ಅಥವಾ

ಒಟ್ಟು 8 ಕಡೆಗಳಲ್ಲಿ , 6 ವಚನಕಾರರು , 8 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಕಾಶದ ಮೇಲೆ ಏಕಾಂತ ಸೂಳೆಯ ಕಂಡೆನಯ್ಯ. ಆ ಸೂಳೆಯ ಗೃಹದಲ್ಲಿ ಸಾಸಿರದಳ ಕಮಲಮಂಟಪವ ಕಂಡೆನಯ್ಯ. ಆದಿಯಲ್ಲಿ ಒಬ್ಬ ವಿಟನು, ಮೂವರು ಗೆಳೆಯರ ಕೂಡಿಕೊಂಡು, ಹೃದಯದಲ್ಲಿರ್ದ ರತ್ನವ ತೆಗೆದು, ಆ ಸೂಳೆಗೆ ಒತ್ತೆಯಂ ಕೊಟ್ಟು, ಸಂಗಸಂಯೋಗಮಂ ಮಾಡುವುದ ಮೂವರು ಗೆಳೆಯರು ಕಂಡು ನಿರ್ವಯಲಾದುದ ಕಂಡೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನಿರ್ವಾಹವಾಯಿತ್ತಯ್ಯಾ ಬಸವಣ್ಣಂಗೆ ಕಪ್ಪಡಿಯ ಸಂಗಯ್ಯನಲ್ಲಿ. ಅಕ್ಕನಾಗಾಯಿ ಮಿಂಡ ಮಲ್ಲಿನಾಥ ಹಡಪದ ಅಪ್ಪಣ್ಣ ಮೊಗವಾಡದ ಕೇಶಿರಾಜ ಕೋಲಶಾಂತಯ್ಯ ಮೊದಲಾದ ಶಿವಗಣಂಗಳೆಲ್ಲರೂ ಬಸವರಾಜನ ಬಯಲ ಬೆರಸಿದರು. ಆ ಬಯಲ ಪ್ರಸಾದದಿಂದ, ನಿರುಪಮ ಪ್ರಭುದೇವರು ಕದಳಿಯಲ್ಲಿ ಬಯಲಾದರು. ಆ ಬಯಲ ಪ್ರಸಾದದಿಂದ, ಮೋಳಿಗೆಯ ಮಾರಯ್ಯ ಕಕ್ಕಯ್ಯ ಪಡಿಹಾರಿ ಉತ್ತಣ್ಣ ಕನ್ನದ ಮಾರಣ್ಣ ಕಲಕೇತ ಬೊಮ್ಮಣ್ಣ ನುಲಿಯ ಚಂದಯ್ಯ ಹೆಂಡದ ಮಾರಯ್ಯ ಶಂಕರ ದಾಸಿಮಯ್ಯ ಏಕಾಂತ ರಾಮಯ್ಯ ಮೇದರ ಕೇತಯ್ಯ ಮೊದಲಾದ ಏಳುನೂರೆಪ್ಪತ್ತು ಅಮರಗಣಂಗಳ ದಂಡು, ಕೈಲಾಸಕ್ಕೆ ನಡೆಯಿತ್ತು, ಬಂದ ಮಣಿಹ ಪೂರೈಸಿತ್ತು. ಸಂದ ಪುರಾತನರೆಲ್ಲರು ಎನ್ನ ಮನದ ಮೈಲಿಗೆಯ ಕಳೆದ ಕಾರಣ, ಕಲಿದೇವರದೇವಯ್ಯಾ, ಇವರೆಲ್ಲರ ಒಕ್ಕಮಿಕ್ಕಪ್ರಸಾದದ ಬಯಲು ಎನಗಾಯಿತ್ತು.
