ಅಥವಾ

ಒಟ್ಟು 4 ಕಡೆಗಳಲ್ಲಿ , 3 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾನು ಭಕ್ತ, ನಾನು ಶರಣ, ನಾಣು ಐಕ್ಯನೆಂಬೊ ಅಣ್ಣಗಳು ನೀವು ಕೇಳಿರೊ. ಒಂದೇ ಮರದಲ್ಲಿ ಒಂಬತ್ತು ಪ್ರಮಾಣದ ಹಣ್ಣು; ಆ ಹಣ್ಣನು ಅರಿವ ಪರಿಯೆಂತೆಂದಡೆ; ಆಧಾರಚಕ್ರಮಂ ಬಲಿದು, ಇಡಾ ಪಿಂಗಳ ಸುಷುಮ್ನನಾಳವ ಒಂದುಗೂಡಿ ಊಧ್ರ್ವಮುಖದಲ್ಲಿ ಎತ್ತಿ ನಿಂದು, ಆ ಹಣ್ಣ ಸವಿಯಬಲ್ಲಡೆ ಆತನೇ ಭಕ್ತ. ಆತನೇ ಶರಣ, ಆತನೇ ಐಕ್ಯ. ಇದನರಿಯದೆ ಹುಸಿಯ ನುಡಿವವರ ಕಂಡು ನಗುತಿರ್ದ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗಾ.
--------------
ಗುಹೇಶ್ವರಯ್ಯ
ಆದಿಯಲ್ಲಿ ಶಿವತತ್ವದಲ್ಲಿ ರೇಣುಕನುದಯ[ವಾ]ಗದಿರ್ದಡೆ, ಇಲ್ಲಿ ಶಿವಲಿಂಗದಲ್ಲಿ ಉದಯವಾದ ಪರಿಯೆಂತೋ? ಆ ಶಿವನಲ್ಲಿಯೆ ಹುಟ್ಟಿ ಶಿವನಲ್ಲಿಯೇ ಲಯವಾದ ರೇವಣಸಿದ್ಧೇಶ್ವರನು, ಅನಾದಿಮುಕ್ತನಲ್ಲ, ಅವಾಂತರಮುಕ್ತರೆಂಬ ಅಜ್ಞಾನಿಗಳಿಗೆ ನಾಯಕನರಕ ತಪ್ಪದು. ಸಕಲಕೋಟಿ ಬ್ರಹ್ಮಾಂಡಕ್ಕಾಧಾರಕಾರಣವಾಗಿಯು ಸಮಸ್ತ ಲೋಕಂಗಳ ಪವಿತ್ರಕಾರಣವಾಗಿಯು ಪರಮೇಶ್ವರನ ನಿಜಚಿನ್ಮಯಮಪ್ಪ ಊಧ್ರ್ವಮುಖದಲ್ಲಿ ಚಿತ್ಕಲಾ ಸ್ವರೂಪರಪ್ಪ ರುದ್ರಗಣಂಗಳುದಯವಾದರು ನೋಡ. ಆ ರುದ್ರಗಣಂಗಳು ಮತ್ತೂ ಜಗತ್ಪಾವನ ಕಾರಣ ಮತ್ರ್ಯದಲ್ಲಿ ಅವತರಿಸಿದಡೆ, ಅದೇನು ಕಾರಣ ಉದಯವಾದರು ವಾಸನಾಗುಣವಿಲ್ಲದೆ ಎಂದು ಸಂದೇಹಿಸುವ ಅವಲಕ್ಷಣ ನಾಯ ನಾಲಗೆಯ, ಯಮದೂತರು ಕೀಳದೆ ಮಾಣ್ಬರೆ? ಇವರಿಂಗೆ ನಾಯಕನರಕ ತಪ್ಪದು ಕಾಣಾ, ಎಲೆ ಶಿವನೆ ನೀ ಸಾಕ್ಷಿಯಾಗಿ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನಾನು ಭಕ್ತ, ನಾನು ಶರಣ, ನಾನು ಐಕ್ಯನೆಂದು ಹೆಸರಿಟ್ಟುಕೊಂಬುವ ಅಣ್ಣಗಳು ನೀವು ಕೇಳಿರೋ. ತನ್ನಲಿದ್ದ ಮೂಲಚಕ್ರದ ಮೂಲಭೇದವನರಿಯಬಲ್ಲಡೆ, ಭಕ್ತನಿಂದೆನಿಸಬಹುದು. ಅಷ್ಟದಳಕಮಲದಲ್ಲಿ ನಿಟ್ಟಿಸಿದ್ದ ಪ್ರಾಣದ ನೆಲೆಯನರಿಯಬಲ್ಲಡೆ, ಶರಣ[ನೆಂ]ದೆನಿಸಬಹುದು. ಇಡಾ ಪಿಂಗಳ ಸುಷುಮ್ನ ತ್ರಿವಿಧವನೊಂದುಗೂಡಿ, ಏಕನಾಳದೊ[ಳು] ತುಂಬಿ. ಯಜ್ಜಯಿಲ್ಲದೆ ಮಣಿಯ ಆ ಹುರಿಯಲ್ಲಿ ಪೋಣಿಸಿ, ಊಧ್ರ್ವಮುಖದಲ್ಲಿ ಎತ್ತಿ, ಪಂಚದ್ವಾರದ ಕದವ ತೆರದು, ತ್ರಿಕೂಟದಲ್ಲಿರ್ದ ಮಹಾಲಿಂಗವ ನಿರೀಕ್ಷಣವಮಾಡಬಲ್ಲಡೆ, ಐಕ್ಯನೆಂದೆನಿಸಬಹುದು. ಇಂತಪ್ಪ ಭೇದಂಗಳನರಿಯದೆ, ನಾನು ಭಕ್ತ, ನಾನು ಶರಣ, ನಾನು ಐಕ್ಯನೆಂದು ಹುಸಿಯ ನುಡಿವವರ ನೋಡಿ ಬೆರಗಾದ, ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ
ಶರೀರ ತಾ ಮುನ್ನ ಮರಹು, ಶರೀರ ಅವಧಾನ ತಾ ಮುನ್ನ ಮರಹು. ಮನ ತಾ ಮುನ್ನವೆ ಮರಹು. ಮನವೆಂಬ ಮರ್ಕಟನ ಮರವೆಯ ನೆನಹು ತಾ ಮುಂದೆ ಮರಹು. ಮನದಾಳಾಪನೆ ತಾ ಮುನ್ನವೆ ಮರಹು. ಮನಶರೀರ ಭಾವಂಗಳನರಿದು ನೋಡಾ, ತಿಳಿದು ನೋಡಾ ಎಚ್ಚೆತ್ತು ನೋಡಾ. ಸತ್ಯನಿತ್ಯ ಶಬ್ದನಿತ್ಯ ಊಧ್ರ್ವಮುಖದಲ್ಲಿ ಉತ್ಪತ್ಯವ ಮಾಡುವೆನೆಂದು, ಕರುಣೆ ನಿತ್ಯಸಿಂಹಾಸನದ ಮೇಲೆ ದಯವನೆ ಚರಣವ ಮಾಡಿ, ಮೂರ್ತಗೊಂಡು ಕಾರುಣ್ಯದಿಂ ನೋಡಿದ ಶಿವನು. ಉದಯಕಾಲ ವಿನೋದಕಾಲ ಶಿವನನು, ಮಹಾದಯವನು ಬೇಡುವ ಬನ್ನಿರಯ್ಯಾ. ಮನದಲ್ಲಿ ದಾಸೋಹ ಪರಿಪೂರ್ಣವಾಗಿ, ದಾಸೋಹವ ಬೇಡುವ ಬನ್ನಿರಯ್ಯಾ. ಸಂಸಾರಸಾಗರದೊಳದ್ದಿ ಹೋದರೆಂದು, ಮಾಯೆಯೆಂಬ ಕಾಲನು ಬಿನ್ನಹಂ ಮಾಡಿದನು. ಬ್ರಹ್ಮನರ್ಥ ವಿಷ್ಣುವರ್ಥ ರುದ್ರಾದಿಗಳರ್ಥ ವೇದಶಾಸ್ತ್ರಾಗಮಪುರಾಣಂಗಳರ್ಥ. ಸಪ್ತಕೋಟಿ ಮಹಾಮಂತ್ರಂಗಳರ್ಥ ದೇವಾದಿದೇವಂಗಳರ್ಥ. ವೇದಮಂತ್ರವಿಡಿದು ಪ್ರಾಣಘಾತಕರಾಗಿ ದ್ವಿಜರೆಲ್ಲ ಅದ್ದಿಹೋದರೆಂದು, ಮಾಯೆಯೆಂಬ ಕಾಲನು ಎಲ್ಲರ ಹಿಂದೆ ಇಕ್ಕಿಕೊಂಡು, ಶಿವಂಗೆ ಬನ್ನಹಂ ಮಾಡುವಲ್ಲಿ, ಗಣಂಗಳು ಅದ್ದಿಹೋದುದುಂಟೆಯೆಂದು, ನಂದಿಕೇಶ್ವರದೇವರು ಬೆಸಗೊಂಡರು. ಆ ನಿರೂಪಕ್ಕೆ ಮಾಯೆಯೆಂಬ ಕಾಲನು ಕರ್ಣವ ಮುಚ್ಚಿ, ಸ್ವಯಸ್ವಹಸ್ತಂಗಳಂ ಮುಗಿದು, ಹೀಗೆಂದು ನಿರೂಪವ ಕರುಣಿಸಿಕೊಡುವರೆ ದೇವಯೆಂದು, ಎನ್ನ ನಿರ್ಮಿಸಿದವರಾರು? ತ್ರಿಭುವನಂಗಳ ಮಾಡಿದವರಾರು? ಗಣಂಗಳದ್ದಿ ಹೋದುದುಂಟೆ ದೇವ? ಯಂತ್ರವಾಹಕ ನೀನು, ಸಕಲಪಾವಕ ನೀನು. ನಿತ್ಯಭಕ್ತರು ನಿತ್ಯರು, ನಿಮ್ಮ ಗಣಂಗಳು ದಯಾಪಾರಿಗಳು. ನಿಮ್ಮ ಶರಣರ ನೆನಹಿಂದ, ಸಮಸ್ತಲೋಕದವರುಗಳಿಗೆ ಚೈತನ್ಯಾತ್ಮವಹುದು. ಅವಧಾರವಧಾರೆಂದು ಬಿನ್ನಹಂ ಮಾಡಿ, ಮತ್ತೆ ಕಾಲನು ನಿತ್ಯ ಸಿಂಹಾಸನದ ಮೇಲೆ ಕುಳಿತಿರ್ದು, ಭಕ್ತಿನಿತ್ಯ ದಾಸೋಹವಂ ಮಾಡಲಿಕೆ ಕರ್ಮವೆಲ್ಲಿಯದು. ಮಹಾದಾನಿ ಕರುಣವಿಡಿದೆತ್ತಿದಿರೆನುತ ತಿರುಗಿದನು ತನ್ನವರು ಸಹಿತಿತ್ತ. ಅತ್ತ ಮಹಾಸಂಪಾದನೆಯಲ್ಲಿ ಶರಣ ಬಸವಣ್ಣನಿಗೆ ಶರಣೆನುತಿರ್ದೆ ಕಾಣಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
-->