ಅಥವಾ

ಒಟ್ಟು 55 ಕಡೆಗಳಲ್ಲಿ , 14 ವಚನಕಾರರು , 53 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಿಟದ ಚಂದ್ರನು ಅನೇಕ ಘಟದ ಜಲದೊಳಗೆ ಜನಿಸಿ ಅನೇಕ ವ್ಯವಹಾರವಾದಂತೆ ಜೀವನೆ ಜಗ, ಜಗವೆ ಜೀವನಾದ. ಆದಿ ಅನಾದಿ ವಿಚಿತ್ರತರವಾದ ಮಾಯೆ. ಈ ಮಾಯೆಯಿಂದ ತನಗೆ ತಾನೇ ಪ್ರತಿಬಿಂಬ. ಆ ಮಾಯಾ ಪ್ರತಿಬಿಂಬವೆ ತನಗೆ ಸಂಸಾರ. ಆ ಸಂಸಾರವನು ಆ ಪರಮಾತ್ಮನು ಕೂಡಿಯೂ ಕೂಡದೆ ಆ ಘಟ ಜಲ ಚಂದ್ರಮನ ಹಾಂಗೆ ವರ್ತಿಸುತ್ತಿಹನು. ಅದೆಂತೆಂದಡೆ: ``ಏಕ ಏವ ಹಿ ಭೂತಾತ್ಮಾಭೂತೇ ಭೂತೇ ವ್ಯವಸ್ಥಿತಃ| ಏಕಧಾ ಬಹುಧಾಚೈವ ದೃಶ್ಯತೇ ಜಲಚಂದ್ರವತ್||' ಎಂದುದಾಗಿ, ಸಟೆಯ ಮಾಯೆಯ ಸಟೆಯೆಂದು ಕಳೆದುಳಿದ ದ್ಥೀರ ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಗುರುಜಂಗಮದ ಪಾದತೀರ್ಥವೆ ಪವಿತ್ರವೆಂದು ತಿಳಿದು ಲಿಂಗಾಭಿಷೇಕಂಗೆಯ್ವುದಯ್ಯಾ. ಆ ಗುರುಲಿಂಗ ಜಂಗಮದಲ್ಲಿ ಭೇದವ ಕಲ್ಪಿಸಿದಡೆ ಪಾಪವು ಸಂಘಟಿಸುವುದಯ್ಯಾ. ಮನುಷ್ಯನ ಕಾಲ್ದೊಳೆದ ನೀರು ಪರಮತೀರ್ಥವೆಂದು ಭಾವಿಸಿ ಲಿಂಗಕ್ಕೆರೆವುದು ಶಾಸ್ತ್ರಾಚಾರಕ್ಕೆ ವಿರೋಧ_ ಎಂಬ ಕುಹಕಿಗಳ ಕೀಳ್ನುಡಿಯ ಕೇಳಲಾಗದಯ್ಯಾ. ಗುರುರ್ಲಿಂಗಜಂಗಮಶ್ಚ ತ್ರಿತಯಂ ಚೈಕಮೇವ ಹಿ ಅತ ಏವ ಪದೋದಾಭಿಷೇಚನಂ ಶಿವಲಿಂಗಕೇ ಕುರ್ವಂತ್ಯಭೇದದೃಷ್ಟ್ಯಾ ಚ ಭೇದಕೃತ್ಪಾಪಮಶ್ನುತೇ ಎಂದುದಾಗಿ ಇಂತಿಪ್ಪುದನಾರಯ್ಯದೆ ಗಳಹುವ ಮಂದಮತಿಗಳ ಎನ್ನತ್ತ ತೋರದಿರಯ್ಯಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಮುನಿಯದಿರಿ ಮುನಿಯದಿರಿ ನಿಮಗೊಂದು ಯುಕ್ತಿಯ ಹೇಳಿಹೆನು, ಅದೆಂತೆಂದಡೆ: ನೀವೆನ್ನ ವಂಶೀಭೂತರಾದ ಕಾರಣ_ನಿಮ್ಮ ಹೆಚ್ಚು ಕುಂದು ಎನ್ನದಾಗಿ, ನಿಮ್ಮ ಅಸ್ತಿ ನಾಸ್ತಿ ಎನ್ನದಾಗಿ, ನಿಮ್ಮ ಹಾನಿವೃದ್ಧಿ ಎನ್ನದಾಗಿ. ಹಾವ ಹಡದವರು ಬೇಲಿಯ ಹೊಗುವರೆ ಹೋಹುದೆ ಅಯ್ಯಾ ? ವ್ಯಾಧನು ಸೂಸಲ ಚೆಲ್ಲಿ ಜಂತ್ರವ ಹಣ್ಣಿ, ಅಡಿಗಲ್ಲನೊಡ್ಡಿ ಹೋದಬಳಿಕ ಸೂಸಲ ಕಂಪಿಗೆ ಹೆಗ್ಗಣ ಬಂದು ಬಿದ್ದಂತೆ ಬಿದ್ದಿರಲ್ಲಾ ಮಾಯದ ಬಲೆಯಲ್ಲಿ ! ಕೋಪವೆಂಬ ಅಡಗನೊಡ್ಡಿ ತಾಪವೆಂಬ ಅರೆಗಲ್ಲನಿರಿಸಿ ಹುಸಿಯೆಂಬ ಮೀಟುಗವಣೆಯ ಜಂತ್ರಿಸಿ, ಹೊನ್ನು ಹೆಣ್ಣು ಮಣ್ಣೆಂಬ ಅಡಿಗಲ್ಲನೊಡ್ಡಿ ಕೆಡಹಿದನಲ್ಲಾ ನಿಷ್ಕರುಣಿ ಮುಕ್ಕಣ್ಣ ವ್ಯಾಧನು ! ಅದೆಂತೆಂದಡೆ, ಶಿವರಹಸ್ಯದಲ್ಲಿ: ``ನಿಸ್ಸಂಗತ್ವಂ ನಿರಾಭಾರೀ ನಿಸ್ಸೀಮಂ ನಿರುಪಾಧಿಕಂ ನಿರ್ದೇಹಂ ನಿರ್ಮಲಂ ನಿತ್ಯಂ ಸತ್ಯಂ ಜಂಗಮಲಕ್ಷಣಂ ಇಂತೆಂಬ ಶ್ರುತ್ಯರ್ಥವ ಕೇಳದೆ, ಜಂಗಮವಾಗಿ ಸುಳಿವ ಮರುಳುಗಳಿರಾ ಕೇಳಿರೆ, ಇದಕ್ಕೆ ಮತ್ತೆಯೂ ಶ್ರುತಿ: ``ಸುಖಂ ಚ ಬಿಂದುಮಾತ್ರೇಣ ದುಃಖಂ ಪರ್ವತ ಏವ ಚ ಹರಿಣೀಪಾದಮಾತ್ರೇಣ ಬಂಧನಂ ತು ಜಗತ್ರಯಂ ಇಂತೆಂಬ ಶ್ರುತಿಗೊಳಗಾಗದೆ ಹೊನ್ನು ಹೆಣ್ಣು ಮಣ್ಣಿನಾಸೆಯಂ ಬಿಟ್ಟು ಕೋಪ ತಾಪಮಂ ಬಿಟ್ಟು, ಭ್ರಾಂತು ಭ್ರಮೆಯಂ ಬಿಟ್ಟು ಜಂಗಮವಾಗಬೇಕು ಕಾಣಿರೆ ಮರುಳುಗಳಿರಾ. ಇಂತೀ ಷಡುಲೋಭದ ರುಚಿ ಹಿಂಗಿ ಜಂಗಮವಾದಲ್ಲದೆ ಭವ ಹಿಂಗದು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಜಲದಲ್ಲಿ ಹುಟ್ಟಿದ ಕೆಸರು ಕ್ಷೀರದಲ್ಲಿ ತೊಳೆದರೆ ಹೋಹುದೆ ? ಜಲದಲ್ಲಿ ತೊಳೆದಡಲ್ಲದೆ. ಜೀವನಲ್ಲಿ ಹುಟ್ಟಿದ ಪ್ರಪಂಚು ಪಾಪಂಗಳು ಬ್ರಹ್ಮದಂಡ ಪ್ರಾಯಶ್ಚಿತ್ತದಲ್ಲಿ ಹೋಹವೆ ? ಶಿವಸಂಸ್ಕಾರಿಯಾಗಿ `ಅಕ್ಷರೋ[s]ಸಿ ಎಂಬ ಮಂತ್ರದಿಂದ ಜೀವನ ಪಾಪವು ಜೀವನಲ್ಲಿಯೇ ಕಳೆವುದು ಜೀವಾತ್ಮಾ ಪರಮಾತ್ಮಾ ಚೇನ್ಮುಕ್ತಾನಾಂ ಪರಮಾ ಗತಿಃ ಅವ್ಯಯಃ ಪುರುಷಃ ಸರ್ವಕ್ಷೇತ್ರಜ್ಞೋ[s]ಕ್ಷಯ ಏವ ಚ ಎಂದುದಾಗಿ,_ ಇದು ಕಾರಣ ಕೂಡಲಚೆನ್ನಸಂಗಯ್ಯಾ. ನಿಮ್ಮ ಶರಣನ ಕಾಯವು ಸುಕ್ಷೇತ್ರವೆಂದೆನಿಸೂದು.
