ಅಥವಾ

ಒಟ್ಟು 13 ಕಡೆಗಳಲ್ಲಿ , 11 ವಚನಕಾರರು , 13 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತನು ನಾಗವತ್ತಿಗೆಯಾದಡೆ ಅರ್ಪಿತವ ಮಾಡಬೇಕು, ತನು ಸೆಜ್ಜೆಯಾದಡೆ ಅರ್ಪಿಸಲಿಲ್ಲ ಕಂಡಯ್ಯಾ. ತನು ಸಿಂಹಾಸನವಾದಡೆ ಸುಳಿವುದೆ ಭಂಗ. ಪ್ರಾಣಲಿಂಗ ಸಂಬಂಧಿಯಾದಡೆ, ಅದನು ಎರಡು ಮಾಡಿಕೊಂಡು ನುಡಿಯಲೇಕಯ್ಯಾ ? ಒಂದೆಯೆಂದು ನುಡಿವ ಸೋಹದವನಲ್ಲ, ಬಹ ಪದಾರ್ಥದ ಲಾಭದವನಲ್ಲ, ಹೋಹ ಪದಾರ್ಥದ ಚೇಗೆಯವನಲ್ಲ, ಪ್ರಪಂಚವ ಹೊತ್ತುಕೊಂಬ ಭಾರದವ ತಾನಲ್ಲ. ಕೂಡಲಚೆನ್ನಸಂಗನ ಶರಣನುಪಮಾತೀತನು.
--------------
ಚನ್ನಬಸವಣ್ಣ
`ಗುರು ಲಿಂಗ ಒಂದೆ' ಎಂಬ, ಸಂತೆಯ ಸುದ್ದಿಯ ಬಾಲಭಾಷೆಯ ಕೇಳಲಾಗದು. ಲಿಂಗಸಹಿತ ಪ್ರಸಾದ ಭೋಗ, ಲಿಂಗಸಹಿತ ನಿದ್ರೆ. ಗುರು ಲಿಂಗ ಒಂದೆಯೆಂದು ಕಂಡರೆ ಅಘೋರನರಕ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಶಿವಭಕ್ತನೆನಿಸುವಾತಂಗೆ ಆವುದು ಚಿಹ್ನವೆಂದೊಡೆ : ಸದಾಚಾರದಲ್ಲಿ ನಡೆವುದು, ಶಿವನಲ್ಲಿ ಭಕ್ತಿಯಿಂದಿರುವುದು, ಲಿಂಗಜಂಗಮ ಒಂದೆಯೆಂದು ಕಾಂಬುದು. ವಿಭೂತಿ ರುದ್ರಾಕ್ಷಿ ಲಿಂಗಧಾರಣ ಮುಂತಾದ ಶಿವಲಾಂಛನವನುಳ್ಳ ಶಿವಶರಣರಲ್ಲಿ ಅತಿಭಕ್ತಿಯಾಗಿರ್ಪಾತನೇ ಸದ್‍ಭಕ್ತ ನೋಡಾ ! ಅದೆಂತೆಂದೊಡೆ : ``ಸಾದಾಚಾರಃ ಶಿವೇ ಭಕ್ತಿರ್ಲಿಂಗೇ ಜಂಗಮ ಏಕದ್ಥೀಃ| ಲಾಂಛನೇ ಶರಣೇ ಭಕ್ತಿಃ ಭಕ್ತಸ್ಥಲಮನುತ್ತಮಮ್ ||'' ಎಂದುದಾಗಿ, ಇಂತಪ್ಪ ಸಹಜ ಭಕ್ತರ ತೋರಿ ಬದುಕಿಸಯ್ಯ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಷ್ಟಾವರಣಗಳು ಯಾರಿಗೆ ಸಾಧ್ಯವಾಯಿತ್ತೆಂದಡೆ ಹೇಳಿಹೆ ಕೇಳಿರಣ್ಣ : ಗುರು ಸಾಧ್ಯವಾಯಿತ್ತು ಗುರುಭಕ್ತಂಗೆ ; ಲಿಂಗ ಸಾಧ್ಯವಾಯಿತ್ತು ನೀಲಲೋಚನೆತಾಯಿಗೆ ; ಜಂಗಮವು ಸಾಧ್ಯವಾಯಿತ್ತು ಬಸವೇಶ್ವರದೇವರಿಗೆ ; ಪಾದೋದಕ ಸಾಧ್ಯವಾಯಿತ್ತು ವೇಮನಾರಾಧ್ಯಂಗೆ ; ಪ್ರಸಾದ ಸಾಧ್ಯವಾಯಿತ್ತು ಬಿಬ್ಬಿಬಾಚಯ್ಯಂಗೆ ; ವಿಭೂತಿ ಸಾಧ್ಯವಾಯಿತ್ತು ಓಹಿಲಯ್ಯಗಳಿಗೆ ; ರುದ್ರಾಕ್ಷಿ ಸಾಧ್ಯವಾಯಿತ್ತು ಚೇರಮರಾಯಗೆ ; ಪಂಚಾಕ್ಷರಿ ಸಾಧ್ಯವಾಯಿತ್ತು ಅಜಗಣ್ಣಂಗೆ. ಇನ್ನು ಷಟ್‍ಸ್ಥಲದ ನಿರ್ಣಯವ ಕೇಳಿ : ಭಕ್ತಸ್ಥಲ ಬಸವಣ್ಣಂಗಾಯಿತ್ತು ; ಮಾಹೇಶ್ವರಸ್ಥಲ ಮಡಿವಾಳಯ್ಯಂಗಾಯಿತ್ತು ; ಪ್ರಸಾದಿಸ್ಥಲ ಚೆನ್ನಬಸವಣ್ಣಂಗಾಯಿತ್ತು ; ಪ್ರಾಣಲಿಂಗಿಸ್ಥಲ ಸಿದ್ಭರಾಮಯ್ಯಂಗಾಯಿತ್ತು ; ಶರಣಸ್ಥಲ ಪ್ರಭುದೇವರಿಗಾಯಿತ್ತು; ಐಕ್ಯಸ್ಥಲ ಅಜಗಣ್ಣಂಗಾಯಿತ್ತು. ಇನ್ನು ಷಡುಸ್ಥಲದ ವಿವರವಂ ಪೇಳ್ವೆನು.- ಭಕ್ತಸ್ಥಲದ ವಿವರವು : ಗುರುಲಿಂಗಜಂಗಮವು ಒಂದೆಯೆಂದು ಕಂಡು ಸದಾಚಾರದಲ್ಲಿ ನಡೆವನು, ತ್ರಿಕಾಲ ಮಜ್ಜನವ ನೀಡುವನು, ಲಾಂಛನಧಾರಿಗಳ ಕಂಡಡೆ ವಂದನೆಯ ಮಾಡುವನು, ಆಪ್ಯಾಯನಕ್ಕೆ ಅನ್ನವ ನೀಡುವನು, ಜಂಗಮಕ್ಕೆ ಪ್ರತಿ ಉತ್ತರವ ಕೊಡನು. ಪೃಥ್ವಿ ಅಂಗವಾಗಿಪ್ಪುದೆ ಭಕ್ತಿಸ್ಥಲವು. ಸಾಕ್ಷಿ : 'ಮಜ್ಜನಂ ತು ತ್ರಿಕಾಲೇಷು ಶುಚಿಪಾಕಸಮರ್ಪಿತಂ | ಭವಿಸಂಗಪರಿತ್ಯಾಗಂ ಇತ್ಯೇತೇ ಭಕ್ತಿಕಾರಣಂ || ಸದಾಚಾರೇ ಶಿವಭಕ್ತಿಃ ಲಿಂಗಜಂಗಮೇಕಾದ್ಥಿಕಂ | ಲಾಂಛನೇನ ಶರಣ್ಯಂ ಚ ಭಕ್ತಿಸ್ಥಲಂ ಮಹೋತ್ತಮಂ ||' ಇನ್ನು ಮಾಹೇಶ್ವರಸ್ಥಲದ ವಿವರವು : ಪರಸ್ತ್ರೀ ಪರನಿಂದೆ ಪರದ್ರವ್ಯ ಪರಹಿಂಸೆ ಅನೃತ ಇವು ಪಂಚಮಹಾಪಾತಕವು, ಇವ ಬಿಟ್ಟು ಲಿಂಗನಿಷ್ಠೆಯಲ್ಲಿ ಇರ್ದು ಜಲವೆ ಅಂಗವಾಗಿಪ್ಪುದೆ ಮಾಹೇಶ್ವರಸ್ಥಲವು. ಸಾಕ್ಷಿ : 'ಪರಸ್ತ್ರೀಯಂ ಪರಾರ್ಥಂ ಚ ವರ್ಜಿತೋ ಭಾವಶುದ್ಧಿಮಾನ್ | ಲಿಂಗನಿಸ್ಸಂಗಿಯುಕ್ತಾತ್ಮಾ ಮಹೇಶಸ್ಥಲಮುತ್ತಮಂ ||' ಇನ್ನು ಪ್ರಸಾದಿಸ್ಥಲದ ವಿವರ : ಲಿಂಗಕ್ಕೆ ಅರ್ಪಿಸಿದುದ ಲಿಂಗನೆನಹಿನಿಂದೆ ಸ್ವೀಕರಿಸುವುದು, ಅನರ್ಪಿತವ ವರ್ಜಿಸುವುದು, ಲಿಂಗದೊಡನೆ ಉಂಬುವುದು, ಅಗ್ನಿಯೆ ಅಂಗವಾಗಿಪ್ಪುದೆ ಪ್ರಸಾದಿಸ್ಥಲ. ಇನ್ನು ಪ್ರಾಣಲಿಂಗಿಸ್ಥಲದ ವಿವರವು : ಸುಗುಣ ದುರ್ಗುಣ ಉಭಯವನತಿಗಳೆದು ಸುಖ ದುಃಖ ಸ್ತುತಿ ನಿಂದೆ ಶತ್ರು ಮಿತ್ರಾದಿಗಳೆಲ್ಲರಂ ಸಮಾನಂಗಂಡು ವಾಯುವೆ ಅಂಗವಾಗಿಪ್ಪುದೆ ಪ್ರಾಣಲಿಂಗಿಸ್ಥಲ. ಇನ್ನು ಶರಣಸ್ಥಲದ ವಿವರವು : ಸತಿಪತಿಭಾವ ಅಂಗಲಿಂಗವಾಗಿಪ್ಪುದು, ಪಂಚೇಂದ್ರಿಯಸುಖ ನಾಸ್ತಿಯಾಗಿಪ್ಪುದು, ಆಕಾಶವೆ ಅಂಗವಾಗಿಪ್ಪುದು, ಇದು ಶರಣಸ್ಥಲವು. ಸಾಕ್ಷಿ : 'ಪತಿರ್ಲಿಂಗಂ ಸತೀ ಚಾsಹಂ ಇತಿ ಯುಕ್ತಂ ಸನಾತನಃ | ಪಂಚೇಂದ್ರಿಯಸುಖಂ ನಾಸ್ತಿ ಶರಣಸ್ಥಲಮುತ್ತಮಂ ||' ಇನ್ನು ಐಕ್ಯಸ್ಥಲದ ವಿವರವು : ಅರಿಷಡ್ವರ್ಗಂಗಳಿಲ್ಲದಿಹರು, ನಿರ್ಭಾವದಲ್ಲಿಹರು, ಷಡೂರ್ಮಿಗಳಿಲ್ಲದಿಹರು, ಅಷ್ಟವಿಧಾರ್ಚನೆ ಇಲ್ಲದಿಹರು, ಉರಿಯುಂಡ ಕರ್ಪುರದ ಹಾಗೆ ಇಹರು, ಆತ್ಮನೆ ಅಂಗವಾಗಿಪ್ಪುದು ಐಕ್ಯಸ್ಥಲವು. ಸಾಕ್ಷಿ : 'ಷಡೂರ್ಮಿಯೋಗಷಡ್ವರ್ಗಂ ನಾಸ್ತಿ ಚಾಷ್ಟವಿಧಾರ್ಚನಂ | ನಿರ್ಭಾವಂ ಶಿವಲಿಂಗೈಕ್ಯಂ ಶಿಖಿಕರ್ಪೂರಸಯೋಗವತ್||' ಹೀಗೆ ಗಣಂಗಳು ನಡೆದ ಮಾರ್ಗದಲ್ಲಿ ನಡೆದಡೆ ಅಂದೇನೊ ಇಂದೇನೊ ? ಇಂತೀ ಅಷ್ಟಾವರಣಗಳ, ಷಡುಸ್ಥಲದ ಮಾರ್ಗವನು ಎನ್ನೊಳು ಅರುಹಿದಾತ, ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಮಾಡುವ ಭಕ್ತನ ವಿವರ: ತ್ರಾಸಿನ ನಾಲಗೆಯಂತೆ ಹೆಚ್ಚು ಕುಂದನೊಳಕೊಳ್ಳದೆ, ಗುರುಲಿಂಗಜಂಗಮ ತ್ರಿವಿಧಮುಖವು ಒಂದೆಯೆಂದು ಪ್ರಮಾಳಿಸಿ, ಮಾಡುವ ದ್ರವ್ಯ ಕೇಡಿಲ್ಲದಂತೆ ಮಾಡುವುದು ಸದ್ಭಕ್ತಿಸ್ಥಲ. ಹೀಗಲ್ಲದೆ ಗುರುವಿನ ಆಢ್ಯಕ್ಕಂಜಿ, ಜಂಗಮದ ಸಮೂಹದ ವೆಗ್ಗಳವ ಕಂಡು ಅಂಜಿ ಮಾಡಿದಡೆ, ಭಕ್ತಿಗೂಣೆಯ, ದ್ರವ್ಯದ ಕೇಡು, ಸತ್ಯಕ್ಕೆ ಹೊರಗು ಸದಾಶಿವಮೂರ್ತಿಲಿಂಗಕ್ಕೆ ದೂರ.
--------------
ಅರಿವಿನ ಮಾರಿತಂದೆ
ಪಟುಭಟಂಗೆ ಪ್ರಳಯ ಒಂದೆಯೆಂದು ಪ್ರಮಾಣಿಸಿದಲ್ಲಿ ಅಂಗದಾಸೆ ಮರೆಯಿತ್ತು. ಸರ್ವಗುಣಸಂಪದ ಭೇದವ ಒಂದುಮಾಡಿ ದ್ವಯಗುಣವ ಹಿಂಗಿದಲ್ಲಿ ಸ್ಥಲ ಅಲ್ಲಿಯೇ ಲೇಪವಾಯಿತ್ತು ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
--------------
ಬಿಬ್ಬಿ ಬಾಚಯ್ಯ
ನಿರುಪಾಧಿಕನಾಗಿ, ನಿರ್ವಂಚಕತ್ವದಿಂದ ದಾಸೋಹವ ಮಾಡಿ, ಪರಿಣಾಮದಿಂದ ನಿತ್ಯದಾಸೋಹಿಯೆನಿಸಿದೊಡೆ, ಆ ದಾಸೋಹಿಯೆ ಸದ್ಭಕ್ತನು, ಆತನೆ ಮಾಹೇಶ್ವರ, ಆತನೇ ಪ್ರಸಾದಿ, ಆತನೇ ಪ್ರಾಣಲಿಂಗಿ, ಆತನೇ ಶರಣ, ಆತನೇ ಐಕ್ಯ. ಆತನೇ ಇಹಲೋಕ[ಪರಲೋಕ] ಪೂಜ್ಯನು, ಆತನೇ ಶ್ರೇಷ*, ಆತನೇ ವಿದ್ವಾನ್, ಆತನೇ ಸುಜ್ಞಾನಿ, ಇನಿತಲ್ಲದೆ ಶ್ರೀಗುರುಲಿಂಗಜಂಗಮ ಒಂದೆಯೆಂದು ಭಾವಿಸದರ್ಚಿಸದೆ ವಿಚಾರಿ[ಸದ] ದುರ್ಭಾವಿ ಉಪಾಧಿಕನು, ವಂಚಕನು, ದಾಸೋಹವ ಮಾಡಲರಿಯದಹಂಕಾರಿ, ಅಭಾಸನು, ಅಪೂಜ್ಯನು. ಭಕ್ತನಲ್ಲ, ಮಾಹೇಶ್ವರನಲ್ಲ. ಪ್ರಸಾದಿಯಲ್ಲ, ಪ್ರಾಣಲಿಂಗಿಯಲ್ಲ, ಶರಣನಲ್ಲ; ಐಕ್ಯನಲ್ಲ; ಆತನೇ ಮೂರ್ಖನು, ಆತನೇ ಅಜ್ಞಾನಿ, ಆತನೇತಕ್ಕೆಯೂ ಬಾತೆಯಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಸ್ಥಾವರ ಜಂಗಮ ಒಂದೆಯೆಂದು ಇದಿರ ನುಡಿದು ನಾನೆಡಹುತಿಪ್ಪೆ. ಸಹಜನಲ್ಲಯ್ಯಾ, ಆನು ಸಮ್ಯಕ್ಕನಲ್ಲಯ್ಯಾ. ಆನುಭಯಲಿಂಗಸಂಗಿಯೆಂಬೆನು, ಈ ನುಡಿ ಸುಡದಿಹುದೆ, ಕೂಡಲಸಂಗಮದೇವಾ 382
--------------
ಬಸವಣ್ಣ
ಲಿಂಗಕ್ಕೆ ನಾದವಿಲ್ಲ. ಅದೇನು ಕಾರಣ? ನಿಃಶಬ್ದಮಯವಾದ ಕಾರಣ. ಜಂಗಮಕ್ಕೆ ಬಿಂದುವಿಲ್ಲ. ಅದೇನು ಕಾರಣ? ಅದು ಶಬ್ದಮಂತ್ರೋಪದೇಶವನುಳ್ಳುದಾದ ಕಾರಣ. ಅದುಕಾರಣ, ನಾದ ಸ್ವರೂಪವೇ ಜಂಗಮ; ಬಿಂದುಸ್ವರೂಪವೇ ಲಿಂಗ. ಇದುಕಾರಣ, ಲಿಂಗವೇ ಜಂಗಮದ ಲಿಂಗ; ಆ ಜಂಗಮವೇ ಲಿಂಗದ ಪ್ರಾಣ. ಆ ನಾದ ಬಿಂದು ಸ್ವರೂಪ ಲಿಂಗವಪ್ಪ ಜಂಗಮಕ್ಕೆ ಆಧಾರವಪ್ಪ ಚಿತ್ಕಲಾ ಸ್ವರೂಪನೇ ಭಕ್ತನು. ಈ ನಾದ ಬಿಂದು ಕಳೆಗಳ ಕೂಡಿಕೊಂಡಿಪ್ಪ ಶಿವತತ್ವವು, ತಾನೇ ಲಿಂಗ ಜಂಗಮ ಭಕ್ತನೆಂದು ಮೂರುತೆರನಾದನು ನೋಡಾ. ಈ ಮೂರು ಒಂದೆಯೆಂದು ಅರಿದೆನು ನೋಡಾ. ಎನ್ನ ಶರಣತ್ವದ ಆದಿಯನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸ್ಥಾವರ ಜಂಗಮ ಒಂದೆಯೆಂದು ಬಸವರಾಜದೇವರು ಹೇಳಿತ್ತ ಕೇಳದೆ, ಪಾದೋದಕವೆಂಬೆ, ಪ್ರಸಾದೋದಕವೆಂಬೆ, ಲಿಂಗೋದಕವೆಂಬೆ. ಮತ್ತೆಯೂ ಕ್ರೀಯ ನೆನೆಯುವೆ, ಸಂದೇಹವ ಹತ್ತಿಸಿ; ಸಕಳೇಶ್ವರದೇವ, ಎನ್ನ ಮರುಳುಮಾಡಿದ.
