ಅಥವಾ

ಒಟ್ಟು 14 ಕಡೆಗಳಲ್ಲಿ , 6 ವಚನಕಾರರು , 9 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರ್ಮಿಗಳು ಶಿವಪಥಕ್ಕೆ ಬಪ್ಪಾಗಳವರ ಕರ್ಮ ಬೆಂಬತ್ತಿ ಕಾಡುವದಯ್ಯಾ. ಲಿಂಗಾರಾಧನೆಯ ಮಾಡಲೀಯದು. ಸಂದೇಹವನೆ ತೋರಿಸಿ ಕೆಡಿಸುವದಯ್ಯಾ. ಏಕೆ? ಅವರು ಮಾಡಿದ ಕರ್ಮವನುಣಬೇಕಾಗಿ! ಇದನರಿದು ನಿಮ್ಮ ನೆರೆನಂಬಿ ಪೂಜಿಸೆ ಹರಿವುದು ಕರ್ಮ, ಕಪಿಲಸಿದ್ಧಮಲ್ಲಿಕಾರ್ಜುನ, ದೇವರ ದೇವಾ.
--------------
ಸಿದ್ಧರಾಮೇಶ್ವರ
ಇಷ್ಟಲಿಂಗವ ತೆಕ್ಕೊಂಡಲ್ಲಿ ದೃಷ್ಟವಾಯಿತ್ತೆ ನಿಮಗೆ? ಬಂದ್ಥಿಕಾರನ ಬಂಧನವ ಮಾಡೂದು ಲಿಂಗದೇಹಿಗಳಿಗುಂಟೆ ಅಯ್ಯಾ. ಜಗದಲ್ಲಿ ಉಂಡುಂಡು ಕೊಂಡಾಡುವವರಿಗೆ, ಘನಲಿಂಗದ ಶುದ್ಧಿ ಏಕೆ? ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.
--------------
ಘಟ್ಟಿವಾಳಯ್ಯ
ತನ್ನ ಶಿಷ್ಯ ತನ್ನ ಮಗನೆಂಬುದು ತಪ್ಪದಲಾ. ಏಕೆ? ಆತನ ಧನಕ್ಕೆ ತಂದೆಯಾದನಲ್ಲದೆ ಆತನ ಮನಕ್ಕೆ ತಂದೆಯಾದನೆ ? ಏಕೆ? ಆತನ ಮನವನರಿಯನಾಗಿ, ಆತನ ಧನಕ್ಕೆ ತಂದೆಯಾದನು. ತನ್ನಲ್ಲಿರ್ದ ಭಕ್ತಿಯ ಮಾರಿಕೊಂಡುಂಬವರು ನಿಮ್ಮ ನಿಜಭಕ್ತರಲ್ಲವಯ್ಯಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಒಡೆದ ಮಡಕೆಗೆ ಸರಿಯಿಂದ ಸಂದು ಕೂಡುವುದೆ? ದಗ್ಧವಾದ ಪಟ ಅಗಸರ ಕಲ್ಲಿಗೆ ಹೊದ್ದುವುದೆ? ಬದ್ಧ ಭವಿಗಳೆಂದು ಬಿಟ್ಟ ಮತ್ತೆ ಸಮಯದ ಹೊದ್ದಿಗೆ ಏಕೆ? ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ.
--------------
ಘಟ್ಟಿವಾಳಯ್ಯ
ಗುರುದ್ರೋಹಿಯಾದವನ ಮುಖವ ನೋಡಲಾಗದು, ಮತ್ತೆ ನೋಡಬಹುದು, ಏಕೆ? ಮುಂದೆ ಲಿಂಗವಿಪ್ಪುದಾಗಿ. ಲಿಂಗದ್ರೋಹಿಯಾದವನ ಮುಖವ ನೋಡಲಾಗದು, ಮತ್ತೆ ನೋಡಬಹುದು, ಏಕೆ? ಮುಂದೆ ಜಂಗಮವಿಪ್ಪುದಾಗಿ ಜಂಗಮದ್ರೋಹಿಯಾದವನ ಮುಖವ ನೋಡಲಾಗದು, ಮತ್ತೆ ನೊಡಬಹುದು ಏಕೆ ಮುಂದೆ ಪ್ರಸಾದವಿಪ್ಪುದಾಗಿ. ಪ್ರಸಾದದ್ರೋಹಿಯಾದವನ ಮುಖವ ನೋಡಲಾಗದು ಏಕೆ? ಕೂಡಲಚೆನ್ನಸಂಗಯ್ಯನ ಪ್ರಸಾದವಿರಹಿತವಾಗಿ ಪರವಿಲ್ಲದ ಕಾರಣ
--------------
ಚನ್ನಬಸವಣ್ಣ
ಕಾಣಬಾರದ ಘನವೆಂದು, ಜಗವೆಲ್ಲ ಹೇಳುತ್ತಿದೆ. ಈ ಕಾಣಬಾರದ ಘನವ ನಾನಾರ ಕೇಳಲಯ್ಯ! ಗುರು ಹೇಳಲಿಲ್ಲ, ಲಿಂಗ ಹೇಳಲಿಲ್ಲ, ಜಂಗಮ ಹೇಳಲಿಲ್ಲ. ಅದು ಹೇಗೆ ಎಂದರೆ:ಗುರು ಒಂದು ಲಿಂಗವ ಕೊಟ್ಟು, ತನ್ನ ಅಂಗದ ಕುರಿತು, ಆ ಲಿಂಗಕ್ಕೆ ಬೆಲೆಯ ತಕ್ಕೊಂಡು ಹೋದನಲ್ಲದೆ, ಆ ಕಾಣಬಾರದ ಘನವ ಹೇಳಿದುದು ಇಲ್ಲ. ಇದ ಲಿಂಗವೆಂದು ಪೂಜಿಸಿದರೆ, ಕಂಗಳ ಕಾಮ ಘನವಾಯಿತ್ತಲ್ಲ ! ಎರಡರ ಸಂಗಸುಖವ ಹೇಳಲರಿಯದೆ, ಜಂಗಮವೆಂದು ಪೂಜೆಯ ಮಾಡಿದರೆ, ಈ ಜಗದೊಳಗೆ ಹುಟ್ಟಿದ ಪದಾರ್ಥಕ್ಕೆ ಒಡೆಯನಾದನಲ್ಲದೆ, ಈ ಕಾಣಬಾರದ ಘನವ, ಹೇಳಿದುದಿಲ್ಲ. ಅದೇನು ಕಾರಣವೆಂದರೆ: ಆ ಕಾಣಬಾರದ ಘನವ, ತಾನೊಬ್ಬ ಕೇಳಲು ಬಾರದು, ತಾನೊಬ್ಬರಿಗೆ ಹೇಳಲು ಬಾರದು. ಏಕೆ? ನಾಮರೂಪಿಲ್ಲವಾಗಿ, ನುಡಿಯಿಲ್ಲ. ಇಂತಪ್ಪ ಘನ ತಾನೆ, ಒಂದು ರೂಪ ತೊಟ್ಟು, ತನ್ನ ಲೀಲೆಯ ಎಲ್ಲ ಶರಣರೊಳು ನಟಿಸಿ, ತನ್ನ ತಾನೆ ಸಾಕಾರ ನಿರಾಕಾರವಾಗಿ, ಏಕವಾದ ಭೇದವನರಿಯದೆ ಈ ಲೋಕದಲ್ಲಿ ಇದ್ದರೇನು? ಆ ಲೋಕದಲ್ಲಿ ಹೋದರೇನು? ಹದಿನಾಲ್ಕುಲೋಕವು ತಾನೆಯಾದ ಚಿನ್ಮಯನ ಹೇಳಿಹೆನೆಂದರೆ ಎನ್ನಳವಲ್ಲ. ಬಸವಪ್ರಿಯ ಕೂಡಲಚೆನ್ನಬಸವಣ್ಣಾ ನೀವೆ ಬಲ್ಲಿರಿ.
