ಅಥವಾ

ಒಟ್ಟು 5 ಕಡೆಗಳಲ್ಲಿ , 4 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಿಲಾಮೂರ್ತಿ ಸ್ಥಾವರ ಶಿವಕುಲ ದೈವಕೆಲ್ಲಕೂ ಒಲವರದಿಂದ ಹೋಹಲ್ಲಿ, ಆ ದೈವದ ಬಲುಮೆಯ ಅವನ ಕುಲವಾಸಾ ಬಲುಮೆಯ ತೆರನೊ! ಈ ಹೊಲಬ ತಿಳಿದು, ಗುರು ಚರವಪ್ಪ ವಸ್ತುಸಂಸಾರದ ಒಡಲೆಳೆಗಾಗಿ, ಭಕ್ತನ ನೆಲೆಹೊಲವಾಸಕ್ಕೆ ಹಲುಬಿ ಬರಬಹುದು ? ಇದು ವಸ್ತುವಿನ ನೆಲೆಯಿಲ್ಲ. ಕರ್ತೃ ಸಂಬಂಧಕ್ಕೆ ಸಲ್ಲ, ಮಹಾಮಹಿಮ ಕಲ್ಲೇಶ್ವರಲಿಂಗ ಅವರುವನೊಲ್ಲ.
--------------
ಹಾವಿನಹಾಳ ಕಲ್ಲಯ್ಯ
ಅಪ್ಪು ತುಂಬಿದ ಕುಂಭದಲ್ಲಿ ಕಿಚ್ಚು ಹಾಕಿ ಕಟ್ಟಿಗೆಯನಿಕ್ಕಿ ಉರುಹಲಿಕ್ಕೆ ಆ ಅಪ್ಪುವ ಸುಟ್ಟುದುಂಟೆ ಕಿಚ್ಚು ? ಆ ಕುಂಭದ ತಪ್ಪಲಿನಲ್ಲಿ ಕಟ್ಟಿಗೆಯನಿಕ್ಕಿ ಉರುಹಲಿಕ್ಕೆ ಕುಂಭದ ಲೆಪ್ಪದ ಮರೆಯಲ್ಲಿ ಅಪ್ಪುವ ಸುಡಬಲ್ಲುದೆ ? ಇದು ಕಾರಣ ಕ್ರೀಯ ಮರೆಯಲ್ಲಿರ್ದ ನಿಃಕ್ರೀ ಶಿಲೆಯ ಮರೆಯಲ್ಲಿರ್ದ ನೆಲೆ ವಸ್ತುವ ಚಿತ್ತದ ಒಲವರದಿಂದ ಅರಿಯಬೇಕು ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವನರಿವಲ್ಲಿ.
--------------
ಪ್ರಸಾದಿ ಭೋಗಣ್ಣ
ಅಂಗಕ್ರಿಯೆಯನರಿವಲ್ಲಿ ಸ್ಥಾಣುವಿನ ಬಾಯ ತಿಲದಂತೆ, ಆತ್ಮನ ಕಳೆಯ ತಿಳಿವಲ್ಲಿ ಶಿಲೆಯಲ್ಲಿರ್ದ ಬಿಂದು ಒಲವರದಿಂದ ಜಾರುವಂತೆ, ಆ ಅರಿವು ಮಹದಲ್ಲಿ ಬೆರಸುವಾಗ, ವಾರಿಶಿಲೆ ನೋಡ ನೋಡಲಿಕೆ ನೀರಾದಂತೆ ಇರಬೇಕು. ಕಾಯವಶದಿಂದ ಕರ್ಮವ ಮೀರಿ, ಕರ್ಮವಶದಿಂದ ವರ್ಮವಶಗತನಾದಲ್ಲಿ, ಅದೆ ಕಾಯವೆರಸಿ ಎಯ್ದಿದ ಕೈಲಾಸ. ಆ ಭಾವವ ನಿಮ್ಮಲ್ಲಿ ನೀವೇ ತಿಳಿದುಕೊಳ್ಳಿ ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ
--------------
ಮೋಳಿಗೆ ಮಹಾದೇವಿ
ಭಕ್ತಂಗೆ ಮಾಹೇಶ್ವರಸ್ಥಲ, ಪ್ರಸಾದಿಗೆ ಭಕ್ತಸ್ಥಲ. ಮಾಹೇಶ್ವರಂಗೆ ಪ್ರಾಣಲಿಂಗಿಸ್ಥಲ, ಶರಣಂಗೆ ಪ್ರಸಾದಿಸ್ಥಲ. ಪ್ರಾಣಲಿಂಗಿಗೆ ಐಕ್ಯಸ್ಥಲ, ಐಕ್ಯಂಗೆ ಭಕ್ತನ ವಿಶ್ವಾಸವನರಿತು ಮಾಹೇಶ್ವರನ ಪ್ರಸನ್ನತೆಯ ಕಂಡು ಪ್ರಸಾದಿಯ ಪರಿಪೂರ್ಣತ್ವವನರಿದು ಪ್ರಾಣಲಿಂಗಿಯ ಉಭಯವ ತಿಳಿದು ನಿಂದುದ ಕಂಡು, ಇಂತೀ ಚತುಷ್ಟಯ ಭಾವ ಏಕವಾಗಿ ಶರಣನ ಸನ್ಮತದಲ್ಲಿ ಅಡಗಿ, ಒಡಗೂಡಿದಲ್ಲಿ ಐಕ್ಯಂಗೆ ಬೀಜನಾಮ ನಿರ್ಲೇಪ, ಇಂತೀ ಸ್ಥಲಭಾವ. ಪಶುವಿನ ಪಿಸಿತದ ಕ್ಷೀರವ, ಶಿಶುವಿನ ಒಲವರದಿಂದ ತೆಗೆವಂತೆ ಆ ಕ್ಷೀರದ ಘೃತವ, ನಾನಾ ಭೇದಂಗಳಿಂದ ವಿಭೇದಿಸಿ ಕಾಬಂತೆ ಭಕ್ತಂಗೆ ವಿಶ್ವಾಸ, ಮಾಹೇಶ್ವರಂಗೆ ಫಲ, ಪ್ರಸಾದಿಗೆ ನಿಷೆ*, ಪ್ರಾಣಲಿಂಗಿಗೆ ಮೂರ್ತಿಧ್ಯಾನ, ಶರಣಂಗೆ ನಿಬ್ಬೆರಗು, ಐಕ್ಯಂಗೆ ಈ ಐದು ಲೇಪವಾದ ನಿರ್ನಾಮ. ಇಂತೀ ಷಟ್‍ಸ್ಥಲವ ನೆಮ್ಮಿ ಕಾಬುದು ಒಂದೆ ವಿಶ್ವಾಸ. ಸಂಗನಬಸವಣ್ಣಪ್ರಿಯ ಬ್ರಹ್ಮೇಶ್ವರಲಿಂಗವನು ಅರಿದವನಿಗಲ್ಲದೆ ಸಾಧ್ಯವಲ್ಲ ನೋಡಾ.
