ಅಥವಾ

ಒಟ್ಟು 16 ಕಡೆಗಳಲ್ಲಿ , 11 ವಚನಕಾರರು , 12 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಾತಿವಿಡಿದು ಜಂಗಮವ ಮಾಡಬೇಕೆಂಬ ಪಾತಕರು ನೀವು ಕೇಳಿರೊ: ಜಾತಿ ಘನವೊ ಗುರುದೀಕ್ಷೆ ಘನವೊ ? ಜಾತಿ ಘನವಾದ ಬಳಿಕ, ಆ ಜಾತಿಯೆ ಗುರುವಾಗಿರಬೇಕಲ್ಲದೆ ಗುರುದೀಕ್ಷೆ ಪಡೆದು, ಗುರುಕರಜಾತರಾಗಿ ಜಾತಕವ ಕಳೆದು ಪುನರ್ಜಾತರಾದೆವೆಂಬುದ ಏತಕ್ಕೆ ಬೊಗಳುವಿರೊ ? ಜಾತಿವಿಡಿದು ಕಳೆಯಿತ್ತೆ ಜಾತಿತಮವು ? ಅಜಾತಂಗೆ ಆವುದು ಕುಲಳ ಆವ ಕುಲವಾದಡೇನು ದೇವನೊಲಿದಾತನೆ ಕುಲಜ. ಅದೆಂತೆಂದಡೆ; ದೀಯತೇ ಜಾÕನಸಂಬಂಧಃ ಕ್ಷೀಯತೇ ಚ ಮಲತ್ರಯಂ ದೀಯತೇ ಕ್ಷೀಯತೇ ಯೇನ ಸಾ ದೀಕ್ಷೇತಿ ನಿಗದ್ಯತೇ ಎಂಬುದನರಿದು, ಜಾತಿ ನಾಲ್ಕುವಿಡಿದು ಬಂದ ಜಂಗಮವೇ ಶ್ರೇಷ್ಠವೆಂದು ಅವನೊಡಗೂಡಿಕೊಂಡು ನಡೆದು ಜಾತಿ ಎಂಜಲುಗಳ್ಳರಾಗಿ ಉಳಿದ ಜಂಗಮವ ಕುಲವನೆತ್ತಿ ನುಡಿದು, ಅವನ ಅತಿಗಳೆದು ಕುಲವೆಂಬ ಸರ್ಪಕಚ್ಚಿ, ಎಂಜಲೆಂಬ ಅಮೇಧ್ಯವ ಭುಂಜಿಸಿ ಹಂದಿ-ನಾಯಂತೆ ಒಡಲ ಹೊರೆವ ದರುಶನಜಂಗುಳಿಗಳು ಜಂಗಮಪಥಕ್ಕೆ ಸಲ್ಲರಾಗಿ. ಅವರಿಗೆ ಗುರುವಿಲ್ಲ ಗುರುಪ್ರಸಾದವಿಲ್ಲ, ಲಿಂಗವಿಲ್ಲ ಲಿಂಗಪ್ರಸಾದವಿಲ್ಲ, ಜಂಗಮವಿಲ್ಲ ಜಂಗಮಪ್ರಸಾದವಿಲ್ಲ. ಇಂತೀ ತ್ರಿವಿಧಪ್ರಸಾದಕ್ಕೆ ಹೊರಗಾದ ನರಜೀವಿಗ? ಸ್ವಯ-ಚರ-ಪರವೆಂದಾರಾಧಿಸಿ ಪ್ರಸಾದವ ಕೊಳಸಲ್ಲದು ಕಾಣಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಕಣ್ಗೆ ಶೃಂಗಾರ ಗುರುಹಿರಿಯರ ನೋಡುವುದು. ಕರ್ಣಕ್ಕೆ ಶೃಂಗಾರ ಪುರಾತನರ ಸುಗೀತಂಗಳ ಕೇಳುವುದು. ವಚನಕ್ಕೆ ಶೃಂಗಾರ ಸತ್ಯವ ನುಡಿವುದು. ಸಂಭಾಷಣೆಗೆ ಶೃಂಗಾರ ಸದ್ಭಕ್ತರ ನುಡಿಗಡಣ. ಕರಕ್ಕೆ ಶೃಂಗಾರ ಸತ್ಪಾತ್ರಕ್ಕೀವುದು. ಜೀವಿಸುವ ಜೀವನಕ್ಕೆ ಶೃಂಗಾರ ಗಣಮೇಳಾಪ ಇವಿಲ್ಲದ ಜೀವಿಯ ಬಾಳುವೆ ಏತಕ್ಕೆ ಬಾತೆಯಯ್ಯಾ ಚೆನ್ನಮಲ್ಲಿಕಾರ್ಜುನಾ
--------------
ಅಕ್ಕಮಹಾದೇವಿ
ನೋಡಿ ನೋಡಿ ಕಂದದಿದ್ದಡೆ, ಕೂಡಿ ಕೂಡಿ ಲೀಯವಾಗದಿದ್ದಡೆ, ಆ ನೋಟ ಕೂಟ ಏತಕ್ಕೆ ಹೇಳಾ, ಎಲೆ ಅವ್ವಾ? ಕಪಿಲಸಿದ್ಧಮಲ್ಲಿಕಾರ್ಜುನಾ, ನಿನ್ನ ಕೂಡಿ ನೀನಾಗದಿದ್ದಡೆ, ಆ ನೋಟ ಕೂಟ ಏತಕ್ಕೆ ಹೇಳಾ ಅವ್ವಾ?
--------------
ಸಿದ್ಧರಾಮೇಶ್ವರ
ಅಂಗದ ಮೇಲೆ ಲಿಂಗವ ಧರಿಸಿದ ಬಳಿಕ ಸರ್ವಾಂಗಲಿಂಗವಾಗದಿದ್ದರೆ ಆ ಲಿಂಗವ ಏತಕ್ಕೆ ಧರಿಸಲಿ ? ಪ್ರಸಾದ ಕೊಂಡ ಕಾಯ ಪ್ರಸಾದವಾಗದಿದ್ದರೆ ಆ ಪ್ರಸಾದ ಏತಕ್ಕೆ ಕೊಳ್ಳಲಿ ? ಇದು ಕೊಟ್ಟವನ ಗುಣದಿಂದಾದುದು. ಅದನ್ನು ವಿಚಾರಿಸದೆ ಏತಕ್ಕೆ ಲಿಂಗವ ಧರಿಸಿದಿರಿ ? ಏತಕ್ಕೆ ಪ್ರಸಾದವ ಕೊಂಬುವಿರಿ ? ಇದಕ್ಕೆ ಸಾಕ್ಷಿ: 'ಸರ್ವದ್ರವ್ಯವಂಚ ವೇದಯಂ ತದ್ವಾಹಾನ ವಿಖವತೆ' ಇಂತಪ್ಪ ಶ್ರುತಿ ಹುಸಿ ಎನ್ನಿರೊ ವೇಷಧಾರಿಗಳಿರಾ. ನಿಮಗೆ ಪಂಚಾಕ್ಷರ ಸಂಯುಕ್ತವ ಮಾಡಿದ ಗುರುವಿನ ನಡೆಯಲ್ಲಿ ನಿಮ್ಮ ನಡೆ ಎಂತೆಂದಡೆ: ಸಾಕ್ಷಿ: 'ನಾಮಧಾರಕ ಗುರು ನಾಮಧಾರಕಃ ಶಿಷ್ಯಃ | ಅಂಧ ಅಂಧಕಯುಕ್ತಾಃ ದ್ವಿವಿಧಂ ಪಾತಕಂ ಭವೇತ್ ||' ಎಂದುದಾಗಿ, ನಮ್ಮ ಶಿವಗಣಂಗಳ ಸುವಾಚ್ಯ ಸಾಹಿತ್ಯವೆಂದರೆ ಉರಿಕರ್ಪುರ ಸಂಯೋಗವಾದಂತೆ, ವಾಯು ಗಂಧವನಪ್ಪಿದಂತೆ ಶಿವಗಣಂಗಳ ಪಂಚೇಂದ್ರಿಯ ಶಿವನ ಪಂಚಮುಖವಾಗಿದ್ದಿತು. ಪಂಚಾಚಾರವೆ ಪಂಚಬ್ರಹ್ಮ ಪರಿಪೂರ್ಣ ತಾನೆ. ಗುರು, ಲಿಂಗ, ಜಂಗಮ, ತೀರ್ಥಪ್ರಸಾದ ಪಂಚಬ್ರಹ್ಮಮೂರ್ತಿ ನಿಮ್ಮ ಶರಣ. ಇಂತೀ ಶರಣನ ನಿಲವನರಿಯದೆ ನುಡಿವ ವೇಷಧಾರಿಗಳ ಷಡುಸ್ಥಲಬ್ರಹ್ಮಜ್ಞಾನಿಗಳೆಂದರೆ ಕೆಡೆಹಾಕಿ ಮೂಗ ಕೊಯ್ದು, ಇಟ್ಟಂಗಿಯ ತಿಕ್ಕಿ, ಸಾಸಿವೆಯ ಪುಡಿ ತಳೆದು, ನಿಂಬಿಹಣ್ಣು ಹಿಂಡಿ, ಕೈಯಲ್ಲಿ ಕನ್ನಡಿಯ ಕೊಟ್ಟು, ನಿಮ್ಮ ನಿಲವ ನೋಡೆಂದು ಮೂಡಲ ಮುಂದಾಗಿ ಅಟ್ಟದೆ ಬಿಡುವನೆ ನಿಮ್ಮ ಶರಣ, ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ಪರರ ಕಾಡಿ ಬೇಡಿ ಮಾಡೆಹೆನೆಂಬ ಮೋಡಿ ಏತಕ್ಕೆ ? ಕಾಡ ಸೊಪ್ಪಾದಡೇನು, ಬೇಡದೆ ಉಂಬ ಆರೂಢಂಗೆ ಮೂರಡಿಗೊಮ್ಮೆ ನಮೋ ನಮೋ ಎಂಬೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕಾರಣವಿಲ್ಲ ಕಾರ್ಯವಿಲ್ಲ ಏತಕ್ಕೆ ಭಕ್ತರಾದೆವಿಂಬಿರೊ ? ಐವರ ಬಾಯ ಎಂಜಲನುಂಬಿರಿ, ಐವರು ಸ್ತ್ರೀಯರ ಮುಖವನರಿಯಿರಿ. ಮೂರು ಸಂಕಲೆಯ ಕಳೆಯಲರಿಯಿರಿ. ಕಾಯವಿಡಿದು ಲಿಂಗವ ಮುಟ್ಟಿಹೆನೆಂಬ, ಭ್ರಮೆಯ ನೋಡಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಮಾತಿನ ಹಂಗೇತಕ್ಕೆ, ಮನವೇಕಾಂತದಲ್ಲಿ ನಿಂದ ಬಳಿಕ, ಬಸವಯ್ಯಾ ? ಅಜಾತನ ಒಲುಮೆ ಏತಕ್ಕೆ, ಅರ್ಪಿತದ ಹಂಗಹರಿದಬಳಿಕ, ಬಸವಯ್ಯಾ ? ಎನಗೆ ಸಮಯಾಚಾರವಿನ್ನೇಕೆ, ಭಕ್ತಿಭಾವ ನಷ್ಟವಾದಬಳಿಕ, ಬಸವಯ್ಯಾ ? ಮಾತಿನ ಸೂತಕ ಹಿಂಗಿ ಮನೋಲೀಯವಾಯಿತ್ತಯ್ಯಾ, ಸಂಗಯ್ಯಾ, ಬಸವ ಕುರುಹಿಲ್ಲದಮೂರ್ತಿಯಾದ ಕಾರಣ.
--------------
ನೀಲಮ್ಮ
ಮನದ ಹಂದೆ ಏತಕ್ಕೆ ? ನೀ ಧೀರನೆಂಬೆ. ನಿನ್ನ ಧೀರವ ನಾ ಕಂಡೆ; ನಾನು ಧೀರಳೆಂಬುದ ನೀನೇ ಬಲ್ಲೆಯಯ್ಯ ಸಂಗಯ್ಯ.