--------------
ಮಡಿವಾಳ ಮಾಚಿದೇವ
ಆಕಾಶದ ಮೇಲೆ ಏಕಾಂತ ಸೂಳೆಯ ಕಂಡೆನಯ್ಯ! ಆ ಸೂಳೆಯ ಬಸುರಲಿ ಪಿಂಡಬ್ರಹ್ಮಾಂಡಗಳಿಪ್ಪವು ನೋಡಾ! ಆ ಪಿಂಡಬ್ರಹ್ಮಾಂಡಗಳೊಳಗೆ ಒಂದು ಹಂಸನಿರ್ಪುದ ಕಂಡೆನಯ್ಯ! ಆ ಹಂಸನು ಸಕಲ ಬಲೆಯಂಗಳ ಹರಿದು ನಿಶ್ಚಿಂತ ನಿರಾಕುಳವೆಂಬ ಸಿಂಹಾಸನದಲ್ಲಿ ಇರುವುದು. ಹಂಸನ ಕಾಣಬಲ್ಲಾತನೆ ನಿರ್ಮುಕ್ತಗಣೇಶ್ವರ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅವಸ್ಥಾತ್ರಯಮಂ ಬಿಟ್ಟು ಇಷ್ಟಲಿಂಗದ ಗರ್ಭದಲ್ಲಿ ಕಾಯವ ನಿಕ್ಷೇಪವಂ ಮಾಡಿದ ಬಳಿಕ ಕಾಲನ ಭಯವಿಲ್ಲ. ನೇತ್ರದಲ್ಲಿರ್ದ ಪ್ರಾಣಲಿಂಗದ ಮೇಲೆ ಮನವ ನಿಲಿಸಿದ ಬಳಿಕ ಕಾಮನ ಭಯವಿಲ್ಲ. ಏಕಾಂತ ಸ್ಥಾನವಾಗಿ, ಅಂತರಂಗದ ಭಾವ ಜ್ಯೋತಿರ್ಲಿಂಗದಲ್ಲಿ ಅರಿವು ಸಂಧಾನದಿಂ ಸಮರಸವಾಗಲು, ಕರ್ಮದ ಭಯವಿಲ್ಲ. ಈ ತ್ರಿಲಿಂಗ ಸಂಬಂಧದಿಂದ ಕಾಲಕಾಮಕರ್ಮವನೊತ್ತಿ ಮೆಟ್ಟಿ ನಿಲ್ಲದೆ, ವಿಷಯಸುಖಕ್ಕೆ ಮೆಚ್ಚಿ ಆ ಮೂವರ ಕಾಲ ಕೆಳಗೆ ಬಿದ್ದು, ಮಹಾದುಃಖಕ್ಕೊಳಗಾದರು, ನರರು. ಈ ವಿಷಯಗಾಳಿ ಸೋಂಕಲು ಹರಿ ಹತ್ತು ಭವವೆತ್ತಿದ. ಅಜ 21 ಭವವೆತ್ತಿ ಶಿರ ಕಳಕೊಂಡ. ಇಂದ್ರನ ಮೈ ಕೆಟ್ಟಿತ್ತು, ಚಂದ್ರ ಕ್ಷಯ ರೋಗಿಯಾದ. ದಿವಸೇಂದ್ರ ಕಿರಣ ನಷ್ಟವಾದ. ಮುನೀಂದ್ರರ್ನಷ್ಟವಾಗಿ ಮಡಿದರು. ಮನು ಮಾಂಧಾತರು ಮಂದಮತಿಗಳಾದರು. ದೇವ ದಾನವ ಮಾನವರು ಮಡಿದರು. ಇದ ನೋಡಿ ನಮ್ಮ ಶರಣರು, ವಿಷಯಗಾಳಿ ತಮ್ಮ ಸೋಕೀತೆಂದು ಶಾಂಭವಪುರದಲ್ಲಿಯೆ ನಿಂದು, ನಿರ್ವಿಷಯಾಸ್ತ್ರದಲ್ಲಿ ವಿಷಯಗಾಳಿಯ ಛೇದಿಸಿ ಜಯಿಸಿ ಅಕ್ಷಯ ಸುಖಿಗಳಾದರು ನೋಡಾ ಗುಹೇಶ್ವರಲಿಂಗದಲ್ಲಿ.
--------------
ಅಲ್ಲಮಪ್ರಭುದೇವರು
ಲಿಂಗಕ್ಕೂ ತಮಗೂ ಸಹಭಾಜನ ಸಹಭೋಜನವಾಹಲ್ಲಿ ಇದಿರಿಟ್ಟ ಪದಾರ್ಥಂಗಳ ಲಿಂಗಕ್ಕೆ ತೋರಿ, ತಾ ಕೊಂಬಲ್ಲಿ ದೃಷ್ಟವಾಯಿತ್ತು. ಸ್ವಪ್ನ ಸುಷುಪ್ತಿಗಳಲ್ಲಿ, ಮಿಕ್ಕಾದ ಏಕಾಂತ ಸತಿ ಕೂಟಂಗಳಲ್ಲಿ ಅದಕ್ಕೆ ದೃಷ್ಟವಹ ಸಹಭೋಜನವಾವುದಯ್ಯಾ ? ಯೋನಿ ಸ್ವಪ್ನ ಸುಷುಪ್ತಿ ಮುಂತಾದ ಭಾವದ ಸಹಭೋಜನ ಎಲ್ಲಿ ಇದ್ದಿತ್ತು ? ಆ ಭಾಜನದ ಸಹಭೋಜನದ ಸಂಬಂಧ ಎಲ್ಲಿದ್ದಿತು ? ಅದು ಕಲ್ಲಿನೊಳಗಣ ನೀರು, ನೀರೊಳಗಣ ಶಿಲೆ, ಇದಾರಿಗೂ ಅಸಾಧ್ಯ ನೋಡಾ. ಅದು ಕಾಯದ ಹೊರಗಾದ ಸುಖ, ಸುಖದ ಹೊರಗಾದ ಅರ್ಪಿತ. ಇಂತೀ ಗೊತ್ತಮುಟ್ಟಿ ಸಹಭೋಜನದಲ್ಲಿ ಅರ್ಪಿಸಬಲ್ಲವಂಗೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ಸಹಭಾಜನ ಭೋಜನವಾಗಿಪ್ಪನು.
--------------
ಅಕ್ಕಮ್ಮ
ಕಾಡಪತ್ರೆಯ ನಾಡಕೀಡೆ ತಿಂದಿರವೆ ? ಉಡು ಏಕಾಂತ ನಿವಾಸಿಯೆ ? ತೋಳ ದಿಗಂಬರಿಯೇ ? ಎತ್ತು ಬ್ರಹ್ಮಚಾರಿಯೇ? ಬಾವುಲ ತಲೆಕೆಳಗಾಗಿದ್ದಡೆ ತಪಸ್ವಿಯೇ ? ಸಕಳೇಶ್ವರದೇವಾ, ನಿಮ್ಮ ನಿಜವನರಿಯದ ಶರಣರು ಹೊರಹಂಚೆ ಒಳಬೊಳ್ಳೆ, ಒಲ್ಲದು ಲಿಂಗೈಕ್ಯರು.
--------------
ಸಕಳೇಶ ಮಾದರಸ
ಮಹಾಶೂನ್ಯ ಅಂಧಕಾರ ಸುರಾಳ ನಿರಾಳ ನಿರಾಲಂಬದಿಂದತ್ತ ತನ್ಮಯ ಸ್ವಯಂಭು ಸನ್ನದ್ಧವಾಗಿ ಅನಾದಿವಸ್ತು ಆದಿಸ್ವರೂಪವ ತಾಳ್ದು ಬಂದ ವಿವರ: ನಾದ ಬಿಂದು ಕಳೆ ಈ ತ್ರಿವಿಧಭೇದ ಏಕವಾಗಿನಿಂದ ದೆಸೆಯಿಂದ ಆ ವಸ್ತುವಿನ ತಿಲಾಂಶು ಸದಾಶಿವಮೂರ್ತಿಯ ಅಂಶೀಭೂತವಾಗಿ ಏಕಾಂತ ಪ್ರಮಥ ರುದ್ರನ ದೆಸೆಯಿಂದ ದಶರುದ್ರರ ಸಂಬಂಧ ವೈಷ್ಣವಭೇದ. ಆ ವೈಷ್ಣವ ದಶ ಅವತಾರಭೇದ. ದಕ್ಷ ಮುಂತಾದ ನವಬ್ರಹ್ಮತ್ವದಿಂದ ಮನುಮುನಿಗಳು ಮುಂತಾದ ಯಕ್ಷ ರಾಕ್ಷಸ ಶಕ್ತಿದೇವತೆ ಕುಲ ಮುಂತಾದ ಷಡ್ದರ್ಶನ ಪಕ್ಷಪಾತ ಭೇದಂಗಳಾಗಿ ಇಪ್ಪ ತೆರನ ವೇದದ ಹಾದಿಯಿಂದ ಶಾಸ್ತ್ರದ ಸಂದೇಹದಿಂದ ಪುರಾಣದ ಪೂರ್ವ ಮುಂತಾದ ಯುಕ್ತಿಯಿಂದ ತಿಳಿದು ಉತ್ತಮ ಮಧ್ಯಮ ಕನಿಷ*ವೆಂಬ ದೇವತ್ವಕುಲವನರಿ. ಇಂದುವಿನ ಕಳೆಯಿಂದ ಆ ಇಂದುವಿನ ಕಳೆಯನರಿವಂತೆ ಜ್ಯೋತಿಯ ಕಳೆಯಿಂದ ಆ ಜ್ಯೋತಿಯ ಲೇಸು ಕಷ್ಟವ ಕಾಂಬಂತೆ ನಿಮ್ಮ ಶಾಸ್ತ್ರಸಂಪದಗಳಲ್ಲಿ ಏಕಮೇವನದ್ವಿತೀಯನೆಂಬ ಶ್ರುತಿಯ ವಿಚಾರಿಸಿಕೊಂಡು ಇದ್ದ ಮತ್ತೆ ಆರಡಿಯೇತಕ್ಕೆ ? ಇಂತೀ ಭೇದಕ್ಕೆ ವಿಶ್ವಮಯನಾಗಿ ವಿಶ್ವಚಕ್ಷುವಾಗಿ ತತ್ವಂಗಳಿಗೆ ಮುಖ್ಯವಾಗಿ ಉತ್ಪತ್ಯ ಸ್ಥಿತಿ ಲಯಕ್ಕೆ ಕರ್ತೃವಾಗಿ ಆಚಾರ್ಯಮತಕ್ಕೆ ಅಂಗವಾಗಿ ಲೀಲಾಗುಣದಿಂದ ಶಕ್ತಿಸಮೇತವಾಗಿ ಮತ್ತೆ ನಿನ್ನ ಇಚ್ಫೆ ಹಿಂಗಿ ನಿಶ್ಚಯವಾಗಿ ಸ್ವಯಂಭುವಾದೆಯಲ್ಲಾ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವೆ.
--------------
ಪ್ರಸಾದಿ ಭೋಗಣ್ಣ
ಸಕಲ ನಿಃಕಲದಲ್ಲಿ ಅಡಗಿ, ನಿಃಕಲ ಸಕಲದಲ್ಲಿ ಅಡಗಿ, ಸಕಲ ನಿಃಕಲವಿಲ್ಲದೆ, ಏಕಾಂತ ಲಿಂಗದಲ್ಲಿ ಪರಕೆ ಪರವಶನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
-->