ಅಥವಾ

ಒಟ್ಟು 18 ಕಡೆಗಳಲ್ಲಿ , 13 ವಚನಕಾರರು , 18 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಯ್ಯಾ ನೀನೆನಗೆ ಗುರುವಪ್ಪಡೆ, ನಾ ನಿನಗೆ ಶಿಷ್ಯನಪ್ಪಡೆ, ಎನ್ನ ಕರಣಾದಿ ಗುಣಂಗಳ ಕಳೆದು, ಎನ್ನ ಕಾಯದ ಕರ್ಮವ ತೊಡೆದು, ಎನ್ನ ಪ್ರಾಣನ ಧರ್ಮವ ನಿಲಿಸಿ, ನೀನೆನ್ನ ಕಾಯದಲಡಗಿ, ನೀನೆನ್ನ ಪ್ರಾಣದಲಡಗಿ ನೀನೆನ್ನ ಭಾವದಲಡಗಿ, ನೀನೆನ್ನ ಕರಸ್ಥಲಕ್ಕೆ ಬಂದು ಕಾರುಣ್ಯವ ಮಾಡಾ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಮುನ್ನೂರ ಅರುವತ್ತು ನಕ್ಷತ್ರಕ್ಕೆ ಬಾಯಿಬಿಟ್ಟುಕೊಂಡಿಪ್ಪುದೆ ಸಿಂಪು ಅದು ಸ್ವಾತಿಗಲ್ಲದೆ ಬಾಯ್ದೆರೆಯದು ಕೇಳು, ಕೇಳು ತಂದೆ. ಎಲ್ಲವಕ್ಕೆ ಬಾಯ ಬಿಟ್ಟಡೆ ತಾನೆಲ್ಲಿಯ ಮುತ್ತಪ್ಪುದು ಪರಮಂಗಲ್ಲದೆ ಹರುಷತಿಕೆಯಿಲ್ಲೆಂದು ಕರಣಾದಿ ಗುಣಂಗಳ ಮರೆದರು, ಇದು ಕಾರಣ, ಕೂಡಲಸಂಗನ ಶರಣರು ಸಪ್ತವ್ಯಸನಿಗಳಲ್ಲಾಗಿ.
--------------
ಬಸವಣ್ಣ
ಅಡ್ಡಬಿದ್ದು ಶಿಷ್ಯನ ಮಾಡಿಕೊಂಬ ದಡ್ಡ ಪ್ರಾಣಿಗಳನೇನೆಂಬೆನಯ್ಯ. ಏನೇನೂ ಅರಿಯದ ಎಡ್ಡ ಮಾನವರಿಗೆ ಉಪದೇಶವ ಮಾಡುವ ಗೊಡ್ಡ ಮಾನವನ ಮುಖವ ತೋರದಿರಯ್ಯಾ. ಅದೇನು ಕಾರಣವೆಂದಡೆ: ಆ ಮೂಢಜೀವಿಯ ಪ್ರಪಂಚವ ಕಳೆಯಲಿಲ್ಲ. ಅವನ ಪಂಚೇಂದ್ರಿಯಂಗಳು, ಸಪ್ತವ್ಯಸನಂಗಳು, ಅಷ್ಟಮದಂಗಳೆಂಬ ಖೊಟ್ಟಿ ಗುಣಂಗಳ ಬಿಡಿಸಲಿಲ್ಲ. ಸೂತಕ ಪಾತಕಂಗಳ ಕೆಡಿಸಿ, ಮೂರು ಮಲಂಗಳ ಬಿಡಿಸಿ ಮುಕ್ತಿಪಥವನರುಹಲಿಲ್ಲ. ಮಹಾಶೂನ್ಯ ನಿರಾಳ ನಿರಂಜನಲಿಂಗವ ಕರ-ಮನ-ಭಾವ ಸರ್ವಾಂಗದಲ್ಲಿ ತುಂಬಿ ನಿತ್ಯನೆಂದೆನಿಸಲಿಲ್ಲ. ಇದನರಿಯದ ವ್ಯರ್ಥಕಾಯರುಗಳ ಗುರುವೆಂದಡೆ ಪ್ರಮಥರು ಮೆಚ್ಚುವರೆ ? ಇಂತಪ್ಪ ಗುರು ಶಿಷ್ಯರೀರ್ವರು ಅಜ್ಞಾನಿಗಳು. ಅವರು ಇಹಲೋಕ ಪರಲೋಕಕ್ಕೆ ಹೊರಗೆಂದಾತನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಪರಮಶಾಂತ ಪರಿಪೂರ್ಣ ಪ್ರಾಣಲಿಂಗಿಯು ಮಹಾನುಭಾವ ಜಂಗಮಲಿಂಗ ಸುಖಮಯವಾದ ಬಳಿಕ ಹುಸಿಯೆಂಬ ಮಸಿಯ ಪೂಸದ, ಆಸೆಯೆಂಬ ಮದ್ದು ತಿನ್ನದೆ, ಭಾಷೆ ಬಣ್ಣಿಗನಾಗದೆ, ಕಣ್ಣುಗೆಟ್ಟು ಮಲತ್ರಯ ಮೋಹಿಯಾಗದೆ, ಸಂದುಸಂಶಯ ಮಂದಮರುಳನಾಗದೆ, ಬೆಂದ ಒಡಲಿಗೆ ಸಂದು ಯಂತ್ರ ಮಂತ್ರ ವೈದ್ಯ ವಶ್ಯಾದಿ ಉಪಾಧಿ ಉಲುಹಿನ ಭ್ರಾಂತನಾಗದೆ, ಸದ್ಭಕ್ತಿ ಸುಜ್ಞಾನ ಪರಮವಿರಾಗತೆಯೆಂಬ ರತ್ನವ ಕಳೆಯದೆ ಡಂಭಕ ಜಡಕರ್ಮವ ಸೋಂಕದೆ ಕರಣಾದಿ ಗುಣಗಳ ಜರಿದು ಏಕಾಂತವಾಸನಾಗಿ ಚರಿಸುತಿರ್ದ ಗುರುನಿರಂಜನ ಚನ್ನಬಸವಲಿಂಗದ ಲೀಲೆಯುಳ್ಳನ್ನಕ್ಕರ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪೃಥ್ವಿಯಲ್ಲಿ ಜನನವೂ, ಆಕಾಶದಲ್ಲಿ ಮರಣವೂ, ಧರೆಯಲ್ಲಿ ಸಂತೋಷವೂ, ಗಗನದಲ್ಲಿ ದುಃಖವೂ, ಇಳೆಯಲ್ಲಿ ಅಹಂಕಾರವೂ, ಬಯಲಲ್ಲಿ ಜ್ಞಾನವೂ, ಬಯಲಲ್ಲಿ ಧರ್ಮವೂ, ಧರಣಿಯಲ್ಲಿ ಕರ್ಮವೂ, ಆಕಾಶದಲ್ಲಿ ಭಕ್ತಿಯೂ, ಧರಣಿಯಲ್ಲಿ ಶಕ್ತಿಯೂ, ಭೂಮಿಯಲ್ಲಿ ಜಾಗ್ರವೂ, ಆಕಾಶದಲ್ಲಿ ಸುಷುಪ್ತಿಯೂ, ಅಲ್ಲಿ ನೀನೂ ಇಲ್ಲಿ ನಾನೂ ಇರಲಾಗಿ, ನೀನೆಂತು ನನಗೊಲಿದೆ ? ನಾನೆಂತು ನಿನ್ನ ಕೂಡುವೆ ? ಬಯಲಲ್ಲಿರ್ಪ ಗುಣಗಳಂ ನಾನು ಕೊಂಡು, ಪೃಥ್ವಿಯಲ್ಲಿರ್ಪ ಗುಣಂಗಳಂ ನಿನಗೆ ಕೊಟ್ಟು, ಅಲ್ಲಿ ಬಂದ ನಿರ್ವಾಣಸುಖಲಾಭವನ್ನು ಪಡೆದರೆ ನೀನು ಮೆಚ್ಚುವೆ ನಾನು ಬದುಕುವೆ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಚಿಲುಮೆಯ ಅಗ್ಘವಣಿಯ ಕುಡಿದರೇನೋ, ಜನ್ಮದ ಮೈಲಿಗೆಯ ತೊಳೆಯದನ್ನಕ್ಕರ? ಕಾಡುಗಟ್ಟಿಯ ನೀರ ಕುಡಿದರೇನೋ, ತನ್ನ ಕಾಡುವ ಕರಣಾದಿ ಗುಣಂಗಳ ಕಳೆದುಳಿಯದನ್ನಕ್ಕರ? ಉಳ್ಳಿ ನುಗ್ಗೆಯ ಬಿಟ್ಟರೇನೋ, ಸಂಸಾರದ ಸೊಕ್ಕಿನುಕ್ಕಮುರಿದು ಮಾಯಾದುರ್ವಾಸನೆಯ ವಿಸರ್ಜಿಸದನ್ನಕ್ಕರ? ಸಪ್ಪೆಯನುಂಡರೇನೋ ಸ್ತ್ರೀಯರ ಅಪ್ಪುಗೆ ಬಿಡದನ್ನಕ್ಕರ? ಅದೇತರ ಶೀಲ, ಅದೇತರ ವ್ರತ ಮರುಳೇ? ಅಂಗವಾಚಾರಲಿಂಗವಾಗಿ ಮನವು ಅರಿವು ಸಂಬಂಧವಾಗಿ ಸರ್ವ ದುರ್ಭಾವ ಚರಿತ್ರವೆಲ್ಲಾ ಕೆಟ್ಟು ಸತ್ಯ ಸದ್ಭಾವ ನೆಲೆಗೊಂಡ ಸದ್ಭಕ್ತನ ಸುಶೀಲಕ್ಕೆ ನಮೋನಮೋಯೆಂಬೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಪೃಥ್ವಿಯೇ ಸ್ಥಾವರ, ಜಲವೇ ಜಂಗಮ, ಅಗ್ನಿಯೇ ಸ್ಥಾವರ, ವಾಯುವೇ ಜಂಗಮ. ಆಕಾಶವೇ ಸ್ಥಾವರ, ಜೀವನೇ ಜಂಗಮ. ಪೃಥ್ವಿಯೇ ಸ್ಥೂಲ, ಜಲವೇ ಸೂಕ್ಷ್ಮ. ಅಗ್ನಿಯೇ ಸ್ಥೂಲ, ವಾಯುವೇ ಸೂಕ್ಷ್ಮ ಆಕಾಶವೇ ಸ್ಥೂಲ, ಆತ್ಮನೇ ಸೂಕ್ಷ್ಮ. ಸ್ಥೂಲವಸ್ತುಗಳಿಂದ ಸೂಕ್ಷ್ಮ ವಸ್ತುಗಳೇ ಪ್ರಾಣಮಾಗಿಹವು. ತತ್ಸಂಗಂಗಳಿಂ ಬಿಂದುಕಳಾನಾದಗಳು ಸೃಷ್ಟಿಯಾಗುತ್ತಿಹವು. ಸ್ಥೂಲವಸ್ತುಗಳು ಆ ಸೂಕ್ಷ್ಮವಸ್ತುಗಳಲ್ಲೇ ಸೃಷ್ಟಿ ಸ್ಥಿತಿ ಸಂಹಾರಂಗಳಂ ಹೊಂದುತ್ತಿಹವು. ಪೃಥಿವ್ಯಾದಿ ಪಂಚಭೂತಂಗಳೇ ಘ್ರಾಣಾದಿ ಪಂಚೇಂದ್ರಿಯಂಗಳಾಗಿ, ಆಯಾ ಗುಣಂಗಳಂ ಗ್ರಹಿಸುವಂತೆ ಆತ್ಮನಿಗೆ ಮನಸ್ಸೇ ಇಂದ್ರಿಯಮಾಗಿ, ಆತ್ಮನ ಗುಣವಂ ತಾನೇ ಗ್ರಹಿಸುತ್ತಿರ್ಪುದು. ಪರಮಾತ್ಮನಿಗೆ ಭಾವೇಂದ್ರಿಯಮಾಗಿ, ಆ ಪರಮನ ಗುಣವಂ ತಾನೇ ಗ್ರಹಿಸುತ್ತಿರ್ಪುದು. ಮುಖಂಗಳಾವುವೆಂದೊಡೆ: ಘ್ರಾಣಕ್ಕೇ ವಾಯುವೇ ಮುಖ, ಜಿಹ್ವೆಗೆ ಅಗ್ನಿಯೇ ಮುಖ, ನೇತ್ರಕ್ಕೆ ಜಲವೇ ಮುಖ, ತ್ವಕ್ಕಿಗೆ ಪೃಥ್ವಿಯೇ ಮುಖ, ಶ್ರೋತ್ರಕ್ಕಾತ್ಮವೇ ಮುಖ, ಮನಸ್ಸಿಗೆ ಚಿದಾಕಾಶವೆ ಮುಖ, ಭಾವಕ್ಕೆ ನಿಜವೇ ಮುಖವಾದಲ್ಲಿ. ಪಂಚೇದ್ರಿಯಂಗಳು ಪಂಚಭೂತಗುಣಂಗಳಂ ಗ್ರಹಿಸುವಂತೆ, ಮನಸ್ಸು ಆತ್ಮಗುಣವನ್ನು ಜ್ಞಾನಮುಖದಿಂ ಗ್ರಹಿಸಿ, ಗುರುದತ್ತಲಿಂಗವೂ ಆತ್ಮನೂ ಏಕಮೆಂದು ತಿಳಿದು, ತೂರ್ಯಭಾವದಲ್ಲಿ ಸ್ವಭಾವಮಾಗಿ, ನಿಜಾನಂದ ತೂರ್ಯಾತೀತದಲ್ಲಿ ಎರಕವೆರದಿರ್ಪುದೇ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಆಚಾರ ಸದಾಚಾರ ವಿಚಾರ ಅವಿಚಾರ ಚತುವಿರ್ಧಕ್ಕೆ ಕರ್ತೃವಹಲ್ಲಿ ಭೇದಮಾರ್ಗಂಗಳ ತಿಳಿದು ಪಂಚಸೂತ್ರ ಲಕ್ಷಣಂಗಳನರಿತು ರವಿಶಶಿ ಉಭಯ ಸಮಾನಂಗಳ ಕಂಡು ವರ್ತುಳಯೋನಿಪೀಠದಲ್ಲಿ ಗೋಳಕಾಕಾರವ ಸಂಬಂಧಿಸುವಲ್ಲಿ ಅಷ್ಟಗಣ ನೇಮಂಗಳ ದೃಷ್ಟವ ಕಂಡು ರವಿ ಶಶಿ ಪವನ ಪಾವಕ ಆತ್ಮ ಮುಂತಾದ ಪವಿತ್ರಂಗಳಲ್ಲಿ ಮಾಂಸಪಿಂಡತ್ರಯವ ಕಳೆದು ಮಂತ್ರಜ್ಞಾನದಲ್ಲಿ ಸರ್ವೇಂದ್ರಿಯವ ಕಳೆದು ವೇದನೆ ವೇಧಿಸಿ ಸರ್ವಾಂಗವ ಭೇದಿಸಿ, ಸ್ವಸ್ಥಾನದಲ್ಲಿ ಘಟಕ್ಕೆ ಪ್ರತಿಷೆ* ಆತ್ಮಂಗೆ ಸ್ವಯಂಭುವೆಂಬುದು ಶ್ರುತದಲ್ಲಿ ಹೇಳಿ, ದೃಷ್ಟದಲ್ಲಿ ತೋಱÂ ಅನುಮಾನದಲ್ಲಿ ಅರುಪಿ ಸುಖಸುಮ್ಮಾನಿಯಾಗಿ ಕ್ರೀಯಲ್ಲಿ ಆಚರಣೆ, ಜ್ಞಾನದಲ್ಲಿ ಪರಿಪೂರ್ಣತ್ವ. ಇಂತೀ ಗುಣಂಗಳ ತಿಳಿವುದು ಆಚಾರ್ಯನ ಅಂಗಸ್ಥಲ. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ಆಚಾರ್ಯನಾದ ಲೀಲಾಭಾವ.
--------------
ಪ್ರಸಾದಿ ಭೋಗಣ್ಣ
ಕಾಮವ ಕಳೆದು, ಕ್ರೋಧವ ದಾಂಟಿ, ಲೋಭವ ಹಿಂಗಿ, ಮೋಹಾದಿಗಳಲ್ಲಿ ಮನವಿಕ್ಕದೆ, ಆ ಕಾಮವ ಲಿಂಗದಲ್ಲಿ ಮರೆದು, ಕ್ರೋಧವ ಕರಣಂಗಳಲ್ಲಿ ಬೈಚಿಟ್ಟು, ಲೋಭವ ಸರ್ವೇಂದ್ರಿಯಂಗಳಲ್ಲಿ ಸಂಬಂಧಿಸಿ, ಮೋಹಾದಿ ಗುಣಂಗಳ ಸ್ವಯಚರಪರದಲ್ಲಿ ಗರ್ಭೀಕರಿಸಿ, ನಿಜವಾಸಿಯಾಗಿ ನಿಂದಾತನ ಅಡಿಗೆರಗುವೆನೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಅಹೋ ನಿಲ್ಲಿ ನಿಲ್ಲಿ ವ್ಯಸನಗಳಿರಾ ! ಬಲ್ಲೆ ಬಲ್ಲೆ ನಿಮ್ಮ ಗುಣಂಗಳ. ಮಲ್ಲರ ಕಾಳಗದ ನಡುವಿನ ಶಿಶುವಿನಂತೆ, ಎನ್ನ ತುಳಿದೇನೆಂಬಿರಿ. ಬಿಲ್ಲು ಬಾಣದ ನಡುವಿನ ಹುಲಿಯಂತೆ ಎನ್ನ ನಿಲಿಸೇನೆಂಬಿರಿ. ಎಂದರೆ ನಿಮ್ಮ ಹವಣಿಕೆ ಬೇರೆ, ಎನ್ನ ಹವಣಿಕೆ ಬೇರೆ. ಅದು ಹೇಗೆಂದಡೆ : ಎನ್ನ ಹವಣಿಕೆ ಶಿವಜ್ಞಾನಾಗ್ನಿಯಿಂದ ನಿಮ್ಮನುರುವಿ ನಿವ್ರ್ಯಸನಿಯಾದೇನೆಂಬೆ ; ನಿಮ್ಮ ಹವಣಿಕೆ ಎನ್ನ ಸುಟ್ಟು ಸೂರೆಮಾಡುವೆನೆಂಬಿರಿಯೆಂದರೆ ನಿಮ್ಮದು ಅನ್ಯದ ಹಾದಿ, ಎನ್ನದು ಪುಣ್ಯದ ಹಾದಿ. ಎನ್ನ ನಿಮ್ಮ ಹಾದಿಯ ನಡುಮಧ್ಯದಲ್ಲಿಪ್ಪ ಮನೋಮೂರ್ತಿಮಹಾಲಿಂಗ ಮಾಡಿದಂತೆ ಆಗುವೆ, ಆಡಿಸಿದಂತೆ ಆಡುವೆ, ನಡೆಸಿದಂತೆ ನಡೆವೆ, ನುಡಿಸಿದಂತೆ ನುಡಿವೆ, ಕೆಡಸಿದಂತೆ ಕೆಡವೆನೈ ; ಇನ್ನಂಜೆ. Wವೈದ್ಯನಘೆ ನಂಬಿ ಸೇವಿಸಿದರೆ ವ್ಯಾಧಿ ಪರಿಹಾರವಾಗುವುದು ; ಮಂತ್ರವ ನಂಬಿ ಜಪಿಸಿದರೆ ಭೂತ ಪ್ರೇತಗಳ ಭಯ ಪರಿಹಾರ. ಹಡಗವ ನಂಬಿದವರು ಕಡಲವ ದಾಟುವರು. ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವಿನ ನಂಬಿದವರು ಭವಸಾಗರವ ದಾಟುವರು.
