ಅಥವಾ

ಒಟ್ಟು 12 ಕಡೆಗಳಲ್ಲಿ , 5 ವಚನಕಾರರು , 6 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಂದೆಂದಡೆ ಬೆಸ, ಎರಡೆಂದಡೆ ಸರಿ ಎಂಬ ಭೇದದಂತೆ ದ್ವೈತ ಅದ್ವೈತಗಳ ವಿವರ : ಎಷ್ಟು ಲೆಖ್ಖದಲ್ಲಿ ಸಮಗಂಡು ಬಪ್ಪಲ್ಲಿ ದ್ವೈತ. ಹೆಚ್ಚುಗೆಯಲ್ಲಿ ಬಪ್ಪಲ್ಲಿ ಅದ್ವೈತ. ಇಂತೀ ಉಭಯದ ಸಂದನಳಿದಲ್ಲಿ ಸ್ವಯ ಸ್ವಯಂಭು ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಭೂಮಿ ಒಂದೆಂದಡೆ ಬೆಳೆವ ವೃಕ್ಷ ಹಲವು ತೆರನುಂಟು. ಉದಕ ಒಂದೆಂದಡೆ ಸವಿಸಾರದ ಸಂಪದ ಬೇರುಂಟು. ನಿನ್ನೊಳಗು ನಾನಾದಡೆ ತಾಮಸದ ರಾಗವಿರಾಗವಾಗದು. ಕಪಿಲಸಿದ್ಧಮಲ್ಲಿಕಾರ್ಜುನಂಗವೆಂಬ ಪುರುಷರತಿ ಕೂಟಸ್ಥವಿಲ್ಲ.
--------------
ಸಿದ್ಧರಾಮೇಶ್ವರ
ಸರ್ವಘಟಂಗಳಲ್ಲಿ ಸುಖದುಃಖ ಅನುಭವಿಸುವ ಆ ಆತ್ಮ ಒಂದೋ, ಎರಡೋ? ಸರ್ವಯೋನಿಗಳಲ್ಲಿ ಕೂಡುವ ಶಿಶ್ನೆಯ ಸುಖ ಒಂದೋ, ಎರಡೋ ? ಆತ್ಮ ಒಂದೆಂದಡೆ ಘಟಭೇದಕ್ಕೆ ಭಿನ್ನವಾಗಿಪ್ಪುದು. ಆತ್ಮ ಹಲವೆಂದಡೆ ಚೇತನ ಸ್ವಭಾವ ಏಕವಾಗಿಪ್ಪುದು. ಆ ಘಟ ಆತ್ಮನ ಕೂಟ ಎಂತೆಯಿದ್ದಿತ್ತು ಅಂತೆ ಸುಖವಿದ್ದಿತ್ತು. ಯೋನಿಯ ಘಟ ಸಾಕಾರ ಎಂತೆಯಿದ್ದಿತ್ತು ಅಂತೆಯಿದ್ದಿತ್ತು ಶಿಶ್ನೆಯ ಯೋಗ. ಆತ್ಮನ ಘಟಸಂಗ ಜಾತಿಯ ಸುಜಾತಿಯ ಕೂಟಸ್ಥ ವಿಶ್ವಾಸದ ಭ್ರಾಂತಿಯ ಭ್ರಾಮಕಯೆಂತಿದ್ದಿತ್ತು ಅಂತೆಯಿದ್ದಿತ್ತು ಆತ್ಮ. ಇಂತೀ ಘಟದ ಸಾಕಾರವಡಗಿ ತೋರುವ ಆತ್ಮನ ಪರಿ. ಭಿನ್ನ ಇಂದ್ರಿಯಂಗಳ ಹಲವು ಸಂಚಿನ ಯೋನಿ. ಅದ ಸಂಧಿಸಿ ಕೂಡಿಹೆನೆಂಬ ಅರಿಕೆಯ ತೃಷ್ಣೆಯ ಶಿಶ್ನೆ ತಲಹಗೆಟ್ಟಲ್ಲಿ, ಭ್ರಾಂತಿನ ಭ್ರಮೆಯ ಸೂತಕ ಹೋಯಿತ್ತು, ಕಾಮಧೂಮ ಧೂಳೇಶ್ವರನ ತಾನು ತಾನಾದ ಕಾರಣ.
