬೇಟೆಕಾರ ಬಲೆಯ ಬೀಸಿದಡೆ ಹುಲ್ಲೆಯಂಜಿ ಹೋಯಿತ್ತು. ಮರುಳುದಲೆಯಲ್ಲಿ ಹುಲ್ಲೆಯನೆಸೆದಯಬೇಕೆಂದು ಸರಳ ಬಿಟ್ಟು ಬಾಣವನೊಂದು ಕೈಯಲ್ಲಿ ಹಿಡಿದು (ಹಿಡಿವಡೆ?) ಹಳ್ಳಕೊಳ್ಳವ ದಾಂಟಿ ಗಟ್ಟಬೆಟ್ಟವ ಕಳೆದು ಅತ್ತ ಬಯಲ ಮರನ ತಾ ಮೊರೆಗೊಂಡಿತ್ತು. ಹತ್ತೆ ಸಾರಿದ ಮೃಗವ ತಾನೆಚ್ಚಡೆ ನಾರಿ ಹರಿದು ಬಿಲ್ಲು ಮುರಿದು ಹುಲ್ಲೆ ಸತ್ತಿತ್ತು. ಅದ ಕಿಚ್ಚಿಲ್ಲದ ನಾಡಿಗೊಯ್ದು ಸುಟ್ಟು ಬಾಣಸವ ಮಾಡಲು ಸತ್ತ ಹುಲ್ಲೆ ಕರಗಿ ಶಬ (ಸಬ?) ಉಳಿಯಿತ್ತು. ಗುಹೇಶ್ವರಾ ನಿಮ್ಮ ಶರಣ ಕಟ್ಟಿದಿರ ಬಾಣಸದ ಮನೆಗೆ ಬಂದನು.
--------------
ಅಲ್ಲಮಪ್ರಭುದೇವರು
ವೇದಶ್ರುತಿಯಿಂದ ವಸ್ತುವನರಿತೆಹೆನೆಂದಡೆ ಆ ವೇದವೆ ಹಾದಿಯೆ ವಸ್ತುವ ಕಾಬುದಕ್ಕೆ ? ಆ ವೇದ ಸರ್ವವು ಬ್ರಹ್ಮವೆಂದಲ್ಲಿ ವಸ್ತು ಎಲ್ಲಿ ಉಳಿಯಿತ್ತು ? ಆ ತೆರನ ತಿಳಿದು ವೇದವಾರನರಸಿತ್ತು ? ಶ್ರುತಿ ಯಾರ ಭೇದಿಸಿತ್ತು ? ಆ ಗುಣ ನಾದಬಿಂದುಕಳೆಯೊಳಗಾದಲ್ಲಿ ವಸ್ತುತತ್ವರೂಪಾಯಿತ್ತು. ಆ ಸ್ವರೂಪದ ಭೇದದಿಂದ ಪಂಚಭೌತಿಕದ ಗುಣದಿಂದ ಪಂಚವಿಂಶತಿತತ್ವಂಗಳೆಲ್ಲವೂ ಗೊತ್ತಾದವು. ನಾಲ್ಕು ವೇದ, ಹದಿನಾರು ಶಾಸ್ತ್ರ, ಇಪ್ಪತ್ತೆಂಟು ದಿವ್ಯಪುರಾಣಂಗಳಲ್ಲಿ ವೇದ್ಥಿಸಿ ಭೇದಿಸಿ ಕಂಡೆನೆಂಬಲ್ಲಿ ನಿಂದಿತ್ತು ನಿಜ ಸಂದೇಹಕ್ಕೆ ಒಳಗಾದುದಾಗಿ. ತರ್ಕಂಗಳಿಂದ ತರ್ಕಿಸಿ ನೋಡಿ ಮಿಕ್ಕಾದ ತತ್ವಂಗಳಲ್ಲಿ ಲಕ್ಷಿಸಿ ಪ್ರಮಾಣಿಸಿದಲ್ಲಿ ವಸ್ತು ಹಲವು ಕುಲವೆಂದು ಕಲ್ಪಿಸಿ ನುಡಿವಲ್ಲಿ ವಿಭೇದ ಪಕ್ಷವಲ್ಲದೆ ವಸ್ತು ಏಕರೂಪು. ಜಲ ಬಹುನೆಲಂಗಳಲ್ಲಿ ನಿಂದು ಒಲವರವಿಲ್ಲದೆ ಸಸಿ ವೃಕ್ಷಂಗಳ ಸಲಹುವಂತೆ ಸರ್ವಗುಣಸಂಪನ್ನನಾದೆಯಲ್ಲಾ ಪರಮಪ್ರಕಾಶ ಪರಂಜ್ಯೋತಿ ಪಂಚಬ್ರಹ್ಮಸ್ವರೂಪನಾದೆಯಲ್ಲಾ ಎನಗೆ ನೀನಾದೆಹೆನೆಂದು ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗಾ.
