ಅಥವಾ

ಒಟ್ಟು 330 ಕಡೆಗಳಲ್ಲಿ , 62 ವಚನಕಾರರು , 263 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸ್ವಯವಿದ್ದಂತೆ ಲಯವ ಕೂಡುವರೆ ಅಯ್ಯಾ ? ಪರುಷವಿದ್ದಂತೆ ಹೇಮವನರಸುವರೆ ಅಯ್ಯಾ ? ಸ್ವಯಂಜ್ಯೋತಿಯಿದ್ದಂತೆ ದೀಪವನರಸುವರೆ ಅಯ್ಯಾ ? ನೀನಲ್ಲಿ ಇಲ್ಲಿ ಕೂಡಿಹೆನೆಂಬ ಕೂಟದ ಭಿನ್ನವ ಹೇಳಯ್ಯಾ ? ಕಣ್ಣಿಲಿ ನೋಡಿ ಕಣ್ಣ ಮರೆದೆನೆಂದು ಆ ಭಿನ್ನಭಾವದಂತೆ ಆದಿರಲ್ಲಾ ? ಅದು ನಿಮ್ಮ ಗುಣವಲ್ಲ, ಎನ್ನ ಗುಣ. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ.
--------------
ಮೋಳಿಗೆ ಮಹಾದೇವಿ
ದ್ಥೀರಪ್ರಸಾದ ವೀರಪ್ರಸಾದ ಆವೇಶಪ್ರಸಾದ. ಇಂತೀ ತ್ರಿವಿಧಪ್ರಸಾದವ ಕೊಂಬಲ್ಲಿ ಅಂಗವರತು ಇದಿರಿಂಗೆ ಭಯಭಂಗವಿಲ್ಲದೆ ಬೆಗಡು ಜಿಗುಪ್ಸೆ ಚಿಕಿತ್ಸೆ ತಲೆದೋರದೆ ಮಹಾಕುಂಭಘೃತಂಗಳ ಕೊಂಡಂತೆ. ಮಹಾಮೇರುವೆಯ ಅಲ್ಪಮೊರಡಿ ದ್ಥಿಕ್ಕರಿಸಿ ಅಲ್ಲಿಗೆ ಹೋದಡೆ ಅದರ ತಪ್ಪಲಲ್ಲಿಯೆ ತಾನಡಗಿದಂತೆ. ಈ ಗುಣ ದೃಷ್ಟಪ್ರಸಾದಿಯ ಕಟ್ಟಿನ ಭೇದ. ದಹನ ಚಂಡಿಕೇಶ್ವರಲಿಂಗವು ತಾನಾದ ಅಂಗದ ತೆರ.
--------------
ಪ್ರಸಾದಿ ಲೆಂಕಬಂಕಣ್ಣ
ಪಾತಕ ಹೊಲೆಯೆಂದರಿದು ಬಿಟ್ಟಲ್ಲಿ, ಮತ್ತಾ ಗುಣ ಸ್ವೀಕರಿಸಬಹುದೆ ? ಇವೆಲ್ಲ ಅಲ್ಲಾ ಎಂದು ಬಲ್ಲತನವ ತಾನರಿದು, ಮತ್ತೆಲ್ಲರಲ್ಲಿ ಬೆರಸಬಹುದೆ ? ಒಡೆದ ಹಂಚಿಂಗೆ, ಹಿಡಿದು ಬಿಟ್ಟ ವ್ರತಕ್ಕೆ, ಮತ್ತಿವ ಒಡಗೂಡಬಹುದೆ ? ಇಂತೀ ಬಿಡುಗಡೆಯನರಿದಲ್ಲಿ, ಅನುಸರಣೆಯ ಮಾಡಿದಡೆ, ಎನ್ನೊಡೆಯ ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವಾದಡೂ ಹರಶರಣರಿಗೆ ದೂರ.