--------------
ಸಕಳೇಶ ಮಾದರಸ
ಹರಿಹರ ಬ್ರಹ್ಮಾದಿಗಳು ಸರಿಯಿಲ್ಲವೆಂದು ಹೇಳುವ ಅಣ್ಣಗಳು ನೀವು ಕೇಳಿರೊ. ಹರಿಹರ ಬ್ರಹ್ಮಾದಿಗಳೊಳಗೆ ಸರಿಯಾಗಿ ಬಂದು, ನಿಮ್ಮ ಅಂತರಂಗದೊಳಗೆ ನಿಂತ ಕಾರಣದಿಂದಾಗಿ, ಪೃಥ್ವಿ ಅಪ್ಪು ತೇಜ ವಾಯು ಆಕಾಶ ಸ್ವರ್ಗ ಮತ್ರ್ಯ ಪಾತಾಳ ಈರೇಳು ಭುವನ ಹದಿನಾಲ್ಕು ಲೋಕ, ನಾಲ್ಕು ವರ್ಣ, ಹದಿನೆಂಟು ಜಾತಿ, ನೂರೊಂದು ಕುಲದವರಾದರು. ಭಕ್ತರ ಆಧಾರದಲಿ ನಾವು ಆದಿವಿ, ನೀವು ಆದಿರಿ. ಅದು ಎಂತೆಂದರೆ : ಒಂಕಾರ ಪರಬ್ರಹ್ಮನೆಂಬ ವಿಪ್ರನ ಗರ್ಭದಲ್ಲಿ ಹುಟ್ಟಿದ ನಕಾರ ಬ್ರಹ್ಮನೆ ಪೃಥ್ವಿತತ್ವವಾದ, ಮಕಾರ ವಷ್ಣುವೆ ಅಪ್ಪುತತ್ವವಾದ. ಶಿಕಾರ ರುದ್ರನೆ ತೇಜತತ್ವವಾದ, ವಕಾರ ಈಶ್ವರನೆ ವಾಯುತತ್ವವಾದ. ಯಕಾರ ಸದಾಶಿವನೆ ಆಕಾಶ ತತ್ವವಾದ ಅದು ಎಂತೆಂದರೆ : ನಕಾರ ಬ್ರಹ್ಮ , ಮಕಾರ ವಿಷ್ಣು , ಶಿಕಾರ ರುದ್ರ. ಮೂವರು ತ್ರಿಮೂರ್ತಿಗಳು ಕೂಡಲಿಕೆ ಈಶ್ವರನೆಂಬುದೊಂದು ವಿಪ್ರವರ್ಣವಾಯಿತು ಕಾಣಿರೊ. ಆತನ ಸದ್ಯೋಜಾತಮುಖದಲ್ಲಿ ಬ್ರಾಹ್ಮಣ ಹುಟ್ಟಿದ. ಅವರ ಅಂಗದಲ್ಲಿ ಪ್ರಸಾದಲಿಂಗವಾದ, ಶಿಖೆಯಲ್ಲಿ ವಿಷ್ಣುಲಿಂಗವಾದ, ಮನೆಯಲ್ಲಿ ಸ್ಫಟಿಕ ವರ್ಣದ ಪಟ್ಟಿಕೇಶ್ವರನೆಂಬ ಲಿಂಗವಾದ. ಆತನ ಭುಜದಲ್ಲಿ ಕ್ಷತ್ರಿಯ ಹುಟ್ಟಿದ. ಅವರ ಅಂಗದಲ್ಲಿ ಪ್ರಾಣಲಿಂಗವಾದ, ಶಿಖೆಯಲ್ಲಿ ವಿಷ್ಣುಲಿಂಗವಾದ, ಮನೆಯಲ್ಲಿ ಶ್ವೇತವರ್ಣದ ರಾಮನಾಥಲಿಂಗವಾದ, ಆತನ ಉದರದಲ್ಲಿ ವೈಶ್ಯ ಹುಟ್ಟಿದ ಅವರ ಅಂಗದಲ್ಲಿ ಪ್ರಾಣಲಿಂಗವಾದ, ಶಿಖೆಯಲ್ಲಿ ವಿಷ್ಣುಲಿಂಗವಾದ, ಮನೆಯಲ್ಲಿ ಶ್ಯಾಮವರ್ಣದ ನಗರೇಶ್ವರಲಿಂಗವಾದ. ಆತನ ಪಾದದಲ್ಲಿ ಶೂದ್ರ ಹುಟ್ಟಿದ. ಅವರ ಅಂಗದಲ್ಲಿ ಪ್ರಾಣಲಿಂಗವಾದ ಶಿಖೆಯಲ್ಲಿ ವಿಷ್ಣುಲಿಂಗವಾದ, ಮನೆಯಲ್ಲಿ ನೀಲವರ್ಣದ ಕಲ್ಲಿನಾಥಲಿಂಗವಾದ. ಇಂತೀ ನಾಲ್ಕುವರ್ಣ ಹದಿನೆಂಟುಜಾತಿ ನೂರೊಂದು ಕುಲದವರು ಅಂತರಂಗದ ಒಳಹೊರಗೆ ಹರಿಹರ ಬ್ರಹ್ಮಾದಿಗಳು ಪೂಜೆಗೊಂಬುವ ದೇವರು ತಾವೆ ಆದರು, ಪೂಜೆ ಮಾಡುವ ಭಕ್ತರು ತಾವೆ ಆದರು. ಅದು ಎಂತೆಂದರೆ : ನಿಮ್ಮ ತಾಯಿಗರ್ಭದಲ್ಲಿ ಶುಕ್ಲ ಶೋಣಿತಗಳು ಎರಡು ಕೂಡಿ ಅಕ್ಷಮೂರ್ತಿಯಾದ. ಆತ್ಮದೊಳಗೆ ಒಂಕಾರ ಪರಬ್ರಹ್ಮವೆಂಬ .....(ಒಂದು ಹಾಳೆ ಕಳೆದಿದೆ) ನರರು ಸುರರು ತೆತ್ತೀಸಕೋಟಿ ದೇವತೆಗಳಿಗೆಲ್ಲ ಪೂಜೆ ಮಾಡುವ ಲಿಂಗ ಒಂದೆಯೆಂದು ಇಕ್ಕುವೆನು ಮುಂಡಿಗೆಯ. ಇದನೆತ್ತುವರುಂಟೇನು, ದೇವಧ್ವಜ ಮೃತ್ಯುಂಜಯನ ಭಾವದೊಲ್ಲಭ ಮುದ್ದನೂರೇಶಾ ?