--------------
ನೀಲಮ್ಮ
ಎಲೆ ದೇವಾ ಏತಕ್ಕೆ ನುಡಿಯೆ? ಎನ್ನೊಳು ಮುನಿಸೆ? ಎನ್ನೊಳು ನಿನ್ನಯ ಚಿತ್ತವನಿರಿಸಿ ನೀಕರಿಸಿ ನುಡಿಯದಿರ್ದಡೆ ಎನ್ನಯ ನೋವನಿನ್ನಾರಿಗೆ ಹೇಳುವೆ, ನಿನಗಲ್ಲದೆ? ನೀ ಮಾಡುವ ಮಾಟ ಅನೇಕ ಕುಟಿಲ. ಯೋಗಿಗಳ ಸುತ್ತಿ ಮುತ್ತಿದ ಹರಿತದ ಪಾಶ ನಿಮ್ಮಲ್ಲಿ. ಅನೇಕರ ಕೊಲುವ ಪಾಶ ಕೈಯಲ್ಲಿ, ಭವವೇಷವಂಗದಲ್ಲಿ. ಭಕ್ತರ ಕೊಲುವ ದೋಷಕ್ಕೆ ಅಂಜಿದೆಯಾಗಿ, ನಿನಗದು ನೀತಿಯೆ? ರುದ್ರನ ವೇಷಕ್ಕದು ಸಹಜ, ಅವ ಬಿಡು ಬಿಡು ನೀಕರಿಸು. ಉಮಾಪತಿ ವೇಷವ ಬಿಟ್ಟು ಸ್ವಯಂಭುವಾಗು. ಎಲೆ ಅಯ್ಯಾ, ಎನ್ನಲ್ಲಿ ಸದ್ಭಕ್ತಿಯ ನೆಲೆಗೊಳಿಸಿ, ಎನ್ನ ಪ್ರಕೃತಿಯ ಪರಿಹರಿಸಯ್ಯಾ. ಎನ್ನ ತಂದೆ, ಮುಕುರ ಪ್ರತಿಬಿಂಬದಂತೆ ಎನಗೆ ನಿನಗೆಂಬುದ ನೀನರಿಯಾ? ಎಲೆ ದೇವಾ, ಅರಿದರಿದೇಕೆನಗೆ ಕೃಪೆಯಾಗಲೊಲ್ಲೆ. ಎಲೆ ಸ್ವಾಮಿ, ಆನು ಮಾಡಿದುದೇನು ನಿನಗೆ? ಮಾರನ ಕೊಂದ ಮಲತ್ರಯದೂರನೆ, ಅನಾಗತಸಂಸಿದ್ಧ ಭೋಗಮಯನೆ, ನಯನ ಚರಣಾರವಿಂದ ವಿರಾಜಿತನೆ, ಸರ್ವವ್ಯಾಪಕ ನಾಶನೆ, ಸರ್ವಾಂತರ್ಗತ ವಿಮಲಾಂತರಂಗನೆ, ಕರುಣಾಬ್ಧಿಚಂದ್ರ ವಿಲಾಸಿತನೆ, ಭಕ್ತ ಚಿತ್ತದ ಸಾಕಾರದ ಪುಂಜನೆ, ಭಕ್ತವತ್ಸಲನೆ, ಭಕ್ತದೇಹಿಕದೇವನೆ, ಎನಗೆ ನಿಮ್ಮ ಭಕ್ತಿವಿಲಾಸವ ಕರುಣಿಸಯ್ಯಾ. ಶಂಭು ಮಾರೇಶ್ವರಾ.
--------------
ಅಪ್ಪಿದೇವಯ್ಯ
ಚಂದ್ರನಿಲ್ಲದ ರಾತ್ರಿ, ಸೂರ್ಯನಿಲ್ಲದ ದಿವಸವೇತಕ್ಕೆ ಬಾತೆ? ಅಂತರಂಗ ಸನ್ನಿಹಿತವಾದ ಪರಶಿವನೆಂಬ ಗುರುವಿಲ್ಲದವನ, ಅರಿವು ಆಚಾರ ಕ್ರಿಯೆ ಭಕ್ತಿ ವಿರಕ್ತಿ ಏತಕ್ಕೆ ಬಾತೆ? ಇದು ಕಾರಣ, ಸ್ವಾನುಭಾವಿ ಗುರುವಿನ ಅನುವಿನಲ್ಲಿದ್ದು ಆಚರಿಸುವ, ಭಕ್ತನ ಆಚಾರ ಶುದ್ಧ, ಆತನ ಭಕ್ತಿ ಜ್ಞಾನ ವೈರಾಗ್ಯ ಶುದ್ಧ. ಆತನೇ ಮುಕ್ತನಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಮಾತಿಲ್ಲ ನುಡಿಯಿಲ್ಲ, ಏತಕ್ಕೆ ಮುನಿದಿರಿ ಮಾತಾಡಿದಡೆ ಕೆಯ್ಯ ಬೆಳಸೆಂಬುದನರಿಯಿರೆ ಅಯ್ಯಾ ಮಾತು ಕೆಟ್ಟಲ್ಲದೆ ತಾನಾಗಬಾರದು. ಕೂಡಲಸಂಗಮದೇವಯ್ಯಾ ಮಾತಿಂದ ಬರ್ಕು ಭವಭಾರಘೋರ.
