ಅಥವಾ

ಒಟ್ಟು 12 ಕಡೆಗಳಲ್ಲಿ , 8 ವಚನಕಾರರು , 12 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾರಿಯೂ ಮರನೂ ಕೂಡಿ ಬಾಗಲಿಕ್ಕಾಗಿ ಶರ ಚರಿಸುವುದಕ್ಕೆಡೆಯಾಯಿತ್ತು. ಭಕ್ತಿಯೂ ವಿರಕ್ತಿಯೂ ಕೂಡಲಿಕ್ಕಾಗಿ ವಸ್ತುವನರಿವುದಕ್ಕೆ ಒಡಲಾಯಿತ್ತು. ಆ ವಸ್ತು ತ್ರಿಕರಣವ ವೇದಿಸಿದ ಮತ್ತೆ ತ್ರಿಗುಣ ನಷ್ಟ. ಆ ನಷ್ಟದಲ್ಲಿ ಪಂಚೇಂದ್ರಿಯ ನಾಶನ, ಸಪ್ತಧಾತು ವಿಸರ್ಜನ, ಅಷ್ಟಮದ ಹುಟ್ಟುಗೆಟ್ಟಿತ್ತು, ಹದಿನಾರು ತೊಟ್ಟುಬಿಟ್ಟಿತ್ತು, ಇಪ್ಪತ್ತೈದರ ಬಟ್ಟೆ ಕೆಟ್ಟಿತ್ತು, ಸದ್ಭಾವದ ನಿಷ್ಠೆ ನಷ್ಟವಾಯಿತ್ತು. ಇಂತಿವರೊಳಗಾದ ಕುಲವಾಸನೆ ಹೊಲಬುಗೆಟ್ಟಿತ್ತು. ನಾನಾರೆಂಬುದ ತಿಳಿದಲ್ಲಿ ಕೂಗಿನ ಕುಲಕ್ಕೆ ಹೊರಗಾಯಿತ್ತು ಮಹಾಮಹಿಮ ಮಾರೇಶ್ವರನನರಿಯಲಾಗಿ.
--------------
ಕೂಗಿನ ಮಾರಯ್ಯ
ರೂಪಿಂಗೆ ಬಂದು ನಿಂದುದು ಮಾತಿಂಗೆ ಒಡಲಾಯಿತ್ತು. ಮಾತಿಂಗೆ ವೇಧಿಸಿದ ಮನ ರಾಟಾಳದ ಕುಂಭದಂತೆ. ಅದ ನೇತಿಗಳೆದು ನಿಂದಲ್ಲಿ ಗುಹೇಶ್ವರಲಿಂಗ ತಾನೆ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಪ್ರಾಣ ಪ್ರಣವವೆಂಬರು, ಪ್ರಾಣಕ್ಕೂ ಪ್ರಣವಕ್ಕೂ ಏನು ಸಂಬಂಧ? ಪ್ರಾಣವೆ ಪ್ರಳಯಕ್ಕೊಳಗಾಗಿ ತಿರುತಿರುಗಿ ಬಪ್ಪುದಕ್ಕೆ ಒಡಲಾಯಿತ್ತು. ಪ್ರಣವವೆ ಪ್ರಸನ್ನವಾಗಿಪ್ಪುದೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಎನ್ನ ಮಡದಿ ಹಾಲ ಕಾಸುವಾಗ, ಹಾಲಿನ ಕುಡಿಕೆಯಲ್ಲಿ ಹಾವು ಬಿದ್ದು ಸತ್ತಿತ್ತು. ಮಡದಿಯ ಬಿಡಬಾರದು, ಹಾಲ ಚೆಲ್ಲಬಾರದು. ಹಾವಿನ ವಿಷ ಹಾಲಿನಲ್ಲಿ ಸೋರಿತ್ತು, ಇದಕಿನ್ನಾವುದು ತೆರ? ಕ್ರೀಯ ಬಿಡಬಾರದು, ಅರಿವಿಂಗೆ ಆಶ್ರಯ ಬೇಕು. ಅರಿವನರಿದೆಹೆನೆಂದಡೆ ಪ್ರಪಂಚಕ್ಕೆ ಒಡಲಾಯಿತ್ತು. ಹುಲಿ ಬಾವಿ ಹಾವಿನ ಎಡೆಯಲ್ಲಿ ಸಿಕ್ಕಿದ ತೆರ ಎನಗಾಯಿತ್ತು. ಈ ಸಂದೇಹವ ಬಿಡಿಸು, ಸದಾಶಿವಮೂರ್ತಿಲಿಂಗವೆ, ನಿನ್ನ ಧರ್ಮ.
