ಅಥವಾ

ಒಟ್ಟು 11 ಕಡೆಗಳಲ್ಲಿ , 7 ವಚನಕಾರರು , 11 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೂಗಿನಲ್ಲಿ ಕಂಡು, ಮೂರ್ತಿಯ ಕಂಗಳಲ್ಲಿ ಮಾಡಿಸಿ, ಕಿವಿಯಲ್ಲಿ ಶೋಭನ, ತಲೆಯಲ್ಲಿ ಕೈಗೂಡಿ, ಕಣ್ಣ ಕಾಡಿನ ತಲೆ ಹೊಲದಲ್ಲಿ ಸತ್ತದೇವರ ಕಂಡು, ಹುಟ್ಟಿದ ಗಿಡುವಿನ ಪತ್ರೆಯ ಕೈ ಮುಟ್ಟದೆ ಕೊಯ್ದು, ಬತ್ತಿದ ಕೆರೆಯ ಜಲವ ತುಂಬಿಕೊಂಡು, ಬಂದು ಮುಟ್ಟಿ ಪೂಜಿಸಹೋದಡೆ ಸತ್ತ ದೇವರೆದ್ದು ಪೂಜಾರಿಯ ನುಂಗಿದರು ನೋಡಾ. ತಲೆಯಲ್ಲಿ ನಡೆದು, ತಲೆಗೆಟ್ಟು ನಿರಾಳವಾದ ನಿಜಗುರು ಭೋಗೇಶ್ವರಾ, ನಿಮ್ಮ ಶರಣರಿಗಲ್ಲದೆ ಸತ್ತದೇವರನು ಸಾಯದವರು ಪೂಜಿಸಿ ನಿತ್ಯವ ಹಡೆದೆಹೆನೆಂಬ ಮಾತೆಲ್ಲಿಯದೊ ?
--------------
ಭೋಗಣ್ಣ
ಕಾಣಬೇಕೆಂದು ಮುಂದೆ ನಿಂದು, ಕೇಳಬೇಕೆಂದು ಕೂಗಿ ಕರೆದು, ಈ ಕೇಣಸರದ ಜಾಣತನದ ಗುರುವೇಕೆ ? ಸುಡು ಒಡಲ, ಬಿಡು ಅಸುವ, ನಿನಗೆ ಒಡೆಯತನವೇಕೆ ? ಸುಖದಡಗಿಂಗೆ ಸಿಕ್ಕಿ, ಹಿಡಿಮೊಲಕ್ಕೆ ಗಿಡುವಿನ ಹಂಗಿಲ್ಲ. ಬಿಡುವನವರ, ಐಘಟದೂರ ರಾಮೇಶ್ವರಲಿಂಗ.
--------------
ಮೆರೆಮಿಂಡಯ್ಯ
ಗಿಡುವಿನ ಮೇಲಣ ತುಂಬಿ ಕೂಡೆ ವಿಕಸಿತವಾಯಿತ್ತು, ತುಂಬಿ ನೋಡಾ ! ಆತುಮ ತುಂಬಿ ತುಂಬಿ ಪರಮಾತುಮ ತುಂಬಿ ತುಂಬಿ ನೋಡಾ! ಗುಹೇಶ್ವರನೆಂಬ ಲಿಂಗಕ್ಕೆ ಎರಗಿ ನಿಬ್ಬೆರಗಾಯಿತ್ತು ತುಂಬಿ ನೋಡಾ !
