ಅಥವಾ

ಒಟ್ಟು 14 ಕಡೆಗಳಲ್ಲಿ , 10 ವಚನಕಾರರು , 13 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಧ್ಯನಿರಾಳದಲ್ಲಿ ನಿಂದು, ಊಧ್ರ್ವ ನಿರಾಳವನೆಯ್ದಿದಲ್ಲಿ, ಕಾಣಲಾಯಿತ್ತು ಒಂದು ಪುತ್ಥಳಿ. ಮೂರು ಬೆಳಗಿನ ಮಧ್ಯದಲ್ಲಿ ಬೇರೊಂದು ಬೆಳಗು ಮೀರಿ ತೋರುತ್ತಿದೆ ಈ ಪುತ್ಥಳಿ. ವಜ್ರದ ಮೈದೊಡಗೆಯ ತೊಟ್ಟು ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ ಅವಿರಳವಾಯಿತ್ತು.
--------------
ಆದಯ್ಯ
ಇನ್ನು ಹಠಯೋಗಕ್ಕೆ ಸಾಧನಮಾದ ಬಂಧತ್ರಯಂಗಳ ಭೇದವೆಂತೆಂದೊಡೆ : ವಾಮಪಾದದ ಹಿಮ್ಮಡದಿಂ ಯೋನಿಸ್ಥಾನವನೊತ್ತಿ ಬಲಪಾದಮಂ ನೀಡಿ, ಎರಡು ಹಸ್ತಗಳಿಂದೆ ಅಂಗುಷ್ಠಮಂ ಪಿಡಿದು, ಕಂಠಸ್ಥಾನದಲ್ಲಿ ಚುಬುಕವನಿರಿಸಿ, ವಾಯುಧಾರಣಮಂ ಮಾಡುವುದೆ ಜಾಲಂಧರಬಂಧವೆನಿಸುವುದು. ವಾಮಪಾದದ ಹಿಮ್ಮಡದಿಂದಾಧಾರವನೊತ್ತಿ , ಎಡದ ತೊಡೆಯ ಮೇಲೆ ಬಲದ ಪಾದವನಿರಿಸಿ ವಾಯುಪೂರಣಮಂ ಮಾಡಿ, ಜಾಲಂಧರಮಂ ಬಂದ್ಥಿಸುವುದೆ ಮಹಾಬಂಧವೆನಿಸುವುದು. ನಾಬ್ಥಿಯ ಊಧ್ರ್ವ ಅಧೋಭಾಗಂಗಳನು ಬಲಾತ್ಕಾರದಿಂ ಬಂದ್ಥಿಪುದೆ ಉಡ್ಯಾಣಬಂಧವೆನಿಸುವುದು. ಈ ಬಂಧತ್ರಯಂಗಳಿಂದೆ ಛೇದನ ಚಾಲನ ದೋಹನಾದಿ ಕ್ರೀಯಂಗಳಿಂದೆ ಪೆಚ್ಚಿರ್ದ ಜಿಹ್ವೆಯನು ಭ್ರೂಮಧ್ಯಸ್ಥಾನಕ್ಕೇರಿಸಿ ಸ್ಥಿರದೃಷ್ಟಿಯಾಗಿಹುದೇ ಹಠಯೋಗ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಆನಂದಸ್ಥಳದಲ್ಲಿ ಊಧ್ರ್ವ ಕಂಜಕನ್ನಿಕೆಗೆ ಇಂದುವಿನ ಕೊಡನ ಹೊತ್ತಾಡುತ್ತೈದಾಳೆ. ಮೂಲಪಟ್ಟಣದಲ್ಲಿ ಮೂವರಿಗೆ ರತಿಯ ಹುಟ್ಟಿಸುತ್ತೈದಾಳೆ. ಅಪರಪಟ್ಟಣದಲ್ಲಿ ಹಲವರಿಗೆ ಆಶ್ರಯವಾಗಿ ಐದಾಳೆ. ಮಧ್ಯಮಪಟ್ಟಣದಲ್ಲಿ ಮಹಾಮಹೀಶ್ವರರಿಗೆ ಮಹಾದಾಶ್ರಯವಾಗಿ ಐದಾಳೆ. ಇಂತು ಪಟ್ಟಣ ಹದಿನೆಂಟಕ್ಕ ಸೀಮೆ ಇಪ್ಪತ್ತೈದು, ಗ್ರಾಮ ಮೂವತ್ತಾರು ಸಂಯೋಗವೆಂಬ ನಗರಿಯಲ್ಲಿ ನಿತ್ಯಸಾನಂದನೆಂಬಾತ ಕುಳ್ಳಿದ್ದು, ಪಟ್ಟಣ ಹನೆಂಟರ ವ್ಯಾಪ್ತಿಯ ತಳವಾರರೆಂಟು ಮಂದಿಯ ಗ್ರಾಮ ಬಂಧನೆಯ ಮಾಡಲೀಯದೆ ಸುಚಿತ್ತದಿಂ ನಡಸುತ್ತೈದಾನೆ. ನೆನೆವ ಮನಸ್ಸಿನಲ್ಲಿ ಅವಿತಥವಿಲ್ಲದೆ ಚಿತ್ತವೃತ್ತಿಯನ್ನರಿತು ಮಹಾಲೋಕದಲಿಪ್ಪ ಮೂನ್ನೂರ ಮೂವತ್ತಮೂರು ಕುಲದುರ್ಗಂಗಳಂ ಪಾಟಿಸಿ ಸುಯಿಧಾನಿಯಾಗಿರುತ್ತೈದಾನೆ. ಅಜಲೋಕದಲ್ಲಿ, ಶುದ್ಧಸಂಯೋಗ ಸಂಗಮನೆಂಬ ಗೃಹದಲ್ಲಿ, ಮೂಲಕ ಮುಕ್ತಕಾ ರುದ್ರಕ ಅನುಮಿಷಕ ಆಂದೋಳಕ ವಿಚಿತ್ರಕ ಸಕಲ ಮುಕ್ತ್ಯಕ್ಕ, ಸಾನಂದ ಸತ್ಯಕ್ಕ ಇಂತಪ್ಪ ಮಹಾಸ್ತ್ರೀಯರ ಚಿತ್ತಕ್ಕೆ ಸಗುಣವಪ್ಪುದನೊಂದನೆ ಕೂಡಿ ಭೋಗಿಸುತ್ತೈದಾನೆ. ಅವರು ಸ್ತ್ರೀಯರು, ತಾ ಪುರುಷನಾಗಿ ಕೂಡುತ್ತೈದಾನೆ, ಅವಿತಥವಿಲ್ಲದೆ ಆ ಕೂಟದ ಸುಖವನು ಶಿಶು ಬಲ್ಲ, ಶಿಶುವಿನ ಜನನವನು ಅವ್ವೆ ಬಲ್ಲಳು. ಅವ್ವೆಯ ಇಚ್ಛಾ ಮಾತ್ರದಲ್ಲಿದ್ದು ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ ತೈಲಿಂಗಕ್ಕೆ ಮೂಲವಾದಳವ್ವೆ.
--------------
ಸಿದ್ಧರಾಮೇಶ್ವರ
ಉದಯಮುಖದಲ್ಲಿ ಹುಟ್ಟಿದ ಬಿಸಿಲ ಲಿಂಗಾರ್ಪಿತವ ಮಾಡಬೇಕು. ಅಸ್ತಮಾನ ಮುಖದಲ್ಲಿ ಹುಟ್ಟಿದ ನೆಳಲ ಲಿಂಗಾರ್ಪಿತವ ಮಾಡಬೇಕು. ಅಧ ಊಧ್ರ್ವ ಮಧ್ಯವನು ಲಿಂಗಾರ್ಪಿತವ ಮಾಡಬೇಕು. ಅಂಬರಮುಖದಲ್ಲಿ ಹುಟ್ಟಿದ ನಿರ್ಮಳೋದಕವನು ಲಿಂಗಾರ್ಪಿತವ ಮಾಡಬೇಕು. ಬಯಲಮುಖದಲ್ಲಿ ಹುಟ್ಟಿದ ವಾಯುವನು ಲಿಂಗಾರ್ಪಿತವ ಮಾಡಬೇಕು. ಆವ ಪದಾರ್ಥವಾದರೇನು ಲಿಂಗಾರ್ಪಿತವ ಮಾಡಬೇಕು. ಕೂಡಲಚೆನ್ನಸಂಗಯ್ಯಾ ಲಿಂಗಾರ್ಪಿತವಲ್ಲದೆ ಕೊಂಡರೆ ಕಿಲ್ಬಿಷವೆಂಬುದು.
--------------
ಚನ್ನಬಸವಣ್ಣ
ಊಧ್ರ್ವಬಿಂದು ನಾದ ಮುಟ್ಟಲಿಕೆ ಜಂಗಮ, ಮಧ್ಯಬಿಂದು ಊಧ್ರ್ವ ಮುಟ್ಟಲಿಕೆ ಸ್ಥಾವರ, ಸ್ಥಾವರಬಿಂದು ಸ್ಥಾವರವಾದ ಊಧ್ರ್ವ ಮುಟ್ಟಲಿಕೆ ಭಕ್ತ, (ಭಕ್ತಿ?) ಬಿಂದು ನಾದ ಮುಟ್ಟಲಿಕೆ ಭವಿ. ಇಂತು ಜಾತಿಸೂತಕ ಪ್ರೇತಸೂತಕವನಳಿದಾತಂಗೆ, ಕಾಲವಿಲ್ಲ ಕರ್ಮವಿಲ್ಲ, ಭವಿಗೆ ಕೊಡಲಿಲ್ಲ ಭಕ್ತಂಗೆ ಕೊಡಲಿಲ್ಲ. ಇದು ಕಾರಣ, ಕೂಡಲಚೆನ್ನಸಂಗಮದೇವಾ ನಿಮ್ಮ ಶರಣಂಗಲ್ಲದೆ ಉಳಿದವರಿಗಪೂರ್ವ.
--------------
ಚನ್ನಬಸವಣ್ಣ
ಕುಂಡಲಿ ಭ್ರೂಮಧ್ಯವನೊಂದಿನಿಂದು, ಪೂರ್ವ ಹೃದಯವ ಪೂರೈಸಿ, ಮಧ್ಯ ಹೃದಯವನವಗ್ರಹಿಸಿ, ಊಧ್ರ್ವ ಹೃದಯವನೊಡಗೂಡಿ, ಪಶ್ಚಿಮಚಕ್ರದಲ್ಲಿ ಪ್ರಾಣನಿವಾಸಿಯಾಗಿಪ್ಪನಾ ಶರಣ. ಓಂ ಮೂಲದ ಆ ಪಶ್ಚಿಮ ಶಿಖಾಚಕ್ರದಲ್ಲಿ ಮನೋಭಾವವಡಗಿ, ಸಹಸ್ರದಳ ಕಮಲದ ಬಯಲೊಳಗೆ ಬಯಲಾಗಿ, ನೀನು ತಾನಾದ ಚೆನ್ನಬಸವಣ್ಣನ ಶ್ರೀಪಾದಕ್ಕೆ ಶರಣೆಂದು ಬದುಕಿದೆನು ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಇನ್ನು ರುದ್ರಾಕ್ಷಿಸ್ಥಲವೆಂತೆಂದಡೆ : ಬ್ರಹ್ಮ ವಿಷ್ಮು ರುದ್ರ ಮೊದಲಾದ ಸಮಸ್ತ ದೇವರ್ಕಳು ತ್ರಿಪುರದ ರಾಕ್ಷಸರ ಉಪದ್ರಕ್ಕೆ ಭೀತರಾಗಿ ರುದ್ರಲೋಕದ ಮಹಾರುದ್ರಂಗೆ ಶಿವಧೋ ಶಿವಧೋ ಎಂದು ಮೊರೆಯಿಡುತ ಚಿಂತಾಕ್ರಾಂತರಾಗಿ ನಿಲಲು, ಆ ರುದ್ರಲೋಕದ ಮಹಾರುದ್ರನು ತ್ರಿಪುರವಧಾರ್ಥ ಸರ್ವದೇವಮಯ ದಿವ್ಯ ಅನಂತತೇಜ ಅನಂತಪ್ರಚಯ ಅನಂತಜ್ವಾಲಾಮಯವಾಗಿಹ ಅಘೋರರೂಪ ತಾಳಿ ಉತ್ತಮವಾದ ಅಘೋರಾಸ್ತ್ರಮಂ ಚಿಂತಿಸಿ, ತ್ರಿಪುರದ ಕೀಲ ದಿವ್ಯಸಹಸ್ರವರ್ಷ ನೋಡಲು ಆ ರುದ್ರನ ಅಕ್ಷಿಯಲ್ಲಿ ರಕ್ತಾಶ್ರುಜಲಬಿಂದುಗಳು ಜನಿಸಿ ಭೂಮಿಯ ಮೇಲೆ ಬೀಳಲು ಮಹಾರುದ್ರಾಕ್ಷ ವೃಕ್ಷವಾಗಿ ತ್ರೈಲೋಕ್ಯಾನುಗ್ರಹ ಕಾರಣವಾಯಿತ್ತು ನೋಡಾ. ಆ ರುದ್ರಾಕ್ಷಿಯ ದರುಶನದ ಫಲ ಲಿಂಗದರುಷನದ ಫಲ, ರುದ್ರಾಕ್ಷಿಯ ದರುಶನ ಸ್ಪರ್ಶನದಿಂದ ಸರ್ವಪಾಪಂಗಳು ಹೋಹವು ನೋಡಾ. ಇದಕ್ಕೆ ಈಶ್ವರೋsವಾಚ : ``ಶ್ರುಣು ಷಣ್ಮುಖ ಯತ್ನೇನ ಕಥಯಾಮಿ ಸಮಾಸತಃ | ತ್ರಿಪುರೋ ನಾಮ ದೈತ್ಯಸ್ತು ಪುರಶ್ಚಿತ್ತು ಸುರರ್ಜಯಃ || ಚಿತ್ತಾಪ್ತೇವ ಸುರಾಸ್ಸರ್ವೇ ಬ್ರಹ್ಮ ವಿಷ್ಣೇಂದ್ರದೇವತಾಃ ಚಿಂತಿತಂ ಚ ಮಯಾ ಪುತ್ರ ಅಘೋರಾಸ್ತ್ರಮನುತ್ತಮಂ|| ಸರ್ವದೇವಮಯಂ ದಿವ್ಯಂ ಜ್ವಲಿತಂ ಘೋರರೂಪಕಂ | ತ್ರಿಪುರಸ್ಯ ವಧಾರ್ಥಾಯ ದೇವಾನಾಂ ಪ್ರಾಣವಾಯು ಚ || ಸರ್ವವಿಘ್ನಪ್ರಶಮನಂ ಅಘೋರಾಸ್ತ್ರಂತು ಚಿಂತಿತಂ | ದಿವ್ಯವರ್ಷಸಹಸ್ರಾಣಿ ಚಕ್ಷುರುನ್ಮೀಲಿತಂ ಮಯಾ || ಘಟೇಭ್ಯಾಂ ಚ ಕುಲಾಕ್ಷಿಭ್ಯಾಂ ಪತಿತಾ ಜಲಬಿಂದವಃ | ರಕ್ತಾಶ್ರುಬಿಂದವೋ ಜಾತಾಃ ಮಹಾರುದ್ರಾಕ್ಷವೃಕ್ಷಕಾಃ || ಸ್ಥಾವರತ್ವಮನುಪ್ರಾಪ್ಯ ಮತ್ರ್ಯಾನುಗ್ರಹಕಾರಣಾತ್ | ರುದ್ರಾಕ್ಷಾಣಾಂ ಫಲಂ ಧೃತ್ವಾ ತ್ರಿಷು ಲೋಕೇಷು ವಿಶ್ರುತಂ || ಲಿಂಗಸ್ಯ ದರ್ಶನೇ ಪುಣ್ಯಂ ಭವೇತ್‍ರುದ್ರಾಕ್ಷದರ್ಶನಾತ್ | ಭಕ್ತ್ಯ ರಾತ್ರೋ ದಿವಾಪಾಪಂ ದಿವಾರಾತ್ರಿ ಕೃತಂ ಹರೇತ್ || ಲಕ್ಷಂತು ದರ್ಶನಾತ್ಪುಣ್ಯಂ ಕೋಟಿ ಸಂಸ್ಪರ್ಶನೇ ಭವೇತ್ | ತತ್ಕೋಟಿ ಶತಂ ಪುಣ್ಯಂ ಲಭತೇ ಧಾರಣಾನ್ನರಃ || ಲಕ್ಷಕೋಟಿ ಸಹಸ್ರಾಣಿ ಲಕ್ಷಕೋಟಿ ಶತಾನಿ ಚ | ತಜ್ಜಪಾಲ್ಲಭತೇ ಪುಣ್ಯಂ ನಾತ್ರ ಕಾರ್ಯಂ ವಿಚಾರಣಾತ್ ||'' ಇಂತೆಂದುದಾಗಿ, ಇದಕ್ಕೆ ಮಹಾದೇವೋoವಾಚ : ``ಶಿರೋಮಾಲಾ ಚ ಷಟ್ತ್ರಿಂಶದ್ವಾತ್ರಿಂಶತ್ಕಂಠಮಾಲಿಕಾ | ಕೂರ್ಪರೇ ಷೋಡಶ ಪ್ರೋಕ್ತಾ ದ್ವಾದಶಂ ಮಣಿಬಂಧಯೋಃ || ಉರೋಮೂಲಾಚ ಪಂಚಾಶತಷ್ಟೋತ್ತರಶತಂ ತಥಾ | ಶಿರಸಾ ಧಾರಯತ್ಕೋಟಿ ಕರ್ಣಾಭ್ಯಾಂ ದಶಕೋಟಿಯಃ || ಗಳೇ ಬಂಧಂ ಶತಂ ಕೋಟಿ ಮೂಧ್ರ್ನಿ ಕೋಟಿಸಹಸ್ರಕಂ | ಆಯುಕಂಠೋಪವಿತ್ತಂ ಚ ಲಕ್ಷಮಾವೇ ಮಣಿಬಂಧಯೋರ್ಣ ವಕ್ತ್ರಾಣಿ | ದ್ವಾದಶಾದಿತ್ಯಾದಿ ಪಾಯು ಶ್ರೀಮಹಾದೇವಾಯ ನಮಃ || ಅಷ್ಟೋತ್ತರಶತಂ ಸೋಪವಿ ತ್ತಂ ಚತುರ್ದಶ ವಕ್ತ್ರಾಣಿ | ಶತರುದ್ರಾತ್ಮಾಕಾಯ ಶ್ರೀ ವಿಶ್ವೇಶ್ವರಾಯ ನಮಃ ಇತಿ ||'' ಇಂತೆಂದುದಾಗಿ, ಇದಕ್ಕೆ ಬೋಧಾಯನಶಾಖಾಯಾಂ : ``ತಾನಿ ಹವಾಏತಾನಿ ರುದ್ರಾಕ್ಷಾಣಿ ಯತ್ರ ಯೋ ಯೇ ಧಾರಯಂತಿ ಕಸ್ಮಾದೇವ ಧಾರಯಂತಿ ಸ್ನಾತ್ತ್ವಾನಿ ಧಾರಯನ್ ಗರ್ಭೇ ತಿಷ್ಟನ್ ಸ್ವಪನ್ ಖಾದನ್ ಉನ್ಮಿಷನ್ ಅಪಿ ಸರ್ವಾಣೈವಾನಿ ಚರತಿ ಮದ್ರಿ ಭೂತ್ವಾ ರುದ್ರೋ ಭವತಿ ಯೋಯೇನ ವಿದ್ವಾನ್ ಬ್ರಹ್ಮಚಾರೀ ಗೃಹಸ್ಥೋ ವಾನಪ್ರಸ್ಥೋಯತಿರ್ವಾ ಧಾರಯೇತ್ ಪದೇ ಪದೇ ಯಶ್ವಮೇಧಫಲಂ ಪ್ರಾಪ್ನೋತಿ ||'' ಇಂತೆಂದುದು ಶ್ರುತಿ. ಇದಕ್ಕೆ ಲೈಂಗ್ಯಪುರಾಣೇ : ``ರುದ್ರಾಕ್ಷಂ ಧಾರಯೇದ್ವಿಪ್ರಃ ಸಂಧ್ಯಾದಿಷು ಚ ಕರ್ಮಸು | ತತ್ಸರ್ವಂ ಸಮವಾಪ್ನೋತಿ ಕೋಟಿ ಕೋಟಿ ಗುಣಂ ಸದಾ || ಸ್ನಾನೇ ದಾನೇ ಜಪೇ ಹೋಮೇ ವೈಶ್ಯದೇವೇಷುರರ್ಚನೆ | ಪ್ರಾಯಶ್ಚಿತ್ತೇ ಕಥಾ ಶ್ರಾದ್ಧೇ ದೀಕ್ಷಾಕಾಲೇ ವಿಶೇಷತಃ || ರುದ್ರಾಕ್ಷಧರೋ ಭೂತ್ವಾ ಯತ್ಕಿಂಚಿತ್ಕರ್ಮವೈದಿಕಂ | ಕುರ್ಯಾದ್ವಿಪ್ರಸ್ತು ಯೋ ಮೋಹ ವಂಶಾವಪ್ನೋತಿ ತತ್ಫಲಂ ||'' ಇಂತೆಂದುದಾಗಿ, ಇದಕ್ಕೆ ಸ್ಕಂದಪುರಾಣೇ : ``ಲಕ್ಷಂತು ದರ್ಶನಾತ್ಪುಣ್ಯಂ ಕೋಟಿ ಸಂಸ್ಪರ್ಶನಾದಪಿ | ದಶಕೋಟಿ ಶತಂ ಪುಣ್ಯಂ ಧಾರಣಾಲ್ಲಭತೇ ವರಂ ||'' ಇಂತೆಂದುದಾಗಿ, ಇದಕ್ಕೆ ಕೂರ್ಮಪುರಾಣೇ : ``ಹಸ್ತೇಚೋರಸಿ ಕಂಠೇ ವಾ ಮಸ್ತಕೇ ವಾsಪಿ ಧಾರಯೇತ್ | ಮುಚ್ಯತೇ ಸರ್ವಪಾಪೇಭ್ಯಃ ಸ ರುದ್ರೋ ನಾತ್ರಸಂಶಯಃ || '' ಇಂತೆಂದುದಾಗಿ, ಇದಕ್ಕೆ ಲೈಂಗ್ಯಪುರಾಣೇ : ``ಶಿಖಾಯಾಂ ಧಾರಯೇದೇಕಂ ಷಟ್ತ್ರಿಂಶನ್ಮಸ್ತಕೇ ತಥಾ| ದ್ವಾತ್ರಿಂಶತ್ಕಂಠದೇಶೇಚ ಪಂಚಾಷಣ್ಮಾಲಿಕಾ ಹೃದಿ || ಷೋಡಶಂ ಬಾಹುಮೂಲಯೋಃ ದ್ವಾದಶಂ ಮಣಿಬಂಧಕೇ | ಕರ್ಣಯೇಕೀಕಮೇಶುಸ್ಯಾ ದುಪವಿತೇ ಶತಾಷ್ಟಕಂ || ಶತಾಷ್ಟಮಕ್ಷಮಾಲಾಂತು ನಿತ್ಯಂ ಧಾರಯೇತೇ ವರಃ | ಪದೇ ಪದೇsಶ್ವಮೇಧಸ್ಯ ಫಲಂ ಪ್ರಾಪ್ನೋತಿ ನ ಸಂಶಯಃ || ಇಂತೆಂದುದಾಗಿ, ಇದಕ್ಕೆ ಈಶ್ವರೋsವಾಚ : ``ರುದ್ರಾಕ್ಷ ಶತಕಂಠೋ ಯಃ ಗೃಹೇ ತಿಷ*ತಿ ಯೋ ವರಃ | ಕುಲೈಕವಿಂಶಮುಕ್ತಾರ್ಯ ಶಿವಲೋಕೇ ಕೋಟಿಭುಜದ್ವಯಂ | ಅಪ್ರಮೇಯ ಫಲಂ ಹಸ್ತೇ ರುದ್ರಾಕ್ಷಂ ಮೋಕ್ಷಸಾಧನಂ ||'' ಇಂತೆಂದುದಾಗಿ, ಇದಕ್ಕೆ ಈಶ್ವರೋsವಾಚ : ``ಅವದ್ಯಃ ಸರ್ವಭೂತಾನಾಂ ರುದ್ರವದ್ವಿಚರೇತ್ ಭುವಿ | ಸುರಾಣಾಮಸುರಾಣಾಂ ಚ ವಂದನೀಯೋ ಯಥಾ ಶಿವಃ || ರುದ್ರಾಕ್ಷರಧಾರಶೋ ನಿತ್ಯಂ ವಂದನೀಯೋ ನರೈರಿಹ | ಉಚ್ಛಿಷ್ಟೋ ವಾ ವಿಕರ್ಮಸ್ತೋ ಯುಕ್ತೋ ವಾ ಸರ್ವಪಾಪಕೈಃ | ಮುಚ್ಯತೇ ಸರ್ವಪಾಪೇಭ್ಯೋ ನರೋ ರುದ್ರಾಕ್ಷಧಾರಣಾತ್ ||'' ಇಂತೆಂದುದಾಗಿ ಇದಕ್ಕೆ ಕಾತ್ಯಾಯನಶಾಖಾಯಾಂ : ``ಅಥೈವ ಭಗವಂತಂ ರುದ್ರಕುಮಾರಃ ಪಪ್ರಚ್ಛಾರಣೇನ ದಶಶತ ಗೋದಾನಫಲಂ || ದರ್ಶನಸ್ಪರ್ಶನಾಭ್ಯಾಂ ದ್ವಿಗುಣಂ ತ್ರಿಗುಣಂ ಫಲಂ ಭವತಿ, ಅತ ಊಧ್ರ್ವಂ ವಕ್ತುಂ ನ ಶಕ್ನೋಮಿ ತತೋಂ ಜಪ ಸಮಂತ್ರಕಂ ಧಾರಣೇ ವಿಧಿಂ ಕಥಯಾಮಿ || ಸ್ನಾನ ವಿಧಿನಾ ಸ್ನಾತೇಷು ಖೇರಾಜ್ಞೇಯ ಸ್ನಾನಂ ತ್ರಿಪುಂಡ್ರಧಾರಣಂ ಕೃತ್ವಾ ಏಕಾಶ್ಯಾದಿರುದ್ರ ಶಾಂತಾನಾಂ || ಸೃಷ್ಟಿಕ್ರಮೇಣಂ ಮಂತ್ರಾಸ್ಯಂ `ಓಂ ಹೂಂ ಚಂ ಖಂ ಹೂಂ ಕ್ಲಿಂ ಮಾಂ ದ್ರಾಂ ದ್ರಿಂ ಹ್ರುಂ ಕ್ರೂಂ ಕ್ಷಾಂ ಕ್ಷಿಂ ಕ್ಷುಂ' ನವಮಿತೀಷುರುವೋಕ್ತ ಂ ಮಂತ್ರಾನನಂತಾ ಶೋಕ್ತ್ವಾನ್ವಾ ಜಪೇದಿಮಾನ್ ಪಾಣಾನಾಯಮ್ಯ ಸಮಸ್ತಪಾಪಕ್ಷಯಾರ್ಥಂ ಶಿವಜ್ಞಾನಾ ವಸ್ಯಾರ್ಥ ಸಮಸ್ತ ಮಂತ್ರಸ್ಸಹಧಾರಣಂ ಕರಿಷ್ಯಾಮಿತಿ ಸಂಕಲ್ಪ್ಯ ಶಿಖಾಯಾಮೇಕಮೇಕಸ್ಯಂ ಶ್ರೀ ಸದಾಶಿವಾಯ ನಮಃ ಇತಿ ||'' ``ದ್ವಿ ತ್ರಿ ದ್ವಾದಶವಕ್ತ್ರಾಣಿ ಶಿರಸಿ ತ್ರೀಣಿ ಧಾರಯೇತ್ | ವಹ್ನಿ ಸೂರ್ಯಸೋಮಾಧಿಪಾಯ ಶಿವಾಯ ನಮಃ ಇತಿ || ಏಕಾದಶ ವಕ್ತ್ರಂ ಷಟ್ತ್ರಿಂಶನ್ಮೂಧ್ರ್ನಿ ಷಟ್ತ್ರಿಂಶತ್ತತ್ವಾತ್ಮಕಾಯ | ನಮ ಇತಿ ಪಂಚದಶ ವಕ್ತ್ರಾಣಿ ಕರ್ಣಯೋರೇಕಮೇಕಂ || ಸೋಮಾಯ ನಮಃ ಇತಿ, ಯೇದಷ್ಟವಕ್ತ್ರಾಣಿ ಕಂಠೇ ದ್ವಾತ್ರಿಂಶತ್ | ತ್ರ್ಯಂಬಕಕಲಾತ್ಮನೇ ಶ್ರೀಕಂಠಾಯ ನಮಃ ಇತಿ || ಚತುರ್ವಕ್ತ್ರಂ ಪಂಚಷಣ್ಮಾಲಿಕಾಮುರಸಿ ಶ್ರೀಕಂಠಾದಿ | ಮೂತ್ರ್ಯಾಯಸ್ಥಿಕಾಯ ಶ್ರೀ ಸರ್ವಜ್ಞಾಯ ನಮಃ ಇತಿ || ಬಾಹೋ ತ್ರಯೋದಶವಕ್ತ್ರಾಣಿ ಷೋಡಶಸುಖಾಸನಾದಿ | ಷೋಡಶಮೂತ್ರ್ಯಾತ್ಮಕಾಯ ಶ್ರೀಕಂಠಾಯ ನಮಃ ಇತಿ || ದಕ್ಷೇರ್ಣವ ವಕ್ತ್ರಾಣಿ ಶ್ರೀ ವ್ಯೋಮಕಳಾತ್ಮಕಾಯ ಉಪಮಾಪತಯೇ ನಮಃ ಇತಿ ಉಪಾಯತೇ ||'' ಇಂತೆಂದುದಾಗಿ, ಇದಕ್ಕೆ ಮಹಾಲಿಂಗಪುರಾಣೇ : ``ರುದ್ರಾಕ್ಷಮಾಲಯಾ ಶುಭ್ರೋ ಜಟಾಜೂಟವಿರಾಜಿತಃ | ಭಸ್ಮಾವಲಿಪ್ತಸರ್ವಾಂಗಃ ಕಮಂಡಲುಕರಾನ್ವಿತಃ || ಕೃಷ್ಮಾಜಿನೋ ಪವಿತ್ರಾಂಗಃ ಆಶಾಹೆ ಪುಣ್ಯಕೀರ್ತನಃ | ಶಿವಃ ತಸ್ಮೆ ೈಃ ಮಹಾದೇವಂ ಯೋಗಿನಾಂ ಹೃದಯಾಲಯಂ ||'' ಇಂತೆಂದುದಾಗಿ, ಇದಕ್ಕೆ ಲೈಂಗ್ಯಪುರಾಣೇ : ``ರುದ್ರಕ್ಷಧಾರಣಾಸ್ಸರ್ವೇ ಜಟಾಮಂಡಲಧಾರಣಾತ್ | ಅಕ್ಷಮಾಲಾರ್ಪಿತಕರಂ ತ್ರಿಪುಂಡ್ರಾಪಲಿಯುಕ್ತಾಂಗಂ | ಆಷೇಡೇವ ವಿರಾಜಿತಂ ಋಗ್ಯಜುಃಸಾಮರೂಪೇಣ | ಸೇವತೇಸ್ಮೈ ಮಹೇಶ್ವರಃ ಸಂಸ್ಥಾಯಮನೋದಿಷ್ಟಾಂಗೈ || ದೇವೈರ್ಮುನಿಗಣೈಸ್ತಥಾಮೃತ ತ್ರಿಪುಂಡ್ರಕೋ ದಿವ್ಯೇ | ರುದ್ರಾಕ್ಷೇಶ್ವ ವಿಭಾಷಿತಃ ಶುಭೇ ಸತತಂ ವಿಷ್ಟು| ಭಸ್ಮದಿಗ್ಧತಮೂಲತಃ ತ್ರಿಪುಂಡ್ರಾಂಕಿತ ಸರ್ವಾಂಗೋ | ಜಟಾಮಂಡಲಮಂಡನ ಭೂತಿ ತ್ರಿಪುಂಡ್ರರುದ್ರಾಕ್ಷಂ | ಅಕ್ಷರ ಮಾಲಾರ್ಪಿತಕರಃ ಕುರ್ವಕ್ತ್ರಃ ಪಿತಾಮಹಾ ||'' ಇಂತೆಂದುದಾಗಿ, ಇದಕ್ಕೆ ಮಹಾದೇವೋವಾಚ : ``ಭಾಲೇ ತ್ರಿಪುಂಡ್ರಕಂ ಚೈವ ಗಳೇ ರುದ್ರಾಕ್ಷಮಾಲಿಕಾ | ವಕ್ತ್ರೇ ಷಡಕ್ಷರೀ ಮಂತ್ರೋ ಸ ರುದ್ರೋ ನಾತ್ರ ಸಂಶಯಃ ||'' ಇಂತೆಂದುದಾಗಿ, ಇದಕ್ಕೆ ಲೈಂಗ್ಯಪುರಾಣೇ : ``ರುದ್ರಕ್ಷಮಾಲಿಕಾ ಕಂಠೇ ಧಾರಸ್ತದ್ಭಕ್ತಿವರ್ಜಿತಃ | ಪಾಪಕರ್ಮಾಪಿ ಯೋ ನಿತ್ಯಂ ರುದ್ರಲೋಕೇ ಮಹೀಯತೇ ||'' ಇಂತೆಂದುದಾಗಿ, ಇದಕ್ಕೆ ಸ್ಕಂದಪುರಾಣೇ : ``ರುದ್ರಾಕ್ಷಂ ಕಂಠಮಾಶ್ರಿತ್ಯ ಶ್ವಾನೋsಪಿ ಮಿೃಯತೇ ಯದಿ | ಸೋsಪಿ ರುದ್ರಂ ಸಮಾಪ್ನೋತಿ ಕಿಂ ಪುನರ್ಮಾನುಷಾದಯಃ || ಇಂತೆಂದುದಾಗಿ, ಇದಕ್ಕೆ ಲೈಂಗ್ಯಪುರಾಣೇ : ``ಖಾದನ್ ಮಾಂಸಂ ಪಿಬನ್ ಮದ್ಯಂ ಸಂಗಚ್ಛನ್ನಂತ್ಯಜೇಷ್ವಪಿ | ಸದ್ಯೋ ಭವತಿ ಪೂತಾತ್ಮಾ ರುದ್ರಾಕ್ಷೌ ಶಿರಸಿ ಸ್ಥಿತೇ ||'' ಇಂತೆಂದುದಾಗಿ, ಇದಕ್ಕೆ ಈಶ್ವರ ಉವಾಚ : ``ಶುಚಿರ್ವಾಪ್ಯಶುಚಿರ್ವಾಪಿ ಅಭಕ್ಷಸ್ಯ ಚ ಭಕ್ಷಣಾತ್ | ಅಗಮ್ಯಾಗಮನಂ ಚೈವ ಬ್ರಹ್ಮಹಾ ಗುರುತಲ್ಪಕಃ || ಮ್ಲೇಚ್ಛೋ ವಾಪ್ಯಥ ಚಾಂಡಾಲೋ ಯುಕ್ತೋ ವಾ ಪ್ಯಥ ಪಾತಕೈಃ | ರುದ್ರಾಕ್ಷಧಾರಣಾದ್ಯಸ್ತು ಸ ರುದ್ರೋ ನಾತ್ರ ಸಂಶಯಃ ||'' ಇಂತೆಂದುದಾಗಿ, ಇದಕ್ಕೆ ಮಹಾಲಿಂಗಪುರಾಣೇ : ``ಧ್ಯಾನಧಾರಣಹೀನೋsಪಿ ರುದ್ರಾಕ್ಷಂ ಯೋ ಹಿ ಧಾರಯೇತ್ | ಸರ್ವಪಾಪವಿನಿರ್ಮುಕ್ತಃ ಸಯಾತಿ ಪರಮಾಂ ಗತಿಂ||'' ಇಂತೆಂದುದಾಗಿ, ಇದಕ್ಕೆ ಮಾನವಪುರಾಣೇ : ``ಮೃಣ್ಮಯಂ ವಾಪಿ ರುದ್ರಾಕ್ಷಂ ಕೃತ್ವಾ ಯಸ್ತು ಧಾರಯೇತ್ | ಅಪಿ ದುಃಕೃತಕರ್ಮೋsಪಿ ಸ ಯಾತಿ ಪರಮಾಂ ಗತಿಂ ||'' ಇಂತೆಂದುದಾಗಿ, ಇದಕ್ಕೆ ಶಿವಲಿಂಗಾಗಮೇ : ``ರುದ್ರಾಕ್ಷಮಾಲಂ ಬ್ರಹ್ಮಾ ಚ ತನ್ನಾಳಂ ವಿಷ್ಣುರುಚ್ಯತೇ | ಮುಖಂ ಸದಾಶಿವಂ ಪ್ರೋಕ್ತಂ ಬಿಂದುಃ ಸರ್ವತ್ರ ದೇವತಾ ||'' ಇಂತೆಂದುದಾಗಿ, ``ರುದ್ರಾಕ್ಷಿಯ ಧರಿಸಿಪ್ಪಾತನೆ ರುದ್ರನು. ಆತನ ಭವರೋಗಂಗಳು ಹೊದ್ದಲಮ್ಮವು ನೋಡಾ. `ಏವಂ ರುದ್ರಾಕ್ಷಧಾರಣಾದ್ ರುದ್ರಾ' ಎಂದುದು ಶ್ರುತಿ. ರುದ್ರಾಕ್ಷಿಯ ಧರಿಸಿಪ್ಪ ಶರಣರಿಗೆ ಶರಣೆಂದು ಬದುಕಿದೆನು ಕಾಣಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಊಧ್ರ್ವ ಭೂಮಿಯ ವಿರಾಗದಲ್ಲಿ ಸಪ್ತಸಮುದ್ರಕ್ಕೆ ಭೂಮಿ ಒಂದೆ. ಭೂಮಿಯ ಮಧ್ಯದಲ್ಲಿ ಒಂದು ವಟವೃಕ್ಷ ಹುಟ್ಟಿತ್ತು. ಕೊಂಬು ಮೂರು, ಅದರ ಬೆಂಬಳಿಯಲ್ಲಿ ಹುಟ್ಟಿದ ಕವಲಿಗೆ ಲೆಕ್ಕವಿಲ್ಲ. ಆ ಆಲದ ಹಣ್ಣಿಂಗೆ ಮೋನದ ಹಕ್ಕಿ ಈರೇಳುಕೋಟಿ ಕೂಡಿ, ಎಂಬತ್ತುನಾಲ್ಕು ಲಕ್ಷ ಬೇಟೆಕಾರರ ಬಲೆಯೊಳಗಾಯಿತ್ತು. ಇದರ ಒಲವರವ ಕೇಳಿಹರೆಂದು, ಅಲೇಖಮಯನಾದ ಶೂನ್ಯ ಕಲ್ಲಿನ ನಿಳಯದೊಳಗಾದ.
