ಅಥವಾ

ಒಟ್ಟು 7 ಕಡೆಗಳಲ್ಲಿ , 5 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಖಂಡಿತವಿಲ್ಲಾಗಿ ಸರ್ವಾಂಗವೂ ನಾಸಿಕವಾಯಿತ್ತು. ತಾನಲ್ಲದೆ ಅನ್ಯವಾಸನೆಯಿಲ್ಲಾಗಿ, ಅಲ್ಲಿಯೆ ಮಹತ್ತಪ್ಪ ಪೃಥ್ವಿಯಡಗಿತ್ತು. ಖಂಡತವಿಲ್ಲಾಗಿ ಸರ್ವಾಂಗವೂ ಜಿಹ್ವೆಯಾಯಿತ್ತು. ತಾನಲ್ಲದೆ ಅನ್ಯ ರುಚಿಯಿಲ್ಲಾಗಿ, ಅಲ್ಲಿಯೆ ಮಹತ್ತಪ್ಪ ಅಪ್ಪುವಡಗಿತ್ತು. ಖಂಡಿತವಿಲ್ಲಾಗಿ ಸರ್ವಾಂಗವೂ ನೇತ್ರವಾಯಿತ್ತು. ತಾನಲ್ಲದೆ ಅನ್ಯ ರೂಪಿಲ್ಲಾಗಿ, ಅಲ್ಲಿಯೆ ಮಹತ್ತಪ್ಪ ಅಗ್ನಿಯಡಗಿತ್ತು. ಖಂಡಿತವಿಲ್ಲಾಗಿ ಸರ್ವಾಂಗವೂ ಮಹಾತ್ವಕ್ಕಾಯಿತ್ತು. ತಾನಲ್ಲದೆ ಅನ್ಯಸ್ಪರ್ಶವಿಲ್ಲಾಗಿ, ಅಲ್ಲಿಯೆ ಮಹತ್ತಪ್ಪ ವಾಯುವಡಗಿತ್ತು ಖಂಡಿತವಿಲ್ಲಾಗಿ ಸರ್ವಾಂಗವೂ ಶ್ರೋತ್ರವಾಯಿತ್ತು ತಾನಲ್ಲದೆ ಅನ್ಯ ಶಬ್ದವಿಲ್ಲಾಗಿ ಅಲ್ಲಿಯ ಮಹತ್ತಪ್ಪ ಆಕಾಶವಡಗಿತ್ತು. ಇಂತು ಬ್ರಹ್ಮಾಂಡವೆ ಪಂಚಭೂತಮಯವಾದಡೆ, ಶರಣನ ಸರ್ವಾಂಗದಲ್ಲಿ ಪಂಚಬ್ರಹ್ಮಮಯವಡಗಿತ್ತು. ಅದೆ ಪಂಚವರ್ಣಾತೀತವಾದ ಮಹಾಬಯಲೊಳಗೆ ನಿಂದ ಭೇದವು. ಅದರಲ್ಲಿ ಜಗತ್ತು ಅಡಗಿದ ಭೇದವ, ಮಹತ್ತು ಮಹತ್ತನೊಳಕೊಂಡ ಭೇದವ ಏನೆಂದುಪಮಿಸುವೆನಯ್ಯಾ, ಕೂಡಲಚೆನ್ನಸಂಗಯ್ಯಾ !
--------------
ಚನ್ನಬಸವಣ್ಣ
ಅಯ್ಯಾ, ನಿಮ್ಮ ಶರಣರ ಸಂಗಸುಖವ ಏನೆಂದುಪಮಿಸುವೆನಯ್ಯಾ, ನಿಮ್ಮ ಶರಣರ ಕೂಡೆ ಸಮಗೋಷಿ*ಯ ಮಾಡುವುದನುಪಮಿಸಲಮ್ಮೆನಯ್ಯಾ. ಕೂಡಲಸಂಗಾ, ನಿಮ್ಮ ಪ್ರಮಥರೆಲ್ಲರೂ ನೆರೆದ ಗಣತಿಂಥಿಣಿಯೊಳಗೆನ್ನನೇನೆಂದರಿಯದೆ ಅಗಲದಂತಿರಿಸಯ್ಯಾ, ನಾ ನಿಮ್ಮ ಧರ್ಮದ ಕವಿಲೆ.
--------------
ಬಸವಣ್ಣ
ಏನೆಂದುಪಮಿಸುವೆನಯ್ಯಾ ತನ್ನಿಂದ ತಾ ತೋರದೆ, ಗುರುಮುಖದಿಂದ ತೋರಿದ ತನ್ನ ನಿಲವ, ನಿರುಪಮನು. ಶಬ್ದಮುಗ್ಧವಾಗಿ, ಇದ್ದೆಡೆಯನಿದಿರಿಂಗೆ ತೋರದೆ ಇರವೆ ಪರವಾಗಿರ್ದ ಅಜಡನು. ಇನನುದಯಕಾಲಕ್ಕೆ ಕುಕ್ಕುಟ ಧ್ವನಿದೋರುವಂತೆ ಘನಮಹಿಮರ ದರ್ಶನದಿಂದ ಸತ್ಪ್ರಣವವ ತಾನಾಗಿ ನುಡಿದ ಮೂಲಿಗನು, ಕೂಡಲಸಂಗಮದೇವರಲ್ಲಿ ಬೆರೆಸಿ ಬೇರಿಲ್ಲದಿಪ್ಪ ಮರುಳುಶಂಕರದೇವರ ನಿಲವ ಪ್ರಭುದೇವರು ಸಿದ್ಧರಾಮಯ್ಯದೇವರು ಹಡಪದಪ್ಪಣ್ಣನಿಂದ ಕಂಡು ಎನ್ನ ಜನ್ಮ ಸಫಲವಾಯಿತ್ತಯ್ಯಾ.
--------------
ಬಸವಣ್ಣ
ನಿಮ್ಮ ನೋಡುವ ಸುಖ ಉಳ್ಳನ್ನಕ್ಕರ, ಬೆರಸಲೆಲ್ಲಿಯದಯ್ಯಾ ? ನಿಮ್ಮ ಬೆರಸುವ ತವಕ ಉಳ್ಳನ್ನಕ್ಕ ನೋಟ ಹಿಂಗದು ! ನೋಡಿ ಕೂಡಿ ಸೈವೆರಗಾದ ಸುಖವನು ಏನೆಂದುಪಮಿಸುವೆನಯ್ಯಾ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಖಂಡಿತವಿಲ್ಲಾಗಿ ಸರ್ವಾಂಗವೆಲ್ಲವೂ ನಾಸಿಕವಾಯಿತ್ತು. ತಾನಲ್ಲದೆ ಅನ್ಯ ವಾಸನೆ ಇಲ್ಲವಾಗಿ, ಅಲ್ಲಿಯೆ ಮಹತ್ತಪ್ಪ ಪೃಥ್ವಿಯಡಗಿತು. ಖಂಡಿತವಿಲ್ಲಾಗಿ ಸರ್ವಾಂಗವೆಲ್ಲವೂ ಜಿಹ್ವೆಯಾಯಿತ್ತು. ತಾನಲ್ಲದೆ ಅನ್ಯ ರುಚಿ ಇಲ್ಲವಾಗಿ, ಅಲ್ಲಿಯೆ ಮಹತ್ತಪ್ಪ ಅಪ್ಪು ಅಡಗಿತ್ತು. ಖಂಡಿತವಿಲ್ಲಾಗಿ ಸರ್ವಾಂಗವೆಲ್ಲವೂ ನೇತ್ರವಾಯಿತ್ತು. ತಾನಲ್ಲದೆ ಅನ್ಯ ರೂಪಿಲ್ಲವಾಗಿ, ಅಲ್ಲಿಯೆ ಮಹತ್ತಪ್ಪ ಅಗ್ನಿ ಅಡಗಿತ್ತು. ಖಂಡಿತವಿಲ್ಲಾಗಿ ಸರ್ವಾಂಗವೆಲ್ಲವೂ ತ್ವಕ್ಕಾಯಿತ್ತು. ತಾನಲ್ಲದೆ ಅನ್ಯ ಸೋಂಕಿಲ್ಲವಾಗಿ, ಅಲ್ಲಿಯೆ ಮಹತ್ತಪ್ಪ ವಾಯು ಅಡಗಿತ್ತು. ಖಂಡಿತವಿಲ್ಲಾಗಿ ಸರ್ವಾಂಗವೆಲ್ಲವೂ ಶ್ರೋತ್ರವಾಯಿತ್ತು. ತಾನಲ್ಲದೆ ಅನ್ಯ ಶಬ್ದವಿಲ್ಲಾಗಿ, ಅಲ್ಲಿಯೆ ಮಹತ್ತಪ್ಪ ಆಕಾಶವಡಗಿತ್ತು. ಇಂತು ಪಂಚಭೂತಂಗಳಡಗಿದಡೆ, ಪಂಚಬ್ರಹ್ಮಮಯವಾಯಿತ್ತು. ಅದರೊಳಗೆ ಜಗತ್ತಡಗಿದ ಭೇದವದೆ. ಪಂಚವರ್ಣಾತೀತವಾಗಿ ಮಹತ್ತನೊಳಕೊಂಡ ಶರಣನ ಭೇದವನು ಏನೆಂದುಪಮಿಸುವೆನಯ್ಯಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಗುರುಲಿಂಗದ ಕೃಪೆಯಿಂದ ಸಜ್ಜನ ಶರಣರ ಸಂಗಸುಖವ ಕಂಡೆ. ಏನೆಂದುಪಮಿಸುವೆನಯ್ಯಾ, ಗುರುಲಿಂಗದ ಮಹಿಮೆಯನು? ಮಹಾಘನ ಸೋಮೇಶ್ವರನೆಂಬ ಗುರುಲಿಂಗವ ತೋರಿದನಾಗಿ.
--------------
ಅಜಗಣ್ಣ ತಂದೆ
ಹಿಕ್ಕೆಯ ನುಂಗಿದ ಹಕ್ಕೆಯ ನಿಲುವು ನಕ್ಷತ್ರದುದಯದಂತಿಪ್ಪುದಯ್ಯ. ಹಿಕ್ಕೆಯಳಿದು ಹಕ್ಕೆವುಳಿಯದ ಮುನ್ನ ಜಲಂಧರ ರಾಕ್ಷಸನ ಸೊಕ್ಕು ಮುರಿದು ಮುಕ್ಕಣ್ಣ ತಾನು ತಾನಾದ ಲಿಂಗೈಕ್ಯನ ಏನೆಂದುಪಮಿಸುವೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
-->