--------------
ಬಸವಣ್ಣ
ಎಲೆ ದೇವಾ, ಏತಕ್ಕೆ ನುಡಿಯೆ ಎನ್ನೊಳು? ನಿನ್ನಯ ಚಿತ್ತವ ನೀಕರಿಸಿ ನುಡಿವರೆಂದೆ? ನಿನ್ನಯ ನೋವು ಎನ್ನೊಳು ನೀ ಮಾಡುವ ಮಾಟ ಅನೇಕ. ಕುಟಿಲ ಯೋನಿಯ ಸುತ್ತಿ ಮುತ್ತಿದ ಹರಿತದ ಪಾಶದ ಮಲ ನಿನ್ನಲ್ಲಿ ಅನೇಕರ ಕೊಲುವ ಪಾಶ ಕೈಯಲ್ಲಿ, ಭವ ವೇಷ ಅಂಗದಲ್ಲಿ. ಭಕ್ತರ ಕೊಲುವ ದೋಷಕ್ಕೆ ಅಂಜಿದೆಯಾ? ನಿನಗದು ನೀತಿ, ರುದ್ರನ ವೇಷಕ್ಕೆ ಸಹಜ. ಅದ ಬಿಟ್ಟಾಡು, ನೀಕರಿಸು. ಉಮಾಪತಿಯ ವೇಷವ ಬಿಟ್ಟು ಸ್ವಯಂಭುವಾಗು. ಅದ ಬಿಟ್ಟು ಇಚ್ಛೆಯಲ್ಲಿ ನಿಂದು, ನಿರ್ಮಾಯ ಮಲನಾಸ್ತಿಯಾಗಿ, ಮುಕುರ ಪ್ರತಿಬಿಂಬಿಸುವಂತೆ ಎನ್ನಿರವು ನಿನ್ನಲ್ಲಿ ತೋರುತ್ತದೆ. ಅದೇಕೆ? ನಿರ್ಮಾಯನಾದ ಕಾರಣ ನಿನ್ನಿರವು ಎನ್ನಲ್ಲಿ ಕೂರ್ತು, ದರ್ಪಣದ ಆಕಾರ ಬೆಳಗಿನಲ್ಲಿ ತೋರುವ ನಿರಾಕಾರ ಎರಡಕ್ಕೂ ರೂಪು ನಿರೂಪು ಉಭಯ ಬಿನ್ನವಿಲ್ಲದಂತೆ. ಎನ್ನಂಗವಂತಿರಲಿ ಮನವ ಒಡಗೂಡಿಕೊ. ಉರದ ಮಾತಿಂಗೆ ಮಾರನ ಕೊಂದ ಮಲತ್ರಯ ದೂರ, ಅನಾಗತ ಸಂಸಿದ್ಧ ಭೋಗಮಯ ನಯನಚರಣವಿರಾಜಿತ, ಜೀಮೂತ ಮೃತ ದಗ್ಧ ಸರ್ವವ್ಯಾಪಕ ನಾಶನ, ಸರ್ವ ಅಂತರ್ಗತ ವಿಮಲತರಂಗ, ಕರುಣಾಬ್ಧಿ ಪೂರ್ಣಚಂದ್ರ ವಿಲಾಸಿತ, ಒಡಗೂಡಿದ ಭಕ್ತರ ಚಿತ್ತದ ಸಾಕಾರ ಪುಂಜವೆ, ಸರ್ವಾತುರಂಗಳ ವಿರೋಧಿ, ಆಜಾತ, ಶಂಭು ಮಾರೇಶ್ವರಾ.
--------------
ನಗೆಯ ಮಾರಿತಂದೆ
-->