--------------
ವಚನಭಂಡಾರಿ ಶಾಂತರಸ
ನಾಭಿಮಂಡಲದ ಉದಯವೆ ಉದಯ. ಮಧ್ಯನಿರಾಳದ ನಿಲವಿನ ಪರಿಯ ನೋಡಾ ! ಪವನಶೂಲದ ಮೇಲೆ ಪರಿಣಾಮವಯ್ಯಾ. ಊಧ್ರ್ವ ಮುಖದಲ್ಲಿ ಉದಯವಾಯಿತ್ತ ಕಂಡೆ. ಮಿಂಚುವ ತಾರಕೆ ಇದೇನೊ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅಂದಂದಿಗೆ ಬಂದ ಧನವನಂದಂದಿಂಗೆ ವೆಚ್ಚವ ಮಾಡಿ ಹಿಂದು ಮುಂದ ಸಮವ ಮಾಡಿ, ಮಧ್ಯ ನಿರಾಳ ಊಧ್ರ್ವ ತಾನಾಗಿದ್ದು ಇಲ್ಲದಂತಿಪ್ಪಡೆ ಇದೇ ತೆರನು ಕಂಡಯ್ಯಾ. ಆರ ವಶವಲ್ಲದ ಪುರುಷನೊಬ್ಬನ ಸಾಧಿಸಿಕೊಳಬಲ್ಲಡೆ ಆ ಹಿರಿಯರಿಬ್ಬರೂ ತನ್ನ ವಶರಪ್ಪರು. ಆ ಹಿರಿಯರಿಬ್ಬರೂ ತನ್ನವರಾದಡೆ ಸರ್ವವೂ ಸಾಧ್ಯವಪ್ಪುದು. ಸರ್ವವೂ ಸಾಧ್ಯವಾದಡೆ ತಾನಿಲ್ಲ. ಬಯಲಹುದಕ್ಕೆ ಇದೇ ಚಿಹ್ನ ನೋಡಾ_ ಹೀಗೆಂದು ನಂಬುವುದು ನಂಬದಿದ್ದಡೆ ಚೆನ್ನಬಸವಣ್ಣನ ಹೊಣೆಯ ಕೊಡುವೆ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಶೈವಂಗೆ ಹರವರಿ, ನೇಮಸಂಗೆ ಊಧ್ರ್ವ ಬೌದ್ಧಂಗೆ ವರ್ತುಳ, ಇದಿರಿಡದವಂಗೆ ಹಣೆಯಲ್ಲಿ ಇಡಲಿಲ್ಲ. ಇಂತಿವೆಲ್ಲವೂ ದರುಶನವಾದ ಸಂಬಂಧಿಗಳು, ಉಂಟು ಇಲ್ಲಾ ಎಂಬುದಕ್ಕೆ ಇರಿಸಿಹೋದ ಮೂವರಿಗೆ. ಮೂರನರಿತು ಮೀರಿದವಂಗೆ ಏನೂ ತೋರಲಿಲ್ಲ. ತೊಗಲಗುಡಿಯೊಳಗೇಕೆ ಅಡಿಗಿದೆ, ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ ?
--------------
ಮನುಮುನಿ ಗುಮ್ಮಟದೇವ
ಆದಿ ನಿರಾಳ, ಮಧ್ಯ ನಿರಾಳ, ಊಧ್ರ್ವ ನಿರಾಳ. ಪ್ರಮಾಣು ನಿರಾಳ, ಅಪ್ರಮಾಣು ನಿರಾಳ. ಆಕಾರವು ನಿರಾಳ, ಉಕಾರವು ನಿರಾಳ, ಮಕಾರವು ನಿರಾಳ, ನಿರಾಳವೆಂಬುದು ನಿರಾಳ, ಸುರಾಳವೆಂಬುದು ನಿರಾಳ, ಅವಿರಳವೆಂಬುದು ನಿರಾಳ. ಬಂದೆನೆಂಬುದು ನಿರಾಳ, ಹೋದೆನೆಂಬುದು ನಿರಾಳ. ಅದೆಂತೆದಡೆ; ಪ್ರಣಮ ನಿರಾಳವಾದ ಕಾರಣ ಪ್ರತಿಯಿಲ್ಲ. ಪ್ರತಿಯಿಲ್ಲವಾಗಿ, ಅಪ್ರತಿಮ ನಮ್ಮ ಶರಣ ಬಸವಪ್ರಿಯ ಕೂಡಲಚೆನ್ನಸಂಗಮದೇವ.
--------------
ಹಡಪದ ಅಪ್ಪಣ್ಣ
ಜೀವೇಶ್ವರಗಾಶ್ರಯವಾದ ಸೂಕ್ಷ್ಮದೇಹಮಧ್ಯದಲ್ಲಿ ಷಟ್‍ಚಕ್ರಂಗಳಲ್ಲಿ ಹುಟ್ಟಿರ್ದ ಷಟ್ಕಮಲಂಗಳನು ಆಧಾರ ತೊಡಗಿ ಆಜ್ಞಾಚಕ್ರವೇ ಕಡೆಯಾಗುಳ್ಳ ಬ್ರಹ್ಮಾದಿಗಳ ಸ್ಥಾನಂಗಳ ಗುರೂಪದೇಶದಿಂದೆ ಭಾವಿಸುವುದು. ಆಜ್ಞಾಚಕ್ರದತ್ತಣಿಂದೆ ಊರ್ಧ್ವ ಭಾಗವಾದ ಬ್ರಹ್ಮರಂಧ್ರದಲ್ಲಿಯಾಯಿತ್ತಾದಡೆ ಸಹಸ್ರದಳ ಕಮಲವನು ಭಾವಿಸುವುದು. ಆ ಸಹಸ್ರದಳ ಕಮಲದಲ್ಲಿ ನಿರ್ಮಲವಾದ ಚಂದ್ರಮಂಡಲವನು ಧ್ಯಾನಿಸುವುದು. ಆ ಚಂದ್ರಮಂಡಲದ ಮಧ್ಯದಲ್ಲಿ ವಾಲಾಗ್ರ ಮಾತ್ರದೋಪಾದಿಯಲ್ಲಿ ಪರಮ ಸೂಕ್ಷ್ಮರಂಧ್ರವನು ಉಪದೇಶದಿಂದರಿವುದು. ಆ ಸೂಕ್ಷ್ಮರಂಧ್ರವನೆ ಕೈಲಾಸಸ್ಥಾನವಾಗಿ ಅರಿದು ಆ ಕೈಲಾಸದಲ್ಲಿ ಇರುತಿರ್ದ ಪರಮೇಶ್ವರನನು ಸಮಸ್ತ ಕಾರಣಂಗಳಿಗೆ ಕಾರಣವಾಗಿದ್ದಾತನಾಗಿ ಧ್ಯಾನಿಸುವುದಯ್ಯಾ ಶ್ರೀ ಚೆನ್ನಮಲ್ಲಿಕಾರ್ಜುನದೇವಾ.
--------------
ಅಕ್ಕಮಹಾದೇವಿ
-->