--------------
ಶಿವಲೆಂಕ ಮಂಚಣ್ಣ
ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ ಮುಂತಾಗಿರ್ದ ದೃಷ್ಟ ಅರ್ಪಿತಂಗಳ ಅರ್ಪಿಸುವಲ್ಲಿ ಗಂಧದಿಂದ ಸುಳಿವ ನಾನಾ ಸುಗಂಧವ ರಸದಿಂದ ಬಂದ ನಾನಾ ರಸಂಗಳ ರೂಪಿನಲ್ಲಿ ಕಾಣಿಸಿಕೊಂಬ ನಾನಾ ಚಿತ್ರ ವಿಚಿತ್ರ ಖಂಡಿತ ಅಖಂಡಿತಮಪ್ಪ ದೃಷ್ಟಾಂತಂಗಳಲ್ಲಿ ಸ್ಪರ್ಶನದಲ್ಲಿ ಮೃದುಕಠಿಣದೊಳಗಾದ ಮುಟ್ಟುತಟ್ಟಿನ ಭೇದವ ಲಕ್ಷಿಸುವಲ್ಲಿ ಶಬ್ದದಿಂದ ಸಪ್ತಸ್ವರದೊಳಗಾದ ನಾನಾ ಘೋಷ ವಾಸನಂಗಳ ಅಳಿದುಳಿದು ತೋರುವ ಸುನಾದ ಸಂಚುಗಳಲ್ಲಿ -ಇಂತೀ ಪಂಚೇಂದ್ರಿಯಂಗಳಲ್ಲಿ ಪ್ರಸಾದ ಮುಂತಾಗಿ ಅರ್ಪಿಸಿಕೊಂಡೆಹೆವೆಂಬಲ್ಲಿ ಗುರುಪ್ರಸಾದಿಗೆ ಲಿಂಗಪ್ರಸಾದವಿಲ್ಲ. ಲಿಂಗಪ್ರಸಾದಿಗೆ ಜಂಗಮಪ್ರಸಾದವಿಲ್ಲ. ಜಂಗಮಪ್ರಸಾದಿಗೆ ಮಹಾಪ್ರಸಾದವಿಲ್ಲ. ಮಹಾಪ್ರಸಾದಿಗೆ ಪರಿಪೂರ್ಣ ಪ್ರಸಾದವಿಲ್ಲ. ಪರಿಪೂರ್ಣಪ್ರಸಾದಿಗೆ ಪಂಚೇಂದ್ರಿಯದೊಳಗಾದ ಮುಟ್ಟಿನ ಪ್ರಸಾದ, ಕಟ್ಟಿನ ಸೂತಕವಿಲ್ಲ. ಅದೆಂತೆಂದಡೆ: ಕರ್ಪೂರದ ಚಿತ್ರಸಾಲೆಯ ಕಿಚ್ಚು ಮುಟ್ಟಿದ ಮತ್ತೆ ಚಿತ್ರವಲ್ಲಿಯೆ ನಿರ್ಲಕ್ಷ್ಯವಾದಂತೆ ಪತ್ರಂಗಳಲ್ಲಿ ನಾನಾ ಅಕ್ಷರಂಗಳ ಲಕ್ಷಿಸಿ ಬರೆದು ಅವು ಕಿಚ್ಚು ಮುಟ್ಟಿ ಸುಟ್ಟಲ್ಲಿ ಎತ್ತಿ ಪ್ರತಿಯ ಲಕ್ಷಿಸಬಹುದೆ ? ಇಂತೀ ಅರಿದರುಹಿನಲ್ಲಿ ಎಡೆದೆರಪಿಲ್ಲದ ಪ್ರಸಾದಿಗೆ ಆ ಗುಣ ಪ್ರಸನ್ನಪ್ರಸಾದಿಯ ಇರವು ದಹನ ಚಂಡಿಕೇಶ್ವರಲಿಂಗದಿರವು.