--------------
ಅರಿವಿನ ಮಾರಿತಂದೆ
ಶಿಲೆ ಸ್ಥಾವರ ಮುಂತಾದುವಕ್ಕೆ ಅಪ್ಪುವೆ ಬೀಜ. ಸಕಲ ಚೇತನಾದಿ ರೂಪುಗೊಂಡುವಕ್ಕೆ ವಸ್ತುವೆ ಬೀಜ. ಆ ವಸ್ತು ಜಗದ ಹಿತಾರ್ಥ ಪೀಠಸಂಬಂಧಿಯಾಗಿ `ಏಕಮೂರ್ತಿಸ್ತ್ರಯೋ ಭಾಗಾಃ' ಆಗಲಾಗಿ ವರ್ತುಳ ಗುರುವಾಗಿ, ಗೋಮುಖ ಜಂಗಮವಾಗಿ ಗೋಳಕಾಕಾರಮೂರ್ತಿ ಲಿಂಗವಾದ ಕಾರಣ, ಲಿಂಗವಾಯಿತ್ತು. ಇಂತೀ ತ್ರಿವಿಧದೊಳಗೆ ಒಂದ ಮೀರಿ ಒಂದ ಕಂಡೆಹೆನೆಂದಡೆ ಬೀಜವಿಲ್ಲದ ಅಂಕುರ, ಅಂಕುರವಿಲ್ಲದ ಬೀಜ. ಅಂಕುರ ಬೀಜವಿರೆ, ಅಪ್ಪು ಪೃಥ್ವಿ ಸಾಕಾರವಿಲ್ಲದಿರೆ ಅಂಕುರಕ್ಕೆ ದೃಷ್ಟವಿಲ್ಲ. ಕೂಡಲಚೆನ್ನಸಂಗಮದೇವರಿರುತಿರಲಿಕ್ಕೆ ಗುರು-ಲಿಂಗ-ಜಂಗಮವೆಂಬ ಭಾವ ಒಡಲಾಯಿತ್ತು.
--------------
ಚನ್ನಬಸವಣ್ಣ
ಭೃತ್ಯರೂಪೊಂದು ಭಕ್ತಿಸ್ಥಲ, ಕರ್ತೃರೂಪೊಂದು ವಸ್ತು. ಈ ಉಭಯ ಜಗದ ಹಾಹೆ ನಡೆಯಬೇಕಾದಲ್ಲಿ, ಮೂರು ಭಕ್ತಿಸ್ಥಲವಾಯಿತ್ತು. ಮೂರು ಕರ್ತೃಸ್ಥಲವಾಯಿತ್ತು. ಭಕ್ತ ಮಾಹೇಶ್ವರ ಪ್ರಸಾದಿ, ಈ ತ್ರಿವಿಧಭಾವ ಭಕ್ತಿರೂಪು. ಪ್ರಾಣಲಿಂಗಿ ಶರಣ ಐಕ್ಯ, ಈ ತ್ರಿವಿಧ [ಭಾವ] ಕರ್ತೃಸ್ವರೂಪು. ಇಂತೀ ಉಭಯಭೇದದಲ್ಲಿ, ವಸ್ತು ಮತ್ರ್ಯಕ್ಕೆ ಬಂದು, ಮುಂದೆ ಆಶ್ರಯವ ಕಟ್ಟಿದ ಕಾರಣ, ಭಕ್ತಿಗೆ ಬಸವಣ್ಣನಾಗಿ, ಆ ಭಕ್ತಿಯನೊಪ್ಪುಗೊಂಬುದಕ್ಕೆ ವಸ್ತು ಪ್ರಭುರೂಪಾಗಿ ಬಂದ ಕಾರಣದಲ್ಲಿ, ಉಭಯಸ್ಥಲ ಗೋಚರಿಸದೆಂದು ಷಟ್ಸ್ಥಲವಾಯಿತ್ತು. ಆ ಸ್ಥಲದ ನಾಮ ರೂಪಿನಲ್ಲಿ ನಾನಾಸ್ಥಲ ಒಡಲಾಯಿತ್ತು. ಪೂರ್ವಗತಿಯಾದಲ್ಲಿ ಸ್ಥಲ, ಉತ್ತರಗತಿಯಾದಲ್ಲಿ ನಿಃಸ್ಥಲ ಉಭಯನಾಮರೂಪು ಲೇಪವಾದಲ್ಲಿ, ನಿಃಕಳಂಕ ಮಲ್ಲಿಕಾರ್ಜುನ ನಿರ್ಲೇಪವಾದನು.