--------------
ಚನ್ನಬಸವಣ್ಣ
ಶುದ್ಧ ಮಿಶ್ರ ಸಂಕೀರ್ಣ ಪೂರ್ವ ಮಾರ್ಗಶೈವಂಗಳಲ್ಲಿ ಕರ್ಮಭಕ್ತಿಯಲ್ಲದೆ ನಿರ್ಮಳಸದ್ಭಕ್ತಿಯೆಲ್ಲಿಯದೊ ? ಒಮ್ಮೆ ಧರಿಸಿ ಒಮ್ಮೆ ಇರಿಸಿ, ಶುಚಿಯಾದೆನೆಂದು ಅಶುಚಿಯಾದೆನೆಂದು ಭವಿಯಾಗುತ್ತೊಮ್ಮೆ, ಭಕ್ತನಾಗುತ್ತೊಮ್ಮೆ ಒಪ್ಪಚ್ಚಿ ಹೊಲೆ, ಒಪ್ಪಚ್ಚಿ ಕುಲವೆಂದು ತೆರನರಿಯದಿಪ್ಪ ಬರಿಯ ಶುದ್ಧಶೈವವಂ ಬಿಟ್ಟು, ಬ್ರಹ್ಮ ವಿಷ್ಣು ರುದ್ರ ಮಾಹೇಶ್ವರರು ಒಂದೆಂದು ನುಡಿವ ದುಃಕರ್ಮ ಮಿಶ್ರವಂ ಬಿಟ್ಟು, ಹರನೆ ಹಿರಿಯನೆಂದು ಕಿರಿಯರೆಲ್ಲಾ ದೇವರೆಂದು ನುಡಿದು ಕಂಡ ಕಂಡವರ್ಗೆ ಹೊಡೆಗೆಡವ ವೇಶಿಯ ಸುತನಂತೆ ಸಂಕೀರ್ಣಕ್ಕೊಳಗಾದ ಸಂಕೀರ್ಣಶೈವಮಂ ನೋಡದೆ, ದೂರದಿಂ ನಮಿಸಿ ಅರ್ಪಿಸಿ ಶೇಷವರುಣಕರ್ತನಲ್ಲವೆಂದು ದೂರಸ್ತನಹ ಪೂರ್ವಶೈವಮಂ ತೊಲಗಿ, ಅಂಗದಲನವರತ ಲಿಂಗಮಂ ಧರಿಸಿರ್ದು ದೇಹೇಂದ್ರಿಯ ಮನಃ ಪ್ರಾಣ ಜ್ಞಾನ ಭಾವ ಒಮ್ಮುಖಮಂ ಮಾಡಿ, ಸದ್ಗುರುಕಾರುಣ್ಯಮಂ ಪಡೆದು, ಲಿಂಗವೇ ಪತಿ, ಗುರುವೆ ತಂದೆ, ಜಂಗಮವೇ ಲಿಂಗವೆಂದರಿದು, ದ್ರವ್ಯವೆಂಬುದು ಭೂತರೂಪು, ಪ್ರಸಾದವೆಂಬುದು ಲಿಂಗರೂಪವೆಂದು ತಿಳಿದು, ಲಿಂಗದ ಪಾದೋದಕವೇ ಲಿಂಗಕ್ಕೆ ಮಜ್ಜನವಾಗಿ ಲಿಂಗದ ಪ್ರಸಾದವೇ ಲಿಂಗಕ್ಕೆ ಆರೋಗಣೆಯಾಗಿ ಲಿಂಗದಿಂದ ನೋಡುತ್ತ ಕೇಳುತ್ತ ರುಚಿಸುತ್ತ ಮುಟ್ಟುತ್ತ ವಾಸಿಸುತ್ತ ಕೊಡುತ್ತ ಆನಂದಿಸುತ್ತ ಅಹಂ ಮಮತೆಗೆಟ್ಟು ಸಂದು ಸಂಶಯವರಿತು ಹಿಂದು ಮುಂದ ಹಾರದಿಪ್ಪುದೆ ವೀರಶೈವ. ಅದೆಂತೆಂದಡೆ: ಪಿತಾ ಗುರುಃ ಪತಿರ್ಲಿಂಗಂ, ಸ್ವಲಿಂಗಂ ಜಂಗಮಪ್ರಭುಃ ತಸ್ಮಾತ್ಸರ್ವಪ್ರಯತ್ನೇನ ತಸ್ಯೈವಾರಾಧನಂ ಕ ರು ಸ ಏವ ಸ್ಯಾತ್ಪ್ರಸಾದಸ್ತೇ ಭಕ್ತಿವಿತ್ತಸಮರ್ಪಿತಃ ತತ್ಪ್ರಸಾದಸ್ತು ಭೋಕ್ತವ್ಯಃ ಭಕ್ತೋವಿಗತಕಲ್ಮಷಃ ಎಂದುದಾಗಿ, ಇಂತಲ್ಲದಿರ್ದುದೆ ಇತರ ಶೈವ ಕಾಣಾ, ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
