ಅಥವಾ

ಒಟ್ಟು 12 ಕಡೆಗಳಲ್ಲಿ , 10 ವಚನಕಾರರು , 12 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉದ್ದವಾಗಿ ಕೂದಲು ನಿಮಿರ್ದು, ಗಡ್ಡಂಗಳು ಬೆಳದಡೇನು ಹೇಳಾ ! ಗಡ್ಡಂಗಳು ಬೆಳೆಯವೆ ಹೇಳಿರಣ್ಣಾ, ದೊಡ್ಡದಾಗಿ ಬೆಳೆದ ಗಡ್ಡ ಹೋತುಗಳಿಗೆ. ಗಡ್ಡದ ವೃದ್ಧ ವೈಶಿಕರ ಮೆಚ್ಚ, ಮಹಾದೇವ ಸೊಡ್ಡಳ ಭಕ್ತಿ ಸಜ್ಜನರಲ್ಲದವರ.
--------------
ಸೊಡ್ಡಳ ಬಾಚರಸ
ಲೋಕದ ಡೊಂಕ ನೀವು ತಿದ್ದುವಿರಯ್ಯ ನಿಮ್ಮ (ತನುಮನದ) ಡೊಂಕ ತಿದ್ದಿ ತೀಡಿಕೊಳಲರಿಯದೆ. ಪುರಾತನರು, ನುಡಿದಂತೆ ನಡೆಯದವರೆಲ್ಲ, ಕಡು ಓದಿದ ಗಿಳಿ ತನ್ನ ಮಲವ ತಾ ತಿಂದಂತೆ. ನೆರೆಮನೆಯವರ ದುಃಖವ ಕೇಳಿ, ಗಡ್ಡ ಮೀಸೆ ಮುಂಡೆಯ ಬೋಳಿಸಿಕೊಂಡು (ಕಡೆಯಲ್ಲಿ) ಹೋಗಿ ಅಳುತಿಪ್ಪವರ ಕಂಡರೆ ಕೂಡಲಚೆನ್ನಸಂಗನ ಶರಣರು ನಗುತಿಪ್ಪರಯ್ಯಾ.
--------------
ಚನ್ನಬಸವಣ್ಣ
ಗುರುಹಿರಿಯರ ದರುಶನ ಸ್ಪರುಷನದಲ್ಲಿ ಇರುವ ಕಟ್ಟಳೆಯ ಕೇಳಿರೊ. ಭಕ್ತರು ಆಡದ ಆಚಾರ ಗಂಟುಹಾಕಲಾಗದು. ಗಡ್ಡ ಮೀಸೆಯ ತಿದ್ದಲಾಗದು. ಮಡ್ಡಮಾತು ಗೀತವನಾಡಲಾಗದು. ಅಥವ ಆಡಿದರೆ ಅವರ ಸಿರದ ಗುಡ್ಡದ ಬೋಳರ ಸಮಾನವೆಂದು ಕಂಡು ಸಡ್ಡೆಮಾಡದೆ ಇರುವರು ಸತ್ಪುರುಷರು ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಜ್ಞಾನದಲ್ಲಿ ಸುಳಿವ ಜಂಗಮಸ್ಥಲದ ಇರವು ಹೇಂಗಿರಬೇಕೆಂದಡೆ: ಅಂಬುದ್ಥಿಯ ಕೂಡಿದ ಸಂ[ಭೇದದ]ತಿರಬೇಕು. ಮುಖ ಶಿರ ಬೋಳಾದಡೇನೊ, ಹುಸಿ ಕೊಲೆ ಕಳವು ಪಾರದ್ವಾರ ಅತಿಕಾಂಕ್ಷೆಯ ಬಿಡದನ್ನಕ್ಕರ ? ಗಡ್ಡ ಜಡೆ ಕಂಥೆ ಲಾಂಛನವ ತೊಟ್ಟಿಹ ಬಹುರೂಪರಂತೆ, ಜಗದೊಳಗೆ ಸುಳಿವ ಬದ್ಧಕತನದಲ್ಲಿ ದ್ರವ್ಯಕ್ಕೆ ಗೊಡ್ಡೆ[ಯ]ರ[ನಿ]ರಿವ ದೊಡ್ಡ ಮುದ್ರೆಯ ಕಳ್ಳರು, ತುರುಬ ಚಿಮ್ಮುರಿಗಳ ಕಟ್ಟಿ, ನಿರಿಗುರುಳ ಬಾಲೆಯರ ಮುಂದೆ ತಿರುಗುತಿಪ್ಪ ಬರಿವಾಯ ಭುಂಜಕರುಗಳು ಅರಿವುಳ್ಳವರೆಂದು ಬೀಗಿ ಬೆರೆವುತಿಪ್ಪರು. ಅರಿವಿನ ಶುದ್ಧಿಯನರಿದ ಮಹಾತ್ಮಂಗೆ ಹಲುಬಲೇತಕ್ಕಯ್ಯಾ, ಮೊಲೆಯ ಕಾಣದ ಹಸುಳೆಯಂತೆ ? ಅರಿವಿನ ಶುದ್ಧಿ ಕರಿಗೊಂಡವಂಗೆ, ನರಗುರಿಗಳ ಭವನವ ಕಾಯಲೇತಕ್ಕೆ ? ಅರಿವೆ ಅಂಗವಾದ ಲಿಂಗಾಂಗಿಗೆ ಬರುಬರ ಭ್ರಾಂತರ ನೆರೆ ಸಂಗವೇತಕ್ಕೆ ? ಇದು ಕಾರಣ, ತುರುಬೆಂಬುದಿಲ್ಲ, ಜಡೆಯೆಂಬುದಿಲ್ಲ, ಬೋಳೆಂಬುದಿಲ್ಲ. ಅರುಹು ಕುರುಹಿಂಗೆ ಸಿಕ್ಕದು, ಅರಿದುದು ಕುರುಹಿಂಗೆ ಸಿಕ್ಕದು, ಅರಿದುದು ಮರೆಯಲಾಗಿ, ಮರೆದುದು ಅರಿದುದಕ್ಕೆ ಕುರುಹಿಲ್ಲವಾಗಿ, ಇಂತೀ ಸಂಚಿತ ಪ್ರಾರಬ್ಧ ಆಗಾಮಿಗೆ ಹೊರಗಾದುದು, ಜ್ಞಾನ ಜಂಗಮಸ್ಥಲ. ಹೀಂಗಲ್ಲದೆ ಗೆಲ್ಲ ಸೋಲಕ್ಕೆ ಹೋರಿ ಬಲ್ಲವರಾದೆವೆಂಬವರ ವಲ್ಲಭ ನಿಃಕಳಂಕ ಮಲ್ಲಿಕಾರ್ಜುನಲಿಂಗನವರನೊಲ್ಲನಾಗಿ.
--------------
ಮೋಳಿಗೆ ಮಾರಯ್ಯ
ಇನ್ನು ಆದಿಮೂಲ ಅನಾದಿಮೂಲಗಳಿಗತ್ತತ್ತವಾದ ಮಹಾಮೂಲಸ್ವಾಮಿಯ ಮೀರಿದ ಅತೀತ ಮೂಲಸ್ವಾಮಿಗತ್ತತ್ತವಾಗಿಹ ಆ ಅಖಂಡ ಮೂಲಸ್ವಾಮಿಯ ರೂಪು, ಲಾವಣ್ಯ, ಸೌಂದರ್ಯ, ಅಂಗ-ಪ್ರತ್ಯಂಗಸ್ವರೂಪ ಸ್ವಭಾವಗಳೆಂತೆಂದಡೆ : ಸಹಜ ನಿರಾಲಂಬವಾಗಿಹ, ಮಹಾಘನಕ್ಕೆ ಘನವಹ, ಮಹಾಘನವಾಗಿಹ ಪ್ರಣವವೆ ಅಖಂಡಮೂಲಸ್ವಾಮಿಯ ಶಿರಸ್ಸು ನೋಡಾ. ದಿವ್ಯಾನಂದಪ್ರಣವ ದಿವ್ಯಜ್ಞಾನ ಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಚಕ್ಷು. ನಿರಾಕಾರಪ್ರಣವ, ನಿರಾಳಪ್ರಣವವೆ ಆ ಅಖಂಡ ಮೂಲಸ್ವಾಮಿಯ ಪುರ್ಬು. ಅಚಲಾತೀತ ಪ್ರಣವವೆ ಆ ಅಖಂಡ ಮೂಲಸ್ವಾಮಿಯ ಹಣೆ ನೋಡಾ. ಸಹಜ ನಿರಾಲಂಬಪ್ರಣವವೆ ಆ ಅಖಂಡ ಮೂಲಸ್ವಾಮಿಯ ನಾಸಿಕ. ನಿರಾಲಂಬಾತೀತ ಪ್ರಣವವೆ ಆ ಅಖಂಡ ಮೂಲಸ್ವಾಮಿಯ ಉಶ್ವಾಸ-ನಿಶ್ವಾಸಂಗಳು ನೋಡಾ. ನಿರಾಮಯಪ್ರಣವ ನಿರಾಮಯಾತೀತಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಕರ್ಣ. ನಿರ್ವಯಲಪ್ರಣವ ನಿರ್ವಯಲಾತೀತಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಗಲ್ಲ ನೋಡಾ. ಅಮಲಪ್ರಣವ ಅಮಲಾನಂದಪ್ರಣವ ಅಮಲಾತೀತಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಗಡ್ಡ ಮೀಸೆ ಕೋರೆದಾಡೆ ನೋಡಾ. ನಾದ ಬಿಂದು ಕಲಾತೀತಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ತಾಳೋಷ*ಸಂಪುಟ ನೋಡಾ. ಸಹಜಪ್ರಣವ, ಸಹಜಾನಂದಪ್ರಣವ, ಸಹಜಜ್ಯೋತಿಪ್ರಣವ, ಅನಂತಪ್ರಣವ, ಆನಂದಪ್ರಣವ, ಆನಂದಜ್ಯೋತಿಪ್ರಣವ, ಅಖಂಡಪ್ರಣವ, ಅಖಂಡ ಜ್ಯೋತಿಪ್ರಣವ, ಅಖಂಡಾನಂದ ಮಹಾಜ್ಯೋತಿಪ್ರಣವ, ಚಿತ್ಪ್ರಣವ, ಚಿದಾನಂದಜ್ಯೋತಿಪ್ರಣವ, ಚಿದ್ವ್ಯೋಮಪ್ರಣವ, ನಿತ್ಯನಿಜಾನಂದಪ್ರಣವ, ಸಚ್ಚಿದಾನಂದಪ್ರಣವ, ನಿತ್ಯನಿರಾಕಾರಪ್ರಣವ, ಸಕಲ ನಿಃಕಲಾತೀತಪ್ರಣವವೆಂಬ ಷೋಡಶಪ್ರಣವಂಗಳೆ ಆ ಅಖಂಡ ಮಹಾಮೂಲಸ್ವಾಮಿಯ ಷೋಡಶದಂತಂಗಳು ನೋಡಾ. ಆ ಒಂದೊಂದು ದಂತಂಗಳ ಕಾಂತಿಯೆ ಅನಂತಕೋಟಿ ಸಿಡಿಲೊಡೆದ ಬಯಲಪ್ರಕಾಶವಾಗಿಹುದು ನೋಡಾ. ಕುಳವಿಲ್ಲದ ನಿರಾಕುಳಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಕೊರಳು. ಅಪ್ರಮಾಣ ಅಗೋಚರಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಭುಜಂಗಳು ನೋಡಾ. ಪರಮಪ್ರಣವ, ಪರಮಾನಂದಪ್ರಣವ, ಶಿವಪ್ರಣವ, ಶಿವಜ್ಯೋತಿಪ್ರಣವ,ಅಚಲಪ್ರಣವ, ಅಚಲಾನಂದಪ್ರಣವಂಗಳೆ ಆ ಅಖಂಡ ಮಹಾಮೂಲಸ್ವಾಮಿಯ ಹಸ್ತಾಂಗುಲಿ ನಖಂಗಳು ನೋಡಾ. ಪರಬ್ರಹ್ಮಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಎದೆ. ನಿರಂಜನ ಜ್ಯೋತಿಪ್ರಣವ ನಿರಂಜನಾನಂದವೆಂಬಪ್ರಣವವೆ ಆ ಅಖಂಡ ಮೂಲಸ್ವಾಮಿಯ ಸಣ್ಣ ಕುಚಗಳು ನೋಡಾ. ನಿರುಪಮಪ್ರಣವ, ನಿರುಪಮಾತೀತಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ದಕ್ಷಿಣ ವಾಮ ಪಾಶ್ರ್ವಂಗಳು. ಅನಿರ್ವಾಚ್ಯಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಬೆನ್ನು. ಮಹದಾನಂದಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಬೆನ್ನಿನೆಲುವು ನೋಡಾ. ಪಂಚಸಂಜ್ಞೆಯನುಳ್ಳ ಅಖಂಡಗೋಳಕಾರಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಗರ್ಭ ನೋಡಾ. ಆ ಗರ್ಭ ಅನಂತಕೋಟಿ ಮಹಾಸೂರ್ಯಚಂದ್ರಾಗ್ನಿ ಪ್ರಕಾಶವಾಗಿಹುದು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಪ್ರಣವಂಗಳು, ಅನೇಕಕೋಟಿ ತತ್ವಂಗಳು, ಅನೇಕಕೋಟಿ ಅಕ್ಷರಂಗಳಡಗಿಹವು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಅನಾದಿಪತಿಗಳು, ಅನೇಕಕೋಟಿ ಅನಾದಿಪಶುಗಳು, ಅನೇಕಕೋಟಿ ಅನಾದಿಪಾಶಂಗಳೆಂಬ ಅನಾದಿಸಿದ್ಧಾಂತ ಜ್ಞಾನತ್ರಯಂಗಳಡಗಿಹವು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಆದಿಪತಿಗಳು, ಅನೇಕಕೋಟಿ ಆದಿಪಶುಗಳು, ಅನೇಕಕೋಟಿ ಆದಿಪಾಶಂಗಳೆಂಬ ಆದಿಸಿದ್ಧಾಂತ ಜ್ಞಾನತ್ರಯಂಗಳಡಗಿಹವು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಪತಿಗಳು, ಅನೇಕಕೋಟಿ ಪಶುಗಳು, ಅನೇಕಕೋಟಿ ಪಾಶಂಗಳೆಂಬ ಸಿದ್ಧಾಂತ ಜ್ಞಾನತ್ರಯಂಗಳಡಗಿಹವು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಅನಾದಿ ತತ್‍ಪದ, ಅನೇಕಕೋಟಿ ಅನಾದಿ ತ್ವಂಪದ, ಅನೇಕಕೋಟಿ ಅನಾದಿ ಅಸಿಪದಂಗಳೆಂಬ ಅನಾದಿ ವೇದಾಂತಪದತ್ರಯಂಗಳಡಗಿಹವು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಆದಿ ತತ್‍ಪದ, ಅನೇಕಕೋಟಿ ಆದಿ ತ್ವಂಪದ, ಅನೇಕಕೋಟಿ ಆದಿ ಅಸಿಪದಂಗಳೆಂಬ ಆದಿ ವೇದಾಂತಪದತ್ರಯಂಗಳಡಗಿಹವು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ತ್ವಂಪದಂಗಳು, ಅನೇಕಕೋಟಿ ತತ್ಪದಂಗಳು, ಅನೇಕಕೋಟಿ ಅಸಿಪದಂಗಳೆಂಬ ವೇದಾಂತ ಪದತ್ರಯಂಗಳಡಗಿಹವು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಅನಾದಿ ಸದಾಶಿವರು, ಅನೇಕಕೋಟಿ ಅನಾದಿ ಈಶ್ವರರು, ಅನೇಕಕೋಟಿ ಅನಾದಿ ಮಾಹೇಶ್ವರರು ಅಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಅನಾದಿಸದಾಶಿವರು, ಅನೇಕಕೋಟಿ ಅನಾದಿ ಈಶ್ವರರು, ಅನೇಕಕೋಟಿ ಅನಾದಿ ಮಾಹೇಶ್ವರರು ಅಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಸದಾಶಿವರು, ಅನೇಕಕೋಟಿ ಈಶ್ವರರು, ಅನೇಕಕೋಟಿ ಮಾಹೇಶ್ವರರು ಅಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಬ್ರಹ್ಮರು, ಅನೇಕಕೋಟಿ ಆದಿಬ್ರಹ್ಮರು, ಅನೇಕಕೋಟಿ ನಾರಾಯಣರು, ಅನೇಕಕೋಟಿ ಆದಿನಾರಾಯಣರು, ಅನೇಕಕೋಟಿ ರುದ್ರರು, ಅನೇಕಕೋಟಿ ಆದಿರುದ್ರರು ಅಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಋಷಿಗಳು, ಅನೇಕಕೋಟಿ ಆದಿಋಷಿಗಳು, ಅನೇಕಕೋಟಿ ಭಾನು, ಅನೇಕಕೋಟಿ ಆದಿಭಾನು, ಅನೇಕಕೋಟಿ ಚಂದ್ರರು, ಅನೇಕಕೋಟಿ ಆದಿಚಂದ್ರರು ಅಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಇಂದ್ರರು, ಅನೇಕಕೋಟಿ ಆದಿಮಹೇಂದ್ರರು, ಅನೇಕಕೋಟಿ ದೇವರ್ಕಳು, ಅನೇಕಕೋಟಿ ಆದಿದೇವರ್ಕಳಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಬ್ರಹ್ಮಾಂಡಂಗಳು, ಅನೇಕಕೋಟಿ ಮಹಾಬ್ರಹ್ಮಾಂಡಂಗಳು, ಅನೇಕಕೋಟಿ ಆದಿಮಹಾಬ್ರಹ್ಮಾಂಡಂಗಳು ಅಡಗಿಹವು ನೋಡಾ. ಆ ಅಖಂಡ ಮಹಾಮೂಲಸ್ವಾಮಿಯ ನಡುವೇ ವ್ಯೋಮಾತೀತಪ್ರಣವವು. ಆ ಅಖಂಡ ಮಹಾಮೂಲಸ್ವಾಮಿಯ ಕಟಿಸ್ಥಾನವೇ ಚಿತ್ಕಲಾತೀತಪ್ರಣವ. ಆ ಅಖಂಡ ಮಹಾಮೂಲಸ್ವಾಮಿಯ ಪಚ್ಚಳವೇ ಅನಾದಿಪ್ರಣವ ಆದಿಪ್ರಣವ ನೋಡಾ. ಆ ಅಖಂಡ ಮಹಾಮೂಲಸ್ವಾಮಿಯ ಉಪಸ್ಥವೇ ಅನೇಕಕೋಟಿ ಬ್ರಹ್ಮ-ವಿಷ್ಣು-ರುದ್ರ-ಈಶ್ವರ-ಸದಾಶಿವ ಮೊದಲಾದ ಅನೇಕಕೋಟಿ ದೇವರ್ಕಳಿಗೂ ಜನನಸ್ಥಲವಾಗಿಹ ನಿರ್ವಾಣಪ್ರಣವ ನೋಡಾ. ಕಲಾನಂದಪ್ರಣವ ಬ್ರಹ್ಮಾನಂದಪ್ರಣವವೇ ಆ ಅಖಂಡ ಮಹಾಮೂಲಸ್ವಾಮಿಯ ಒಳದೊಡೆ ನೋಡಾ. ಚಿಜ್ಜ್ಯೋತಿಪ್ರಣವ, ಪರಂಜ್ಯೋತಿಪ್ರಣವವೇ ಆ ಅಖಂಡ ಮಹಾಮೂಲಸ್ವಾಮಿಯ ಒಳಪಾದ ಕಂಭಂಗಳು ನೋಡಾ. ನಿಶ್ಶಬ್ದಪ್ರಣವ, ನಿಶ್ಶಬ್ದಾನಂದಪ್ರಣವವೇ ಆ ಅಖಂಡ ಮಹಾಮೂಲಸ್ವಾಮಿಯ ಹರಡು ನೋಡಾ. ಓಂಕಾರಪ್ರಣವ ಮಹದೋಂಕಾರಪ್ರಣವವೇ ಆ ಅಖಂಡ ಮಹಾಮೂಲಸ್ವಾಮಿಯ ಪಾದಂಗಳು ನೋಡಾ. ಆ ಓಂಕಾರ ಪ್ರಣವದ ತಾರಕಸ್ವರೂಪ ದಂಡಕಸ್ವರೂಪ ಕುಂಡಲಾಕಾರ ಅರ್ಧಚಂದ್ರಕ ದರ್ಪಣಾಕಾರ ಜ್ಯೋತಿಸ್ವರೂಪವೆಂಬ ಪ್ರಣವದತ್ತತ್ತ ಸ್ಥಾನಂಗಳೇ ಆ ಅಖಂಡ ಮಹಾಮೂಲಸ್ವಾಮಿಯ ಪದಾಂಗುಲಿಗಳು ನೋಡಾ. ಆ ಓಂಕಾರಪ್ರಣವದ ಮಹದೋಂಕಾರಪ್ರಣವದ ಮಹಾಪ್ರಕಾಶವೇ ಆ ಅಖಂಡ ಮಹಾಮೂಲಸ್ವಾಮಿಯ ಪಾದಾಂಗುಷಾ*ಂಗುಲಿಗಳು ನೋಡಾ. ಆ ಅಖಂಡ ಮಹಾಮೂಲಸ್ವಾಮಿಯ ಸರವೇ ಪರಾತೀತಪ್ರಣವ ನೋಡಾ. ಆ ಅಖಂಡ ಮಹಾಮೂಲಸ್ವಾಮಿಯ ಮಾತೇ ಮಹಾಜ್ಯೋತಿ ಪ್ರಣವಕತ್ತತ್ತವಾಗಿಹ ಅತಿಮಹಾಜ್ಯೋತಿಪ್ರಣವ ನೋಡಾ. ಶೂನ್ಯ-ನಿಃಶೂನ್ಯ ಆ ಮಹಾಶೂನ್ಯಕತ್ತತ್ತವಾದ ಮಹದಾನಂದಪ್ರಣವವೇ ಆ ಅಖಂಡ ಮಹಾಮೂಲಸ್ವಾಮಿಯ ವಪೆ ನೋಡಾ. ಆ ಅಖಂಡ ಮಹಾಮೂಲಸ್ವಾಮಿಯಲ್ಲಿ ಅನಂತಕೋಟಿ ನಿರಾಳಸ್ವಯಂಭುಲಿಂಗ ಅಡಗಿಹವಾಗಿ ಆ ನಿರಾಳಸ್ವಯಂಭುಲಿಂಗಂಗಳೇ ಸ್ಥಾನದಲ್ಲಿ ಧರಿಸಿಹ ಭೂಷಣಂಗಳು ನೋಡಾ. ಜ್ಞಾನಪ್ರಣವವೇ ಆ ಅಖಂಡ ಮಹಾಮೂಲಸ್ವಾಮಿಯ ತುರುಬು ನೋಡಾ. ಆನಂತಕೋಟಿ ಪ್ರಣವಂಗಳನೊಳಕೊಂಡಿಹ ಮಹಾಭೂತಪ್ರಣವವೇ ಆ ಅಖಂಡ ಮಹಾಮೂಲಸ್ವಾಮಿಯ ಶೃಂಗಾರ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಮೊಲೆ ಮುಡಿ ಬಂದಡೆ ಹೆಣ್ಣೆಂಬರು. ಗಡ್ಡ ಮೀಸೆ ಬಂದಡೆ ಗಂಡೆಂಬರು. ನಡುವೆ ಸುಳಿವ ಆತ್ಮನು ಹೆಣ್ಣೂ ಅಲ್ಲ ಗಂಡು ಅಲ್ಲ ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಗಡ್ಡ ಮಂಡೆಯ ಬೋಳಿಸಿಕೊಂಡವರೆಲ್ಲ ಕಬ್ಬಲಿಗರಮಕ್ಕಳೆಂಬೆ. ಬತ್ತಲೆ ಇಪ್ಪವರೆಲ್ಲ ಕುಂಚಿಗನ ಮಕ್ಕಳೆಂಬೆ. ಪಟ್ಟಣಕ್ಕೆ ಹೋಗಿ ಹೆಸರ ಹೇಳುವ ಜಾತಿಕಾರನಂತೆ ಅರ್ಥ ಅನುಭಾವವ ಬಲ್ಲೆನೆಂದು ಅಗಮ್ಯವ ಬೀರುವ ಅಫ್ಸೋರಿಗಳ ವಿರಕ್ತರೆನ್ನಬಹುದೆ? ಎನಲಾಗದು. ವಚನದ ರಚನೆಯ ಅರಿದೆನೆಂಬ ಅಹಂಕಾರವ ಮುಂದುಗೊಂಡು ತಿರುಗುವ ಆತ್ಮತೇಜದ ಘಾತಕರ ವಿರಕ್ತರೆನಲಾಗದಯ್ಯಾ. ವಿರಕ್ತನ ಪರಿಯ ಹೇಳಿಹೆನು ಕೇಳಿರಣ್ಣಾ ; ವಾಯು ಬೀಸದ ಉದಕದಂತಿರಬೇಕು; ಅಂಬುಧಿಯೊಳಗೆ ಕುಂಭ ಮುಳುಗಿದಂತಿರಬೇಕು; ದರಿದ್ರಗೆ ನಿಧಾನಸೇರಿದಂತಿರಬೇಕು; ರೂಹಿಲ್ಲದ ಮರುತನಂತಿರಬೇಕು; ಹಿಂಡನಗಲಿದ ಮದಗಜ ಹಿಂಡಸೇರಿದಂತಿರಬೇಕು; ಸಂದೇಹ ಸಂಕಲ್ಪ ಮುಂದುಗೊಳ್ಳದೆ ಇರಬೇಕು. ಅಂಗಲಿಂಗಿಗಳಲ್ಲಿ ಲಿಂಗಾರ್ಪಿತಕ್ಕೆ ಹೋಗಿ ಬಂದುದನತಿಗಳೆಯದಿದ್ದಡೆ ವಿರಕ್ತರೆಂಬೆನು. ರೋಗರುಜಿನಂಗಳು ಬಂದಲ್ಲಿ ಕಿಂಕಿಲನಾಗದೆ ಇರಬಲ್ಲಡೆ ಅಮುಗೇಶ್ವರಲಿಂಗವೆಂಬೆನು.
--------------
ಅಮುಗೆ ರಾಯಮ್ಮ
ಮೋಹದಲಚ್ಚೊತ್ತಿ ಎಚ್ಚ ಎರಕವ ಬಿಟ್ಟು, ಗಡ್ಡ ಮಂಡೆ ಬೋಳಿಸಿ, ಮೂರು ಬೆರಳಿನ ಕುರುಹಿನಿಂದವೆ ಎಚ್ಚರಿಕೆಯಲ್ಲಿ ನಡೆವುದು, ನುಡಿವುದು. ಅಂತಲ್ಲದೆ_ಮನದ ವಿಕಾರದ ಕತ್ತಲೆಯೊಳಗೆ ಸಿಲುಕಿ ಕಾಲೂರಿ ನಿಂದ ನಿಲುವೆ. ಪ್ರಸನ್ನತೆಗೆ ನೆಲೆಯಾಗರ್ದಿಡೆ, ಕೂಡಲಚೆನ್ನಸಂಗಯ್ಯನು ಗಸಣಿಗೆ ಗೋರಿಗೊಳಿಸುವನು
--------------
ಚನ್ನಬಸವಣ್ಣ
ಮಾಡಿ ನೀಡುವ ಭಕ್ತನನರಸಿಕೊಂಡು ಹೋಗಿ ಗಡ್ಡ ಮಂಡೆ ಬೋಳಿನ ಕುರುಹ ತೋರಿ, ಬಲ್ಲವರಂತೆ ಅಧ್ಯಾತ್ಮವ ನುಡಿದು ಉಪಾಧಿಯಿಂದ ಒಡಲ ಹೊರೆವಾತ ವಿರಕ್ತನೆ ಅಲ್ಲ. ವಿರಕ್ತನ ಪರಿ ಎಂತೆಂದಡೆ ; ಆಚಾರಸಹಿತವಾಗಿ ಭಕ್ತಿ ಭಿಕ್ಷವ ತೆಗೆದುಕೊಂಡು ಉಪಾಧಿರಹಿತವಾಗಿಪ್ಪ ವಿರಕ್ತನ ತೋರಿ ಬದುಕಿಸಯ್ಯಾ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ.