--------------
ಸರ್ವೇಶ್ವರಲಿಂಗ
ಶಿವಶಿವಾ, ಈ ಮರುಳಮಾನವರಿಗೆ ನಾನೇನೆಂಬೆನಯ್ಯಾ! ಎನ್ನ ಮನೆ, ಎನ್ನ ಬದುಕು, ಎನ್ನ ತಾಯಿತಂದೆ, ಎನ್ನಸತಿಸುತರು ಬಾಂಧವರು ಎಂದು ಮೆಚ್ಚಿ ನಚ್ಚಿ ಮರುಳಾಗಿರ್ದರಯ್ಯಾ. ಹಿಂದೆ ನಾನಾಯೋನಿಯಲ್ಲಿ ಆನೆ ಮೊದಲು ಇರುವೆ ಕಡೆಯಾಗಿ ಒಂದೊಂದು ಜನ್ಮದಲ್ಲಿ ಸಹಸ್ರವೇಳೆ ಹುಟ್ಟಿ, ಸಹಸ್ರವೇಳೆ ಸತ್ತು, ಸಹಸ್ರವೇಳೆ ಹುಟ್ಟಿ ಬಪ್ಪಲ್ಲಿ ಆವಾಗ ನಿನಗೆ ತಾಯಿ ಯಾರು, ನಿನಗೆ ತಂದೆ ಯಾರು, ನಿನಗೆ ಸತಿಸುತರು ಬಾಂಧವರು ಯಾರು? ಬಲ್ಲರೆ ಹೇಳಿರಿ, ಅರಿಯದಿದ್ದರೆ ಕೇಳಿರಿ. ನಿನಗೆ ಶ್ರೀಗುರುವೇ ತಾಯಿ, ನಿನಗೆ ಶ್ರೀಗುರುವೇ ತಂದೆ, ನಿನಗೆ ಶ್ರೀಗುರುವೆ ಸತಿಸುತರು, ಬಂಧುಗಳೆಂಬ ನಿರ್ಣಯವನು ಸಮ್ಯಜ್ಞಾನಗುರುಮುಖದಿಂದ ತಿಳಿದು ವಿಚಾರಿಸಿಕೊಳ್ಳಬಲ್ಲರೆ ಬಲ್ಲರೆಂಬೆ. ಗುರು-ಲಿಂಗ-ಜಂಗಮ ಒಂದೆಯೆಂದು ತಿಳಿಯಬಲ್ಲರೆ ಬಲ್ಲರೆಂಬೆ. ಈ ಭೇದವನರಿಯದೆ ಮಿಥ್ಯಸಂಸಾರದ ಮಾತಾಪಿತರು, ಸತಿಸುತರು ಬಾಂಧವರ ತನು-ಮನ-ಧನದ ಅಭಿಮಾನದಲ್ಲಿ ಸಟೆಯ ಸಂಸಾರದಲ್ಲಿ ಹೊಡೆದಾಡಿ ಹೊತ್ತುಗಳೆದು ಸತ್ತುಹೋಗುವ ಮಂಗಮನುಜರಿಗೆ ಇನ್ನೆಂದು ಮೋಕ್ಷವಹುದೊ ? ಶಿವಶಿವಾ, ಈ ಲೋಕದ ಅಭಿಮಾನವ ಬಿಟ್ಟು, ಪರಲೋಕದಭಿಮಾನವ ಹಿಡಿದು ಆಚರಿಸಿ ಇರಬಲ್ಲರೆ ಗುರು-ಲಿಂಗ-ಜಂಗಮದ ಪುತ್ರರೆಂಬೆ, ಪುರಾತರ ಮಗನೆಂಬೆ, ಇಲ್ಲದಿರೆ ಕಿರಾತರ ಮಗನೆಂಬೆ, ನರಗುರಿಗಳ ಪುತ್ರರೆಂಬೆನೆಂದಾತ ವೀರಾಧಿವೀರ ನಮ್ಮ ಶರಣ ಕಾಡಿನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆದಿಯ ಭಕ್ತ ಅನಾದಿಯ ಜಂಗಮ ಮಧ್ಯದಲ್ಲಿ ಹುಟ್ಟಿದ ಪದಾರ್ಥ ಈ ಮೂರು ಬೀಜವೃಕ್ಷಫಲದ ಹಾಗೆ ಒಂದೆಯೆಂದು ಕಾಂಬ ಮಹಾಭಕ್ತರ ತೋರಿ ಬದುಕಿಸಯ್ಯ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
-->