ಅಥವಾ

ಒಟ್ಟು 12 ಕಡೆಗಳಲ್ಲಿ , 9 ವಚನಕಾರರು , 11 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಮ್ಮ ತಂದಿ ಸತ್ತದ್ದು ನೋಡುತ್ತಿದ್ದಿ, ನಿಮ್ಮ ತಂದಿಯ ತಂದಿ ಸತ್ತದ್ದು ಕಾಣುತ್ತಿದ್ದಿ, ನಿಮ್ಮ ಅಜ್ಜ ಪಣಜ ಸತ್ತದ್ದು ಕೇಳುತ್ತಿದ್ದಿ, ನಿಮ್ಮ ತಾಯಿ ಸತ್ತದ್ದು ನೋಡುತ್ತಿದ್ದಿ, ನಿಮ್ಮ ತಾಯಿಯ ತಾಯಿ ಸತ್ತದ್ದು ಕಾಣುತ್ತಿದ್ದಿ, ನಿಮ್ಮ ತಾಯಿಯ ಅಜ್ಜಿ ಪಣಜಿ ಸತ್ತದ್ದು ಕೇಳುತ್ತಿದ್ದಿ. ನಿನ್ನ ಸತಿಸುತರು ಒಡಹುಟ್ಟಿದ ಬಂಧುಗಳು ಸ್ನೇಹಿತರು ಬೀಗರು ಮೊದಲಾದ ಸಕಲಲೋಕಾದಿಲೋಕಂಗಳು ನಿಮ್ಮ ಕಣ್ಣಮುಂದೆ ವೃಕ್ಷದ ಪರ್ಣಗಳು ಉದುರಿದ ಹಾಗೆ ಸಕಲರು ಅಳಿದುಹೋಗುವುದ ನೋಡುತ್ತಿದ್ದಿ. ಇದಲ್ಲದೆ ದೃಷ್ಟಾಂತ: ಒಬ್ಬ ರೋಮಜಋಷಿಗೆ ಮೂರುವರೆಕೋಟಿ ರೋಮಂಗಳುಂಟು, ಅಂತಹ ಋಷಿಗೂ ಕೃತಯುಗ, ತ್ರೇತಾಯುಗ, ದ್ವಾಪರ, ಕಲಿಯುಗವೆಂಬ ಚತುರ್ಯುಗ ಪ್ರಳಯವಾದಲ್ಲಿ ಒಂದು ರೋಮ ಉದುರುವದು. ಹೀಗೆ ಈ ಪರಿಯಲ್ಲಿ ಮೂರುವರೆಕೋಟಿ ರೋಮಂಗಳು ಉದುರಿದಲ್ಲಿ ಆ ರೋಮಋಷಿಯೆಂಬ ಮುನೀಶ್ವರನು ಪ್ರಳಯವಾಗುವನು. ಮತ್ತೆ ದೇವಲೋಕದ ಸನಕ ಸನಂದಾದಿ ಮುನಿಜನಂಗಳು ಅನಂತಕೋಟಿ ಋಷಿಗಳು ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವ ಮೊದಲಾದ ತೆತ್ತೀಸಕೋಟಿ ದೇವರ್ಕಳು ಇಂತಿವರೆಲ್ಲರು ಎತ್ತಲಾನುಕಾಲಕ್ಕೆ ಮರಣಕ್ಕೆ ಒಳಗಾದರು. ವೇದಾಗಮ ಶಾಸ್ತ್ರ ಪುರಾಣ ಶ್ರುತಿ ಪ್ರಮಾಣಗಳಿಂದ ಮತ್ತೆ ಹರ, ಗುರು, ಪುರಾತನರ ವಾಕ್ಯದಿಂದ ನಿಮ್ಮ ಉಭಯ ಕರ್ಣದಿಂ ಕೇಳುತ್ತಿದ್ದಿ. ಇಂತೀ ಎಲ್ಲವನು ಕಂಡು ಕೇಳಿ ಗಾಢನಿದ್ರೆಯ ಮನುಷ್ಯನ ಹಾಂಗೆ ನಿನ್ನ ನಿಜಸ್ವರೂಪವ ಮರದು ತ್ರಿವಿಧಮಲವ ಕಚ್ಚಿ ಶುನಿ ಶೂಕರನ ಹಾಗೆ ಕಚ್ಚಿ ಕಡಿದಾಡಿ ಸತ್ತು ಹೋಗುವ ವ್ಯರ್ಥಗೇಡಿ ಮೂಳ ಹೊಲೆಮಾದಿಗರ ಕಿವಿ ಹರಿದು, ಕಣ್ಣುಗುಡ್ಡಿಯ ಮೀಟಿ, ನೆತ್ತಿಯ ಮೇಲೆ ಮೂರು ಪಟ್ಟೆಯನೆ ಕೆತ್ತಿ ಅವನ ಮುಖದ ಮೇಲೆ ಹೆಂಡಗಾರನ ಮುಖದಿಂದ ಲೊಟ್ಟಲೊಟ್ಟನೆ ಉಗುಳಿಸಿ ಪಡುವಲದಿಕ್ಕಿಗೆ ಅಟ್ಟೆಂದ ಕಾಣಾ ವೀರಾದ್ಥಿವೀರ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಮಾಯೆ ಮಹಾಸಂಚಲವೆಂಬ ಸುಳಿಗಾಳಿಯೊಳು ಸಿಕ್ಕಿದ ತರಗೆಲೆಯಂತೆ, ತಳಹಳಗೊಳ್ಳುತ್ತಿದಿತೀ ಜಗವೆಲ್ಲವು ಎನಗಿನ್ನೆಂತೊ, ಎನಗಿನ್ನೆಂತಯ್ಯಾ. ಬಲ್ಲೆನೆಂಬವರ ಬಾಯ ಟೊಣೆಯಿತ್ತು ಮಾಯೆ. ಆಗಮಿಕರ ಮೂಗ ಕೊಯ್ಯಿತ್ತು ಮಾಯೆ. ಅನುಭಾವಿಗಳೆಲ್ಲರೂ ಮನವಿಕಾರಕ್ಕೆ ಒಳಗಾದರು. ಅರಿದೆನೆಂಬವರೆಲ್ಲರೂ ಮರಹಿಂಗೆ ಬೀಜವಾದರು. ಬ್ರಹ್ಮಿಗಳೆಲ್ಲರೂ ಹಮ್ಮಿಂದ ಹಗರಣದ ಮರುಳಂಗಳಾದರು ವಿರಕ್ತರೆಲ್ಲರೂ ಯುಕ್ತಿಗೆಟ್ಟು ಭವಮಾಲೆಗೊಳಗಾದರು. ನಿರ್ವಾಣಿಗಳೆಲ್ಲರೂ ಸೆರೆಸಂಕಲೆಗೊಳಗಾದರು. ಯೋಗಿಗಳೆಲ್ಲರೂ ವಿಕಳವೆಂಬ ರೋಗಕ್ಕೆ ಒಳಗಾದರು. ತಪಸಿಗಳೆಲ್ಲರೂ ಕಪಟ ಕಳವಳಕ್ಕೊಳಗಾದರು. ಧ್ಯಾನ ಮೌನ ವ್ರತ ನಿತ್ಯ ನೇಮ ಕರ್ಮ ಕ್ರಿಯೆಗಳು ವಸ್ತುವ ಮರೆದು, ಮಾಯಾಧೂಳಿನೊಳಗೆ ಸಿಕ್ಕಿ ವಿಕಳತೆಗೊಂಡು, ನೆನೆವ ಮನ, ವಾಸಿಸುವ ಘ್ರಾಣ, ನೋಡುವ ನೇತ್ರ, ನುಡಿವ ನಾಲಗೆ, ನಡೆವ ಪಾದದ್ವಯಗಳೆಲ್ಲ ಭ್ರಮೆಗೊಳಗಾಯಿತ್ತಯ್ಯ. ಶಿವಶಿವಾ ಮಹಾದೇವಾ, ಇದೆಲ್ಲಿಯ ಮಾರಿ ಬಂದಿತ್ತಯ್ಯ. ಈ ಜಗವನೆತ್ತಿ ಕೊಂದು ಕೂಗುವ ಮಾರಿಯ ಗೆಲುವವರನಾರೊಬ್ಬರನೂ ಕಾಣೆ. ಎನಗಿನ್ನೆಂತಯ್ಯ, ಎನಗಿನ್ನೆಂತಯ್ಯಾ ! ಭಕ್ತಿಜ್ಞಾನವೈರಾಗ್ಯವನಿತ್ತು ಸಲಹಯ್ಯಾ. ಎನ್ನ ಕರಣಂಗಳಿಗೆ ಸಮಸ್ತ ಪ್ರಸಾದವನಿತ್ತು ಸಲಹಯ್ಯಾ, ನಿಃಕಳಂಕ ಚೆನ್ನಮಲ್ಲಿಕಾರ್ಜುನಪ್ರಭುವೆ.
--------------
ನಿಃಕಳಂಕ ಚೆನ್ನಮಲ್ಲಿಕಾರ್ಜುನ ಪ್ರಭುವೆ
ಬೆಟ್ಟದ ಮೇಲಣ ಗುಂಡು, ಬೆಟ್ಟವ ನುಂಗಿತ್ತು. ಸೃಷ್ಟಿಯ ಮೇಲಣ ಜಗ, ಪೃಥ್ವಿಯ ನುಂಗಿತ್ತು. ಹಸುವಿನ ಗರ್ಭದ ವತ್ಸ, ಹಸುವ ನುಂಗಿತ್ತು. ಹೆಸರಿಡುವುದಿನ್ನೇನೊ ? ಕಣ್ಣೊಳಗಣ ಎರಳೆ ಬಣ್ಣವ ನುಂಗಿದ ಮತ್ತೆ ಬಣ್ಣಿಸಿ ಪೂಜಿಸಿಕೊಂಬುದಿನ್ನೇನೊ ? ಕಣ್ಣಾವಗಾಲದ ಹೊಳೆಯಲ್ಲಿ ಮುಳುಗಿ ಚೆನ್ನುಗೆಟ್ಟಿರಲ್ಲಾ. ಅಣ್ಣಗಳೆಲ್ಲರೂ ಮುಕ್ಕಣ್ಣನ ಪೂಜಿಸಿ ಮೂರುಬಟ್ಟೆಯ ಸುತ್ತಿ, ಊರ ಹೊಕ್ಕು ಆರೈದಿರಯ್ಯಾ, ನೀವಾರಾಧಿಸುವ ಲಿಂಗವ. ಆ ಲಿಂಗದಲ್ಲಿ ಲೀಯವಾದರೆ ಸಂಗಕ್ಕೆ ಒಳಗಾದರು. ನಮ್ಮ ನಿಸ್ಸಂಗಿ ನಿಃಕಳಂಕ ಮಲ್ಲಿಕಾರ್ಜುನನಲ್ಲಿ ದಿಕ್ಕುಗೆಟ್ಟೆನಯ್ಯಾ.
--------------
ಮೋಳಿಗೆ ಮಾರಯ್ಯ
ಕೃತಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗಂಗಳು ಭವರಾಟಳದಲ್ಲಿ ತಿರುಗುತ್ತಿಪ್ಪಲ್ಲಿ ಅನಂತ ಕೋಟ್ಯನುಕೋಟಿ ಯುಗಂಗಳು ಮಡಿದುಹೋದವು, ಅನಂತ ಜಲಪ್ರಳಯಂಗಳು ಸುರಿದು ಹೋದವು. ಹದಿನಾಲ್ಕು ಲೋಕಂಗಳೆಂಬ ಅನಂತಕೋಟಿ ಬ್ರಹ್ಮಾಂಡಗಳೆಲ್ಲ ಲಯವಾಗಿ ಹೋದವು. ಇದರೊಳಗೆ ಆವ ಲೋಕದಲ್ಲಿ ಆವ ಯುಗದಲ್ಲಿ ಪ್ರಾಣಲಿಂಗ, ಲಿಂಗಪ್ರಾಣವೆಂಬ ಭೇದವನರುಹಿದವರಾರು ಹೇಳಾ ಗಂಗೆ ಗೌರೀವಲ್ಲಭರು ಮೊದಲಾದ ಅನಂತಕೋಟಿ ರುದ್ರಾದಿಗಳೆಲ್ಲರೂ ಪ್ರಾಣಲಿಂಗಸಂಬಂಧದ ಹೊಲಬನರಿಯದೆ ಅಣಿಮಾದಿ ಚತುರ್ವಿಧ ಫಲಪ್ರಾಪ್ತಿಗೆ ಒಳಗಾದರು. ಶಿವಾಚಾರದ ವಿಚಾರವನರಿಯದೆ ಜಗವು ಕೆಟ್ಟುಹೋಹುದೆಂದು ಪರಮಪುರುಷಾರ್ಥಕಾರಣವಾಗಿ ಮತ್ರ್ಯದಲ್ಲಿ ಅವತರಿಸಿ,ಗುರುಲಿಂಗಜಂಗಮಪಾದೋದಕಪ್ರಸಾದವೆಂಬ ಪಂಚಾಚಾರಸ್ಥಲವ ನೆಲೆಗೊಳಿಸಿ, ಷಡುಸ್ಥಲವೆಂಬ ಮಹಾನುಭಾವಮಂ ಕರತಳಾಮಳಕವಾಗಿ ಸ್ಥಿತಗೊಳಿಸಿ, ಪ್ರಾಣಲಿಂಗ, ಲಿಂಗಪ್ರಾಣವೆಂಬ ಭೇದವನೆನಗೆ ತಿಳುಹಿ, ಎನ್ನ ಭ್ರಾಂತಿಸೂತಕವ ಬಿಡಿಸಿ, ಲಿಂಗೈಕ್ಯವೆಂಬುದೆನಗೆ ತೋರಿದೆಯಾಗಿ ನಿನ್ನಿಂದಲಾನು ಸಂಗನಬಸವಣ್ಣನೆಂಬ ಹೆಸರುವಡೆದನು. ಕೂಡಲಸಂಗಮದೇವರು ಸಾಕ್ಷಿಯಾಗಿ ಎನಗೆ ನೀನು ಪರಮಾರಾಧ್ಯ ಕಾಣಾ, ಚೆನ್ನಬಸವಣ್ಣಾ.
--------------
ಬಸವಣ್ಣ
ಅಷ್ಟಮದ ಸಪ್ತವ್ಯಸನ ಷಡುವರ್ಗಂಗಳ ಒತ್ತಿ ನಿಲಿಸಿ, ಎಲ್ಲಕ್ಕೆ ಶಿವನೊಬ್ಬನೆ, ಶಿವಜ್ಞಾನವೆಂದರಿಯದ ವಿಪ್ರರು, ಆನೆ ಅಶ್ವ ಹೋತ ಕೋಣ ಬಿಂಜಣದಿಂದ ಕಡಿದು, ಬೆಂಕಿಯ ಮೇಲೆ ಹಾಕಿ, ತಾನು ಪರಬ್ರಹ್ಮನಾದೆನೆಂದು ನರಕಕ್ಕೆ ಹೋದರೊಂದುಕೋಟ್ಯಾನುಕೋಟಿ ಬ್ರಹ್ಮರು. ವೇದದ ಅರ್ಥವನರಿಯದೆ ಜೀವನ ಬಾಧೆಯಂ ಮಾಡುವ ವಧಾಸ್ವಕರ್ಮಕ್ಕೆ ಒಳಗಾದರು, ದ್ವಿಜರಂದು. ಆದಿಯ ಪ್ರಮಥರು ಕಂಡುದೆಂತೆಂದಡೆ: ಆನೆಯೆಂಬುದು ಮದ, ಮತ್ಸರವೆಂಬುದು ಅಶ್ವ, ಕೋಣನೆಂಬುದು ಕ್ರೋಧ, ಅಂಗವಿಕಾರವೆಂಬುದು ಹೋತ. ಇಂತು ನಾಲ್ಕು ವರ್ಗಂಗಳು. ಶಿವಜ್ಞಾನವೆಂಬ ಅಗ್ನಿಯಲ್ಲಿ ದಹನ ಮಾಡುವರು ನಮ್ಮವರು. ಇಂತೀ ವಿವರವಿಲ್ಲದೆ ತಾವು ಪರಬ್ರಹ್ಮರೆನಿಸಿಕೊಂಬ, ಜೀವಹಿಂಸೆಯ ಮಾಡುವ ವಿಪ್ರರ ಮುಖವ ನೋಡಲಾಗದೆಂದ ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಮೂರು ಕೋಲ ಬ್ರಹ್ಮಂಗೆ ಅಳದು ಕೊಟ್ಟೆ; ನಾಲ್ಕು ಕೋಲ ವಿಷ್ಣುವಿಂಗೆ ಆಳದು ಕೊಟ್ಟೆ; ಐದು ಕೋಲ ರುದ್ರಂಗೆ ಅಳದು ಕೊಟ್ಟೆ; ಆರು ಕೋಲ ಈಶ್ವರಂಗೆ ಅಳದು ಕೊಟ್ಟೆ; ಒಂದು ಕೋಲ ಸದಾಶಿವಂಗೆ ಅಳದು ಕೊಟ್ಟೆ. ಇಂತೀ ಐವರು ಕೋಲಿನ ಒಳಗು ಹೊರಗಿನಲ್ಲಿ ಅಳಲುತ್ತ ಬಳಲುತ್ತ ಒಳಗಾದರು. ಇಂತೀ ಒಳ ಹೊರಗ ಸೋಧಿಸಿಕೊಂಡು ಅಳಿವು ಉಳಿವಿನ ವಿವರವನರಿಯಬೇಕು, ಧಾರೇಶ್ವರಲಿಂಗವನರಿವುದಕ್ಕೆ.