--------------
ಪ್ರಸಾದಿ ಭೋಗಣ್ಣ
ಮಣ್ಣ ತುಳಿದು ಮಡಿಕೆಯ ಮಾಡಿ ಆವಿಗೆಯನೊಟ್ಟಿ ಸುಡುವಲ್ಲಿ, ಅಗ್ನಿ ಸುಟ್ಟು ಮಡಿಕೆ ಉಳಿಯಿತ್ತು, ಹರವಿಯ ಉಪಚಾರುಳ್ಳವಂಗೆಕೊಟ್ಟು. ಉಪಚಾರಿಲ್ಲದವನ ಕೊಂದು, ಗುಡುಮಿಯ ಉಪಚಾರ ಇಲ್ಲದವಂಗೆ ಕೊಟ್ಟು ಉಪಚಾರುಳ್ಳವನ ಕೊಂದು, ಕಿಡಿಕಿಯ ಕುಲಗೇಡಿಗೆ ಕೊಟ್ಟು, ಭವಗೇಡಿಯ ಕೊಂದು, ಮೂರೆರಡು ಮಡಕಿಯ ಆರೂರವರಿಗೆ ಕೊಟ್ಟು ಈರಾರು ಈರೆಂಟು ಕೊಂದು, ಉಳಿದ ಮಡಕಿಯ ಊರೆಲ್ಲ ಮಾರಲು, ಊರು ಸುಟ್ಟು ಜನರೆಲ್ಲ ಸತ್ತು, ಸತ್ತವರ ಹೊತ್ತು ಸತ್ತು ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಉಕ್ಕುವ ಬೆಣ್ಣೆಯ ಒಲೆಯ ಮೇಲಿರಿಸಿ, ಅಳಲುತ್ತ ಬಳಲುತ್ತಲಿರ್ದಾರಯ್ಯ. ಅಲ್ಲದ ಚೇಳಿನೊಳು ಚಲ್ಲವಾಡಿ, ಎಲ್ಲರೂ ನಾಣುಗೆಟ್ಟರಲ್ಲಯ್ಯಾ. ಎಲ್ಲರ ಅರಿವು, ಇಲ್ಲಿಯೆ ಉಳಿಯಿತ್ತು. ಇದ ಬಲ್ಲವರಾರೊ, ಮಾರೇಶ್ವರಾ ?
--------------
ಮಾರೇಶ್ವರೊಡೆಯರು
ಮಣ್ಣು ಹೊನ್ನು ಹೆಣ್ಣೆಂಬ ತ್ರಿಭಂಗಿಯಲ್ಲಿ ಭಂಗಿತರಾಗಿ, ಆಸೆಯೆಂಬ ಮಧುಪಾನದಿಂದ ಉಕ್ಕಲಿತವಿಲ್ಲದೆ, ವಸ್ತುವ ಮುಟ್ಟುವದಕ್ಕೆ ದೃಷ್ಟವಿಲ್ಲದೆ, ಕಷ್ಟದ ಮರವೆಯಲ್ಲಿ, ದೃಷ್ಟದ ಸರಾಪಾನವ ಕೊಂಡು ಮತ್ತರಾಗುತ್ತ, ಇಷ್ಟದ ದೃಷ್ಟದ ಚಿತ್ತ ಮತ್ತುಂಟೆ ? ಧರ್ಮೇಶ್ವರಲಿಂಗವ ಮುಟ್ಟದೆ ಇತ್ತಲೆ ಉಳಿಯಿತ್ತು.
--------------
ಹೆಂಡದ ಮಾರಯ್ಯ
ಬೆಣ್ಣೆಯ ಕಂದಲ ಕರಗಲಿಟ್ಟಡೆ ಕಂದಲು ಕರಗಿತ್ತು ಬೆಣ್ಣೆ ಉಳಿಯಿತ್ತು ! ತುಂಬಿ ಇದ್ದಿತ್ತು ಪರಿಮಳವಿಲ್ಲ, ಪರಿಮಳವಿದ್ದಿತ್ತು ತುಂಬಿಯಿಲ್ಲ. ತಾನಿದ್ದನು ತನ್ನ ಸ್ವರೂಪವಿಲ್ಲ; ಗುಹೇಶ್ವರನಿದ್ದನು ಲಿಂಗವಿಲ್ಲ
--------------
ಅಲ್ಲಮಪ್ರಭುದೇವರು
ಶಿಶುವಿನ ಬಸುರಿನಲ್ಲಿ ತಾಯಿ ಹುಟ್ಟಿ, ತಾಯಿ ಅಳಿದು, ಶಿಶು ಉಳಿಯಿತ್ತು. ಉಳಿದುಳುಮೆಯ ತಿಳಿಯಬಲ್ಲಡೆ, ನಿಃಕಳಂಕ ಮಲ್ಲಿಕಾರ್ಜುನಲಿಂಗವನೊಡಗೂಡ ಬಲ್ಲವ.
--------------
ಮೋಳಿಗೆ ಮಾರಯ್ಯ
ಬೇಡಿ ತಂದು ದಾಸೋಹವ ಮಾಡುವನ್ನಬರ, ಪಂಗುಳನ ಪಯಣದಂತೆ. ಯಾಚಕತ್ವ ಭಕ್ತಂಗುಂಟೆ ? ಭಕ್ತನಾಗಿ ಹುಟ್ಟಿ ಭಕ್ತರ ಬೇಡಿತಂದು ಮಾಡಿ ಮುಕ್ತಿಯನರಸಲುಂಟೆ ? ಅದು ಅಮರೇಶ್ವರಲಿಂಗವ ಮುಟ್ಟದೆ ಇತ್ತಲೆ ಉಳಿಯಿತ್ತು.
--------------
ಆಯ್ದಕ್ಕಿ ಮಾರಯ್ಯ
ಕಂಡು ಅರ್ಪಿಸುವುದು ಬ್ರಹ್ಮತತ್ವ. ಸಂದೇಹದಲ್ಲಿ ಅರ್ಪಿಸುವುದು ವಿಷ್ಣುತತ್ವ. ಬಂಧಮೋಕ್ಷಕರ್ಮಗಳಿಲ್ಲವೆಂದು ಅರ್ಪಿಸುವುದು ರುದ್ರತತ್ವ. ತತ್ವಂಗಳ ಗೊತ್ತ ಮುಟ್ಟದೆ ನಿಶ್ಚಯವಾದ ಪರಿಪೂರ್ಣಂಗೆ ಉತ್ಪತ್ತಿ ಸ್ಥಿತಿ ಲಯವೆಂಬುದು ಇತ್ತಲೇ ಉಳಿಯಿತ್ತು, ಕಾಮಧೂಮ ಧೂಳೇಶ್ವರನ ಮುಟ್ಟಲಿಲ್ಲವಾಗಿ.
--------------
ಮಾದಾರ ಧೂಳಯ್ಯ
ಬೆಣ್ಣೆಯ ಮಡಕೆಯಲ್ಲಿ ಕಿಚ್ಚು ತುಂಬಿ, ಉರಿವುತ್ತಿದ್ದುದ ಕಂಡೆ. ಕಿಚ್ಚು ಕರಗಿ, ಬೆಣ್ಣೆ ಉಳಿಯಿತ್ತು. ಉಳಿದ ಉಳುಮೆಯ ಒಡಗೂಡಬಲ್ಲಡೆ, ನಿಃಕಳಂಕ ಮಲ್ಲಿಕಾರ್ಜುನಲಿಂಗವ [ಅರಿ].
--------------
ಮೋಳಿಗೆ ಮಾರಯ್ಯ
ಸಕಲಪದಾರ್ಥ ರಸದ್ರವ್ಯಂಗಳ ಲಿಂಗಕ್ಕೆಂದು ಕಲ್ಪಿಸಿ ಅರ್ಪಿಸುವಲ್ಲಿ ಮೃದು ಕಠಿಣ ಮಧುರ ಸವಿಸಾರಂಗಳ ರುಚಿ ಮುಂತಾದುದ ತನ್ನಂಗವರಿದು ಲಿಂಗವ ಮುಟ್ಟಬೇಕು. ಹಾಗಲ್ಲದೆ ತನ್ನ ಜಿಹ್ವೆಯಲ್ಲಿ ಮಧುರ ಮೃದು ಸವಿಸಾರ ರುಚಿಗಳನರಿದು ಆತ್ಮಲಿಂಗಕ್ಕೆ ಅರ್ಪಿತವೆಂದಲ್ಲಿ ದೃಷ್ಟಲಿಂಗದ ಅರ್ಪಿತ ಇತ್ತಲೆ ಉಳಿಯಿತ್ತು. ರೂಪು ಇಷ್ಟಲಿಂಗಕ್ಕೆಂದು, ರುಚಿ ಪ್ರಾಣಲಿಂಗಕ್ಕೆಂದು ಅರ್ಪಿತದ ಭೇದವನರಿಯದೆ ಇದಿರಿಟ್ಟು ಉಭಯವ ತಮ್ಮ ತಾವೆ ಕಲ್ಪಿಸಿಕೊಂಡು ಮೊದಲಿಗೆ ಮೋಸ, ಲಾಭಕ್ಕದ್ಥೀನವುಂಟೆ? ಸ್ವಯಂಭು ಹೇಮಕ್ಕೆ ಒಳಗು ಹೊರಗುಂಟೆ? ಎಡಬಲದಲ್ಲಿ ಒಂದಕ್ಷಿ ನಷ್ಟವಾದಡೆ ಅದಾರ ಕೇಡೆಂಬರುರಿ ಬಿಡುಮುಡಿಯಲ್ಲಿ ಕ್ರೀನಷ್ಟವಾದಲ್ಲಿ ಅರಿವಿಂಗೆ ಹೀನ. ಅರಿದು ಆಚರಿಸದಿದ್ದಡೆ ಕ್ರೀಗೆ ಒಡಲೆಡೆಯಿಲ್ಲ. ಘಟಾಂಗಕ್ಕೆ ನೋವು ಬಂದಲ್ಲಿ ಆ ಘಟಗೂಡಿಯೆ ಆತ್ಮ ಅನುಭವಿಸುವಂತೆ. ಇಂತೀ ಇಷ್ಟಪ್ರಾಣವೆಂದು ಕಟ್ಟಿಲ್ಲ. ಇಂತೀ ಉಭಯವನರಿಯಬೇಕು ಅರ್ಪಿಸಬೇಕು ಸದ್ಯೋಜಾತಲಿಂಗದಲ್ಲಿ.
