ಅಥವಾ

ಒಟ್ಟು 10 ಕಡೆಗಳಲ್ಲಿ , 7 ವಚನಕಾರರು , 10 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸೂರ್ಯನ ಉದಯ ತಾವರೆಗೆ ಜೀವಾಳ, ಚಂದ್ರಮನುದಯ ನೆ್ದುಲೆಗೆ ಜೀವಾಳ. ಕೂಪರಠಾವಿನಲ್ಲಿ ಕೂಟ ಜೀವಾಳವಯ್ಯಾ, ಒಲಿದ ರಾವಿನಲ್ಲಿ ನೋಟ ಜೀವಾಳವಯ್ಯಾ. ಕೂಡಲಸಂಗನ ಶರಣರ ಬರವೆನಗೆ ಪ್ರಾಣ ಜೀವಾಳವಯ್ಯಾ. 367
--------------
ಬಸವಣ್ಣ
ಕಂಗಳೇಕೆ `ನೋಡಬೇಡಾ' ಎಂದರೆ ಮಾಣವು ? ಶ್ರೋತ್ರಂಗಳೇಕೆ `ಆಲಿಸಬೇಡಾ' ಎಂದರೆ ಮಾಣವು ? ಜಿಹ್ವೆ ಏಕೆ `ರುಚಿಸಬೇಡಾ' ಎಂದರೆ ಮಾಣವು (ದು ?) ನಾಸಿಕವೇಕೆ `ವಾಸಿಸಬೇಡಾ' ಎಂದರೆ ಮಾಣವು ? (ದು ?) ತ್ವಕ್ಕು ಏಕೆ `ಸೋಂಕಬೇಡಾ' ಎಂದರೆ ಮಾಣವು ? (ದು ?)_ ಈ ಭೇದವನರಿದು ನುಡಿಯಲು ಸಮಧಾತುವಾಯಿತ್ತು! ಗುಹೇಶ್ವರಲಿಂಗಕ್ಕೆ ಒಲಿದ ಕಾರಣ, ಅಭಿಮಾನ ಲಜ್ಜೆ ಬೇಸತ್ತು ಹೋಯಿತ್ತು.
--------------
ಅಲ್ಲಮಪ್ರಭುದೇವರು
ಮಾಡುವ ಭಕ್ತಂಗೆ, ಒಲಿದ ದೇವಂಗೆ ಭೇದವುಂಟೆ ಅಯ್ಯಾ ? ಕಾಯದೊಳಗೆ ಕಾಯವಾಗಿಪ್ಪ, ಪ್ರಾಣದೊಳಗೆ ಪ್ರಾಣವಾಗಿಪ್ಪ. ಅರಿದೆಹೆನೆಂದಡೆ ತಾನೆಯಾಗಿಪ್ಪ. ಅರಸಿ ಬಯಸಿದಡೆ ನಡೆದುಬಹನು. ಕಲಿದೇವರದೇವನ ಬರವನೀಗಳೆ ತೋರಿ ಕೊಟ್ಟಿಹೆನು ಕೇಳಾ, ಸಂಗನಬಸವಣ್ಣ.