`ಏಕ ಏವ ರುದ್ರೋ ನ ದ್ವಿತೀಯಃ' ನೆಂದು ಶ್ರುತಿ ಸಾರುತ್ತಿರೆ, ಮರಳಿ ವಿಷ್ಣುವಲ್ಲದೆ ದೈವವಿಲ್ಲವೆಂಬಿರಿ. ಅಚ್ಯುತಂಗೆ ಭವವುಂಟೆಂಬುದಕ್ಕೆ ಮತ್ಸ್ಯಕೂರ್ಮವರಾಹನಾರಸಿಂಹಾವತಾರವೆ ಸಾಕ್ಷಿ. ಹರಿ ಹರನ ಭೃತ್ಯನೆಂಬುದಕ್ಕೆ ರಾಮೇಶ್ವರಾದಿಯಾದ ಪ್ರತಿಷ್ಠೆಯೇ ಸಾಕ್ಷಿ. ಇಂತಪ್ಪ ಹರಿಯನು ಹರಂಗೆ ಸರಿಯೆಂದು ನುಡಿವುತ್ತಿಹ ವಿಪ್ರರ ಬಾಯಲ್ಲಿ ಸುರಿಯವೆ ಬಾಲಹುಳುಗಳು. ಹರಿಗೆ ಹತ್ತು ಪ್ರಳಯ, ಬ್ರಹ್ಮಂಗೆ ಅನಂತಪ್ರಳಯ. ನಮ್ಮ ಹರಂಗೆ ಪ್ರಳಯ ಉಂಟಾದರೆ, ಬಲ್ಲರೆ ನೀವು ಹೇಳಿರೆ ! ನಿಮ್ಮ ವೇದದಲ್ಲಿ ಹೇಳಿಸಿರೆ ! ಅರಿಯದಿರ್ದಡೆ ಸತ್ತ ಹಾಂಗೆ ಸುಮ್ಮನಿರಿರೆ. ಇದು ಕಾರಣ ನಮ್ಮ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರದೇವನೊಬ್ಬನೆ, ಎರಡಿಲ್ಲ.
--------------
ಉರಿಲಿಂಗಪೆದ್ದಿ
ಕ್ರಮವರಿದು ಭ್ರಮೆ ತಿಳಿದು ಅಮಳಸಂಯೋಗದಲ್ಲಿ ಸಮನಿಸೂದು, `ಏಕ ಏವ ನ ದ್ವಿತೀಯಃ' ಎಂಬುದನರಿದು ಸಮನಿಸೂದು, ಶಿವಾತ್ಮಕೋ ಲಿಂಗದೇಹೀ ಅಂಗಾಚಾರೇಣ ಲೌಕಿಕಃ ಸರ್ವಂ ಲಿಂಗಮಯಂ ಪ್ರೋಕ್ತಂ ಲಿಂಗೇನ ಸಹ ವರ್ತತೇ ಇದು ಕಾರಣ, ಕೂಡಲಚೆನ್ನಸಂಗನಲ್ಲಿ ಸಹಭೋಜನ ಸಮನಿಸೂದು.
--------------
ಚನ್ನಬಸವಣ್ಣ
`ಅಣೋರಣೀಯಾನ್ ಮಹತೋ ಮಹೀಯಾನ್` ಎಂದು ಶ್ರುತಿವಿಡಿದು ಅಣು ರೇಣು ತೃಣಕಾಷ್ಠದೊಳಗೆ ಶಿವನು ಕೂಡೆ ಜಗಭರಿತನೆಂಬ ಪಾತಕರ ನುಡಿಯ ಕೇಳಲಾಗದು, ಅದೇನು ಕಾರಣವೆಂದಡೆ: ಜನ್ನಕ್ಕೆ ತಂದ ಕನ್ನೆಯಾಡು ಶ್ರುತಿಯಿಂದ ಹೊರಗು. ಸರ್ವವೂ ಶಿವಮಯವೆಂಬ ಪಾತಕರ ನುಡಿಗಿನ್ನೆಂತೊ ? ಅಂತ್ಯಜ-ಅಗ್ರಜ, ಮೂರ್ಖ-ಪಂಡಿತರೆಂಬ ಭೇದಕ್ಕಿನ್ನೆಂತೊ ? ಜಗದೊಳಗೆ ಶಿವ ಶಿವನೊಳಗೆ ಜಗವೆಂಬ ಭ್ರಮಿತರ ನುಡಿಗಿನ್ನೆಂತೋ `ಜಲಮಿತಿ ಭಸ್ಮ ಸ್ಥಲಮಿತಿ ಭಸ್ಮ ಅಗ್ನಿರಿತಿ ಭಸ್ಮ ವಾಯುರಿತಿ ಭಸ್ಮ ವ್ಯೋಮೇತಿ ಭಸ್ಮ, ಭಸ್ಮೇತಿ ಭಸ್ಮ ಸರ್ವಗ್‍ಂ ಹವಾ ಇದಂ ಭಸ್ಮ ಎಂದುದಾಗಿ ಜಗದೊ?ಗೆ ಶಿವನಿಲ್ಲ, ಶಿವನೊಳಗೆ ಜಗವಿಲ್ಲ, ಶಿವ ಜಗವಾದ ಪರಿ ಇನ್ನೆಂತೊ ? ಅದೆಂತೆಂದಡೆ : ಯಂತ್ರಧಾರೀ ಮಹಾದೇವೋ ಯಂತ್ರಪಾಣಸ್ಸ ಏವ ಹೀ ಯಂತ್ರಕರ್ಮ ಚ ಕರ್ತಾ ಯಂತ್ರವಾಹಾಯ ವೈ ನಮಃ ಎಂದುದಾಗಿ; ಸಕಲಬ್ರಹ್ಮಾಂಡಗಳೆಂಬ ಯಂತ್ರಗಳ ವಾಹಕ ನಮ್ಮ ಕೂಡಲಚೆನ್ನಸಂಗಯ್ಯ.