--------------
ಕಾಮಾಟದ ಭೀಮಣ್ಣ
ಇಂತಪ್ಪ ಶ್ರೀ ವಿಭೂತಿಯ ಧರಿಸಲರಿಯದೆ ಮಣ್ಣು ಮಟ್ಟಿಯ ಧರಿಸಿ ಭವಭಾರಕ್ಕೆ ಒಳಗಾದರು ವಿಪ್ರ ಮೊದಲು ಶ್ವಪಚ ಕಡೆಯಾಗಿ ನೋಡಾ. ಇಂತಪ್ಪ ಶ್ರೀ ವಿಭೂತಿಯ ಧರಿಸಲರಿಯದೆ ದೇವ-ದಾನವ-ಮಾನವರು ಮೊದಲಾದ ಸಕಲ ಲೋಕಾದಿಲೋಕಂಗಳು ಭವಕ್ಕೆ ಭಾಜನವಾದರು ನೋಡಾ. ಶ್ರೀ ವಿಭೂತಿಯ ಧರಿಸಲರಿಯದೆ ಗರುಡ ಗಂಧರ್ವ ಕಿನ್ನರ ಕಿಂಪುರುಷರು ಮೊದಲಾದ ಸಕಲ ಮನುಮುನಿಜನಂಗಳು ಋಷಿಗಳು ಭವಕ್ಕೆ ಗುರಿಯಾದರು ನೋಡಾ. ಶ್ರೀ ವಿಭೂತಿಯ ಧರಿಸಲರಿಯದೆ ಅಂಗಾಲಕಣ್ಣವರು ಮೈಯೆಲ್ಲಕಣ್ಣವರು ಒಂದುತಲೆಯವರು ಎರಡುತಲೆಯವರು ಮೂರುತಲೆಯವರು ನಾಲ್ಕುತಲೆಯವರು ಐದುತಲೆಯವರು ಆರುತಲೆಯವರು ಏಳುತಲೆಯವರು ಎಂಟುತಲೆಯವರು ಒಂಬತ್ತು ತಲೆಯವರು ಹತ್ತುತಲೆಯವರು ಹನ್ನೊಂದುತಲೆಯವರು ನೂರುತಲೆಯವರು ಐದುನೂರುತಲೆಯವರು ಸಾವಿರತಲೆಯವರು ಗಂಗೆಗೌರಿವಲ್ಲಭರು ಸಮಾರುದ್ರರು ನಂದಿವಾಹನರು ಇಂತಪ್ಪವರೆಲ್ಲ ಆದಿಪ್ರಮಥರು ಇವರು ಎತ್ತಲಾನುಕಾಲಕ್ಕೆ ಭವಕ್ಕೆ ಬರುವರು ನೋಡಾ. ಮತ್ತಂ, ಇಂತಪ್ಪ ಶ್ರೀ ವಿಭೂತಿಯನು ಬಸವಾದಿ ಪ್ರಭುದೇವರಾಂತ್ಯಮಾದ ಏಳುನೂರುಯೆಪ್ಪತ್ತು ಪ್ರಮಥಗಣಂಗಳು ಮೂಳ್ಳೂರಲಿಕ್ಕೆ ಇಂಬಿಲ್ಲದೆ ಸರ್ವಾಂಗದಲ್ಲಿ ಧರಿಸಿ ತ್ರೈಲೋಕ ಮೊದಲಾದ ಚತುರ್ದಶಭುವನವ ತಮ್ಮ ಚರಣದಿಂದ ಸ್ವಯವಮಾಡಿ ಪರಶಿವಲಿಂಗದಲ್ಲಿ ಶಿಖಿಕರ್ಪುರ ಸಂಯೋಗದ ಹಾಗೆ ಬೆರೆದು ನಿರ್ವಯಲಾದರು ನೋಡಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಘಟ್ಟಬೆಟ್ಟದ ನಟ್ಟನಡುವಿನ ಗಿರಿಯಲ್ಲಿ ಹುಟ್ಟಿತೊಂದು ಸೋಜಿಗದಗ್ನಿಯ ಕಳೆ. ಆ ಕಳೆಯ ಬೆಳಗ ಕಾಣೆನೆಂದು ಇಬ್ಬರು ಮುಂದುಗೆಟ್ಟರು, ಮೂವರು ತಾಮಸಕ್ಕೊಳಗಾದರು, ನಾಲ್ವರು ನಡೆಗೆಟ್ಟರು, ಐವರು ಅಂಧಕರಾದರು, ಆರುಮಂದಿ ಹೋರಾಟಗೊಳುತಿರೆ, ಏಳುಮಂದಿ ಕೂಪವ ಬಿದ್ದರು, ಎಂಟುಮಂದಿ ತಂಟುಕಕ್ಕೆ ಒಳಗಾದರು. ಒಂಬತ್ತು [ಮಂದಿ] ಕಣವಿಯ ಹರವರಿಯಲ್ಲಿ [ಹೊಕ್ಕರು.] ಹತ್ತು ಬಗೆಯವರು ಹರಿದಾಡುತಿರೆ, ಇದನು ಕಂಡು, ತರುಗಿರಿಯ ನಡುವೆ ಹರಿವ ಉದಕ ಗಾಳಿ ಬಂದು ಬೆಟ್ಟವನಡರಿ, ಉರಿವ ಜ್ಯೋತಿಯ ತಾಗದ ಮುನ್ನ ನೀರಹರಿಯನಡ್ಡಂಗಟ್ಟಿ, ಗಾಳಿಯ ಹಿಮ್ಮೆಟ್ಟಿಸಿ, ಜ್ಞಾನಪರಬ್ರಹ್ಮದಲ್ಲಿ ನಿಂದವರಾರೆಂದರೆ : ಪ್ರಭುದೇವರು, ಚೆನ್ನಬಸವೇಶ್ವರದೇವರು, ಮೋಳಿಗೆಯ್ಯನವರು, ಸಂಗನಬಸವೇಶ್ವರದೇವರು, ನೀಲಾಂಬಿಕೆ ತಾಯಿ, ಅಕ್ಕನಾಗಮ್ಮ, ಮಹಾದೇವಿಯಕ್ಕ, ಮುಕ್ತಾಯಿ ಮುಖ್ಯವಾದ ಏಳುನೂರಾ ಎಪ್ಪತ್ತು ಅಮರಗಣಂಗಳ ಲೆಂಕರ ಲೆಂಕನಾಗಿ ಎನ್ನ ಆದಿಪಿಂಡಿವ ಧರಿಸಿ, ಮತ್ರ್ಯಕ್ಕೆ ಕಳುಹಿದ ಭೇದವ ಪಿಂಡಜ್ಞಾನದಿಂದಲರಿದು ಆಚರಿಸುತ್ತಿದ್ದೆನಯ್ಯಾ ಎನ್ನಾಳ್ದ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಹರನಲ್ಲದೆ ದೈವವಿಲ್ಲೆಂದು ಶ್ರುತಿ ಸಾರುತಿರ್ದು, ವೇದಂಗಳು ಪೊಗಳುತಿರ್ದು, ನರರು ಸುರರು ಅರಿವಿರ್ದು, ಅರಿಯದೆ, ಹರಿಯು ದೈವ, ಬ್ರಹ್ಮನು ದೈವ, ಸುರಪನು ದೈವ, ಮನುಮುನಿ ತ್ರಿವಿಧ ದೇವರ್ಕಳು ದೈವವೆಂದು, ಚಂದ್ರ, ಸೂರ್ಯರು ದೈವವೆಂದು ಆರಾಧಿಸುವಿರಿ. ಪತಿವ್ರತೆಯಾದವಳಿಗೆ ತನ್ನ ಪುರುಷನ ನೆನೆಹಲ್ಲದೆ, ಅನ್ಯರ ನೆನೆವಳೆ ? ವೇಶಿಯಂತೆ ಹಲಬರು ನಂಟರೆ ? ಇವರೆಲ್ಲರ ಸಂತವಿಟ್ಟು, ಮತ್ತೆ ಶಿವನೆ ಎಂಬ ಶಿವದ್ರೋಹಿಗಳು