--------------
ಅಕ್ಕಮ್ಮ
ಅಯ್ಯಾ, ತನ್ನ ತಾನರಿಯದೆ ನಾವು ಏಕಾರತಿ ದ್ವಿಯಾರತಿ [ತ್ರಿಯಾರತಿ] ಚತುರಾರತಿ ಪಂಚಾರತಿ ಷಡಾರತಿ ಸಪ್ತಾರತಿ ಅಷ್ಟಾರತಿ ನವಾರತಿ ದಶಾರತಿ ಕಡ್ಡಿಬತ್ತಿ ಕರ್ಪುರಾರತಿ ಮೊದಲಾದ ಅಷ್ಟವಿಧಾರ್ಚನೆ ಷೋಡಶೋಪಚಾರದಿಂದರ್ಚಿಸುವ ಇಷ್ಟಲಿಂಗಪೂಜಕರೆಂದು ನುಡಿದುಕೊಂಬ ಬದ್ಧಭವಿ ಶುದ್ಧಶೈವ ಮರುಳುಮಾನವರೆನಗೊಮ್ಮೆ ತೋರದಿರಯ್ಯ. ಅದೇನು ಕಾರಣವೆಂದಡೆ, ತನ್ನ ಅಂಗ ಮನ ಪ್ರಾಣೇಂದ್ರಿಯಂಗಳಲ್ಲಿ ಮುಸುಕಿದ ಅಜ್ಞಾನಾಂಧಕಾರದ ಅರುವತ್ತಾರುಕೋಟಿ ಕರಣಂಗಳೆಂಬ ಕಂಚಿನಾರತಿಗಳ ಹಂಚು ಹರಿಗಡಿದು, ಅಷ್ಟತನುಗಳ ಸುಟ್ಟುರುಹಿದ ಬೂದಿಯಿಂದ ಬೆಳಗಿ, ಚಿಜ್ಜಲದಿಂದ ತೊಳೆದು ಕಳೆದುಳಿಯಲರಿಯದೆ, ತನ್ನ ಹೃದಯಮಂದಿರದಲ್ಲಿ ನೆಲಸಿರುವ ಚಿದ್ಘನ ಚಿತ್ಪ್ರಕಾಶ ಚಿನ್ಮಯ ಶ್ರೀಗುರುಲಿಂಗಜಂಗಮಕ್ಕೆ ಮನೋಪ್ರಕೃತಿಯಳಿದ ಉನ್ಮನವೆಂಬ ಏಕಾರತಿ, ಲಿಂಗಾಂಗವೆಂಬುಭಯವಳಿದ ದ್ವಿಯಾರತಿ, ಮಲತ್ರಯಂಗಳಳಿದ ತ್ರಿಯಾರತಿ, ಚತುಃಕರಣಂಗಳಳಿದ ಚತುರಾರತಿ, ಪಂಚಭೂತ ಪಂಚವಾಯು ಪಂಚೇಂದ್ರಿಯ ಪಂಚಕ್ಲೇಶ ಪಂಚಮೂರ್ತಿಗಳ ಫಲಪದಂಗಳ ಕಳೆದುಳಿದ ಪಂಚಾರತಿ, ಷಡ್ವರ್ಗ ಷಡೂರ್ಮೆ ಷಡ್ಭ್ರಮೆ ಷಡ್ಭಾವವಿಕಾರಂಗಳಳಿದ ಷಡಾರತಿ, ಸಪ್ತಧಾತು ಸಪ್ತವ್ಯಸನಂಗಳಳಿದ ಸಪ್ತಾರತಿ, ಅಂತರಂಗದಷ್ಟಮದ ಬಹಿರಂಗದಷ್ಟಮದಂಗಳಳಿದ ಅಷ್ಟಾರತಿ, ನವಗ್ರಹಂಗಳಳಿದ ನವಾರತಿ, ದಶೇಂದ್ರಿಯ ದಶವಾಯುಗಳಳಿದ ದಶಾರತಿ. ಅಹಂಕಾರಗಳಳಿದ ಕಡ್ಡಿಬತ್ತಿ, ತನುತ್ರಯ ಗುಣತ್ರಯ ಅವಸ್ಥಾತ್ರಯ ಮನತ್ರಯ ಆತ್ಮತ್ರಯ ಭಾವತ್ರಯಂಗಳ ಕಳೆದುಳಿದ ಕರ್ಪುರಾರತಿಯ ಬೆಳಗಿ ನಿರ್ವಯಲಪದವನೈದಲರಿಯದೆ, ಬಹಿರಂಗದ ಭಿನ್ನಕ್ರೀ ಭಿನ್ನಜ್ಞಾನ ಭಿನ್ನಭಕ್ತಿ ಮುಂದುಗೊಂಡು, ಗಡ್ಡ ಜಡೆ ಮುಡಿಗಳ ಬಿಟ್ಟುಕೊಂಡು, ಲಾಂಛನವ ಹೊದ್ದುಕೊಂಡು, ಕಾಂಚನಕ್ಕೆ ಕೈಯೊಡ್ಡುತ ಕಂಚಗಾರನಂತೆ ನಾನಾ ಜಿನಸಿನ ಕಂಚ ನೆರಹಿ ಹರವಿಕೊಂಡು, ಪರಮಶಿವಲಿಂಗ ಪೂಜಕರೆಂದು ಬಗಳುವ ಪಂಚಮಹಾಪಾತಕರಿಗೆ ಕಿರಾತರು ಮೆಚ್ಚುವರಲ್ಲದೆ ಪುರಾತರು ಮೆಚ್ಚುವರೆ ? ಬದ್ಧಭವಿಯಾದ ಶೈವರು ಮೆಚ್ಚುವರಲ್ಲದೆ ಶುದ್ಧ ಸುಶೀಲ ನಿರಾಭಾರಿ ವೀರಶೈವರು ಮೆಚ್ಚುವರೆ ? ಅಜ್ಞಾನಿಗಳು ಮೆಚ್ಚುವರಲ್ಲದೆ ನಿವ್ರ್ಯಾಪಾರಿಗಳು ಮೆಚ್ಚರು. ಭಿನ್ನಕ್ರೀಯಸ್ಥರು ಮೆಚ್ಚುವರಲ್ಲದೆ ಅಭಿನ್ನಕ್ರೀಯಸ್ಥರು ಮೆಚ್ಚರು. ಇಂತಪ್ಪ ಲಿಂಗಾಂಗಸಮರಸದ ನಿರ್ಗುಣಪೂಜೆಯನೆಸಗಲರಿಯದ ಭಿನ್ನಜ್ಞಾನ ಭಿನ್ನಪೂಜೆಯನೆಸಗುವ ಮರುಳುಗಳಿಗೆ ಆರು ಮೆಚ್ಚುವರು ? ಹುಚ್ಚು ಮರುಳುಗಳಿರಾ ಸುಮ್ಮನಿರಿಯೆಂದಾತ ನಿಮ್ಮ ಶರಣ ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ನಾನಾ ವಿಲಾಸದ ಜಪವ ಬಿಟ್ಟು ತಪಸಿಯಾಗಿ, ಕರಿಯ [ಕ]ತ್ತರಿಸಿ, ಕರಣನಾಳದ ಗಂಟಲ ಮುಳ್ಳ ಕಿತ್ತು ಗಡ್ಡ, ಮಂಡೆಯ ಕೇಶವ ಸವರಿ ಜ್ಞಾನವೆಂಬ ದಂಡವಂ ಪಿಡಿದು ವೇಳರಿಸಿ ಕರಪಾತ್ರತಿವಿತ[ದಿಂ] ಮೂವರು ಜ್ವಾಲೆಯವರ ಜಾಡಿಸಿ ಜೋಡಿ ಜವಳಿ ಪರನಾದನಾಗಿ ಲೀಲಾಂಗನ ವಿಲಾಸದವರಂತೆ ಹಾದುಣ್ಣದೆ ಒದ್ದು ? ಲಿಂಗಾಂಗಿಗಳಲ್ಲಿ ಕ್ಷುಧಾತೃಷ್ಣೆಯರತು, ಮೂಸಿದ ಮಸಿಯಳಿದು ವಿಚಾರ ಅವಿಚಾರಿ ಅನಾಚಾರಸಂಹಾರಿ ಲಿಂಗಾಲಿಂಗಾಂಗಿ ಲಿಂಗಾರ್ಪಿತ ಶಬ್ದ ಅಕ್ಷಯನ ನಿರೀಕ್ಷಿಸುತ್ತ ಕುಕ್ಷಿಯ ಕುಕ್ಕಿರದೆ ಹೇಮಲೋಲಚಾಲನು, ತುತ್ತಿಂಗೆ ಕೂಳನಾಯ್ವ ಲಾಳಭಂಜಕರನೊಲ್ಲೆನೆಂದ ಕೂಡಲ[ಚೆನ್ನಸಂಗ]ಯ್ಯನು
--------------
ಚನ್ನಬಸವಣ್ಣ
ಶುಕ್ಲಶೋಣಿತಪಿಂಡೈಕ್ಯನ ಚಿತ್ತವಾಯು ಆರು ದಳದ ಪದ್ಮದಲ್ಲಿಹುದು. ಮೊಲೆ ಮುಡಿ ಬಂದರೆ ಆ ಪಿಂಡವನು ಹೆಣ್ಣೆಂಬರು. ಗಡ್ಡ ಮೀಸೆಗಳು ಬಂದರೆ ಆ ಪಿಂಡವನು ಗಂಡೆಂಬರು, ಆ ಇಬ್ಬರ ನಡುವೆ ಸುಳಿದ ಆತ್ಮನು ಹೆಣ್ಣು ಅಲ್ಲ, ಗಂಡು ಅಲ್ಲ ನೋಡಾ. ಇದರಂತುವ ತಿಳಿದು ನೋಡಿಹೆನೆಂದರೆ ಶ್ರುತಿಗಳಿಗೋಚರೆಂದ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
-->