--------------
ಅಲ್ಲಮಪ್ರಭುದೇವರು
ಊರದ ಚೇಳಿನ ಏರದ ಬೇನೆಯಲ್ಲಿ, ಮೂರುಲೋಕವೆಲ್ಲಾ ನರಳಿತ್ತು ! ಹುಟ್ಟದ ಗಿಡುವಿನ ಬಿಟ್ಟ ಎಲೆಯ ತಂದು ಮುಟ್ಟದೆ ಹೂಸಲು; ಮಾಬುದು_ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಸರ್ವಜೀವಂಗಳ ಕೊಲುವಲ್ಲಿ, ಜೀವ ಜೀವನ ಕೈಯಲ್ಲಿ ಸಾವಲ್ಲಿ ಆ ಕೊಲೆಗೆ ಒಲವರ ಬೇಡ. ಆ ಕೊಲೆಯ ಕೊಲುವಲ್ಲಿ ಅದು ಹೊಲೆಯೆಂದು ಆ ಜೀವವ ಬಿಡೆಂದು ಒಲವರ ಬೇಡ. ಅದು ಕೊಲುವ ಜೀವದ ನೋವು, ಸಾವ ಜೀವದ ದಯ. ಆ ಉಭಯದ ಹೊಲಬ ತಿಳಿದು ಮನದ ನೀರಿನಲ್ಲಿ ಮಜ್ಜನವ ಮಾಡಿ ಚಿತ್ತದ ಗಿಡುವಿನ ಪುಷ್ಪವ ಹರಿದು ಹೊತ್ತಿಗೊಂದು ಪರಿಯಾದ ಚಂದನದ ಗಂಧವನಿಟ್ಟು ತಥ್ಯಮಿಥ್ಯವಳಿದ ಅಕ್ಷತೆಯ ಲಕ್ಷಿಸಿ, ಸುಗುಣ ದುರ್ಗುಣವೆಂಬ ಉಭಯದ ಹಗಿನವ ತೆಗೆದು, ನಿಜ ಸುಗಂಧದ ಧೂಪವನಿಕ್ಕಿ, ನಿತ್ಯಾನಿತ್ಯವೆಂಬ ನಟ್ಟಾಲಿಯ ದರ್ಪವ ಕಿತ್ತು, ಮತ್ತಮಾ ಕಂಗಳ ತೆಗೆದ ದರ್ಪಣವ ತೋರುತ್ತ, ಪೂರ್ವ ಪಶ್ಚಿಮ ನಷ್ಟವಾದ ಸತ್ತಿಗೆಯ ಹಿಡಿದು ದುರ್ವಾಸನೆಯೆಂಬ ಉಷ್ಣವ ಪರಿಹರಿಸುವುದಕ್ಕೆ ಸುಮತೆಯೆಂಬ ಆಲವಟ್ಟವನೆ ತಿರುಹುತ್ತ, ಉತ್ತರ ಪೂರ್ವಕ್ಕೆ ಉಭಯವಲ್ಲಾಡದ ಚಾಮರವ ಢಾಳಿಸುತ್ತ, ಇಂತೀ ವರ್ತನಂಗಳಲ್ಲಿ ಸತ್ಯಸಾಕ್ಷಿಯಾಗಿ ಭಕ್ತಿ ಜ್ಞಾನ ವೈರಾಗ್ಯವೆಂಬೀ ಇಷ್ಟವ ಮಾಡಿ ನಿಜ ನಿಶ್ಚಯದ ಬೆಳಗಿನ ಆರತಿಯನೆತ್ತಿ ನೋಡುತ್ತಿರಬೇಕು ದಸರೇಶ್ವರಲಿಂಗವ.
--------------
ದಸರಯ್ಯ
ಇಷ್ಟಲಿಂಗ ಪ್ರಾಣಲಿಂಗವೆಂದು ವಿಭೇದಿಸುವಲ್ಲಿ ಕುಸುಮದ ಗಿಡುವಿಂಗೆ ವಾಸನೆಯುಂಟೆ ಕುಸುಮಕಲ್ಲದೆ ? ಅದು ಗಿಡುವಿಡಿದಾದ ಕುಸುಮವೆಂಬುದನರಿದು ಗಿಡುವಿನ ಹೆಚ್ಚುಗೆ; ಕುಸುಮದ ನಲವು; ಸುಗಂಧದ ಬೆಳೆ. ಭಕ್ತಿಗೆ ಕ್ರೀ, ಕ್ರೀಗೆ ಶ್ರದ್ಧೆ, ಶ್ರದ್ಧೆಗೆ ಪೂಜೆ, ಪೂಜೆಗೆ ವಿಶ್ವಾಸ, ವಿಶ್ವಾಸಕ್ಕೆ ವಸ್ತು ತನ್ಮಯವಾಗಿಪ್ಪುದು. ಇದು ತುರೀಯಭಕ್ತಿಯ ಇರವು; ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಲಿಂಗವ ಮೆಲ್ಲಮೆಲ್ಲನೆ ಕೂಡುವ ಕೂಟ.
--------------
ಮೋಳಿಗೆ ಮಹಾದೇವಿ
ಲೋಹದ ಪಿಂಡವೆಂದಡೆ ಅಲಗಾಗದ ಮುನ್ನವೆ ಇರಿಯಬಲ್ಲುದೆ ? ಕುಸುಮದ ಗಿಡುವೆಂದಡೆ ಕುಸುಮವಾಸನೆಯ ಕೊಂಡು ಎಸಗುವುದಕ್ಕೆ ಮುನ್ನವೆ, ಆ ಗಿಡುವಿನ ಪರ್ಣನ ಸುವಾಸನೆವುಂಟೆ ? ಇಂತೀ ದ್ವೈತ ಅದ್ವೈತದ ಭೇದ ಉಭಯಸ್ಥಲ ವಿವರ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಗಿಡುವಿನ ಪುಷ್ಪವ ಕೊಯ್ಯೆನು, ಮಡುವಿನಗ್ಘವಣಿಯ ತುಳುಕೆನು, ಸ್ಥಾವರಂಗಳ ಪೂಜಿಸೆನು. ಕೇಳು ಕೇಳು ನಮ್ಮಯ್ಯಾ; ಮನದಲ್ಲಿ ನೆನೆಯೆ, ವಚನಕ್ಕೆ ತಾರೆ, ಹೊಡವಂಟು ಬೇರು ಮಾಡುವವನಲ್ಲ. ಬಸುರೊಳಗಿರ್ದು ಕಾಲನಿಡುವ ಬುದ್ಧಿ ಕೂಡದೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಆರಿಕೆ ಬಿತ್ತಿದ ಗಿಡುವಿನ ಹೂವ ಕೊಯಿದು, ಊರೆಲ್ಲರೂ ಕಟ್ಟಿಸಿದ ಕೆರೆಯ ನೀರ ತಂದು, ನಾಡೆಲ್ಲರೂ ನೋಡಿಯೆಂದು ಪೂಜಿಸುತ್ತ, ಪೂಜಿಸಿದ ಪುಣ್ಯ ಹೂವಿಗೋ ? ನೀರಿಗೋ? ನಾಡೆಲ್ಲಕ್ಕೊರಿ ಪೂಜಿಸಿದಾತಗೊ? ಇದ ನಾನರಿಯೆ, ನೀ ಹೇಳೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ನೀರ ನಡುವೆ ಒಂದು ಗಿಡು ಹುಟ್ಟಿತ್ತು. ಆ ಗಿಡುವಿನ ಎಲೆಯ ಮೆಲಬಂದಿತ್ತೊಂದು ಕೋಡಗ. ಆ ಕೋಡಗದ ಕೊಂಬಿನಲ್ಲಿ ಮೂಡಿತ್ತು ಅದ್ಭುತ. ಆ ಅದ್ಭುತವಳಿದಲ್ಲದೆ ಶರಣನಾಗಬಾರದು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಮಡುವಿನಲ್ಲಿ ಮೊಗೆತಹೆನೆ? ಅಗ್ಗವಣಿ ಶುದ್ಧವಲ್ಲ. ಗಿಡುವಿನ ಪುಷ್ಪವ ತಹೆನೆ? ಹೂ ನಿರ್ಮಾಲ್ಯ. ಅಟ್ಟ ಆಡಿಗೆಯನಾದಡೆ ಮನ ಮುನ್ನವೆ ಉಂಡಿತ್ತು. ನುಡಿವ ಶಬ್ದ ಎಂಜಲಾಯಿತ್ತು. ಹಿಡಿಯೊಳಯಿಂಕೆ ಒಂದ ಕೊಂಡುಬಂದು ಲಿಂಗವೆಂದು ಸಂಕಲ್ಪವ ಮಾಡಿದಡೆ ಅದಕ್ಕೆ ಬೋನವ ಕೊಡಲೊಲ್ಲೆನೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
-->