--------------
ಮಡಿವಾಳ ಮಾಚಿದೇವ
ನಿಮ್ಮ ಶರಣನು ಲಿಂಗಭರಿತನು, ವಿಚಾರಿಸಿ, ಅರಿದು, ಧ್ಯಾನದಿಂದ ಜಪಿಸಿ, ಆ ಮಹಾವಸ್ತುವನು ಕಂಡು ಒಲಿದೊಲಿಸಿ, ಕೂಡಿ ಸುಖಿಸಿಹೆನೆಂಬನ್ನೆವರ ಶ್ರೀಗುರುಸ್ವಾಮಿಯ ಕರುಣಾಮೃತಸಾಗರ ಮೇರೆವರಿದು ವಿಚಾರಿಸಿ ಶಿವನಾಯಿತ್ತು, ಅರಿವು ಶಿವನಾಯಿತ್ತು; ಜ್ಞಾತೈ ಜ್ಞಾನ ಜ್ಞೇಯ ಶಿವನಾಯಿತ್ತು, ಜಪಮಂತ್ರ ಶಿವನಾಯಿತ್ತು, ಜಪಿಸುವ ಜಿಹ್ವೆ ಶಿವನಾಯಿತ್ತು, ಕಂಡೆಹೆನೆಂಬ ಕಣ್ಣು ಶಿವನಾಯಿತ್ತು. ಈ ಪರಿ ನೋಡ ನೋಡಲು ಮತ್ತೆ ಚೋದ್ಯ ಪ್ರಾಣಲಿಂಗವಾಗಿ ಸದ್ಗುರು ತಾನೆ ಕೃಪೆಮಾಡಿ ಕರಸ್ಥಲಕ್ಕೆ ಬಿಜಯಂಗೈದು ಪ್ರಾಣಲಿಂಗವಾದನು, ಕಾಯಲಿಂಗವಾದನು. ಮನ ಬುದ್ಧಿ ಚಿತ್ತ ಅಹಂಕಾರ ಜ್ಞಾನ ಭಾವವೆಲ್ಲ ಲಿಂಗವಾಯಿತ್ತು. ಸರ್ವಾಂಗಲಿಂಗವಾಗಿ ಸಲಹಿದನು. ಶ್ರೀಗುರುಲಿಂಗವು ಒಲಿದೊಲಿಸಿ ಕೂಡುವ ಪರಿ ಎಂತಯ್ಯಾ? ಒಲಿಸುವ ಪರಿ ದಾಸೋಹ, ಒಲಿದ ಪರಿ ಪ್ರಸಾದ, ಕೂಟದ ಪರಿ ನಿರ್ವಂಚಕತ್ವ, ಒಲಿದೊಲಿಸಿ ಕೂಡಿದ ಪರಿ ಪರಿಣಾಮವಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಕಾಯಪುರವೆಂಬ ಪಟ್ಟಣದೊಳಗೆ; ಮನವೆಂಬ ಅರಸು, ತ್ರಿಗುಣವೆಂಬ ಪ್ರಧಾನರು, ವಶೀಕರಣವೆಂಬ ಸೇನಬೋವ ಸಂಚಲವೆಂಬ ತೇಜಿ, ಅಷ್ಟಮದವೆಂಬ ಆನೆ, ಈರೈದು (ಮನ್ನೆಯ) ನಾಯಕರು, ಇಪ್ಪತ್ತೈದು ಪ್ರಜೆ, ನೂರನಾಲ್ವತ್ತೆಂಟು ದೇಹವಿಕಾರವೆಂಬ ಪರಿವಾರ, ಈ ಸಂಭ್ರಮದಲ್ಲಿ ಮನೋರಾಜ್ಯಂಗೆಯ್ಯುತ್ತಿರಲು_ ಇತ್ತ ಶೂನ್ಯವೆಂಬ ಪಟ್ಟಣದೊಳಗೆ ಅನಾಮಿಕನೆಂಬ ಲಿಂಗದರಸು, ಅಜಾತನೆಂಬ ಶರಣ ಪ್ರಧಾನಿ ಪ್ರಪಂಚವೆಂಬ ದಳ ಮುರಿದು ಮೂವರಾಟ ಕೆಟ್ಟಿತ್ತು, ಅರಸು ಕೂಡಲಚೆನ್ನಸಂಗಯ್ಯನು, ಒಲಿದ ಕಾರಣ.
--------------
ಚನ್ನಬಸವಣ್ಣ
ಭಕ್ತನ ನಡೆ ಶುದ್ಧ , ಭಕ್ತನ ನುಡಿ ಶುದ್ಧ , ಭಕ್ತನ ತನು ಶುದ್ಧ , ಭಕ್ತನ ಮನ ಶುದ್ಧ , ಭಕ್ತನ ಭಾವ ಶುದ್ಧ , ಭಕ್ತನ ಸರ್ವಕ್ರಿಯೆಯೆಲ್ಲ ಶುದ್ಧ ಅಖಂಡೇಶ್ವರಾ, ನೀ ಒಲಿದ ಸದ್‍ಭಕ್ತನ ಕಾಯವೇ ಕೈಲಾಸವಯ್ಯ.