ಕೇಳಿರೊ. ಹರಿ ದೈವವೆಂದು ಆರಾಧಿಸುವರೆಲ್ಲ ಮುಡುಹ ಸುಡಿಸಿಕೊಂಡು, ಮುಂದಲೆಯಲ್ಲಿ ಕೆರಹ ಹೊತ್ತರು. ಬ್ರಹ್ಮವೇ ದೈವವೆಂದು ಆರಾಧಿಸುವವರೆಲ್ಲ ಹೆಮ್ಮೆಯ ನುಡಿದು, ಹೋಮವನಿಕ್ಕಿ ಹೋತನ ಕೊಂದು ತಿಂದು, ಪಾತಕಕ್ಕೆ ಒಳಗಾದರು. ಸುರಪ ದೈವವೆಂದು ಆರಾಧಿಸಿದವರೆಲ್ಲ ತಮ್ಮ ಸಿರಿಯಲ್ಲಿ ಹೋಗಿ ಶಿವನಲ್ಲಿಗೆ ಸಲ್ಲದೆ ಹೋದರು. ಮನುಮುನಿದೇವರ್ಕಳು ದೈವವೆಂದು ಆರಾಧಿಸಿದವರೆಲ್ಲ ಹಿಂದುಮುಂದಾಗಿ ಅಡ್ಡಬಿದ್ದು , ಅವರು ಬಂದ ಭವಕ್ಕೆ ಕಡೆ ಇಲ್ಲ . ಇದನ್ನೆಲ್ಲ ಅರಿದು ಮತ್ತೆ ಇವರೇ ದೈವವೆಂದು ಆರಾಧಿಸುವ ವಿವರಗೆಟ್ಟ ಭವಭಾರಿಗಳ ನುಡಿಯ ಕೇಳಲಾಗದು, ಅವರೊಡನೆ ನುಡಿಯಲಾಗದು. ಅವರ ನಡೆಯ ಕಂಡರೆ ಛೀ ಎಂಬರು ನಿಮ್ಮ ಶರಣರು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಹಾಳುಬಾವಿ ಹಿಡಿಮೊಟ್ಟೆಗೆ ತೊಗಲಿಲ್ಲದೆ, ಉಳಿಮುಟ್ಟದೆ, ಎಳಿಯನಿಕ್ಕಿ ನೀರುತುಂಬಲು, ಕುಡಿದವರು ಒಳಗಾದರು. ಕುಡಿಯದವರು ಹೊರಗಾದರು ನೋಡೆಂದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಊರ ಹೊರಗೊಂದು ಗಿಡುಮರ. ಅದರೊಳಗೆ ಅಡಗಿಪ್ಪರು ಐವರು ಕಳ್ಳರು : ಒಬ್ಬ ನರಿ ಬಲೆಯವ, ಒಬ್ಬ ಹುಲಿ ಬಲೆಯವ, ಒಬ್ಬ ಉಡುಬೇಂಟೆಕಾರ, ಒಬ್ಬ ಬಳ್ಳುವಿನ ಕಾಲುಕಣ್ಣಿಯ ಪುಳಿಂದ, ಒಬ್ಬ ನಾಲ್ವರ ಬೇಂಟೆಯ ನೋಡುವ ಉಡಿಗಳ್ಳ. ಬೇಟೆ ಬೆಂಬಳಿಯಾದುದಿಲ್ಲ, ಬೇಟೆಗೆ ಹೋದವರೆಲ್ಲರೂ ಕಾಟಕ್ಕೆ ಒಳಗಾದರು. ಇದರಾಟವ ಕೇಳಿಹರೆಂದಂಜಿ, ಅಲೇಖನಾದ ಶೂನ್ಯ ಕಲ್ಲಿನ ನೆಲೆಮನೆಯ ಹೊಕ್ಕೆಯಲ್ಲ.
--------------
ವಚನಭಂಡಾರಿ ಶಾಂತರಸ
-->