ಅಥವಾ

ಒಟ್ಟು 23 ಕಡೆಗಳಲ್ಲಿ , 12 ವಚನಕಾರರು , 22 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕ್ರೀ ಆಚರಣೆ ಶುದ್ಧವಾದಲ್ಲಿ ಇಷ್ಟಲಿಂಗಪೂಜೆ. ರೂಪು ರುಚಿ ಏಕವಾದಲ್ಲಿ ಪ್ರಾಣಲಿಂಗಪೂಜೆ. ರೂಪು ನಿರೂಪೆಂಬ ಉಭಯವಳಿದಲ್ಲಿ ಐಕ್ಯನ ಅನುಭವ ತೃಪ್ತಿ. ಕೂಡುನ್ನಬರ ನೋಟ ಸುಖಿಯಾಗಿ, ಬೇಟದ ನೋಟ ಕೂಟದಲ್ಲಿ ಅಳಿದ ಮತ್ತೆ, ಉಭಯದೃಷ್ಟ ಏಕವಾಯಿತ್ತು. ಚರ ಅಚರವಾದಲ್ಲಿ ಉಭಯನಾಮರೂಪು ನೀನೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇಹದಲ್ಲಿ ಕಾಬ ಸುಖ, ಪರದಲ್ಲಿ ಮುಟ್ಟುವ ಭೇದ. ಉಭಯದ ಗುಣ ಏಕವಾದಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಬಗೆಬಗೆದು ನೋಡಿದಡೆ ದೇಹವೆಲ್ಲ ಮೂರು ಮಾತ್ರೆಯಿಂದಾದುವಯ್ಯಾ. ಸ್ಥೂಲದೇಹ ಅಕಾರಪ್ರಣವ, ಸೂಕ್ಷ್ಮದೇಹ ಉಕಾರ ಪ್ರಣವ, ಕಾರಣದೇಹ ಮಕಾರಪ್ರಣವ, ಮೂರು ಮಾತ್ರೆ ಏಕವಾದಲ್ಲಿ ಓಂಕಾರವಾಯಿತ್ತು. ತತ್ಪ್ರಣವಕ್ಕೆ ಸಾಕ್ಷಿಯಾಗಿ ನಿಂದೆ; ನಿಂದೆನೆಂಬುದಕ್ಕೆ ಅನಿರ್ವಾಚ್ಯ ಪ್ರಣವವಾದೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಪೃಥ್ವಿ ಅಪ್ಪುವಿನ ಸಂಗದಲ್ಲಿ, ಅನಲ ಅನಿಲವೆಂಬ ಪುತ್ಥಳಿ ಹುಟ್ಟಿತ್ತು. ಆ ಪುತ್ಥಳಿಯ ಗರ್ಭದಲ್ಲಿ, ಆಕಾಶ ಮಹದಾಕಾಶವೆಂಬ ಕುರುಹುದೋರಿತ್ತು. ಅದು ನಾದಪೀಠ ಬಿಂದುಲಿಂಗ ಕಳೆ ವಸ್ತುವಾಗಿ, ಹೊಳಹುದೋರುತ್ತದೆ. ಆ ಹೊಳಹು ಆರುಮೂರಾದ ಭೇದವ ತಿಳಿದು, ಮೂರು ಏಕವಾದಲ್ಲಿ, ಐಕ್ಯವನರಿತಲ್ಲಿ, ನಾದಬಿಂದುಕಳೆಭೇದವಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಭಕ್ತ ಮಾಹೇಶ್ವರಸ್ಥಲ ಏಕವಾದಲ್ಲಿ, ಶಿಲೆ ಬಿಂದುವಿನ ಚಂದ್ರನ ಬಿಂಬದಂತೆ ಇದ್ದಿತ್ತು. ಪ್ರಸಾದಿಯ ಪ್ರಾಣಲಿಂಗಿಯ ಸ್ಥಲ ಏಕವಾದಲ್ಲಿ, ಅರಗಿನ ಪುತ್ಥಳಿಯ ಅವಯವಂಗಳ ಉರಿ ಹರಿದು, ಪರಿಹರಿಸಿದಂತೆ ಇದ್ದಿತ್ತು. ಶರಣನ ಐಕ್ಯಸ್ಥಲದ ಭಾವ ಕರ್ಪುರವ ಅಗ್ನಿ ಆಹುತಿಯ ಕೊಂಡಂತೆ ಇದ್ದಿತ್ತು. ಇಂತೀ ಆರು ಮೂರರಲ್ಲಿ ಅಡಗಿನಿಂದ ಕೂಟಸ್ಥಲ. ಲೆಪ್ಪದ ಮೇಗಣ ಚಿತ್ರದ ದೃಕ್ಕಿನ ದೃಶ್ಯದಂತೆ ಇದ್ದಿತ್ತು. ಇಂತೀ ತ್ರಿವಿಧಸ್ಥಲ ಏಕರೂಪವಾದಲ್ಲಿ, ಆಕಾಶದ ವರ್ಣದ ಬಹುರೂಪ ಗಬ್ರ್ಥೀಕರಿಸಿದ ನಿರಾಕಾರದಂತೆ ಇದ್ದಿತ್ತು. ನಾಮವಿಲ್ಲದ ರೂಪು, ಭಾವವಿಲ್ಲದ ಮಾತು, ನೀ ನಾನೆಂಬ ಸ್ಥಲ ಅದೇನು ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಓಂ ಎಂಬುದು ಬ್ರಹ್ಮಾಕ್ಷರ. ನ ಎಂಬುದು ನಾರಾಯಣಬೀಜ. ಮ ಎಂಬುದು ಮಹಾದೇವನ ಬೀಜಾಕ್ಷರ. ಇಂತೀ ತ್ರಿವಿಧ ಭೇದ ಕೂಡಿದಲ್ಲಿ ಈಶ್ವರತತ್ವ. ಇಂತೀ ಭೇದ : ಪಂಚವಿಂಶತ್ತತ್ವವಾಗಲಾಗಿ ಆಚಾರ್ಯನ ಅಂಗಭೇದ. ಇಂತೀ ಕ್ರೀಮಾರ್ಗದ ನಿಜ ಅರಿವಿನ ಆಚರಣೆ, ಉಭಯವು ಏಕವಾದಲ್ಲಿ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ಸಯರೂಪಾದಂಗ.
--------------
ಪ್ರಸಾದಿ ಭೋಗಣ್ಣ
ದೃಕ್ಕು ಗುರುವಿನ ಭಾವ, ದೃಶ್ಯ ಶಿಷ್ಯನ ಯುಕ್ತಿ. ಆತ್ಮ ಘಟದಂತೆ, ಕರ್ತೃಭೃತ್ಯಭಾವ. ಇಂತೀ ಉಭಯ ಏಕವಾದಲ್ಲಿ ನಿರ್ವೀಜ ನಿರಿಯಾಣ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ಉಭಯವಾದ ಭೇದ.