--------------
ಷಣ್ಮುಖಸ್ವಾಮಿ
ಆಯುಷ್ಯವ ಹಿರಿದಾಗಿ ಕೊಟ್ಟಡೆ, ಲಿಂಗ ಒಲಿದುದಲ್ಲ. ಭಾಷೆಯ ಹಿರಿದಾಗಿ ಕೊಟ್ಟಡೆ, ಲಿಂಗ ಒಲಿದುದಲ್ಲ. ಅಷ್ಟಮಹದೈಶ್ವರ್ಯವ ಹಿರಿದಾಗಿ ಕೊಟ್ಟಡೆ ಲಿಂಗ ಒಲಿದುದಕ್ಕೆ ಕುರುಹಲ್ಲ. ಕಾಯ ಬೆರಸಿ ಕೈಲಾಸಕ್ಕೆ ಕೊಂಡು ಹೋದರೂ ಲಿಂಗ ಒಲಿದುದಲ್ಲ. ಇವೆಲ್ಲಾ ಪೂಜಾ ಫಲಂಗಳು, ಕೈಕೂಲಿಕಾರತನವೈಸೆ. ಲಿಂಗ ಒಲಿದ ಪರಿ: ಗುರುಲಿಂಗಜಂಗಮ ಒಂದೆಂದು ಅರಿದು ನಿಶ್ಚಯ ಭಾವದಿಂ ತನು ಮನ ಧನವಲ್ಲಿಯೇ ಅರ್ಪಿಸುವುದು ಲಿಂಗ ಒಲಿದುದು. ಕಾಯಭಾವವಳಿದು ಲಿಂಗವೆಂದು ಭಾವಿಸಿ ಭಾವಸಿದ್ಧಿಯಾದುದು ಲಿಂಗ ಒಲಿದುದು. ಲಿಂಗವಲ್ಲದೆ ಇನ್ನಾವುದು ಘನ ? ಎದರಿದುವೆ ಲಿಂಗ ಒಲಿದುದು. ಲಿಂಗವಂತನೆ ಲಿಂಗವೆಂದರಿದುದು ಲಿಂಗ ಒಲಿದುದು. ಸದಾಚಾರ ಲಿಂಗ ಒಲಿದುದು. ನಿರ್ವಂಚನೆ ಲಿಂಗ ಒಲಿದುದು. ಸರ್ವಭೋಗವನು ಲಿಂಗವಂತರಿಗೆ ಭೋಗಿಸಲಿತ್ತು ಸಮಭೋಗವಲ್ಲದೆ ಲಿಂಗವಂತಗೆ ವಿಶೇಷ ಭೋಗ ತಾತ್ಪರ್ಯ ಮೋಹವಾಗದಡೆ ಲಿಂಗ ಒಲಿದುದು. ಪರಧನ ಪರಸ್ತ್ರೀ ಪರದ್ರವ್ಯ ಪರದೈವದಲ್ಲಿ ವರ್ತಿಸದಿದ್ದಡೆ ಲಿಂಗ ಒಲಿದುದು. ಲಿಂಗದಲ್ಲಿ ಭಕ್ತನಲ್ಲಿ ಅವಿನಾಭಾವವಳವಟ್ಟು ಭಾವಶುದ್ಧವಾಗಿ ಸರ್ವಕ್ರೀ ಲಿಂಗಕ್ರೀಯಾದಡೆ ಲಿಂಗ ಒಲಿದುದು ದೃಷ್ಟವಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಒಲಿದ ಗಂಡನೊಮ್ಮೆ ಒಲ್ಲದಿಪ್ಪ ಕಂಡವ್ವಾ. ತಪ್ಪೆನ್ನದು, ತಪ್ಪೆನ್ನದು ! ತನು ಮನ ಧನದಲ್ಲಿ ಮಾಟಕೂಟವೆಂದರಿಯದ ತಪ್ಪೆನ್ನದು, ತಪ್ಪೆನ್ನದು ! ಕಡೆುಲ್ಲದ ಹುಸಿ ಎನ್ನದು, ಕೂಡಲಸಂಗಮದೇವಾ. 315
--------------
ಬಸವಣ್ಣ
ಉರಿಯೊಳಗಣ ಕರ್ಪುರಕ್ಕೆ ಕರಿಯುಂಟೆ ಅಯ್ಯಾ ಬಯಲ ಮರೀಚಿಜಲಕ್ಕೆ ಕೆಸರುಂಟೆ ವಾಯುವನಪ್ಪಿದ ಪರಿಮಳಕ್ಕೆ ನಿರ್ಮಾಲ್ಯವುಂಟೆ ನೀವು ನೆರೆ ಒಲಿದ ಬಳಿಕ ಎನಗೆ ಭವವುಂಟೆ ಕೂಡಲಸಂಗಮದೇವಾ, ನಿಮ್ಮ ಚರಣಕಮಲದೊಳಗೆನ್ನನಿಂಬಿಟ್ಟುಕೊಳ್ಳಯ್ಯಾ.
--------------
ಬಸವಣ್ಣ
ಕೈಲಾಸವೆಂಬುದು ಬೇರಿಲ್ಲಾ ಕಾಣಿರೋ ! ಲಿಂಗಾಂಗಸಂಗಮರಸದಲ್ಲಿಪ್ಪ ಶರಣನ ಅಂತರಂಗದಲ್ಲಿ ಕೈಲಾಸವಿಪ್ಪುದು. ಎಂತಿಪ್ಪುದೆಂದರೆ ಹೇಳುವೆ ಕೇಳಿರಣ್ಣಾ : ಆಚಾರ-ಕ್ರಿಯೆಗಳೆಂಬ ಕೋಟೆ-ಕೊತ್ತಳಂಗಳು, ಶುಚಿ-ಶೀಲಗಳೆಂಬ ಅಗಳಂಗಳು, ಪುಣ್ಯ-ಪಾಪಗಳೆಂಬೆರಡ ನೋಡಿ ನಡೆದುದೆ ಕೈಲಾಸದ ಹೆಬ್ಬಾಗಿಲು ಕಾಣಿರೊ. ಧರ್ಮಸಂಚೆಗಳೆಂಬ ದಾರುವಂದಲಗಳು, ಕರ್ಮವ ಮೆಟ್ಟಿ ನಡೆದುದೆ ಹೊಸ್ತಿಲಸ್ತರ. ಶಿವಭಕ್ತಿ ಕೀರ್ತಿವಡೆದ ವಾರ್ತೆಯೆಂಬ ಹುಲಿಮುಖ ಡೆಂಕಣಿ ಮೇರುವ ಕಾಣಿರೊ. ಜ್ಞಾನ ಸುಜ್ಞಾನದೊಳು ಬೆರಸುತಿಪ್ಪುದೆ ಸೋಮಬೀದಿ ಸೂರ್ಯಬೀದಿ ಕಾಣಿರೊ. ಅರುವೆಂಬುದನಾಚರಿಸುವುದೆ ಶಿವ ಮೂರ್ತವಮಾಡುವ ಸಿಂಹಾಸನ ಕಾಣಿರೊ. ಮರವೆಂಬ ಮಾಯವ ಮೆಟ್ಟಿ ನಡೆದುದೆ ಸಿಂಹಾಸನವನೇರುವುದಕ್ಕೆ ಪಾವಟಿಗೆ ಕಾಣಿರಣ್ಣ. ಇಂತಪ್ಪ ಶೈಂಗಾರವೆಲ್ಲ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭು ಒಲಿದ ಶಿವಶರಣನಂತರಂಗದಲ್ಲೆ ಇದ್ದಿತ್ತು.
--------------
ಹೇಮಗಲ್ಲ ಹಂಪ
-->