--------------
ಚನ್ನಬಸವಣ್ಣ
`ನಿರಾಭಾರೀತಿ ವಿಜ್ಞೇಯಃ ಸ ಏವ ಪರಮಶ್ಶಿವಃ | ವೀರಶೈವಕ್ರಮಃ ಪ್ರೋಕ್ತಃ ಪ್ರಾಯಶ್ಚಿತ್ತವಿವರ್ಜಿತಃ || ಎಂದು, ಇವು ಮೊದಲಾದ ಜಂಗಮಸ್ಥಲ ಪ್ರವರ್ತನೆ ಯುಳ್ಳಾತನು ನಿರಾಭಾರಿ ವೀರಶೈವನೆಂದರಿಯಲ್ತಕ್ಕತನು, ಆ ನಿರಾಭಾರಿ ವೀರಶೈವನೆ ಉತ್ಕøಷ್ಟವಾದ ಶಿವನು ತಾನೆ. ಈ ಪ್ರಕಾರದಿಂದ ನಿರೂಪಿಸಲ್ಪಟ್ಟ ವೀರಶೈವ ಕ್ರಮವು ಪ್ರಾಯಶ್ಚಿತ್ತವಿಲ್ಲದೆ ಇದಂಥದು ಎಂದು ಅರಿಯಲ್ತಕ್ಕುದಯ್ಯ ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ ವಾಙõïಮಾನಸಾಗೋಚರವೆಂದು ಹೇಳುತ್ತೈದಾವೆ ವಾಕ್ಯಂಗಳು. ಅದಂತಿರಲಿ, ಐತಿಹಾಸಿಕರು ಪೌರಾಣಿಕರು ಆಗಮಿಕರು ಅರಿದರಾದಡೆ ದೃಶ್ಯನೆಂಬರೆ ಶಿವನನು? ಅದೃಶ್ಯನೆಂಬರೆ ಶಿವನನು? ವಾಙõïಮಾನಸಾಗೋಚರನೆಂಬರೆ ಶಿವನನು? `ಅತ್ಯತಿಷ್ಠದ್ದಶಾಂಗುಲಂ `ಏಕ ಏವ ಪುರುಷಃ ಎಂಬ ಶ್ರುತಿಯಿರಲು ಮತ್ತಚಿತ್ತನೆ ಶರಣನು? ಅಣುವಿನೊಳಗಣುವಾಗಿ, ಮಹತ್ತಿನೊಳಗೆ ಮಹತ್ತಾಗಿ, ಇಹಪರವೆಂಬ ಸಂದ ಹರಿದು, ಅಧ್ಯಕ್ಷತನಕ್ಕೆ ಕಾರಣಿಕನಾಗಿ ಇಹಲೋಕವೆ ಪರ, ಪರವೆ ಇಹಲೋಕ. ಅದು ಹೇಗೆಂದಡೆ: ನಿತ್ಯಂ ಲಿಂಗಾರ್ಚನಂ ಯಸ್ಯ ನಿತ್ಯಂ ಜಂಗಮಪೂಜನಂ ನಿತ್ಯಂ ಗುರುಪದಧ್ಯಾನಂ ನಿತ್ಯಂ [ನಿತ್ಯಂ]ನ ಸಂಶಯಃ ಎಂಬ ಆಗಮವಾಕ್ಯವನರಿದು, ಗುರುವಿಂಗೆ ತನುಮುಟ್ಟಿ, ತ್ರಿವಿಧಲಿಂಗಕ್ಕೆ ಮನಮುಟ್ಟಿ, ತ್ರಿವಿಧಜಂಗಮಕ್ಕೆ ಧನಮುಟ್ಟಿ, ತ್ರಿವಿಧ ನಿವೇದಿಸಿ, ಆ ಗುರುವಿಂ ಶುದ್ಧ[ಪ್ರಸಾದವ] ಆ ಲಿಂಗದಿಂ ಸಿದ್ಧನಪ್ರಸಾದವಫ ಅ ಜಂಗಮದಿಂ ಪ್ರಸಿದ್ಧ[ಪ್ರಸಾದವ]ನವಗ್ರಹಿಸಿ ಈ ಲಿಂಗಾರ್ಚನೆಯ ಸ್ವಾನುಭಾವದಿಂದೇಕವ ಮಾಡಿ ಅರ್ಚಿಸಲಲ್ಲಿ ಶರಣರು ಸ್ವತಂತ್ರರು. ಅಂಗದಾಸೆಯಲ್ಲಿ ಹರಿವುದ ಬಿಟ್ಟ ನಿಸ್ಸಂಗಿಗಳು. ಶ್ರೋತ್ರ ನೇತ್ರ ತ್ವಕ್ಕು