ಅಥವಾ

ಒಟ್ಟು 6 ಕಡೆಗಳಲ್ಲಿ , 6 ವಚನಕಾರರು , 6 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏರುವ ಇಳಿಯುವ ಆದಿಯ ಅನಾದಿಯನರಿದು, ಭೇದವ ತಿಳಿದು ಸಾಧಿಸಿ ನೋಡಿ, ಅಂತರಂಗದಲ್ಲಿ ವೇಧಿಸಿ ನೋಡುತಿರಲು, ಭೋಗ್ಯವಲ್ಲದ ಮಣಿ ಪ್ರಜ್ವಲವಾಯಿತ್ತು. ಆ ಬೆಳಗಿನೊಳಗೆ ಪಶ್ಚಿಮದ ಕದವ ತೆಗೆದು ಪರಮನೊಡಗೂಡಿ, ಬಚ್ಚಬರಿಯ ಬಯಲಬೆಳಗಿನೊಳಗಾಡುವ ಶರಣ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಅವಲೋಹವ ಪರುಷ ಮುಟ್ಟಲು ಸುವರ್ಣವಾಗುತ್ತಿದೆ. ಕಬ್ಬಿಣಕ್ಕೆ ಇದ್ದಲಿಯ ಹಾಕಿ ಅಗ್ನಿಯನಿಕ್ಕಿ, ಕಾವುಗೊಳಲಾಗಿ, ಕರಗಿ ನೀರಾಗುತ್ತಿದೆ. ಹಾಲಿಗೆ ನೀರ ಹೊಯ್ದರೆ ಅದು ಏರುವ ಭೇದವನಾರೂ ಅರಿಯರು. ಶರಣರು ತನುವಿಡಿದಿದ್ದರೂ ಇದ್ದವರಲ್ಲ. ಅದು ಹೇಗೆಂದರೆ, ಹಿಂದಣ ದೃಷ್ಟದ ಪರಿಯಲ್ಲಿ ಲಿಂಗವ ಹಿಡಿದಂಗಕ್ಕೆ ಬೇರೊಂದು ಸಂಗಸುಖ ಉಂಟೆ ? ಅದು ಕಾರಣ, ಸರ್ವಾಂಗಲಿಂಗಿಯಾ ಶರಣನು ಮುಟ್ಟಿದ, ತಟ್ಟಿದ, ಕೇಳಿದ, ನೋಡಿದ, ನುಡಿದ, ಸೋಂಕಿದನೆನ್ನಬೇಡ. ಅದು ಕಾರಣ, ಕಬ್ಬಿಣ ನೀರುಂಡಂತೆ ಅರ್ಪಿತವ ಬಲ್ಲ ಐಕ್ಯಂಗೆ ಮೈಯೆಲ್ಲ ಬಾಯಿ. ಇದರ ಬೇದವ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣನೆ ಬಲ್ಲ.
--------------
ಹಡಪದ ಅಪ್ಪಣ್ಣ
ಬ್ರಹ್ಮದೇವರಾದರೆ ತಾನೇರುವ ಹಂಸೆಯಿಂದಲಿ ಬಿತ್ತಿ ಬೆಳೆದು ಅದರ ಕ್ಷೀರಪ್ರಸಾದದಿಂದ ತೃಪ್ತರಾಗಿ ಅದರ ಮೂತ್ರ ಹಿಕ್ಕೆಯಿಂದ ಪವಿತ್ರ ಪಾವನನಾಗನೇತಕ್ಕೆ ? ವಿಷ್ಣು ತಾ ದೈವನಾದರೆ ತಾನೇರುವ ಗರುಡನಿಂದ ಬಿತ್ತಿ ಬೆಳೆದು ಅದರ ಕ್ಷೀರ ಪ್ರಸಾದದಿಂದ ತೃಪ್ತರಾಗಿ ಅದರ ಮೂತ್ರ ಹಿಕ್ಕೆಯಿಂದ ಪವಿತ್ರ ಪಾವನನಾಗನೇತಕ್ಕೆ ? ವಿನಾಯಕ ಭೈರವ ಮೈಲಾರ ಜಿನ ಇವರು ದೇವರಾದರೆ ತಾವು ಏರುವ ಇಲಿ ಚೇಳು ಕುದುರೆ ಕತ್ತೆಗಳಲ್ಲಿ ಬಿತ್ತಿ ಬೆಳೆದು ಅವರ ಕ್ಷೀರ ಪ್ರಸಾದದಿಂದ ತೃಪ್ತರಾಗಿ ಅವರ ಮೂತ್ರದಿಂದ ಪವಿತ್ರರಾಗರೇತಕ್ಕೆ ? ಅಯ್ಯಾ ಇಂತೀ ಭೇದವನರಿಯದ ಅವಿಚಾರಿ ಹೀನರ ಮಾತದಂತಿರಲಿ, ಬ್ರಹ್ಮರು ಇಂದ್ರ ದಿಕ್ಪಾಲಕರು ಮುಂತಾಗಿ ಸಮಸ್ತದೇವರ್ಕಳೆಲ್ಲ ಕೊಂಬ ಉಂಬುದು ಗೋ ವೃಷಭನ ಅಮೃತ ಪ್ರಸಾದ, ಆ ಗೋಮಯದಿಂದ ಪಾವನ ಶುದ್ಧ ಆ ಮೂತ್ರದಿಂದ ಪವಿತ್ರ ಪಾವನ ಶುದ್ಧರಯ್ಯ. ಆ ವೃಷಭನ ವಿಭೂತಿಯಿಂದ ಸಮಸ್ತದೇವತಾದಿಗಳು ಸರ್ವಮುನಿಜನಂಗಳೆಲ್ಲ ಧರಿಸಿ ಬ್ರಹ್ಮತ್ವಂ ಪಡೆದು ಮುಕ್ತಿಫಲಪದವಾಯಿತ್ತು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಮೂರಾರು ಪರ್ವತದ ಮೇಲುಗಿರಿ ಅಗ್ರದ ಕಮಲದೊಳಗೆ, ಸೂರ್ಯವರ್ಣದ ಶೇಷವು. ಆ ಶೇಷನ ವಕ್ತ್ರದೊಳಗೆ ಚಂದ್ರವರ್ಣದ ಮಂಡೂಕ. ಆ ಮಂಡೂಕನ ವಕ್ತ್ರದ ಜೊಲ್ಲು ಭೂಮಿಗೆ ಬೀಳಲು, ತಲೆಯಿಲ್ಲದ ಶೇಷ, ಸೇವಿಸಲು ತಲೆ ಬಂದು, ಕಣ್ಣು ತೆರೆದು ನೋಡಿ, ಜೊಲ್ಲಿನ ದಾರಿಯ ಪಿಡಿದು, ಎಡಬಲದ ಬಟ್ಟೆಯ ಬಿಟ್ಟು, ನಡುವಣ ಬಟ್ಟೆಯಿಂದ ಊಧ್ರ್ವಮುಖವಾಗಿ ಏರಲು, ಆ ಏರುವ ಶೇಷನ ರಭಸದಿಂ ಕತ್ತಲಿಪುರದರಸು ಮಂತ್ರಿ ಮಾರ್ಬಲವೆಲ್ಲ ಬೆದರಿ, ಶೇಷ ಮಂಡೂಕನ ಕಚ್ಚಿ, ಮಂಡೂಕ ಶೇಷನ ನುಂಗಲು, ಶೇಷ ಸತ್ತು, ಮಂಡೂಕ ಉಳಿದಿತ್ತು. ಆ ಉಳಿದ ಉಳುಮೆಯ ತಾನೇನೆಂದು ತಿಳಿದಾತನೇ ಅಸುಲಿಂಗಸಂಬಂಧಿ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಷ್ಟವಿಧಾರ್ಚನೆ ಷೋಡಶೋಪಚಾರವು ಮನದೊಳಗೆ ಮಾಡುವ ಲಿಂಗಾಂಗಿಯ ನೋಡಿ. ಆತನ ಸಮತೆ ಸಜ್ಜನವೆ ಸಮ್ಮಾರ್ಜನೆ, ಅಂತರಂಗದ ಶುದ್ಧವೆ ರಂಗವಾಲಿ, ಮನವ ನಿಲಿಸಿದ್ದೆ ಮಜ್ಜನ, ತನುವ ಮರ್ದಿಸಿದ್ದೆ ಗಂಧ, ಅಹಂಕಾರವಳಿದುದೆ ಅಕ್ಷತೆ, ಪೂರ್ವವಳಿದುದೆ ಪುಷ್ಪ, ಪ್ರಪಂಚನಳಿದುದೆ ಪತ್ರೆ, ದುರ್ಗುಣವಳಿದುದೆ ಧೂಪ, ಸುಗುಣವುಳಿದುದೆ ದೀಪ, ಅಷ್ಟಮದವಳಿದುದೆ ಆರೋಗಣೆ, ಅರಿಷಡುವರ್ಗವನಳಿದುದೆ ಆ ಹಸ್ತಕ್ಕೆ ಅಗ್ಘಣೆ, ವಿಷಯವಿಕಾರವನಳಿದುದೆ ಕರ್ಪುರ ವೀಳ್ಯ, ಸಪ್ತವ್ಯಸನವನಳಿದುದೆ ಆ ಸಹಭೋಜನ, ದಶವಾಯುವ ದೆಸೆಗೆಡಿಸಿದುದೆ ದಾನ -ಧರ್ಮ, ಹಸಿವು ತೃಷೆ ನಿದ್ರೆ ನೀರಡಿಕೆ ಜಾಡ್ಯ ಸ್ತ್ರೀಸಂಯೋಗ ಕಳವಳವಿಲ್ಲದಿದ್ದುದೆ ಜಪತಪ. ಪಂಚೇಂದ್ರಿಯ ಪ್ರಪಂಚು ಹೊದ್ದದಿದ್ದುದೆ ಪಂಚಮಹಾವಾದ್ಯ, ಪ್ರಕೃತಿ ಪಲ್ಲಟವಾದುದೆ ಪಾತ್ರಭೋಗ, ಗೀತ ಪ್ರಬಂಧ ಕರಣವೆ ಸಿಂಹಾಸನ ಏರುವ ಸುಖ, ವ್ಯಸನ ಚಂಚಲತೆಯನಳಿದುದೆ ಛತ್ರಚಾಮರ, ಶೀರ್ಷಶಿವಾಲ್ಯದೊಳಿಪ್ಪ ಪರಮಗುರು ಪರಂಜ್ಯೋತಿ ಪರಶಿವ ಪರಕ್ಕೆ ಪರವಾದ ಶ್ರೀ ಪಟ್ಟುಕಂಥೆಯ ಚೆನ್ನಬಸವೇಶ್ವರದೇವರ ಶ್ರೀಪಾದಾಂಗುಲಿಗೆ ಈ ವಚನವ, ಪುಣ್ಯಪುಷ್ಪವಮಾಡಿ ಅರ್ಪಿಸುವ ಕುಷ್ಟಗಿಯ ನಿರ್ವಾಣ ಕರಿಬಸವರಾಜದೇವರು ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಪ್ರಾಣಕೂ ಲಿಂಗಕೂ ಅನುಸಂಧಾನವ ಮಾಡಬೇಕೆಂಬಲ್ಲಿ ಮಣಿಯ [ನಿ]ರಾಳದಲ್ಲಿ ಏರುವ ನೂಲೆ ? ರಾಗಾದಿ ವ್ಯಾಮೋಹ ತಥ್ಯಮಿಥ್ಯ ನಿಶ್ಚಯವಾದಲ್ಲಿಯೆ ವಸ್ತುವಿನಲ್ಲಿ ಅನುಸಂಧಾನವಾದ ಚಿತ್ತವ ಸನ್ನೆ ಸಂಜ್ಞೆಯ ಮಾಡಿ ಗೂಡಿಸಲಿಲ್ಲ. ಆಯದಲ್ಲಿ ಗಾಯವಾದ ಆತ್ಮನ ಸ್ವಸ್ಥದಂತೆ ಅರಿದಲ್ಲಿಯೆ ಮಾಯಾಮಲ ಕರ್ಮ ಬಿಟ್ಟುದು, ವೀರಶೂರ ರಾಮೇಶ್ವರಲಿಂಗವನರಿದುದು.
--------------
ಬಾಲಬೊಮ್ಮಣ್ಣ
-->