--------------
ಅವಸರದ ರೇಕಣ್ಣ
ತಂದೆಯ ಸದಾಚಾರ ಮಕ್ಕಳೆಂಬರು, ಗುರುಮಾರ್ಗಾಚಾರ ಶಿಷ್ಯನದೆಂಬರು. ಮೇಲು ಪಂಕ್ತಿಯ ಕಾಣರು ನೋಡಾ. ತತ್ವದ ಮೇಲು ಪಂಕ್ತಿ ಅತ್ತಲೆ ಉಳಿಯಿತ್ತು. ಕತ್ತಲೆಯ ಮರೆಯಲ್ಲಿ ಕಾಣರು ನೋಡಾ. ತತ್ವದ ಹಾದಿಯನು, ಭಕ್ತಿಯ ಭೇದವನು, ಇವರೆತ್ತ ಬಲ್ಲರಯ್ಯಾ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಬೆಂಕಿಗೆ ಶೈತ್ಯ ಕೊಂಡು, ಉದಕಕ್ಕೆ ಉರಿ ಹುಟ್ಟಿ ಮತ್ತುದಕವನರಸುವುದ ಕಂಡೆ. ಮಡಕೆ ನಿಂದುರಿದು, ಅಕ್ಕಿ ಉಳಿಯಿತ್ತು, ನಿಃಕಳಂಕ ಮಲ್ಲಿಕಾರ್ಜುನಲಿಂಗವ ಮರೆಯಲಾಗಿ.
--------------
ಮೋಳಿಗೆ ಮಾರಯ್ಯ
ಈರೇಳುಲೋಕವ ಕೋಡಗ ನುಂಗಿತ್ತ ಕಂಡೆ. ನುಂಗಿದ ಕೋಡಗವ ಗುಂಗುರ ನುಂಗಿತ್ತು. ಗುಂಗುರ ಬಂದು ಕಣ್ಣ ಕಾಡಲಾಗಿ, ಕಣ್ಣಿನ ಕಾಡಿಗೆ ಅಳಿಯಲಾಗಿ, ಕಣ್ಣಿನ ಬಣ್ಣ ಕೆಟ್ಟಿತ್ತು. ಕಣ್ಣಿನ ಒಡೆಯ ನೋಡಿ ಗುಂಗುರ ಒರಸಲಾಗಿ, ಆ ಗುಂಗುರ ಸತ್ತು, ಕೋಡಗ ಉಳಿಯಿತ್ತು. ಆ ಕೋಡಗವನಾಡಿಸಿಕೊಂಡುಂಬ ಜೋಗಿಗಳಿಗೇಕೆ, ಆ ರೂಢನ ಸುದ್ದಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ನಾ ನಿನ್ನನರಿವಲ್ಲಿ, ನೀನೆನ್ನ ಕೈಯಲ್ಲಿ ಅರಿಯಿಸಿಕೊಂಬಲ್ಲಿ, ಅದೇನು ಭೇದ ? ನಾನೆಂದಡೆ ನಿನ್ನ ಸುತ್ತಿದ ಮಾಯೆ. ನೀನೆಂದಡೆ ನನ್ನ ಸುತ್ತಿದ ಮಾಯೆ. ನಾ ನೀನೆಂಬಲ್ಲಿ ಉಳಿಯಿತ್ತು, ಅರ್ಕೇಶ್ವರಲಿಂಗನ ಅರಿಕೆ.
--------------
ಮಧುವಯ್ಯ
ಇನ್ನಷ್ಟು ... -->