--------------
ಹಡಪದ ಅಪ್ಪಣ್ಣ
ಭಸಿತವನಿಟ್ಟಿಹೆ, ರುದ್ರಾಕ್ಷಿಯ ಧರಿಸಿಹೆ, ನೀನೊಲ್ಲೆ, ನೀನೊಲಿದೆ. ನಿನ್ನೊಲುಮೆ ಏಕೆ ಎಲೆ ಅಯ್ಯಾ. ನಿನ್ನವರೊಲ್ಲರು! ಆ ಒಲುಮೆ ತಾನೆನಗೇಕೆ? ಹೇಳಾ, ಎಲೆ ಅಯ್ಯಾ. ಪುರುಷರಿಲ್ಲದ ಸ್ತ್ರೀಯರ ಶೃಂಗಾರದಂತೆ ನಿನ್ನೊಲುಮೆ ಏಕೆ? ಹೇಳಾ! ನಿಜಭಕ್ತಿಯಲ್ಲಿರಿಸಿ ಸದ್ಭಕ್ತನೆಂದೆನಿಸಿ ಸದಾಚಾರಿಗಳ ಸಂಗಡ ಎನ್ನ ಹುದುವಿನಲ್ಲಿ ಕುಳ್ಳಿರಿಸಿ ಓರಂತೆ ಮಾಡಾ, ಕಪಿಲಸಿದ್ಧಮಲ್ಲಿಕಾರ್ಜುನ, ನೀನೊದುದಕ್ಕೆ ಇದು ಕುರುಹು. ಅಲ್ಲರ್ದಡೆ ಇದು ವೈಶಿಕ!
--------------
ಸಿದ್ಧರಾಮೇಶ್ವರ
ಲಿಂಗದ್ರೋಹದವನ ಮುಖವ ನೋಡಲಾಗದು, ಮತ್ತೆ ನೋಡಬಹುದು, ಏಕೆ? ಮುಂದೆ ಗುರುವಿಪ್ಪ ಕಾರಣ. ಗುರುವಿನಲ್ಲಿ ದ್ರೋಹದವನ ಮುಖವ ನೋಡಲಾಗದು [ಮತ್ತೆ] ನೋಡಬಹುದು, ಏಕೆ? ಮುಂದೆ ಜಂಗಮವಿಪ್ಪ ಕಾರಣ. ಜಂಗಮದಲ್ಲಿ ದ್ರೋಹದವನ ಮುಖವ ನೋಡಲಾಗದು, [ಮತ್ತೆ] ನೋಡಬಹುದು, ಏಕೆ? ಮುಂದೆ ಪ್ರಸಾದವಿಪ್ಪ ಕಾರಣ. ಪ್ರಸಾದದಲ್ಲಿ ದ್ರೋಹದವನ ಮುಖವ ನೋಡಲಾಗದು, ಮತ್ತೆ ನೋಡಬಹುದು [ಏಕೆ?]ಪ್ರಸಾದದಿಂದ ಪರವಿಲ್ಲವಾಗಿ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ನಾನಾ ಪ್ರಯತ್ನದಿಂದ ಹೊನ್ನನಾರ್ಜಿಸುವಂತೆ, ನಾನಾ ಪ್ರಯತ್ನದಿಂದ ಹೊನ್ನ ಸುರಕ್ಷಿತವ ಮಾಡುವಂತೆ, ನಾನಾ ಪ್ರಯತ್ನದಿಂದ ಬೇಡಿದವರಿಗೆ ಕೊಡದೆ ಲೋಭವ ಮಾಡಿ ಸ್ನೇಹಿಸುವಂತೆ, ನಾನಾ ವಿಧದಿಂದ ವಿಚಾರಿಸಿ ವಿಚಾರಿಸಲು ಪ್ರಾಣವೇ ಹೊನ್ನೆಂಬಂತೆ, ನಾನಾ ಪರಿಯಲು ಮನ ಬುದ್ಧಿ ಚಿತ್ತಹಂಕಾರಂಗಳು ಪಂಚೇಂದ್ರಿಯಂಗಳು ಪ್ರಾಣವನು ಅವಗ್ರಹಿಸಿಕೊಂಡಿಪ್ಪಂತೆ ಶಿವಲಿಂಗವನು ಅವಗ್ರಹಿಸಿಕೊಂಡಿರಬೇಕು. ಏಕೆ? ಆ ಹೊನ್ನೇ ಶಿವನಾದ ಕಾರಣ, `ಓಂ ನಮೋ ಹಿರಣ್ಯಬಾಹವೇ ಸೇನಾನ್ಯೇ ದಿಶಾಂ ಚ ಪತಯೇ ನಮೋ ನಮೋ ವೃಕ್ಷೇಭ್ಯೋ ಹರಿಕೇಶೇಭ್ಯಃ ಪಶೂನಾಂ ಪತಯೇ ನಮಃ, ಎಂದುದಾಗಿ ಶಿವನೇ ಹೊನ್ನು ಕಾಣಿರೋ ಶಿವಶಿವಾ ನಾನಾ ಪ್ರಯತ್ನದಿಂದ ಕುಲವುಳ್ಳವರು ಅತ್ಯಂತ ಯೌವನೆಯಪ್ಪ ಹೆಣ್ಣಿಂಗೆ ಪ್ರಾಣಕ್ಕೆ ಪ್ರಾಣವಪ್ಪಂತೆ, ಆ ಹೆಣ್ಣಿಂಗೆ ಅಂತಃಕರಣ ಚತುಷ್ಟಯಂಗಳು ಸ್ನೇಹಿಸುವಂತೆ ಆ ಹೆಣ್ಣು ಪ್ರಾಣವಾಗಿಪ್ಪಂತೆ, ಆ ಲಿಂಗವೇ ಪ್ರಾಣವಾಗಿರಬೇಕು. ಅದಕ್ಕೆ ಹೆಣ್ಣೇ ಶಿವನಾದ ಕಾರಣ ಶಕ್ತ್ಯಾಧಾರೋ ಮಹಾದೇವಃ ಶಕ್ತಿರೂಪಾಯ ವೈ ನಮಃ ಶಕ್ತಿಃ ಕರ್ಮ ಚ ಕರ್ತಾ ಚ ಮುಕ್ತಿಶಕ್ತೈ ನಮೋ ನಮಃ ಎಂದುದಾಗಿ- ಆ ಹೆಣ್ಣು ತಾನೇ ಶಿವನು ಕಾಣಿರೋ. ನಾನಾ ಪ್ರಯತ್ನದಿಂದ ಮಣ್ಣನಾರ್ಚಿಸುವಂತೆ, ಆ ಭೂಮಿಯ ಅಗುಚಾಗಿಗೆ ಅರ್ಥಪ್ರಾಣಾಭಿಮಾನವನಿಕ್ಕಿ ಆ ಭೂಮಿಯ ರಕ್ಷಿಸಿ ಆ ಭೂಮಿಯ ಸರ್ವಭೋಗೋಪಭೋಗಂಗಳನು ಭೋಗಿಸಿ ಸುಖಿಸುವಂತೆ, ಶಿವಲಿಂಗದಿಂದ ಭೋಗಿಸಬೇಕು. ಅದೇಕೆಂದಡೆ- ಭೂಮಿಯೇ ಶಿವನಾದ ಕಾರಣ, `ಓಂ ಯಜ್ಞಸ್ಯ ರುದ್ರಸ್ಯ ಚಿತ್ಪೃಥಿವ್ಯಾಭೂರ್ಭುವಃ ಸ್ವಃ ಶಿವಂ ಶಿವೋ ಜನಯತಿ' ಎಂದುದಾಗಿ ಭೂಮಿಯೇ ಶಿವನು ಕಾಣಿರೋ ಸರ್ವಾಧಾರ ಮಹಾದೇವ. ಇದು ಕಾರಣ, ಹೊನ್ನು ಹೆಣ್ಣು ಮಣ್ಣು ತ್ರಿವಿಧವು ಶಿವನು ಕಾಣಿರೋ. ಈ ತ್ರಿವಿಧದ ಮರೆಯಲ್ಲಿ ಶಿವನಿಪ್ಪನು ಕಾಣಿರೋ. ಇದು ಕಾರಣ, ಈ ತ್ರಿವಿಧಕ್ಕೆ ಮಾಡುವ ಸ್ನೇಹ, ಇಂತೀ ತ್ರಿವಿಧದಲ್ಲಿ ಮಾಡುವ ಲೋಭ, ಇಂತೀ ತ್ರಿವಿಧಕ್ಕೆ ಮಾಡುವ ತಾತ್ಪರ್ಯವ ಶಿವಲಿಂಗಕ್ಕೆ ಮಾಡಿದಡೆ, ಶಿವನಲ್ಲಿ ಸಾಯುಜ್ಯನಾಗಿ ಸರ್ವಭೋಗೋಪಭೋಗವ ಭೋಗಿಸಿ ಪರಮಪರಿಣಾಮ ಸುಖಸ್ವರೂಪನಾಗಿಪ್ಪನಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
-->