--------------
ಬಾಹೂರ ಬೊಮ್ಮಣ್ಣ
ಷಡ್ದರ್ಶನಕ್ಕೆ ದೈವವೊಂದೆಂದಡೆ ವಾದಕ್ಕೆ ಮೂಲ ಹಲವೆಡೆಯೆಂದಡೆ ಸಮಯಕ್ಕೆ ದೂರ. ತಮ್ಮ ಒಲವರದಿಂದ ಕುಲದೈವ ಫಲಿಸುವಂತೆ ಏಕಛತ್ರವ ಕೊಟ್ಟು ರಾಣುವೆಗೆ ಹೊಲಬಿಗರ ಮಾಡಿದಂತೆ ದೇವನೊಬ್ಬ ತ್ರೈಮೂರ್ತಿಗಳಿಗೆ ಭೇದವ ಕೊಟ್ಟುಯಿಪ್ಪುದ ನಿಮ್ಮ ವೇದದ ಕಡೆಯಲ್ಲಿ ನೋಡಿಕೊಳ್ಳಿ. ಶಾಸ್ತ್ರದ ಸಂದನಿಯಲ್ಲಿ ಕಂಡುಕೊಳ್ಳಿ. ಪುರಾಣದ ಮೊದಲಪ್ರಸಂಗದಲ್ಲಿ ಸಂದೇಹವಿಡಿಸಿಕೊಳ್ಳಿ. ಆಗಮಂಗಳಲ್ಲಿ ತಿಳಿದು ನಾದಬಿಂದುಕಳೆಗೆ ಆತನಾರೆಂಬುದ ಕಂಡುಕೊಳ್ಳಿ. ಹದಿನೆಂಟುದೋಷಂಗಳಲ್ಲಿ ತ್ರಿವಿಧಮಲಂಗಳಲ್ಲಿ ತ್ರಿಜಾತಿ ವಂಶಭೇದದಲ್ಲಿ ತ್ರಿಗುಣಾತ್ಮಕನಾರೆಂಬುದ ತಿಳಿದು ಆದಿಯಿಂದಿತ್ತ ಅನಾದಿಯಿಂದತ್ತ ಲೀಲೆಯಿಂದಿತ್ತ ಸ್ವಯಂಭುವಿಂದತ್ತ ಈ ವಿಭೇದಕ್ಕೆ ಭೇದಕನಾರೆಂಬುದನರಿತು ಅಭೇದ್ಯವಸ್ತು ಭಕ್ತಿ ಕಾರಣದಿಂದ ವೇದ್ಯನಾಗಿ ಬಂದು ಜಗಹಿತಾರ್ಥವಾಗಿ ಬ್ರಹ್ಮಂಗೆ ಪ್ರಜಾಪತಿ ವಿಷ್ಣುವಿಂಗೆ ಯೋನಿ ಸಂಭವ, ರುದ್ರಂಗೆ ಬಿಂದು ಕಳೆಯಂ ಕೊಟ್ಟು ಮರೀಚಿಕ ಪ್ರಳಯರುದ್ರಂಗೆ ಸಂಹಾರವನಿತ್ತು ಇಂತಪ್ಪ ಭೇದದಲ್ಲಿ ವೇದ್ಯವಪ್ಪ ವಸ್ತುವ ನೋಡಿಕೊಳ್ಳಿ. ಇದರಿಂದ ವೆಗ್ಗಳವುಂಟೆಂದಡೆ ಸೋಧಿಸಿಕೊಂಬ ಶತಸಹಸ್ರ ಅವತಾರಂಗಳಿಂದೀಚೆ ಆದ ದಶ ಅವತಾರಕ್ಕೆ ಒಳಗಾದವನ ತಪ್ಪಿಂದ ಶಿರಸ್ಸನ್ನು ಒಪ್ಪಗೆಡಿಸಿದವನ ಬೌದ್ಭನಾಗಿ ಭ್ರಮೆಯಿಂದ ನಾಣುಗೆಟ್ಟು ನಾಚಿಕೆಯಿಲ್ಲದವನ ತೊಡೆ, ಜಠರದಲ್ಲಿ ಮಡದಿಯರವೊಡಗೂಡಿಯಿಪ್ಪವನ ಇಂತೀ ಇವರನು ಅಡಿಗೆರಗಿಸಿಕೊಂಬ ಒಡೆಯ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವಲ್ಲದಿಲ್ಲಾ.
--------------
ಪ್ರಸಾದಿ ಭೋಗಣ್ಣ
-->