--------------
ಪ್ರಸಾದಿ ಲೆಂಕಬಂಕಣ್ಣ
ಕಾಲು ಮೂರು, ಬಸುರು ನಾಲ್ಕು, ಕೈ ಐದು, ತಲೆ ಎಂಟು, ಬಾಯಿ ಒಂಬತ್ತು, ಕಿವಿ ಆರು, ಕಣ್ಣು ಮೂವತ್ತೆರಡು. ಇಂತೀ ಪಿಂಡಕ್ಕೆ ಐವತ್ತೊಂದು ಕಳೆ. ಆ ಜೀವಕ್ಕೆ ಪರಮನೊಂದೆ ಕಳೆ. ಈ ಗುಣ ಜಾÕನಪಿಂಡದ ಭೇದ. ಶಂಭುವಿನಿಂದಿತ್ತ ಸ್ವಯಂಭವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಅರಿಕೆ ಉಳ್ಳನ್ನಕ್ಕ ಅರಿವು, ಅರಿವು ಉಳ್ಳನ್ನಕ್ಕ ಕುರುಹು, ಕುರುಹು ಉಳ್ಳನಕ್ಕ ಸತ್ಕಿೃೀ ಮಾರ್ಗಂಗಳು. ಆ ದೆಸೆಯಿಂದ ತ್ರಿವಿಧಸ್ಥಲ ರೂಪಾದವು. ಇಂತೀ ತ್ರಿವಿಧ ತ್ರಿವಿಧದಿಂದ ಷಡುಸ್ಥಲ ರೂಪಾಗಿ ಮೂಲ ಮೊಳೆಯೊಂದರಲ್ಲಿ ಹಲವು ಶಾಖೆ ಹೊಲಬಾದಂತೆ, ಇದು ನಿಜವಸ್ತುವಿನ ವಸ್ತುಕ. ಈ ಗುಣ ನಿರ್ಭಾವ ಭಾವವಾದ ಸಂಬಂಧ. ಇದು ವರ್ತಕ ಭಕ್ತಿಯ ಬ್ಥಿತ್ತಿ. ಉತ್ತರ ಪೂರ್ವದಲ್ಲಿ ಬೆರಸಿ ನಿರುತ್ತರವಾದ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಐದುಮುಖದಂಗನೆಗೆ ತನು ಮೂರು, ತದಂಗವೆರಡು, ಜೀವವೊಂದು, ಗುಣ ಇಪ್ಪತ್ತೈದು. [ವಂಶದ]ವರು ಇಪ್ಪತ್ತೈದುಮಂದಿಯ ಕೈವಿಡಿದು ಅಷ್ಟದಿಕ್ಕು ನವಖಂಡ ಜಂಬೂದ್ವೀಪವ ಮೇಲುಹೊದಿಕೆಯ ಮಾಡಿ, ಹೊದ್ದುಕೊಂಡು, ದೃಷ್ಟಜಗಕ್ಕೆ ಬಂದು ಕಷ್ಟಬಡುತಿದ್ದ ಭೇದವ ನೀನೆ ಬಲ್ಲೆ, ಉಳಿದರಿಗಸಾಧ್ಯ, ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅನ್ಯರು ಮಾಡಿದುದ ಮುಟ್ಟದೆ ತನ್ನ ತಾ ಮಾಡಿಕೊಂಡು ನಡೆವುದು ಸೌಕರಿಯವಲ್ಲದೆ, ವ್ರತಕ್ಕೆ ಸಂಬಂಧವಲ್ಲ. ಅದೆಂತೆಂದಡೆ ರಸ ಗಂಧ ರೂಪು ಶಬ್ದ ಸ್ಪರ್ಶವೆಂಬ ಪಂಚೇಂದ್ರಿಯವ ಶುದ್ಧತೆಯ ಮಾಡಿ ಪಂಚಾಚಾರವೆಂಬುದನರಿತು, ರಸವ ರುಚಿಸುವಲ್ಲಿ ಬಹುದಕ್ಕೆ ಮುನ್ನವೆ ಭೇದವನರಿತು, ನಾಸಿಕ ವಾಸನೆಯ ಕೊಂಬಲ್ಲಿ ಸೋಂಕುವುದಕ್ಕೆ ಮುನ್ನವೆ ಸುಗುಣ ದುರ್ಗುಣವನರಿತು, ಕಾಂಬುದಕ್ಕೆ ಮುನ್ನವೆ ರೂಪ ನಿರೂಪೆಂಬುದನರಿತು, ನುಡಿಯುವುದಕ್ಕೆ ಮುನ್ನವೆ ಮೃದು ಕoಣವೆಂಬುದನರಿತು, ಇಂತೀ ಭೇದಂಗಳಲ್ಲಿ ಅರ್ಪಿತದ ಲಕ್ಷಣವ ಕಂಡು, ದೃಷ್ಟದಿಂದ ಕಟ್ಟುಮಾಡುವುದೆ ವ್ರತ ; ಆ ಗುಣ ತಪ್ಪದೆ ನಡೆವುದೆ ಆಚಾರ. ಇಂತೀ ವ್ರತಾಚಾರಂಗಳಲ್ಲಿ ಸರ್ವಶೀಲಸನ್ನದ್ಧನಾಗಿ, ಸರ್ವಮುಖ ಲಿಂಗಾವಧಾನಿಯಾಗಿ ಇಪ್ಪ ಅಂಗವೆ, ಆಚಾರವೆ ಪ್ರಾಣವಾಗಿಪ್ಪ ರಾಮೇಶ್ವರಲಿಂಗವು ತಾನೆ.