--------------
ಮೋಳಿಗೆ ಮಾರಯ್ಯ
ಎಣ್ಣೆ ಬೇರೆ ಬತ್ತಿ ಬೇರೆ:ಎರಡೂ ಕೂಡಿ ಸೊಡರಾಯಿತ್ತು. ಪುಣ್ಯ ಬೇರೆ ಪಾಪ ಬೇರೆ:ಎರಡೂ ಕೂಡಿ ಒಡಲಾಯಿತ್ತು. ಮಿಗಬಾರದು, ಮಿಗದಿರಬಾರದು, ಒಡಲಿಚ್ಛೆಯ ಸಲಿಸದೆ ನಿಮಿಷವಿರಬಾರದು. ಕಾಯಗುಣವಳಿದು ಮಾಯಾಜ್ಯೋತಿ ವಾಯುವ ಕೂಡುವ ಮುನ್ನ, ಭಕ್ತಿಯ ಮಾಡಬಲ್ಲಡೆ ಆತನೆ ದೇವ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಕಾಷ್ಟವಗ್ನಿಯೊಳಗಿಡಲಿಕ್ಕಾಗಿ, ಆ ಕಾಷ್ಟದೊಳಗಿದ್ದಗ್ನಿ ನಾನಿದ್ದೇನೆ, ನೀ ಬೇಡಾ ಎಂದಿತ್ತೆ ? ತಾನಡಗಿ ಇದಿರಿಟ್ಟ ಅಗ್ನಿಗೆ ಒಡಲಾಯಿತ್ತು. ಇಂತು ಇದ್ದ ಇದಿರಿಂಗೆ ಒಡಲೆಡೆಗೊಡದ ಅಗಮ್ಯಂಗೆ ಪಡಿಪುಚ್ಚವಿಲ್ಲ, ಕುಂಭೇಶ್ವರಲಿಂಗದಲ್ಲಿದ್ದ ಜಗನ್ನಾಥನನರಿದವಂಗೆ.
--------------
ಹೊಡೆಹುಲ್ಲ ಬಂಕಣ್ಣ
ಬೆಳಗೆಂದಡೂ ಒಂದರಲ್ಲಿ ಪ್ರಜ್ವಲಿಸಿ ತೋರುವುದಕ್ಕೆ ಒಡಲಾಯಿತ್ತು, ಆರಿವೆಂದಡೂ ಒಂದ ಕುರಿತು ಒಂದಿಲ್ಲ ಎಂಬುದಕ್ಕೆ ಬುಡವಾಯಿತ್ತು. ಇಂತೀ ನಿಶ್ಚಯವ ತಿಳಿದು ನಿಬಿಡನಾದವಂಗೆ ಗಜಬಜೆ, ಕೂಜನ ಒಂದೂ ಇಲ್ಲವೆಂದೆ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಒಂದಾಸೆಯ ಕುರಿತು ಸರ್ವಮಾತಿಂಗೆ ಒಡಲಾಯಿತ್ತು, ಒಂದಾಸೆ ಅರತು ನಿಂದಡೆ ಈಶಮೂರ್ತಿ ತಾನಾಗಿಪ್ಪ. ಇಂತೀ ಉಭಯದ ಆಸೆಯಲ್ಲಿ ಘಾಸಿಯಾಗುತ್ತ, ಮಾತಿನ ಮಾಲೆ ಬೇಡ. ಆಸೆಯ ಪಾಶವ ಹರಿದು ಈಷಣತ್ರಯವ ಕಿತ್ತು, ನಿರ್ಜಾತನಾಗಿದ್ದಲ್ಲಿ ಸದಾಶಿವಮೂರ್ತಿಲಿಂಗವು ತಾನೆ.
--------------
ಅರಿವಿನ ಮಾರಿತಂದೆ
ಉಂಟೆಂಬಲ್ಲಿಯೆ ಜ್ಞಾನಕ್ಕೆ ದೂರ. ಇಲ್ಲಾ ಎಂಬಲ್ಲಿಯೆ ಸಮಯಕ್ಕೆ ದೂರ. ತನುವಿಗೆ ಬಂದ ಪ್ರಾಪ್ತಿಯ ಅನುಭವಿಸುವುದಕ್ಕೆ ಒಡಲಾಯಿತ್ತು. ಪ್ರಾಪ್ತಿಯನುಂಬುದು ಘಟವೋ, ಆತ್ಮನೋ ? ಒಂದನಹುದು, ಒಂದನಲ್ಲಾ ಎನಬಾರದು. ಇಲ್ಲಾ ಎಂದಡೆ ಕ್ರೀವಂತರಿಗೆ ಭಿನ್ನ. ಅಹುದೆಂದಡೆ ಅರಿದಾತಂಗೆ ವಿರೋಧ. ತೆರಪಿಲ್ಲದ ಘನವ ಉಪಮಿಸಲಿಲ್ಲ. ಕಾಮಧೂಮ ಧೂಳೇಶ್ವರನ ಮುಂದೆ ಹೋಗಲಿಲ್ಲ, ಹಿಂದೆ ಉಳಿಯಲಿಲ್ಲ.
--------------
ಮಾದಾರ ಧೂಳಯ್ಯ
ಪೃಥ್ವಿ ಅಪ್ಪು ತೇಜ ವಾಯು ಆಕಾಶ ಪಂಚಭೌತಿಕಕ್ಕೆ ಮುನ್ನವೆ ವಿಷ್ಣುಮಯ ಹುಟ್ಟಿದ ಠಾವುದು ಕಾಲಾಂಧರ ಕಲ್ಪಿತಕ್ಕೆ ಮುನ್ನವೆ ಬ್ರಹ್ಮನ ಉತ್ಪತ್ಯದ ನೆಲೆ ಯಾವುದು? ರೂಪು ನಿರೂಪಿಗೆ ಮುನ್ನವೆ ರುದ್ರನ ಲೀಲಾಭಾವವಾದಠಾವಾವುದು? ಇಂತಿವೆಲ್ಲವು ಅನಾದಿ ವಸ್ತು ಆದಿಶಕ್ತಿಯ ಈ ಈಚೆಯಿಂದಾದ ದೇವವರ್ಗ ಸಂತತಿ. ಯುಗಜುಗಂಗಳಲ್ಲಿ ಪರಿಭ್ರಮಣಕ್ಕೆ ತಿರುಗುವುದಕ್ಕೆ ಒಡಲಾಯಿತ್ತು. ಇಂತೀ ಭೇದಂಗಳನರಿತು ಘನಕಿರಿದಿಂಗೆ ತೆರಪುಂಟೆ ಅಯ್ಯಾ? ಸೂರಾಳ ವಿರಾಳ ನಿರಾಳಕ್ಕೆ ಮುನ್ನವೆ ಅಭೇದ್ಯ ಅಗೋಚರಮಯ ಲೋಕಕ್ಕೆ ಸದಾಶಿವಮೂರ್ತಿಲಿಂಗವೊಂದೆಯಲ್ಲದೆ ಹಲವು ಇಲ್ಲಾ ಎಂದೆ.
--------------
ಅರಿವಿನ ಮಾರಿತಂದೆ
-->