--------------
ಹೇಮಗಲ್ಲ ಹಂಪ
ಕಾಯಗೊಂಡು ಹುಟ್ಟಿಸಿ, ಕರಣಾದಿಗುಣಂಗಳಿಗೆ ಗುರಿಮಾಡಿ, ಕಾಡಿಸಾಡುವಿರಯ್ಯ. ಇದು ಕಾರಣ, ಎನ್ನ ಕಾಯದ ಕರಣದ ಗುಣಂಗಳ ಕಳದು ಎನ್ನ ಒಳಹೊರಗೆ ಹಿಡಿದಿಪ್ಪ ಮಾಯಾಪ್ರಪಂಚವ ಮಾಣಿಸಿ, ನೀವಲ್ಲದೆ ಮತ್ತೇನುವನು ಅರಿಯದಂತೆ ಸಂಸಾರಸುಖವ ನೆನೆಯದಂತೆ ಕರುಣಿಸಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಭೂತಳದ ಮತಿವಂತರು ಆತ್ಮನ ಸ್ಥಲವಿಡಲು ಮಾತು ಮಾಣಿಕವ ನುಂಗಿ; ಜಾತಿ ಧರ್ಮವನುಡುಗಿ, ವ್ರತದ ಭ್ರಮೆಗಳ ಸುಟ್ಟು, ಚಿತ್ತ ಭಸ್ಮವ ಧರಿಸಿ ಅಣಿಮಾದಿ ಗುಣಂಗಳ ಗತಿಯ ಪಥವನೆ ಮೀರಿ, ಭ್ರಾಂತಳಿದು ಜ್ಯೋತಿ ಬೆಳಗುತ್ತಿದೆ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಇಷ್ಟಲಿಂಗಸಂಬಂಧ, ಭಾವಲಿಂಗಸಂಬಂಧ, ಪ್ರಾಣಲಿಂಗಸಂಬಂಧವೆಂದು ಭಾವಿಸಿ ಕಲ್ಪಿಸುವಾಗ, ಅಂಗದ ಮರೆಯ ಇಷ್ಟ, ಇಷ್ಟದ ಮರೆಯ ಭಾವ, ಭಾವದ ಮರೆಯ ಪ್ರಾಣ, ಪ್ರಾಣದ ಮರೆಯ ಜ್ಞಾನ, ಇಂತೀ ಗುಣಂಗಳ ಏಕವ ಮಾಡಿ, ಉಭಯ ದೃಷ್ಟಕ್ಕೆ ಒಡಲಿಲ್ಲದೆ ನಿಂದ ನಿಜ, ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತಾಳು ಬೋಳು ಕಟ್ಟಿಗೆ ಕರ್ಪರವೆಂದೆಂಬರು. ತಾಳು ಬೋಳು ಕಟ್ಟಿಗೆ ಕರ್ಪರವಾವುದೆಂದರಿಯರು. ತಾಳು:ತನುಗುಣಾದಿಗಳ ಪ್ರಾಣಗುಣಾದಿಗಳ ತಾಳಿಕೊಂಡಿರಬಲ್ಲಡೆ ತಾಳು. ಬೋಳು:ಭ್ರಮೆಯಿಲ್ಲದೆ ಬಂಧನವಿಲ್ಲದೆ ಸಂಸಾರ ವಿಷಯಗಳ ಬೋಳೈಸಿ ತನ್ನಿಚ್ಛೆಗೆ ನಿಲಿಸಿಕೊಂಡಿರಬಲ್ಲಡೆ ಬೋಳು. ಕಟ್ಟಿಗೆ:ಕರಣಾದಿ ಗುಣಂಗಳ ನಿಲಿಸಿಕೊಂಡಿರಬಲ್ಲಡೆ ಕಟ್ಟಿಗೆ. ಕರ್ಪರ:ಪರವ ಅರಿದಿರಬಲ್ಲಡೆ ಕರ್ಪರ_ ಇಂತೀ ಚತುರ್ವಿಧವನರಿದವರ ಪರಮಾರಾಧ್ಯರೆಂಬೆ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಗುರುಲಿಂಗ ಉಪದೇಶ ಲಿಂಗಧಾರಣವೆಂದು ಹೆಸರಿಟ್ಟುಕೊಂಡು ನುಡಿವ ಅಣ್ಣಗಳು ನೀವು ಕೇಳಿರೊ. ಸರ್ವಾಂಗಭೇದವನು ಕಮಲಪ್ರಕಾಶವನರಿದು ನುಡಿವಿರಿ. ಪದ್ಮಸ್ಥಾನದಲ್ಲಿ ಕಮಲಕ್ಕೆ ನಾಲ್ಕು ಎಸಳು, ಅದಕ್ಕೆ ಶ್ವೇತ ಕಪೋತ ಹರಿತ ಮಾಂಜಿಷ್ಟ ನೀಲವರ್ಣವೆಂಬರಿ. ಈ ನಾಲ್ಕರ ಭೇದವ ಬಲ್ಲರೆ ಭಕ್ತನೆಂದೆನಿಸಬಹುದು. ಈ ನಾಲ್ಕು ಎಸಳನು ಒಂದುಮಾಡಿ ಅದರೊಳು ಕೂಡಬಲ್ಲರೆ ಮಾಹೇಶ್ವರನೆಂದೆನಿಸಬಹುದು. ಪೃಥ್ವಿ ಅಪ್ಪುವಿನ ಗುಣಂಗಳನಳಿದು ದಶಕಮಲದಲ್ಲಿ ಬೆರೆಸಬಲ್ಲರೆ ಪ್ರಸಾದಿಯೆಂದೆನಿಸಬಹುದು. ಈ ತ್ರಿವಿಧ ಗುಣಂಗಳ ಶಕ್ತಿಯ ನಿಲ್ಲಿಸಿ ಅಂತರಂಗದ ಹೃದಯಕಮಲದಿ ನಿಂತಿಹ ರಾಜನ ಸಂದರುಶನವ ಮಾಡಿ, ಮನ ಬುದ್ಧಿ ವಿತ್ತ ಅಹಂಕಾರವೆಂಬ ಚತುರ್ವಿಧ ಪ್ರಧಾನಿಗಳ ಬುದ್ಧಿಯ ಮೀರಿ ಹದಿನಾರು ಎಸಳಲ್ಲಿ ನಿಂದು, ಆಕಾಶ ತತ್ವವ ನಿರೀಕ್ಷಿಸಿ ಪಂಚತತ್ವದ ಪರಿಯ ನೋಡುತ್ತ ಬಂದು, ಆಮುಂದಿರ್ದ ಮುಪ್ಪುರದ ಹೆಬ್ಬಾಗಿಲ ಪೊಕ್ಕು ಶ್ರೀ ಗುರುವಿನ ಶ್ರೀಪಾದವೆಂಬ ಉಭಯಕಮಲವ ನಿರೀಕ್ಷಣವ ಮಾಡಿ, ಶ್ರೀಗುರುವಿನ ಶ್ರೀಪಾದಪದ್ಮಕಾರುಣ್ಯ ಜ್ಞಾನವ ಪಡದು, ಮುಂದೆ ನೋಡಲಾಗಿ ಸಹಸ್ರದಳದ ಕಮಲವ ಕಂಡೆನಯ್ಯ. ಆ ಕಮಲದ ಅಗ್ರದ ತುದಿಯಲ್ಲಿ ಇರುವ ಲಿಂಗವ ಕಂಡು ತನ್ನ ಸಂಬಂಧವಾಗಬೇಕೆಂದು ಮೇಲಕ್ಕೆ ನೋಡಲು ಏಕದಳದ ಪದ್ಮವ ಕಂಡೆನಯ್ಯ. ಆ ಪದ್ಮ ಸಿಂಹಾಸನದ ಮೇಲೆ ನಿರಂಜನನೆಂಬ ಜಂಗಮವ ಕಂಡೆ. ಆ ಜಂಗಮದ ಚರಣಾಂಬುಜಕ್ಕೆ ಎರಗಿದ ಕಾರಣ ಆ ಚಿತ್ಕಳೆಯೆಂಬ ಲಿಂಗ ಎನ್ನ ಸಂಬಂಧವಾಯಿತ್ತಲ್ಲಯ್ಯ. ಇಂತೆಸವಂಗಭೇದವನರಿಯದೆ ಉಪದೇಶವೆಂದು ನುಡಿವ ನರಗುರಿಗಳ ನೋಡಿ ನಗುವ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ
ಇನ್ನಷ್ಟು ... -->