--------------
ಅಕ್ಕಮ್ಮ
ಕಾಮುಕಗೆ ದುರ್ಜನಗೆ ಕಪಟಿಗೆ ಹೇಮಚೋರಗೆ ಕಾರುಕ ಸಮ್ಮಗಾರಗೆ ಆವ ಭಾವದ ವ್ರತವ ಮಾಡಲಿಕ್ಕೆ, ಅವ ಭಾವಿಸಿ ನಡೆಯಬಲ್ಲನೆ? ಕಾಗೆಗೆ ರಸಾನ್ನ ಮುಂದಿರಲಿಕೆ, ಹರಿವ ಕೀಟಕಂಗೆ ಸರಿವುದಲ್ಲದೆ ಮತ್ತೆ ಅದು ಸವಿಯಸಾರವ ಬಲ್ಲುದೆ? ಇಂತೀ ಇವು ತಮ್ಮ ಜಾತಿಯ ಲಕ್ಷಣವ ಕೊಂದಡೂ ಬಿಡವಾಗಿ, ವ್ರತಾಚಾರವ ಸಂಬಂದ್ಥಿಸುವಲ್ಲಿ ಶರಣರೆಲ್ಲರ ಕೂಡಿ, ಈ ಗುಣ ಅಹುದು ಅಲ್ಲ ಎಂದು ಹೇಳಿ, ಜಾತಿವರ್ಗದ ಗುಣವ ನೀಕರಿಸಿ ಬಿಡಿಸಿ, ಸುಜಾತಿಯ ಅರಸಿನ ಪಟ್ಟವಂ ಕಟ್ಟಿ ಶರಣರೆಲ್ಲರು ನಿಹಿತಾಚಾರದಲ್ಲಿ ಸಹಭೋಜನವಂ ಮಾಡಿ ಇಂತೀ ಗುಣನಿಹಿತವ್ರತ ಅಜಾತನ ಒಲುಮೆ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ನಿಹಿತದ ಶೀಲದ ನೇಮ.
--------------
ಅಕ್ಕಮ್ಮ
ಗುರುಮುಖದಿಂದ ಪರಮಲಿಂಗವು ತನ್ನ ಕರವ ಸೇರಿದ ಬಳಿಕ ಆ ಲಿಂಗದಲ್ಲಿ ಸ್ನೇಹ ಮೋಹವ ಬಲಿದು, ಲಿಂಗಪ್ರೇಮಿಯಾಗಿ, ಲಿಂಗಭಾವದಲ್ಲಿ ತನ್ನ ಭಾವವ ಬಲಿದ ಬಳಿಕ ಅನ್ಯವಿಷಯವ್ಯಾಪ್ತಿಯ ವ್ಯವಹಾರದ ಭ್ರಾಂತಿಯಿಲ್ಲದಿರಬೇಕು ನೋಡಾ. ಇದೇ ಏಕಚತ್ತಮನೋಭಾವಿಯ ಗುಣ; ಇದೇ ಲಿಂಗಗ್ರಾಹಕನ ನಿರುತ. ಲಿಂಗವ ಮುಟ್ಟಿ ಮತ್ತೇನನೂ ಮುಟ್ಟದ ನಿಃಕಳಂಕನ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ವಾಗದ್ವೈತದಲ್ಲಿ ನಿಂದು, ಸ್ವಯಾದ್ವೆ ೈತವನರಿಯಬೇಕು. ಆ ಗುಣ ಸ್ವಯವಾಗಿ ನಿಂದು, ಗುರುಮೂರ್ತಿಯಾಗಬೇಕು. ಗುರುಮೂರ್ತಿ ನಿಶ್ಚಯವಾಗಿ ನಿಂದು, ಚರಲಿಂಗದಲ್ಲಿ ನಿಃಪತಿಯಾಗಿ ನಿಂದುದು ದ್ವೈತ. ಎರಡಳಿದು ಒಂದೆನಿಸಿ ನಿಂದುದು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ತಾನೆ.