ಜಿಹ್ವೆ ಘ್ರಾಣ ಪಂಚೇಂದ್ರಿಯಂಗಳ ಶಿವನ ಮುಖವೆಂದರಿದು ಅನ್ಯಸಂಗಂಗಳಿಗೆ ಎಳಸಿ ಬಳಸಿ ಬಣ್ಣಕರಪ್ಪರೆ ಶರಣರು? ಲಿಂಗಾರ್ಚನವಿಹೀನಸ್ತು ದ್ವಿಜೋ[s]ಪಿ ಶ್ವಪಚಾಧಮಃ ಲಿಂಗಾರ್ಚನಪರೋ ನಿತ್ಯಂ ಶ್ವಪಚೋ[s]ಪಿ ದ್ವಿಜೋತ್ತಮಃ ಎಂದುದಾಗಿ, ಅಮ್ಮ ಶರಣರಿಗೆ ಸರಿ ಉಂಟೆ ಲೋಕದೊಳಗೆ? ಶೂನ್ಯವೆನಿಸುವ ವಸ್ತುವ ರೂಹಿಂಗೆ ತಂದು ನೆರೆದು ತಾನೆ ರೂಪಾಗಬಲ್ಲ ಶರಣನು. ಆತನ ಮಹಾಮಹಿಮೆಗೆ ನಮೋ ನಮೋ ಎಂಬೆನು ಕಾಣಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಜಗಭರಿತಲಿಂಗ ಶರಣಭರಿತಲಿಂಗ ನಾಮರಹಿತಲಿಂಗ: ಜಗಭರಿತಲಿಂಗವೆಂದು, `ಸರ್ವಂ ಖಲ್ವಿದಂ ಬ್ರಹ್ಮ' ವೆಂಬ ವಿಶ್ವಬ್ರಹ್ಮ. ಶರಣಭರಿತಲಿಂಗವೆಂದು, `ಏಕ ಏವ ದೇವೋ ನ ದ್ವಿತೀಯಃ' ವೆಂಬ ತಾರಕಬ್ರಹ್ಮ. ನಾಮರಹಿತಲಿಂಗವೆಂದು, `ಚಕಿತಮಬ್ಥಿಧತ್ತೇ ಶ್ರುತಿರಪಿ' ಯೆಂಬ ಪರಬ್ರಹ್ಮ. ಇಂತೀ ತ್ರಿವಿಧಬ್ರಹ್ಮ ಏಕಬ್ರಹ್ಮ ನೀನೇ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಒಂದು ಎರಡಹುದೆ ? ಎರಡು ಒಂದಹುದೆ ? ಒಂದು ಒಂದೇ, ಎರಡು ಎರಡೇ. ಅದು ಕಾರಣ, ಶಿವನು ತನ್ನ ಲೀಲಾಕಾರಣವಾಗಿ ಮಾಯಾ ನಿರ್ಮಿತವಂ ಮಾಡಿ, ಆ ಮಾಯಾರಚನೆಯಿಂದಾದ ಬ್ರಹ್ಮಾಂಡ ಸಂದೋಹ, ಹರಿ ವಿರಿಂಚಿ ಸುರಪತಿ ಸುರಾಸುರರು ನರನಿಕರ, ಖಗಮೃಗ ಜೀವರಾಶಿಗಳೆಲ್ಲವೂ ಶಿವನಿಂದಲಾಗಿ, ಶಿವನಿಂದ ಹೊರೆಯಿಸಿಕೊಂಡು, ಶಿವನಿಂದವೆ ಹೋದವೆಂದಡೆ, ಅವರ ಆಗು ಹೋಗು ಇರವು ಹೋಗಿನೊಳಗೆ ಲಯ ಗಮನ ಸ್ಥಿತಿ ಶಿವಂಗುಂಟೆ, ಎಲೆ ಮರುಳಗಳಿರಾ ? ಗಗನದಲ್ಲಿ ತೋರಿದ ಮೇಘವು ಗಗನದಲ್ಲಿ ಅಡಗಿದವೆಂದಡೆ, ಆ ಗಗನ ತಾ ಮೇಘವೆ ? ತನ್ನಾದ್ಥೀನಶಕ್ತಿದಂಡದಿಂ ಕುಂಬಾರ ಚಕ್ರವ ತಿರುಗಿಸಲು, ಆ ಚಕ್ರಭ್ರಮಣ ಚೈತನ್ಯವು ಆ ಕುಂಬಾರನೆ, ಮರುಳುಗಳಿರಾ ? ಆ ಚೈತನ್ಯ ಅಡಗುವುದೆ ? ನಿಲ್ಲು ಮಾಣು. ಬಿಲ್ಲ ನಾರಿಗೆ ಅಂಬಂ ಸಂಧಾನಿಸಿ ಎಸೆಯಲಾ, ಅಂಬು ಹರಿದ ಚೈತನ್ಯ ಬಿಲ್ಲು ಕಾರಣವೆ ? ಅಲ್ಲ , ನಿಲ್ಲು , ಮಾಣು. ಇವೆಲ್ಲವು ಚೈತನ್ಯಂಗಳು. ಅಂತು ಸರ್ವವೆಲ್ಲವು ತೋರಿಯಡಗುವುದು. ಸರ್ವೇಶ್ವರನು, ಸರ್ವಕರ್ತೃ, ಸರ್ವಚೈತನ್ಯ, ಸೂತ್ರಯಂತ್ರವಾಹಕ ಶಿವನು. ಸರ್ವಲಯ ಗಮನ ಸ್ಥಿತಿ ತನಗುಂಟೆ ? ನಿಲ್ಲು , ಮಾಣಿರೆ, ಎಲೆ ಜಡಜೀವಿಗಳಿರಾ. ಗಗನದ ರವಿ ಕಿರಣದಿಂದ ಸಕಲರೂಪಿತ ದ್ರವ್ಯಪದಾರ್ಥಂಗಳಲ್ಲಿ ಪ್ರತಿಪ್ರಭೆ ತೋರಲು, ಆ ಪ್ರತಿಪ್ರಭೆಯ ಆಗುಹೋಗಿನ ಸ್ಥಿತಿಗತಿ ಆ ಗಗನದ ಸೂರ್ಯಂಗುಂಟೆ, ಎಲೆ ಜಡಜೀವಿಗಳಿರಾ ? ಈ ಪರಿಯಲೆ ವಿಶ್ವವೆಲ್ಲವಕ್ಕೂ ತಾನಲ್ಲದ ತಾನಿಲ್ಲದ ಪ್ರೇರಣ ಚೈತನ್ಯವೇ ವಿಶ್ವದ ನಯನ, ವಿಶ್ವದ ಮುಖ, ವಿಶ್ವದ ಬಾಹು, ವಿಶ್ವದ[ಚ]ರಣ, ಸ್ವರ್ಗಮತ್ರ್ಯ ಭುವನಾದ್ಯಂಗಳ ಮೂಲಚೈತನ್ಯಸೂತ್ರ ತಾನಲ್ಲದೆ, ತಾನಿಲ್ಲದೆ ಆಡಿಸುವ ಸೂತ್ರಾತ್ಮಕನಲ್ಲದೆ ಅವರಾಗು ತನಗುಂಟೆ, ಎಲೆ ಭ್ರಮಿತರಿರಾ ? `ವಿಶ್ವತಶ್ಚಕ್ಷುರುತ ವಿಶ್ವತೋಮುಖೋ ವಿಶ್ವತೋ ಬಾಹುರುತ ವಿಶ್ವತಸ್ಪಾ ಪಾತ್ | ಸಂ ಬಾಹುಭ್ಯಾಂಧಮತಿ ಸಂಪತತ್ರೈದ್ರ್ಯಾವಾ ಭೂಮೀ ಜನಯನ್ ದೇವ ಏಕಃ ಎನಲು, `ಈಶಾನಃ ಶಿವ ಏಕೋದೇವಃ ಶಿವಂ ಕರಃ ತತ್ಸರ್ವಮನ್ಯತ್ ಪರಿತ್ಯಜೇತ್' ಎನಲು, `ಏಕ ಏವ ರುದ್ರೋ ನ ದ್ವಿತೀಯಾಯ ತಸ್ಥು' ಎನಲು, ಶಿವನೊಬ್ಬನೇ, ಇಬ್ಬರಿಲ್ಲ . `ನ ಯಥಾಸ್ತಿ ಕೂರ್ಮರೋಮಾಣಿ, ಶೃಂಗಂ ನ ನರಮಸ್ತಕೇ ನ ಯಥಾಸ್ತಿ ವಿಯತ್ಪುಷ್ಪಂ ನ ತಥಾಸ್ತಿ ಪರಾತ್ಪರಃ |' ನಾಲ್ಕು ವೇದಂಗಳು ಬಿನ್ನವಿಸಿದವು ಕೇಳಿರೇ ಎಲೆ ವಿಪ್ರರಿರಾ. ಇದನರಿದು, ಬಸವಪ್ರಿಯ ಕೂಡಲಚೆನ್ನಸಂಗಯ್ಯನನೆ ಧ್ಯಾನಿಸಿ, ನಿರೀಕ್ಷಿಸಿ, ಸ್ತುತಿಸಿ, ಯಜಿಸಿ ಕೃತಾರ್ಥರಾಗಿರೆ ಎಲೆ ಮರುಳು ವಿಪ್ರರಿರಾ.
