ಅಥವಾ

ಒಟ್ಟು 5 ಕಡೆಗಳಲ್ಲಿ , 5 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉದಕದ ತಂಪವ ತಾವರೆಯಲ್ಲದೆ ಹೊರಗಣ ಕೊರಡೆತ್ತಬಲ್ಲುದೊ ? ಹೂವಿನ ಪರಿಮಳವ ತುಂಬಿಯಲ್ಲದೆ ಹೊರಗಣ ನೊಣನೆತ್ತಬಲ್ಲುದೊ ? ಕ್ಷೀರದ ರುಚಿಯ ಹಂಸೆಯಲ್ಲದೆ ಕೆಲದಲ್ಲಿ ಬಕನೆತ್ತವಬಲ್ಲುದೊ ? ಮಾವಿನ ಹಣ್ಣಿನ ರುಚಿಯನರಗಿಳಿಗಳು ಬಲ್ಲವಲ್ಲದೆ ಹೊರಗಣ ಕೋಳಿಗಳೆತ್ತ ಬಲ್ಲವೊ ? ಊಟದ ರುಚಿಯನು ನಾಲಗೆಯಲ್ಲದೆ ಕಲಸುವ ಕೈ ತಾನೆತ್ತ ಬಲ್ಲುದೊ? ಕೂಟದ ಸುಖವನು ಯೌವನೆಯಲ್ಲದ ಬಾಲೆ ತಾನೆತ್ತ ಬಲ್ಲಳೊ ? ಚಂದ್ರಸೂರ್ಯರÀಂತರಾಂತರವÀ ಖೇಚರರು ಬಲ್ಲರಲ್ಲದೆ ಗಗನದೊಳಗಾಡುವ ಹದ್ದುಗಳು ತಾವೆತ್ತ ಬಲ್ಲವೊ ? ಎಲೆ ಮಹಾಲಿಂಗ ಕಲ್ಲೇಶ್ವರಯ್ಯಾ. ನಿಮ್ಮ ನಿತ್ಯನಿಜೈಕ್ಯರ ನಿಲುವನು ಮಹಾನುಭಾವಿಗಳು ಬಲ್ಲರಲ್ಲದೆ ಲೋಕದ ಜಡಜೀವಿಗಳೆನಿಸುವ ಮಾನವರೆತ್ತ ಬಲ್ಲರೊ ?
--------------
ಹಾವಿನಹಾಳ ಕಲ್ಲಯ್ಯ
ಆಟದಲಿ ಕೆಲಹೊತ್ತುಗಳೆದು, ಕೂಟದಲಿ ಕೆಲಹೊತ್ತುಗಳೆದು, ನೋಟದಲಿ ಕೆಲಹೊತ್ತುಗಳೆದು, ಊಟದ ಹೊತ್ತಿಗೆ ಲಿಂಗವ ಕೂಡಿಹೆನೆಂಬವನೊಬ್ಬ, ಊಟ ಮಾಟಕೂಟದಲ್ಲಿ ಕೋಟಲೆಗೊಳುತ್ತಿದೆನೆಂಬುವನೊಬ್ಬ ಪೋಟ. ಇವರಿಬ್ಬರ ನೋಟ ಬೇಟಕ್ಕೆ ಸಿಕ್ಕದೆ ದಾಂಟಿಹೋದನು, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
`ಇಕ್ಕಿದ ಹರಿಗೆ ತೊಲದ ಕಂಭ'ವೆಂದು ಬಿರಿದನಿಕ್ಕಿ ಹುಯ್ಯಲ ಕಂಡು ಓಡಿ ಬರುವಂಗೆ ಆ ಬಿರಿದೇತಕಯ್ಯ? ಬತ್ತೀಸಾಯುಧದ ಸಾಧನೆಯ ಕಲಿತು ಕಾಳಗದಲ್ಲಿ ಕೈಮರೆದು ಘಾಯವಡೆದಂಗೆ ಆ ಸಾಧನೆ ಏತಕಯ್ಯ? ಕತ್ತಲೆಗಂಜಿ ಕರದಲ್ಲಿ ಜ್ಯೋತಿಯಂ ಪಿಡಿದು ಹಾಳುಗುಳಿಯಲ್ಲಿ ಬೀಳುವಂಗೆ ಆ ಜ್ಯೋತಿಯೇತಕಯ್ಯ? ಆದ್ಯರ ವಚನಂಗಳ ಸದಾಕಾಲದಲ್ಲಿ ಓದಿ ಶಿವತತ್ವ ಆತ್ಮತತ್ವ ವಿದ್ಯಾತತ್ವವನರಿದು ಆರಕ್ಕೆ ಆರ ನೆಲೆಮಾಡಿ ಮೂರಕ್ಕೆ ಮೂರ ಸಂಬಂಧಿಸಿ ಐದಕ್ಕೆ ಇನ್ನು ಪ್ರತಿಯಿಲ್ಲವೆಂದು ಅರಿದ ವಿರಕ್ತರು ಪುರಾತನರಂತೆ ಸಮ್ಯಜ್ಞಾನ ಕ್ರೀಯಿಂದಲೆ ಆದರಿಸುವುದು, ಭಕ್ತ ವಿರಕ್ತರ ಆಚರಣೆಯೆಲ್ಲಾ ಒಂದೇ. ಅದು ಹೇಗೆಂದರೆ ಭಕ್ತಂಗೆ ಬಹಿರಂಗದ ದಾಸೋಹ. ವಿರಕ್ತಂಗೆ ಅಂತರಂಗದ ದಾಸೋಹ. ಈ ಆಚರಣೆಯನತಿಗಳೆದು ಮನ ಬಂದ ಪರಿಯಲ್ಲಿ ನಡೆದು ಕೆಡುವಂಗೆ ಆದ್ಯರ ವಚನವೇತಕಯ್ಯ? ಆದ್ಯರ ವಚನವೆಂಬುದು ಸಂತೆಯಮಾತೆ? ಪುಂಡರ ಪುರಾಣವೇ? ಲೋಕದ ಜನರ ಮೆಚ್ಚಿಸುವ ಬೀದಿಯ ಮಾತೆ? ಶಿವ ಶಿವ ನೀವು ಶಿವಶರಣರ ಕೂಡಾಡಿ ವಚನಂಗಳ ಕಲಿತು ಆ ವಚನಂಗಳ ನಿಮ್ಮ ಊಟದ ವೆಚ್ಚಕ್ಕೆ ಈಡು ಮಾಡಿಕೊಂಡಿರಲ್ಲದೆ ಮುಂದಣ ಮುಕ್ತಿಯ ಪದವ ಕಾಣದೇ ಹೋದಿರಲ್ಲಾ? ಇದು ಕಾರಣ- ಶಿವಜ್ಞಾನೋದಯವಾದ ಲಿಂಗಾಂಗಿಗಳಿಗೆ ಎನ್ನ ನುಡಿ ಮೈಗಂದೆಯಂ ತುರಿಸಿದಂತೆ ಹಾಲು ಸಕ್ಕರೆಯನುಂಡಂತೆ ಸವಿದೋರುತ್ತದೆ. ವೇಷಧಾರಿ ವಿಶ್ವಾಸಘಾತುಕರಿಗೆ ಎನ್ನ ನುಡಿ ಅಲಗಿನ ಮೊನೆಯಂತೆ ಇರಿಯುತ್ತಿದೆಯಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಊಟದ ಸುಖವ ಕಲಿತ ಮತ್ತೆ ನೋಟಕ್ಕೆ ದೃಷ್ಟ. ನೋಟದ ಸುಖವ ಕಲಿತ ಮತ್ತೆ ಬೇಟಕ್ಕೆ ದೃಷ್ಟ. ಬೇಟದ ಸುಖವ ಕಲಿತ ಮತ್ತೆ ಕೂಟಕ್ಕೆ ದೃಷ್ಟ. ಕೂಟದ ಸುಖವ ಕಲಿತ ಮತ್ತೆ ಜಗದಾಟಕ್ಕೆ ದೃಷ್ಟ. ಇಷ್ಟನರಿಯದೆ ನಿರ್ಜಾತನೆನಲೇಕೆ. ಇಷ್ಟಕ್ಕಂಜಿ ಈಸನ ಮರೆಯ ವೇಷವ ಬಿಟ್ಟು, ಎನ್ನಗಿನ್ನೇಸು ಕಾಲ ಆಸೆಯೆಂಬ ಕೋಳವೋ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಊಟದ ದೆಸೆಯಿಂದ ಹೆಚ್ಚಿ ಉಡಿಗೆ ತೊಡಿಗೆಯ ಮೇಲೆ ಮೆರೆವಾತನನು ಕಂಡು, ರೂಪು ಲಾವಣ್ಯ ಸುಖಭೋಗಿಗಳೆಂಬರಯ್ಯ. ಈ ಲೋಕದ ಮಾನವರು ಸುಖಿಗಳಾದರೆ ತನುವ ತಾಪತ್ರಯಾದಿಗಳು ಮುಟ್ಟಬಲ್ಲವೆ? ಮಾಯಾ ಮೋಹವೆಂಬ ಮೊಲನಾಗರು ಹಿಡಿದು ಬಿಡದು ನೋಡಾ. ಸುಖಿ ಸುಖಿಗಳೆಂಬ ಈ ಲೋಕದ ಕಾಕುವಿಚಾರವನೇನೆಂಬೆನಯ್ಯ?. ಭಕ್ತಿಯೇ ರೂಪು, ನಿತ್ಯವೇ ಲಾವಣ್ಯ, ಮುಕ್ತ್ಯಂಗನೆಯ ಕೂಡಿ ಸುಖಿಸುವುದೇ ಸುಖ. ಲಿಂಗಭೋಗೋಪಭೋಗಿಯಾದ ಪ್ರಸಾದ ಭೋಗವೇ ಭೋಗ. ಇಂತಪ್ಪ ನಿರಂಗಸಂಗಿಗಳು ಅವಲೋಕದಲ್ಲಿಯೂ ಇಲ್ಲ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
-->