--------------
ಶಿವಲೆಂಕ ಮಂಚಣ್ಣ
ಅರಿದೆಹೆನೆಂದು ಕುರುಹಿಟ್ಟು ಇದಿರಿಂಗೆ ಹೇಳುವಾಗ, ಆ ಗುಣ ಅರಿವೋ, ಮರವೆಯೋ ? ಹೋಗಲಂಜಿ, ಹಗೆಯ ಕೈಯಲ್ಲಿ ಹಾದಿಯ ತೋರಿಸಿಕೊಂಬಂತೆ, ತನ್ನನರಿಯದ ಯುಕ್ತಿ, ಇದಿರಿಂಗೆ ಅನ್ಯಬೋಧೆಯುಂಟೆ ? ಈ ಅನ್ಯಬ್ಥಿನ್ನಕ್ಕೆ ಮೊದಲೆ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಜಂಗಮವೆಂದಡೆ ನಡೆನುಡಿ ಸಿದ್ಧಿಯಾಗಿರಬೇಕು. ಮೂರು ಮಲಕ್ಕೆ ಸಿಕ್ಕದೆ, ಆರರಡಿಗೆ ಅ[ಡಿ]ಮೆಯಾಗದೆ, ಆ ಗುಣ ತೋರುವುದಕ್ಕೆ ಮೊದಲೆ ಮೀರಿ ಇರಬೇಕೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ದೃಕ್ಕು ಸಕಲವನವಗವಿಸುವನ್ನಕ್ಕ, ಶ್ರೋತ್ರ ಶಬ್ದವ ವೇದ್ಥಿಸುವನ್ನಕ್ಕ, ಕ್ರೀ ಶೂನ್ಯವೆನಲೇತಕ್ಕೆ? ಭಾವಿಸಿಹೆನೆಂಬನ್ನಕ್ಕ ಕ್ರೀ ಅರಿದೆಹೆನೆಂಬನ್ನಕ್ಕ ಸೂತಕ. ಕುಕ್ಕಳಗುದಿವುದ ಹುಟ್ಟಿನಲ್ಲಿ ತೆಗೆದಿಕ್ಕುವಂತೆ, ಅದು ದೃಷ್ಟಕ್ಕ ದೃಷ್ಟ, ನಿಶ್ಚಯಕ್ಕೆ ನಿಜ. ಈ ಗುಣ ಉಭಯಸ್ಥಲ ನಿರ್ವಾಹ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 49 ||
--------------
ದಾಸೋಹದ ಸಂಗಣ್ಣ
ಘಟದೊಳಗೆ ರಸವಿದ್ದು, ರಸದೊಳಗೆ ಘಟವಿದ್ದು, ಸಂಗಗುಣದಿಂದ ನೀರಾಗಿ. ಸಂಗ ಹಿಂಗಲಿಕೆ ಉಭಯದಂಗ ಒಂದಾದ ತೆರನಂತೆ, ಈ ಗುಣ ಲಿಂಗಾಂಗಿಯ ಸಂಗದ ವಿವರ, ನಿಃಕಳಂಕ ಮಲ್ಲಿಕಾರ್ಜುನಲಿಂಗವ ಕೂಡಿದ ಪರಮಸುಖಿಯಂಗ.
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->