--------------
ಸಂಗಮೇಶ್ವರದ ಅಪ್ಪಣ್ಣ
``ಏಕ ಏವ ರುದ್ರೋ ನ ದ್ವಿತೀಯಾಯ ತಸ್ಥೇ ಎಂಬ ಶ್ರುತಿಯನರಿದು ಮತ್ತೆ ದೈವವುಂಟೆಂಬ ವಿಪ್ರರು ನೀವು ಕೇಳಿ[ರೊ] ``ಓಂ ನಿಧನಪತಯೇ ನಮಃ ಓಂ ನಿಧನಪತಾಂತಿಕಾಯ ನಮಃ, ಓಂ ಊಧ್ರ್ವಾಯ ನಮಃ ಓಂ ಊಧ್ರ್ವಲಿಂಗಾಯ ನಮಃ ಓಂ ಹಿರಣ್ಯಾಯ ನಮಃ ಓಂ ಹಿರಣ್ಯಲಿಂಗಾಯ ನಮಃ ಓಂ ಸುವರ್ಣಾಯ ನಮಃ ಓಂ ಸುವರ್ಣಾಲಿಂಗಾಯ ನಮಃ ಓಂ ದಿವ್ಯಾಯ ನಮಃ ಓಂ ದಿವ್ಯಲಿಂಗಾಯ ನಮಃ ಎಂದುದಾಗಿ ಏತತ್ ಸೋಮಸ್ಯ ಸೂರ್ಯಸ್ಯ ಸರ್ವಲಿಂಗಂ ಸ್ಥಾಪಯೇತ್ ಇತಿ ಓಂ ಪಾಣಿಮಂತ್ರ ಪವಿತ್ರಂ' ಎಂದುದಾಗಿ- ಇದನರಿದು ಮತ್ತೆ ದೈವವುಂಟೆಂಬ ದ್ವಿಜರೆಲ್ಲರೂ ಭ್ರಮಿತರು ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ತತ್ವಮೂವತ್ತಾರ ಮೀರಿ ನಾದಬಿಂದುಕಳಾತೀತನಾದ ಶಿವನು ಜಗನ್ಮಯನಾದ ಆಗಿಯೂ ಜಗದ ಸ್ಥಿತಿಗತಿ ತನಗಿಲ್ಲವದೆಂತೆಂದಡೆ: ಏಕ ಏವ ಹಿ ಭೂತಾತ್ಮಾ ಭೂತೇಷು ಸುವ್ಯವಸ್ಥಿತಃ ಏಕಧಾ ಬಹುಧಾ ಚೈವ ದೃಶ್ಯತೇ ಜಲಚಂದ್ರವತ್ ಎಂದುದಾಗಿ, ಜಲದೊಳಗೆ ಸೂರ್ಯನ ಪ್ರತಿಬಿಂಬ ವಿಕಾರಿಸುತಿರ್ದಡೇನುರಿ ಆ ವಿಕಾರ ಜಲಕ್ಕಲ್ಲದೆ ಸೂರ್ಯಂಗಿಲ್ಲದಂತಿಪ್ಪನಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಸದ್ಯೋಜಾತ ವಾಮದೇವ ತತ್ಪುರುಷ ಅಘೋರ ಈಶಾನ್ಯವೆಂಬ ಪಂಚಬ್ರಹ್ಮವೇ ಮೊದಲಾದ ಪಂಚಮುಖದ ರುದ್ರಾಕ್ಷಿ. ಆ ರುದ್ರಾಕ್ಷಿಯ ಹಸ್ತ ತೋಳು ಕರ್ಣ ಕಂಠ ಮಸ್ತಕದಲ್ಲಿ ಧರಿಸಿಪ್ಪ ಶಿವಭಕ್ತನೇ ರುದ್ರನು. ಆತನ ದರ್ಶನದಿಂದ ಭವರೋಗ ದುರಿತ ಇರಲಮ್ಮವು ನೋಡಾ. `ಓಂ ಅತ ಏವ ರುದ್ರಾಕ್ಷಧಾರಣಾತ್ ರುದ್ರಃ' ಎಂದುದಾಗಿ ರುದ್ರಪದವಿಯನೀವ ರುದ್ರಾಕ್ಷಿಯಂ ಧರಿಸಿಪ್ಪ ಭಕ್ತರಿಗೆ ಶರಣೆಂಬೆನಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಇನ್ನಷ್ಟು ... -->