--------------
ಮಾದಾರ ಧೂಳಯ್ಯ
ಆತ್ಮ ಒಂದೆಂದಲ್ಲಿ, ಇಂದ್ರಿಯಂಗಳು ಹಲವು ತೆರನಾದವು ನೋಡಾ. ವಾಯು ಒಂದೆಂದಡೆ, ಒಂಬತ್ತು ಸಂಧಿಸಿದವು ನೋಡಾ. ಇಂದ್ರಿಯ ಒಂದೆಂದಡೆ, ನಾಲ್ಕು ಸಂದಣಿಸಿದವು ನೋಡಾ. ಮದ ಒಂದೆಂದಡೆ, ಏಳು ಸಂಭ್ರಮಿಸುತಿವೆ ನೋಡಾ. ಕಳೆ ಒಂದೆಂದಡೆ, ಹದಿನೈದು ಹಿಂಗದಿವೆ ನೋಡಾ. ಇಂತೀ ಸ್ಥೂಲತನು ಒಂದೆಂದಡೆ, ಸೂಕ್ಷ್ಮಕಾರಣ ದ್ವಂದ್ವವಾಗಿವೆ ನೋಡಾ. ಜೀವ ಒಂದೆಂದಡೆ, ಪರಮಾತ್ಮನೆಂದು ತ್ರಿವಿಧ ಸಂಗವಾಗಿದೆ ನೋಡಾ. ಅರಿದೆನೆಂಬಲ್ಲಿ ಹಿಂದೊಂದು ಮರವೆ, ಮರೆದೆನೆಂಬಲ್ಲಿ ಮುಂದೊಂದರಿವು. ಇಂತೀ ದಂಪತಿ ಸಂಗವುಳ್ಳನ್ನಕ್ಕ ಏನನಹುದೆಂಬೆ, ಏನನಲ್ಲಾ ಎಂಬೆ ! ನುಡಿದಡೆ ಸಮಯಕ್ಕೆ ದೂರ, ಸುಮ್ಮನಿದ್ದಡೆ ಸ್ವಾನುಭಾವಕ್ಕೆ ದೂರ. ಆರೆಂದಡೂ ಎನಲಿ, ಆವ ಸ್ಥಲದಲ್ಲಿ ನಿಂದಡೂ ಭಕ್ತಿಸ್ಥಲವೆ. ವಸ್ತುವ ನೆಮ್ಮುವುದಕ್ಕೆ ವಿಶ್ವಾಸ. ಇದು ಸಂಗನಬಸವಣ್ಣನ ಕಟ್ಟು, ಬ್ರಹ್ಮೇಶ್ವರಲಿಂಗವ ಮುಟ್ಟುವ ಗೊತ್ತು.
--------------
ಬಾಹೂರ ಬೊಮ್ಮಣ್ಣ
ರೂಪ ನಿರೂಪ ವಿಚಾರಿಸುವರು, ಸಾಕಾರ ನಿರಾಕಾರವ ವ್ಯಾಪಾರಿಸುವರು. ಅರಿವು ಮರವೆಯ ಕುರು[ಹ] ಹಿಡಿವರು, ಮನ ಘನವ ಸಂಬಂಧಿಸುವರು. ಒಂದೆಂದಡೆ ನಾಮಗಳೆರಡಾಗಿವೆ, ಎರಡೆಂದಡೆ ಮೂರ್ತಿವೊಂದೆ. ಒಂದೆರಡೆಂಬುದು ತನ್ನಿಂದಾಯಿತ್ತಾಗಿ, ತಾನೇ ಮಹಾಲಿಂಗ ಕಲ್ಲೇಶ್ವರಾ.
--------------
ಹಾವಿನಹಾಳ ಕಲ್ಲಯ್ಯ
ಬಾಯಿ ಮುಚ್ಚಿ ನಾಸಿಕದಲ್ಲಿ ಉಣಬಹುದೆ ? ನಾಸಿಕವ ಮುಚ್ಚಿ ಬಾಯಲ್ಲಿ ವಾಸಿಸಬಹುದೆ ? ಕಣ್ಣು ಮುಚ್ಚಿ ಕಿವಿಯಲ್ಲಿ ನೋಡಬಹುದೆ ? ಕಿವಿಯ ಮುಚ್ಚಿ ಕಣ್ಣಿನಲ್ಲಿ ಕೇಳಬಹುದೆ ? ಇಂತೀ ಇವಕೆ ಆತ್ಮ ಒಂದೆಂದಡೆ ತಮ್ಮ ತಮ್ಮ ಸ್ವಸ್ಥಾನಂಗಳಲ್ಲಿ ಅಲ್ಲದೆ ದೃಷ್ಟವ ಕಾಣಬಾರದು. ಆವ ಸ್ಥಲ ನೆಮ್ಮಿದಡೂ ಆ ಸ್ಥಲಕ್ಕೆ ವಿಶ್ವಾಸಬೇಕು. ಇದು ಸಂಗನಬಸವಣ್ಣನ ಭಕ್ತಿ ಬ್ರಹ್ಮೇಶ್ವರ ಲಿಂಗವನರಿವುದಕ್ಕೆ ಇಕ್ಕಿದ ಭಿತ್ತಿ.
--------------
ಬಾಹೂರ ಬೊಮ್ಮಣ್ಣ
-->