--------------
ಪ್ರಸಾದಿ ಭೋಗಣ್ಣ
ಪ್ರಥಮ ಮೂರು, ಆಶ್ರಯ ನಾಲ್ಕು, ಸ್ಥಲವಾರು, ಯೋಗವೆಂಟು, ಸಂಯೋಗವೆರಡು, ವಿಯೋಗವೊಂದು, ವಿಭೇದವೆರಡು, ಭೇದವೊಂದು, ಅರಿಕೆಯೆರಡು ಅರಿದುದೊಂದು ಆಕಾಶ ಮೂರು ಅವಾಕಾಶವೆರಡು, ಮಹದಾಕಾಶ ನಾಲ್ಕು. ಇಂತಿವೆಲ್ಲವೂ ಮಹಾಪ್ರಕಾಶದ ಪ್ರಭೆ ಪ್ರಜ್ವಲವಾಗಿ ಉಭಯನಾಮರೂಪ ತಾಳ್ದು, ವಂಶ ಮೂರರಲ್ಲಿ ಅಳವಟ್ಟು ಸ್ಥಲವಾರರಲ್ಲಿ ಬೆಳೆದು, ಕುಳವೆಂಟರಲ್ಲಿ ಓಲೈಸಿ ಕುಳ ನಾಲ್ಕರಲ್ಲಿ ಒಕ್ಕಿ, ಫಲ ಮೂರರಲ್ಲಿ ಅಳೆದು ಹಗ ಒಂದರಲ್ಲಿ ತುಂಬಿತ್ತು. ಇಂತೀ ವಿವಿಧ ಸ್ಥಲಂಗಳ ಹೊಲಬನರಿತು ವರ್ತಕಕ್ಕೆ ಕ್ರೀ ಶುದ್ಧ, ಅರಿವಿಂಗೆ ಬಿಡುಗಡೆ ಶುದ್ಧ ಬಿಡುಗಡೆ ಎರಡು ಏಕವಾದಲ್ಲಿ ಸ್ಥಲ ನಿರ್ವಾಹ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ. ಮಾತುಳಂಗ ಮಧುಕೇಶ್ವರನು. || 59 ||
--------------
ದಾಸೋಹದ ಸಂಗಣ್ಣ
ಮಳಲ ಹಿಳಿದು ದ್ರವವ ಕಾಣಬಲ್ಲಡೆ, ಇಷ್ಟಲಿಂಗಸಂಬಂಧಿ. ಕಲ್ಲ ಹಿಳಿದು ಮೃದುವ ಕಂಡಲ್ಲಿ, ಭಾವಲಿಂಗಸಂಬಂಧಿ. ನೀರ ಕಡೆದು ಬೆಣ್ಣೆಯ ಮೆದ್ದಲ್ಲಿ, ಪ್ರಾಣಲಿಂಗಸಂಬಂಧಿ. ಇಂತೀ ಇಷ್ಟ ಭಾವ ಪ್ರಾಣ ತ್ರಿವಿಧಗೂಡಿ ಏಕವಾದಲ್ಲಿ, ಪ್ರಾಣಲಿಂಗಿಯೆಂಬ ಭಾವವಾಯಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಹೀಗಿರು ಎಂದಡೆ, ಹಾಗಿರದಿದ್ದಡೆ ಅವಳು ಸತಿಯಲ್ಲ, ನಾ ಪತಿಯಲ್ಲ. ಆವ ಠಾವಿನಲ್ಲಿ ಎನಗೆ ಸತಿ ಸಂಗ? ಆವ ಠಾವಿನಲ್ಲಿ ಲಜ್ಜೆ ನಾಚಿಕೆ? ಕೇಣಸರ ಅಪಮಾನವಿಲ್ಲದಿರಬೇಕು, ಅದು ಎನ್ನ ಭಕ್ತಿ ಮುಕ್ತಿಯ ಬೆಳೆ. ಸತಿಪತಿಯಿಬ್ಬರೂ ಏಕವಾದಲ್ಲಿ ನಿಃಕಳಂಕ ಮಲ್ಲಿಕಾರ್ಜುನ ಹೆಡೆಗುಡಿಗೊಳಗಾದನು.
--------------
ಮೋಳಿಗೆ ಮಾರಯ್ಯ
ದೃಷ್ಟಿಯ ದೃಷ್ಟದಿಂದ ಮೋಹದ ಲವಲವಿಕೆ. ಮೋಹದ ಲವಲವಿಕೆಯಿಂದ ಸ್ವರ್ಶನದ ಉಭಯದ ಕೂಟ ಏಕವಾದಲ್ಲಿ ಹಿಂದಣ ಕುರುಹು ಮುಂದಣ ಲಕ್ಷ ್ಯ ಅಲಕ್ಷ ್ಯನಾಗಿ ದಂಪತಿ ದ್ವಂದ್ವವಿಲ್ಲದೆ, ನಿಜವೆಂಬ ಕುರುಹು ಅರಿಕೆದೋರದೆ ಅವಿರಳ ನಾಮಶೂನ್ಯವಾದದು ಗೋಪತಿನಾಥ ವಿಶ್ವೇಶ್ವರಲಿಂಗವು ಹೃತ್ಕಮಲದಲ್ಲಿ ವಿಶ್ರಾಂತಿಯಾದ ಇರವು.
--------------
ತುರುಗಾಹಿ ರಾಮಣ್ಣ
ಬೆಳಗು ನಷ್ಟವಾದಲ್ಲಿ ಕಳೆ ಪ್ರಜ್ವಲಿತವಿಲ್ಲ, ಕ್ರೀ ನಷ್ಟವಾದಲ್ಲಿ ಅರಿವಿನ ತೆರಪಿಗೊಡಲಿಲ್ಲ. ಕ್ರೀಯಂಗಕ್ಕೆ, ಅರಿವು ಆತ್ಮಂಗೆ. ಇಂತೀ ಉಭಯ ಏಕವಾದಲ್ಲಿ ಲಕ್ಷನಿರ್ಲಕ್ಷವಾಗಿ, ಗಾರುಡೇಶ್ವರಲಿಂಗವು ಗಾರುಡಕ್ಕೆ ಬಾರನು.
--------------
ಉಪ್ಪರಗುಡಿಯ ಸೋಮಿದೇವಯ್ಯ
ಗುರುವನರಿದು ಲಿಂಗವನರಿವವರುಂಟು, ಲಿಂಗವನರಿದು ಜಂಗಮವನರಿವವರುಂಟು, ಪಂಚಾಚಾರವನರಿದು ಜಂಗಮವನರಿವವರುಂಟು, ಆ ಜಂಗಮವನರಿದಲ್ಲಿ ಷಟ್‍ಸ್ಥಲಸಂಬಂಧವಾಯಿತ್ತು. ಆ ಸಂಬಂಧ ಸಮಯ ನಿಂದು, ಉಭಯವಳಿದು ಏಕವಾದಲ್ಲಿ, ಹಲವು ನೆಲೆ ತನ್ನ ವಿಶ್ವಾಸದ ಹೊಲಬಿನಲ್ಲಿ ಅಡಗಿತ್ತು. ಆ ಹೊಲದ ಹೊಲಬಿನಲ್ಲಿ ನಿಂದವಂಗೆ ಇಹಪರವೆಂಬ ಕಲೆ ಇಲ್ಲ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನ ಒಂದೆ ಎಂದಲ್ಲಿ.
--------------
ಮೋಳಿಗೆ ಮಹಾದೇವಿ
ತ್ರಿವಿಧಶಕ್ತಿಯನರಿದಲ್ಲಿ, ತ್ರಿಗುಣಾತ್ಮವ ಮರೆದಲ್ಲಿ, ತ್ರಿಭೇದಂಗಳ ಕಾಬಲ್ಲಿ, ತ್ರಿಗುಣ ತನ್ಮಯವಾಗಿ ಚರಿಸುವಲ್ಲಿ, ಇಂತೀ ತ್ರಿಗುಣ ಏಕವಾದಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಧರೆಯಾಕಾಶ ಕೂಡಿ ಜಗವಾದಂತೆ, ಕಾಯ, ಜೀವ ಕೂಡಿ ಸಾವಯವಾದಂತೆ, ನಾದ ಬಿಂದು ಕೂಡಿ ಲಿಂಗವಾಯಿತ್ತು. ಅದೆಂತೆಂದಡೆ: ನಾದ ಬಿಂದು ಶಕ್ತಿ ರೂಪಾಗಿ, ಈ ಉಭಯ ಸಂಪುಟದಿಂದ ಲಿಂಗವಾಗಿ, ಅದು ಕಾಯ ಜೀವದಂತೆ ಕೂಡಿ ಏಕವಾದಲ್ಲಿ ಆ ಕಾಯದಿಂದ ಜೀವ ವಿಯೋಗವಾಗಿಹುದೇ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->